ಪಿಎಂಇಂಡಿಯಾ
80ನೇ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಕೃತಕ ಬುದ್ಧಿಮತ್ತೆ, ಶಿಕ್ಷಣ, ಕ್ರೀಡೆ, ನಾಗರಿಕ ರಕ್ಷಣೆ, ಸೆಮಿಕಂಡಕ್ಟರ್ ಉತ್ಪಾದನೆ, ಪರಮಾಣು ಶಕ್ತಿ ಮತ್ತು ಮಹಿಳಾ ನೇತೃತ್ವದ ಅಭಿವೃದ್ಧಿಯನ್ನು ಒಳಗೊಂಡ ಸರಣಿ ಉಪಕ್ರಮಗಳು ಮತ್ತು ಗುರಿಗಳನ್ನು ಘೋಷಿಸಿದರು.
ಪ್ರಧಾನಮಂತ್ರಿಯವರ ಭಾಷಣದ ಪ್ರಮುಖ ಘೋಷಣೆಗಳು ಈ ಕೆಳಗಿನಂತಿವೆ
1. ಒಂದು ಕೋಟಿ ಯುವಜನರಿಗೆ ಕೃತಕ ಬುದ್ಧಿಮತ್ತೆ ಕೌಶಲ್ಯ: ಮುಂದಿನ ಒಂದು ವರ್ಷದಲ್ಲಿ ಒಂದು ಕೋಟಿ ಯುವಜನರಿಗೆ ಕೃತಕ ಬುದ್ಧಿಮತ್ತೆ ಕೌಶಲ್ಯಗಳಲ್ಲಿ ತರಬೇತಿ ನೀಡಲಾಗುವುದು ಎಂದು ಪ್ರಧಾನಮಂತ್ರಿ ಘೋಷಿಸಿದರು. ಕೃತಕ ಬುದ್ಧಿಮತ್ತೆಯ ತ್ವರಿತ ವಿಸ್ತರಣೆಯನ್ನು ಉಲ್ಲೇಖಿಸಿದ ಅವರು, ಈ ಉಪಕ್ರಮವು ಭಾರತದ ಯುವಜನರನ್ನು ಕೃತಕ ಬುದ್ಧಿಮತ್ತೆ ಜಗತ್ತಿನಲ್ಲಿ ಮುನ್ನಡೆಸುವ ಸಾಮರ್ಥ್ಯದೊಂದಿಗೆ ಸಜ್ಜುಗೊಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.
2. ವಿವಿಧ ಪರೀಕ್ಷೆಗಳಿಗೆ ಉಚಿತ ಆನ್‌ಲೈನ್ ತರಬೇತಿ: ವಿವಿಧ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಯುವಜನರಿಗೆ ಉಚಿತ ಆನ್ಲೈನ್ ತರಬೇತಿಯನ್ನು ಪ್ರಧಾನಮಂತ್ರಿ ಘೋಷಿಸಿದರು. ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮೇಲೆ ಕೋಚಿಂಗ್ ತರಗತಿಗಳ ಆರ್ಥಿಕ ಹೊರೆಯನ್ನು ಉಲ್ಲೇಖಿಸಿದ ಅವರು, ದೇಶದ ಯುವಜನರಿಗೆ ಉಚಿತ ತರಬೇತಿ ನೀಡಲು ಸಂಪೂರ್ಣ ಜಾಲವನ್ನು ರಚಿಸಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ, ಲಭ್ಯವಿರುವ ಪ್ರತಿಭೆ ಮತ್ತು ಶಿಕ್ಷಕರನ್ನು ಒಟ್ಟುಗೂಡಿಸಲಾಗುವುದು ಎಂದು ಹೇಳಿದರು.
3. 5-15 ವರ್ಷ ವಯಸ್ಸಿನ ಮಕ್ಕಳಿಗಾಗಿ ರಾಷ್ಟ್ರವ್ಯಾಪಿ ಕ್ರೀಡಾ ಪ್ರತಿಭಾನ್ವೇಷಣೆ: 5 ರಿಂದ 15 ವರ್ಷದೊಳಗಿನ ಮಕ್ಕಳಲ್ಲಿ ಕ್ರೀಡಾ ಪ್ರತಿಭೆಗಳನ್ನು ಗುರುತಿಸಲು ಹಳ್ಳಿಗಳು, ನಗರಗಳು ಮತ್ತು ಶಾಲೆಗಳಲ್ಲಿ ಪ್ರತಿಭಾನ್ವೇಷಣೆ ಅಭಿಯಾನವನ್ನು ಪ್ರಧಾನಮಂತ್ರಿ ಘೋಷಿಸಿದರು. ಗುರುತಿಸಲಾದ ಮಕ್ಕಳಿಗೆ ದೇಶವನ್ನು ಪ್ರತಿನಿಧಿಸುವ ಸಾಮರ್ಥ್ಯವಿರುವ ಆಟಗಾರರನ್ನಾಗಿ ಅಭಿವೃದ್ಧಿಪಡಿಸಲು ವಿಶೇಷ ತರಬೇತಿಯನ್ನು ನೀಡಲಾಗುವುದು. ಪ್ರಸ್ತುತ ಭಾರತ ಭಾಗವಹಿಸದ ಅಥವಾ ಅರ್ಹತೆ ಪಡೆಯದ ಒಲಿಂಪಿಕ್ ವಿಭಾಗಗಳ ಬಗ್ಗೆ ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಅಂತಹ ಕ್ರೀಡೆಗಳಲ್ಲಿ ಸಾಮರ್ಥ್ಯ ವೃದ್ಧಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಹೇಳಿದರು.
4. ಆಧುನಿಕ ಸವಾಲುಗಳಿಗೆ ರೋಮಾಂಚಕ/ಪ್ರಬಲ ನಾಗರಿಕ ರಕ್ಷಣಾ ಜಾಲ: ಯುದ್ಧದ ಬದಲಾಗುತ್ತಿರುವ ಸ್ವರೂಪವನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ದೇಶದಲ್ಲಿ ರೋಮಾಂಚಕ/ಪ್ರಬಲ ನಾಗರಿಕ ರಕ್ಷಣಾ ಜಾಲವನ್ನು ರಚಿಸಲಾಗುವುದು ಎಂದು ಘೋಷಿಸಿದರು. ಯುದ್ಧವು ಇನ್ನು ಮುಂದೆ ಗಡಿಗಳಿಗೆ ಸೀಮಿತವಾಗಿರುವುದಿಲ್ಲ ಮತ್ತು ಅದು ಸಂಸ್ಕರಣಾಗಾರಗಳು, ಬ್ಯಾಂಕಿಂಗ್ ವಲಯ, ಡೇಟಾ ಕೇಂದ್ರಗಳು, ಕಾರ್ಖಾನೆಗಳು ಹಾಗು ಇತರ ಮೂಲಸೌಕರ್ಯಗಳ ಮೇಲೂ ಪರಿಣಾಮ ಬೀರಬಹುದು ಎಂದು ಅವರು ಹೇಳಿದರು. ಹಿಂದಿನ ಶತಮಾನದ ಯುದ್ಧಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾದ ನಾಗರಿಕ ರಕ್ಷಣಾ ವ್ಯವಸ್ಥೆಗಳು ಹಳೆಯದಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಆದ್ದರಿಂದ ನಾಗರಿಕರಿಗೆ ಆಧುನಿಕ ವ್ಯವಸ್ಥೆಗಳ ಪರಿಚಯ ಮಾಡಿಕೊಡಲಾಗುವುದು ಮತ್ತು ಆಧುನಿಕ ಸವಾಲುಗಳನ್ನು ಎದುರಿಸುವ ಸಾಮರ್ಥ್ಯವಿರುವ ದೊಡ್ಡ ಸ್ವಯಂಪ್ರೇರಿತ ನಾಗರಿಕ ರಕ್ಷಣಾ ಪಡೆಯನ್ನು ಅಭಿವೃದ್ಧಿಪಡಿಸಲಾಗುವುದು ಎಂದರು.
5. ಸ್ವಾವಲಂಬನೆಯನ್ನು ಬಲಪಡಿಸಲು ಹೆಚ್ಚಿನ ಸೆಮಿಕಂಡಕ್ಟರ್ ಸ್ಥಾವರಗಳು: ಡಿಜಿಟಲ್ ಮತ್ತು ತಾಂತ್ರಿಕ ಜಗತ್ತಿನಲ್ಲಿ ಸೆಮಿಕಂಡಕ್ಟರ್ ಚಿಪ್ ಗಳ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಭಾರತವು ಈ ವಲಯದಲ್ಲಿ ಸ್ವಾವಲಂಬನೆಯತ್ತ ಸಾಗುತ್ತಿದೆ ಎಂದು ಹೇಳಿದರು. ಮೂರು ಸೆಮಿಕಂಡಕ್ಟರ್ ಘಟಕಗಳು ಈಗಾಗಲೇ ಪ್ರಾರಂಭವಾಗಿವೆ ಮತ್ತು ಈ ಸೌಲಭ್ಯಗಳಿಂದ ಉತ್ಪಾದನೆಯನ್ನು ರಫ್ತು ಮಾಡಲು ಪ್ರಾರಂಭಿಸಲಾಗಿದೆ ಎಂದು ಅವರು ಹೇಳಿದರು. ಮುಂಬರುವ ಏಳೆಂಟು ವರ್ಷಗಳಲ್ಲಿ ಇನ್ನೂ ಐದು-ಏಳು ಅಥವಾ ಎಂಟು ಸೆಮಿಕಂಡಕ್ಟರ್ ಸ್ಥಾವರಗಳು ಬರಲಿವೆ ಎಂದು ಹೇಳಿದ ಪ್ರಧಾನಮಂತ್ರಿ, ಸೆಮಿಕಂಡಕ್ಟರ್ ಗಳಲ್ಲಿನ ಸ್ವಾವಲಂಬನೆಯು ವಿಕಸಿತ ಭಾರತದತ್ತ ಸಾಗುವ ಮಾರ್ಗವಾಗಿದೆ ಎಂದು ಬಣ್ಣಿಸಿದರು.
6. 2047ರ ವೇಳೆಗೆ 100 ಗಿಗಾವ್ಯಾಟ್ ಪರಮಾಣು ವಿದ್ಯುತ್ ಸಾಮರ್ಥ್ಯ: ಚಿಪ್ ಗಳು, ಕೃತಕ ಬುದ್ಧಿಮತ್ತೆ ಮತ್ತು ದತ್ತಾಂಶ ಕೇಂದ್ರಗಳ ಹೆಚ್ಚುತ್ತಿರುವ ಇಂಧನ ಅಗತ್ಯಗಳನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಇಂಧನ ಭದ್ರತೆ ಮತ್ತು ಪರಮಾಣು ಶಕ್ತಿಯ ಮಹತ್ವವನ್ನು ಒತ್ತಿ ಹೇಳಿದರು. ಭಾರತವು 2047 ರ ವೇಳೆಗೆ 100 ಗಿಗಾವ್ಯಾಟ್ ಪರಮಾಣು ವಿದ್ಯುತ್ ಸಾಮರ್ಥ್ಯದ ಗುರಿಯೊಂದಿಗೆ ಮುಂದುವರಿಯುತ್ತಿದೆ ಮತ್ತು ಈ ದಶಕದಲ್ಲಿ ಐದು ಹೊಸ ಪರಮಾಣು ರಿಯಾಕ್ಟರ್ ಗಳನ್ನು ಪ್ರಾರಂಭಿಸುವ ಗುರಿಯನ್ನು ಹೊಂದಿದೆ ಎಂದು ಅವರು ಹೇಳಿದರು. ಭಾರತವು ಈ ವರ್ಷ ಫಾಸ್ಟ್ ಬ್ರೀಡರ್ ಪರಮಾಣು ತಂತ್ರಜ್ಞಾನದಲ್ಲಿ ಮಹತ್ವದ ಮೈಲಿಗಲ್ಲು ಸಾಧಿಸಿದೆ, ಇದು ಪರಮಾಣು ಇಂಧನದಲ್ಲಿ ಸ್ವಾವಲಂಬನೆಯತ್ತ ಮಹತ್ವದ ಹೆಜ್ಜೆಯಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.
7. ಆರು ಕೋಟಿ ಲಕ್ಷಾಧಿಪತಿ ದೀದಿಗಳ ಗುರಿ: ರಾಷ್ಟ್ರ ನಿರ್ಮಾಣಕ್ಕೆ ಮಹಿಳೆಯರ ಕೊಡುಗೆಯನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಮೂರು ಕೋಟಿ ಲಕ್ಷಾಧಿಪತಿ ದೀದಿಗಳನ್ನು ರಚಿಸುವ ಹಿಂದಿನ ಗುರಿಯನ್ನು ಮೀರಲಾಗಿದೆ ಎಂದು ಹೇಳಿದರು. ಭಾರತವು ಈಗ ಆರು ಕೋಟಿ ಲಕ್ಷಾಧಿಪತಿ ದೀದಿಗಳ ಗುರಿಯೊಂದಿಗೆ ಮುಂದುವರಿಯಲಿದೆ ಎಂದು ಅವರು ಹೇಳಿದರು. ಇನ್ನೂ ಮೂರು ಕೋಟಿ ಲಕ್ಷಾಧಿಪತಿ ದೀದಿಗಳ ಸೃಷ್ಟಿಯು ಮಹಿಳೆಯರ ಶಕ್ತಿಯ ಮೂಲಕ ಗ್ರಾಮೀಣ ಆರ್ಥಿಕತೆಯಲ್ಲಿ ಪ್ರಮುಖ ಪರಿವರ್ತನೆಯನ್ನು ತರುತ್ತದೆ ಎಂದು ಹೇಳಿದರು.
*****