ಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗ್ರಾಹಕರಕ್ಷಣೆಕುರಿತಅಂತಾರಾಷ್ಟ್ರೀಯಸಮಾವೇಶದಲ್ಲಿಪ್ರಧಾನಿಯವರಭಾಷಣದಆಯ್ದಭಾಗಗಳಕನ್ನಡಭಾಷಾಂತರ

ಗ್ರಾಹಕರಕ್ಷಣೆಕುರಿತಅಂತಾರಾಷ್ಟ್ರೀಯಸಮಾವೇಶದಲ್ಲಿಪ್ರಧಾನಿಯವರಭಾಷಣದಆಯ್ದಭಾಗಗಳಕನ್ನಡಭಾಷಾಂತರ

ಗ್ರಾಹಕರಕ್ಷಣೆಕುರಿತಅಂತಾರಾಷ್ಟ್ರೀಯಸಮಾವೇಶದಲ್ಲಿಪ್ರಧಾನಿಯವರಭಾಷಣದಆಯ್ದಭಾಗಗಳಕನ್ನಡಭಾಷಾಂತರ

ನನ್ನ ಸಂಪುಟ ಸಹೋದ್ಯೋಗಿ ಶ್ರೀ ರಾಮ್ ವಿಲಾಸ್ ಪಾಸ್ವಾನ್ ಅವರೇ, ಶ್ರೀ ಸಿ.ಆರ್. ಚೌಧರಿ ಅವರೇ, ಯುಎನ್.ಸಿ.ಟಿ.ಎ.ಡಿ.ಯ ಮಹಾ ಪ್ರಧಾನ ಕಾರ್ಯದರ್ಶಿ ಡಾ. ಮುಖಿಶ ಕಿತುಯಿ ಅವರೇ ಮತ್ತು ಇಲ್ಲಿ ಉಪಸ್ಥಿತರಿರುವ ಇತರ ಗಣ್ಯರೇ,

ಮೊದಲಿಗೆ ನಾನು ಗ್ರಾಹಕರ ರಕ್ಷಣೆಯಂಥ ಮಹತ್ವದ ವಿಚಾರದ ಬಗ್ಗೆ ಪ್ರಾದೇಶಿಕ ಸಮಾವೇಶಕ್ಕಾಗಿ ನಿಮ್ಮೆಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ಈ ಕಾರ್ಯಕ್ರಮದಲ್ಲಿ ದಕ್ಷಿಣ ಏಷ್ಯಾ, ಆಗ್ನೇಯ ಏಷ್ಯಾ ಮತ್ತು ಎಲ್ಲ ಪೂರ್ವ ಏಷ್ಯಾ ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ನಾನು ನಿಮ್ಮೆಲ್ಲರನ್ನೂ ಈ ಕಾರ್ಯಕ್ರಮಕ್ಕೆ ಸ್ವಾಗತಿಸುತ್ತೇನೆ.

ದಕ್ಷಿಣ ಏಷ್ಯಾದಲ್ಲಿ ಇಂಥ ಕಾರ್ಯಕ್ರಮ ನಡೆಯುತ್ತಿರುವುದು ಇದೇ ಮೊದಲು. ಭಾರತದ ಉಪಕ್ರಮಕ್ಕೆ ಬೆಂಬಲ ನೀಡಿದ ಮತ್ತು ಅದನ್ನು ಈ ಹಂತಕ್ಕೆ ತರಲು ಮಹತ್ವದ ಪಾತ್ರ ವಹಿಸಿದ ಯುಎನ್.ಸಿ.ಟಿ.ಎ.ಡಿ.ಗೆ ನಾನು ಕೃತಜ್ಞತೆಯನ್ನು ಅರ್ಪಿಸಲು ಬಯಸುತ್ತೇನೆ.

ಸ್ನೇಹಿತರೇ, ವಿಶ್ವದ ಕೆಲವೇ ವಲಯಗಳು ಮಾತ್ರ ಈ ಪ್ರದೇಶ ಹೊಂದಿರುವಂಥ ಐತಿಹಾಸಿಕ ನಂಟು ಹೊಂದಿದೆ. ಸಾವಿರಾರು ವರ್ಷಗಳಿಂದ ನಾವು ವಾಣಿಜ್ಯ, ಸಂಸ್ಕೃತಿ ಮತ್ತು ಧರ್ಮದೊಂದಿಗೆ ಬೆಸೆದುಕೊಂಡಿದ್ದೇವೆ. ನಮ್ಮ ಕರಾವಳಿ ಆರ್ಥಿಕತೆಯು ಶತಮಾನಗಳಿಂದ ವಲಯವನ್ನು ಸಂಪರ್ಕದಲ್ಲಿಡಲು ಗಣನೀಯ ಕೊಡುಗೆ ನೀಡಿದೆ. ಒಂದು ಕಡೆಯಿಂದ ಮತ್ತೊಂದು ಕಡೆಗೆ ಜನರ ಓಡಾಟಕ್ಕೆ ಮತ್ತು ಕಲ್ಪನೆಗಳು ಮತ್ತು ಚಿಂತನೆಗಳ ವಿನಿಮಯಕ್ಕೆ ದ್ವಿಮುಖ ಪ್ರಕ್ರಿಯೆ ನೀಡಿದೆ ಮತ್ತು ಈ ವಲಯದ ಎಲ್ಲ ರಾಷ್ಟ್ರಗಳಿಗೆ ಉಪಯುಕ್ತವಾಗಿದೆ. ಇಂದು, ನಾವೆಲ್ಲರೂ ಆರ್ಥಿಕವಾಗಿಯಷ್ಟೇ ಅಲ್ಲ ಸಾಂಸ್ಕೃತಿಕವಾಗಿಯೂ ಪಾರಂಪರಿಕೆಯನ್ನು ಹಂಚಿಕೊಂಡಿದ್ದೇವೆ.

ಇಂದಿನ ಆಧುನಿಕ ಯುಗದಲ್ಲಿ, ನಮ್ಮ ಸಾಂಪ್ರದಾಯಿಕ ಬಾಂಧವ್ಯ ಹೊಸ ಆಯಾಮವನ್ನು ಪಡೆದುಕೊಂಡಿದೆ. ಏಷ್ಯಾದ ರಾಷ್ಟ್ರಗಳು ತಮ್ಮ ಸರಕು ಮತ್ತು ಸೇವೆಗಳನ್ನು ತಮ್ಮ ರಾಷ್ಟ್ರಗಳಿಗೆ ಮಾತ್ರವೇ ಪೂರೈಸುತ್ತಿಲ್ಲ, ಜೊತೆಗೆ ಇತರ ರಾಷ್ಟ್ರಗಳಿಗೂ ವಿಸ್ತರಿಸಿವೆ. ಇಂಥ ಸನ್ನಿವೇಶದಲ್ಲಿ, ಗ್ರಾಹಕ ಸಂರಕ್ಷಣೆ ವಲಯದ ವಾಣಿಜ್ಯವನ್ನು ಹೆಚ್ಚಿಸುವ ಮತ್ತು ಬಲಪಡಿಸುವ ಮಹತ್ವದ ಸಾಧನವಾಗಿದೆ.
ಇಂದಿನ ಕಾರ್ಯಕ್ರಮವು ನಾವು ನಮ್ಮ ಪ್ರಜೆಗಳ ಅಗತ್ಯವನ್ನು ನಾವು ಎಷ್ಟು ಗಂಭೀರವಾಗಿ ಅರ್ಥ ಮಾಡಿಕೊಂಡಿದ್ದೇವೆ, ಅವರ ಸಂಕಷ್ಟಗಳನ್ನು ದೂರ ಮಾಡಲು ನಾವು ಎಷ್ಟು ಶ್ರಮಿಸಬೇಕು ಎಂಬುದನ್ನು ಬಿಂಬಿಸುತ್ತದೆ. ಪ್ರತಿಯೊಬ್ಬ ಪ್ರಜೆಯೂ ಒಬ್ಬ ಗ್ರಾಹಕನಾಗಿದ್ದು, ಈ ಕಾರ್ಯಕ್ರಮವು ನಮ್ಮ ಸಂಘಟಿತ ಸಂಕಲ್ಪವನ್ನು ಸಂಕೇತಿಸುತ್ತದೆ.

ಈ ಇಡೀ ಪ್ರಕ್ರಿಯೆಯಲ್ಲಿ ವಿಶ್ವ ಸಂಸ್ಥೆ ಕೂಡ ಪಾಲುದಾರನಂತೆ ಮುಂದೆ ಬಂದಿದ್ದು, ಹೃದಯಸ್ಪರ್ಶಿಯಾಗಿದೆ. 1985ರಲ್ಲಿ ಮೊದಲ ಬಾರಿಗೆ, ಗ್ರಾಹಕರ ರಕ್ಷಣೆ ಕುರಿತಂತೆ ವಿಶ್ವಸಂಸ್ಥೆಯ ಮಾರ್ಗಸೂಚಿಗಳನ್ನು ರೂಪಿಸಲಾಗಿತ್ತು. ಅದನ್ನು ಎರಡು ವರ್ಷಗಳ ಹಿಂದೆ ಪರಿಷ್ಕರಿಸಲಾಯಿತು. ಈ ಪರಿಷ್ಕರಣೆಯಲ್ಲಿ ಭಾರತ ಕೂಡ ಸಕ್ರಿಯ ಪಾತ್ರ ವಹಿಸಿತ್ತು. ಈ ಮಾರ್ಗಸೂಚಿಗಳು ಅಭಿವೃದ್ಧಿಶೀಲ ರಾಷ್ಟ್ರಗಳ ಸುಸ್ಥಿರ ಬಳಕೆ, ಇ – ವಾಣಿಜ್ಯ ಮತ್ತು ಹಣಕಾಸು ಸೇವೆಗಳಿಗೆ ಅತ್ಯಂತ ಮಹತ್ವದ್ದಾಗಿದೆ.

ಸ್ನೇಹಿತರೆ, ಗ್ರಾಹಕರ ರಕ್ಷಣೆ, ಭಾರತದಲ್ಲಿ ಪುರಾತನ ಕಾಲದಿಂದ ಆಡಳಿತದ ಅವಿಭಾಜ್ಯ ಅಂಗವಾಗಿದೆ. ಸಾವಿರಾರು ವರ್ಷಗಳ ಹಿಂದೆ ಬರೆದ ವೇದಗಳಲ್ಲಿ ಗ್ರಾಹಕ ರಕ್ಷಣೆಯ ಪ್ರಸ್ತಾಪವಿದೆ. ಅಥರ್ವ ವೇದದಲ್ಲಿ

“इमा मात्रा मिमीम हे यथ परा न मासातै” ಎಂಬ ಉಲ್ಲೇಖವಿದೆ.

ಇದರ ಅರ್ಥ, ಯಾರೊಬ್ಬರೂ ಅಳತೆ ಮತ್ತು ಗುಣಮಟ್ಟದ ವಿಚಾರದಲ್ಲಿ ವಂಚನೆಯಲ್ಲಿ ತೊಡಗಬಾರದು ಎಂದು.

ಈ ಪುರಾತನ ದಸ್ತಾವೇಜುಗಳು ಗ್ರಾಹಕ ರಕ್ಷಣೆಯ ನಿಯಮಗಳನ್ನು ವಿವರಿಸುತ್ತವೆ ಮತ್ತು ಯಾವ ವರ್ತಕರು ವಂಚನೆಯಲ್ಲಿ ತೊಡಗುತ್ತಾರೋ ಅವರಿಗೆ ಶಿಕ್ಷೆಯ ಸ್ವರೂಪ ಏನು ಎಂಬುದನ್ನೂ ವಿವರಿಸುತ್ತದೆ. ಭಾರತದಲ್ಲಿ 2500 ವರ್ಷಗಳ ಹಿಂದೆ, ಕೌಟಿಲ್ಯನ ಕಾಲದಲ್ಲಿ, ಹೇಗೆ ವ್ಯಾಪಾರವನ್ನು ನಿಯಂತ್ರಿಸಬೇಕು ಮತ್ತು ಗ್ರಾಹಕರ ಹಿತ ಹೇಗೆ ರಕ್ಷಿಸಬೇಕು ಎಂಬ ಬಗ್ಗೆ ಸರ್ಕಾರಕ್ಕೆ ಮಾರ್ಗಸೂಚಿಗಳನ್ನು ನೀಡಲಾಗಿತ್ತು, ಕೌಟಿಲ್ಯನ ಕಾಲದಲ್ಲಿ ಸಂಘಟನಾತ್ಮಕ ಸ್ವರೂಪದಲ್ಲಿನ ಹುದ್ದೆಗಳನ್ನು ಈಗಿನ ಕಾಲಮಾನದಂತೆ ವಾಣಿಜ್ಯ ನಿರ್ದೇಶಕರು ಮತ್ತು ಗುಣಮಟ್ಟದ ಸೂಪಂರಿಂಟೆಂಡೆಂಟ್ ಎನ್ನಬಹುದು.

ಸ್ನೇಹಿತರೆ, ನಾವು ಗ್ರಾಹಕರನ್ನು ದೇವರೆಂದು ಪರಿಗಣಿಸುತ್ತೇವೆ. ನಾವು ಹಲವು ಅಂಗಡಿಗಳಲ್ಲಿ ಗ್ರಾಹಕ ದೇವೋ ಭವ ಎಂದು ಬರೆದಿರುವುದನ್ನು ನೋಡುತ್ತೇವೆ. ವ್ಯಾಪಾರದ ಸ್ವರೂಪ, ಗ್ರಾಹಕರ ತೃಪ್ತಿ ಸದಾ ಪ್ರಧಾನ ಉದ್ದೇಶವಾಗಿರಬೇಕು.

ಸ್ನೇಹಿತರೆ, ವಿಶ್ವಸಂಸ್ಥೆ ಮಾರ್ಗಸೂಚಿ ನೀಡಿದ ಒಂದೇ ವರ್ಷದಲ್ಲಿ 1986ರಲ್ಲಿ ಗ್ರಾಹಕ ರಕ್ಷಣೆ ಕಾಯಿದೆ ತಂಡ ಮೊದಲ ಕೆಲವು ರಾಷ್ಟ್ರಗಳಲ್ಲಿ ಭಾರತವೂ ಒಂದಾಗಿದೆ.

ಗ್ರಾಹಕರ ಹಿತ ರಕ್ಷಣೆ ಸರ್ಕಾರದ ಆದ್ಯತೆಯಾಗಿದೆ. ಇದು ನವ ಭಾರತದ ಸಂಕಲ್ಪದಲ್ಲಿಯೂ ಬಿಂಬಿತವಾಗಿದೆ. ಗ್ರಾಹಕರ ರಕ್ಷಣೆಯನ್ನೂ ಮೀರಿ, ನವಭಾರತದಲ್ಲಿ ಉತ್ತಮ ಗ್ರಾಹಕ ಪದ್ಧತಿ ಮತ್ತು ಗ್ರಾಹಕರ ಪ್ರಗತಿಯ ಬಗ್ಗೆ ಚಿಂತಿಸಲಾಗಿದೆ.

ಸ್ನೇಹಿತರೆ, ದೇಶದ ವಾಣಿಜ್ಯ ಪದ್ಧತಿಗಳು ಮತ್ತು ಅಗತ್ಯಗಳಿಗೆ ಅನುಗುಣವಾಗಿ ಇಂದು, ನಾವು ಹೊಸ ಗ್ರಾಹಕ ರಕ್ಷಣಾ ಕಾಯಿದೆ ತರುವ ಪ್ರಕ್ರಿಯೆಯಲ್ಲಿದ್ದೇವೆ. ಪ್ರಸ್ತಾಪಿತ ಕಾಯಿದೆ, ಗ್ರಾಹಕರ ಸಬಲೀಕರಣಕ್ಕೆ ಒತ್ತು ನೀಡುತ್ತದೆ. ಗ್ರಾಹಕರ ಕುಂದುಕೊರತೆಗಳನ್ನು ಸಮಯ-ನಿರ್ಬಂಧಿತ ರೀತಿಯಲ್ಲಿ ಮತ್ತು ಕನಿಷ್ಠ ಸಂಭವನೀಯ ವೆಚ್ಚದಲ್ಲಿ ಸರಿಪಡಿಸಲಾಗುವುದನ್ನು ಖಚಿತಪಡಿಸಿಕೊಳ್ಳಲು ನಿಯಮಗಳು ಸರಳೀಕರಿಸಲ್ಪಡುತ್ತವೆ. ತಪ್ಪುದಾರಿಗೆ ಎಳೆಯುವ ಜಾಹೀರಾತುಗಳ ವಿರುದ್ಧ ಕಠಿಣ ಕ್ರಮದ ಅವಕಾಶಗಳನ್ನು ಪ್ರಸ್ತಾಪಿಸಲಾಗಿದೆ. ಶೀಘ್ರ ಪರಿಹಾರಾತ್ಮಕ ಕ್ರಮಗಳಿಗಳಿಗಾಗಿ ಕಾರ್ಯ ನಿರ್ವಾಹಕ ಅಧಿಕಾರದೊಂದಿಗೆ ಕೇಂದ್ರೀಯ ಗ್ರಾಹಕ ರಕ್ಷಣೆ ಪ್ರಾಧಿಕಾರವನ್ನು ಸ್ಥಾಪಿಸಲುದ್ದೇಶಿಸಲಾಗಿದೆ.

ಮನೆ ಖರೀದಿಸುವವರ ರಕ್ಷಣೆಗಾಗಿ ನಾವು ರಿಯಲ್ ಎಸ್ಟೇಟ್ ನಿಯಂತ್ರಣ ಕಾಯಿದೆಯನ್ನು ಮಾಡಿದ್ದೇವೆ. ಈ ಮುನ್ನ ಗ್ರಾಹಕರು ಮನೆಯನ್ನು ತಮ್ಮ ಸ್ವಾಧೀನಕ್ಕೆ ಪಡೆಯಲು ವರ್ಷಗಟ್ಟಲೆ ಕಾಯಬೇಕಾಗಿತ್ತು, ಇಲ್ಲವೇ ಕಟ್ಟಡ ನಿರ್ಮಾಣದಾರರ ಮುಂದೆ ಅಂಗಲಾಚಬೇಕಾಗಿತ್ತು. ಫ್ಲಾಟ್ ಗಳ ನಿರ್ಮಾಣ ಪ್ರದೇಶದ ಬಗ್ಗೆ ಗೊಂದಲಗಳಿರುತ್ತಿದ್ದವು. ರೇರಾ ಬಂದ ಬಳಿಕ ನೋಂದಾಯಿತ ಕಟ್ಟಡ ನಿರ್ಮಾಣದಾರರು ಮಾತ್ರವೇ ಎಲ್ಲ ಅಗತ್ಯ ಅನುಮತಿ ಪಡೆದುಕೊಂಡ ಬಳಿಕ ಮನೆಗಳಿಗೆ ಬುಕಿಂಗ್ ಮಾಡಬಹುದಾಗಿದೆ. ಮಿಗಿಲಾಗಿ ಬುಕ್ಕಿಂಗ್ ಮೊತ್ತವನ್ನು ಶೇ.10ರಷ್ಟಕ್ಕೆ ನಿಗದಿ ಮಾಡಲಾಗಿದೆ.

ಈ ಮೊದಲು, ಕಟ್ಟಡ ನಿರ್ಮಾಣದಾರರು ತಾವು ಪಡೆದ ಹಣವನ್ನು ಬೇರೆ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳುತ್ತಿದ್ದರು. ಈಗ ಸರ್ಕಾರ, ಕಠಿಣ ನಿಯಮ ಮಾಡಿದ್ದು, ಖರೀದಿದಾರರಿಂದ ಪಡೆದ ಹಣದ ಶೇ.70ರಷ್ಟನ್ನು “ಎಸ್ಕ್ರೊ” ಖಾತೆಯಲ್ಲಿ ಇಡಬೇಕು ಮತ್ತು ಈ ಹಣವನ್ನು ಅದೇ ಯೋಜನೆಗೆ ಮಾತ್ರವೇ ಬಳಸಬೇಕು.

ಅದೇ ರೀತಿ, ಭಾರತೀಯ ಮಾನಕ ಶಾಖೆ ಕಾಯಿದೆಯನ್ನು ಕೂಡ ರೂಪಿಸಲಾಗಿದೆ. ಈಗ ಸಾರ್ವಜನಿಕರಿಗೆ ಅಥವಾ ಬಳಕೆದಾರರ ಹಿತಕ್ಕೆ ಸಂಬಂಧಿಸಿದ ಯಾವುದೇ ಸರಕು ಅಥವಾ ಸೇವೆಯನ್ನು ಕಡ್ಡಾಯ ಪ್ರಮಾಣೀಕರಣದ ವ್ಯಾಪ್ತಿಗೆ ತರಬಹುದಾಗಿದೆ. ಗ್ರಾಹಕರಿಗೆ ಉಂಟಾದ ನಷ್ಟ ಅಥವಾ ನಷ್ಟದ ಸಂದರ್ಭದಲ್ಲಿ ಮಾರುಕಟ್ಟೆಯಿಂದ ಕೆಳಪೆ ಗುಣಮಟ್ಟದ ಉತ್ಪನ್ನಗಳನ್ನು ಹಿಂಪಡೆಯಲು ಮತ್ತು ಪರಿಹಾರ ಒದಗಿಸಲು ಈ ಕಾಯಿದಯಲ್ಲಿ ಅವಕಾಶವಿದೆ.

ಇತ್ತೀಚೆಗೆ, ಭಾರತ ಸರಕು ಮತ್ತು ಸೇವೆಗಳ ತೆರಿಗೆ ಜಿಎಸ್ಟಿ ಅನುಷ್ಠಾನಕ್ಕೆ ತಂದಿದೆ. ಜಿಎಸ್ಟಿ ಬಳಿಕ, ದೇಶದ ಹನ್ನೆರೆಡಕ್ಕೂ ಹೆಚ್ಚು ವಿವಿಧ ಬಗೆಯ ಪರೋಕ್ಷ ತೆರಿಗೆಗಳನ್ನು ರದ್ದು ಮಾಡಲಾಗಿದೆ. ಹಲವು ಅಂತರ್ಗತ ತೆರಿಗೆಗಳನ್ನು ತೆಗೆದು ಹಾಕಲಾಗಿದೆ. ಈಗ, ಗ್ರಾಹಕರಿಗೆ ಎಷ್ಟು ತೆರಿಗೆ ರಾಜ್ಯಗಳಿಗೆ ಮತ್ತು ಕೇಂದ್ರಕ್ಕೆ ನೀಡುತ್ತಿದ್ದೇವೆ ಎಂದು ಗೊತ್ತಾಗುತ್ತಿದೆ. ಗಡಿಗಳಲ್ಲಿ ಟ್ರಕ್ ಗಳು ಸಾಲುಗಟ್ಟಿ ನಿಲ್ಲುವುದು ತಪ್ಪಿದೆ.

ಜಿಎಸ್ಟಿಯೊಂದಿಗೆ ಹೊಸ ವ್ಯಾಪಾರ ಸಂಸ್ಕೃತಿ ಬೆಳೆಯುತ್ತಿದೆ ಮತ್ತು ಇದರಿಂದ ದೀರ್ಘಕಾಲೀನವಾಗಿ ಗ್ರಾಹಕರು ದೊಡ್ಡ ಪ್ರಯೋಜನ ಪಡೆಯಲಿದ್ದಾರೆ. ಇದು ಪಾರದರ್ಶಕ ವ್ಯವಸ್ಥೆಯಾಗಿದ್ದು, ಇದರಲ್ಲಿ ಯಾರೊಬ್ಬರೂ ಗ್ರಾಹಕರ ಹಿತಕ್ಕೆ ಘಾಸಿ ಮಾಡಲು ಸಾಧ್ಯವಿಲ್ಲ. ಜಿಎಸ್ಟಿಯಿಂದಾಗಿ ಹೆಚ್ಚುತ್ತಿರುವ ಸ್ಪರ್ಧಾತ್ಮಕತೆ ದರಗಳಲ್ಲಿ ಸಾಧಾರಣತೆಯನ್ನು ತರುತ್ತಿದೆ. ಇದು ನೇರವಾಗಿ ಬಡವರು ಮತ್ತು ಮಧ್ಯಮವರ್ಗದ ಗ್ರಾಹಕರಿಗೆ ಲಾಭ ತರಲಿದೆ.

ಸ್ನೇಹಿತರೆ, ಕಾನೂನಿನ ಮೂಲಕ ಗ್ರಾಹಕರ ಹಿತವನ್ನು ಬಲಪಡಿಸುವುದರ ಜೊತೆಗೆ, ಜನರ ಕುಂದುಕೊರತೆಯನ್ನೂ ಪ್ರಾಮಾಣಿಕವಾಗಿ ಪರಿಹರಿಸುವುದು ಅಗತ್ಯವಾಗಿದೆ. ಕಳೆದ ಮೂರು ವರ್ಷಗಳಲ್ಲಿ, ನಮ್ಮ ಸರ್ಕಾರ ಕುಂದುಕೊರತೆ ನಿವಾರಣೆಗೆ ತಂತ್ರಜ್ಞಾನದ ಸಮರ್ಥ ಬಳಕೆಯೊಂದಿಗೆ ಹೊಸ ಪರಿಸರ ವ್ಯವಸ್ಥೆ ತಂದಿದೆ.

ರಾಷ್ಟ್ರೀಯ ಗ್ರಾಹಕರ ಸಹಾಯವಾಣಿಯ ಸಾಮರ್ಥ್ಯವನ್ನು ನಾಲ್ಕು ಪಟ್ಟು ಹೆಚ್ಚಿಸಲಾಗಿದೆ. ಗ್ರಾಹಕ ರಕ್ಷಣೆಯೊಂದಿಗೆ ಸಂಪರ್ಕಿತವಾದ ಅಂತರ್ಜಾಲ ತಾಣಗಳು ಮತ್ತು ಸಾಮಾಜಿಕ ತಾಣಗಳನ್ನು ಸಮೀಕರಿಸಲಾಗಿದೆ. ದೊಡ್ಡ ಸಂಖ್ಯೆಯ ಖಾಸಗಿ ಕಂಪನಿಗಳು ಈ ಪೋರ್ಟಲ್ ಗೆ ಸಂಪರ್ಕಿತವಾಗಿವೆ. ಸುಮಾರು ಶೇ.40ರಷ್ಟು ದೂರುಗಳನ್ನು ಪೋರ್ಟಲ್ ಮೂಲಕ ನೇರವಾಗಿ ಸಂಪರ್ಕಿತ ಕಂಪನಿಗಳಿಗೇ ವರ್ಗಾಯಿಸಲಾಗುತ್ತದೆ. ಗ್ರಾಹಕರಿಗೆ ಕೂಡ ಜಾಗೋ ಗ್ರಾಹಕ್ ಜಾಗೋ (ಎಚ್ಚರ ಗ್ರಾಹಕರೆ ಎಚ್ಚರ) ಅಭಿಯಾನದ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಭಾರತದಲ್ಲಿ ನಮ್ಮ ಸರ್ಕಾರ ಸಾಮಾಜಿಕ ತಾಣಗಳನ್ನು ಗ್ರಾಹಕ ರಕ್ಷಣೆಗೆ ಸಮರ್ಥವಾಗಿ ಬಳಸಿಕೊಳ್ಳುತ್ತಿದೆ ಎಂದು ನಾನು ವಿಶ್ವಾಸಪೂರ್ವಕವಾಗಿ ಹೇಳುತ್ತೇನೆ. ಇಂಥ ಕಾರ್ಯ ಹಿಂದೆಂದೂ ಆಗಿರಲಿಲ್ಲ.
ಸ್ನೇಹಿತರೆ, ನನ್ನ ದೃಷ್ಟಿಯಲ್ಲಿ ಮತ್ತು ನನ್ನ ಸರ್ಕಾರದ ದೃಷ್ಟಿಕೋನದಲ್ಲಿ, ಗ್ರಾಹಕ ರಕ್ಷಣೆ ಬಹಳ ವಿಸ್ತಾರವಾದ್ದು. ಯಾವುದೇ ದೇಶದ ಅಭಿವೃದ್ಧಿ ಮತ್ತು ಗ್ರಾಹಕ ರಕ್ಷಣೆ ಪರಸ್ಪರ ಪೂರಕವಾದವುಗಳು. ಉತ್ತಮ ಆಡಳಿತ ಪ್ರತಿಯೊಬ್ಬ ನಾಗರಿಕರಿಗೂ ಅಭಿವೃದ್ಧಿಯ ಪ್ರಯೋಜನವನ್ನು ತಲುಪಿಸುವಲ್ಲಿ ಮಹತ್ವದ ಪಾತ್ರ ಹೊಂದಿದೆ.

ವಂಚಿತರಿಗೆ ಸರ್ಕಾರದಿಂದ ಹಕ್ಕು ಮತ್ತು ಸೇವೆಗಳ ವಿತರಣೆಯು ಸಹ ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವ ಒಂದು ಮಾರ್ಗವಾಗಿದೆ. ಶುದ್ಧ ಇಂಧನಕ್ಕಾಗಿ ಉಜ್ವಲಾ ಯೋಜನೆ, ಆರೋಗ್ಯ ಮತ್ತು ನೈರ್ಮಲ್ಯಕ್ಕಾಗಿ ಸ್ವಚ್ಛ ಭಾರತ್ ಅಭಿಯಾನ, ಹಣಕಾಸು ಪೂರಣಕ್ಕಾಗಿ ಜನ-ಧನ್ ಯೋಜನೆಗಳು ಈ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತಿವೆ. 2022ರ ಹೊತ್ತಿಗೆ ದೇಶದ ಪ್ರತಿಯೊಬ್ಬರೂ ಸೂರು ಹೊಂದಬೇಕು ಎಂಬ ಗುರಿಯ ಈಡೇರಿಕೆಯೆಡೆಗೆ ಸರ್ಕಾರ ಶ್ರಮಿಸಿತ್ತಿದೆ.

ಇತ್ತೀಚೆಗೆ, ದೇಶದ ಪ್ರತಿಯೊಂದು ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಯೋಜನೆ ಜಾರಿಗೆ ತರಲಾಗಿದೆ. ಈ ಎಲ್ಲ ಪ್ರಯತ್ನಗಳನ್ನೂ ಜನತೆಗೆ ಮೂಲಭೂತ ಜೀವನಾಧಾರ ವ್ಯವಸ್ಥೆ ಒದಗಿಸಲು ಮತ್ತು ಅವರ ಬದುಕನ್ನು ಹಸನು ಮಾಡುವ ಪ್ರಯತ್ನಗಳಾಗಿವೆ.

ಕೇವಲ ಹಕ್ಕುಗಳನ್ನು ನೀಡುವ ಮಾತ್ರಕ್ಕೆ ಗ್ರಾಹಕರ ಹಿತವನ್ನು ರಕ್ಷಿಸಲು ಸಾಧ್ಯವಿಲ್ಲ. ಭಾರತದಲ್ಲಿ, ಗ್ರಾಹಕರು ಹಣ ಉಳಿಸಲು ನೆರವಾಗುವಂಥ ಯೋಜನೆ ತರಲು ಕಾರ್ಯೋನ್ಮುಖರಾಗಿದ್ದೇವೆ. ಬಡ ಮತ್ತು ಮಧ್ಯಮ ವರ್ಗದ ಜನರು ಈ ಯೋಜನೆಯಿಂದ ಹೆಚ್ಚು ಪ್ರಯೋಜನ ಪಡೆಯಲಿದ್ದಾರೆ.

ಯುನಿಸೆಫ್ ಇತ್ತೀಚೆಗೆ ಭಾರತದ ಸಮೀಕ್ಷೆಯ ಸಂಶೋಧನೆಗಳನ್ನು ಪ್ರಕಟಿಸಿರುವುದು ನಿಮಗೆ ತಿಳಿದಿರಬಹುದು. ಸಮೀಕ್ಷೆಯ ಪ್ರಕಾರ, ಬಯಲು ಶೌಚ ಮಕ್ತ ಸಮುದಾಯದಿಂದ ಪ್ರತಿಯೊಂದು ಕುಟುಂಬಕ್ಕೂ ವೈದ್ಯಕೀಯ ವೆಚ್ಚ, ಸಮಯದ ಮೌಲ್ಯ ಉಳಿತಾಯ ಮತ್ತು ಮರಣ ಪ್ರಮಾಣ ಇಳಿಮುಖವಾಗಿರುವುದರಿಂದ ವಾರ್ಷಿಕ 50,000 ರೂಪಾಯಿ ಉಳಿತಾಯವಾಗಿದೆ.
ಸ್ನೇಹಿತರೆ, ಬಡ ಜನರಿಗೆ ಕೈಗೆಟಕುವ ದರದಲ್ಲಿ ಔಷಧ ಪೂರೈಸಲು ಭಾರತೀಯ ಜನೌಷಧಿ ಪರಿಯೋಜನೆಯನ್ನು ಆರಂಭಿಸಲಾಗಿದೆ. 500ಕ್ಕೂ ಹೆಚ್ಚು ಔಷಧಗಳನ್ನು ಅಗತ್ಯ ಔಷಧಗಳ ಪಟ್ಟಿಯಲ್ಲಿ ಸೇರಿಸಲಾಗಿದೆ ಮತ್ತು ಅವುಗಳ ದರವನ್ನು ಇಳಿಸಲಾಗಿದೆ. ಹೃದಯ ಸಂಬಂಧಿ ಕಾಯಿಲೆಯ ಚಿಕಿತ್ಸೆಗೆ ಬಳಸುವ ಸ್ಟಂಟ್ ಗಳ ದರದ ಮೇಲೆ ಮಿತಿ ವಿಧಿಸಲಾಗಿದ್ದು, ಶೇ.85ರಷ್ಟು ದರ ಇಳಿಕೆಯಾಗಿದೆ. ಇತ್ತೀಚೆಗೆ ಮಂಡಿ ಚಿಪ್ಪು ಅಳವಡಿಕೆ ಚಿಕಿತ್ಸೆಯನ್ನು ನಿಯಂತ್ರಣದಡಿಗೆ ತರಲಾಗಿದೆ. ಇದರಿಂದಾಗಿ ಬಡವರಿಗೆ ಮತ್ತು ಮಧ್ಯಮವರ್ಗದವರಿಗೆ ಕೋಟ್ಯಂತರ ರೂಪಾಯಿ ಉಳಿತಾಯವಾಗುತ್ತಿದೆ.
ಗ್ರಾಹಕ ರಕ್ಷಣೆಯ ಆಚೆ ಸಾಗಿ, ಗ್ರಾಹಕರ ಹಿತವನ್ನು ರಕ್ಷಿಸುವುದು ನಮ್ಮ ಉದ್ದೇಶವಾಗಿದೆ.

ನಮ್ಮ ಉಜಾಲ ಯೋಜನೆ ಗ್ರಾಹಕರ ಹಿತದೃಷ್ಟಿಯಿಂದ ಹಣ ಉಳಿತಾಯಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಈ ಸರಳ ಯೋಜನೆಯಡಿ ಎಲ್.ಇ.ಡಿ. ಬಲ್ಬ್ ವಿತರಣೆ ಅದ್ಭುತ ಫಲಿತಾಂಶ ನೀಡಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ಎಲ್.ಇ.ಡಿ. ಬಲ್ಬ್ ದರ 350 ರೂಪಾಯಿಯಾಗಿತ್ತು. ನಮ್ಮ ಸರ್ಕಾರದ ಪ್ರಯತ್ನದಿಂದ ಈಗ ಅದೇ ಬಲ್ಬ್ ಯೋಜನೆಯಡಿ 40 -45 ರೂಪಾಯಿಗೆ ಲಭಿಸುತ್ತಿದೆ. ಹೀಗಾಗಿ ಈ ಯೋಜನೆ ಗ್ರಾಹಕರಿಗೆ ವಿದ್ಯುತ್ ಬಿಲ್ ಕಡಿಮೆ ಮಾಡುವ ಮತ್ತು ಎಲ್.ಇ.ಡಿ. ಬಲ್ಬ್ ದರ ಕಡಿಮೆ ಮಾಡುವ ಮೂಲಕ 20 ಸಾವಿರ ಕೋಟಿ ರೂಪಾಯಿಗಳ ಉಳಿತಾಯ ಮಾಡಿದೆ.

ಸ್ನೇಹಿತರೆ, ಹಣದುಬ್ಬರವನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದರಿಂದ ಬಡವರಿಗೆ ಮತ್ತು ಮಧ್ಯಮ ವರ್ಗದ ಗ್ರಾಹಕರಿಗೆ ಆರ್ಥಿಕ ಲಾಭ ದೊರೆತಿದೆ. ಇಲ್ಲದಿದ್ದರೆ, ಹಿಂದಿನ ಸರ್ಕಾರದ ಅವಧಿಯಲ್ಲಿ ಹೇಗೆ ಹಣದುಬ್ಬರ ಏರಿಕೆಯಾಗುತ್ತಿತ್ತೋ ಅದು ಶ್ರೀಸಾಮಾನ್ಯರ ಅಡುಗೆ ಮನೆಯಲ್ಲಿನ ಆಯವ್ಯಯದ ಮೇಲೆ ಬೃಹತ್ ಪರಿಣಾಮ ಬೀರುತ್ತಿತ್ತು.

ತಂತ್ರಜ್ಞಾನದಿಂದ ಸಾರ್ವಜನಿಕ ವಿತರಣೆ ವ್ಯವಸ್ಥೆಯನ್ನು ಬಲಪಡಿಸಿರುವುದು ಕೂಡ, ಬಡವರಿಗೆ ಕೈಗೆಟಕುವ ದರದಲ್ಲಿ ಆಹಾರ ಧಾನ್ಯದ ಹಕ್ಕು, ಬಾಕಿ ಪಡೆಯುವುದನ್ನು ಖಾತ್ರಿ ಪಡಿಸಿದೆ.

ನೇರ ಸವಲತ್ತು ವರ್ಗಾವಣೆ ಯೋಜನೆಯಡಿ, ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ವರ್ಗಾವಣೆ ಮಾಡುತ್ತಿರುವುದರಿಂದ ಸರ್ಕಾರ 57 ಸಾವಿರ ಕೋಟಿ ರೂಪಾಯಿಗಳೂ ಹೆಚ್ಚು ಸೋರಿಕೆಯನ್ನು ತಡೆದಿದೆ.

ಸ್ನೇಹಿತರೆ, ಗ್ರಾಹಕರು ಕೂಡ ಸಮಾಜದೆಡೆಗೆ ತಮ್ಮ ಹಂಚಿಕೆಯ ಜವಾಬ್ದಾರಿಯನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಮತ್ತು ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವ ನಿಟ್ಟಿನಲ್ಲಿ ತಮ್ಮ ಕರ್ತವ್ಯ ನಿರ್ವಹಿಸುವ ಅಗತ್ಯವಿದೆ.

ಈ ಸಂದರ್ಭದಲ್ಲಿ ನಾನು, ವಿಶೇಷವಾಗಿ ಇತರ ದೇಶಗಳ ನನ್ನ ಸಹೋದ್ಯೋಗಿಗಳಿಗೆ ಸಬ್ಸಿಡಿ ಬಿಟ್ಟು ಕೊಡಿ ಅಭಿಯಾನದ ಬಗ್ಗೆ ತಿಳಿಸಲು ಇಚ್ಛಿಸುತ್ತೇನೆ. ನಮ್ಮ ದೇಶದಲ್ಲಿ ಎಲ್.ಪಿ.ಜಿ. ಸಿಲಿಂಡರ್ ಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ. ನನ್ನ ಮನವಿಯ ಮೇರೆಗೆ ಒಂದು ವರ್ಷಕ್ಕೂ ಅತಿ ಕಡಿಮೆ ಅವಧಿಯಲ್ಲಿ ಒಂದು ಕೋಟಿಗೂ ಹೆಚ್ಚು ಜನರು ತಮ್ಮ ಅಡುಗೆ ಅನಿಲ ಸಬ್ಸಿಡಿಯನ್ನು ಬಿಟ್ಟುಕೊಟ್ಟಿದ್ದಾರೆ. ಇದರ ಉಳಿತಾಯದಲ್ಲಿ 3 ಕೋಟಿ ಬಡ ಕುಟುಂಬಗಳಿಗೆ ಈವರೆಗೆ ಉಚಿತ ಅಡುಗೆ ಅನಿಲ ನೀಡಲಾಗಿದೆ.
ಪ್ರತಿಯೊಬ್ಬ ಗ್ರಾಹಕರ ಹಂಚಿಕೆಯ ಕೊಡುಗೆಯಿಂದ ಇತರ ಗ್ರಾಹಕರು ಹೇಗೆ ಸಮಾಜದಲ್ಲಿ ಧನಾತ್ಮಕ ವಾತಾವರಣವನ್ನು ರಚಿಸುತ್ತಾರೊ ಅದು ಒಬ್ಬರ ಕರ್ತವ್ಯಕ್ಕೆ ಒಂದು ಉದಾಹರಣೆಯಾಗಿದೆ.

ಸ್ನೇಹಿತರೆ, ಸರ್ಕಾರ, ದೇಶದ ಗ್ರಾಮೀಣ ಪ್ರದೇಶಗಳಲ್ಲಿರುವ ಗ್ರಾಹಕರ ಡಿಜಿಟಲ್ ಸಬಲೀಕರಣಕ್ಕಾಗಿ ಪ್ರಧಾನಮಂತ್ರಿಯವರ ಗ್ರಾಮೀಣ ಡಿಜಿಟಲ್ ಸಾಕ್ಷರತಾ ಅಭಿಯಾನ ಆರಂಭಿಸಿದೆ. ಈ ಯೋಜನೆಯಡಿ, 6 ಕೋಟಿ ಕುಟುಂಬಗಳಿಂದ ತಲಾ ಒಬ್ಬರನ್ನು ಡಿಜಿಟಲ್ ಸಾಕ್ಷರರನ್ನಾಗಿ ಮಾಡಲಾಗುತ್ತಿದೆ. ಈ ಅಭಿಯಾನವು ಗ್ರಾಮೀಣರಿಗೆ ಡಿಜಿಟಲ್ ವಹಿವಾಟು ನಡೆಸಲು ಅವಕಾಶ ನೀಡುತ್ತಿದೆ ಮತ್ತು ಸರ್ಕಾರದ ಸೇವೆಗಳನ್ನು ಡಿಜಿಟಲ್ ಮೂಲಕ ಪಡೆಯಲು ನೆರವಾಗುತ್ತಿದೆ.

ಗ್ರಾಮೀಣ ಭಾರತದಲ್ಲಿ ಡಿಜಿಟಲ್ ಜಾಗೃತಿಯು ಭವಿಷ್ಯದಲ್ಲಿ ಇ-ವಾಣಿಜ್ಯದ ಬೃಹತ್ ಮಾರುಕಟ್ಟೆಯನ್ನು ನಿರ್ಮಾಣ ಮಾಡಲಿದೆ. ಯುನಿಫೈಡ್ ಪೇಮೆಂಟ್ ಇಂಟರ್ ಫೇಸ್ –ಯುಪಿಐ ಇ- ವಾಣಿಜ್ಯ ಕೈಗಾರಿಕೆಗೆ ಸಾಕಷ್ಟು ಬಲ ನೀಡಿದೆ. ಭಾರತ್ ಇಂಟರ್ ಫೇಸ್ ಫಾರ್ ಮನಿ ಅಂದರೆ ಭೀಮ್ ಆಪ್ ನಗರಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಡಿಜಿಟಲ್ ಪಾವತಿ ವಿಸ್ತರಿಸಿದೆ.

ಸ್ನೇಹಿತರೆ, 125 ಕೋಟಿ ಜನಸಂಖ್ಯೆ ಹಾಗೂ ತ್ವರಿತವಾಗಿ ವೃದ್ಧಿಸುತ್ತಿರುವ ಮಧ್ಯಮವರ್ಗದ ಬಲದಿಂದಾಗಿ ಭಾರತವು ವಿಶ್ವದ ಇತಿ ದೊಡ್ಡ ಮಾರುಕಟ್ಟೆಗಳಲ್ಲಿ ಒಂದಾಗಿದೆ. ನಮ್ಮ ಆರ್ಥಿಕತೆಯ ಮುಕ್ತತೆಯು ವಿಶ್ವದ ಪ್ರತಿಯೊಂದು ರಾಷ್ಟ್ರವನ್ನೂ ಸ್ವಾಗತಿಸುತ್ತದೆ, ಭಾರತೀಯ ಗ್ರಾಹಕರನ್ನು ಜಾಗತಿಕ ವಹಿವಾಟುದಾರರ ಸನಿಹಕ್ಕೆ ತರುತ್ತಿದೆ. ಮೇಕ್ ಇನ್ ಇಂಡಿಯಾ ಮೂಲಕ ನಾವು ಜಾಗತಿಕ ಕಂಪನಿಗಳಿಗೆ ಭಾರತದಲ್ಲಿ ಉತ್ಪಾದಿಸಲು ವೇದಿಕೆಯನ್ನು ಕಲ್ಪಿಸುತ್ತಿದ್ದೇವೆ ಮತ್ತು ನಮ್ಮ ಮಾನವ ಸಂಪನ್ಮೂಲದ ಬಳಕೆಯನ್ನು ಉತ್ತಮ ಪಡಿಸುತ್ತಿದ್ದೇವೆ.

ಸ್ನೇಹಿತರೆ, ಇದು ವಿಶ್ವದಲ್ಲಿ ಈ ಭಾಗದಲ್ಲಿ ನಡೆಯುತ್ತಿರುವ ಪ್ರಥಮ ಸಮಾವೇಶವಾಗಿದೆ. ಇಲ್ಲಿ ಪ್ರತಿನಿಧಿಸಿರುವ ಎಲ್ಲ ರಾಷ್ಟ್ರಗಳೂ ತಮ್ಮ ಗ್ರಾಹಕರ ಹಿತ ರಕ್ಷಿಸಲು ತಮ್ಮದೇ ಆದ ರೀತಿಯಲ್ಲಿ ಕಾರ್ಯಕ್ರಮ ರೂಪಿಸಿವೆ. ಹೆಚ್ಚುತ್ತಿರುವ ಜಾಗತೀಕರಣದಿಂದ ಇಡೀ ವಿಶ್ವವೇ ಒಂದು ಮಾರುಕಟ್ಟೆಯಾಗಿ ಬದಲಾಗುತ್ತಿರುವುದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ಹೀಗಾಗಿ, ಪರಸ್ಪರ ಅನುಭವದಿಂದ ಕಲಿಯುವುದು, ಸಮಾನ ಅರ್ಥ ಮಾಡಿಕೊಳ್ಳುವುದನ್ನು ಶೋಧಿಸುವುದು ಮತ್ತು ಇಂಥ ಕಾರ್ಯಕ್ರಮಗಳ ಮೂಲಕ ಗ್ರಾಹಕ ರಕ್ಷಣೆಗಾಗಿ ಪ್ರಾದೇಶಿಕ ಮೈತ್ರಿ ರೂಪಿಸುವುದು ಮಹತ್ವದ್ದಾಗಿದೆ.

ಸ್ನೇಹಿತರೆ, 4 ಶತಕೋಟಿಗೂ ಹೆಚ್ಚು ಜನಸಂಖ್ಯೆಯಿಂದಾಗಿ ಮತ್ತು ಖರೀದಿಯ ಶಕ್ತಿಯ ಹೆಚ್ಚಳದಿಂದಾಗಿ ಹಾಗೂ ಯುವ ಜನಸಂಖ್ಯೆಯಿಂದಾಗಿ ಏಷ್ಯಾ ರಾಷ್ಟ್ರಗಳು ದೊಡ್ಡ ವಾಣಿಜ್ಯದ ಅವಕಾಶಗಳನ್ನು ಒದಗಿಸುತ್ತಿವೆ. ಇ – ವಾಣಿಜ್ಯ ಮತ್ತು ಗಡಿರೇಖೆಯ ಜನ ಸಂಚಾರ ಗಡಿಯಾಚೆಗಿನ ವಹಿವಾಟನ್ನೂ ಹೆಚ್ಚಿಸಿದೆ. ಈ ಸನ್ನಿವೇಶದಲ್ಲಿ, ಪ್ರತಿಯೊಂದು ರಾಷ್ಟ್ರದಲ್ಲಿ ಬಲವಾದ ನಿಯಂತ್ರಣ ವ್ಯವಸ್ಥೆ ಮತ್ತು ಮಾಹಿತಿ ವಿನಿಮಯ ಗ್ರಾಹಕರ ನಂಬಿಕೆಯನ್ನು ಸುಸ್ಥಿರಗೊಳಿಸುತ್ತದೆ. ಇತರ ರಾಷ್ಟ್ರಗಳ ಗ್ರಾಹಕರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ತ್ವರಿತವಾಗಿ ಸ್ಪಂದಿಸುವುದಕ್ಕೆ ಸಹಕಾರ ಚೌಕಟ್ಟಿನ ಅಗತ್ಯವಿದೆ. ಇದು ಪರಸ್ಪರ ನಂಬಿಕೆ ಮತ್ತು ವಾಣಿಜ್ಯವನ್ನು ಹೆಚ್ಚಿಸುತ್ತದೆ.

ಸಂವಹನಕ್ಕೆ ಸಂಘಟಿತ ವ್ಯವಸ್ಥೆ ರೂಪಿಸುವುದು, ಉತ್ತಮ ಪದ್ಧತಿಗಳ ಪರಸ್ಪರ ವಿನಿಮಯ, ಸಮರ್ಥ್ಯ ವರ್ಧನೆಗೆ ಹೊಸ ಉಪಕ್ರಮ ರೂಪಿಸುವುದು ಮತ್ತು ಜಂಟಿ ಅಭಿಯಾನ ಆರಂಭಿಸುವ ಮೂಲಕ ಪರಸ್ಪರ ಹಿತವನ್ನು ರಕ್ಷಿಸಬಹುದಾಗಿದೆ.
ಸ್ನೇಹಿತರೆ, ನಮ್ಮ ಭಾವನಾತ್ಮಕ ನಂಟು ಸಹ ನಮ್ಮ ಹಂಚಿಕೆಯ ಸಂಸ್ಕೃತಿ ಮತ್ತು ವಾಣಿಜ್ಯ ಪರಂಪರೆಯನ್ನು ಬಲಪಡಿಸಿದೆ. ಶತಮಾನಗಳಿಂದ ನಾವು ಪರಸ್ಪರರಿಂದ ಕಲಿಯುತ್ತಿದ್ದೇವೆ ಮತ್ತು ವಾಣಿಜ್ಯ ಮತ್ತು ಗ್ರಾಹಕ ರಕ್ಷಣೆ ನಮ್ಮ ಪ್ರಕ್ರಿಯೆಯ ಭಾಗವಾಗಿದೆ.

ಭವಿಷ್ಯದ ಸವಾಲುಗಳನ್ನು ಗಮನದಲ್ಲಿಟ್ಟುಕೊಂಡು, ಸ್ಪಷ್ಟ ದೃಷ್ಟಿಕೋನದ ಮಾರ್ಗಸೂಚಿಯನ್ನು ಈ ಸಮಾವೇಶದಲ್ಲಿ ರೂಪಿಸಲಾಗುತ್ತಿದೆ. ಈ ಸಮಾವೇಶದ ಮೂಲಕ ಪ್ರಾದೇಶಿಕ ಸಹಕಾರವನ್ನು ಯಶಸ್ವಿಯಾಗಿ ಸಾಂಸ್ಥೀಕರಿಸುವ ನಂಬಿಕೆ ನನಗಿದೆ.
ಈ ಸಮಾವೇಶದಲ್ಲಿ ಭಾಗವಹಿಸಿರುವುದಕ್ಕೆ ನಾನು ಮತ್ತೊಮ್ಮೆ ಆಭಾರ ವ್ಯಕ್ತಪಡಿಸುತ್ತೇನೆ.

ತುಂಬಾ ಧನ್ಯವಾದಗಳು!

***