ಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಸೌಭಾಗ್ಯ ಯೋಜನೆಗೆ ಚಾಲನೆ ನೀಡಿದ ಪ್ರಧಾನಿ; ದೇಶಕ್ಕೆ ದೀನ ದಯಾಳ್ ಶಕ್ತಿ ಭವನ ಸಮರ್ಪಣೆ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪ್ರಧಾನಮಂತ್ರಿ ಪ್ರತಿ ಮನೆಗೂ ಸಹಜ ವಿದ್ಯುತ್ ಯೋಜನೆ ಅಥವಾ ಸೌಭಾಗ್ಯ ಯೋಜನೆಗೆ ದೆಹಲಿಯಲ್ಲಿ ಚಾಲನೆ ನೀಡಿದರು. ಎಲ್ಲರ ಮನೆಗಳಿಗೂ ವಿದ್ಯುತ್ ಒದಗಿಸುವುದು ಈ ಯೋಜನೆಯ ಗುರಿಯಾಗಿದೆ.

ಪಂಡಿತ್ ದೀನದಯಾಳ್ ಉಪಾಧ್ಯಾಯ ಜನ್ಮ ಜಯಂತಿ ಸಂದರ್ಭದಲ್ಲಿ, ಪ್ರಧಾನಮಂತ್ರಿಯವರು ನೂತನ ಓ.ಎನ್.ಜಿ.ಸಿ. ಕಟ್ಟಡ – ದೀನ್ ದಯಾಳ್ ಶಕ್ತಿ ಭವನವನ್ನು ದೇಶಕ್ಕೆ ಸಮರ್ಪಿಸಿದರು.

ಬಾಸಿನ್ ಅನಿಲ ಕ್ಷೇತ್ರದಲ್ಲಿ ಬೂಸ್ಟರ್ ಕಂಪ್ರೆಷರ್ ಸೌಲಭ್ಯವನ್ನೂ ಪ್ರಧಾನಮಂತ್ರಿಯವರು ದೇಶಕ್ಕೆ ಸಮರ್ಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿಯವರು ಬಡವರಲ್ಲೇ ಕಡು ಬಡವರಿಗೆ ಪ್ರಯೋಜನಕಾರಿಯಾದ ಯೋಜನೆಗಳನ್ನು ಸರ್ಕಾರ ಹೇಗೆ ಅನುಷ್ಠಾನಗೊಳಿಸುತ್ತಿದೆ ಎಂಬ ಬಗ್ಗೆ ತಿಳಿಸಿದ ಅವರು ಜನ್ ಧನ್ ಯೋಜನೆ, ವಿಮಾ ಯೋಜನೆಗಳು, ಮುದ್ರಾ ಯೋಜನೆ, ಉಜ್ವಲ ಯೋಜನೆ ಮತ್ತು ಉಡಾಣ್ ನ ಯಶಸ್ಸಿನ ಪ್ರಸ್ತಾಪ ಮಾಡಿದರು.

ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಪ್ರತಿ ಮನೆಗೂ ಸಹಜ ವಿದ್ಯುತ್ ಯೋಜನೆಯ ಪ್ರಸ್ತಾಪ ಮಾಡಿದ ಅವರು, ವಿದ್ಯುತ್ ಸಂಪರ್ಕವೇ ಇಲ್ಲದ ಸುಮಾರು ನಾಲ್ಕು ಕೋಟಿ ಗೃಹಗಳಿಗೆ ವಿದ್ಯುತ್ ಒದಗಿಸುವ ಮೂಲಕ ಎಲ್ಲರ ಮನೆಗೂ ವಿದ್ಯುತ್ ಸಂಪರ್ಕ ನೀಡಲಾಗುವುದು ಎಂದರು. ಈ ಯೋಜನೆಗೆ 16 ಸಾವಿರ ಕೋಟಿ ರೂಪಾಯಿ ತೊಡಗಿಸಲಾಗುವುದು. ಈ ಯೋಜನೆಗಳನ್ನು ಉಚಿತವಾಗಿ ಒದಗಿಸಲಾಗುವುದು ಎಂದು ಪ್ರಧಾನಿ ತಿಳಿಸಿದರು. ಇದಕ್ಕೆ ಪೂರಕವೆಂಬಂತೆ 1000 ದಿನಗಳಲ್ಲಿ 18 ಸಾವಿರ ವಿದ್ಯುತ್ ರಹಿತ ಗ್ರಾಮಗಳಲ್ಲಿ ಹೇಗೆ ವಿದ್ಯುದ್ದೀಕರಿಸಲಾಗಿದೆ ಎಂಬ ಬಗ್ಗೆ ಪ್ರಧಾನಿ ತಿಳಿಸಿದರು. ಈಗ ಕೇವಲ 3 ಸಾವಿರ ಗ್ರಾಮಗಳು ಮಾತ್ರವೇ ವಿದ್ಯುತ್ ರಹಿತವಾಗಿ ಉಳಿದಿವೆ ಎಂದರು.

ಈ ಹಿಂದೆ ಕಲ್ಲಿದ್ದಲು ಕೊರತೆ ಹೇಗೆ ಸಮಸ್ಯೆ ಆಗುತ್ತಿತ್ತು ಎಂಬುದನ್ನು ವಿವರಿಸಿದರ ಅವರು, ವಿದ್ಯುತ್ ಉತ್ಪಾದನೆಯ ಗುರಿ ಮೀರಿ ಸಾಧನೆ ಮಾಡಿದೆ ಎಂದರು.

2022ರ ಹೊತ್ತಿಗೆ 175 ಜಿ.ಡ್ಲ್ಯು. ಗುರಿಯತ್ತ ನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯದಲ್ಲೂ ಹೆಚ್ಚಳವಾಗಿರುವ ಬಗ್ಗೆ ಅವರು ಮಾತನಾಡಿದರು. ಹೇಗೆ ನವೀಕರಿಸಬಹುದಾದ ಇಂಧನದ ದರ ಗಣನೀಯವಾಗಿ ಇಳಿಕೆಯಾಗಿದೆ ಎಂಬುದನ್ನೂ ವಿವರಿಸಿದರು. ವಿದ್ಯುತ್ ಸರಬರಾಜು ಮಾರ್ಗಗಳಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಆಗಿದೆ ಎಂದು ತಿಳಿಸಿದರು.

ಉದಯ್ ಯೋಜನೆ ಹೇಗೆ ವಿದ್ಯುತ್ ಸರಬರಾಜು ಕಂಪನಿಗಳ ನಷ್ಟವನ್ನು ತಗ್ಗಿಸಿದೆ ಎಂಬುದನ್ನು ಪ್ರಸ್ತಾಪಿಸಿದ ಪ್ರಧಾನಿ, ಇದು ಸಹಕಾರಿ ಸ್ಪರ್ಧಾತ್ಮಕ ಒಕ್ಕೂಟ ವ್ಯವಸ್ಥೆಗೆ ಉದಾಹರಣೆ ಎಂದರು.

ಉಜಾಲಾ ಯೋಜನೆಯಲ್ಲಿ ಆರ್ಥಿಕತೆಯ ಪರಿಣಾಮಗಳನ್ನು ವಿವರಿಸಿದ ಪ್ರಧಾನಮಂತ್ರಿಯವರು, ಎಲ್.ಇ.ಡಿ. ಬಲ್ಬ್ ಗಳ ದರದಲ್ಲಿ ಗಣನೀಯ ಇಳಿಕೆ ಆಗಿದೆ ಎಂದರು.

ನವ ಭಾರತಕ್ಕೆ ಕ್ಷಮತೆಯ, ಸುಸ್ಥಿರವಾದ ಮತ್ತು ಸಮಾನತೆಯ ತತ್ವದ ಮೇಲೆ ಕಾರ್ಯ ನಿರ್ವಹಿಸುವ ಇಂಧನದ ಚೌಕಟ್ಟಿನ ಅಗತ್ಯವಿದೆ ಎಂದು ಪ್ರಧಾನಿ ಹೇಳಿದರು. ಕೇಂದ್ರ ಸರ್ಕಾರದ ಕಾರ್ಯ ಸಂಸ್ಕೃತಿ ಇಂಧನ ವಲಯಕ್ಕೆ ಬಲ ತುಂಬುತ್ತಿದೆ ಎಂದು ಹೇಳಿದರು. ಇದರ ಫಲವಾಗಿ, ಇಡೀ ದೇಶದ ಕಾರ್ಯ ಸಂಸ್ಕೃತಿಯ ಮೇಲೆ ಧನಾತ್ಮಕ ಪರಿಣಾಮ ಬೀರುತ್ತಿದೆ ಎಂದೂ ತಿಳಿಸಿದರು.

***