Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಸತತ ಅವಧಿಗಳಿಗೆ ಅತ್ಯಂತ ದೀರ್ಘಕಾಲ ಚುನಾಯಿತ ಪ್ರಧಾನಮಂತ್ರಿಯಾಗಿರುವುದನ್ನು ಶ್ಲಾಘಿಸಿ ಕೇಂದ್ರ ಸಚಿವ ಸಂಪುಟದಿಂದ ನಿರ್ಣಯ ಅಂಗೀಕಾರ


ಕೇಂದ್ರ ಸಚಿವ ಸಂಪುಟವು ಇಂದು ಒಂದು ಮಹತ್ವದ ನಿರ್ಣಯವನ್ನು ಅಂಗೀಕರಿಸಿದೆ. ಈ ಮೂಲಕ ಜೂನ್ 10, 2026ರ ದಿನವನ್ನು ಭಾರತೀಯ ಪ್ರಜಾಪ್ರಭುತ್ವದ ಪಯಣದಲ್ಲಿ ಒಂದು ಐತಿಹಾಸಿಕ ಮೈಲಿಗಲ್ಲಾಗಿ ಗುರುತಿಸಲಾಗಿದ್ದು, ಶ್ರೀ ನರೇಂದ್ರ ಮೋದಿಯವರು ದೇಶದ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಮಂತ್ರಿಯಾಗಿರುವುದನ್ನು ಶ್ಲಾಘಿಸಲಾಗಿದೆ. ಚುನಾಯಿತ ಪ್ರಧಾನಿಯಾಗಿ ಸತತ 4,399 ದಿನಗಳ ಕಾಲ ನಿರಂತರ ಸೇವೆ ಸಲ್ಲಿಸುವ ಮೂಲಕ ಅವರು ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಅವರು ಶ್ರೀ ಜವಾಹರಲಾಲ್ ನೆಹರೂ ಅವರ ಹೆಸರಲ್ಲಿದ್ದ ಹಿಂದಿನ ದಾಖಲೆಯನ್ನು ಮೀರಿದ್ದಾರೆ. ನೆಹರೂ ಅವರು 1952 ರಿಂದ 1964 ರವರೆಗೆ ಸತತ 4,398 ದಿನಗಳ ಕಾಲ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಈ ಸಂದರ್ಭವು ಭಾರತದ ಪ್ರಜಾಪ್ರಭುತ್ವದ ಜಾಗೃತಿ, ಸಾರ್ವಜನಿಕರ ನಂಬಿಕೆ ಮತ್ತು ದೇಶದ ಜನರ ಭಾಗವಹಿಸುವಿಕೆಯ ಶಕ್ತಿಯ ಸಂಕೇತವಾಗಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ. ಇದು ‘ರಾಷ್ಟ್ರ ಮೊದಲು’ ಎಂಬ ದೃಢ ಸಂಕಲ್ಪದೊಂದಿಗೆ ಮುನ್ನಡೆಯುವ ನಾಯಕನಿಗೆ ದೇಶದ ಜನತೆ ನೀಡಿದ ಅಭೂತಪೂರ್ವ ಬೆಂಬಲವನ್ನು ತೋರಿಸುತ್ತದೆ.

ಪ್ರಧಾನಮಂತ್ರಿಯವರಿಗೆ ತನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸಿರುವ ಸಚಿವ ಸಂಪುಟದ ನಿರ್ಣಯವು, ಈ ಐತಿಹಾಸಿಕ ಸಾಧನೆಯು ಅವರ ನಾಯಕತ್ವದಲ್ಲಿ ಎನ್‌ ಡಿ ಎ ಸರ್ಕಾರವು 12 ವರ್ಷಗಳನ್ನು ಪೂರ್ಣಗೊಳಿಸುತ್ತಿರುವ ಸಂದರ್ಭದಲ್ಲೇ ಬಂದಿದೆ ಎಂಬುದನ್ನು ನೆನಪಿಸಿದೆ. ಇದರೊಂದಿಗೆ, ಪ್ರಧಾನಮಂತ್ರಿಯವರು ಸರ್ಕಾರದ ಮುಖ್ಯಸ್ಥರಾಗಿ (ಮುಖ್ಯಮಂತ್ರಿಯಾಗಿ ಮತ್ತು ಪ್ರಧಾನಮಂತ್ರಿಯಾಗಿ) ಸತತ 25 ವರ್ಷಗಳ ನಿರಂತರ ಸೇವೆಯ ಅಪೂರ್ವ ಮೈಲಿಗಲ್ಲನ್ನು ಸಮೀಪಿಸುತ್ತಿದ್ದಾರೆ ಎಂದೂ ಅದು ಉಲ್ಲೇಖಿಸಿದೆ. ಜನರ ಕಷ್ಟಗಳಿಗೆ ಸ್ಪಂದಿಸುವ ಸಂವೇದನಾಶೀಲತೆ, ಸಂಯಮ, ಸ್ಪಷ್ಟ ಉದ್ದೇಶ ಮತ್ತು ದೃಢ ನಿರ್ಧಾರಗಳಿಂದ ಕೂಡಿದ ಇಂತಹ ನಾಯಕತ್ವದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ನಿರ್ಣಯವು, ದೇಶದಲ್ಲಿ ಸುಮಾರು ಆರು ದಶಕಗಳ ನಂತರ ಜನತೆ ಸತತ ಮೂರನೇ ಅವಧಿಗೆ ಎನ್‌ ಡಿ ಎ ಸರ್ಕಾರಕ್ಕೆ ಇಂತಹ ಸ್ಪಷ್ಟ ಬಹುಮತದ ಆಡಳಿತದ ಜವಾಬ್ದಾರಿಯನ್ನು ನೀಡಿದ್ದಾರೆ ಎಂಬುದನ್ನು ಒತ್ತಿಹೇಳಿದೆ.

ಪ್ರಧಾನಮಂತ್ರಿಯವರ ಜೀವನವು ದೇಶದ ಸೇವೆ ಮತ್ತು ರಾಷ್ಟ್ರ ನಿರ್ಮಾಣಕ್ಕಾಗಿ ನಿರಂತರ ಮುಡುಪಾಗಿಟ್ಟ ಸಂಕಲ್ಪದ ಸಂಕೇತವಾಗಿದೆ ಎಂದು ಬಣ್ಣಿಸಿರುವ ನಿರ್ಣಯವು, 2014 ರಲ್ಲಿ ಅವರು ಅಧಿಕಾರಕ್ಕೆ ಬಂದಾಗ ‘ಸಬ್ಕಾ ಸಾತ್, ಸಬ್ಕಾ ವಿಕಾಸ್’ ಮಂತ್ರದೊಂದಿಗೆ ತಮ್ಮನ್ನು ತಾವು ದೇಶದ “ಪ್ರಧಾನ ಸೇವಕ” ಎಂದು ಘೋಷಿಸಿಕೊಂಡಿದ್ದನ್ನು ನೆನಪಿಸಿಕೊಂಡಿದೆ. ಬಡವರ ಕಲ್ಯಾಣವನ್ನು ಆಡಳಿತದ ಕೇಂದ್ರಬಿಂದುವನ್ನಾಗಿ ಮಾಡಿರುವುದನ್ನು ಶ್ಲಾಘಿಸಿರುವ ನಿರ್ಣಯವು, ಬಡವರಿಗೆ ಸಿಕ್ಕಿರುವ ಪಕ್ಕಾ ಮನೆಗಳು, ವಿದ್ಯುತ್ ಸೌಲಭ್ಯ, ಶುದ್ಧ ಕುಡಿಯುವ ನೀರು ಮತ್ತು ನೇರ ನಗದು ವರ್ಗಾವಣೆ ಸೇರಿದಂತೆ ಒದಗಿಸಲಾದ ಅಭೂತಪೂರ್ವ ಸೌಲಭ್ಯಗಳ ವಿವರಗಳನ್ನು ನೀಡಿದೆ. ಇದರೊಂದಿಗೆ 80 ಕೋಟಿಗೂ ಹೆಚ್ಚು ನಾಗರಿಕರಿಗೆ ಉಚಿತ ಪಡಿತರ ಮತ್ತು 60 ಕೋಟಿಗೂ ಹೆಚ್ಚು ಬಡ ಜನರಿಗೆ ಉಚಿತ ವೈದ್ಯಕೀಯ ಚಿಕಿತ್ಸೆಯನ್ನು ನೀಡಲಾಗಿದೆ. ಈ ಎಲ್ಲಾ ಪ್ರಯತ್ನಗಳು ಒಟ್ಟಾರೆಯಾಗಿ ದೇಶದ ಜನರ ಆತ್ಮವಿಶ್ವಾಸವನ್ನು ಹೆಚ್ಚಿಸಿವೆ ಮತ್ತು 25 ಕೋಟಿಗೂ ಹೆಚ್ಚು ಜನರು ಬಡತನದ ಸಂಕೋಲೆಯಿಂದ ಹೊರಬರಲು ಸಹಾಯ ಮಾಡಿವೆ ಎಂದು ನಿರ್ಣಯವು ದಾಖಲಿಸಿದೆ.

ದೇಶದ ಮುಖ್ಯ ವರ್ಗಗಳ ಸಬಲೀಕರಣದ ಯಶೋಗಾಥೆಯನ್ನು ಈ ನಿರ್ಣಯವು ಮತ್ತಷ್ಟು ವಿವರಿಸಿದೆ. ಯುವ ಶಕ್ತಿಗೆ ನೀಡಿದ ಪ್ರೋತ್ಸಾಹವು ಭಾರತವನ್ನು ವಿಶ್ವದ ಮೂರನೇ ಅತಿ ದೊಡ್ಡ ಸ್ಟಾರ್ಟ್‌ಅಪ್ ದೇಶವನ್ನಾಗಿ ಮಾಡಿದೆ ಮತ್ತು ‘ಮಿಷನ್ ಚಂದ್ರಯಾನ್’ ಯಶಸ್ಸಿನ ಮೂಲಕ ಜಗತ್ತಿನ ವೈಜ್ಞಾನಿಕ ಮಹಾಶಕ್ತಿಯನ್ನಾಗಿ ಬೆಳೆಸಿದೆ ಎಂದು ಗುರುತಿಸಿದೆ. ಹೊಗೆ ಮುಕ್ತ ಅಡುಗೆಮನೆಗಳು, ‘ಲಕ್ಷಾಧಿಪತಿ ದೀದಿ’ ಅಭಿಯಾನ ಮತ್ತು ಸಂಸತ್ತು ಹಾಗೂ ವಿಧಾನಸಭೆಗಳಲ್ಲಿ ಐತಿಹಾಸಿಕ ಶೇಕಡಾ 33 ರಷ್ಟು ಮೀಸಲಾತಿ ಒಳಗೊಂಡಂತೆ ಹಮ್ಮಿಕೊಂಡಿರುವ ವ್ಯಾಪಕ ನೀತಿಗಳ ಮೂಲಕ ‘ಮಹಿಳಾ ನೇತೃತ್ವದ ಅಭಿವೃದ್ಧಿ’ಯ ಹೊಸ ಅಧ್ಯಾಯವನ್ನು ಇಲ್ಲಿ ವಿವರಿಸಲಾಗಿದೆ. ರೈತರನ್ನು ‘ವಿಕಸಿತ ಭಾರತ’ದ ಪ್ರಮುಖ ಸ್ತಂಭ ಎಂದು ಸಾರಿರುವ ಈ ನಿರ್ಣಯವು, ‘ಪಿಎಂ ಕಿಸಾನ್ ಸಮ್ಮಾನ್ ನಿಧಿ’ ಯೋಜನೆ ಮತ್ತು ಪಶುಪಾಲಕರು ಹಾಗೂ ಮೀನುಗಾರರಿಗೂ ‘ಕಿಸಾನ್ ಕ್ರೆಡಿಟ್ ಕಾರ್ಡ್’ ಸೌಲಭ್ಯ ಒದಗಿಸಿದ ಕ್ರಮಗಳನ್ನು ಶ್ಲಾಘಿಸಿದೆ. ಇವೆಲ್ಲದರ ಫಲವಾಗಿ ದೇಶದ ಕೃಷಿ ರಫ್ತು 5 ಲಕ್ಷ ಕೋಟಿ ರೂಪಾಯಿಗಳ ಗಡಿಯನ್ನು ದಾಟಿದೆ ಎಂದು ಹೇಳಿದೆ.

ದಶಕಗಳಿಂದ ನೆನೆಗುದಿಗೆ ಬಿದ್ದಿದ್ದ ಸುಧಾರಣೆಗಳನ್ನು ಜಾರಿಗೆ ತರುವಲ್ಲಿ ತೋರಿದ ದೃಢವಾದ ‘ರಾಷ್ಟ್ರ ಮೊದಲು’ ಮನೋಭಾವವನ್ನು ಸಂಪುಟವು ಕೊಂಡಾಡಿದೆ. ಇದರಲ್ಲಿ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ಆರ್ಟಿಕಲ್ 370 ರದ್ದತಿ, ಜಿಎಸ್‌ಟಿ ಮತ್ತು ಒ ಆರ್‌ ಒ ಪಿ (ಒಂದು ಶ್ರೇಣಿ, ಒಂದು ಪಿಂಚಣಿ) ಜಾರಿ, ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ), ಹೊಸ ಭಾರತೀಯ ನ್ಯಾಯ ಸಂಹಿತೆ ಮತ್ತು ಕಾರ್ಮಿಕ ಸಂಹಿತೆಗಳ ಕ್ರೋಡೀಕರಣದಂತಹ ಮಹತ್ವದ ಮೈಲಿಗಲ್ಲುಗಳನ್ನು ಶ್ಲಾಘಿಸಲಾಗಿದೆ. ಸರ್ಜಿಕಲ್ ದಾಳಿ ಮತ್ತು ಗಡಿಯಾಚೆಗಿನ ವೈಮಾನಿಕ ದಾಳಿಗಳಂತಹ ಭಯೋತ್ಪಾದನೆ ವಿರುದ್ಧದ ಕಠಿಣ ಕ್ರಮಗಳು, ‘ಆಪರೇಷನ್ ಸಿಂಧೂರ್’ ಮತ್ತು ಅನ್ಯಾಯದ ಸಿಂಧೂ ನದಿ ನೀರು ಒಪ್ಪಂದವನ್ನು ಅಮಾನತುಗೊಳಿಸುವ ಮೂಲಕ ದೇಶದ ಭದ್ರತೆಯನ್ನು ಉನ್ನತ ಮಟ್ಟಕ್ಕೇರಿಸಿರುವುದನ್ನು ನಿರ್ಣಯವು ಬಲವಾಗಿ ಒತ್ತಿಹೇಳಿದೆ. ದೇಶದಲ್ಲಿ ನಕ್ಸಲಿಸಂ ನಿರ್ಮೂಲನೆ, ಈಶಾನ್ಯ ರಾಜ್ಯಗಳಲ್ಲಿ ಶಾಶ್ವತ ಶಾಂತಿ ಒಪ್ಪಂದಗಳಿಗೆ ಸಹಿ ಹಾಕಿರುವುದು ಮತ್ತು ಬಾಂಗ್ಲಾದೇಶದೊಂದಿಗಿನ ಗಡಿ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿರುವುದರಲ್ಲಿ ಸಾಧಿಸಿದ ಶ್ಲಾಘನೀಯ ಪ್ರಗತಿಯನ್ನು ಇಲ್ಲಿ ಗುರುತಿಸಲಾಗಿದೆ.

ರಕ್ಷಣಾ ವಲಯದಿಂದ ಹಿಡಿದು ಕೃತಕ ಬುದ್ಧಿಮತ್ತೆಯವರೆಗೆ ಭಾರತದ ಉತ್ಪಾದನಾ ಸಾಮರ್ಥ್ಯಗಳು ಹೆಚ್ಚಾಗಲು ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ ಅಭಿಯಾನಗಳು ನೀಡಿದ ವೇಗವೇ ಕಾರಣ ಎಂದು ನಿರ್ಣಯವು ಹೇಳಿದೆ. ಅದೇ ಸಮಯದಲ್ಲಿ, ಭಾರತದ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದ ಜಿ-20 ಶೃಂಗಸಭೆ, ಅಂತಾರಾಷ್ಟ್ರೀಯ ಯೋಗ ದಿನದ ಆಚರಣೆ ಮತ್ತು ಅಂತರರಾಷ್ಟ್ರೀಯ ಸೌರ ಒಕ್ಕೂಟ ಹಾಗೂ ‘ಮಿಷನ್ ಲೈಫ್’ ನಂತಹ ಜಾಗತಿಕ ಉಪಕ್ರಮಗಳ ಮೂಲಕ ವಿಶ್ವಮಟ್ಟದಲ್ಲಿ ಭಾರತದ ಪಾತ್ರ ಮತ್ತು ಗೌರವ ಎಷ್ಟು ಬಲಗೊಂಡಿದೆ ಎಂಬುದನ್ನು ಇದು ಒತ್ತಿ ಹೇಳಿದೆ. ಅಭಿವೃದ್ಧಿ ಮತ್ತು ಪರಂಪರೆಯನ್ನು (‘ವಿಕಾಸ್’ ಮತ್ತು ‘ವಿರಾಸತ್’) ಒಟ್ಟಿಗೆ ಕೊಂಡೊಯ್ಯುವ ಮೂಲಕ, ಹೊಸ ಸಂಸತ್ ಭವನ ಮತ್ತು ಕರ್ತವ್ಯ ಪಥದ ನಿರ್ಮಾಣದೊಂದಿಗೆ ದೇಶದಲ್ಲಿ ಸಾಂಸ್ಕೃತಿಕ ಪುನರುತ್ಥಾನವಾಗಿದೆ ಎಂದು ನಿರ್ಣಯವು ಉಲ್ಲೇಖಿಸಿದೆ. ಇದು ಕೊರೋನಾ ಸಾಂಕ್ರಾಮಿಕದಂತಹ ಜಾಗತಿಕ ಬಿಕ್ಕಟ್ಟುಗಳನ್ನು ಯಶಸ್ವಿಯಾಗಿ ಎದುರಿಸಿದ ಸಾರ್ವಜನಿಕ ಭಾಗವಹಿಸುವಿಕೆಯ ಮನೋಭಾವದಿಂದ ಸಾಧ್ಯವಾಗಿದೆ.

ಕಳೆದ 12 ವರ್ಷಗಳ ರಾಜಕೀಯ ಸ್ಥಿರತೆ, ಕ್ರಿಯಾತ್ಮಕ ಆಡಳಿತ ಮತ್ತು ದೂರದರ್ಶಿ ನೀತಿಗಳು ಭಾರತವನ್ನು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೊಡ್ಡ ಆರ್ಥಿಕತೆಯನ್ನಾಗಿ ಪರಿವರ್ತಿಸಿವೆ ಎಂಬುದನ್ನು ಒತ್ತಿಹೇಳುತ್ತಾ, ಕೇಂದ್ರ ಸಚಿವ ಸಂಪುಟವು ತನ್ನ ಆಳವಾದ ಕೃತಜ್ಞತೆ ಮತ್ತು ಭವಿಷ್ಯದ ಸಂಕಲ್ಪವನ್ನು ವ್ಯಕ್ತಪಡಿಸಲು ಈ ಕೆಳಗಿನ ನಿರ್ಣಯಗಳನ್ನು ಅಧಿಕೃತವಾಗಿ ಅಂಗೀಕರಿಸಿದೆ:

ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದ ಅಧಿಕೃತ ನಿರ್ಣಯಗಳು:

  • ಈ ಐತಿಹಾಸಿಕ ಸಾಧನೆಗಾಗಿ ಗೌರವಾನ್ವಿತ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರಿಗೆ ತನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸುತ್ತದೆ.
  • ಬಡವರ ಕಲ್ಯಾಣ ಮತ್ತು ಸಮಾಜದ ಹಿಂದುಳಿದ ಹಾಗೂ ವಂಚಿತ ವರ್ಗಗಳ ಸಬಲೀಕರಣಕ್ಕಾಗಿ ಅವರ ನಾಯಕತ್ವದಲ್ಲಿ ಮಾಡಿದ ಕೆಲಸಗಳಿಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ.
  • ಅವರ ನಾಯಕತ್ವದಲ್ಲಿ ಭಾರತದ 25 ಕೋಟಿಗೂ ಹೆಚ್ಚು ಜನರು ಬಡತನವನ್ನು ಗೆದ್ದು ಬರಲು ಸಹಾಯ ಮಾಡಿದ ಗೌರವಾನ್ವಿತ ಪ್ರಧಾನಮಂತ್ರಿಯವರ ಜನಪರ ನೀತಿಗಳನ್ನು ಶ್ಲಾಘಿಸುತ್ತದೆ.
  • ದೇಶ ಸೇವೆಗಾಗಿ ಅವರ ಅನನ್ಯ ಸಮರ್ಪಣೆ ಮತ್ತು ದಣಿವರಿಯದ ಕಠಿಣ ಪರಿಶ್ರಮಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ.
  • ಎಲ್ಲರನ್ನೂ ಒಳಗೊಳ್ಳುವ ಬೆಳವಣಿಗೆ ಮತ್ತು ಸಾಮಾಜಿಕ ನ್ಯಾಯದ ಕಡೆಗೆ ಅವರ ಪ್ರಯತ್ನಗಳನ್ನು ಶ್ಲಾಘಿಸುತ್ತದೆ.
  • ರಾಷ್ಟ್ರದ ಭದ್ರತೆಯನ್ನು ಬಲಪಡಿಸುವಲ್ಲಿ ಮತ್ತು ಭಾರತದ ಹಿತಾಸಕ್ತಿಗಳನ್ನು ರಕ್ಷಿಸುವಲ್ಲಿ ಅವರ ದಿಟ್ಟ ನಾಯಕತ್ವವನ್ನು ಶ್ಲಾಘಿಸುತ್ತದೆ.
  • ‘ವಿಕಸಿತ ಭಾರತ’ (ಅಭಿವೃದ್ಧಿ ಹೊಂದಿದ ಭಾರತ) ನಿರ್ಮಾಣದಲ್ಲಿ ಅವರ ದೂರದರ್ಶಿ ಸಂಕಲ್ಪ ಮತ್ತು ನಾಯಕತ್ವಕ್ಕೆ ತನ್ನ ಸಂಪೂರ್ಣ ಬೆಂಬಲವನ್ನು ವ್ಯಕ್ತಪಡಿಸುತ್ತದೆ.

ಅಂಗೀಕರಿಸಲ್ಪಟ್ಟ ಈ ನಿರ್ಣಯವು ಪ್ರಧಾನಮಂತ್ರಿಯವರ ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ಶುಭ ಹಾರೈಸುವುದರೊಂದಿಗೆ ಮುಕ್ತಾಯಗೊಳ್ಳುತ್ತದೆ. ಶ್ರೀ ನರೇಂದ್ರ ಮೋದಿಯವರ ಸಮರ್ಥ ನಾಯಕತ್ವದಲ್ಲಿ ಭಾರತವು ಸ್ವಾವಲಂಬಿ, ಸುರಕ್ಷಿತ, ಸಮೃದ್ಧ ಮತ್ತು ವೈಭವದ ರಾಷ್ಟ್ರವಾಗಿ ಹೊಸ ಎತ್ತರವನ್ನು ಸಾಧಿಸುವುದನ್ನು ಮುಂದುವರಿಸುತ್ತದೆ ಮತ್ತು 2047ರ ವೇಳೆಗೆ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಲು ಬಲವಾದ ಹಾದಿಯನ್ನು ಸುಗಮಗೊಳಿಸುತ್ತದೆ ಎಂಬ ಸಂಪೂರ್ಣ ವಿಶ್ವಾಸವನ್ನು ದೃಢವಾಗಿ ವ್ಯಕ್ತಪಡಿಸಿದೆ.

Click here to see Cabinet Resolution (English)

Click here to see Cabinet Resolution (Hindi)

 

*****