ಪಿಎಂಇಂಡಿಯಾ
ನನ್ನ ಸಂಪುಟ ಸಹೋದ್ಯೋಗಿ ಶ್ರೀ ಮನ್ಸುಖ್ ಮಾಂಡವೀಯ ಜಿ, ಸಹೋದರಿ ಶೋಭಾ ಜಿ, ದೇಶಾದ್ಯಂತ ವಿವಿಧ ಕಾರ್ಯಕ್ರಮಗಳು ಮತ್ತು ತಂತ್ರಜ್ಞಾನದೊಂದಿಗೆ ಸಂಪರ್ಕ ಹೊಂದಿದ ಎಲ್ಲಾ ಗಣ್ಯ ವ್ಯಕ್ತಿಗಳೆ, ದೂರದಿಂದಲೇ ಈ ಕಾರ್ಯಕ್ರಮದೊಂದಿಗೆ 200 ಸ್ಥಳಗಳಿಂದ ಸಂಪರ್ಕ ಹೊಂದಿರುವ ಸುಮಾರು 2 ಲಕ್ಷ ಜನರಿಗೆ ನಾನು ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ, ಇಂದು ಇಲ್ಲಿ ಕೈಗಾರಿಕಾ ಕ್ಷೇತ್ರದ ಅನೇಕ ಗಣ್ಯ ವ್ಯಕ್ತಿಗಳು ಹಾಜರಿರುವುದನ್ನು ನಾನು ನೋಡುತ್ತಿದ್ದೇನೆ. ಸಹಜವಾಗಿ ಯುವ ಸಮುದಾಯ ಇಲ್ಲಿ ಉತ್ಸಾಹದಿಂದ ದೊಡ್ಡ ಸಂಖ್ಯೆಯಲ್ಲಿ ಇರುವುದು ಗೋಚರಿಸುತ್ತಿದೆ.
ಇಂದು ಈ ಕಾರ್ಯಕ್ರಮದೊಂದಿಗೆ ಸಂಪರ್ಕ ಹೊಂದಿರುವ ಯುವ ಸ್ನೇಹಿತರನ್ನು ನೋಡಿದರೆ ಭಾರತದ ಉಜ್ವಲ ಭವಿಷ್ಯದ ಚಿತ್ರಣವನ್ನು ನಾನು ನೋಡುತ್ತಿದ್ದೇನೆ. ಕೆಲವೇ ಗಂಟೆಗಳ ಹಿಂದೆ, ನಾನು ಫ್ರಾನ್ಸ್ ಮತ್ತು ಸ್ಲೋವಾಕಿಯಾ ಭೇಟಿಯಿಂದ ಹಿಂತಿರುಗಿದೆ. ನಾನು ಜಿ-7 ಶೃಂಗಸಭೆಯಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ನಾಯಕರನ್ನು ಭೇಟಿಯಾದೆ. ಇಂದು ಜಗತ್ತು ಭಾರತದ ಯುವ ಶಕ್ತಿಯ ಬಗ್ಗೆ ಮಾತನಾಡುತ್ತಿದೆ. ಎಲ್ಲೆಡೆ ಭಾರತದ ಪ್ರತಿಭೆ, ಕೌಶಲ್ಯ ಮತ್ತು ಸಾಮರ್ಥ್ಯದ ಬಗ್ಗೆ ಚರ್ಚೆ ನಡೆಯುತ್ತಿದೆ. ಭಾರತದ ಯುವಕರ ಸಾಮರ್ಥ್ಯವನ್ನು ಜಗತ್ತು ನಿಜವಾಗಿಯೂ ಗುರುತಿಸಲು ಪ್ರಾರಂಭಿಸಿದೆ. ಅಂತಹ ಸಮಯದಲ್ಲಿ, ಭಾರತದ ಪ್ರತಿಯೊಬ್ಬ ಯುವಕರು ತಮ್ಮ ಸಾಮರ್ಥ್ಯವನ್ನು ಅವಕಾಶವಾಗಿ ಪರಿವರ್ತಿಸಬಹುದು ಎಂಬುದು ನಮ್ಮ ಪ್ರಯತ್ನವಾಗಿದೆ. ಈ ದೃಷ್ಟಿಕೋನದೊಂದಿಗೆ, ಪ್ರಧಾನ ಮಂತ್ರಿ ವಿಕಸಿತ ಭಾರತ ರೋಜ್‌ಗಾರ್ ಯೋಜನೆಯನ್ನು ಆರಂಭಿಸಲಾಗಿದೆ. ಈ ಉದ್ಯೋಗ ಯೋಜನೆಯು ಸಾಮಾನ್ಯ ಉದ್ಯೋಗ ಯೋಜನೆಗಳ ಕಲ್ಪನೆಯನ್ನು ಮೀರಿದೆ – ಇದು ಯುವಕರು ತಮ್ಮ ಮೊದಲ ಉದ್ಯೋಗ ಪಡೆಯುವ ಕನಸುಗಳನ್ನು ಸಬಲಗೊಳಿಸುವ ಯೋಜನೆಯಾಗಿದೆ. ಇದು ಯುವಕರು ಮತ್ತು ಕೈಗಾರಿಕೆಗಳ ನಡುವೆ ಬಲವಾದ ಸಂಪರ್ಕವನ್ನು ನಿರ್ಮಿಸುವ ಯೋಜನೆಯಾಗಿದೆ.
ಸ್ನೇಹಿತರೆ,
ಸಾಮಾನ್ಯವಾಗಿ, ಯೋಜನೆಗಳನ್ನು ಉದ್ಯೋಗಿಗಳಿಗಾಗಿ ಅಥವಾ ಕೈಗಾರಿಕೆಗಳಿಗಾಗಿ ರೂಪಿಸಲಾಗುತ್ತದೆ. ಇದು ಅಂತಹ ಒಂದು ಸ್ಪಷ್ಟ ಯೋಜನೆಯಾಗಿದೆ – ನನ್ನ ಸಮರ್ಥ ಯುವಕರು, ಸಮೃದ್ಧ ಯುವಕರು, ಭವಿಷ್ಯ ಮತ್ತು ಕೈಗಾರಿಕಾ ಅಭಿವೃದ್ಧಿಯ ಕಡೆಗೆ. ಒಬ್ಬ ಯುವಕ ತನ್ನ ಮೊದಲ ಕೆಲಸ ಪ್ರಾರಂಭಿಸಿದಾಗ, ಸರ್ಕಾರ ಅವರೊಂದಿಗೆ ನಿಲ್ಲುತ್ತದೆ. ಆದ್ದರಿಂದ, ಈ ವ್ಯಕ್ತಿ ಒಬ್ಬಂಟಿಯಾಗಿ ಬಂದಿಲ್ಲ ಎಂದು ಕೈಗಾರಿಕೋದ್ಯಮಿ ಭಾವಿಸುತ್ತಾನೆ, ಇಡೀ ಸರ್ಕಾರವು ಅವರ ಹಿಂದೆ ನಿಲ್ಲುತ್ತದೆ. ಇದರಿಂದಾಗಿ, ಅಂತಹ ಯುವಕರ ಕಡೆಗೆ ಕೈಗಾರಿಕೋದ್ಯಮಿಯ ದೃಷ್ಟಿಕೋನ ಬದಲಾಗುತ್ತದೆ. ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಂಸ್ಥೆಗಳು, ಸರ್ಕಾರವು ಅವರನ್ನು ಪ್ರೋತ್ಸಾಹಿಸುತ್ತದೆ. ಹಿಂದೆ ಇದ್ದ ಇಲ್ಲಿನ ಕೆಲವು ನಿಯಮಗಳು ಮತ್ತು ವ್ಯವಸ್ಥೆಗಳಿಂದಾಗಿ ಜನರು ದೊಡ್ಡವರಾಗಿ ಬೆಳೆಯಲು ಸ್ವಲ್ಪ ಹೆದರುತ್ತಿದ್ದರು, ನಾವು ಬೆಳೆಯಲು ಹಲವಾರು ನಿರ್ಬಂಧಗಳು ಎದುರಾಗುತ್ತವೆ ಎಂದೇ ಭಾವಿಸುತ್ತಿದ್ದರು. ಆದ್ದರಿಂದ ಅವರು ಹೇಗಿದ್ದೇವೋ ಹಾಗೆಯೇ ಉಳಿಯುವುದು ಉತ್ತಮ ಎಂದು ಭಾವಿಸಿದ್ದರು. ಬೆಳವಣಿಗೆ ಕಾಣಬೇಕಾದರೆ ಇನ್ನೊಂದು ಸಣ್ಣದನ್ನು ಪ್ರಾರಂಭಿಸೋಣ ಎಂದು ಅವರು ಯೋಚಿಸಿದ್ದರು. ಇಂದು, ಆ ಮನಸ್ಥಿತಿ ಬದಲಾಗಿದೆ. ಪ್ರತಿಯೊಬ್ಬರೂ ದೊಡ್ಡದಾಗಿ ಬೆಳೆಯಲು ಧೈರ್ಯ ಮಾಡಬೇಕು, ಅವರ ಆಶಯಗಳಿಗೆ ರೆಕ್ಕೆ ಪುಕ್ಕಗಳು ಸಿಗಬೇಕು, ಕೈಗಾರಿಕೆಗಳಿಗೂ ಇದು ಬೇಕು. ಈ ಯೋಜನೆ ತಹ ಬಾಗಿಲನ್ನು ತೆರೆದಿದೆ, ಇದು ಅದರ ಶ್ರೇಷ್ಠ ವೈಶಿಷ್ಟ್ಯವಾಗಿದೆ. ಸ್ವಲ್ಪ ಸಮಯದ ಹಿಂದೆ, ನಾನು ಕೆಲವು ಫಲಾನುಭವಿ ಯುವಕರೊಂದಿಗೆ ಕುಳಿತು ಅವರ ಅನುಭವಗಳನ್ನು ಆಲಿಸಿದೆ. ಕೆಲವರು ಮೊದಲ ಬಾರಿಗೆ ಕೆಲಸ ಪಡೆದವರು, ಮತ್ತು ಕೆಲವರು ಈ ಯೋಜನೆಯಡಿ ಇತರರಿಗೆ ಉದ್ಯೋಗ ನೀಡಿದವರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆ ಯುವಕರಲ್ಲಿದ್ದ ಆತ್ಮವಿಶ್ವಾಸ ಗಮನಾರ್ಹವಾಗಿತ್ತು, ಅವರಿಗೆ ಜಗತ್ತನ್ನೇ ಗೆದ್ದಂತೆ ಭಾಸವಾಗಿದೆ. ಅವರ ಕನಸುಗಳು, ಅವರ ನಂಬಿಕೆ – ಇದು ನಿಜವಾಗಿಯೂ ನಮ್ಮ ದೊಡ್ಡ ಬಂಡವಾಳವಾಗಿದೆ.
ಸ್ನೇಹಿತರೆ,
ಪ್ರಧಾನ ಮಂತ್ರಿ ವಿಕಸಿತ ಭಾರತ್ ರೋಜ್‌ಗಾರ್ ಯೋಜನೆಯ ಬೆಂಬಲದೊಂದಿಗೆ, ಇಲ್ಲಿಯವರೆಗೆ ಸುಮಾರು 7 ದಶಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಸುಮಾರು 7 ದಶಲಕ್ಷ ಯುವಕರು ಮೊದಲ ಬಾರಿಗೆ ಉದ್ಯೋಗಿಗಳಾಗಿ ಸಾಮಾಜಿಕ ಭದ್ರತೆಯ ರಕ್ಷಣೆಯನ್ನು ಸಹ ಪಡೆದಿದ್ದಾರೆ. ಸುಮಾರು 2 ದಶಲಕ್ಷ ಯುವಕರು ಈಗಾಗಲೇ ತಮ್ಮ ಮೊದಲ ಉದ್ಯೋಗದಲ್ಲಿ 6 ತಿಂಗಳು ಪೂರ್ಣಗೊಳಿಸಿದ್ದಾರೆ. ಇಂದು, ಈ ಯುವ ಒಡನಾಡಿಗಳಲ್ಲಿ ಸುಮಾರು 1 ದಶಲಕ್ಷ ಜನರು ತಮ್ಮ ಮೊದಲ ಉದ್ಯೋಗದಲ್ಲಿ 6 ತಿಂಗಳು ಪೂರ್ಣಗೊಳಿಸಿದ ನಂತರ, ಈ ಯೋಜನೆಯಡಿ ಫಲಾನುಭವಿಗಳಾಗಿ ಪ್ರೋತ್ಸಾಹ ಧನ ಪಡೆದಿದ್ದಾರೆ. 2,000 ಕೋಟಿಗೂ ಹೆಚ್ಚು ರೂಪಾಯಿ ನೇರವಾಗಿ ಅವರ ಬ್ಯಾಂಕ್ ಖಾತೆಗಳಿಗೆ ತಲುಪಿವೆ. ಈ ಮೊತ್ತವು ಕೇವಲ ಆರ್ಥಿಕ ಸಹಾಯವಲ್ಲ – ಇದು ಅವರ ಕಠಿಣ ಪರಿಶ್ರಮಕ್ಕೆ ಸಂದ ಗೌರವ. ಇದು ಅವರ ಉಜ್ವಲ ಭವಿಷ್ಯದ ಮೇಲಿನ ರಾಷ್ಟ್ರದ ನಂಬಿಕೆಯ ಅಭಿವ್ಯಕ್ತಿಯಾಗಿದೆ.
ಸ್ನೇಹಿತರೆ,
ನಮ್ಮ ಯುವ ಜನರಿಗೆ ಅವಕಾಶಗಳನ್ನು ನೀಡಿದ, ಅವರೊಳಗಿನ ಗುಪ್ತ ಸಾಮರ್ಥ್ಯವನ್ನು ಗುರುತಿಸಿದ ಸಂಸ್ಥೆಗಳ ಬಗ್ಗೆ ನನಗೆ ಅಷ್ಟೇ ಸಂತೋಷವಾಗಿದೆ. ಆದ್ದರಿಂದ, ಈ ಅವಕಾಶಗಳನ್ನು ಒದಗಿಸಿದವರು ಅಷ್ಟೇ ಮೆಚ್ಚುಗೆಗೆ ಅರ್ಹರು. ಇತ್ತೀಚಿನ ತಿಂಗಳುಗಳಲ್ಲಿ ಈ ಸಂಸ್ಥೆಗಳು ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸಿವೆ. ಇದೀಗ, ಮನ್ಸುಖ್ ಭಾಯ್ ಅಂಕಿಅಂಶಗಳನ್ನು ಹಂಚಿಕೊಂಡಂತೆ, ಮಾಧ್ಯಮಗಳು ಈ ಸಂಖ್ಯೆಗಳಿಗೆ ಗಮನ ಕೊಡುತ್ತವೆ ಎಂದು ನಾನು ಭಾವಿಸುತ್ತೇನೆ. ಇಂತಹ ಬೃಹತ್ ಪ್ರಯತ್ನ ನಡೆಯುತ್ತಿದೆ ಎಂದು ತಿಳಿದು ದೇಶದ ಜನರು ಸಂತೋಷ ಪಡುತ್ತಾರೆ. ಸರ್ಕಾರ, ಯುವಕರು ಮತ್ತು ಕೈಗಾರಿಕೆಗಳು ಒಟ್ಟಾಗಿ ಮುಂದುವರೆದಾಗ, ಉದ್ಯೋಗ ಸೃಷ್ಟಿಯ ವೇಗ ಹಲವು ಪಟ್ಟು ಹೆಚ್ಚಾಗುತ್ತದೆ ಎಂಬುದನ್ನು ಈ ಅಂಕಿಅಂಶಗಳು ಮತ್ತು ಅನುಭವಗಳು ಸ್ಪಷ್ಟವಾಗಿ ತೋರಿಸುತ್ತಿವೆ. ಪ್ರಧಾನ ಮಂತ್ರಿ ವಿಕಸಿತ ಭಾರತ್ ರೋಜ್‌ಗಾರ್ ಯೋಜನೆ ಈ ಹೊಸ ಭಾರತದ ಗುರುತಾಗಿದೆ – ಯುವಕರಿಗೆ ಅವಕಾಶಗಳು ಸಿಗುವ, ಕೈಗಾರಿಕೆಗಳಿಗೆ ಪ್ರೋತ್ಸಾಹ ಸಿಗುವ ಮತ್ತು ಉದ್ಯೋಗ ಸೃಷ್ಟಿಯ ರಾಷ್ಟ್ರೀಯ ಅಭಿಯಾನವಾಗುವ ಭಾರತವಾಗಿ ರೂಪಾಂತರಗೊಂಡಿದೆ.
ಸ್ನೇಹಿತರೆ,
ಭಾರತವು ವಿಶ್ವದ ಅತಿ ಹೆಚ್ಚಿನ ಯುವ ಸಮುದಾಯ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಆದ್ದರಿಂದ, ಅಭಿವೃದ್ಧಿ ಹೊಂದಿದ ಭಾರತದ ಹಾದಿಯು ನಮ್ಮ ಯುವಕರ ಕನಸುಗಳು, ಕೌಶಲ್ಯಗಳು ಮತ್ತು ಸಾಮರ್ಥ್ಯಗಳ ಮೂಲಕವೂ ಮುಂದುವರಿಯುತ್ತದೆ. ದೇಶದ ಪ್ರತಿಯೊಬ್ಬ ಯುವಕನು ತನ್ನ ಸಾಮರ್ಥ್ಯವು ಅನುಮತಿಸುವಷ್ಟು ಪ್ರಗತಿ ಸಾಧಿಸಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ. ಪ್ರತಿಭೆಯನ್ನು ಹೊಂದಿರುವವರಿಗೆ ಅವಕಾಶಗಳು ಸಿಗಬೇಕು. ಆಲೋಚನೆಗಳನ್ನು ಹೊಂದಿರುವವರಿಗೆ ನಾವೀನ್ಯತೆಗೆ ವೇದಿಕೆ ಸಿಗಬೇಕು, ಸ್ವಂತವಾಗಿ ಏನನ್ನಾದರೂ ಸಾಧಿಸಲು ಬಯಸುವವರಿಗೆ ಪೂರ್ಣ ಬೆಂಬಲ ಸಿಗಬೇಕು. ಭಾರತದಂತಹ ಯುವ ಸಮುದಾಯದ ದೇಶದಲ್ಲಿ ಹೆಚ್ಚಿನ ಅವಕಾಶಗಳ ಮೂಲಗಳು ಇದ್ದಷ್ಟೂ, ಯುವ ಕನಸುಗಳ ಹಾರಾಟ ಹೆಚ್ಚಾಗುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ. ಈ ದೃಷ್ಟಿಕೋನದಿಂದ, ಕಳೆದ 12 ವರ್ಷಗಳಲ್ಲಿ ಉದ್ಯೋಗದ ಪ್ರತಿಯೊಂದು ಮಾರ್ಗವನ್ನು ಬಲಪಡಿಸಲಾಗಿದೆ. ಮೂಲಸೌಕರ್ಯದಿಂದ ಹಿಡಿದು ನಾವೀನ್ಯತೆವರೆಗೆ, ಉತ್ಪಾದನೆಯಿಂದ ಹಿಡಿದು ಡಿಜಿಟಲ್ ಆರ್ಥಿಕತೆಯವರೆಗೆ, ಸ್ಟಾರ್ಟಪ್‌ಗಳಿಗೆ ಸ್ಥಳ ಹೀಗೆ ಪ್ರತಿಯೊಂದು ವಲಯದಲ್ಲೂ ಹೊಸ ಅವಕಾಶಗಳನ್ನು ಸೃಷ್ಟಿಸಲಾಗಿದೆ. ಮೇಕ್ ಇನ್ ಇಂಡಿಯಾ ಅಭಿಯಾನ, ಸ್ಥಳೀಯ ಉತ್ಪಾದನೆಗೆ ಉತ್ತೇಜನ, ಸ್ಥಳೀಯ ಉತ್ಪನ್ನಗಳನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯುವ ಧ್ಯೇಯ, ಮಿಷನ್ ಉತ್ಪಾದನೆ – ಈ ಎಲ್ಲಾ ಉಪಕ್ರಮಗಳು ದೇಶದಲ್ಲಿ ಉದ್ಯೋಗಗಳು ಮತ್ತು ಸ್ವಯಂ ಉದ್ಯೋಗಕ್ಕಾಗಿ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಇಂದು, ಕಾರುಗಳಿಂದ ಮೆಟ್ರೋ ಕೋಚ್‌ಗಳವರೆಗೆ, ರೈಲು ವಿಭಾಗಗಳವರೆಗೆ ರಕ್ಷಣಾ ಉಪಕರಣಗಳವರೆಗೆ, ರಫ್ತುಗಳು ಅನೇಕ ಕ್ಷೇತ್ರಗಳಲ್ಲಿ ವೇಗವಾಗಿ ಹೆಚ್ಚುತ್ತಿವೆ. ಭಾರತದಲ್ಲಿ ಉತ್ಪಾದನೆ ಬೆಳೆಯುತ್ತಿದೆ, ಕಾರ್ಖಾನೆಗಳು ಹೆಚ್ಚುತ್ತಿವೆ ಮತ್ತು ಅವುಗಳಲ್ಲಿ ಕೆಲಸ ಮಾಡುವ ಜನರ ಸಂಖ್ಯೆಯೂ ಹೆಚ್ಚುತ್ತಿರುವುದೇ ಇದಕ್ಕೆ ಕಾರಣ.
ಸ್ನೇಹಿತರೆ,
ಕಳೆದ 12 ವರ್ಷಗಳಲ್ಲಿ ಭಾರತ ಸರ್ಕಾರದ ನೀತಿಗಳು ಮತ್ತು ನಿರ್ಧಾರಗಳು ದೇಶದಲ್ಲಿ ನಿರಂತರವಾಗಿ ಹೊಸ ಉದ್ಯೋಗ ವಲಯಗಳನ್ನು ಸೃಷ್ಟಿಸುತ್ತಿವೆ. ಇಂದು ಮೂಲಸೌಕರ್ಯದಲ್ಲಿ 12 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ಹೂಡಿಕೆಯು ಲಕ್ಷಾಂತರ ಯುವಕರಿಗೆ ಅಡಿಪಾಯವಾಗುತ್ತಿದೆ. ಮುದ್ರಾ ಯೋಜನೆಯಡಿ 33 ಲಕ್ಷ ಕೋಟಿ ರೂಪಾಯಿಗಳಿಗೂ ಹೆಚ್ಚು ನೆರವು ಕೋಟ್ಯಂತರ ಯುವ ಜನರಿಗೆ ತಮ್ಮದೇ ಆದ ಕೆಲಸವನ್ನು ಪ್ರಾರಂಭಿಸಲು ಅವಕಾಶ ನೀಡಿದೆ. 10 ಕೋಟಿಗೂ ಹೆಚ್ಚು ಮಹಿಳೆಯರು ಸ್ವಸಹಾಯ ಗುಂಪುಗಳೊಂದಿಗೆ ಸಂಪರ್ಕ ಹೊಂದಿದ್ದಾರೆ, 3 ಕೋಟಿಗೂ ಹೆಚ್ಚು ಜನರು “ಲಖ್ಪತಿ ದೀದಿ”ಗಳಾಗಿದ್ದಾರೆ. ಸ್ವನಿಧಿ ಮತ್ತು ಪಿಎಂ ವಿಶ್ವಕರ್ಮದಂತಹ ಉಪಕ್ರಮಗಳು ಸಣ್ಣ ಉದ್ಯಮಿಗಳು, ಬೀದಿ ವ್ಯಾಪಾರಿಗಳು ಮತ್ತು ಸಾಂಪ್ರದಾಯಿಕ ಕುಶಲಕರ್ಮಿಗಳಿಗೆ ಹೊಸ ತಂತ್ರಜ್ಞಾನ, ಹೊಸ ಆರ್ಥಿಕ ಬೆಂಬಲ ಮತ್ತು ಹೊಸ ಶಕ್ತಿಯನ್ನು ಒದಗಿಸಿವೆ. ನಾನು ಇತ್ತೀಚೆಗೆ ಮಾತನಾಡುತ್ತಿದ್ದ ಯುವ ಜನರಲ್ಲಿ, ಐಟಿಐ ಪದವಿ ಪಡೆದ ಒಬ್ಬ ಯುವಕ ಡ್ರೋನ್‌ಗಳನ್ನು ತಯಾರಿಸುವಲ್ಲಿ ಉತ್ಸಾಹದಿಂದ ತೊಡಗಿಸಿಕೊಂಡಿದ್ದಾನೆ. ಡ್ರೋನ್ ವಲಯದಿಂದಲೇ ನಾನು ನಿಮಗೆ ಒಂದು ಉದಾಹರಣೆ ನೀಡುತ್ತೇನೆ. ಔಷಧಿಗಳ ಪೂರೈಕೆಯಾಗಿರಲಿ, ಕೀಟನಾಶಕಗಳ ಸಿಂಪಡಣೆಯಾಗಿರಲಿ, ಸ್ವಾಮಿತ್ವ ಯೋಜನೆಯಡಿ ಮ್ಯಾಪಿಂಗ್ ಆಗಿರಲಿ ಅಥವಾ ರಕ್ಷಣಾ ಕ್ಷೇತ್ರದಲ್ಲಿ ಬಳಸುತ್ತಿರಲಿ – ದೇಶದಲ್ಲಿ ಡ್ರೋನ್‌ಗಳ ಬಳಕೆ ನಿರಂತರವಾಗಿ ಹೆಚ್ಚುತ್ತಿದೆ. ಹೆಚ್ಚುತ್ತಿರುವ ಡ್ರೋನ್‌ಗಳ ಬಳಕೆಯು ಯುವಕರಿಗೆ ಹೊಸ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ. ಐಟಿಐನಿಂದ ಹೊರಗಿದ್ದರೂ ಆ ಯುವಕ ಆತ್ಮವಿಶ್ವಾಸದಿಂದ ಹೇಳಿದ: “ಕೇವಲ ವೀಡಿಯೊ ಡ್ರೋನ್‌ಗಳನ್ನು ನೋಡಬೇಡಿ, ನೀವೇ ಡ್ರೋನ್‌ಗಳನ್ನು ತಯಾರಿಸಲು ಪ್ರಾರಂಭಿಸಿ – ನೀವು ಅದನ್ನು ಮಾಡಬಹುದು.” ಅವನು ಆತ್ಮವಿಶ್ವಾಸದಿಂದ ಮಾತನಾಡಿದ. ಬಾಹ್ಯಾಕಾಶ ವಲಯವನ್ನು ತೆರೆಯುವ ನಮ್ಮ ಸರ್ಕಾರದ ನಿರ್ಧಾರವು ಯುವಕರಿಗೆ ಹೆಚ್ಚಿನ ಪ್ರಯೋಜನ ನೀಡಿದೆ.
ಸ್ನೇಹಿತರೆ,
ಕಳೆದ ದಶಕದಲ್ಲಿ ಡಿಜಿಟಲ್ ಆರ್ಥಿಕತೆಯು ಅವಕಾಶಗಳ ಸಂಪೂರ್ಣ ಹೊಸ ಜಗತ್ತನ್ನು ಸೃಷ್ಟಿಸಿದೆ. ಅದು ತಾತ್ಕಾಲಿಕ ಕಾರ್ಮಿಕರ(ಗಿಗ್) ಆರ್ಥಿಕತೆಯಾಗಿರಲಿ, ಆನ್ ಲೈನ್ ಕಾರ್ಮಿಕರ (ಪ್ಲಾಟ್‌ಫಾರ್ಮ್) ಆರ್ಥಿಕತೆಯಾಗಿರಲಿ, ವಿಷಯ ಸೃಷ್ಟಿಯಾಗಿರಲಿ ಅಥವಾ ತಂತ್ರಜ್ಞಾನ ಸೇವೆಗಳಾಗಿರಲಿ – ಉದ್ಯೋಗದ ಹೊಸ ಕ್ಷೇತ್ರಗಳು ವೇಗವಾಗಿ ಹೊರಹೊಮ್ಮುತ್ತಿವೆ. ಒಂದು ಕಾಲದಲ್ಲಿ ಊಹಿಸಲೂ ಅಸಾಧ್ಯವಾಗಿದ್ದ ಅವಕಾಶಗಳು ಈಗ ಲಕ್ಷಾಂತರ ಯುವಕರಿಗೆ ಆದಾಯದ ಮೂಲಗಳಾಗಿವೆ. ಅದೇ ಪರಿವರ್ತನೆಯು ನವೋದ್ಯಮ ಪರಿಸರ ವ್ಯವಸ್ಥೆಯಲ್ಲಿ ಗೋಚರಿಸುತ್ತಿದೆ. ಒಂದು ಕಾಲದಲ್ಲಿ ದೇಶದಲ್ಲಿ ಸುಮಾರು 500 ನವೋದ್ಯಮಗಳಿದ್ದವು. ಇಂದು, 200,000ಕ್ಕೂ ಹೆಚ್ಚು ನೋಂದಾಯಿತ ನವೋದ್ಯಮಗಳಿವೆ, ನೀವು ದೇಶದ ಪ್ರತಿಯೊಂದು ಜಿಲ್ಲೆಯಲ್ಲೂ ನವೋದ್ಯಮಗಳನ್ನು ಕಾಣಬಹುದು. ಈ ಅಂಕಿಅಂಶಗಳು ಮುಂಬರುವ ವರ್ಷಗಳಲ್ಲಿ ಭಾರತದ ಯುವಕರು ಬೆಳವಣಿಗೆ, ನಾವೀನ್ಯತೆ ಮತ್ತು ಉದ್ಯಮಶೀಲತೆಯಲ್ಲಿ ಜಗತ್ತನ್ನು ಮುನ್ನಡೆಸುತ್ತಾರೆ ಎಂಬ ವಿಶ್ವಾಸವನ್ನು ಪ್ರೇರೇಪಿಸುತ್ತವೆ.
ಸ್ನೇಹಿತರೆ,
ಇಂದು ಇಡೀ ಜಗತ್ತು ಭಾರತದ ಭವಿಷ್ಯದ ಬಗ್ಗೆ ಉತ್ಸುಕವಾಗಿದೆ. ಭಾರತದ ಯುವಕರ ಶಕ್ತಿಯ ಬಗ್ಗೆ ಎಲ್ಲರಿಗೂ ವಿಶ್ವಾಸವಿದೆ. ಫ್ರಾನ್ಸ್‌ನಲ್ಲಿ ನಡೆದ ಭವ್ಯವಾದ “ಭಾರತ ಇನ್ನೋವೇಟ್ಸ್” ಕಾರ್ಯಕ್ರಮವನ್ನು ನೀವು ನೋಡಿರಬೇಕು. ಎಐ, ಬಾಹ್ಯಾಕಾಶ, ಹಸಿರು ಶಕ್ತಿ, ಜೈವಿಕ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ಭಾರತದ ನವೋದ್ಯಮಗಳು ಮತ್ತು ಜಾಗತಿಕ ಹೂಡಿಕೆದಾರರು ಹೊಸ ಶಕ್ತಿಯಾಗಿ ಹೊರಹೊಮ್ಮುತ್ತಿದ್ದಾರೆ, ಒಟ್ಟಾಗಿ ಕೆಲಸ ಮಾಡಲು ಮುಂದೆ ಬರುತ್ತಿದ್ದಾರೆ. ಇಂದು ಭಾರತವು ಜಗತ್ತಿನೊಂದಿಗೆ ಹೊಸ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳುತ್ತಿದೆ – ಭಾರತದ ಕೈಗಾರಿಕೆಗಳಿಗೆ ಹೊಸ ಮಾರುಕಟ್ಟೆಗಳನ್ನು ತೆರೆಯುವ ಒಪ್ಪಂದಗಳು, ಭಾರತದ ವೃತ್ತಿಪರರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಒಪ್ಪಂದಗಳು ಇವಾಗಿವೆ. ಇತ್ತೀಚಿನ ತಿಂಗಳುಗಳಲ್ಲಿ ಅನೇಕ ಯುರೋಪ್ ದೇಶಗಳೊಂದಿಗೆ ಹಲವಾರು ಪ್ರಮುಖ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಈ ಒಪ್ಪಂದಗಳು ದೇಶದಲ್ಲಿ ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮಾಧ್ಯಮವಾಗುತ್ತಿವೆ.
ಸ್ನೇಹಿತರೆ,
ಭವಿಷ್ಯದ ಆರ್ಥಿಕತೆಗೆ ಜಗತ್ತು ತಯಾರಿ ನಡೆಸುತ್ತಿದೆ. ಭಾರತವು ಭವಿಷ್ಯದ ಆರ್ಥಿಕತೆಯನ್ನು ಮುನ್ನಡೆಸಲು ತಯಾರಿ ನಡೆಸುತ್ತಿದೆ. ಜಗತ್ತು ಭವಿಷ್ಯದ ತಂತ್ರಜ್ಞಾನಗಳತ್ತ ಸಾಗುತ್ತಿದೆ, ಭಾರತವು ತನ್ನ ಯುವಕರನ್ನು ಭವಿಷ್ಯಕ್ಕೆ ಸಿದ್ಧಗೊಳಿಸಲು ಕೆಲಸ ಮಾಡುತ್ತಿದೆ. ಇದು ಭಾರತದ ಯುವಕರಿಗೆ ಅತ್ಯಂತ ದೊಡ್ಡ ಅವಕಾಶವಾಗಿದೆ, ನಾವು ಅದರ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬೇಕು.
ಸ್ನೇಹಿತರೆ,
ಕಳೆದ 12 ವರ್ಷಗಳಲ್ಲಿ ಭಾರತದ ಉದ್ಯೋಗ ವಲಯದಲ್ಲಿ ಮತ್ತೊಂದು ಪ್ರಮುಖ ಪರಿವರ್ತನೆ ಸಂಭವಿಸಿದೆ. ಇದರ ಬಗ್ಗೆ ಹೆಚ್ಚಿನ ಚರ್ಚೆ ನಡೆದಿಲ್ಲ. ಆದರೆ ಅಭಿವೃದ್ಧಿ ಹೊಂದಿದ ಭಾರತದ ಪ್ರಯಾಣದಲ್ಲಿ ಅದರ ಪ್ರಾಮುಖ್ಯತೆ ಅಪಾರವಾಗಿದೆ. ಈ ಪರಿವರ್ತನೆಯು ಉದ್ಯೋಗವನ್ನು ಭದ್ರತೆ ಮತ್ತು ಘನತೆಯೊಂದಿಗೆ ಜೋಡಿಸುವ ಬಗ್ಗೆ ಆಗಿದೆ. ನಮ್ಮ ದೃಷ್ಟಿಕೋನ ಸುರಕ್ಷಿತ ಉದ್ಯೋಗ. ನಮ್ಮ ದೃಷ್ಟಿಕೋನ ಪ್ರತಿಯೊಬ್ಬ ಕೆಲಸಗಾರನಿಗೆ ಸಾಮಾಜಿಕ ಭದ್ರತೆ. ಅದಕ್ಕಾಗಿಯೇ ಇಂದು ತಂತ್ರಜ್ಞಾನದ ಮೂಲಕ ಇಪಿಎಫ್ಒ ವ್ಯವಸ್ಥೆಯನ್ನು ಆಧುನೀಕರಿಸಲಾಗಿದೆ. ಪಿಂಚಣಿ ವ್ಯವಸ್ಥೆಗಳನ್ನು ಸರಳ ಮತ್ತು ಹೆಚ್ಚು ಪ್ರವೇಶಿಸಬಹುದಾಗಿದೆ. ಲಕ್ಷಾಂತರ ಹೊಸ ಕಾರ್ಮಿಕರು ಆರೋಗ್ಯ ವಿಮೆ ಮತ್ತು ಕೈಗೆಟುಕುವ ಚಿಕಿತ್ಸಾ ಸೌಲಭ್ಯಗಳೊಂದಿಗೆ ಸಂಪರ್ಕ ಹೊಂದಿದ್ದಾರೆ.
ಸ್ನೇಹಿತರೆ,
ಈ ದೃಷ್ಟಿಕೋನದೊಂದಿಗೆ ನಾವು ಕಾರ್ಮಿಕ ಸುಧಾರಣೆಗಳನ್ನು ಸಹ ಮುಂದಿಟ್ಟಿದ್ದೇವೆ. ಹೊಸ ಕಾರ್ಮಿಕ ಸಂಹಿತೆಗಳ ಉದ್ದೇಶ ಕಾರ್ಮಿಕರಿಗೆ ಹೆಚ್ಚಿನ ಭದ್ರತೆ, ಹೆಚ್ಚಿನ ಪಾರದರ್ಶಕತೆ ಮತ್ತು ಹೆಚ್ಚಿನ ಹಕ್ಕುಗಳನ್ನು ಒದಗಿಸುವುದಾಗಿದೆ. ನೇಮಕಾತಿ ಪತ್ರಗಳಿಗೆ ಕಾನೂನು ಮಾನ್ಯತೆ ನೀಡುವುದು, ಸ್ಥಿರ-ಅವಧಿಯ ಉದ್ಯೋಗಿಗಳಿಗೆ ಸಮಾನ ಸೌಲಭ್ಯಗಳನ್ನು ಖಚಿತಪಡಿಸುವುದು ಅಥವಾ ಕನಿಷ್ಠ ವೇತನದ ವ್ಯಾಪ್ತಿ ವಿಸ್ತರಿಸುವುದು – ಪ್ರತಿಯೊಂದು ಪ್ರಯತ್ನವೂ ಕಾರ್ಮಿಕರ ಘನತೆ ಮತ್ತು ಭದ್ರತೆ ಎರಡನ್ನೂ ಬಲಪಡಿಸುವ ಗುರಿ ಹೊಂದಿದೆ.
ಸ್ನೇಹಿತರೆ,
ಇಂದು ನಮ್ಮ ಮಹಿಳಾ ಶಕ್ತಿಯು ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಎತ್ತರವನ್ನು ತಲುಪುತ್ತಿದೆ. ಆದ್ದರಿಂದ, ಮಹಿಳೆಯರಿಗೆ ಸುರಕ್ಷಿತ, ಗೌರವಾನ್ವಿತ ಮತ್ತು ಅವಕಾಶಗಳಿಂದ ತುಂಬಿರುವ ವಾತಾವರಣ ಸೃಷ್ಟಿಸಲಾಗುತ್ತಿದೆ. ರಾತ್ರಿ ಪಾಳಿಗಳಿಗೆ ಸಂಬಂಧಿಸಿದ ಹಳೆಯ ನಿರ್ಬಂಧಗಳನ್ನು ಬದಲಾಯಿಸುವುದಿರಲಿ, ಮನೆಯಿಂದ ಕೆಲಸದ ಸೌಲಭ್ಯವನ್ನು ಒದಗಿಸುವುದಿರಲಿ ಅಥವಾ ಸುರಕ್ಷಿತ ಕೆಲಸದ ಸ್ಥಳಗಳನ್ನು ಖಚಿತಪಡಿಸುವುದಿರಲಿ – ನಾವು ಮಹಿಳೆಯರ ಭಾಗವಹಿಸುವಿಕೆಯನ್ನು ಇನ್ನಷ್ಟು ಬಲಪಡಿಸುತ್ತಿದ್ದೇವೆ.
ಸ್ನೇಹಿತರೆ,
ಇಂದು ಕೈಗಾರಿಕಾ ಜಗತ್ತಿನ ನನ್ನ ಹೆಚ್ಚಿನ ಸಂಖ್ಯೆಯ ಒಡನಾಡಿಗಳು ಸಹ ಇಲ್ಲಿ ಇದ್ದಾರೆ. ನಾನು ನಿಮ್ಮೆಲ್ಲರಿಗೂ ಒಂದು ಮನವಿ ಮಾಡುತ್ತೇನೆ. 21ನೇ ಶತಮಾನದಲ್ಲಿ ಕೌಶಲ್ಯಪೂರ್ಣ ಪ್ರತಿಭೆ, ನಾವೀನ್ಯತೆ ಮತ್ತು ಗುಣಮಟ್ಟ ಹೊಂದಿರುವ ದೇಶಗಳಿಗೆ ಅವಕಾಶಗಳು ಹೋಗುತ್ತವೆ. ಇಂದು ಭಾರತವು ಈ 3 ಕ್ಷೇತ್ರಗಳಲ್ಲಿ ಮುನ್ನಡೆಯಲು ಅಭೂತಪೂರ್ವ ಸಾಮರ್ಥ್ಯ ಹೊಂದಿದೆ. ಅದಕ್ಕಾಗಿಯೇ ನಾನು ಭಾರತದ ಕೈಗಾರಿಕಾ ಜಗತ್ತಿಗೆ ಹೇಳಲು ಬಯಸುತ್ತೇನೆ – ಇಂದು ನಮ್ಮ ಮುಂದಿರುವ ಅವಕಾಶಗಳನ್ನು ಪೂರ್ಣ ಶಕ್ತಿಯಿಂದ ಸ್ವೀಕರಿಸಬೇಕು. ನಾವು ಹೊಸ ಮಾರುಕಟ್ಟೆಗಳನ್ನು ತಲುಪಬೇಕು. ನಾವು ಹೊಸ ಉತ್ಪನ್ನಗಳನ್ನು ತಯಾರಿಸಬೇಕು. ನಾವು ವಿಶ್ವದ ಅತ್ಯುತ್ತಮ ಕಂಪನಿಗಳೊಂದಿಗೆ ಸ್ಪರ್ಧಿಸಬೇಕು. ಏಕೆಂದರೆ ಇಂದು ಜಗತ್ತು ಭಾರತಕ್ಕೆ ಬಾಗಿಲು ತೆರೆಯುತ್ತಿದೆ. ಮೊದಲು, ನಮಗಾಗಿ ಒಂದು ಕಿಟಕಿಯೂ ತೆರೆದಿರಲಿಲ್ಲ. ಸ್ನೇಹಿತರೆ, ಇಂದು ಬಾಗಿಲುಗಳು ತೆರೆದುಕೊಳ್ಳುತ್ತಿವೆ. ಭಾರತವು ಸುಮಾರು 40 ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳಿಗೆ ಸಹಿ ಹಾಕಿದೆ, ನಾವು ಅವುಗಳ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು. ಈ ಒಪ್ಪಂದಗಳು ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸುತ್ತಿವೆ, ಹೊಸ ಮಾರುಕಟ್ಟೆಗಳನ್ನು ಪ್ರವೇಶಿಸುವಂತೆ ಮಾಡುತ್ತಿವೆ ಮತ್ತು ಪ್ರಪಂಚದಾದ್ಯಂತ ಮೇಕ್ ಇನ್ ಇಂಡಿಯಾ ಬ್ರ್ಯಾಂಡ್‌ಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿವೆ. ಆದ್ದರಿಂದ ಸ್ನೇಹಿತರೆ, ಈ ಅವಕಾಶಗಳನ್ನು ನಾವು ಕಳೆದುಕೊಳ್ಳಲು ಬಿಡಬಾರದು.
ಸ್ನೇಹಿತರೆ,
ಗುರಿಗಳು ದೊಡ್ಡದಾಗಿದ್ದಾಗ, ಸಾಧನೆಗಳು ಸಹ ದೊಡ್ಡದಾಗಿರುತ್ತವೆ. ದೃಷ್ಟಿಕೋನವು ಜಾಗತಿಕವಾಗಿದ್ದಾಗ, ಯಶಸ್ಸು ಮತ್ತು ಗಡಿಗಳು ಸ್ವಾಭಾವಿಕವಾಗಿ ವಿಸ್ತರಿಸುತ್ತವೆ. ಅದಕ್ಕಾಗಿಯೇ ತರಬೇತಿ, ಮಾರ್ಗದರ್ಶನ ಮತ್ತು ಇಂಟರ್ನ್‌ಶಿಪ್‌ಗಳು ಇನ್ನು ಮುಂದೆ ಐಚ್ಛಿಕವಲ್ಲ – ಅವು 21ನೇ ಶತಮಾನದ ಅವಶ್ಯಕತೆಗಳಾಗಿವೆ. ಭಾರತದ ಕೈಗಾರಿಕಾ ವಲಯವು ತನಗಾಗಿ ಕೌಶಲ್ಯಪೂರ್ಣ ಕಾರ್ಯಪಡೆಯನ್ನು ಸಿದ್ಧಪಡಿಸಬೇಕು , ಭವಿಷ್ಯಕ್ಕಾಗಿ ಹೊಸ ಅವಕಾಶಗಳನ್ನು ಸೃಷ್ಟಿಸಬೇಕು. ಏಕೆಂದರೆ ಅಭಿವೃದ್ಧಿ ಹೊಂದಿದ ಭಾರತದ ಹಾದಿಯು ಹೂಡಿಕೆಯಿಂದ ಮಾತ್ರ ನಿರ್ಮಿಸಲ್ಪಡುವುದಿಲ್ಲ, ಅದು ಪ್ರತಿಭೆ, ಕೌಶಲ್ಯ ಮತ್ತು ನಾವೀನ್ಯತೆಯ ಶಕ್ತಿಯಿಂದ ನಿರ್ಮಿಸಲ್ಪಡುತ್ತದೆ. ಈ ಇಡೀ ಪ್ರಯಾಣದ ಅತ್ಯಂತ ದೊಡ್ಡ ಪರೀಕ್ಷೆ ಒಂದೇ ಒಂದು ವಿಷಯ, ಇದನ್ನು ನಾನು ಕೈಗಾರಿಕಾ ಜಗತ್ತಿನಲ್ಲಿರುವ ನನ್ನ ಒಡನಾಡಿಗಳಿಗೆ ಪುನರಾವರ್ತಿಸುತ್ತಲೇ ಇರುತ್ತೇನೆ – ಈ ಎಲ್ಲಾ ಸಂದರ್ಭಗಳ ಲಾಭ ಪಡೆಯಲು ಅತ್ಯಂತ ಶಕ್ತಿಶಾಲಿ ಪರಿಹಾರವೆಂದರೆ ಗುಣಮಟ್ಟ. ಶಿಕ್ಷಣದ ಗುಣಮಟ್ಟ, ಕೌಶಲ್ಯದ ಗುಣಮಟ್ಟ, ಸೇವೆಯ ಗುಣಮಟ್ಟ, ಉತ್ಪನ್ನದ ಗುಣಮಟ್ಟ, ಪ್ಯಾಕೇಜಿಂಗ್‌ನ ಗುಣಮಟ್ಟ. ನಾವು ಜಗತ್ತಿನಲ್ಲಿ ಬದುಕಲು ಬಯಸಿದರೆ, ನಾವು ಅತ್ಯುನ್ನತ ಜಾಗತಿಕ ಮಾನದಂಡಗಳನ್ನು ಪೂರೈಸಬೇಕು. ನಾವು ಜಗತ್ತಿನಲ್ಲಿ ಮುಂದುವರಿಯಲು ಬಯಸಿದರೆ, ಶ್ರೇಷ್ಠತೆಯು ನಮ್ಮ ಗುರುತಾಗಬೇಕು. ಇಂದು ಜಗತ್ತು ಭಾರತದಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದೆ. ಆದರೆ ಭಾರತದ ಯುವಕರು ಆ ನಿರೀಕ್ಷೆಗಳನ್ನು ಪೂರೈಸುವುದಲ್ಲದೆ, ಅವುಗಳನ್ನು ಮೀರಿಸಿ ಜಗತ್ತಿಗೆ ತೋರಿಸುತ್ತಾರೆ ಎಂಬ ವಿಶ್ವಾಸ ನನಗಿದೆ. ಈ ಬಗ್ಗೆ ನನಗೆ ಹೆಮ್ಮೆಯಿದೆ, ಧೈರ್ಯವೂ ಇದೆ. ಇದು ಅಭಿವೃದ್ಧಿ ಹೊಂದಿದ ಭಾರತದ ಶಕ್ತಿ. ಇದು ನನ್ನ ಯುವ ಸ್ನೇಹಿತರ ಸಾಮರ್ಥ್ಯ ಮತ್ತು ಅವರ ಶಕ್ತಿಯ ಗುರುತಾಗಿದೆ.
ಸ್ನೇಹಿತರೆ,
ಕನಸುಗಳು ಎಲ್ಲಿ ನನಸಾಗುತ್ತವೆಯೋ ಅಲ್ಲಿ ಮಾತ್ರ ಅವು ಬೆಳೆಯುತ್ತವೆ. ಒಂದು ಕನಸಿನ ಈಡೇರಿಕೆ ದೊಡ್ಡ ಕನಸಿಗೆ ದಾರಿ ತೆರೆಯುತ್ತದೆ. ಇಂದು ಭಾರತದಲ್ಲಿ ನಿಖರವಾಗಿ ಇದೇ ಆಗುತ್ತಿದೆ. ಭಾರತದ ಯುವಕರ ಅಸಹನೆಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ನಾನು ಅವರಿಗೆ ಒಂದು ವಿಷಯ ಹೇಳಲು ಬಯಸುತ್ತೇನೆ – ನಿಮ್ಮ ಕನಸುಗಳನ್ನು ನಾನು ಪುನರಾವರ್ತಿಸುತ್ತೇನೆ, ನನ್ನ ಯುವ ಸ್ನೇಹಿತರ ಕನಸುಗಳು ಮೋದಿಯವರ ಸಂಕಲ್ಪವಾಗಿದೆ! ಯಶಸ್ಸಿನತ್ತ ನೀವು ಇಡುವ ಪ್ರತಿಯೊಂದು ಹೆಜ್ಜೆಯೂ ನನ್ನ ಸ್ಫೂರ್ತಿ. ಹೌದು, ವೈಫಲ್ಯ ಎದುರಾದಾಗ ನಿರಾಶೆಗೊಳ್ಳುವ ಅಗತ್ಯವಿಲ್ಲ. ಪ್ರತಿ ವೈಫಲ್ಯವು ನಮಗೆ ಏನನ್ನಾದರೂ ಕಲಿಸುತ್ತದೆ. ನಾನು ಯಾವಾಗಲೂ ಕ್ರೀಡಾ ಜಗತ್ತಿನಲ್ಲಿರುವವರಿಗೆ ಹೇಳುತ್ತೇನೆ – ನೀವು ಮೈದಾನಕ್ಕೆ ಕಾಲಿಟ್ಟಾಗ ಯಾರೂ ಸೋಲುವುದಿಲ್ಲ. ಒಬ್ಬರು ಗೆಲ್ಲುತ್ತಾರೆ, ಇನ್ನೊಬ್ಬರು ಕಲಿಯುತ್ತಾರೆ. ಯಾರೂ ಸೋಲುವುದಿಲ್ಲ. ಯುವ ಮನಸ್ಸಿನ ನಿಜವಾದ ಅಳತೆಯೆಂದರೆ ವೈಫಲ್ಯಗಳಿಂದ ನಿರಂತರವಾಗಿ ಕಲಿಯುವುದು, ಕನಸುಗಳನ್ನು ನನಸಾಗಿಸುವುದು ಮತ್ತು ಪ್ರತಿ ಸಾಧನೆಯ ನಂತರ, ಹೊಸ ಕನಸುಗಳಿಗೆ ಜನ್ಮ ನೀಡುವುದು. ನನಗೆ ಭಾರತದ ಯುವಕರ ಶಕ್ತಿಯ ಮೇಲೆ ನಂಬಿಕೆ ಇದೆ. ನಾನು ಭಾರತದ ಉದ್ಯಮಶೀಲತೆಯನ್ನು ನಂಬುತ್ತೇನೆ. ಈ ನಂಬಿಕೆಯೊಂದಿಗೆ, ಮತ್ತೊಮ್ಮೆ, ನಾನು ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. 2047ರ ಹೊತ್ತಿಗೆ ರಾಷ್ಟ್ರವು ಸ್ವಾತಂತ್ರ್ಯದ 100 ವರ್ಷಗಳನ್ನು ಆಚರಿಸುವಾಗ, ಭಾರತವು ಅಭಿವೃದ್ಧಿ ಹೊಂದುತ್ತದೆ. ಇದು ನಮ್ಮ ಕನಸು, ಇದು ನಮ್ಮ ಸಂಕಲ್ಪ. ನನ್ನ ಯುವ ಸ್ನೇಹಿತರೆ, ನಾವು ಇದನ್ನು ನಮ್ಮ ಸ್ವಂತ ಕಣ್ಣುಗಳಿಂದ ನೋಡುತ್ತೇವೆ ಎಂದು ನಾನು ನಂಬುತ್ತೇನೆ – ನಾವು ಅಭಿವೃದ್ಧಿ ಹೊಂದಿದ ಭಾರತವನ್ನು ನಾವೇ ನೋಡುತ್ತೇವೆ. ತುಂಬು ಧನ್ಯವಾದಗಳು. ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳು.
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
Through PM Viksit Bharat Rozgar Yojana, we are supporting employment generation, empowering youth and building a stronger workforce for the future.
— Narendra Modi (@narendramodi) June 19, 2026
https://t.co/UzweKrA6nk
PM Viksit Bharat Rozgar Yojana is about empowering first-time employees and building a bridge between youth and industry. pic.twitter.com/hlhr9u9Xh8
— PMO India (@PMOIndia) June 19, 2026
The aspirations, skills and potential of our youth shape the path to a Viksit Bharat. pic.twitter.com/wmWpy7GtnS
— PMO India (@PMOIndia) June 19, 2026
India's youth will be at the forefront of driving global growth, innovation and entrepreneurship in the years to come. pic.twitter.com/C96TwqjWjL
— PMO India (@PMOIndia) June 19, 2026
India is set to lead from the front. pic.twitter.com/WkZZoTHbh3
— PMO India (@PMOIndia) June 19, 2026
In the 21st century, opportunities will belong to nations that nurture skilled talent, foster innovation and uphold the highest standards of quality. pic.twitter.com/aU2GZ7HKu9
— PMO India (@PMOIndia) June 19, 2026
To compete globally, we must meet the highest quality standards. pic.twitter.com/GzHwzUnJXb
— PMO India (@PMOIndia) June 19, 2026