Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಜಮ್ಮು ಮತ್ತು ಕಾಶ್ಮೀರ ಕುರಿತ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಮಂತ್ರಿ ಅವರ ಸಮಾರೋಪ ಭಾಷಣ

ಜಮ್ಮು ಮತ್ತು ಕಾಶ್ಮೀರ ಕುರಿತ ಸರ್ವಪಕ್ಷಗಳ ಸಭೆಯಲ್ಲಿ ಪ್ರಧಾನಮಂತ್ರಿ ಅವರ ಸಮಾರೋಪ ಭಾಷಣ


ನನ್ನೆಲ್ಲಾ ಸಹೋದ್ಯೋಗಿಗಳು ಒಮ್ಮತದ ಧ್ವನಿ ಹಾಗೂ ಒಂದೇ ಭಾವನೆಯನ್ನು ವ್ಯಕ್ತಪಡಿಸಿದ್ದು ನನಗೆ ಸಂತಸ ತಂದಿದೆ.

ಇಂದು ನಾವು ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಮಾತನಾಡುವಾಗ, ನಾವು ಜಮ್ಮು ಮತ್ತು ಕಾಶ್ಮೀರದ ನಾಲ್ಕು ಭಾಗಗಳ ಬಗ್ಗೆ ಮಾತನಾಡಬೇಕಾಗುತ್ತದೆ, ಅವುಗಳೆಂದರೆ ಜಮ್ಮು, ಕಾಶ್ಮೀರ ಕಣಿವೆ, ಲಡಾಕ್ ಮತ್ತು ಪಾಕ್ ಆಕ್ರಮಿತ ಕಾಶ್ಮೀರ.

ಜಮ್ಮು ಮತ್ತು ಕಾಶ್ಮೀರದ ಪ್ರಸಕ್ತ ಸ್ಥಿತಿಗತಿಯ ಬಗ್ಗೆ ಎಲ್ಲ ರಾಜಕೀಯ ಪಕ್ಷಗಳ ನಾಯಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿರುವುದಕ್ಕೆ ಧನ್ಯವಾದಗಳು. ಕಳೆದ ಆರು ದಶಕಗಳಿಂದ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪೋಷಿಸಿಕೊಂಡು ಬಂದಿರುವ ಉತ್ಕøಷ್ಟ ಸಂಪ್ರದಾಯಗಳು ನಮ್ಮ ದೇಶದ ಏಕತೆ ಮತ್ತು ಸಮಗ್ರತೆಯ ಅತಿ ದೊಡ್ಡ ಶಕ್ತಿಗಳಾಗಿವೆ. ಕೆಲವು ವಿಷಯಗಳ ಬಗ್ಗೆ ಕೆಲವರಿಗೆ ಭಿನ್ನಾಭಿಪ್ರಾಯಗಳಿರಬಹುದು, ಆದರೆ ದೇಶದ ಏಕತೆ ಮತ್ತು ಸಾರ್ವಭೌಮತೆಯ ವಿಷಯಕ್ಕೆ ಬಂದರೆ ನಾವೆಲ್ಲರೂ ಒಗ್ಗಟ್ಟಿನಿಂದ ಇರುತ್ತೇವೆ.

ಎಲ್ಲ ಭಾರತೀಯ ಪ್ರಜೆಯಂತೆ, ನನಗೂ ಸಹ ಜಮ್ಮು ಮತ್ತು ಕಾಶ್ಮೀರದ ಇತ್ತೀಚಿನ ಬೆಳವಣಿಗೆಗಳು ತೀವ್ರ ನೋವುಂಟು ಮಾಡಿವೆ. ಮಕ್ಕಳು ಶಾಲೆಗಳಿಗೆ ಹೋಗಲಾಗುತ್ತಿಲ್ಲ, ಬೆಳೆದಿರುವ ಸೇಬು ಮಂಡಿಗೆ ಸಾಗಿಸಲಾಗುತ್ತಿಲ್ಲ, ಅಂಗಡಿಯವÀರು ತಮ್ಮ ದಿನದ ಆದಾಯ ಗಳಿಸಲಾಗುತ್ತಿಲ್ಲ ಮತ್ತು ಸರ್ಕಾರಿ ಸಿಬ್ಬಂದಿ ಕಚೇರಿಗಳಿಗೆ ತೆರಳಿ ಸಾರ್ವಜನಿಕರಿಗೆ ಅಗತ್ಯ ಸೇವೆ ನೀಡಲಾಗುತ್ತಿಲ್ಲ ಎಂಬುದು ದುಖಃಕರ ಸಂಗತಿ. ಈ ಪರಿಸ್ಥಿತಿಯಿಂದ ಬಡವರಿಗೆ ತೀವ್ರ ತೊಂದರೆಯಾಗಿದೆ.

ನಾವು ರಾಜಕೀಯ ಕಾರ್ಯಕರ್ತರಾಗಿ ಅಸ್ಥಿತ್ವದಲ್ಲಿರುವುದಕ್ಕೆ ಜನರೇ ಕಾರಣ. ಅವರೇ ನಮಗೆ ಶಕ್ತಿಯ ಮೂಲಸೆಲೆ ಮತ್ತು ಅವರೇ ನಮ್ಮ ಸಾಮಥ್ರ್ಯ. ಸಾರ್ವಜನಿಕ ಜೀವನದಲ್ಲಿ ಜನಶಕ್ತಿಯೇ ಅತ್ಯಂತ ಪ್ರಮುಖ ಪಾತ್ರ ವಹಿಸುವುದು. ನಾಗರಿಕರಿರಲಿ ಅಥವ ಭದ್ರತಾ ಪಡೆಗಳ ಯೋಧರಿರಲಿ ಯಾರೇ ಮೃತಪಟ್ಟರೂ, ಗಾಯಗೊಂಡರೂ ಸಹ ನಮಗೆಲ್ಲಾ ನೋವಾಗುತ್ತದೆ. ಅಂತಹ ಕುಟುಂಬಗಳಿಗೆ ನನ್ನ ಅನುಕಂಪವಿದೆ. ಗಾಯಗೊಂಡವರಿಗೆ ಅತ್ಯುತ್ತಮ ಆರೋಗ್ಯ ರಕ್ಷಣಾ ಸೇವೆ ನೀಡಲು ನಾವು ಬದ್ಧವಾಗಿದ್ದೇವೆ, ಕಣಿವೆಯಲ್ಲಿ ಆದಷ್ಟು ಶೀಘ್ರ ಶಾಂತಿ ನೆಲೆಸಬೇಕು ಎಂಬುದು ನಮ್ಮ ಒತ್ತಾಸೆಯಾಗಿದೆ, ಆ ಮೂಲಕ ಜನಜೀವನ ಸಹಜಸ್ಥಿತಿಗೆ ಮರಳಬೇಕು, ಜನರು ತಮ್ಮ ಜೀವನೋಪಾಯದ ದುಡಿಮೆ ಮಾಡಿಕೊಳ್ಳಬೇಕು, ಮಕ್ಕಳು ಶಾಲೆಗಳಿಗೆ ತೆರಳಬೇಕು ಮತ್ತು ಜನರು ರಾತ್ರಿ ವೇಳೆ ನೆಮ್ಮದಿಯಿಂದ ನಿದ್ರೆ ಮಾಡುವಂತಹ ತಿಳಿ ವಾತಾವರಣ ನೆಲೆಸಬೇಕು.

ಸಂವಿಧಾನದ ಮೂಲ ತತ್ವಗಳ ಅನುಸಾರ ಜಮ್ಮು ಮತ್ತು ಕಾಶ್ಮೀರದ ವಿಷಯಕ್ಕೆ ಶಾಶ್ವತ ಹಾಗೂ ಶಾಂತಿಯುತ ಪರಿಹಾರ ಕಂಡುಕೊಳ್ಳಲು ನಾವು ಬದ್ಧವಾಗಿದ್ದೇವೆ. ಆ ಬಗ್ಗೆ ನಾವು ಮುಕ್ತ ಮನಸ್ಸು ಹೊಂದಿದ್ದೇವೆ ಮತ್ತು ನಮ್ಮ ಬಾಗಿಲುಗಳು ಸದಾ ತೆರೆದಿರುತ್ತವೆ. ಜಮ್ಮು ಮತ್ತು ಕಾಶ್ಮೀರದ ಎಲ್ಲ ಪ್ರತಿಯೊಬ್ಬ ನಾಗರಿಕರ ಕಲ್ಯಾಣಕ್ಕೆ ನಾವು ಕಟಿಬದ್ಧರಾಗಿದ್ದೇವೆ. ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ತೋರಿದ ಮಾರ್ಗದಲ್ಲಿ ಪರಿಹಾರ ಕಂಡುಕೊಳ್ಳಲು ನಾವು ಮುಂದಾಗಿದ್ದೇವೆ.

ಜಮ್ಮು ಮತ್ತು ಕಾಶ್ಮೀರವನ್ನು ನಾವು ಭಾರತದ ಶಿಖರ ಅಥವಾ ಕಿರೀಟ ಎನ್ನುತ್ತೇವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದಿನಿಂದಲೂ ಎಲ್ಲ ಧರ್ಮಗಳ ಬಗ್ಗೆ ಸಮಚಿತ್ತ, ಅಂದರೆ (ಸರ್ವ ಪಂಥ ಸಂಭವ) ಹಿಂದೂ, ಸಿಖ್, ಬೌದ್ಧರು ಮತ್ತು ಮುಸ್ಲಿಂ ಎಲ್ಲ ಧರ್ಮದವರು ಶತಮಾನಗಳಿಂದಲೂ ಒಂದಾಗಿ ಬದುಕುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರ ರಾಜ್ಯ ನಮ್ಮ ಸಂಸ್ಥಾಪಕರ ನಂಬಿಕೆಯ ಸಂಕೇತ, ಜೊತೆಗೆ ವೈವಿಧ್ಯತೆ ಇದ್ದರೂ ಏಕತೆಗೆ ಹೆಸರುವಾಸಿ. ಜಮ್ಮು ಮತ್ತು ಕಾಶ್ಮೀರ ಕೇವಲ ನಮ್ಮ ಭೌಗೋಳಿಕ ಏಕತೆಯನ್ನು ಬಿಂಬಿಸುವುದಿಲ್ಲ, ಜೊತೆಗೆ ನಮ್ಮ ರಾಷ್ಟ್ರವನ್ನು ಪ್ರತಿನಿಧಿಸುತ್ತದೆ. ನಮ್ಮ ಭದ್ರತಾ ಪಡೆಗಳ ಯೋಧರು ಸಾಕಷ್ಟು ಸಂಖ್ಯೆಯಲ್ಲಿ ಗಾಯಗೊಳ್ಳುತ್ತಿದ್ದಾರೆ ಎಂಬ ಸಂಗತಿಯನ್ನು ನಾವು ಮರೆಯುವಂತಿಲ್ಲ, ಅವರು ಯೋಜಿತ ದಾಳಿಗಳಿಗೆ ಸತತವಾಗಿ ಗುರಿಯಾಗುತ್ತಿದ್ದಾರೆ. ಎಲ್ಲದರ ನಡುವೆಯೂ ನಮ್ಮ ಭದ್ರತಾ ಪಡೆಗಳು ತಮ್ಮ ಕರ್ತವ್ಯವನ್ನು ಸಮರ್ಥವಾಗಿ ಮಾಡುತ್ತಿವೆ. ಅಂಕಿ ಅಂಶಗಳನ್ನು ನೋಡುವುದಾದರೆ ನಮ್ಮ ಭದ್ರತಾ ಪಡೆಗಳ ಯೋಧರು ದೊಡ್ಡ ಸಂಖ್ಯೆಯಲ್ಲಿ ಗಾಯಗೊಂಡಿದ್ದಾರೆ.

ಕಾಶ್ಮೀರದಲ್ಲಿ ಕೆಲವು ದುಷ್ಟ ಶಕ್ತಿಗಳು ತಪ್ಪು ಪ್ರಚಾರದಲ್ಲಿ ತೊಡಗಿವೆ, ಆದರೆ ಅಂತಹ ಗೊಂದಲ ಮತ್ತು ತಪ್ಪು ಸಂದೇಶ ಬಿತ್ತರಿಸುವವರು ಹಾಗೂ ಯುವಜನರನ್ನು ಪ್ರಚೋದಿಸುತ್ತಿರುವವರ ಸಂಖ್ಯೆ ಶೇಕಡಾವಾರು ಅತಿ ಕಡಿಮೆ. ಕಾಶ್ಮೀರದ ಪ್ರತಿ ಪ್ರಜೆಗೂ ಶಾಂತಿ ಬೇಕಾಗಿದೆ, ಅವರಿಗೆ ಪ್ರಜಾಪ್ರುಭತ್ವ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ಅದೇ ಕಾರಣದಿಂದಾಗಿಯೇ ಪ್ರತ್ಯೇಕತಾವಾದಿಗಳ ಬೆದರಿಕೆ ನಡುವೆಯೂ ಪ್ರತಿ ಭಾರಿ ಚುನಾವಣೆಯಲ್ಲಿ ಕಾಶ್ಮೀರದ ಜನರು ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬೆಂಬಲಿಸಿದ್ದಾರೆ, ಇತ್ತೀಚೆಗೆ ಈ ಅಹಿತಕರ ಘಟನೆಗೂ ಮುನ್ನ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಜೀ ಅವರ ಕ್ಷೇತ್ರದಲ್ಲಿ ಅತ್ಯಧಿಕ ಮತ ಚಲಾವಣೆ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು. ಆದ್ದರಿಂದ ಸಾರ್ವಜನಿಕರೇ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ.

ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಕೆಲವು ಪ್ರದೇಶಗಳಲ್ಲಿ ಕೆಲ ನಿರ್ಬಂಧಗಳನ್ನು ಹೇರಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಪಾಲನೆಗೆ ಇದು ಆಡಳಿತಾತ್ಮಕ ಕ್ರಮವಷ್ಟೇ. ಇಲ್ಲವಾದರೆ ಶಾಂತಿ ಬಯಸುವ ಜನರ ಜೀವನದ ಮೇಲೆ ಪ್ರತಿಕೂಲ ಪರಿಣಾಮಗಳಾಗುತ್ತವೆ. ವಾಸ್ತವವಾಗಿ ಹೇಳುವುದಾರೆ ನಿರ್ಬಂಧಗಳಿಂದ ಸಾಮಾನ್ಯ ಜನರಿಗೆ ಯಾವುದೇ ತೊಂದರೆ ಇಲ್ಲ, ಆದರೆ ಪ್ರತ್ಯೇಕತಾವಾದಿಗಳು ಕರೆ ನೀಡುತ್ತಿರುವ ನಿರಂತರ ಪ್ರತಿಭಟನೆಗಳಿಂದ ಅವರಿಗೆ ಬಾಧೆ ಆಗಿದೆ.

ಈ ಅವಧಿಯಲ್ಲಿ ಅಮರನಾಥ ಯಾತ್ರೆ ಅತ್ಯಂತ ಸುಸೂತ್ರವಾಗಿ ನಡೆದಿದೆ. ಇದಲ್ಲದೆ, ರಾಜ್ಯ ಸರ್ಕಾರ ಲಡಾಕ್ ಪ್ರಾಂತ್ಯದಲ್ಲಿ ಸೌರ ಶಕ್ತಿ ಕಲ್ಪಿಸುವುದು ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಂಡಿದೆ. ನೀಟ್, ಸಿಇಟಿ ಮತ್ತು ಯುಪಿಎಸ್ಸಿ ನಾಗರಿಕ ಸೇವಾ ಪರೀಕ್ಷೆಗಳನ್ನು ನಿಗದಿಯಂತೆ ನಡೆಸಲಾಗಿದೆ. ನಾಗರಿಕರಿಗೆ ಎಲ್ಲ ಅಗತ್ಯ ದಿನಬಳಕೆ ವಸ್ತುಗಳನ್ನು ಪೂರೈಸಲಾಗುತ್ತಿದೆ. ನಾವು ಇದೀಗ ಅತಿ ಮಹತ್ವದ ಪ್ರವಾಸೋದ್ಯಮ ಋತುಮಾನವನ್ನು ಎದುರು ನೋಡುತ್ತಿದ್ದೇವೆ. ಸೇಬಿನ ಬೆಳೆ ಕಟಾವಿಗೆ ಸಿದ್ಧವಾಗಿದೆ. ಕಾಶ್ಮೀರದ ಸಾಮಾನ್ಯ ಜನರ ಜೀವನೋಪಾಯಕ್ಕೆ ಹೆಚ್ಚಿನ ಮಹತ್ವ ನೀಡಲಾಗುತ್ತಿದೆ. ಈ ಸಂದರ್ಭವನ್ನು ಬಳಸಿಕೊಂಡು ಕೆಲವು ಪ್ರತ್ಯೇಕತಾವಾದಿಗಳು, ಕಾಶ್ಮೀರದಲ್ಲಿ ಶಾಂತಿ ಕದಡಲು ಯತ್ನಿಸುತ್ತಿವೆ, ಆ ಮೂಲಕ ಅನಗತ್ಯವಾಗಿ ಶಾಂತಿ ಬಯಸುವ ಜನರ ಜೀವನಕ್ಕೆ ತೊಂದರೆ ನೀಡಲು ಮುಂದಾಗಿದ್ದಾರೆ.

ನಮ್ಮ ನೆರೆಯ ರಾಷ್ಟ್ರ ನಡೆಸುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯೇ ಕಾಶ್ಮೀರದಲ್ಲಿ ಈ ರೀತಿ ಅಹಿತಕರ ಘಟನೆಗಳು ನಡೆಯಲು ಮೂಲ ಕಾರಣ. ಭಯೋತ್ಪಾದನೆಯಿಂದಾಗಿ ಕಾಶ್ಮೀರ ಕಣಿವೆಯಲ್ಲಿ ಸಾಮಾನ್ಯ ಜನಜೀವನಕ್ಕೆ ತೊಂದರೆಯಾಗಿದೆ. ಕಾಶ್ಮೀರದಲ್ಲಿ 1989-1990ರಿಂದ ಭಯೋತ್ಪಾದನೆ ಚಟುವಟಿಕೆಗಳು ಆರಂಭವಾದವು, ಅಲ್ಲಿಂದ ಇಲ್ಲಿಯವರೆಗೆ ಭದ್ರತಾ ಪಡೆಗಳು ಈ ಕಾರ್ಯಾಚರಣೆಗಳನ್ನು ನಡೆಸಿವೆ.

• 34ಸಾವಿರಕ್ಕೂ ಅಧಿಕ ಎ.ಕೆ-47 ರೈಫಲ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

• 5,000ಕ್ಕೂ ಅಧಿಕ ಗ್ರನೇಡ್ ಉಡಾವಣಾ ವಾಹಕಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

• ಸುಮಾರು 90ಎಲ್ಎಂಜಿಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

• 12,000ಕ್ಕೂ ಅಧಿಕ ರಿವಾಲ್ವಾರ್ಗಳನ್ನು ಸೀಜ್ ಮಾಡಲಾಗಿದೆ.

• ಮೂರು ಆಂಟಿ ಟ್ಯಾಂಕ್ ಗನ್ಗಳು ಮತ್ತು 4 ಆಂಟಿ ಏರ್ಕ್ರಾಫ್ಟ್ ಗನ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

• 350ಕ್ಕೂ ಅಧಿಕ ಕ್ಷಿಪಣಿ ಉಡಾವಣಾ ವಾಹಕ ವಶಕ್ಕೆ ತೆಗೆದುಕೊಳ್ಳಲಾಗಿದೆ.

• ಆರ್ಡಿಎಕ್ಸ್ ಸೇರಿದಂತೆ 63,000ಕ್ಕೂ ಅಧಿಕ ಸ್ಫೋಟಕಗಳನ್ನು ಮತ್ತು 1 ಲಕ್ಷಕ್ಕೂ ಅಧಿಕ ಗ್ರನೇಡ್ಗಳನ್ನು ವಶಪಡಿಸಿಕೊಳ್ಳಲಾಗಿದೆ.

• ಈ ಅವಧಿಯಲ್ಲಿ 5,000ಕ್ಕೂ ಅಧಿಕ ವಿದೇಶಿ ಉಗ್ರರು ಮೃತಪಟ್ಟಿದ್ದಾರೆ, ಅಲ್ಲದೆ ಐದು ಬ್ಯಾಟಾಲಿಯನ್ನಷ್ಟು ಯೋಧರು ಹುತಾತ್ಮರಾಗಿದ್ದಾರೆ.

ಅಷ್ಟು ದೊಡ್ಡ ಪ್ರಮಾಣದಲ್ಲಿ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವುದು, ಹಲವು ವಿದೇಶಿ ಭಯೋತ್ಪಾದಕರು ಒಳನುಸುಳಿ ಸಾವನ್ನಪ್ಪಿರುವುದು ಮತ್ತು ನಾಶ ಮಾಡಿರುವುದು. ಅದು ಬಾಯಲ್ಲಿ ಸಾವಿರ ಮಾತು ಹೇಳಿದರೂ ಸಹ ಅದನ್ನು ನಂಬಲಾಗದು. ಆದರೂ ಪಾಕಿಸ್ತಾನದ ಅಪಪ್ರಚಾರ ಯಾರೂ ನಂಬುವುದಿಲ್ಲ.

ಪಾಕಿಸ್ತಾನಕ್ಕೆ ತಾನೇ ತನ್ನ ನಾಗರಿಕರ ವಿರುದ್ಧ ಯುದ್ಧ ವಿಮಾನಗಳನ್ನು ಬಳಸುತ್ತಿದ್ದೇವೆ ಎಂಬುದು ಅರಿವಾಗುತ್ತಿಲ್ಲ. ವಿಶ್ವದ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರಕ್ಕೆ ಹೋಲಿಸಿದರೆ ನಮ್ಮ ಭಯೋತ್ಪಾದನಾ ವಿರೋಧಿ ಕಾನೂನುಗಳು ಅತ್ಯಂತ ಮಾನವೀಯತೆಯಿಂದ ಕೂಡಿವೆ. ಭಯೋತ್ಪಾದನಾ ಘಟನೆಗಳನ್ನು ಹತ್ತಿಕ್ಕುವಲ್ಲಿ ನಮ್ಮ ಸರ್ಕಾರ ಮತ್ತು ಭದ್ರತಾ ಪಡೆಗಳು ಅತ್ಯಂತ ಸಂಯಮದಿಂದ ವರ್ತಿಸುತ್ತವೆ.

ಭಾರತ ಭಯೋತ್ಪಾದನೆ ವಿರುದ್ಧ ಪೂರ್ಣ ಪ್ರಮಾಣದಲ್ಲಿ ಹೋರಾಡುತ್ತದೆ. ಅದು ನಮ್ಮ ರಾಷ್ಟ್ರೀಯ ಕರ್ತವ್ಯ ಕೂಡ. ನೆಲದ ಕಾನೂನಿಗೆ ಭಾರತ ಬದ್ಧವಾಗಿದೆ ಎಂಬುದನ್ನೇ ನಮ್ಮ ಎದುರಾಳಿಗಳು ದೌರ್ಬಲ್ಯ ಎಂದು ತಪ್ಪುಗ್ರಹಿಕೆ ಮಾಡಬಾರದು, ಭಯೋತ್ಪಾದನೆಯನ್ನು ಬುಡಸಮೇತ ಕಿತ್ತುಹಾಕಲು ಭಾರತ ಬದ್ಧವಾಗಿದೆ. ನಮಗೆ ಆರಂಭ ಹಾಗು ಅಂತ್ಯ ಎರಡೂ ಮುಖ್ಯ ಎರಡನ್ನೂ ನಾವು ಎದುರಿಸಲು ನಾವು ಸಮರ್ಥವಾಗಿದ್ದೇವೆ.

ಕಾಶ್ಮೀರ ಕಣಿವೆಯಲ್ಲಿ ಶತಶತಮಾನಗಳ ಹಿಂದಿನಿಂದಲೂ ತಮ್ಮ ಪೂರ್ವಜರ ಗುಡಿಸಿಲುಗಳಲ್ಲಿ ನೆಲೆಸಿದ್ದ ಕಾಶ್ಮೀರಿ ಪಂಡಿತರನ್ನು ನಿರಾಶ್ರಿತಗೊಳಿಸಲಾಗಿದೆ. ಒಂದು ಸಮುದಾಯವನ್ನು ಗುರಿಯಾಗಿಸಿಕೊಂಡು ಈ ರೀತಿಯ ದೌರ್ಜನ್ಯ ಎಸಗಿರುವುದು ಪಾಕಿಸ್ತಾನದಿಂದ ತರಬೇತಿ ಮತ್ತು ಶಸ್ತ್ರಾಸ್ತ್ರ ಪಡೆದ ಉಗ್ರಗಾಮಿಗಳ ಹಾಗೂ ಅವರ ಬಗ್ಗೆ ಅನುಕಂಪ ಹೊಂದಿರುವವರ ಕೃತ್ಯವಾಗಿದೆ. ಕಾಶ್ಮೀರಿಯಥ್ನಲ್ಲಿ ನಂಬಿಕೆ ಇರುವವರು ನಡೆಸುತ್ತಿರುವ ಕುಕೃತ್ಯಗಳು ಇವಾಗಿವೆ.

ಜಮ್ಮು ಮತ್ತು ಕಾಶ್ಮೀರದ ಸಮಗ್ರ ಅಭಿವೃದ್ಧಿಗೆ ನಿರ್ಧಾರಗಳನ್ನು ಕೈಗೊಂಡು ಸುಮಾರು 80 ಸಾವಿರ ಕೋಟಿ ರೂಪಾಯಿಗಳ ಅಭಿವೃದ್ಧಿ ಪ್ಯಾಕೇಜ್ಅನ್ನು ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಇದರಲ್ಲಿ ರಸ್ತೆ ಮತ್ತು ವಿದ್ಯುಚ್ಛಕ್ತಿ ಯೋಜನೆಗಳ ಪ್ರಸ್ತಾವಗಳಲ್ಲದೆ ಒಟ್ಟಾರೆ ಜಮ್ಮು ಕಾಶ್ಮೀರ ಪ್ರಾಂತ್ಯದ ಸಮಗ್ರ ಅಭಿವೃದ್ಧಿಯ ಉದ್ದೇಶವಿದೆ. ಮಕ್ಕಳ ಶಿಕ್ಷಣಕ್ಕೆ ಉತ್ತಮ ಸೌಕರ್ಯ ಒದಗಿಸಿಕೊಡುವುದು, ಯುವ ಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವುದು. ಚಿಕಿತ್ಸೆಗೆ ಆಧುನಿಕ ಸವಲತ್ತು ಕಲ್ಪಿಸುವುದು, ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತಮ ಮೂಲಸೌಕರ್ಯ ಒದಗಿಸಿ ಕೊಡುವುದು ಮತ್ತು ಹಣ್ಣುಗಳನ್ನು ಬೆಳೆಯಲು ವಿಶೇಷ ವ್ಯವಸ್ಥೆ ಕಲ್ಪಿಸಿ ಕೊಡುವ ಕ್ರಮಗಳೂ ಸಹ ಸೇರಿವೆ.

ತಕ್ಷಣಕ್ಕೆ ಉದ್ಯೋಗಾವಕಾಶ ಸೃಷ್ಟಿಸಿ ಕೊಡಲು ಸರ್ಕಾರ ಹತ್ತು ಸಾವಿರ ವಿಶೇಷ ಪೊಲೀಸ್ ಅಧಿಕಾರಿಗಳನ್ನು, ಒಂದು ಸಾವಿರದ 200 ಅರೆಮಿಲಿಟರಿ ಹಾಗೂ ನಾಲ್ಕು ಸಾವಿರ ಯೋಧರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ. ಇದಲ್ಲದೆ ಹೆಚ್ಚುವರಿಯಾಗಿ ನಿರುದ್ಯೋಗಿ ಯುವಕರು ಸೂಕ್ತ ಉದ್ಯೋಗಾವಕಾಶ ಕಂಡುಕೊಳ್ಳಲು ನೆರವಾಗುವಂತೆ ಉದಾನ್ ಮತ್ತು ಹಿಮಾಯತ್ ಯೋಜನೆಗಳಲ್ಲಿ ಸುಮಾರು ಒಂದು ಲಕ್ಷದ 25 ಸಾವಿರ ಮಂದಿಗೆ ತರಬೇತಿ ನೀಡಲೂ ಸಹ ಕ್ರಮ ಕೈಗೊಳ್ಳಲಾಗಿದೆ.

ಪಿಡಿಪಿ – ಬಿಜೆಪಿ ನೇತೃತ್ವದ ಶ್ರೀಮತಿ ಮೆಹಬೂಬ ಮುಫ್ತಿ ಸರ್ಕಾರ ರಾಜ್ಯದ ಎಲ್ಲ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದೆ. ಕಳೆದ ಒಂದು ತಿಂಗಳಿನಿಂದ ಸರ್ಕಾರ ಪ್ರತಿಕೂಲ ಸಂದರ್ಭಗಳಿದ್ದರೂ ಪರಿಸ್ಥಿತಿಯನ್ನು ಅತ್ಯಂತ ಸೂಕ್ಷ್ಮ ಹಾಗೂ ಸಮರ್ಥವಾಗಿ ನಿಭಾಯಿಸಿದೆ. ಇಡೀ ರಾಷ್ಟ್ರವೇ ಅವರ ಬೆಂಬಲಕ್ಕೆ ನಿಂತಿದೆ.

ರಾಜ್ಯದಲ್ಲಿ ಶಾಂತಿ ನೆಲೆಸಿ, ಜನಜೀವನ ಸಹಜಸ್ಥಿತಿಗೆ ಮರಳಲು ಅಲ್ಲಿನ ಜನರ ಎಲ್ಲಾ ಸಮಸ್ಯೆಗಳಿಗೆ ಸ್ಪಂದಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾಗಿದೆ ಎಂದು ನಾನು ಪುನರುಚ್ಚರಿಸುತ್ತೇನೆ. ಹಿಂಸಾಚಾರ, ಭಯೋತ್ಪಾದನೆ ಮತ್ತು ದೇಶ ವಿರೋಧಿ ಚಟುವಟಿಕೆಗಳನ್ನು ನಾವು ಕಠಿಣವಾಗಿ ಹತ್ತಿಕ್ಕಲಿದ್ದೇವೆ. ಅದೇ ವೇಳೆ ಜನ ಎಲ್ಲ ನೈಜ ಸಮಸ್ಯೆಗಳಿಗೆ ಸ್ಪಂದಿಸಿ ಅವುಗಳನ್ನು ಬಗೆಹರಿಸಲಾಗುವುದು.

ಭಯೋತ್ಪಾದನೆ ಮತ್ತು ವಿಧ್ವಂಸಕ ಶಕ್ತಿಗಳ ವಿರುದ್ಧ ಎಲ್ಲಾ ರಾಜಕೀಯ ಪಕ್ಷಗಳು ಹಾಗೂ ಎಲ್ಲಾ ಭಾರತೀಯರು ಒಗ್ಗೂಡಿ ಹೋರಾಡುತ್ತೇವೆ ಎಂದು ನಾನು ಇಲ್ಲಿ ಪ್ರತಿಪಾದಿಸುತ್ತಿದ್ದೇನೆ. ಇದೇ ವೇಳೆ ಭಯೋತ್ಪಾದನೆ ವಿಶ್ವದಲ್ಲಿ ತನ್ನ ಕಬಂದ ಬಾಹುಗಳನ್ನು ಚಾಚುತ್ತಿದ್ದು, ನಮ್ಮ ನೆರೆಯ ರಾಷ್ಟ್ರ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿದೆ. ಅದರ ವಿರುದ್ಧ ನಾವು ಒಗ್ಗೂಡಿ ಹೋರಾಡಬೇಕು. ಇದಕ್ಕೆ ಎಲ್ಲಾ ರಾಜಕೀಯ ಪಕ್ಷಗಳು ಸಕಾರಾತ್ಮಕ ಸಹಕಾರ ನೀಡಬೇಕು ಎಂದು ಸರ್ಕಾರ ಬಯಸುತ್ತದೆ. ಕಣಿವೆ ರಾಜ್ಯದಲ್ಲಿ ಶಾಂತಿ ಸ್ಥಾಪಿಸಿ ಅದರ ಅಭ್ಯುದಯಕ್ಕೆ ಎಲ್ಲ ರಾಜಕೀಯ ಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಸಹಕರಿಸಬೇಕು. ರಾಜ್ಯ ಸರ್ಕಾರದ ಎಲ್ಲಾ ಪ್ರಯತ್ನಗಳು ಹಾಗೂ ನಿಮ್ಮೆಲ್ಲರ ಸಹಕಾರದಿಂದ ಜಮ್ಮು ಕಾಶ್ಮೀರದಲ್ಲಿ ಶೀಘ್ರವೇ ಪರಿಸ್ಥಿತಿ ಸಹಜಸ್ಥಿತಿಗೆ ಮರಳಲಿದೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ.

ಕಾಶ್ಮೀರಕ್ಕೆ ಸಂಬಂಧಿಸಿದಂತೆ ನಮ್ಮ ನೀತಿ ಹಾಗು ನಾವು ಕೈಗೊಂಡ ಪ್ರಮುಖ ಕ್ರಮಗಳನ್ನು ಇಲ್ಲಿ ಮತ್ತೆ ಪ್ರತಿಪಾದಿಸುತ್ತಿದ್ದೇನೆ.

1. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಯಾವುದೇ ಸರ್ಕಾರದ ಆದ್ಯ ಕರ್ತವ್ಯ. ಭಯೋತ್ಪಾದನೆಯೊಂದಿಗೆ ಯಾವುದೇ ರಾಜಿ ಇಲ್ಲ.

2. ಸಾಂಪ್ರದಾಯಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆದುಕೊಂಡು ಬಂದಿರುವಂತೆ ನಾವು ನಾಗರಿಕ ಸಮಾಜ ಮತ್ತು ನಾಗರಿಕ ಚಟುವಟಿಕೆಗಳನ್ನು ಉತ್ತೇಜಿಸುತ್ತೇವೆ.

3. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಾಲಿಸಿಕೊಂಡು ಬಂದಿರುವಂತೆ ರಾಜಕೀಯ ಪ್ರಕ್ರಿಯೆಯನ್ನು ನಾವು ಮುನ್ನಡೆಸಿಕೊಂಡು ಹೋಗುತ್ತೇವೆ.

4. ಕಾಶ್ಮೀರಿ ಯುವಕರನ್ನು ರಾಜ್ಯದ ಆರ್ಥಿಕ ಚಟುವಟಿಕೆಗಳನ್ನು ತೊಡಗಿಸಿಕೊಂಡು ಅದಕ್ಕೆ ವೇಗ ನೀಡುವ ಪ್ರಕ್ರಿಯೆ ಮುಂದುವರಿಸಲಾಗುವುದು.

5. ಜಮ್ಮು ಮತ್ತು ಕಾಶ್ಮೀರದಲ್ಲಿ ನೆಲೆಸಿರುವ, ಹಿಂದುಗಳು, ಮುಸ್ಲಿಂ, ಸಿಖ್, ಬೌದ್ಧರು ಮತ್ತು ಯಾವುದೇ ಧರ್ಮದವರು ಆಗಿದ್ದರು ಅವರು ತಮ್ಮ ಸಂಬಂಧಿಗಳ ಜತೆ ಸಂಪರ್ಕ ಹೊಂದಿ ಒಟ್ಟಾರೆ ಜಮ್ಮು ಕಾಶ್ಮೀರದ ಪ್ರಗತಿಗೆ ಮತ್ತು ದೇಶದ ಪ್ರಗತಿಗೆ ಸಹಕರಿಸಬೇಕು.

6. ವಿಶ್ವದ ನಾನಾ ಕಡೆ ನೆಲೆಸಿರುವ ಪಾಕ್ ಆಕ್ರಮಿತ ಕಾಶ್ಮೀರದ ಜನರನ್ನು ಸಂಪರ್ಕಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಯತ್ನ ನಡೆಸಬೇಕು ಹಾಗೂ ಅವರಿಂದ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ದುಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಮತ್ತು ಅದನ್ನು ವಿಶ್ವ ಸಮುದಾಯಕ್ಕೆ ತಿಳಿಸಿ ಕೊಡಬೇಕು.

ನಾನು ಎಲ್ಲಾ ಪ್ರಮುಖ ಸಲಹೆ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಕ್ಕಾಗಿ ನಿಮಗೆಲ್ಲಾ ಮತ್ತೊಮ್ಮೆ ಅಭಿನಂದನೆಗಳನ್ನು ಹೇಳುತ್ತೇನೆ. ಸರ್ಕಾರವನ್ನು ಬೆಂಬಲಿಸಿದ ನಿಮಗೆಲ್ಲಾ ಧನ್ಯವಾದಗಳು. ನಾವೆಲ್ಲಾ ರಾಷ್ಟ್ರದ ಹಿತಾಸಕ್ತಿಗೆ ಬದ್ಧವಾಗಿದ್ದೇವೆ ಮತ್ತು ಭಾರತದ ಭೌಗೋಳಿಕ ಏಕತೆಯಲ್ಲಿ ಯಾವುದೇ ರಾಜಿ ಇಲ್ಲ. ಸಂವಿಧಾನದ ಚೌಕಟ್ಟಿನಲ್ಲಿ ಎಲ್ಲ ವರ್ಗದ, ಎಲ್ಲ ಜನರ ಸಮಸ್ಯೆಗಳನ್ನು ಪರಿಹರಿಸಲು ನಾವು ಸಿದ್ಧವಾಗಿದ್ದೇವೆ.

ಧನ್ಯವಾದಗಳು