Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಕಸಿತ ರೋಮಾಂಚಕ ಗ್ರಾಮ ಕಾರ್ಯಕ್ರಮ 2026 ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ವಿಕಸಿತ ರೋಮಾಂಚಕ ಗ್ರಾಮ ಕಾರ್ಯಕ್ರಮ 2026 ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ


ಸ್ನೇಹಿತರೆ,

ಇಂದು ನಿಮ್ಮೆಲ್ಲರೊಂದಿಗೆ ಮಾತನಾಡುತ್ತಿರುವುದು ಅದ್ಭುತವಾಗಿದೆ. ಕೇಂದ್ರ ಸಂಪುಟ ಸಹೋದ್ಯೋಗಿ ಮನ್ಸುಖ್ ಮಾಂಡವಿಯಾ ಜಿ, ಸಚಿವೆ ರಕ್ಷಾ ಖಡ್ಸೆ ಜಿ ಮತ್ತು ದೇಶಾದ್ಯಂತದ ಯುವ ಜನರು ನಮ್ಮೊಂದಿಗೆ ಸೇರಿದ್ದಾರೆ.

ಈ ಕಾರ್ಯಕ್ರಮ ನಿಜಕ್ಕೂ ವಿಶೇಷವಾಗಿದೆ. ಭಾರತದ ಸುಮಾರು 250 ಜಿಲ್ಲೆಗಳ ಯುವಕರು ಈ ಕಾರ್ಯಕ್ರಮದೊಂದಿಗೆ ಸಂಪರ್ಕ ಹೊಂದಿದ್ದಾರೆ, ನಾನು ನಿಮ್ಮೆಲ್ಲರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ.

ಸ್ನೇಹಿತರೆ,

ಕೆಲವು ವರ್ಷಗಳ ಹಿಂದೆ, ನಾವು ಮೈ ಭಾರತ್ ವೇದಿಕೆಯನ್ನು ರೂಪಿಸಿದ್ದೇವೆ. ಇಂದು ದೇಶಾದ್ಯಂತ ಲಕ್ಷಾಂತರ ಯುವಕರು ಇದರ ಭಾಗವಾಗಿದ್ದು, ಅವರು ಶ್ಲಾಘನೀಯ ಕೆಲಸ ಮಾಡುತ್ತಿದ್ದಾರೆ. ವಿಕಸಿತ ಭಾರತ ಸಂವಾದದಿಂದ ಹಿಡಿದು ರೋಮಾಂಚಕ ಗ್ರಾಮ ಕಾರ್ಯಕ್ರಮದವರೆಗೆ, ನೀವು ನಿಮ್ಮ ಶಕ್ತಿ ಮತ್ತು ಸಾಮರ್ಥ್ಯವನ್ನು ತೋರಿಸಿದ್ದೀರಿ.

ಸ್ನೇಹಿತರೆ,

ಯುವ ನಾಯಕರು ಸಂವಾದ ಸಮಯದಲ್ಲಿ ನಾನು ಒಂದು ವಿಚಾರ ಹಂಚಿಕೊಂಡೆ: ವರ್ಚುವಲ್ ಆಗಿ ಮಾತ್ರ ಸಂಪರ್ಕಿಸುವ ಬದಲು, ಏಕೆ ನೆಲಕ್ಕೆ ಕಾಲಿಡಬಾರದು, ಭಾರತವನ್ನು ಅನುಭವಿಸಬಾರದು, ಭಾರತದಲ್ಲಿ ವಾಸಿಸಬಾರದು ಮತ್ತು ಭಾರತವನ್ನು ಅರ್ಥ ಮಾಡಿಕೊಳ್ಳಬಾರದು? ಹಳ್ಳಿಗಳಲ್ಲಿ ಅಭಿವೃದ್ಧಿಯ ಆಕಾಂಕ್ಷೆಗಳನ್ನು ನೇರವಾಗಿ ಭೇಟಿ ಮಾಡುವ ಮೂಲಕ ಮಾತ್ರ ಅನುಭವಿಸಬಹುದು. ನಮ್ಮ ಗಡಿ ಹಳ್ಳಿಗಳಲ್ಲಿ, ಪ್ರಗತಿಯ ಬಯಕೆಯು ಆಳವಾದ ದೇಶಭಕ್ತಿಯಿಂದ ಹೊಂದಿಕೆಯಾಗುತ್ತದೆ. ಆಗಾಗ್ಗೆ, ಅವರಿಗೆ ರಾಷ್ಟ್ರವು ಮೊದಲು ಬರುತ್ತದೆ ಮತ್ತು ವೈಯಕ್ತಿಕ ಸೌಕರ್ಯಗಳು ನಂತರ ಬರುತ್ತದೆ ಎಂದು ಅನಿಸುತ್ತದೆ.

ಅದಕ್ಕಾಗಿಯೇ ವಿವಿಧ ಜಿಲ್ಲೆಗಳ ಯುವಕರು ಹಿಮಾಚಲ, ಉತ್ತರಾಖಂಡ ಮತ್ತು ಲಡಾಖ್‌ನ ಹಳ್ಳಿಗಳಿಗೆ ಪ್ರಯಾಣಿಸುವುದು ನಮ್ಮ ಉದ್ದೇಶವಾಗಿತ್ತು. ಜನರು ಹೇಗೆ ವಾಸಿಸುತ್ತಾರೆ, ಅವರು ಏನು ತಿನ್ನುತ್ತಾರೆ, ಅವರು ಹೇಗೆ ಕೆಲಸ ಮಾಡುತ್ತಾರೆ, ಅವರ ಸಂಸ್ಕೃತಿ, ಅವರ ಜೀವನ ವಿಧಾನ, ಅವರ ಸವಾಲುಗಳನ್ನು ನೋಡಲು. ದೇಶದ ಮೊದಲ ಹಳ್ಳಿಗಳಲ್ಲಿರುವ ಜನರು ದೇಶದ ಭದ್ರತೆಗಾಗಿ ಹೇಗೆ ಜಾಗರೂಕರಾಗಿರುತ್ತಾರೆ, ಭಾರತದ ಉಳಿದ ಭಾಗಗಳೊಂದಿಗೆ ಅವರ ಬಾಂಧವ್ಯ ಎಷ್ಟು ನಿಕಟವಾಗಿದೆ ಎಂಬುದನ್ನು ವೀಕ್ಷಿಸವುದು ಇದರ ಉದ್ದೇಶವಾಗಿತ್ತು. ಈ ಅನುಭವ ನಮ್ಮ ಯುವಕರಿಗಾಗಿಯೇ ಇತ್ತು. ತೋರಿಸಲಾದ ಉತ್ಸಾಹ ಅಸಾಧಾರಣವಾಗಿತ್ತು. ಸುಮಾರು 300,000 ಯುವಕರು ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು, 400ಕ್ಕೂ ಹೆಚ್ಚು ಯುವಕರು ಆಯ್ಕೆಯಾದರು. ನೀವು ಈ ದೂರದ ಹಳ್ಳಿಗಳಲ್ಲಿ ಒಂದು ವಾರ ತಂಗಿದ್ದೀರಿ – ಇವೆಲ್ಲಾ ನಿಮಗೆ ತಿಳಿದಿಲ್ಲದ ಸ್ಥಳಗಳು. ನೀವು ಆ ಜನರ ಜೀವನ ನೋಡಲು ಪ್ರಯತ್ನಿಸಿದ್ದೀರಿ, ಅವರ ಸಂಸ್ಕೃತಿಯಲ್ಲಿ ಬೆರೆತುಕೊಂಡಿದ್ದೀರಿ, ನಿಮ್ಮ ಸ್ವಂತ ಸಂಪ್ರದಾಯಗಳನ್ನು ಅವರ ಜೊತೆ ಸಂಪರ್ಕಿಸಿದ್ದೀರಿ. ಇದು ಬಹುಶಃ ಏಕ ಭಾರತ ಶ್ರೇಷ್ಠ ಭಾರತದ ಅತ್ಯುತ್ತಮ ಉದಾಹರಣೆಯಾಗಿದೆ.

ಸ್ನೇಹಿತರೆ,

ಈ ಕಾರ್ಯಕ್ರಮ ನನಗೆ ವೈಯಕ್ತಿಕವಾಗಿಯೂ ವಿಶೇಷವಾಗಿದೆ. ನಾನು ಸರ್ಕಾರ ಮತ್ತು ರಾಜಕೀಯದಿಂದ ದೂರವಿದ್ದಾಗ, ನಾನು ಆಗಾಗ್ಗೆ ಅಂತಹ ಗಡಿ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದೆ. ನಾನು ಅವರಲ್ಲಿ ಹಲವರೊಂದಿಗೆ ದೀರ್ಘಕಾಲದ ಸಂಪರ್ಕ ಬೆಳೆಸಿಕೊಂಡಿದ್ದೇನೆ. ಸರ್ಕಾರಕ್ಕೆ ಸೇರಿದ ನಂತರವೂ, ಗಡಿ ಗ್ರಾಮಗಳಿಗೆ ಭೇಟಿ ನೀಡುವ ಅವಕಾಶವನ್ನು ನಾನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಕಳೆದ 25 ವರ್ಷಗಳಿಂದ, ನಾನು ನಮ್ಮ ವೀರ ಸೈನಿಕರೊಂದಿಗೆ ಗಡಿಯಲ್ಲಿ ದೀಪಾವಳಿ ಆಚರಿಸಿದ್ದೇನೆ ಎಂಬುದು ನಿಮಗೆಲ್ಲರಿಗೂ ತಿಳಿದಿದೆ. ನೀವು ಭೇಟಿ ನೀಡಿದ ಕೆಲವು ಹಳ್ಳಿಗಳು ನನಗೆ ನನ್ನವೇ ಆದವು. ನೀವು ನಿಮ್ಮ ಅನುಭವಗಳನ್ನು ವಿವರಿಸಿದಂತೆ, ನಾನು ಆ ಹಳೆಯ ನೆನಪುಗಳನ್ನು ಸ್ಪಷ್ಟವಾಗಿ ನೋಡಬಲ್ಲೆ. ನಿಮ್ಮ ಅನುಭವಗಳು ಅಷ್ಟೇ ಸ್ಫೂರ್ತಿದಾಯಕವಾಗಿದ್ದವು. ಕೆಲವರು ಎತ್ತರದ ಪರ್ವತ ಶ್ರೇಣಿಗಳ ರೋಮಾಂಚನದ ಬಗ್ಗೆ ಮಾತನಾಡಿದರು, ಇತರರು ಗಡಿ ಗ್ರಾಮಸ್ಥರ ಪ್ರೀತಿ ಮತ್ತು ವಾತ್ಸಲ್ಯದ ಬಗ್ಗೆ, ಮಕ್ಕಳ ಕೆಲವು ಕನಸುಗಳ ಬಗ್ಗೆ ಮಾತನಾಡಿದರು. ಕೆಲವರು ನಮ್ಮ ಸೈನ್ಯದ ಧೈರ್ಯ ಮತ್ತು ಶಿಸ್ತಿಗೆ ಸಾಕ್ಷಿಯಾದರು. ನಿಜವಾಗಿಯೂ, ರೋಮಾಂಚಕ ಗ್ರಾಮ ಅನುಭವ ಗಮನಾರ್ಹವಾಗಿತ್ತು. ಕಾಕತಾಳೀಯವಾಗಿ, ಇಂದು ಕಾರ್ಗಿಲ್ ವಿಜಯ್ ದಿವಸ್. ನಿಮ್ಮಲ್ಲಿ ಹಲವರು ಕಾರ್ಗಿಲ್ ಸುತ್ತಮುತ್ತಲ ಪ್ರದೇಶಗಳಿಗೆ ಭೇಟಿ ನೀಡಿದ್ದೀರಿ, ಅಲ್ಲಿ ನಮ್ಮ ವೀರ ಸೈನಿಕರು ಅತ್ಯಂತ ಸವಾಲಿನ ಪರಿಸ್ಥಿತಿಗಳಲ್ಲಿ ಜಯ ಗಳಿಸಿದರು. ನೀವು ಇದನ್ನು ನಿಮ್ಮ ಸ್ವಂತ ಕಣ್ಣುಗಳಿಂದ ನೋಡಿದ್ದೀರಿ. ಈ ಕಾರ್ಯಕ್ರಮದ ಭಾಗವಾಗಿದ್ದಕ್ಕಾಗಿ ಮತ್ತು ಅಂತಹ ಉತ್ಕೃಷ್ಟ ಅನುಭವಗಳನ್ನು ಪಡೆದಿದ್ದಕ್ಕಾಗಿ ನಿಮ್ಮೆಲ್ಲರನ್ನು ನಾನು ಅಭಿನಂದಿಸುತ್ತೇನೆ.

ಸ್ನೇಹಿತರೆ,

ಅಭಿವೃದ್ಧಿ ಹೊಂದಿದ ಗ್ರಾಮವು ಅಭಿವೃದ್ಧಿ ಹೊಂದಿದ ಭಾರತದ ಅಡಿಪಾಯವಾಗಿದೆ. ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸುವ ಪ್ರಯಾಣವು ನಿರಂತರವಾಗಿದೆ. ಈ ಪ್ರಯಾಣದಲ್ಲಿ, ಯುವಕರ ಪಾತ್ರವು ಅಪಾರವಾಗಿದೆ. ಯುವಕರು ನೆಲದೊಂದಿಗೆ ಸಂಪರ್ಕ ಸಾಧಿಸಿದಾಗ, ಅವರು ಅಭಿವೃದ್ಧಿ ಹೊಂದಿದ ಭಾರತದ ದೃಷ್ಟಿಕೋನವನ್ನು ವಿಸ್ತರಿಸುತ್ತಾರೆ. ಇದು ರಾಷ್ಟ್ರಕ್ಕಾಗಿ ಬದುಕುವ ಮತ್ತು ಅದಕ್ಕೆ ಕೊಡುಗೆ ನೀಡುವ ಅವರ ಸಂಕಲ್ಪವನ್ನು ಬಲಪಡಿಸುತ್ತದೆ.

ಸ್ನೇಹಿತರೆ,

ಈ ಅಭಿಯಾನದಲ್ಲಿ ಗಡಿ ಹಳ್ಳಿಗಳಲ್ಲಿ ಜೀವನ ಎಷ್ಟು ಕಷ್ಟಕರವಾಗಿದೆ ಎಂಬುದನ್ನು ನೀವು ಅನುಭವಿಸಿರಬೇಕು. ಆದರೂ, ಪ್ರತಿಯೊಂದು ಕಷ್ಟದ ಹೊರತಾಗಿಯೂ, ಈ ಹಳ್ಳಿಗಳ ಜನರು ಪ್ರತಿ ಕ್ಷಣವನ್ನೂ ದೇಶಭಕ್ತಿಯಿಂದ ಬದುಕುತ್ತಾರೆ. ಕೆಲವು ವರ್ಷಗಳ ಹಿಂದಿನವರೆಗೂ ಗಡಿ ಗ್ರಾಮಗಳನ್ನು “ಕೊನೆಯ ಅಥವಾ ಅನತಿ ದೂರದ ಹಳ್ಳಿಗಳು” ಎಂದು ಕರೆಯಲಾಗುತ್ತಿತ್ತು, ಅವುಗಳನ್ನು ಅವುಗಳ ಹಣೆಬರಹಕ್ಕೆ ಬಿಡಲಾಗುತ್ತಿತ್ತು. ರಸ್ತೆಗಳು, ವಿದ್ಯುತ್, ನೀರು, ಶಾಲೆಗಳು, ಆಸ್ಪತ್ರೆಗಳು – ಎಲ್ಲಾ ಮೂಲಭೂತ ಸೌಲಭ್ಯಗಳು ಇರಲಿಲ್ಲ. ನೀವು ಅಲ್ಲಿನ ಜನರಿಂದ ಇಂತಹ ಅನೇಕ ಕಥೆಗಳನ್ನು ಕೇಳಿರಬಹುದು. ಅವರು ಹಿಂದಿನ ಪರಿಸ್ಥಿತಿಗಳ ಬಗ್ಗೆ ನಿಮಗೆ ಹೇಳಿರಬೇಕು. ಅಂತಹ ಸಂದರ್ಭಗಳಲ್ಲಿಯೂ ಸಹ, ಅವರ ದೇಶಭಕ್ತಿ ಎಂದಿಗೂ ದುರ್ಬಲಗೊಂಡಿಲ್ಲ, ಸ್ವಲ್ಪವೂ ದುರ್ಬಲವಾಗಿಲ್ಲ ಎಂಬುದನ್ನು ತಿಳಿದು ನಾವು ಹೆಮ್ಮೆಪಡಬೇಕು.

ಅದಕ್ಕಾಗಿಯೇ ಸ್ನೇಹಿತರೆ,

ನಮ್ಮ ಸರ್ಕಾರ ಈ ಗಡಿ ಗ್ರಾಮಗಳನ್ನು ದೇಶದ ಮೊದಲ ಹಳ್ಳಿಗಳೆಂದು ಪರಿಗಣಿಸಿದೆ. ಬೆಳಗಿನ ಸೂರ್ಯ ಭಾರತವನ್ನು ಸ್ವಾಗತಿಸುವ ಮತ್ತು ಕೊನೆಯ ಕಿರಣಗಳು ಶುಭರಾತ್ರಿ ಕೋರುವ ಮೊದಲ ಹಳ್ಳಿಗಳು ಇವಾಗಿವೆ. ತ್ರಿವರ್ಣ ಧ್ವಜವು ಮೊದಲು ಗಾಳಿಯೊಂದಿಗೆ ಸಂಭಾಷಿಸುವ ಸ್ಥಳ. ಜಗತ್ತು ಭಾರತವನ್ನು ಮೊದಲ ಬಾರಿಗೆ ನೋಡುವ ಸ್ಥಳ ಇವಾಗಿವೆ. ಚಿಂತನೆಯಲ್ಲಿನ ಈ ಬದಲಾವಣೆಯು ನಮ್ಮ ಗಡಿ ಪ್ರದೇಶಗಳನ್ನು ಪರಿವರ್ತಿಸಿದೆ. ಅನೇಕ ಹಳ್ಳಿಗಳಲ್ಲಿ, ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ವಿದ್ಯುತ್ ತಲುಪಿದೆ, ರಸ್ತೆಗಳು ಮೊದಲ ಬಾರಿಗೆ ತಲುಪಿವೆ, ನಲ್ಲಿ ನೀರು ಮೊದಲ ಬಾರಿಗೆ ಮನೆಗಳನ್ನು ತಲುಪಿದೆ, ಅನಿಲ ಸಂಪರ್ಕಗಳು ಮೊದಲ ಬಾರಿಗೆ ಅಡುಗೆ ಮನೆಗಳನ್ನು ತಲುಪಿವೆ. ನಗರಗಳಲ್ಲಿ ಇವು ಸಾಮಾನ್ಯವೆಂದು ತೋರುತ್ತದೆ, ಆದರೆ ಆ ಜನರಿಗೆ, ಅವು ಸಂಪೂರ್ಣ ಜೀವನವನ್ನೇ ಬದಲಾಯಿಸುತ್ತವೆ. ರೈತರು ಮತ್ತು ತೋಟದ ಮಾಲೀಕರು ಈಗ ಹಣ್ಣುಗಳು ಮತ್ತು ತರಕಾರಿಗಳನ್ನು ದೊಡ್ಡ ಮಾರುಕಟ್ಟೆಗಳಿಗೆ ಕೊಂಡೊಯ್ಯುವುದು ಸುಲಭವೆಂದು ಕಂಡುಕೊಂಡಿದ್ದಾರೆ. ಉತ್ತಮ ಸಂಪರ್ಕ ಎಂದರೆ ಜೀವನವು ಇನ್ನು ಮುಂದೆ ನಿಲ್ಲುವುದಿಲ್ಲ – ಅದು ನಿರಂತರವಾಗಿ ಚಲಿಸುತ್ತದೆ. ಈ ದೂರದ ಹಳ್ಳಿಗಳಲ್ಲಿಯೂ ಸಹ, ಅತ್ಯುತ್ತಮ ಇಂಟರ್ನೆಟ್ ಸಂಪರ್ಕ ಈಗ ಲಭ್ಯವಿದೆ ಎಂಬುದನ್ನು ನೀವು ನೋಡಿರಬೇಕು. ನೀವು ಅದನ್ನು ತುಂಬಾ ಸಂತೋಷದಿಂದ ವಿವರಿಸಿದ್ದೀರಿ.

ಸ್ನೇಹಿತರೆ,

ಪ್ರತಿಯೊಂದು ಸೌಲಭ್ಯಕ್ಕೂ ಮತ್ತೊಂದು ಪ್ರಯೋಜನವಿದೆ – ಈ ಪ್ರದೇಶಗಳಲ್ಲಿ ಪ್ರವಾಸೋದ್ಯಮವು ಅಭಿವೃದ್ಧಿ ಹೊಂದುತ್ತಿದೆ. ನಿರ್ಜನವಾಗಿದ್ದ ಹಳ್ಳಿಗಳು ಈಗ ಮತ್ತೆ ಉತ್ಸಾಹಭರಿತವಾಗಿವೆ. ಹೆಣ್ಣು ಮಕ್ಕಳು ಶಾಲಾ ಕಾಲೇಜುಗಳಿಗೆ ಹೋಗುತ್ತಿದ್ದಾರೆ. ಶಿಕ್ಷಣ ಮತ್ತು ಗಳಿಕೆಗೆ ಉತ್ತಮ ವಾತಾವರಣ ಸೃಷ್ಟಿಯಾಗುತ್ತಿದೆ. ರೋಮಾಂಚಕ ಗ್ರಾಮ ಕಾರ್ಯಕ್ರಮವು ಈ ಅಭಿವೃದ್ಧಿಯನ್ನು ಮತ್ತಷ್ಟು ವೇಗಗೊಳಿಸುತ್ತಿದೆ.

ಸ್ನೇಹಿತರೆ,

ಅಭಿವೃದ್ಧಿ ಹೊಂದಿದ ರೋಮಾಂಚಕ ಹಳ್ಳಿಗಳ ಪ್ರಯಾಣವು ಎಲ್ಲರನ್ನೂ ಸಂಪರ್ಕಿಸುವ ಪ್ರಬಲ ಮಾಧ್ಯಮವಾಗಿದೆ. ಈಗ ನಿಮ್ಮ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿದೆ. ನಿಮ್ಮ ಪ್ರಯಾಣವು ಭಾಗವಹಿಸುವಿಕೆಯ ಮೂಲಕ ಏಕತೆಯ ಪ್ರಯಾಣವಾಗಿದೆ. ಭಾರತದ ಯುವಕರು ಗಡಿ ಹಳ್ಳಿಗಳನ್ನು ಹೆಚ್ಚು ತಿಳಿದುಕೊಂಡಷ್ಟೂ ಅವರು ಭಾರತವನ್ನು ಸುಲಭವಾಗಿ ತಿಳಿದುಕೊಳ್ಳುತ್ತಾರೆ, ಭಾರತದ ಪ್ರತಿಯೊಂದು ಮೂಲೆಯೊಂದಿಗೆ ಸಂಪರ್ಕ ಸಾಧಿಸುತ್ತಾರೆ, ರಾಷ್ಟ್ರವನ್ನು ಬಲಪಡಿಸುತ್ತಾರೆ. ನೆನಪಿಡಿ, ಆ ಹಳ್ಳಿಗಳಲ್ಲಿ ನಿಮಗಾಗಿ ಯಾವುದೇ ಅತಿಥಿ ಗೃಹಗಳು ಅಥವಾ ಹೋಟೆಲ್‌ಗಳು ಇರಲಿಲ್ಲ. ಇಡೀ ಗ್ರಾಮವೇ ನಿಮ್ಮ ಆತಿಥೇಯವಾಯಿತು. ನಿಮ್ಮ ವಾಸ್ತವ್ಯವು ಕೇವಲ ವಸತಿಯ ಬಗ್ಗೆ ಅಲ್ಲ – ಅದು ಸಾಂಸ್ಕೃತಿಕ ತರಗತಿಯಾಯಿತು. ನೀವು ಸೌಲಭ್ಯಗಳಿಗಿಂತ ಹೆಚ್ಚಿನ ತೃಪ್ತಿ ಮತ್ತು ಗೌರವವನ್ನು ಪಡೆದುಕೊಂಡಿದ್ದೀರಿ. ನೀವು ಅನುಭವಿಸಿದ್ದನ್ನು ಯಾವುದೇ ತರಗತಿಯಲ್ಲಿ ಕಲಿಯಲು ಸಾಧ್ಯವಿಲ್ಲ. ಈ ಅನುಭವಗಳನ್ನು ಇತರ ಯುವಕರೊಂದಿಗೆ ಹಂಚಿಕೊಳ್ಳಿ. ಗಡಿ ಹಳ್ಳಿಗಳಿಗೆ ಭೇಟಿ ನೀಡಲು ಅವರನ್ನು ಪ್ರೇರೇಪಿಸಿ. ಹೆಚ್ಚು ಯುವಕರು ಅಲ್ಲಿಗೆ ಹೋಗಿ ಅಲ್ಲಿಯೇ ಉಳಿದಂತೆ, ಅವರು ರಾಷ್ಟ್ರವನ್ನು ನೋಡುತ್ತಾರೆ ಮತ್ತು ಅರ್ಥ ಮಾಡಿಕೊಳ್ಳುತ್ತಾರೆ. ಜನರು ಭೇಟಿ ನೀಡಲು ಪ್ರಾರಂಭಿಸಿದಾಗ, ಸೌಲಭ್ಯಗಳು ಆ ಹಳ್ಳಿಗಳನ್ನು ಇನ್ನಷ್ಟು ವೇಗವಾಗಿ ತಲುಪುತ್ತವೆ.

ಸ್ನೇಹಿತರೆ,

ನಮ್ಮ ಸರ್ಕಾರ ಗಡಿ ಹಳ್ಳಿಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತಿದೆ. ನೀವು ಈ ಪ್ರಯತ್ನಗಳನ್ನು ವಿಸ್ತರಿಸಬಹುದು. ನಿಮ್ಮಲ್ಲಿ ಪ್ರತಿಯೊಬ್ಬರೂ ಕನಿಷ್ಠ 100 ಇತರೆ ಯುವಕರೊಂದಿಗೆ ನಿಮ್ಮ ಅನುಭವಗಳನ್ನು ಹಂಚಿಕೊಳ್ಳಲು ನಾನು ಒತ್ತಾಯಿಸುತ್ತೇನೆ. ನಿಮ್ಮ ಪ್ರದೇಶದ ಜನರೊಂದಿಗೆ ಸಂಪರ್ಕದಲ್ಲಿರಿ. ನೀವು ಅಲ್ಲಿ ಫೋಟೊಗಳು ಅಥವಾ ವೀಡಿಯೊಗಳನ್ನು ತೆಗೆದುಕೊಂಡಿದ್ದರೆ, ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಿ. ಪ್ರಕೃತಿ ಮತ್ತು ಸಂಸ್ಕೃತಿಯನ್ನು ಉತ್ತೇಜಿಸಲು ಸ್ಥಳೀಯ ವಿಷಯ ರಚನೆಕಾರರೊಂದಿಗೆ ಸಹಕರಿಸಿ. ನೀವು ಸ್ಥಳೀಯ ಉತ್ಪನ್ನಗಳನ್ನು ನೋಡಿದ್ದರೆ, ನಿಮ್ಮ ಪ್ರದೇಶದಲ್ಲಿ ಅವುಗಳನ್ನು ಹೇಗೆ ಪ್ರಚಾರ ಮಾಡುವುದು ಎಂಬುದರ ಕುರಿತು ಯೋಚಿಸಿ. ಇಂಟರ್ನೆಟ್‌ನಲ್ಲಿ ಸಾಕಷ್ಟು ಮಾಹಿತಿ ಇದೆ, ಆದರೆ ನೀವು ಈ ಹಳ್ಳಿಗಳ ಬಗ್ಗೆ ಅಧಿಕೃತ ಜ್ಞಾನವನ್ನು ಹಂಚಿಕೊಳ್ಳಬಹುದು. ನಿಮ್ಮ ಸ್ನೇಹಿತರು ಮತ್ತು ಕುಟುಂಬದೊಂದಿಗೆ ಈ ಹಳ್ಳಿಗಳಿಗೆ ಮತ್ತೆ ಭೇಟಿ ನೀಡಿ. ಗಡಿ ಗ್ರಾಮಗಳಿಗೆ ಶೈಕ್ಷಣಿಕ ಪ್ರವಾಸಗಳನ್ನು ಆಯೋಜಿಸಲು ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಸಹ ನಾನು ಪ್ರೋತ್ಸಾಹಿಸುತ್ತೇನೆ.

ಸ್ನೇಹಿತರೆ,

ನಿಮ್ಮಂತಹ ಭಾರತದ ಯುವಕರು 21ನೇ ಶತಮಾನದ ಜಗತ್ತನ್ನು ರೂಪಿಸುತ್ತಾರೆ ಎಂಬುದನ್ನು ನಾನು ಯಾವಾಗಲೂ ದೃಢವಾಗಿ ನಂಬಿದ್ದೇನೆ. ಇದು ಭಾರತದ ಯುವಕರ ನಿಜವಾದ ಹಣೆಬರಹ. ಇಂದಿನ ಯುವಕರು ಅಭಿವೃದ್ಧಿ ಹೊಂದಿದ ಭಾರತದ ಶಕ್ತಿ ಮತ್ತು ಅದರ ಶ್ರೇಷ್ಠ ಫಲಾನುಭವಿಗಳು. ಯುವ ಶಕ್ತಿಯು ದೇಶದ ಸವಾಲುಗಳು ಮತ್ತು ಪರಿಹಾರಗಳೊಂದಿಗೆ ನೇರವಾಗಿ ಸಂಪರ್ಕ ಸಾಧಿಸಿದಾಗ, ಭವಿಷ್ಯವು ಖಂಡಿತವಾಗಿಯೂ ಉಜ್ವಲವಾಗಿರುತ್ತದೆ. ಈ ಮನೋಭಾವದಿಂದ, ನಾನು ಮತ್ತೊಮ್ಮೆ ನಿಮ್ಮೆಲ್ಲರಿಗೂ ನನ್ನ ಶುಭಾಶಯಗಳನ್ನು ಕೋರುತ್ತೇನೆ.

ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****