Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಸಮಗ್ರ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಪ್ರಾಧಿಕಾರ ಸ್ಥಾಪನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಗಳಲ್ಲಿ ಸಂಶೋಧನೆ, ಯೋಜನೆ, ಮೌಲ್ಯಮಾಪನ, ಮೇಲ್ವಿಚಾರಣೆ ಮತ್ತು ಪರಿಣಾಮದ ವಿಶ್ಲೇಷಣೆಯನ್ನು ಬಲವರ್ಧನೆಗೊಳಿಸುವ ಉದ್ದೇಶದಿಂದ, ‘ಸಮಗ್ರ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಪ್ರಾಧಿಕಾರ’ (ಐ ಟಿ ಎಲ್ ಎ) ಎಂಬ ವಿಶೇಷ ಉದ್ದೇಶದ ಸಂಸ್ಥೆಯನ್ನು (ಎಸ್ ಪಿ ವಿ) ಸ್ಥಾಪಿಸಲು ಅನುಮೋದನೆ ನೀಡಿದೆ.

ಈ ಅನುಮೋದನೆ ಸಾರಿಗೆಗೆ ಸಂಬಂಧಿಸಿದ ವಿವಿಧ ಸಚಿವಾಲಯಗಳು ಮತ್ತು ಏಜೆನ್ಸಿಗಳ ನಡುವೆ ಯೋಜನೆಗಳು ಸಮರ್ಪಕವಾಗಿಲ್ಲದಿರುವುದು ಮತ್ತು ಜಾರಿ ವೇಳೆ ಉಂಟಾಗುವ ದೀರ್ಘಕಾಲದ ಸವಾಲುಗಳನ್ನು ಪರಿಹರಿಸುವ ಗುರಿಯನ್ನು ಹೊಂದಿದೆ. ಉತ್ತಮ ಸಮನ್ವಯ ಮತ್ತು ಬಹು-ಮಾದರಿ  ಏಕೀಕರಣವನ್ನು ಉತ್ತೇಜಿಸುವ ಮೂಲಕ, ಭಾರತದಲ್ಲಿ ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಯ ದಕ್ಷತೆ, ಸುಸ್ಥಿರತೆ ಮತ್ತು ಪರಿಣಾಮಕಾರಿತ್ವವನ್ನ ಐಟಿಎಲ್ ಎ ವೃದ್ಧಿಸುವ ನಿರೀಕ್ಷೆಯಿದೆ.

ಐ ಟಿ ಎಲ್ ಎ ಈ ಕೆಳಗಿನ ಪ್ರಮುಖ ಪಾತ್ರಗಳು ಮತ್ತು ಜವಾಬ್ದಾರಿಗಳನ್ನು ಹೊಂದಿರುತ್ತದೆ:

  • ರಾಷ್ಟ್ರೀಯ ಉನ್ನತ ಸಂಸ್ಥೆ: ಸಮಗ್ರ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಯೋಜನೆ, ಸಂಶೋಧನೆ, ಯೋಜನೆಯ ಮೌಲ್ಯಮಾಪನ ಮತ್ತು ಮೇಲ್ವಿಚಾರಣೆ, ನೀತಿ ಬೆಂಬಲ ಮತ್ತು ದತ್ತಾಂಶ ವಿಶ್ಲೇಷಣೆಗೆ  ಐ ಟಿ ಎಲ್ ಎ ಉನ್ನತ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತದೆ.
  • ದೀರ್ಘಕಾಲೀನ ರಾಷ್ಟ್ರೀಯ ಸಾರಿಗೆ ಕ್ರಿಯಾ ಯೋಜನೆ: ರಸ್ತೆಗಳು, ರೈಲ್ವೆಗಳು, ಬಂದರುಗಳು ಮತ್ತು ಹಡಗು ಸಾರಿಗೆ, ನಾಗರಿಕ ವಿಮಾನಯಾನ, ಒಳನಾಡಿನ ಜಲಮಾರ್ಗಗಳು, ಕರಾವಳಿ ನೌಕಾಯಾನ, ನಗರ ಚಲನಶೀಲತೆ ಮತ್ತು ಲಾಜಿಸ್ಟಿಕ್ಸ್ ಅನ್ನು ಒಳಗೊಂಡಂತೆ, ಹತ್ತು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಸಮಗ್ರ ರಾಷ್ಟ್ರೀಯ ಸಾರಿಗೆ ಕ್ರಿಯಾ ಯೋಜನೆಯನ್ನು ಐಟಿಎಲ್ ಎ ಸಿದ್ಧಪಡಿಸುತ್ತದೆ.
  • ಸಮಗ್ರ ಯೋಜನಾ ಚೌಕಟ್ಟು: ರಾಷ್ಟ್ರೀಯ ಸಾರಿಗೆ ಕ್ರಿಯಾ ಯೋಜನೆಯೊಂದಿಗೆ ಸ್ಥಿರತೆ ಮತ್ತು ಹೊಂದಾಣಿಕೆಯನ್ನು ಖಾತ್ರಿಪಡಿಸಿಕೊಳ್ಳಲು ಹಾಗೂ ಬಹು-ಮಾದರಿ ಮೂಲಸೌಕರ್ಯ ಅಭಿವೃದ್ಧಿಯನ್ನು ಉತ್ತೇಜಿಸಲು, ಸಾರಿಗೆ ಸಚಿವಾಲಯಗಳ ಅಲ್ಪಾವಧಿಯ ವಲಯ ಯೋಜನೆಗಳು (ಸುಮಾರು 5 ವರ್ಷಗಳು) ಮತ್ತು ವಾರ್ಷಿಕ ಯೋಜನೆಗಳನ್ನು ಐ ಟಿ ಎಲ್ ಎ ಮೌಲ್ಯಮಾಪನ ಮಾಡುತ್ತದೆ.
  • ಪ್ರಮುಖ ಯೋಜನೆಗಳ ತಾಂತ್ರಿಕ ಮೌಲ್ಯಮಾಪನ: 500 ಕೋಟಿ ರೂ. ಅಥವಾ ಅದಕ್ಕಿಂತ ಅಧಿಕ ವೆಚ್ಚದ ಭಾರತ ಸರ್ಕಾರದ ಮೂಲಸೌಕರ್ಯ ಯೋಜನೆಗಳ ತಾಂತ್ರಿಕ ಮೌಲ್ಯಮಾಪನವನ್ನು ಐಟಿಎಲ್ ಎ ಕೈಗೊಳ್ಳುತ್ತದೆ. ಆರ್ಥಿಕ ಮೌಲ್ಯಮಾಪನವನ್ನು ಅಸ್ತಿತ್ವದಲ್ಲಿರುವ ಆರ್ಥಿಕ ಮೌಲ್ಯಮಾಪನ ಕಾರ್ಯವಿಧಾನಗಳ ಮೂಲಕವೇ ಮುಂದುವರಿಸಲಾಗುತ್ತದೆ. 
  • ಮೇಲ್ವಿಚಾರಣೆ ಮತ್ತು ಪರಿಣಾಮದ ವಿಶ್ಲೇಷಣೆ: 500 ಕೋಟಿ ರೂ.ಗಿಂತ ಅಧಿಕ ಮೌಲ್ಯದ ಸಾರಿಗೆ ಮತ್ತು ಮೂಲಸೌಕರ್ಯ ಯೋಜನೆಗಳ ಅನುಷ್ಠಾನವನ್ನು ಐ ಟಿ ಎಲ್ ಎ ಮೇಲ್ವಿಚಾರಣೆ ಮಾಡುತ್ತದೆ, ಸಮಸ್ಯೆ ಪರಿಹಾರಕ್ಕಾಗಿ ಸಮನ್ವಯ ಕಾರ್ಯವಿಧಾನವನ್ನು ಒದಗಿಸುತ್ತದೆ ಮತ್ತು ಈ ಯೋಜನೆಗಳ ಅನುಷ್ಠಾನದ ನಂತರದ ಪರಿಣಾಮದ ವಿಶ್ಲೇಷಣೆಯನ್ನು ಕೈಗೊಳ್ಳುತ್ತದೆ.
  • ರಾಷ್ಟ್ರೀಯ ಸಾರಿಗೆ ದತ್ತಾಂಶ ಭಂಡಾರ (ಎನ್ ಟಿ ಡಿ ಆರ್): ಯೋಜನೆ, ಮೇಲ್ವಿಚಾರಣೆ ಮತ್ತು ಪರಿಣಾಮಗಳ ಮೌಲ್ಯಮಾಪನಕ್ಕಾಗಿ, ಐಟಿಎಲ್ ಎ ವಿವಿಧ ಮೂಲಗಳಿಂದ (ಜಿಎಸ್ ಟಿಎನ್ ಇ-ವೇ ಬಿಲ್, ಫಾಸ್ಟ್‌ ಟ್ಯಾಗ್, ವಾಹನ್ , ಜಿಪಿಎಸ್ ಆಧಾರಿತ ವ್ಯವಸ್ಥೆಗಳು, ನಗರ ಸಂಚಾರ ನಿರ್ವಹಣಾ ವ್ಯವಸ್ಥೆಗಳು ಮತ್ತು ಇತರ ಸಂಬಂಧಿತ ದತ್ತಾಂಶ ಮೂಲಗಳು ಸೇರಿದಂತೆ) ಸೂಕ್ತ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ದತ್ತಾಂಶಗಳನ್ನು ಸಂಗ್ರಹಿಸಿ, ಒಂದು ಏಕೀಕೃತ ಸಾರಿಗೆ ದತ್ತಾಂಶ ಭಂಡಾರವನ್ನು ನಿರ್ಮಿಸುತ್ತದೆ ಹಾಗೂ ದತ್ತಾಂಶ ವಿಶ್ಲೇಷಣೆಯನ್ನು (ಉದಾಹರಣೆಗೆ ಸರಕು ಸಾಗಣೆ ಹರಿವು/O-D ವಿಶ್ಲೇಷಣೆ) ಕೈಗೊಳ್ಳುತ್ತದೆ. 
  • ರಾಷ್ಟ್ರೀಯ ಲಾಜಿಸ್ಟಿಕ್ಸ್ ನೀತಿ (2022) ಪರಿಶೀಲನೆ ಮತ್ತು ನವೀಕರಣಕ್ಕೆ ಸಲಹೆ ಮತ್ತು ಸಹಾಯ.
  • ಲಾಜಿಸ್ಟಿಕ್ಸ್ ವಲಯದಲ್ಲಿ ಸಾಮರ್ಥ್ಯ ವೃದ್ಧಿ, ತರಬೇತಿ ಮತ್ತು ಕೌಶಲ್ಯ.
  • ಸಾರಿಗೆ ಮತ್ತು ಲಾಜಿಸ್ಟಿಕ್ಸ್ ವಲಯಗಳಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳಿಗೆ ಉತ್ತೇಜನ.

ಐಟಿಎಲ್‌ಎ ಸ್ಥಾಪನೆಯು ಬಹುಮಾದರಿ ಸಾರಿಗೆ ಸಂಪರ್ಕವನ್ನು ಬಲಪಡಿಸುವುದು, ಮೂಲಸೌಕರ್ಯಗಳ ಕಾರ್ಯಕ್ಷಮತೆಯನ್ನು ಸುಧಾರಿಸುವುದು, ಲಾಜಿಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡುವುದು ಹಾಗೂ ಜಾಗತಿಕ ಲಾಜಿಸ್ಟಿಕ್ಸ್ ಕ್ಷೇತ್ರದಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಮೂಲಕ ವಿಕಸಿತ ಭಾರತ–2047ರ ದೂರದೃಷ್ಟಿಯನ್ನು ಸಾಕಾರಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಸಂಶೋಧನೆ, ಯೋಜನೆ ರೂಪಿಸುವಿಕೆ, ಬಿಗ್‌ ಡೇಟಾ ಸಂಯೋಜನೆ, ಯೋಜನೆಗಳ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಕ್ಕಾಗಿ ಐಟಿಎಲ್‌ಎ ಸಾಂಸ್ಥಿಕ ಸಾಮರ್ಥ್ಯವನ್ನು ಸೃಷ್ಟಿಸಲಿದೆ. ಜತೆಗೆ, ಸಾಮರ್ಥ್ಯ ವೃದ್ಧಿಗೆ ಸಹಕಾರ ನೀಡುವುದು ಮತ್ತು ಅಂತಾರಾಷ್ಟ್ರೀಯ ಉತ್ತಮ ಪದ್ಧತಿಗಳನ್ನು ಅಳವಡಿಸಿಕೊಳ್ಳುವುದಕ್ಕೂ ಸಂಸ್ಥೆ ನೆರವಾಗಲಿದೆ.

 

*****