ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ‘ಸೇವಾ ತೀರ್ಥ’ದಲ್ಲಿ ‘ಸಕ್ರಿಯ ಆಡಳಿತ ಮತ್ತು ಸಮಯೋಚಿತ ಅನುಷ್ಠಾನ’ (PRAGATI) ಉತ್ತೇಜಿಸುವ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ (ಐಸಿಟಿ) ಆಧಾರಿತ, ಬಹು-ಮಾದರಿಯ ಪ್ರಗತಿ ವೇದಿಕೆಯ 54ನೇ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯೋಜನೆಗಳು ಮತ್ತು ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಎದುರಾಗಬಹುದಾದ ಅಡೆತಡೆಗಳನ್ನು ನಿವಾರಿಸಲು ಹಾಗೂ ಅವುಗಳ ಅನುಷ್ಠಾನ ಸುಧಾರಿಸಲು, ಈ ವೇದಿಕೆಯು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒಗ್ಗೂಡಿಸಲಿದೆ.
ಸಭೆಯ ವೇಳೆ, ಪ್ರಧಾನಮಂತ್ರಿಯವರು 31 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿನ 16 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದ ರೈಲ್ವೆ, ಏಕ್ತಾ ಮಾಲ್ ಮತ್ತು ಔಷಧ ಪಾರ್ಕ್ ಗಳಿಗೆ ಸಂಬಂಧಿಸಿದ ಮೂಲಸೌಕರ್ಯ ಯೋಜನೆಗಳ ಪರಾಮರ್ಶೆ ನಡೆಸಿದರು. ಈ ಯೋಜನೆಗಳ ಅನುಷ್ಠಾನದ ಕಾಲಮಿತಿ, ವಿವಿಧ ಸಂಸ್ಥೆಗಳ ನಡುವಿನ ಸಮನ್ವಯ ಮತ್ತು ಸಮಸ್ಯೆಗಳನ್ನು ಸಕಾಲದಲ್ಲಿ ಪರಿಹರಿಸುವ ಬಗ್ಗೆ ಗಮನ ಕೇಂದ್ರೀಕರಿಸಿ ಆರ್ಥಿಕ ಬೆಳವಣಿಗೆ ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಅತ್ಯಗತ್ಯವಾದ ಈ ಯೋಜನೆಗಳನ್ನು ಪರಿಶೀಲಿಸಲಾಯಿತು.
‘ಪಿಎಂ ಏಕ್ತಾ ಮಾಲ್’ ಗಳು ಸ್ಥಳೀಯ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಒದಗಿಸಬೇಕು, ಕುಶಲಕರ್ಮಿಗಳ ಜೀವನೋಪಾಯವನ್ನು ಬಲಪಡಿಸಬೇಕು ಮತ್ತು ಅವರ ಉದ್ಯಮ ವಿಸ್ತರಣೆಗೆ ನೆರವಾಗಬೇಕು ಎಂದು ಪ್ರಧಾನಮಂತ್ರಿಯವರು ಒತ್ತಿ ಹೇಳಿದ್ದಾರೆ. ಈ ಮಾಲ್ ಗಳನ್ನು ಪ್ರವಾಸೋದ್ಯಮ ಮತ್ತು ಸ್ಥಳೀಯ ವ್ಯವಹಾರಗಳೊಂದಿಗೆ ಸಂಪರ್ಕಿಸುವಂತೆ ಕರೆ ನೀಡಿರುವ ಅವರು, ಇದರಿಂದ ಬೇಡಿಕೆ ಹೆಚ್ಚಾಗಿ, ಗ್ರಾಮೀಣ ಉತ್ಪಾದನೆ, ಪ್ಯಾಕೇಜಿಂಗ್, ಸಂಗ್ರಹಣೆ ಮತ್ತು ಸಾಗಣೆ ವಲಯಗಳಲ್ಲಿ ಉದ್ಯೋಗ ಸೃಜನೆಯಾಗಬಹುದಾಗಿದೆ ಎಂದರು. ಮುಖ್ಯ ಕಾರ್ಯದರ್ಶಿಗಳು ಮಾಲ್ ಗಳ ನಿರ್ಮಾಣ ಪ್ರಗತಿಯನ್ನು ನಿಯಮಿತವಾಗಿ ಪರಿಶೀಲಿಸುವಂತೆ ಮತ್ತು ನಿಗದಿತ ಸಮಯದೊಳಗೆ ಅವುಗಳ ಪೂರ್ಣಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳುವಂತೆ ಎಂದು ಅವರು ಸೂಚಿಸಿದ್ದಾರೆ.
ಆಂಧ್ರಪ್ರದೇಶ, ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿನ ಬೃಹತ್ ಔಷಧ ಪಾರ್ಕ್ ಗಳನ್ನು ಪರಿಶೀಲಿಸಿದ ಪ್ರಧಾನಮಂತ್ರಿಯವರು, ಸ್ವಾವಲಂಬನೆಯನ್ನು ಬಲಪಡಿಸಲು ಸಕ್ರಿಯ ಔಷಧೀಯ ಪದಾರ್ಥಗಳು ಮತ್ತು ಅಗತ್ಯ ವಸ್ತುಗಳ ದೇಶೀಯ ಉತ್ಪಾದನೆಗೆ ಆದ್ಯತೆ ನೀಡುವುದು ಅಗತ್ಯ ಎಂದು ಒತ್ತಿ ಹೇಳಿದ್ದಾರೆ.
ಅನುಷ್ಠಾನದಲ್ಲಿನ ಅಂತರ ಅಥವಾ ಕೊರತೆಗಳನ್ನು ನಿವಾರಿಸಲು ಹಾಗೂ ಅರ್ಹ ಫಲಾನುಭವಿಗಳಿಗೆ ಸಕಾಲದಲ್ಲಿ ಸೌಲಭ್ಯಗಳು ತಲುಪುವುದನ್ನು ಖಚಿತಪಡಿಸಿಕೊಳ್ಳಲು, ಪ್ರತಿ ತಿಂಗಳು ಜಿಲ್ಲಾ ಮ್ಯಾಜಿಸ್ಟ್ರೇಟ್ ಗಳೊಂದಿಗೆ ಯೋಜನೆಗಳ ಪರಾಮರ್ಶೆ ನಡೆಸುವಂತೆ ಪ್ರಧಾನಮಂತ್ರಿಯವರು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿದ್ದಾರೆ. ವೆಚ್ಚಕ್ಕಿಂತ ಹೆಚ್ಚಾಗಿ ಫಲಿತಾಂಶಗಳ ಮೇಲೆ ಆಡಳಿತ ಗಮನಹರಿಸಬೇಕಿದ್ದು, ಸಾರ್ವಜನಿಕ ವೆಚ್ಚವು ಜನರ ಜೀವನದಲ್ಲಿ ಸ್ಪಷ್ಟವಾದ ಸುಧಾರಣೆಗಳಿಗೆ ದಾರಿ ಮಾಡಿಕೊಡುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಒತ್ತಿ ಹೇಳಿದ್ದಾರೆ. ಮಹತ್ವಾಕಾಂಕ್ಷೆಯ ಜಿಲ್ಲೆಗಳು ಮತ್ತು ಮಹತ್ವಾಕಾಂಕ್ಷೆಯ ಬ್ಲಾಕ್ ಗಳ ಕಾರ್ಯಕ್ರಮಗಳನ್ನು ಉಲ್ಲೇಖಿಸಿರುವ ಅವರು, ಸೇವೆಯು ಸಮರ್ಪಕವಾಗಿ ಲಭ್ಯವಿಲ್ಲದ ಪ್ರದೇಶಗಳಲ್ಲಿ ಅಭಿವೃದ್ಧಿಯನ್ನು ವೇಗಗೊಳಿಸುವಲ್ಲಿ ಒಮ್ಮುಖದ, ನಿಯಮಿತ ಮೇಲ್ವಿಚಾರಣೆಯ ಮತ್ತು ಸ್ಥಳೀಯ ಹೊಣೆಗಾರಿಕೆಯ ಪಾತ್ರವನ್ನು ವಿವರಿಸಿದ್ದಾರೆ. ಆಡಳಿತವನ್ನು ಬಲಪಡಿಸಲು ಮತ್ತು ಕಲ್ಯಾಣ ಯೋಜನೆಗಳ ಅನುಷ್ಠಾನವನ್ನು ಸುಧಾರಿಸಲು ಕೈಗೊಂಡ ನಿರಂತರ ಪ್ರಯತ್ನಗಳು, ಸುಮಾರು 25 ಕೋಟಿ ಜನರು ಬಹು ಆಯಾಮದ ಬಡತನದಿಂದ ಹೊರಬರಲು ನೆರವಾಗಿವೆ ಎಂದು ಅವರು ವಿವರಿಸಿದ್ದಾರೆ.
ಪ್ರಯಾಣಿಕರ ಅನುಕೂಲಕ್ಕೆ ಮತ್ತು ಸುಲಲಿತ ಪ್ರಯಾಣಕ್ಕೆ ದೇಶಾದ್ಯಂತ ಪ್ರಮುಖ ರೈಲು ನಿಲ್ದಾಣಗಳ ಪುನರಾಭಿವೃದ್ಧಿಯನ್ನು ತ್ವರಿತಗೊಳಿಸುವಂತೆ ಅಹಮದಾಬಾದ್ ರೈಲು ನಿಲ್ದಾಣದ ಪುನರಾಭಿವೃದ್ಧಿಯ ಪರಾಮರ್ಶೆ ಸಂದರ್ಭದಲ್ಲಿ ಪ್ರಧಾನಮಂತ್ರಿ ಕರೆ ನೀಡಿದ್ದಾರೆ. ಪುನರಾಭಿವೃದ್ಧಿಗೊಂಡ ನಿಲ್ದಾಣಗಳು ಮೆಟ್ರೋ ಮತ್ತು ಇತರ ಸಾರಿಗೆ ಜಾಲಗಳಿಗೆ ತಡೆರಹಿತ ಸಂಪರ್ಕದೊಂದಿಗೆ ಬಹುಮಾದರಿ ಸಾರಿಗೆ ಕೇಂದ್ರಗಳಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಒತ್ತಿ ಹೇಳಿದ್ದಾರೆ.
ಸಂಬಂಧಿತ ಸಚಿವಾಲಯಗಳು ಮತ್ತು ರಾಜ್ಯ ಸರ್ಕಾರಗಳು ಯೋಜನೆಯ ರೀತಿಯಲ್ಲಿ (ಮಿಷನ್ ಮೋಡ್ ನಲ್ಲಿ) ಅಡಚಣೆಗಳನ್ನು ಪರಿಹರಿಸುವಂತೆ, ಕೇಂದ್ರ-ರಾಜ್ಯ ಮತ್ತು ಅಂತರ-ಸಂಸ್ಥೆ ಸಮನ್ವಯವನ್ನು ಬಲಪಡಿಸುಂತೆ ಹಾಗೂ ಹಿರಿಯರ ಮಟ್ಟದಲ್ಲಿ ನಿಕಟ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳುವಂತೆ ಪ್ರಧಾನಮಂತ್ರಿ ತಿಳಿಸಿದ್ದಾರೆ. ಪ್ರತಿಯೊಂದು ಹಂತದಲ್ಲೂ ಹೆಚ್ಚಿನ ಜವಾಬ್ದಾರಿಯೊಂದಿಗೆ ಕ್ರಿಯಾಶೀಲ ಕಾರ್ಯ ಸಂಸ್ಕೃತಿಗೆ ಕರೆ ನೀಡಿರುವ ಪ್ರಧಾನಮಂತ್ರಿಯವರು, ಅನುಷ್ಠಾನದ ಸವಾಲುಗಳನ್ನು ಮೊದಲೇ ಊಹಿಸುವ, ಸಮಯೋಚಿತ ನಿರ್ಧಾರಗಳನ್ನು ತೆಗೆದುಕೊಳ್ಳುವ ಮತ್ತು ಯೋಜನೆಗಳನ್ನು ನಿಗದಿತ ಸಮಯಕ್ಕೆ ಪೂರ್ಣಗೊಳಿಸಲು ಸ್ಪಷ್ಟ ಹೊಣೆಗಾರಿಕೆಯನ್ನು ನಿಗದಿಪಡಿಸುವ ಅಗತ್ಯವನ್ನು ಒತ್ತಿಹೇಳಿದ್ದಾರೆ.
*****
Chaired the 54th PRAGATI meeting yesterday. The focus areas: Reviewed projects worth over Rs. 16,000 crore across 31 States and UTs. Faster redevelopment of railway stations as multimodal hubs. Boosting self-reliance in pharma manufacturing. Ekta Malls to empower artisans and local businesses. The focus is clear…substantive outcomes, timely execution and long lasting benefits for people. https://t.co/EbUfWNEl7U
— Narendra Modi (@narendramodi) October 29, 2026