Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಂಧ್ರಪ್ರದೇಶದಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಆಂಧ್ರಪ್ರದೇಶದಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ


ಭಾರತ್ ಮಾತಾ ಕೀ ಜೈ.

ಭಾರತ್ ಮಾತಾ ಕೀ ಜೈ.

ಭಾರತ್ ಮಾತಾ ಕೀ ಜೈ.

ಆಂಧ್ರಪ್ರದೇಶದ ರಾಜ್ಯಪಾಲರಾದ ಅಬ್ದುಲ್ ನಜೀರ್ ಜಿ, ಗೋವಾ ರಾಜ್ಯಪಾಲ ಹಾಗೂ ಈ ಮಣ್ಣಿನ ಮಗ ಅಶೋಕ್ ಗಜಪತಿ ರಾಜು, ಮುಖ್ಯಮಂತ್ರಿ ಹಾಗೂ ನನ್ನ ಸ್ನೇಹಿತರಾದ ಚಂದ್ರಬಾಬು ನಾಯ್ಡು, ಉಪಮುಖ್ಯಮಂತ್ರಿ ಸಹೋದರ ಪವನ್ ಕಲ್ಯಾಣ್ ಜಿ, ಕೇಂದ್ರ ಸಚಿವ ಸಂಪುಟದಲ್ಲಿ ಯುವ ಶಕ್ತಿ ತುಂಬಿದ ನನ್ನ ಸಹೋದ್ಯೋಗಿ ಸಹೋದರ ರಾಮ್ ಮೋಹನ್ ನಾಯ್ಡು ಜಿ, ಚಂದ್ರಶೇಖರ್ ಪೆಮ್ಮಸಾನಿ ಜಿ, ಭೂಪತಿ ರಾಜು ಶ್ರೀನಿವಾಸ ವರ್ಮಾ ಜಿ, ರಾಜ್ಯ ಸರ್ಕಾರದ ಸಚಿವರಾದ ಲೋಕೇಶ್ ಲಾಡ್ ಜಿ, ಇಲ್ಲಿರುವ ಇತರೆ ಜನಪ್ರತಿನಿಧಿಗಳೆ, ಸಾಧು ಸಜ್ಜನರೆ.

ಅಂದರಿಕಿ ನಮಸ್ಕಾರ!

ಸ್ನೇಹಿತರೆ,

ಆಂಧ್ರಪ್ರದೇಶದ ಅಭಿವೃದ್ಧಿಗೆ, ಸ್ವರ್ಣ ಆಂಧ್ರದ ದೃಷ್ಟಿಕೋನಕ್ಕೆ ಇಂದು ಬಹಳ ಮುಖ್ಯವಾದ ದಿನ. ಈ ಶುಭ ಸಂದರ್ಭದಲ್ಲಿ, ಶುಭ ತಿಂಗಳಲ್ಲಿ, ಉತ್ತರ ಆಂಧ್ರದ ಈ ಪವಿತ್ರ ಭೂಮಿಗೆ ಬರುವ ಸೌಭಾಗ್ಯ ನನಗೆ ಸಿಕ್ಕಿದೆ. ಮೊದಲನೆಯದಾಗಿ, ನಾನು ಭಗವಾನ್ ಶ್ರೀ ವರಾಹ ಲಕ್ಷ್ಮಿ ನರಸಿಂಹ ಸ್ವಾಮಿಯ ಪಾದಗಳಿಗೆ ನಮಸ್ಕರಿಸುತ್ತೇನೆ. ಶ್ರೀ ಕೂರ್ಮನಾಥ ಸ್ವಾಮಿ ಮತ್ತು ಮಾ ಪಿಡಿತಳ್ಳಿ ಅಮ್ಮನವರಿಗೆ ನನ್ನ ನಮನಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಇಂದು ಸುಮಾರು 18,000 ಕೋಟಿ ರೂಪಾಯಿ ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಗಿದೆ, ರಾಷ್ಟ್ರಕ್ಕೆ ಸಮರ್ಪಿಸಲಾಗಿದೆ ಮತ್ತು ಅವುಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ವಿಮಾನ ನಿಲ್ದಾಣದ ಜತೆಗೆ, ಈ ಯೋಜನೆಗಳು ಆಂಧ್ರದ ರಸ್ತೆ ಸಂಪರ್ಕಕ್ಕೂ ಸಂಪರ್ಕ ಹೊಂದಿವೆ. ಇಂಧನ ಭದ್ರತೆಗೆ ಸಂಬಂಧಿಸಿದ ಯೋಜನೆಗಳು ಸಹ ಇವುಗಳಲ್ಲಿ ಸೇರಿವೆ. ಈ ಅಭಿವೃದ್ಧಿ ಕಾರ್ಯಗಳು ಈ ಸಮಯದಲ್ಲಿ ಆಂಧ್ರವು ಬೆಳವಣಿಗೆ ಕಾಣುತ್ತಿರುವ ವೇಗದ ಸಂಕೇತವಾಗಿದೆ. ಈ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಇಂದಿನ ಕಾರ್ಯಕ್ರಮವು ಹೊಸ ಇತಿಹಾಸ, ಹೊಸ ದಾಖಲೆಗಳನ್ನು ಸೃಷ್ಟಿಸುವ ಬಗ್ಗೆಯೂ ಇದೆ. ಇಂದು ಒಂದೆಡೆ ಅಭಿವೃದ್ಧಿಯ ಹೊಸ ದಾಖಲೆಗಳನ್ನು ಸ್ಥಾಪಿಸಲಾಗುತ್ತಿದೆ, ಮತ್ತೊಂದೆಡೆ, ಧಿಮ್ಸಾ ನೃತ್ಯದ ಸಾಂಸ್ಕೃತಿಕ ದಾಖಲೆಯನ್ನು ಸಹ ಸ್ಥಾಪಿಸಲಾಗಿದೆ, ಚಂದ್ರಬಾಬು ಅವರು 2 ದಿಗಂತಗಳನ್ನು ಮುಟ್ಟಿದ್ದಾರೆ ಎಂಬುದು ಅವರ ವಿಶೇಷತೆ. ಒಂದೆಡೆ, ವಿಮಾನ ನಿಲ್ದಾಣ ನಿರ್ಮಾಣ – ಎತ್ತರದ ಆಗಸವನ್ನು ಮುಟ್ಟುವ ವ್ಯವಸ್ಥೆ – ಮತ್ತೊಂದೆಡೆ, ನನ್ನ ಬುಡಕಟ್ಟು ಸಹೋದರಿಯರಿಂದ ಇಲ್ಲಿ ಧಿಮ್ಸಾ ನೃತ್ಯದ ವಿಶ್ವ ದಾಖಲೆಯ ಸೃಷ್ಟಿ. ಚಂದ್ರಬಾಬು ಅವರ ಈ ದೃಷ್ಟಿಕೋನವನ್ನು ನಾನು ವಿಶೇಷವಾಗಿ ಪ್ರಶಂಸಿಸುತ್ತೇನೆ.

13 ಸಾವಿರಕ್ಕೂ ಹೆಚ್ಚು ಬುಡಕಟ್ಟು ಸಹೋದರಿಯರು ಮತ್ತು ಹೆಣ್ಣು ಮಕ್ಕಳ ಪ್ರದರ್ಶನ, ಅವರ ಉತ್ಸಾಹ, ಅವರ ಶಿಸ್ತು ಮತ್ತು ಬುಡಕಟ್ಟು ಸಂಸ್ಕೃತಿಯ ಹೆಮ್ಮೆ – ಈ ದೃಶ್ಯವು ನಿಜವಾಗಿಯೂ ಅದ್ಭುತವಾಗಿತ್ತು. ಇದರಲ್ಲಿ ದೇಶದ ವೈವಿಧ್ಯತೆಯ ಜತೆಗೆ ಪೀಳಿಗೆಯಿಂದ ಪೀಳಿಗೆಗೆ ಸಂರಕ್ಷಿಸಲ್ಪಟ್ಟ ಬುಡಕಟ್ಟು ಪರಂಪರೆಯ ಒಂದು ನೋಟವಿತ್ತು. ಈ ಪ್ರದರ್ಶನಕ್ಕಾಗಿ ನಾನು ನಿಮ್ಮೆಲ್ಲರನ್ನು, ವಿಶೇಷವಾಗಿ ನನ್ನ ಬುಡಕಟ್ಟು ಸಹೋದರಿಯರು ಮತ್ತು ಹೆಣ್ಣು ಮಕ್ಕಳನ್ನು ಅಭಿನಂದಿಸುತ್ತೇನೆ.

ಸ್ನೇಹಿತರೆ,

ಈ ಭೂಮಿ ಅಲ್ಲೂರಿ ಸೀತಾರಾಮ ರಾಜು ಅವರ ಭೂಮಿ. ಅಲ್ಲೂರಿ ಸೀತಾರಾಮ ರಾಜು ಅವರು ಬುಡಕಟ್ಟು ಹಿತಾಸಕ್ತಿಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ಭೂಮಿಯಲ್ಲಿ ಇಂದು ಆಂಧ್ರಪ್ರದೇಶದ ಹೊಸ ವಿಮಾನ ನಿಲ್ದಾಣವು ಆ ಭೂಮಿಯಲ್ಲಿ ಆರಂಭವಾಗುತ್ತಿದೆ. ಈ ವಿಮಾನ ನಿಲ್ದಾಣವು ಆಂಧ್ರ ಮತ್ತು ಉತ್ತರ ಆಂಧ್ರದ ಬೆಳವಣಿಗೆಗೆ ರನ್‌ವೇ ಆಗಿದೆ. ಆಂಧ್ರದ ಯುವಕರಿಗೆ ಉತ್ತಮ ಭವಿಷ್ಯಕ್ಕಾಗಿ ಇದು ಅನಾವರಣ ವೇದಿಕೆಯಾಗಿದೆ. ಆಂಧ್ರಪ್ರದೇಶದ ಜನರಿಗೆ ಮತ್ತು ದೇಶದ ಜನರಿಗೆ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಹಿಂದೆ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದಾಗ, ವಿಮಾನ ನಿಲ್ದಾಣಗಳ ಹೆಸರನ್ನು ಒಂದೇ ಕುಟುಂಬಕ್ಕೆ ನೀಡಲಾಗುತ್ತಿತ್ತು. ನಾವು ಈ ಸಂಪ್ರದಾಯವನ್ನು ಬದಲಾಯಿಸಿದ್ದೇವೆ. ನಾವು ಅಯೋಧ್ಯೆಯಲ್ಲಿರುವ ವಿಮಾನ ನಿಲ್ದಾಣದ ಹೆಸರನ್ನು ವಾಲ್ಮೀಕಿಯೊಂದಿಗೆ ಜೋಡಿಸಿದ್ದೇವೆ, ಪಂಜಾಬ್‌ನಲ್ಲಿರುವ ವಿಮಾನ ನಿಲ್ದಾಣದ ಹೆಸರನ್ನು ಸಂತ ರವಿದಾಸ್ ಜಿ ಅವರೊಂದಿಗೆ ಜೋಡಿಸಿದ್ದೇವೆ.

ಮತ್ತು ಸ್ನೇಹಿತರೆ,

ಈ ಹೊಸ ವಿಮಾನ ನಿಲ್ದಾಣಕ್ಕೆ ಶ್ರೀ ಅಲ್ಲೂರಿ ಸೀತಾರಾಮ ರಾಜು ಅವರ ಹೆಸರಿಡಬೇಕೆಂದು ಕೇಂದ್ರ ಎನ್‌ಡಿಎ ಸರ್ಕಾರ ನಿರ್ಧಾರ ತೆಗೆದುಕೊಂಡಿದೆ. ಆಂಧ್ರಪ್ರದೇಶದ ಯಾವ ನಾಗರಿಕ ಈ ವಿಮಾನ ನಿಲ್ದಾಣದಿಂದ ಪ್ರಯಾಣಿಸುತ್ತಾರೋ, ದೇಶದ ಮತ್ತು ಪ್ರಪಂಚದ ಯಾವ ನಾಗರಿಕ ಈ ವಿಮಾನ ನಿಲ್ದಾಣದಿಂದ ಪ್ರಯಾಣಿಸುತ್ತಾರೋ, ಅಲ್ಲೂರಿ ಸೀತಾರಾಮ ರಾಜು ಹೆಸರಿನಲ್ಲಿ ಸಾರ್ವಜನಿಕ ಸೇವೆ ಮತ್ತು ರಾಷ್ಟ್ರೀಯ ಸೇವೆಗೆ ಸ್ಫೂರ್ತಿ ಪಡೆಯುತ್ತಾರೆ.

ಸ್ನೇಹಿತರೆ,

ಕಳೆದ 12 ವರ್ಷಗಳಲ್ಲಿ ದೇಶದ ವಾಯುಯಾನ ವಲಯವು ಅಸಾಧಾರಣ ಪ್ರಗತಿ ಸಾಧಿಸಿದೆ. 2014ರ ವರೆಗೆ, ದೇಶದಲ್ಲಿ ಕೇವಲ 74 ವಿಮಾನ ನಿಲ್ದಾಣಗಳು ಕಾರ್ಯ ನಿರ್ವಹಿಸುತ್ತಿದ್ದವು. ಇಂದು ಈ ಸಂಖ್ಯೆ 166ಕ್ಕೆ ಏರಿಕೆಯಾಗಿದೆ. ವಿಮಾನ ಹಾರಾಟಗಳು ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಕಾಲವಿತ್ತು. ಎನ್‌ಡಿಎ ಸರ್ಕಾರದಲ್ಲಿ ಇಂದು ಸಣ್ಣ ಪಟ್ಟಣಗಳ ಸಾಮಾನ್ಯ ಜನರು ಸಹ ವಿಮಾನಗಳಲ್ಲಿ ಪ್ರಯಾಣಿಸುತ್ತಿದ್ದಾರೆ. 12 ವರ್ಷಗಳಲ್ಲಿ, ವಿಮಾನ ನಿಲ್ದಾಣಗಳ ಸಂಖ್ಯೆ ಹೆಚ್ಚಾಗಿದೆ, ಆದರೆ ನಮ್ಮ ಉಡಾನ್ ಯೋಜನೆಯಿಂದಾಗಿ, ಬಡ ಕುಟುಂಬಗಳು ಇಂದು ವಿಮಾನದಲ್ಲಿ ಕುಳಿತುಕೊಳ್ಳುವ ಅವಕಾಶ ಪಡೆಯುತ್ತಿದ್ದಾರೆ. ಈ ಯೋಜನೆಯು ಬಡವರಲ್ಲಿ ಬಡವರು ತಮ್ಮ ಕನಸನ್ನು ನನಸಾಗಿಸಲು ಸಹಾಯ ಮಾಡಿದೆ. ಕೆಲವೇ ದಿನಗಳ ಹಿಂದೆ ಸರ್ಕಾರವು ಉಡಾನ್ ಯೋಜನೆಯ 2ನೇ ಹಂತವನ್ನು ಪ್ರಾರಂಭಿಸಿತು. ಇದಕ್ಕಾಗಿ 29 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗುವುದು.

ಸ್ನೇಹಿತರೆ,

ದೇಶವು ವಾಯುಯಾನ ಕ್ಷೇತ್ರದಲ್ಲಿ ಮತ್ತೊಂದು ಪ್ರಮುಖ ಮೈಲಿಗಲ್ಲು ಸಾಧಿಸಿದೆ. ಕೆಲವೇ ದಿನಗಳ ಹಿಂದೆ, ಕಾಶಿಯಲ್ಲಿ ಪ್ರಾರಂಭಿಸಲಾದ ಸ್ಪೋಕ್ ವಿಮಾನ ನಿಲ್ದಾಣ ಮಾದರಿ ಇಂದು ಪಂಜಾಬ್‌ನ ಅಮೃತಸರವನ್ನು ತಲುಪಿದೆ. ಇದರಿಂದಾಗಿ, 25ಕ್ಕೂ ಹೆಚ್ಚಿನ ಅಂತಾರಾಷ್ಟ್ರೀಯ ತಾಣಗಳನ್ನು ಅಮೃತಸರದಿಂದ ಸಂಪರ್ಕಿಸಲಾಗುವುದು. ಆಂಧ್ರದ ಈ ಭೂಮಿ ಮತ್ತು ಪಂಜಾಬ್ ಜನತೆಗೆ ಈ ಸಾಧನೆಗಾಗಿ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ನಮ್ಮ ಆಂಧ್ರಪ್ರದೇಶವು ಯಾವಾಗಲೂ ಅಭಿವೃದ್ಧಿ ಹೊಂದಿದ ಭಾರತದ ಬೆಳವಣಿಗೆಯ ಎಂಜಿನ್ ಆಗಿದೆ. ಆಂಧ್ರದ ಅಭಿವೃದ್ಧಿಯತ್ತ ನಮ್ಮ ಪ್ರಯತ್ನಗಳು ಡಬಲ್ ಎಂಜಿನ್ ವೇಗದಲ್ಲಿ ಮುಂದುವರಿಯಲು, ನಾನು ಆಂಧ್ರದ ಜನರಿಂದ ಡಬಲ್ ಎಂಜಿನ್ ಸರ್ಕಾರದ ಆಶೀರ್ವಾದವನ್ನು ಕೇಳಿದ್ದೆ. ಇಂದು ಚಂದ್ರಬಾಬು ನಾಯ್ಡು ಜಿ ಅವರ ನೇತೃತ್ವದಲ್ಲಿ ಮತ್ತು ಪವನ್ ಕಲ್ಯಾಣ್ ಜಿ ಅವರ ನೇತೃತ್ವದಲ್ಲಿ, ಇಡೀ ಎನ್‌ಡಿಎ ತಂಡವು ಆಂಧ್ರಪ್ರದೇಶಕ್ಕಾಗಿ ಡಬಲ್ ವೇಗದಲ್ಲಿ ಕೆಲಸ ಮಾಡುತ್ತಿದೆ.

ಸ್ನೇಹಿತರೆ,

ಇಂದು ದೇಶವು ನಿರಂತರವಾಗಿ ನೀಲಿ ಆರ್ಥಿಕತೆಯನ್ನು ಬಲಪಡಿಸುತ್ತಿದೆ. ಈ ಇಡೀ ಪ್ರದೇಶವು ಕರಾವಳಿ ಆರ್ಥಿಕ ಕಾರಿಡಾರ್ ಆಗಿ ಅಭಿವೃದ್ಧಿ ಹೊಂದುವುದು ನಮ್ಮ ದೃಷ್ಟಿ. ಈ ಗುರಿಯೊಂದಿಗೆ, ವಿಶಾಖಪಟ್ಟಣಂನಿಂದ ಕೃಷ್ಣಪಟ್ಟಣಂವರೆಗಿನ ನಮ್ಮ ಹಳೆಯ ಬಂದರುಗಳನ್ನು ಆಧುನೀಕರಿಸಲಾಗುತ್ತಿದೆ. ಇದರ ಹೊರತಾಗಿ, ನಾವು ಮುಲಾಪೇಟ ಮತ್ತು ರಾಮಾಯಪಟ್ಟಣಂನಲ್ಲಿ ಹೊಸ ಬಂದರುಗಳನ್ನು ಸಹ ನಿರ್ಮಿಸುತ್ತಿದ್ದೇವೆ.

ಸ್ನೇಹಿತರೆ,

ಬಂದರು ಅಭಿವೃದ್ಧಿಯ ಜತೆಗೆ, ಆಂಧ್ರದಾದ್ಯಂತ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳ ಜಾಲವನ್ನು ಸಿದ್ಧಪಡಿಸಲಾಗುತ್ತಿದೆ. ವಿಶಾಖಪಟ್ಟಣ-ರಾಯಪುರ ಎಕ್ಸ್‌ಪ್ರೆಸ್‌ವೇಯಂತಹ ಯೋಜನೆಗಳು ಈ ಇಡೀ ಪ್ರದೇಶಕ್ಕೆ ವೇಗವನ್ನು ನೀಡುತ್ತಿವೆ.

ಸ್ನೇಹಿತರೆ,

ಈ ಇಡೀ ಪ್ರದೇಶವು ದೇಶದ ಪ್ರಮುಖ ಕೈಗಾರಿಕಾ ಕೇಂದ್ರಗಳೊಂದಿಗೆ ಸುಲಭವಾಗಿ ಸಂಪರ್ಕ ಸಾಧಿಸುವ ಸಲುವಾಗಿ, ಆಂಧ್ರಪ್ರದೇಶದಲ್ಲಿ ಇಂದು ಸುಮಾರು 1 ಲಕ್ಷ ಕೋಟಿ ರೂಪಾಯಿ ಮೌಲ್ಯದ ರೈಲ್ವೆ ಯೋಜನೆಗಳ ಕೆಲಸ ನಡೆಯುತ್ತಿದೆ. ರಾಜ್ಯದ ಸಂಪೂರ್ಣ ರೈಲು ಜಾಲದ ವಿದ್ಯುದೀಕರಣ ಪೂರ್ಣಗೊಂಡಿದೆ. ಇಲ್ಲಿ 70ಕ್ಕೂ ಹೆಚ್ಚು ರೈಲು ನಿಲ್ದಾಣಗಳನ್ನು ಸಹ ಆಧುನೀಕರಿಸಲಾಗುತ್ತಿದೆ.

ಸ್ನೇಹಿತರೆ,

ಇಂದು  ಪ್ರಧಾನ ಮಂತ್ರಿ ಗತಿ ಶಕ್ತಿ ರಾಷ್ಟ್ರೀಯ ಮಾಸ್ಟರ್ ಪ್ಲಾನ್ ಈ ಪ್ರದೇಶದ ಅಭಿವೃದ್ಧಿಯಲ್ಲಿ ದೊಡ್ಡ ಪಾತ್ರ ವಹಿಸುತ್ತಿದೆ. ಪ್ರಧಾನ ಮಂತ್ರಿ ಗತಿ ಶಕ್ತಿಯ ಮೂಲಕ, ಈ ಇಡೀ ಪ್ರದೇಶದಲ್ಲಿ ರೈಲು, ಬಂದರು ಮತ್ತು ವಿಮಾನ ನಿಲ್ದಾಣಗಳನ್ನು ಒಟ್ಟಿಗೆ ಸಂಪರ್ಕಿಸಲಾಗುತ್ತಿದೆ. ಈ ಆಧುನಿಕ ಸರಕು ಸಾಗಣೆ ಜಾಲವನ್ನು ಇಲ್ಲಿ ಸಿದ್ಧಪಡಿಸಿದಾಗ, ಕೈಗಾರಿಕೆಗಳು ಉತ್ತಮ ಸಂಪರ್ಕ ಪಡೆಯುತ್ತವೆ, ರೈತರು ಪ್ರಯೋಜನ ಪಡೆಯುತ್ತಾರೆ ಮತ್ತು ವ್ಯಾಪಾರ ಮಾಡುವ ಸುಲಭತೆಯೂ ಹೆಚ್ಚಾಗುತ್ತದೆ.

ಸ್ನೇಹಿತರೆ,

ಆಂಧ್ರಪ್ರದೇಶ ಯಾವಾಗಲೂ ಮುಂದಾಲೋಚನೆಯ ರಾಜ್ಯವಾಗಿದೆ. ಸಾಫ್ಟ್‌ವೇರ್, ಐಟಿ ಮತ್ತು ತಂತ್ರಜ್ಞಾನ ವಲಯದಲ್ಲಿ ಆಂಧ್ರದ ಯುವಕರು ಇಡೀ ಪ್ರಪಂಚದಾದ್ಯಂತ ತಮ್ಮ ಛಾಪು ಮೂಡಿಸಿದ್ದಾರೆ. ಅದಕ್ಕಾಗಿಯೇ ಸರ್ಕಾರವು ಇಲ್ಲಿನ ಪ್ರತಿಭೆಗಳನ್ನು ಆಂಧ್ರಪ್ರದೇಶದ ಅಭಿವೃದ್ಧಿ ಶಕ್ತಿಯೊಂದಿಗೆ ಸಂಪರ್ಕಿಸಲು ಬಯಸುತ್ತದೆ. ಆಂಧ್ರಪ್ರದೇಶ ಮತ್ತು ದೇಶವು ನಮ್ಮ ಪ್ರತಿಭಾನ್ವಿತ ಯುವಕರ ಪ್ರತಿಭೆಯಿಂದ ಸಾಧ್ಯವಾದಷ್ಟು ಪ್ರಯೋಜನ ಪಡೆಯಬೇಕು. ಇದಕ್ಕಾಗಿ ನಮ್ಮ ಗಮನವು ಈಗ ಸೆಮಿಕಂಡಕ್ಟರ್ ನಂತಹ ಭವಿಷ್ಯದ ತಂತ್ರಜ್ಞಾನ ಕೈಗಾರಿಕೆಗಳ ಮೇಲೆ ಇದೆ. ವಿಶಾಖಪಟ್ಟಣಂನಲ್ಲಿ ಹೊಸ ಸೆಮಿಕಂಡಕ್ಟರ್ ಘಟಕಕ್ಕೆ ಅಡಿಪಾಯ ಹಾಕುವುದು ಈ ದಿಕ್ಕಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ. ಚಂದ್ರಬಾಬು ಅವರ ನೇತೃತ್ವದಲ್ಲಿ, ನಮ್ಮ ಆಂಧ್ರವು ಈಗ ಸಾಫ್ಟ್‌ವೇರ್ ಜೊತೆಗೆ ಉತ್ಪಾದನೆಯ ಕೇಂದ್ರವಾಗಲಿದೆ. ಇದು ಆಂಧ್ರದಲ್ಲಿ ಭವಿಷ್ಯದ ಉದ್ಯೋಗಗಳನ್ನು ಸೃಷ್ಟಿಸುತ್ತದೆ ಮತ್ತು ತಾಂತ್ರಿಕ ಕೈಗಾರಿಕೆಗಳಿಗೆ ಹೊಸ ವಾತಾವರಣವನ್ನು ಸೃಷ್ಟಿಸುತ್ತದೆ.

ಸ್ನೇಹಿತರೆ,

ವಿಶ್ವ ಆರ್ಥಿಕತೆಯಲ್ಲಿ ಎಲ್ಲಿಯಾದರೂ ಯಾವುದೇ ಬೆಳವಣಿಗೆ ಕೇಂದ್ರದ ರಚನೆಯು ಕೇವಲ ಒಂದು ಕಾರ್ಖಾನೆಯಿಂದ ಆಗುವುದಿಲ್ಲ, ಅದಕ್ಕಾಗಿ ಸಂಪೂರ್ಣ ಪರಿಸರ ವ್ಯವಸ್ಥೆಯ ಅಗತ್ಯವಿದೆ. ಇಂದು ಆಂಧ್ರಪ್ರದೇಶದಲ್ಲಿ ನಾವು ಅದೇ ಬೆಳವಣಿಗೆಯ ಪರಿಸರ ವ್ಯವಸ್ಥೆಯನ್ನು ರೂಪಿಸುತ್ತಿದ್ದೇವೆ. ಚಂದ್ರಬಾಬು ನಾಯ್ಡು ಅವರು ವೈಯಕ್ತಿಕ ಮಟ್ಟದಲ್ಲಿ ಹಗಲು ರಾತ್ರಿ ಕೆಲಸ ಮಾಡುತ್ತಿದ್ದಾರೆ. ಇದರ ಪರಿಣಾಮವಾಗಿ, ಇಂದು ವಿಶ್ವದ ಅನೇಕ ದೊಡ್ಡ ಕಂಪನಿಗಳು ಇಲ್ಲಿ ಹೂಡಿಕೆ ಮಾಡಲು ಬರಲು ಬಯಸುತ್ತಿವೆ.

ಸ್ನೇಹಿತರೆ,

ಸೆಮಿಕಂಡಕ್ಟರ್‌ಗಳ ಜೊತೆಗೆ ಎಐ ಮೂಲಸೌಕರ್ಯ ಮತ್ತು ದತ್ತಾಂಶ ಕೇಂದ್ರಗಳಲ್ಲಿಯೂ ಕೆಲಸ ನಡೆಯುತ್ತಿದೆ. ಗೂಗಲ್ ಇಲ್ಲಿ 15  ಬಿಲಿಯನ್ ಡಾಲರ್ ಎಐ ಮತ್ತು ಕ್ಲೌಡ್ ಮೂಲಸೌಕರ್ಯ ಕ್ಯಾಂಪಸ್ ಘೋಷಿಸಿದೆ. ಇತರೆ ಅನೇಕ ಜಾಗತಿಕ ಕಂಪನಿಗಳು ಇಲ್ಲಿ ಹೊಸ ಸಾಧ್ಯತೆಗಳನ್ನು ನೋಡುತ್ತಿವೆ. ಆಂಧ್ರಪ್ರದೇಶದ ಜತೆಗೆ ದೇಶದ ಯುವಕರು ಇದರಿಂದ ಭಾರಿ ಲಾಭ ಪಡೆಯುತ್ತಿದ್ದಾರೆ.

ಸ್ನೇಹಿತರೆ,

ಆಂಧ್ರದ ಕೈಗಾರಿಕಾ ಬೆಳವಣಿಗೆಯ ಕಥೆ ಡಿಜಿಟಲ್ ತಂತ್ರಜ್ಞಾನಕ್ಕೆ ಮಾತ್ರ ಸೀಮಿತವಾಗಿಲ್ಲ. ನಕ್ಕಪಲ್ಲಿಯಲ್ಲಿ ಕೇಂದ್ರ ಸರ್ಕಾರವು ದೊಡ್ಡ ಬೃಹತ್ ಔಷಧ/ಫಾರ್ಮಾ ಪಾರ್ಕ್‌ಗೆ ಬೆಂಬಲ ನೀಡುತ್ತಿದೆ. ಈ ಕಾರಣದಿಂದಾಗಿ, ಆಂಧ್ರಪ್ರದೇಶವು ದೇಶದ ಪ್ರಮುಖ ಫಾರ್ಮಾ ಕೇಂದ್ರವಾಗಿಯೂ ಅಭಿವೃದ್ಧಿ ಹೊಂದುತ್ತದೆ. ಹಸಿರು ಇಂಧನ ಕ್ಷೇತ್ರದಲ್ಲಿ ರಾಯಲಸೀಮಾ ಪ್ರದೇಶದಲ್ಲಿ ಮಾತ್ರ 5 ಲಕ್ಷ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹೂಡಿಕೆ ನಡೆದಿದೆ. ಇಂದು ಆಂಧ್ರಪ್ರದೇಶದ ನಿಮ್ಮೆಲ್ಲರಿಗೂ ನಾನು ಮತ್ತೊಮ್ಮೆ ಭರವಸೆ ನೀಡುತ್ತೇನೆ, ನಮ್ಮ ಸರ್ಕಾರ – ಈ ಡಬಲ್ ಎಂಜಿನ್ ಸರ್ಕಾರ – ಅಂತಹ ಪ್ರತಿಯೊಂದು ಸಾಧ್ಯತೆಯನ್ನು ಸಾಕಾರಗೊಳಿಸಲು ಹಗಲಿರುಳು ಶ್ರಮಿಸುತ್ತಲೇ ಇರುತ್ತದೆ.

ಸ್ನೇಹಿತರೆ,

ಕಳೆದ 3 ಭೇಟಿಗಳಲ್ಲಿಯೇ ನಾನು ಇಲ್ಲಿ 2 ಲಕ್ಷ ಕೋಟಿ ರೂಪಾಯಿಗಳ ಯೋಜನೆಗಳನ್ನು ಪ್ರಾರಂಭಿಸಿದ್ದೇನೆ ಎಂಬ ಅಂಶದಿಂದ ಇಂದು ಆಂಧ್ರಪ್ರದೇಶದ ಪ್ರತಿಯೊಂದು ವಲಯದಲ್ಲಿ ಕೆಲಸಗಳು ಎಷ್ಟು ವೇಗದಲ್ಲಿ ನಡೆಯುತ್ತಿವೆ ಎಂಬುದನ್ನು ನೀವು ನೋಡಬಹುದು. ಆಂಧ್ರದ ಈ ಅಭಿವೃದ್ಧಿ ಪ್ರಯಾಣದಲ್ಲಿ ‘ಉತ್ತರ ಆಂಧ್ರ’ ಕೂಡ ಸಬಲೀಕರಣಗೊಳ್ಳುತ್ತಿದೆ ಎಂಬುದರಿಂದ ನನಗೆ ಸಂತೋಷವಾಗಿದೆ. ನಾವು ವಿಶಾಖಪಟ್ಟಣ ಆರ್ಥಿಕ ಪ್ರದೇಶ, ವಿ.ಇ.ಆರ್ ಅನ್ನು ದೇಶದ ಪ್ರಮುಖ ಕೈಗಾರಿಕಾ ಕೇಂದ್ರವಾಗಿ ಅಭಿವೃದ್ಧಿಪಡಿಸುತ್ತಿದ್ದೇವೆ. ವಿ.ಇ.ಆರ್ ಏಷ್ಯಾದ ಪ್ರಮುಖ ಆರ್ಥಿಕ ಕೇಂದ್ರವಾಗುವುದು ನಮ್ಮ ಗುರಿಯಾಗಿದೆ. ಈ ವಿಮಾನ ನಿಲ್ದಾಣದಿಂದ ಸೆಮಿಕಂಡಕ್ಟರ್ ಘಟಕದವರೆಗೆ ಎಲ್ಲವೂ ಈ ಧ್ಯೇಯದ ಭಾಗವಾಗಿದೆ.

ಸ್ನೇಹಿತರೆ,

ನಮ್ಮ ಸರ್ಕಾರದ ಮಂತ್ರ – ಹೂಡಿಕೆಯಿಂದ ಉದ್ಯೋಗದ ತನಕ. ಆದ್ದರಿಂದ ಸರ್ಕಾರವು ತನ್ನ ಕಡೆಯಿಂದ ಹೂಡಿಕೆಯನ್ನು ಹೆಚ್ಚಿಸಿದೆ, ನಾವು ಖಾಸಗಿ ವಲಯವನ್ನು ಸಹ ಹೂಡಿಕೆ ಮಾಡಲು ಪ್ರೇರೇಪಿಸುತ್ತಿದ್ದೇವೆ. ಹೂಡಿಕೆ ಹೆಚ್ಚಾದಾಗ ಉತ್ಪಾದನೆ ಹೆಚ್ಚಾಗುತ್ತದೆ, ಉತ್ಪಾದನೆ ಹೆಚ್ಚಾದಾಗ ರಫ್ತು ಹೆಚ್ಚಾಗುತ್ತದೆ, ರಫ್ತು ಹೆಚ್ಚಾದಾಗ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.  ಉದ್ಯೋಗ ಹೆಚ್ಚಾದಾಗ ಜನರ ಆದಾಯವೂ ಹೆಚ್ಚಾಗುತ್ತದೆ, ಕುಟುಂಬಗಳ ಜೀವನವು ಉತ್ತಮಗೊಳ್ಳುತ್ತದೆ.  ಆಂಧ್ರಪ್ರದೇಶದಲ್ಲಿ ಇದು ನಡೆಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ.

ಸ್ನೇಹಿತರೆ,

ಇಂದು ಇಲ್ಲಿ ಆರಂಭಿಸಲಾದ ಎಲ್ಲಾ ಯೋಜನೆಗಳು ಸುವರ್ಣ ಆಂಧ್ರ ಮತ್ತು ವಿಕಸಿತ ಭಾರತದ ಸಂಕಲ್ವನ್ನು ಈಡೇರಿಸಲು ಬಹುದೊಡ್ಡ ಕೊಡುಗೆ ನೀಡುತ್ತವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ಚಂದ್ರಬಾಬು ಜಿ ನೇತೃತ್ವದಲ್ಲಿ ವಿಕಸಿತ ಭಾರತದ ಕನಸನ್ನು ನನಸಾಗಿಸಲು ಆಂಧ್ರಪ್ರದೇಶವು ಒಂದು ದೊಡ್ಡ ಶಕ್ತಿಯ ಮೂಲವಾಗುತ್ತಿದೆ. ಈ ಎಲ್ಲಾ ಯೋಜನೆಗಳಿಗಾಗಿ ನಾನು ಮತ್ತೊಮ್ಮೆ ಆಂಧ್ರಪ್ರದೇಶದ ಜನರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.

ತುಂಬು ಧನ್ಯವಾದಗಳು!

ಭಾರತ್ ಮಾತಾ ಕಿ ಜೈ.

ಭಾರತ್ ಮಾತಾ ಕಿ ಜೈ.

ಭಾರತ್ ಮಾತಾ ಕಿ ಜೈ.

ತುಂಬಾ ಧನ್ಯವಾದಗಳು!

 

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ರೂಪಾಂತರ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****