Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಲಡಾಖ್‌ನಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ

ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಲಡಾಖ್‌ನಲ್ಲಿ ಅಭಿವೃದ್ಧಿ ಯೋಜನೆಗಳ ಉದ್ಘಾಟನೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರ ಭಾಷಣದ ಕನ್ನಡ ಅನುವಾದ


ಲೆಫ್ಟಿನೆಂಟ್ ಗವರ್ನರ್ ಶ್ರೀ ವಿ.ಕೆ. ಸಕ್ಸೇನಾ ಜಿ, ಗಡಿ ರಸ್ತೆ ಸಂಘಟನೆ[ಬಿಆರ್‌ಒ] ಮತ್ತು ವಿಮಾನ ನಿಲ್ದಾಣ ಪ್ರಾಧಿಕಾರದ ಎಲ್ಲಾ ಹಿರಿಯ ಅಧಿಕಾರಿಗಳೆ, ಕೇಂದ್ರಾಡಳಿತ ಪ್ರದೇಶದ ಎಲ್ಲಾ ಅಧಿಕಾರಿಗಳೆ, ಇತರೆ ಗಣ್ಯ ಅತಿಥಿಗಳೆ, ನನ್ನ ಪ್ರಿಯ ಸಹೋದರ ಸಹೋದರಿಯರೆ.

ಇಂದು ಲಡಾಖ್‌ನ ಪ್ರಗತಿ ಮತ್ತು ಅಭಿವೃದ್ಧಿಯ ಪಯಣದಲ್ಲಿ ಮತ್ತೊಂದು ಅಧ್ಯಾಯ ಸೇರ್ಪಡೆಯಾಗುತ್ತಿದೆ. ತಂತ್ರಜ್ಞಾನದ ಮೂಲಕ ಈ ಸಂದರ್ಭದ ಭಾಗವಾಗಲು ನನಗೆ ಸಂತೋಷವಾಗುತ್ತಿದೆ. ಇಂದು ಲಡಾಖ್‌ನಲ್ಲಿ ಹಲವಾರು ಪ್ರಮುಖ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಗಿದೆ. ಈ ಯೋಜನೆಗಳ ಮೂಲಕ ಅನೇಕರಿಗೆ ಪ್ರಯಾಣ ಸುಲಭವಾಗಲಿದೆ, ಕೆಲವು ಕಡೆ ವಿದ್ಯುತ್ ಸೌಲಭ್ಯಗಳು ಸುಧಾರಿಸಲಿವೆ, ಇನ್ನು ಕೆಲವು ಕಡೆ ನೀರಿನ ಲಭ್ಯತೆ ಹೆಚ್ಚಾಗಲಿದೆ ಮತ್ತು ನಮ್ಮ ಪ್ರಾಚೀನ ಪರಂಪರೆಯ ಸಂರಕ್ಷಣೆಗೆ ಹೊಸ ಬಲ ಸಿಗಲಿದೆ. ಇದೀಗ ಜನ್‌ ಸ್ಕಾರ್‌ನಲ್ಲಿ ಹಿಮಪಾತವಾಗುತ್ತಿರುವುದನ್ನು ನಾನು ಗಮನಿಸಿದೆ. ಹಿಮ ಬೀಳುತ್ತಿದ್ದರೂ, ಜನ್‌ ಸ್ಕಾರ್‌ನ ಜನರು ತ್ರಿವರ್ಣ ಧ್ವಜ  ಹಿಡಿದು ತೋರಿಸುತ್ತಿದ್ದ ಉತ್ಸಾಹ ಮತ್ತು ಸಂಭ್ರಮವನ್ನು ನಾನು ಕಂಡೆ.

ಸ್ನೇಹಿತರೆ,

ಇದು ನನ್ನ ಲೇಹ್, ನನ್ನ ಲಡಾಖ್. ಈ ಯೋಜನೆಗಳಿಗಾಗಿ ಲಡಾಖ್‌ನ ಸಮಸ್ತ ಜನತೆಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವ ಎಲ್ಲಾ ಎಂಜಿನಿಯರ್‌ಗಳು, ಕಾರ್ಮಿಕರು ಮತ್ತು ಸ್ಥಳೀಯ ಸಹವರ್ತಿಗಳಿಗೂ ನಾನು ಅಭಿನಂದನೆಗಳನ್ನು ತಿಳಿಸುತ್ತೇನೆ. ವಿಶೇಷವಾಗಿ, ಬಿಆರ್ ಒ ದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ನಾನು ಶ್ಲಾಘಿಸುತ್ತೇನೆ.

ಸ್ನೇಹಿತರೆ,

ಕೆಲವು ಸಮಯದ ಹಿಂದೆ, ಲೇಹ್‌ನಲ್ಲಿರುವ ಕುಶೋಕ್ ಬಕುಲ ರಿಂಪೋಚೆ ವಿಮಾನ ನಿಲ್ದಾಣದ ಟರ್ಮಿನಲ್ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸುವ ಅವಕಾಶ ನನಗೆ ಸಿಕ್ಕಿತ್ತು. ಇಂದು ಈ ಪ್ರಮುಖ ಯೋಜನೆಯನ್ನು ಉದ್ಘಾಟಿಸುವ ಭಾಗ್ಯವೂ ನನಗೆ ಲಭಿಸಿದೆ. ಸುಮಾರು 650 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಟರ್ಮಿನಲ್, ವಿಮಾನ ನಿಲ್ದಾಣದ ವಾರ್ಷಿಕ ಪ್ರಯಾಣಿಕರ ಸಾಮರ್ಥ್ಯವನ್ನು 10 ಲಕ್ಷದಿಂದ 35 ಲಕ್ಷಕ್ಕೆ ಹೆಚ್ಚಿಸಲಿದೆ. ಇಲ್ಲಿ ವಿಮಾನಗಳ ಹಾರಾಟದ ಸಂಖ್ಯೆಯೂ 3 ಪಟ್ಟು ಹೆಚ್ಚಾಗಬಹುದು. ಈ ಟರ್ಮಿನಲ್‌ನಲ್ಲಿ ಮತ್ತೊಂದು ವಿಶೇಷತೆಯಿದೆ; ಲಡಾಖ್‌ನ ಕಠಿಣ ಹವಾಮಾನ ಪರಿಸ್ಥಿತಿ ಗಮನದಲ್ಲಿಟ್ಟುಕೊಂಡು, ಇದರಲ್ಲಿ ‘ ಜಿಯೋಥರ್ಮಲ್ ಅಥವಾ ಭೂಶಾಖ ತಂತ್ರಜ್ಞಾನ ಬಳಸಲಾಗಿದೆ. ಜತೆಗೆ, ಸೌರಶಕ್ತಿಯನ್ನೂ ಅಳವಡಿಸಲಾಗಿದೆ. ಭಾರತದಲ್ಲಿ ಜಿಯೋಥರ್ಮಲ್ ತಾಪನ ಸೌಲಭ್ಯ ಹೊಂದಿರುವ ದೇಶದ ಮೊದಲ ವಿಮಾನ ನಿಲ್ದಾಣ ಟರ್ಮಿನಲ್ ಇದಾಗಿದೆ. ನಿಮ್ಮೆಲ್ಲರಿಗೂ ಅಭಿನಂದನೆಗಳು! ಲಡಾಖ್‌ನಲ್ಲಿ ಪರಿಸರದ ಬಗ್ಗೆ ಸಂಪೂರ್ಣ ಕಾಳಜಿ ವಹಿಸುವ ಜತೆಗೆ, ಆಧುನಿಕ ಮೂಲಸೌಕರ್ಯಗಳೂ ಅಭಿವೃದ್ಧಿಗೊಳ್ಳಬೇಕೆಂಬುದು ನಮ್ಮ ಪ್ರಯತ್ನವಾಗಿದೆ. ಈ ವಿಮಾನ ನಿಲ್ದಾಣ ಟರ್ಮಿನಲ್ ಲಡಾಖ್‌ನ ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡಲಿದೆ. ಈ ಆಧುನಿಕ ವಿಮಾನ ನಿಲ್ದಾಣ ಟರ್ಮಿನಲ್‌ಗಾಗಿ ಲಡಾಖ್‌ನ ನನ್ನ ಎಲ್ಲಾ ಸಹೋದರ ಸಹೋದರಿಯರಿಗೆ ನಾನು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೆ,

ಇಂದು ಉದ್ಘಾಟನೆಯಾದ ಇತರೆ ಯೋಜನೆಗಳೂ ಅತ್ಯಂತ ಮಹತ್ವದ್ದಾಗಿವೆ. ಇಂದು ‘ನಿಮ್ಮು-ಪದುಮ್-ದಾರ್ಚಾ’ ರಸ್ತೆಯನ್ನು ಲಡಾಖ್ ಜನತೆಗೆ ಸಮರ್ಪಿಸಲಾಗಿದೆ. ಇದಕ್ಕಾಗಿ ಸುಮಾರು 2,500 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. ಹಿಂದೆ ಸುಮಾರು 12 ಗಂಟೆಗಳನ್ನು ತೆಗೆದುಕೊಳ್ಳುತ್ತಿದ್ದ ಪ್ರಯಾಣವನ್ನು ಈಗ ಕೇವಲ 3 ಗಂಟೆಗಳಲ್ಲಿ ಪೂರ್ಣಗೊಳಿಸಬಹುದು. ಇದರರ್ಥ, ಪ್ರಯಾಣದ ಸಮಯ ಉಳಿತಾಯವಾಗುವುದಲ್ಲದೆ, ಈ ರಸ್ತೆಯು ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೂ ದೊಡ್ಡ ಬೆಂಬಲ ನೀಡಲಿದೆ.

ಸ್ನೇಹಿತರೆ,

ಈ ಹಿಂದೆ, ಶ್ರೀನಗರ ಮತ್ತು ಲೇಹ್‌ಗಳನ್ನು ಸಂಪರ್ಕಿಸುವ ವಿದ್ಯುತ್ ಪ್ರಸರಣ ಮಾರ್ಗಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮತ್ತು ಅದನ್ನು ಉದ್ಘಾಟಿಸುವ ಸೌಭಾಗ್ಯ ನನಗೆ ಸಿಕ್ಕಿತ್ತು. ಇಂದು, ಹನು ಜಲವಿದ್ಯುತ್ ಯೋಜನೆ ಮತ್ತು ಅದಕ್ಕೆ ಸಂಬಂಧಿಸಿದ ಪ್ರಸರಣ ಮಾರ್ಗವನ್ನು ಸಹ ಉದ್ಘಾಟಿಸಲಾಗಿದೆ. ವಿಶ್ವಾಸಾರ್ಹ ವಿದ್ಯುತ್ ವ್ಯವಸ್ಥೆಯು ಕೇವಲ ಬೆಳಕನ್ನು ನೀಡುವುದಲ್ಲದೆ, ಜನರ ಜೀವನವನ್ನೇ ಬೆಳಗಿಸುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇದು ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ತರುತ್ತದೆ. ಹಳ್ಳಿಗಳಲ್ಲಿ ಅನೇಕ ಹೊಸ ಚಟುವಟಿಕೆಗಳು ಸಾಧ್ಯವಾಗುತ್ತವೆ. ಮಕ್ಕಳ ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಸಣ್ಣ ಸ್ಥಳೀಯ ಉದ್ಯಮಗಳು – ಹೀಗೆ ಪ್ರತಿಯೊಂದು ಕ್ಷೇತ್ರವೂ ಇದರಿಂದ ಪ್ರಯೋಜನ ಪಡೆಯುತ್ತದೆ. ಪುಗಾ ಕಣಿವೆಯಲ್ಲಿ ಆಧುನಿಕ ವಿದ್ಯುತ್ ಉತ್ಪಾದನಾ ಯೋಜನೆಯ ಕೆಲಸವೂ ಪ್ರಗತಿಯಲ್ಲಿದೆ.

ಸ್ನೇಹಿತರೆ,

ಇಂದು, ‘ಪ್ರಾಜೆಕ್ಟ್ ಅಮೃತ್ ಹಿಮ್ ಸರೋವರ್’ ಅಡಿ ನಿರ್ಮಿಸಲಾದ 40 ಜಲಾಶಯಗಳನ್ನು ಲಡಾಖ್ ಜನರಿಗೆ ಸಮರ್ಪಿಸಲಾಗಿದೆ. ಇವು ರೈತರಿಗೆ ಅಗತ್ಯವಿದ್ದಾಗ ನೀರಾವರಿಗಾಗಿ ನೀರನ್ನು ಪಡೆಯಲು ಸಹಾಯ ಮಾಡುತ್ತವೆ.

ಸ್ನೇಹಿತರೆ,

ನೈಸರ್ಗಿಕ ಪರಿಸ್ಥಿತಿಗಳಿಂದಾಗಿ ಲಡಾಖ್‌ನಲ್ಲಿ ಜೀವನವು ತುಂಬಾ ಕಷ್ಟಕರವಾಗಿದೆ ಎಂದು ಯಾವಾಗಲೂ ಹೇಳಲಾಗುತ್ತದೆ. ನೈಸರ್ಗಿಕ ಸನ್ನಿವೇಶಗಳು ತಮ್ಮದೇ ಆದ ಸವಾಲುಗಳನ್ನು ಒಡ್ಡುತ್ತವೆ. ಆದರೆ ದುರದೃಷ್ಟವಶಾತ್, ಇಂತಹ ಪರಿಸ್ಥಿತಿಗಳಿದ್ದರೂ, ಹಿಂದಿನ ಸರ್ಕಾರಗಳು ಲಡಾಖ್‌ನ ಅಭಿವೃದ್ಧಿಗೆ ಆದ್ಯತೆ ನೀಡಿರಲಿಲ್ಲ. ಆದರೆ ಇಂದು, ಲಡಾಖ್‌ನ ಅಭಿವೃದ್ಧಿಯು ಕೇಂದ್ರ ಸರ್ಕಾರಕ್ಕೆ ಪ್ರಮುಖ ಆದ್ಯತೆಯಾಗಿದೆ. ಇದು ಕೇಂದ್ರಾಡಳಿತ ಪ್ರದೇಶವಾದಾಗಿನಿಂದ, ಅದರ ಅಭಿವೃದ್ಧಿ ಅಗತ್ಯಗಳಿಗೆ ಇನ್ನಷ್ಟು ಹೆಚ್ಚಿನ ಗಮನ ನೀಡಲಾಗಿದೆ. 2019ರ ವರೆಗೆ, ಲಡಾಖ್ ಸುಮಾರು 1,800 ಕಿಲೋ ಮೀಟರ್ ರಸ್ತೆ ಜಾಲ ಹೊಂದಿತ್ತು. ಇಂದು ಅದು 4,000 ಕಿಲೋ ಮೀಟರ್‌ಗಿಂತಲೂ ಹೆಚ್ಚಾಗಿದೆ. ಹಿಂದೆ ಇಲ್ಲಿ 19 ಪ್ರಮುಖ ಸೇತುವೆಗಳಿದ್ದವು. ಇಂದು ಅವುಗಳ ಸಂಖ್ಯೆ ಸುಮಾರು 75ಕ್ಕೆ ಏರಿದೆ. ಹೆಲಿಪ್ಯಾಡ್‌ಗಳ ಸಂಖ್ಯೆಯೂ 7ರಿಂದ 40ಕ್ಕಿಂತ ಹೆಚ್ಚಾಗಿದೆ. ಹಿಂದೆ, ಲಡಾಖ್‌ನಲ್ಲಿ ಕೇವಲ ಮೂರೂವರೆ ಪ್ರತಿಶತದಷ್ಟು ಮನೆಗಳಿಗೆ ಮಾತ್ರ ನಲ್ಲಿ ನೀರಿನ ಸೌಲಭ್ಯವಿತ್ತು. ಇಂದು ಸುಮಾರು 99 ಪ್ರತಿಶತದಷ್ಟು ಮನೆಗಳಿಗೆ ನಲ್ಲಿ ನೀರಿನ ಸೌಲಭ್ಯ ಲಭ್ಯವಿದೆ. ಲಡಾಖ್‌ನ ಆಸ್ಪತ್ರೆಗಳಲ್ಲಿನ ಹಾಸಿಗೆಗಳ ಸಂಖ್ಯೆಯೂ ದ್ವಿಗುಣಗೊಂಡಿದೆ. ಇದರೊಂದಿಗೆ, ಜೋಜಿಲಾ ಸುರಂಗದಂತಹ ಪ್ರಮುಖ ಯೋಜನೆಗಳ ಕೆಲಸವು ಅತ್ಯಂತ ವೇಗವಾಗಿ ಸಾಗುತ್ತಿದೆ. ಇದು ಪೂರ್ಣಗೊಂಡ ನಂತರ, ಲಡಾಖ್ ದೇಶದ ಉಳಿದ ಭಾಗಗಳೊಂದಿಗೆ ವರ್ಷವಿಡೀ ಉತ್ತಮ ಸಂಪರ್ಕ ಹೊಂದಿರುತ್ತದೆ.

ಸ್ನೇಹಿತರೆ,

ಕೇಂದ್ರ ಸರ್ಕಾರವು ಲಡಾಖ್‌ನಲ್ಲಿ ಸಮೃದ್ಧಿಯ ಹೊಸ ಮಾರ್ಗಗಳನ್ನು ಸೃಷ್ಟಿಸುವತ್ತಲೂ ಗಮನ ಹರಿಸುತ್ತಿದೆ. ಇಂದು ಇಲ್ಲಿ ಪ್ರವಾಸೋದ್ಯಮದಲ್ಲಿ ಅವಕಾಶಗಳು ಹೆಚ್ಚುತ್ತಿವೆ. ಚಳಿಗಾಲದ ಪ್ರವಾಸೋದ್ಯಮ ಮತ್ತು ಸಾಹಸ ಪ್ರವಾಸೋದ್ಯಮ ಉತ್ತೇಜಿಸಲಾಗುತ್ತಿದೆ. ‘ರೋಮಂಚನಾಕಾರಿ ಗ್ರಾಮಗಳ ಕಾರ್ಯಕ್ರಮ’ದ ಅಡಿ, ಕೇಂದ್ರ ಸರ್ಕಾರ ಮತ್ತು ನಾವು ಲಡಾಖ್‌ನ 40ಕ್ಕೂ ಹೆಚ್ಚು ಗಡಿ ಗ್ರಾಮಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ನಾವು ಇವುಗಳನ್ನು ಭಾರತದ “ಮೊದಲ ಗ್ರಾಮಗಳು” ಎಂದು ಕರೆಯುತ್ತೇವೆ. ಇದು ಅತ್ಯಂತ ದೂರದ ಪ್ರದೇಶಗಳಲ್ಲಿಯೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತಿದೆ.

ಸ್ನೇಹಿತರೆ,

ಹಿಂದೆ ಲಡಾಖ್‌ನಲ್ಲಿ ಸುಮಾರು 150  ‘ಹೋಮ್‌ಸ್ಟೇ’ಗಳು ಇದ್ದವು. ಇಂದು ಅವುಗಳ ಸಂಖ್ಯೆ 3 ಸಾವಿರಕ್ಕೆ ಏರಿದೆ. ಲಡಾಖ್‌ನಲ್ಲಿ ಹಸಿರುಮನೆ ಕೃಷಿಯನ್ನು ಕೂಡ ನಿರಂತರವಾಗಿ ಉತ್ತೇಜಿಸಲಾಗಿದೆ. ಇಂದು ಇಲ್ಲಿ 11 ಸಾವಿರ ಹಸಿರು ಮನೆಗಳಿವೆ. ಇವು ರೈತರ ಆದಾಯ ಹೆಚ್ಚಿಸಲು ಹೊಸ ಸಾಧ್ಯತೆಗಳನ್ನು ಸೃಷ್ಟಿಸಿವೆ.

ಸ್ನೇಹಿತರೆ,

ಲಡಾಖ್‌ನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಬೇಕೆಂಬ ಬೇಡಿಕೆ ಬಹಳ ಕಾಲದಿಂದ ಇತ್ತು. ನಮ್ಮ ಸರ್ಕಾರ ಈ ಬೇಡಿಕೆಯನ್ನೂ ಈಡೇರಿಸಿದೆ. ಈ ವರ್ಷದ ಆಗಸ್ಟ್‌ ನಲ್ಲಿ ಲಡಾಖ್‌ನಲ್ಲಿ ಹೈಕೋರ್ಟ್ ಪೀಠ ಸ್ಥಾಪಿಸಲು ಅನುಮೋದನೆ ನೀಡಲಾಯಿತು. ಇದು ಆಡಳಿತ ಮತ್ತು ನ್ಯಾಯ ವ್ಯವಸ್ಥೆ ಎರಡನ್ನೂ ಜನರಿಗೆ ಇನ್ನಷ್ಟು ಸುಲಭವಾಗಿ ತಲುಪುವಂತೆ ಮಾಡುತ್ತದೆ.

ಸ್ನೇಹಿತರೆ,

ಇಂದು ಡಿಜಿಟಲ್ ತಂತ್ರಜ್ಞಾನವು ಅನೇಕ ಹೊಸ ಅವಕಾಶಗಳನ್ನು ನಮ್ಮ ಹತ್ತಿರಕ್ಕೆ ತರುತ್ತಿದೆ. ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಹೋಮ್‌ಸ್ಟೇಗಳು ಅಥವಾ ಸ್ಥಳೀಯ ಉತ್ಪನ್ನಗಳೇ ಆಗಿರಲಿ, ಆನ್‌ಲೈನ್ ವ್ಯವಹಾರವೇ ಇರಲಿ ಆದಾಯದ ಹೊಸ ಮಾರ್ಗಗಳನ್ನು ತೆರೆಯುತ್ತಿದೆ. ಇದೇ ಕಾರಣಕ್ಕಾಗಿ ನಾವು ಲಡಾಖ್ ಮತ್ತು ಇತರ ದೂರದ ಪ್ರದೇಶಗಳಲ್ಲಿ ‘ಭಾರತ್‌ನೆಟ್’ ಮತ್ತು ಹೈ-ಸ್ಪೀಡ್ ಇಂಟರ್ನೆಟ್ ಸೌಲಭ್ಯ ವಿಸ್ತರಿಸಿದ್ದೇವೆ. ಸರ್ಕಾರಿ ಸೇವೆಗಳನ್ನು ಸುಲಭವಾಗಿ ಪಡೆಯಲು, ಯುವಕರು ಆನ್‌ಲೈನ್‌ನಲ್ಲಿ ಕಲಿಯಲು ಅನುವು ಮಾಡಿಕೊಡಲು ಮತ್ತು ಸ್ಥಳೀಯ ಉದ್ಯಮಿಗಳನ್ನು ರಾಷ್ಟ್ರೀಯ ಹಾಗೂ ಜಾಗತಿಕ ಮಾರುಕಟ್ಟೆಗಳೊಂದಿಗೆ ಸಂಪರ್ಕಿಸಲು ನಿರಂತರ ಪ್ರಯತ್ನಗಳು ನಡೆಯುತ್ತಿವೆ.

ಸ್ನೇಹಿತರೆ,

ನಾವು ಲಡಾಖ್‌ನ ಹೊಸ ಪೀಳಿಗೆಯತ್ತ ವಿಶೇಷ ಗಮನ ಹರಿಸುತ್ತಿದ್ದೇವೆ. ಇಲ್ಲಿನ ಯುವಕರಿಗೆ ಗುಣಮಟ್ಟದ ಶಿಕ್ಷಣ ಮತ್ತು ಹೊಸ ತಂತ್ರಜ್ಞಾನಗಳನ್ನು ಕಲಿಯುವ ಅವಕಾಶಗಳು ಸಿಗಬೇಕು; ಅವರು ಇದಕ್ಕಾಗಿ ಬೇರೆ ನಗರಗಳನ್ನು ಅವಲಂಬಿಸುವ ಅಗತ್ಯವಿರಬಾರದು. ಆದ್ದರಿಂದ, ಲೇಹ್‌ನಲ್ಲಿ ಒಂದು ಪ್ರಮುಖ ‘ಶ್ರೇಷ್ಠತಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ. ಐಐಟಿ-ಜಮ್ಮು ಮತ್ತು ಐಐಎಂ-ಜಮ್ಮು ಸಂಸ್ಥೆಗಳಲ್ಲಿ ಸ್ಯಾಟಲೈಟ್‌ ಕ್ಯಾಂಪಸ್‌ ಗಳನ್ನು ಸ್ಥಾಪಿಸುವ ಪ್ರಸ್ತಾಪಗಳ ಮೇಲೆಯೂ ಕೆಲಸ ನಡೆಯುತ್ತಿದೆ. ಇವು ಲಡಾಖ್‌ನ ಯುವಕರಿಗೆ ಅವರ ಸ್ವಂತ ಪ್ರದೇಶದಲ್ಲೇ ಉನ್ನತ ಶಿಕ್ಷಣ, ಸಂಶೋಧನೆ ಮತ್ತು ಮುಂದುವರಿದ ಕೌಶಲ್ಯಗಳನ್ನು ಪಡೆಯಲು ಉತ್ತಮ ಅವಕಾಶಗಳನ್ನು ಸೃಷ್ಟಿಸುತ್ತವೆ.

ಸ್ನೇಹಿತರೆ,

ಕ್ರೀಡಾ ಕ್ಷೇತ್ರದಲ್ಲಿಯೂ ಲಡಾಖ್ ಅಪಾರ ಸಾಮರ್ಥ್ಯ ಹೊಂದಿದೆ. ಇಲ್ಲಿನ ಯುವಕರು ಐಸ್ ಹಾಕಿ, ಚಳಿಗಾಲದ ಕ್ರೀಡೆಗಳು ಮತ್ತು ಪರ್ವತಾರೋಹಣದಂತಹ ಕ್ಷೇತ್ರಗಳಲ್ಲಿ ತಮ್ಮದೇ ಆದ ವಿಶಿಷ್ಟ ಗುರುತು ಮೂಡಿಸಿದ್ದಾರೆ. ಲಡಾಖ್‌ನ ಹೊಸ ಕ್ರೀಡಾ ನೀತಿಯ ಮೂಲಕ ಕ್ರೀಡಾ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರಯತ್ನಗಳು ನಡೆಯುತ್ತಿರುವುದು ನನಗೆ ಸಂತೋಷ ತಂದಿದೆ. ಇಲ್ಲಿನ ಯುವಕರಿಗೆ ಉತ್ತಮ ತರಬೇತಿ ಮತ್ತು ಸೌಲಭ್ಯಗಳು ಸಿಗುವಂತಾಗಬೇಕು, ಇದರಿಂದ ಅವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೊಸ ಮೈಲಿಗಲ್ಲುಗಳನ್ನು ಸಾಧಿಸಬಲ್ಲರು ಎಂಬುದು ನಮ್ಮ ಪ್ರಯತ್ನವಾಗಿದೆ.

ಸ್ನೇಹಿತರೆ,

ನಿಮ್ಮ ಕಠಿಣ ಪರಿಶ್ರಮದಿಂದ ಲಡಾಖ್‌ನಲ್ಲಿ ನೀವು ತಯಾರಿಸುವ ಉತ್ಪನ್ನಗಳು ನಿಜವಾಗಿಯೂ ಅತ್ಯುತ್ತಮವಾಗಿವೆ. ನಾನು ವಿದೇಶಿ ಅತಿಥಿಗಳನ್ನು ಭೇಟಿಯಾದಾಗಲೆಲ್ಲಾ, ಲಡಾಖ್‌ನಲ್ಲಿ ತಯಾರಾದ ವಸ್ತುಗಳನ್ನು ಉಡುಗೊರೆಯಾಗಿ ನೀಡುತ್ತೇನೆ, ನಿಮ್ಮ ಬಗ್ಗೆಯೂ ಅವರಿಗೆ ತಿಳಿಸುತ್ತೇನೆ ಎಂಬುದು ನಿಮಗೂ ತಿಳಿದೇ ಇದೆ. ನಾನು ಜರ್ಮನಿಯ ಚಾನ್ಸೆಲರ್, ಸ್ವೀಡನ್‌ ಪ್ರಧಾನ ಮಂತ್ರಿ ಮತ್ತು ಕಿರ್ಗಿಸ್ತಾನದ ಅಧ್ಯಕ್ಷರಿಗೆ ಲಡಾಖ್‌ನಲ್ಲಿ ತಯಾರಾದ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡಿದ್ದೇನೆ. ಈ ಪ್ರದೇಶದ ಪಶ್ಮಿನಾ, ಸೀ ಬಕ್‌ಥಾರ್ನ್ ಸ್ಥಳೀಯ ಕರಕುಶಲ ವಸ್ತುಗಳು ಮತ್ತು ಏಪ್ರಿಕಾಟ್‌ನಂತಹ ಹಣ್ಣುಗಳು ಅಪಾರ ವಾಣಿಜ್ಯ ಸಾಮರ್ಥ್ಯ ಹೊಂದಿವೆ. ಇದೇ ಕಾರಣಕ್ಕಾಗಿ ನಾವು ಲಡಾಖ್‌ನ ಏಪ್ರಿಕಾಟ್‌ಗಳಿಗೆ ‘ಜಿಐ ಟ್ಯಾಗ್’ ನೀಡಿದ್ದೇವೆ. ಇಂದು ಪ್ರಪಂಚದಾದ್ಯಂತ ಇವುಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಈ ಉತ್ಪನ್ನಗಳಿಗೆ ಹೊಸ ಮಾರುಕಟ್ಟೆಗಳು ಸಿಗಬೇಕು, ಉತ್ತಮ ಬ್ರಾಂಡಿಂಗ್ ಆಗಬೇಕು ಮತ್ತು ಇದರ ಲಾಭ ನೇರವಾಗಿ ಉತ್ಪಾದಕರಿಗೆ ತಲುಪಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ. ನಾವು ಚಾಂಗ್ಪಾ ಸಮುದಾಯದ ಹೈನುಗಾರರ ಕಡೆಗೂ ವಿಶೇಷ ಗಮನ ಹರಿಸುತ್ತಿದ್ದೇವೆ. ಪಶ್ಮಿನಾದೊಂದಿಗೆ ಗುರುತಿಸಿಕೊಂಡಿರುವ ಕಠಿಣ ಪರಿಶ್ರಮ ಮತ್ತು ಸಾಂಪ್ರದಾಯಿಕ ಕೌಶಲಗಳನ್ನು ಇನ್ನಷ್ಟು ಬಲಪಡಿಸಲು ಪ್ರಯತ್ನಗಳು ನಡೆಯುತ್ತಿವೆ. ಲಡಾಖ್‌ನ ಎತ್ತರದ ಪ್ರದೇಶಗಳಲ್ಲಿ ಹೂವುಗಳ ವಾಣಿಜ್ಯ ಕೃಷಿಯನ್ನು ಕೂಡ ಉತ್ತೇಜಿಸಲಾಗುತ್ತಿದೆ.

ಸ್ನೇಹಿತರೆ,

ಲಡಾಖ್‌ನ ಸಾಂಸ್ಕೃತಿಕ ಪರಂಪರೆಯು ನಮ್ಮ ರಾಷ್ಟ್ರದ ಅಮೂಲ್ಯ ಸಂಪತ್ತಾಗಿದೆ. ಇಲ್ಲಿನ ಪ್ರಾಚೀನ ಮಠಗಳು, ಬೌದ್ಧ ಸಂಪ್ರದಾಯಗಳು ಮತ್ತು ಸ್ಥಳೀಯ ಹಬ್ಬಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸಿ, ಕಾಪಾಡಿಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ, ಗೌರವಾನ್ವಿತ ಕುಶೋಕ್ ಬಕುಲ ರಿಂಪೋಚೆ ಅವರ ಕೊಡುಗೆಯು ನಮ್ಮೆಲ್ಲರಿಗೂ ದೊಡ್ಡ ಸ್ಫೂರ್ತಿಯಾಗಿದೆ. ಲಡಾಖ್‌ನ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ವಿಶ್ವಾದ್ಯಂತದ ಜನರಿಗೆ ಪರಿಚಯವಾಗುವಂತೆ ಮಾಡುವುದು ನಮ್ಮ ಸರ್ಕಾರದ ಪ್ರಯತ್ನವಾಗಿದೆ. ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು, ಇಂದು ಲೇಹ್‌ನಲ್ಲಿ ಭಾರತದ ಮೊದಲ ‘ಪೆಟ್ರೋಗ್ಲಿಫ್ ಸಂರಕ್ಷಣಾ ಉದ್ಯಾನವನ’ವನ್ನು ಉದ್ಘಾಟಿಸಲಾಗಿದೆ. ಇದು ಲಡಾಖ್‌ನ ಪ್ರಾಚೀನ ಪರಂಪರೆಯನ್ನು ಸಂರಕ್ಷಿಸುವ ಪ್ರಯತ್ನಗಳನ್ನು ಇನ್ನಷ್ಟು ಬಲಪಡಿಸುತ್ತದೆ. ಮುಂದಿನ ಪೀಳಿಗೆಯು ಈ ಪರಂಪರೆಯನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗುತ್ತದೆ, ವಿಶ್ವಾದ್ಯಂತದ ಪ್ರವಾಸಿಗರು ಲಡಾಖ್‌ನ ಶ್ರೀಮಂತ ಇತಿಹಾಸದ ಬಗ್ಗೆ ತಿಳಿದುಕೊಳ್ಳಲು ಅವಕಾಶವಾಗುತ್ತದೆ.

ಸ್ನೇಹಿತರೆ,

ನಾವೆಲ್ಲರೂ ಒಟ್ಟಾಗಿ ಲಡಾಖ್ ಅನ್ನು ಅಭಿವೃದ್ಧಿಯ ಹೊಸ ಎತ್ತರಕ್ಕೆ ಕೊಂಡೊಯ್ಯುತ್ತೇವೆ ಎಂಬ ವಿಶ್ವಾಸ ನನಗಿದೆ. ಈ ಅಭಿವೃದ್ಧಿ ಕಾರ್ಯಗಳಿಗಾಗಿ ನಿಮ್ಮೆಲ್ಲರಿಗೂ ನಾನು ಮತ್ತೊಮ್ಮೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****