ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಬೆಂಗಳೂರಿನಲ್ಲಿರುವ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಎಲ್ಲರಿಗೂ ಕನ್ನಡದಲ್ಲಿ ಶುಭಾಶಯಗಳನ್ನು ತಿಳಿಸಿದರು. ಬೆಂಗಳೂರಿನಲ್ಲಿ ಯೋಗದ ಅದ್ಭುತ ಶಕ್ತಿಯನ್ನು ಅನುಭವಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಕರ್ನಾಟಕವು ಶತಮಾನಗಳಿಂದ ಯೋಗದ ಕೇಂದ್ರವಾಗಿದ್ದು, ಯೋಗ ಪರಂಪರೆಯನ್ನು ಶ್ರೀಮಂತಗೊಳಿಸಿದ ಅನೇಕ ಆಚಾರ್ಯರು ಮತ್ತು ವಿದ್ವಾಂಸರ ಜನ್ಮಭೂಮಿಯಾಗಿದೆ ಎಂದು ಅವರು ಹೇಳಿದರು. ಕನ್ನಡ ಚಿತ್ರರಂಗದ ಮೇರು ನಟ ಡಾ. ರಾಜ್ಕುಮಾರ್ ಅವರ ಕೊಡುಗೆಯನ್ನೂ ಸ್ಮರಿಸಿದರು. “ಕಲಾಲೋಕದ ಜೊತೆಗೆ ಯೋಗಕ್ಕೂ ಸೇವೆ ಸಲ್ಲಿಸಿದ ಇಂತಹ ಯೋಗ ಸಾಧಕರು ಇಲ್ಲಿದ್ದಾರೆ” ಎಂದು ಶ್ರೀ ಮೋದಿ ಹೇಳಿದರು.
ಕರ್ನಾಟಕದ ಶ್ರೀಮಂತ ಪರಂಪರೆಯ ನಡುವೆ ಪ್ರಶಾಂತಿ ಕುಟೀರ 50 ವರ್ಷಗಳ ಕಾಲ ಸಾಗಿ ಬಂದಿರುವುದು ಸೇವೆ ಮತ್ತು ಸಮರ್ಪಣೆಯ ಅಭೂತಪೂರ್ವ ಗಾಥೆಯಾಗಿದೆ. ಪ್ರತಿಯೊಬ್ಬ ನಾಗರಿಕರೂ ಇದರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಪ್ರಧಾನಮಂತ್ರಿಯವರು ಹೇಳಿದರು. ಒಂದು ಸಣ್ಣ ಕೇಂದ್ರವಾಗಿ ಆರಂಭಗೊಂಡ ಸಂಸ್ಥೆಯು ಬೃಹತ್ ಆಂದೋಲನವಾಗಿ ಬೆಳೆದಿರುವುದನ್ನು ಅವರು ಉಲ್ಲೇಖಿಸಿದರು. “ಒಂದು ಸಾಮಾನ್ಯ ಯೋಗ ಕೇಂದ್ರವು ಇಷ್ಟೊಂದು ಬೃಹತ್ ಆಂದೋಲನವಾಗಿ ರೂಪುಗೊಂಡಿರುವುದೇ ಒಂದು ಸ್ಫೂರ್ತಿದಾಯಕ ಸಂಗತಿ” ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು.
ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಆವರಣದಲ್ಲಿ ಹಲವು ಹೊಸ ಸೌಲಭ್ಯಗಳನ್ನು ಉದ್ಘಾಟಿಸಿರುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಎಸ್-ವ್ಯಾಸ (S-VYASA) ಕುಟುಂಬದ ನಿರಂತರ ಪ್ರಯತ್ನಗಳಿಗೆ ಶುಭ ಹಾರೈಸಿದರು. “ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ಹಾಗೂ ಪ್ರಶಾಂತಿ ಕುಟೀರಂನೊಂದಿಗೆ ನಂಟು ಹೊಂದಿರುವ ಲಕ್ಷಾಂತರ ಸಾಧಕರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಶ್ರೀ ಮೋದಿ ಹೇಳಿದರು.
ಈ ವರ್ಷದ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವದೊಂದಿಗೆ ಎಚ್.ವಿ. ಶೇಷಾದ್ರಿ ಅವರ ಜನ್ಮ ಶತಮಾನೋತ್ಸವವೂ ಆಚರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಮಂತ್ರಿಯವರು ಅವರಿಗೆ ಗೌರವಪೂರ್ವಕ ನಮನಗಳನ್ನು ಸಲ್ಲಿಸಿದರು. ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣ ಮಾಡುವ ಧ್ಯೇಯಕ್ಕೆ ಶೇಷಾದ್ರಿ ಅವರು ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದರು ಎಂದು ಹೇಳಿದರು. ದೇಶವನ್ನು ಯಶಸ್ಸಿನ ಶಿಖರಕ್ಕೆ ಕೊಂಡೊಯ್ಯಲು ಸಮರ್ಪಿತ, ಸಮರ್ಥ ಮತ್ತು ಶಿಸ್ತಿನ ನಾಗರಿಕರ ಅಗತ್ಯವಿದೆ ಎಂಬುದನ್ನು ಅವರು ಅರಿತಿದ್ದರು ಎಂದು ಪ್ರಧಾನಮಂತ್ರಿಯವರು ತಿಳಿಸಿದರು.
ಎಚ್.ವಿ. ಶೇಷಾದ್ರಿ ಅವರ ಸರಳತೆ, ಉನ್ನತ ವ್ಯಕ್ತಿತ್ವ, ಅಪಾರ ಅನುಭವ ಹಾಗೂ ತೆರೆಮರೆಯಲ್ಲಿದ್ದುಕೊಂಡೇ ಇತರರನ್ನು ಬೆಳೆಸುವ, ಜನರನ್ನು ಒಗ್ಗೂಡಿಸುವ ಮತ್ತು ರಾಷ್ಟ್ರಸೇವೆಗೆ ಸಜ್ಜುಗೊಳಿಸುವ ಅವರ ಆಳವಾದ ವಿನಯಶೀಲ ಗುಣಗಳನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಮಗುವಿನ ಪೋಷಣೆ ಮತ್ತು ಆರೈಕೆಗಾಗಿ ನಿಸ್ವಾರ್ಥವಾಗಿ ಇಡೀ ರಾತ್ರಿ ಎಚ್ಚರವಾಗಿರುವ ತಾಯಿಯಿಂದ ನಾವು ಕಲಿಯಬೇಕೆಂದು ಶೇಷಾದ್ರಿ ಅವರು ಆಗಾಗ್ಗೆ ನೀಡುತ್ತಿದ್ದ ಉದಾಹರಣೆಯನ್ನು ಹಂಚಿಕೊಂಡರು. “ಈ ಭಾವನೆಯನ್ನು ಸಮಾಜದ ಮಟ್ಟಕ್ಕೆ ವಿಸ್ತರಿಸಿದರೆ, ಸಮಾಜಕ್ಕೆ ಎಷ್ಟು ದೊಡ್ಡ ಒಳಿತಾಗಬಹುದು” ಎಂದು ಶ್ರೀ ಮೋದಿ ಹೇಳಿದರು.
ಎಚ್.ವಿ. ಶೇಷಾದ್ರಿ ಅವರು ತಾಯಿಯ ಪರಿಶುದ್ಧತೆ ಮತ್ತು ನಿಸ್ವಾರ್ಥತೆಯ ಭಾವನೆಯೊಂದಿಗೆ ಸಮಾಜಕ್ಕೆ ಸೇವೆ ಸಲ್ಲಿಸಿದರು ಎಂದು ಪ್ರಧಾನಮಂತ್ರಿಯವರು ಹೇಳಿದರು. ಶೇಷಾದ್ರಿ ಅವರ ಪ್ರೀತಿ ಮತ್ತು ಮಾರ್ಗದರ್ಶನ ನಿರಂತರವಾಗಿ ಪಡೆದಿರುವುದು ತಮ್ಮ ಸೌಭಾಗ್ಯ ಎಂದು ತಿಳಿಸಿದರು. “ಅವರೊಂದಿಗೆ ಕಳೆದ ಸಮಯದ ನೆನಪುಗಳು ಮತ್ತು ಅವರು ಆಡಿದ ಮಾತುಗಳು ಇಂದಿಗೂ ನನಗೆ ಅತ್ಯಂತ ಅಮೂಲ್ಯವಾಗಿವೆ” ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು.
ಸಮಾಜಕ್ಕೆ ಎರಡೂ ಕೈಗಳಿಂದ ನೀಡಿದಾಗ, ಸಮಾಜವು ಲಕ್ಷಾಂತರ ಕೈಗಳಿಂದ ಮರಳಿ ನೀಡುತ್ತದೆ ಎಂಬ ಎಚ್.ವಿ. ಶೇಷಾದ್ರಿ ಅವರ ಮತ್ತೊಂದು ಅವಿಸ್ಮರಣೀಯ ಬೋಧನೆಯನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ತಮ್ಮ ಜೀವನದಲ್ಲಿ ಈ ಸತ್ಯವು ಪದೇಪದೇ ಸಾಕಾರಗೊಂಡಿರುವುದನ್ನು ತಾವು ಕಂಡಿದ್ದೇನೆ ಎಂದರು. “ನಾನು ಸಾರ್ವಜನಿಕ ಸೇವೆಯಲ್ಲಿ ತೊಡಗಿದಾಗಲೆಲ್ಲ ಜನರು ತಮ್ಮ ಆಶೀರ್ವಾದಗಳನ್ನು ನೀಡಿದ್ದಾರೆ. ಇದು ನನ್ನ ಜೀವನದ ಅತ್ಯಂತ ದೊಡ್ಡ ಆಸ್ತಿಯಾಗಿದೆ” ಎಂದು ಶ್ರೀ ಮೋದಿ ಹೇಳಿದರು.
ಇದೇ ನಿಸ್ವಾರ್ಥ ಸೇವಾ ಮನೋಭಾವವು ಎಚ್. ವಿ. ಶೇಷಾದ್ರಿ ಅವರ ಕುಟುಂಬದಾದ್ಯಂತ ಕಂಡುಬರುತ್ತದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ತಮ್ಮ ಸಮರ್ಪಿತ ಕಾರ್ಯಗಳ ಮೂಲಕ ಶೇಷಾದ್ರಿ ಅವರ ಧ್ಯೇಯವನ್ನು ಮುಂದುವರಿಸುತ್ತಿರುವ ಡಾ. ಎಚ್. ಆರ್. ನಾಗೇಂದ್ರ ಮತ್ತು ಡಾ. ಆರ್. ನಾಗರತ್ನ ಅವರ ಕಾರ್ಯವನ್ನು ಶ್ಲಾಘಿಸಿದರು. “ಅವರ ಪ್ರತಿಯೊಂದು ಪ್ರಯತ್ನವನ್ನೂ ನಾನು ಮೆಚ್ಚುತ್ತೇನೆ ಮತ್ತು ಅವರಿಬ್ಬರನ್ನೂ ಅಭಿನಂದಿಸುತ್ತೇನೆ” ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು.
ಭಾರತವು ವಸಾಹತುಶಾಹಿ ಆಳ್ವಿಕೆಯ ಸಂಕೋಲೆಗಳಲ್ಲಿ ಬಂಧಿತವಾಗಿದ್ದ ಕಾಲಘಟ್ಟವನ್ನು ಹಾಗೂ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಂದರ್ಭವನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಇದೇ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದರಂತಹ ರಾಷ್ಟ್ರಋಷಿಗಳು ದೇಶದ ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು ಎಂದು ಹೇಳಿದರು. “ಅವರು ಭಾರತದ ಯುವಜನತೆಗೆ ಯೋಗದ ಮಾರ್ಗವನ್ನು ತೋರಿಸಿದರು” ಎಂದು ಶ್ರೀ ಮೋದಿ ಹೇಳಿದರು.
ಸ್ವಾಮಿ ವಿವೇಕಾನಂದರಂತಹ ಸಂತರು ನೀಡಿದ ಸ್ಫೂರ್ತಿಯಿಂದ ಪ್ರಶಾಂತಿ ಕುಟೀರಂ ಮತ್ತು ಎಸ್-ವ್ಯಾಸದಂತಹ ಸಂಸ್ಥೆಗಳು ಹುಟ್ಟಿಕೊಂಡವು ಎಂದು ಪ್ರಧಾನಮಂತ್ರಿಯವರು ಹೇಳಿದರು. ಈ ಸಂಸ್ಥೆಗಳು ಜನಸಾಮಾನ್ಯರನ್ನು ಯೋಗದೊಂದಿಗೆ ಬೆಸೆಯುವುದಷ್ಟೇ ಅಲ್ಲದೆ, ಆಧುನಿಕ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸಿವೆ. ಜಾಗತಿಕ ಮಟ್ಟದಲ್ಲಿ ಸೇವೆ ಸಲ್ಲಿಸುತ್ತಿರುವ ಯೋಗ ಸಾಧಕರು, ಶಿಕ್ಷಕರು, ವೈದ್ಯರು ಮತ್ತು ತತ್ವಜ್ಞಾನಿಗಳಿಗೆ ತರಬೇತಿ ನೀಡಿವೆ. ಯೋಗ, ಆಯುರ್ವೇದ, ಪ್ರಕೃತಿ ಚಿಕಿತ್ಸೆ ಮತ್ತು ಆಧುನಿಕ ವೈದ್ಯ ಪದ್ಧತಿಯನ್ನು ಸಮನ್ವಯಗೊಳಿಸುವ ಸಮಗ್ರ ಸ್ವಾಸ್ಥ್ಯ ವ್ಯವಸ್ಥೆಯನ್ನೂ ರೂಪಿಸಿವೆ ಎಂದು ಅವರು ಹೇಳಿದರು. ಒತ್ತಡ ಮತ್ತು ಜೀವನಶೈಲಿ ಸಂಬಂಧಿತ ಕಾಯಿಲೆಗಳ ಕುರಿತು ಅವು ನಡೆಸಿರುವ ಸಂಶೋಧನೆಯನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. “ಈ ನಿಟ್ಟಿನಲ್ಲಿ ಕೈಗೊಂಡಿರುವ ಸಂಶೋಧನಾ ಕಾರ್ಯಗಳು ಇಡೀ ಜಗತ್ತಿಗೆ ಉಪಯುಕ್ತವಾಗಿವೆ. ಈ ಪ್ರಯತ್ನಗಳಿಗಾಗಿ ಪ್ರಶಾಂತಿ ಕುಟೀರಂ ಅನ್ನು ನಾನು ಅಭಿನಂದಿಸುತ್ತೇನೆ” ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು.
ಕಳೆದ 12 ವರ್ಷಗಳಲ್ಲಿ ಭಾರತವು ತನ್ನ ಸಂಸ್ಕೃತಿ, ಅಸ್ಮಿತೆ ಮತ್ತು ವೈಜ್ಞಾನಿಕ ಪರಂಪರೆಯನ್ನು ಸಂಪೂರ್ಣ ಆತ್ಮವಿಶ್ವಾಸದಿಂದ ಜಗತ್ತಿನ ಮುಂದೆ ಪ್ರಸ್ತುತಪಡಿಸಿದೆ ಎಂದು ಪ್ರಧಾನಮಂತ್ರಿಯವರು ಒತ್ತಿಹೇಳಿದರು. ಇದರ ಪರಿಣಾಮವಾಗಿ ಆಸ್ಟ್ರೇಲಿಯಾ, ಆಫ್ರಿಕಾ ಮತ್ತು ಅಮೆರಿಕ ಸೇರಿದಂತೆ ವಿಶ್ವದಾದ್ಯಂತ ಕೋಟ್ಯಂತರ ಜನರು ಅಂತಾರಾಷ್ಟ್ರೀಯ ಯೋಗ ದಿನದಲ್ಲಿ ಭಾಗವಹಿಸುತ್ತಿದ್ದಾರೆ. ಜಗತ್ತಿನಾದ್ಯಂತ ಶಾಲೆಗಳು, ಸಂಸ್ಥೆಗಳು ಮತ್ತು ಕೆಲಸದ ಸ್ಥಳಗಳಲ್ಲಿಯೂ ಯೋಗ ಸ್ಥಾನ ಪಡೆದುಕೊಂಡಿದೆ. ಸೌದಿ ಅರೇಬಿಯಾ ಯೋಗವನ್ನು ಕ್ರೀಡಾ ಚಟುವಟಿಕೆಯೆಂದು ಗುರುತಿಸಿದ್ದು, ಅಲ್ಲಿನ ಕ್ರೀಡಾ ಸಚಿವಾಲಯವು ಭಾರತದ ಆಯುಷ್ ಸಚಿವಾಲಯದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ ಎಂದು ಅವರು ತಿಳಿಸಿದರು. “ಯೋಗವನ್ನು ನಿರಂತರವಾಗಿ ಪ್ರೋತ್ಸಾಹಿಸುತ್ತಿರುವ ವಿದೇಶಿ ನಾಗರಿಕರ ಉದಾಹರಣೆಗಳು ನಿರಂತರವಾಗಿ ಮುನ್ನೆಲೆಗೆ ಬರುತ್ತಿವೆ. ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸುವ ಮೂಲಕ ದೇಶವು ಅವರ ಹೆಮ್ಮೆಯನ್ನೂ ಹೆಚ್ಚಿಸುತ್ತಿದೆ” ಎಂದು ಶ್ರೀ ಮೋದಿ ಹೇಳಿದರು.
ಯೋಗದ ಬಗ್ಗೆ ಜಗತ್ತಿನಾದ್ಯಂತ ಹೆಚ್ಚುತ್ತಿರುವ ಆಸಕ್ತಿಯು ಭಾರತದ ಬಗ್ಗೆ ಕುತೂಹಲವನ್ನು ಮೂಡಿಸುತ್ತಿದೆ ಮತ್ತು ನಮ್ಮ ಸಂಸ್ಕೃತಿ ಹಾಗೂ ಸಾಂಪ್ರದಾಯಿಕ ಜ್ಞಾನ ಪರಂಪರೆಯೆಡೆಗೆ ಆಕರ್ಷಣೆಯನ್ನು ಹೆಚ್ಚಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ಸಾಮೂಹಿಕ ಪ್ರಯತ್ನಗಳ ಮೂಲಕ ಜಾಗತಿಕ ಸಂಪರ್ಕಕ್ಕೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತಿವೆ. ಇದೇ ವೇಳೆ ಆಯುರ್ವೇದವೂ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಿಸುತ್ತಿದೆ ಎಂದು ಅವರು ಉಲ್ಲೇಖಿಸಿದರು. “ವಿಶ್ವದ ವಿವಿಧ ದೇಶಗಳಲ್ಲಿ 150ಕ್ಕೂ ಹೆಚ್ಚು ಆಯುರ್ವೇದ ತರಬೇತಿ ಕೋರ್ಸ್ಗಳಿಗೆ ಮಾನ್ಯತೆ ದೊರೆತಿದೆ. ಆಯುರ್ವೇದದ ವಿಸ್ತರಣೆಗೆ ಸಹಕಾರ ನೀಡುವ ಉದ್ದೇಶದಿಂದ ವಿಶ್ವದ 28 ದೇಶಗಳೊಂದಿಗೆ ತಿಳುವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ” ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು.
ಯೋಗವನ್ನು ಉತ್ತೇಜಿಸುವುದರ ಜೊತೆಗೆ ಯೋಗ ಮತ್ತು ಆಯುರ್ವೇದದ ಪ್ರಯೋಜನಗಳು ಪ್ರತಿಯೊಬ್ಬ ನಾಗರಿಕನಿಗೂ ತಲುಪುವಂತೆ ಮಾಡಲು ಸರ್ಕಾರವು ಹಲವು ನಿಯಮಗಳಿಗೆ ತಿದ್ದುಪಡಿ ತಂದಿದೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಭಾರತದಲ್ಲಿ ಯೋಗಾಸನಕ್ಕೆ ಸ್ಪರ್ಧಾತ್ಮಕ ಕ್ರೀಡೆಯ ಮಾನ್ಯತೆ ನೀಡಲಾಗಿದ್ದು, ಖೇಲೋ ಇಂಡಿಯಾ ಮತ್ತು ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಅದಕ್ಕೆ ಪ್ರತ್ಯೇಕ ಸ್ಥಾನ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು. “ಈ ಬದಲಾವಣೆಯು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ. ಯೋಗ ಕ್ಷೇತ್ರದೊಂದಿಗೆ ಸಂಬಂಧ ಹೊಂದಿರುವವರು ಸ್ಪರ್ಧಾತ್ಮಕ ಪಂದ್ಯಾವಳಿಗಳಲ್ಲಿ ಭಾಗವಹಿಸಲು ಇದರಿಂದ ಹೊಸ ಅವಕಾಶಗಳು ತೆರೆದುಕೊಂಡಿವೆ” ಎಂದು ಶ್ರೀ ಮೋದಿ ಹೇಳಿದರು.
ಪ್ರತ್ಯೇಕ ಆಯುಷ್ ಸಚಿವಾಲಯದ ಸ್ಥಾಪನೆ ಹಾಗೂ ಆಯುರ್ವೇದ ಸಂಶೋಧನೆ ಮತ್ತು ಪೇಟೆಂಟ್ಗಳಿಗೆ ಬೆಂಬಲ ನೀಡುವ ಮೂಲಕ ಸರ್ಕಾರವು ಆಯುರ್ವೇದವನ್ನು ನಿರಂತರವಾಗಿ ಉತ್ತೇಜಿಸುತ್ತಿದೆ ಎಂದು ಪ್ರಧಾನಮಂತ್ರಿಯವರು ವಿವರಿಸಿದರು. ಇದರಿಂದ ಆಯುಷ್ ಆರ್ಥಿಕತೆಯು ಲಕ್ಷಾಂತರ ಕೋಟಿ ರೂಪಾಯಿಗಳ ಮಟ್ಟಕ್ಕೆ ಬೆಳೆದಿದೆ. ಗಿಡಮೂಲಿಕೆ ಉತ್ಪನ್ನಗಳ ರಫ್ತು ಹೆಚ್ಚುತ್ತಿದ್ದು, ತಲೆಮಾರುಗಳಿಂದ ಭಾರತೀಯ ಮನೆಗಳಲ್ಲಿ ಬಳಸಲಾಗುತ್ತಿರುವ ಅರಿಶಿನಕ್ಕೆ ಜಾಗತಿಕ ಬೇಡಿಕೆಯೂ ಹೆಚ್ಚುತ್ತಿದೆ ಎಂದು ಅವರು ತಿಳಿಸಿದರು. ಅರಿಶಿನ ರಫ್ತಿಗೆ ಉತ್ತೇಜನ ನೀಡಲು ಕೈಗೊಂಡಿರುವ ಕ್ರಮಗಳನ್ನೂ ಅವರು ಉಲ್ಲೇಖಿಸಿದರು. “ಅರಿಶಿನದ ಉತ್ಪಾದನೆ, ಗುಣಮಟ್ಟ ಮತ್ತು ರಫ್ತಿಗೆ ಹೊಸ ಬಲ ನೀಡಲು ನಾವು ರಾಷ್ಟ್ರೀಯ ಅರಿಶಿನ ಮಂಡಳಿಯನ್ನೂ ರಚಿಸಿದ್ದೇವೆ” ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು.
ಭಾರತದ ಪ್ರಾಚೀನ ವಿಜ್ಞಾನ ಮತ್ತು ಆಧುನಿಕ ಸಂಶೋಧನೆಯ ಪ್ರಯೋಜನಗಳನ್ನು ಮಾನವಕುಲದೊಂದಿಗೆ ಹಂಚಿಕೊಳ್ಳುವುದರ ಜೊತೆಗೆ ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಅಗತ್ಯವನ್ನು ಪ್ರಧಾನಮಂತ್ರಿಯವರು ಒತ್ತಿಹೇಳಿದರು. ವಿದೇಶಿ ವೈದ್ಯಕೀಯ ಸೇವೆ ಪಡೆಯಲು ಭಾರತಕ್ಕೆ ಬರುವವರಿಗೆ ಪ್ರಯಾಣ ಸುಲಭವಾಗುವಂತೆ ಇ-ಆಯುಷ್ ವೀಸಾ ಸೌಲಭ್ಯವನ್ನು ಆರಂಭಿಸಿರುವುದನ್ನು ಹಾಗೂ ಜಾಮ್ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ವೈದ್ಯಕೀಯ ಕೇಂದ್ರವನ್ನು ಸ್ಥಾಪಿಸಿರುವುದನ್ನು ಅವರು ಉಲ್ಲೇಖಿಸಿದರು. “ಇದರ ಮೂಲಕ ಸಾಂಪ್ರದಾಯಿಕ ವೈದ್ಯ ಪದ್ಧತಿಯಲ್ಲಿ ಸಂಶೋಧನೆ ಮತ್ತು ಅಂತರರಾಷ್ಟ್ರೀಯ ಸಹಕಾರಕ್ಕೆ ಉತ್ತೇಜನ ನೀಡಲಾಗುತ್ತಿದೆ” ಎಂದು ಶ್ರೀ ಮೋದಿ ಹೇಳಿದರು.
ವಿಶ್ವ ಬ್ಯಾಂಕ್ನ ಇತ್ತೀಚಿನ ವರದಿಯ ಪ್ರಕಾರ, ಕಳೆದ 12ರಿಂದ 13 ವರ್ಷಗಳಲ್ಲಿ ಸುಮಾರು 50 ಕೋಟಿ ಭಾರತೀಯರು ತೀವ್ರ ಬಡತನದಿಂದ ಹೊರಬಂದಿದ್ದಾರೆ ಎಂದು ಪ್ರಧಾನಮಂತ್ರಿಯವರು ತಿಳಿಸಿದರು. ಇದರಿಂದ ಕುಟುಂಬಗಳು ಆರೋಗ್ಯಕ್ಕೆ ಆದ್ಯತೆ ನೀಡಲು ಹೊಸ ಅವಕಾಶಗಳು ತೆರೆದುಕೊಂಡಿವೆ. 140 ಕೋಟಿ ನಾಗರಿಕರು ವಿಕಸಿತ ಭಾರತ ನಿರ್ಮಾಣದ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಪ್ರಶಾಂತಿ ಕುಟೀರಂ ಸಂಸ್ಥೆಯು ಯೋಗದ ಮೂಲಕ ಆರೋಗ್ಯದ ಮಹತ್ವವನ್ನು ಜನರಿಗೆ ತಲುಪಿಸಲು ನೆರವಾಗಬೇಕು ಎಂದು ಅವರು ಕರೆ ನೀಡಿದರು. ಹೊಸ ಗುರಿಗಳನ್ನು ಸಾಧಿಸಲು ಸಂಸ್ಥೆಯು ಮಾರ್ಗಸೂಚಿಯನ್ನು ರೂಪಿಸಬೇಕು ಎಂದು ಪ್ರಧಾನಮಂತ್ರಿಯವರು ಸಲಹೆ ನೀಡಿದರು. “ಇದರಿಂದ ಯುವಶಕ್ತಿಯ ಪ್ರಯೋಜನ ಪ್ರಶಾಂತಿ ಕುಟೀರಂಗೂ ದೊರೆಯಲಿದೆ ಮತ್ತು ದೇಶಕ್ಕೂ ದೊರೆಯಲಿದೆ” ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು.
*****
Delighted to join the Golden Jubilee celebrations of Prashanti Kutiram in Bengaluru. Its efforts to integrate modern science with India's spiritual wisdom are commendable. https://t.co/CRe0lrSZZl
— Narendra Modi (@narendramodi) November 13, 2026
प्रशांति कुटीरम की Golden Jubilee के साथ ही... इस वर्ष हम श्रद्धेय एच. वी. शेषाद्रि जी की जन्मशताब्दी भी मना रहे हैं। मैं उन्हें श्रद्धापूर्वक नमन करता हूं। शेषाद्रि जी ने अपना पूरा जीवन ‘व्यक्ति निर्माण से राष्ट्र निर्माण’ के मिशन को आगे बढ़ाने में लगाया: PM @narendramodi
— PMO India (@PMOIndia) November 13, 2026
जब देश गुलामी की बेड़ियों में जकड़ा हुआ था तब एक ओर लाखों स्वतंत्रता सेनानी, आज़ादी की लड़ाई लड़ रहे थे... तो दूसरी ओर, स्वामी विवेकानंद जैसे राष्ट्र ऋषि भी थे जिन्होंने भारत की आध्यात्मिक चेतना को जागृत किया। भारत के युवाओं को योग का मार्ग दिखाया: PM @narendramodi
— PMO India (@PMOIndia) November 13, 2026
पिछले 12 वर्षों में भारत, अपनी संस्कृति, अपनी पहचान और अपने ज्ञान-विज्ञान को पूरे आत्मविश्वास के साथ दुनिया के सामने रख रहा है। इसी का परिणाम है भारत की पहल पर अब पूरा विश्व अंतर्राष्ट्रीय योग दिवस मनाता है: PM @narendramodi
— PMO India (@PMOIndia) November 13, 2026
भारत में योगासन को प्रतिस्पर्धी खेल के रूप में भी मान्यता दी गई है। खेलो इंडिया और नेशनल गेम्स जैसे आयोजनों में भी योगासन के लिए नई जगह बनी है। ये बदलाव भारत के लिए बहुत महत्वपूर्ण है। इससे योग से जुड़े लोगों के लिए प्रतिस्पर्धी प्रतियोगिताओं में हिस्सा लेने के भी रास्ते खुल गए हैं: PM @narendramodi
— PMO India (@PMOIndia) November 13, 2026
हमने आयुर्वेद से जुड़ी research और आयुर्वेद आधारित patents को प्रोत्साहन दिया और आज इसका भी परिणाम हमारे सामने है। भारत से आयुष और herbal उत्पादों का निर्यात लगातार बढ़ रहा है: PM @narendramodi
— PMO India (@PMOIndia) November 13, 2026