ಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

71ನೇ ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆಯ ವೇದಿಕೆಯಿಂದ ದೇಶವನ್ನುದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣ

71ನೇ ಸ್ವಾತಂತ್ರ್ಯೋತ್ಸವದಂದು ಕೆಂಪುಕೋಟೆಯ ವೇದಿಕೆಯಿಂದ ದೇಶವನ್ನುದ್ದೇಶಿಸಿ ಪ್ರಧಾನಮಂತ್ರಿಯವರ ಭಾಷಣ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕೆಂಪುಕೋಟೆಯ ವೇದಿಕೆಯ ಮೇಲಿನಿಂದ 71ನೇ ಸ್ವಾತಂತ್ರ್ಯೋತ್ಸವದ ದಿನವಾದ ಇಂದು ದೇಶವನ್ನುದ್ದೇಶಿಸಿ ಭಾಷಣ ಮಾಡಿದರು. 
ಭಾರತದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹಾನ್ ಪುರುಷರು ಮತ್ತು ಮಹಿಳೆಯರನ್ನು ಪ್ರಧಾನಿ ಸ್ಮರಿಸಿದರು. ಪ್ರಕೃತಿ ವಿಕೋಪ ಮತ್ತು ಗೋರಖ್ಪರದ ದುರಂತದಲ್ಲಿ ಬಾಧಿತರಾದವರಿಗೆ ಭಾರತದ ಜನರು ಹೆಗಲಿಗೆ ಹೆಗಲು ಕೊಟ್ಟು ನಿಲ್ಲಬೇಕು ಎಂದು ಅವರು ಹೇಳಿದರು.  

ಈ ವರ್ಷ ವಿಶೇಷವಾದುದಾಗಿದೆ ಕಾರಣ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳವಳಿಯ 75ನೇ ವರ್ಷ, ಚಂಪಾರಣ್ ಸತ್ಯಾಗ್ರಹದ 100ನೇ ವರ್ಷ ಮತ್ತು ಬಾಲ ಗಂಗಾಧರ ತಿಲಕರಿಂದ ಪ್ರೇರಣೆ ಪಡೆದ ಸಾರ್ವಜನಿಕ ಗಣೇಶೋತ್ಸವದ 125ನೇ ವರ್ಷವನ್ನು  ಇದು ಸಂಕೇತಿಸುತ್ತಿದೆ ಎಂಬುದನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು.

ಭಾರತ ಸ್ವಾತಂತ್ರ್ಯ ಪಡೆಯಲು 1942ರಿಂದ 1947ರ ಅವಧಿಯಲ್ಲಿ ಭಾರತ ತನ್ನ ಸಂಘಟಿತ ಶಕ್ತಿಯನ್ನು ಪ್ರದರ್ಶಿಸಿತು ಎಂದು ಪ್ರಧಾನಿ ಹೇಳಿದರು. ಅದೇ ರೀತಿ 2022ರ ಹೊತ್ತಿಗೆ ನವ ಭಾರತದ ನಿರ್ಮಾಣಕ್ಕೆ ನಾವು ಸಂಕಲ್ಪ ಮಾಡಿ ನಮ್ಮ ಸಂಘಟಿತ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದೂ ಅವರು ಹೇಳಿದರು. ನಮ್ಮ ದೇಶದಲ್ಲಿ ಪ್ರತಿಯೊಬ್ಬರೂ ಸಮಾನರು ಎಂದು ಪ್ರತಿಪಾದಿಸಿದ ಪ್ರಧಾನಿ, ನಾವು ಒಟ್ಟಾರೆಯಾಗಿ  ದೇಶದಲ್ಲಿ ಗುಣಾತ್ಮಕ ಪರಿವರ್ತನೆ ತರಬಹುದು ಎಂದು ಹೇಳಿದರು. 
“ನಡೆಯತ್ತೆ ಬಿಡಿ’’ ಎಂಬ ಧೋರಣೆಗೆ ಸಂಪೂರ್ಣ ಕೊನೆ ಹಾಡಬೇಕು ಎಂದ ಪ್ರಧಾನಿ, ಇದರ ಬದಲಾಗಿ ‘ಬದಲಾವಣೆ ಆಗುತ್ತದೆ’ ಎಂಬ ಧನಾತ್ಮಕತೆ ಮೂಡಬೇಕು ಎಂದರು. 
ಭಾರತದ ಸುರಕ್ಷತೆ ನಮ್ಮ ಆದ್ಯತೆಯಾಗಿದೆ ಎಂದ ಪ್ರಧಾನಿ ನಿರ್ದಿಷ್ಟ ಲಕ್ಷ್ಯ ದಾಳಿಯನ್ನು ಉಲ್ಲೇಖಿಸಿದರು. ವಿಶ್ವದಲ್ಲಿ ಭಾರತದ ಔನ್ನತ್ಯ ಹೆಚ್ಚಾಗುತ್ತಿದೆ ಎಂದು ಹೇಳಿದ ಅವರು, ಭಯೋತ್ಪಾದನೆಯ ಪಿಡುಗಿನ ವಿರುದ್ಧ ಹೋರಾಟ ನಡೆಸಲು ಭಾರತದೊಂದಿಗೆ ಹಲವು ದೇಶಗಳು ಸಹಕಾರ ನೀಡುತ್ತಿವೆ ಎಂದರು. ಗರಿಷ್ಠ ಮೌಲ್ಯದ ನೋಟುಗಳ ಅಮಾನ್ಯದ ಪ್ರಸ್ತಾಪ ಮಾಡಿದ ಪ್ರಧಾನಿ, ಯಾರು ದೇಶವನ್ನು ಮತ್ತು ಬಡವರನ್ನು ಲೂಟಿ ಮಾಡಿದ್ದಾರೋ ಅವರು ನೆಮ್ಮದಿಯಿಂದ ನಿದ್ದೆ ಮಾಡಲು ಸಾಧ್ಯವಿಲ್ಲ, ಇಂದು ಪ್ರಾಮಾಣಿಕತೆಯ ಉತ್ಸವ ನಡೆಯುತ್ತಿದೆ ಎಂದು ಹೇಳಿದರು. ಕಪ್ಪು ಹಣದ ವಿರುದ್ಧದ ಹೋರಾಟ ಮುಂದುವರಿಯುತ್ತದೆ, ಈ ನಿಟ್ಟಿನಲ್ಲಿ ತಂತ್ರಜ್ಞಾನ ಪಾರದರ್ಶಕತೆಯನ್ನು ತರುತ್ತಿದೆ ಎಂದರು. ಡಿಜಿಟಲ್ ವಹಿವಾಟನ್ನು ಹೆಚ್ಚಿಸಲು ಜನತೆಗೆ ಅವರು ಉತ್ತೇಜನ ನೀಡಿದರು.

ಜಿಎಸ್ಟಿ ಜಾರಿ ಸಹಕಾರ ಒಕ್ಕೂಟ ವ್ಯವಸ್ಥೆಗೆ ಪ್ರಮುಖ ಉದಾಹರಣೆಯಾಗಿದೆ ಎಂದು ಪ್ರಧಾನಿ ಬಣ್ಣಿಸಿದರು. ಹಣಪೂರಣದಂಥ ಉಪಕ್ರಮದ ಮೂಲಕ ಬಡವರು ಮುಖ್ಯ ವಾಹಿನಿಗೆ ಸೇರುತ್ತಿದ್ದಾರೆ ಎಂದೂ ಪ್ರಧಾನಿ ತಿಳಿಸಿದರು. ಸರಳ ಮತ್ತು ತ್ವರಿತ ಪ್ರಕ್ರಿಯೆಗಳು ಉತ್ತಮ ಆಡಳಿತಕ್ಕೆ ಮೂಲವಾಗಿವೆ ಎಂದು ಪ್ರಧಾನಿ ಪ್ರತಿಪಾದಿಸಿದರು. ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಮಾತನಾಡಿದ ಪ್ರಧಾನಿ, ನಿಂದನೆ ಅಥವಾ ಗುಂಡಿನಿಂದ ರಾಜ್ಯದಲ್ಲಿನ ಸಮಸ್ಯೆಗಳು ಬಗೆಹರಿಯಲು ಸಾಧ್ಯವಿಲ್ಲ. ಇದು ಸ್ನೇಹದಿಂದ ಮಾತ್ರ ಇದು ಸಾಧ್ಯ ಎಂದು ಒತ್ತಿ ಹೇಳಿದರು.

ನವ ಭಾರತದ ಬಗೆಗಿನ ತಮ್ಮ ದೃಷ್ಟಿಕೋನವನ್ನು ವಿವರಿಸಿದ ಪ್ರಧಾನಮಂತ್ರಿಯವರು, ತಂತ್ರದಿಂದ ಲೋಕವಲ್ಲ ಬದಲಿಗೆ ಲೋಕದಿಂದ ತಂತ್ರ ನಡೆಯುತ್ತದೆ, ಈ ಸ್ಥಾಪನೆಯ ಹಿಂದಿನ ಪ್ರೇರಕ ಶಕ್ತಿಯೇ ಜನರು ಎಂದು ಹೇಳಿದರು. 
ಈ ವರ್ಷ ದಾಖಲೆಯ ಕೃಷಿ ಉತ್ಪಾದನೆಗೆ ಕಾರಣರಾದ ರೈತರು ಮತ್ತು ಕೃಷಿ ವಿಜ್ಞಾನಿಗಳನ್ನು ಪ್ರಧಾನಿ ಶ್ಲಾಘಿಸಿದರು. ಈ ವರ್ಷ ದೇಶ 16 ಲಕ್ಷ ಟನ್ ಬೇಳೆಕಾಳು ಉತ್ಪಾದಿಸಿದೆ, ಇದು ಕಳೆದ ವರ್ಷದ ದಾಸ್ತಾನಿಗಿಂತ ಹೆಚ್ಚಾಗಿದೆ ಎಂದರು.  
ಬದಲಾಗುತ್ತಿರುವ ತಂತ್ರಜ್ಞಾನದ ಸ್ವರೂಪವು ಉದ್ಯೋಗಕ್ಕೆ ಅಗತ್ಯವಾದ ವಿವಿಧ ಕೌಶಲ್ಯಕ್ಕೆ ಕಾರಣವಾಗಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ದೇಶದ ಯುವಕರು ಉದ್ಯೋಗ ಕೇಳುವವರಾಗದೆ, ಉದ್ಯೋಗ ನೀಡುವವರಾಗುವಂತೆ ಪೋಷಿಸಬೇಕು ಎಂದು ಅವರು ಹೇಳಿದರು. 
ತ್ರಿವಳಿ ತಲಾಖ್ ನಿಂದ ಬವಣೆ ಪಡುತ್ತಿರುವ ಮಹಿಳೆಯರ ಬಗ್ಗೆ ಉಲ್ಲೇಖಿಸಿದ ಪ್ರಧಾನಿ, ಈ ಅಭ್ಯಾಸದ ವಿರುದ್ಧ ಸಿಡಿದೆದ್ದವರ ಧೈರ್ಯವನ್ನು ಪ್ರಶಂಸಿಸಿದರು ಮತ್ತು ಆ ಹೋರಾಟದಲ್ಲಿ ರಾಷ್ಟ್ರವೇ ಅವರೊಂದಿಗೆ ನಿಂತಿದೆ ಎಂದು ಹೇಳಿದರು.

ಭಾರತ ಶಾಂತಿ, ಏಕತೆ ಮತ್ತು ಸೌಹಾರ್ದತೆ ಬಯಸುತ್ತದೆ ಎಂದು ಪ್ರಧಾನಿ ಹೇಳಿದರು. ಜಾತಿಯತೆ ಮತ್ತು ಕೋಮುವಾದದಿಂದ ನಮಗೆ ನೆರವಾಗುವುದಿಲ್ಲ ಎಂದರು. ನಂಬಿಕೆಯ ಹೆಸರಿನಲ್ಲಿ ಹಿಂಸಾಚಾರವನ್ನು ಅವರು ತೀವ್ರವಾಗಿ ಖಂಡಿಸಿದರು, ಇದನ್ನು ಭಾರತದಲ್ಲಿ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದರು. ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಚಳವಳಿಯ ಘೋಷಣೆ “ಭಾರತ್ ಚೋಡೋ’’ ಎಂಬುದಾಗಿತ್ತು. ಇಂದಿನ ಕರೆ “ಭಾರತ್ ಜೋಡೋ’’ ಎಂದು ಹೇಳಿದರು.

ಪೂರ್ವ ಮತ್ತು ಈಶಾನ್ಯ ಭಾರತದ ಅಭಿವೃದ್ಧಿಗಾಗಿ ಗಣನೀಯ ಗಮನ ಹರಿಸಲಾಗಿದೆ ಎಂದು ಪ್ರಧಾನಿ ಹೇಳಿದರು. ವೇಗ ಕುಂಠಿತವಾಗದಂತೆ ಸರ್ಕಾರವು ಭಾರತವನ್ನು ಅಭಿವೃದ್ಧಿಯ ಹೊಸ ಪಥದಲ್ಲಿ ಕೊಂಡೊಯ್ಯುತ್ತಿದೆ ಎಂದು ಹೇಳಿದರು. 
ಗ್ರಂಥಗಳನ್ನು ಉಲ್ಲೇಖಿಸಿ ಪ್ರಧಾನಮಂತ್ರಿ ಸರಿಯಾದ ಸಮಯದಲ್ಲಿ ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ, ನಾವು ಅಪೇಕ್ಷಿತ ಫಲಿತಾಂಶಗಳನ್ನು ಪಡೆಯಲಾಗುವುದಿಲ್ಲವೆಂದು ಹೇಳಿದರು. ‘ನವ ಭಾರತ’ಕ್ಕಾಗಿ ಸಂಕಲ್ಪ ಮಾಡಲು ‘ಟೀಮ್ ಇಂಡಿಯಾ’ಕ್ಕೆ ಇದು ಸೂಕ್ತ ಕಾಲ ಎಂದು ಅವರು ಹೇಳಿದರು.
ಸ್ವಚ್ಛ ಮತ್ತು ಆರೋಗ್ಯಪೂರ್ಣ ಭಾರತ, ವಿದ್ಯುತ್, ಕುಡಿಯುವ ನೀರಿನ ಸೌಲಭ್ಯದೊಂದಿಗೆ ಬಡವರಿಗೆ ಮನೆಗಳು; ಚಿಂತೆಯಿಂದ ಮುಕ್ತರಾದ ರೈತರು; ಇಂದು ಅವರು ದುಡಿಯುತ್ತಿರುವುದಕ್ಕಿಂತ ದುಪ್ಪಟ್ಟು ಆದಾಯ; ತಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಲು ಯುವಜನರಿಗೆ ಮತ್ತು ಮಹಿಳೆಯರಿಗೆ ವಿಪುಲ ಅವಕಾಶ;ಭಯೋತ್ಪಾದನೆ, ಕೋಮುವಾದ, ಜಾತಿಯತೆ, ಭ್ರಷ್ಟಾಚಾರ ಮತ್ತು  ಸ್ವಜನ ಪಕ್ಷಪಾತ ಮುಕ್ತ ನವ ಭಾರತಕ್ಕೆ ಅವರು ಕರೆ ನೀಡಿದರು.   
ಶೌರ್ಯ ಪ್ರಶಸ್ತಿ ವಿಜೇತರ ಗೌರವಾರ್ಥ ಅಂತರ್ಜಾಲ ತಾಣ ಆರಂಭದ ಘೋಷಣೆಯನ್ನೂ ಪ್ರಧಾನಿ ಮಾಡಿದರು. 

***