ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಕರ್ನಾಟಕದ ಮೈಸೂರಿನಲ್ಲಿ ಭಾರತದ ಮೊದಲ ಎಲ್ಇಡಿ ಗುಮ್ಮಟ ತಾರಾಲಯವಾದ ಕಾಸ್ಮಾಸ್-ಮೈಸೂರು ತಾರಾಲಯವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಯವರು, ಎಲ್ಲರಿಗೂ ಕನ್ನಡದಲ್ಲಿ ಶುಭಾಶಯಗಳನ್ನು ತಿಳಿಸಿದರು. ವಿವೇಕ ಸ್ಮಾರಕವನ್ನು ಉದ್ಘಾಟಿಸಿದ ಕೆಲವೇ ತಿಂಗಳುಗಳ ಬಳಿಕ, ಕಾಸ್ಮಾಸ್ ತಾರಾಲಯವನ್ನು ರಾಷ್ಟ್ರಕ್ಕೆ ಸಮರ್ಪಿಸಲು ಮತ್ತೆ ಮೈಸೂರಿಗೆ ಆಗಮಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ವಿವೇಕ ಸ್ಮಾರಕವು ಆತ್ಮಾವಲೋಕನ ಮತ್ತು ಆಧ್ಯಾತ್ಮಿಕ ಸಾಧನೆಗೆ ಸ್ಫೂರ್ತಿ ನೀಡಿದರೆ, ಕಾಸ್ಮಾಸ್ ತಾರಾಲಯವು ವಿಶಾಲ ಬ್ರಹ್ಮಾಂಡದ ರಹಸ್ಯಗಳನ್ನು ಅರಿಯಲು ನಮ್ಮ ದೃಷ್ಟಿಯನ್ನು ಆಕಾಶದತ್ತ ಹರಿಸುವಂತೆ ಮಾಡುತ್ತದೆ ಎಂದು ಅವರು ಹೇಳಿದರು. ಈ ಎರಡೂ ತಾಣಗಳು ಮಹತ್ವದ ಸಾಂಸ್ಕೃತಿಕ ಸಂದೇಶವನ್ನು ಸಾರುತ್ತವೆ ಎಂದು ಒತ್ತಿಹೇಳಿದರು. “ಭಾರತದಲ್ಲಿ ಆಧ್ಯಾತ್ಮ ಮತ್ತು ವಿಜ್ಞಾನದ ಪರಂಪರೆಗಳು ಸದಾ ಜೊತೆಜೊತೆಯಾಗಿ ಮುನ್ನಡೆದಿವೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ” ಎಂದು ಶ್ರೀ ಮೋದಿ ಹೇಳಿದರು.
ಪ್ರಾಚೀನ ಭಾರತದ ಪೂರ್ವಜರು ಆಕಾಶವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತಿದ್ದರು, ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಅರ್ಥಮಾಡಿಕೊಳ್ಳುತ್ತಿದ್ದರು, ಪಂಚಾಂಗಗಳನ್ನು ರಚಿಸುತ್ತಿದ್ದರು ಹಾಗೂ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳ ಲೆಕ್ಕಾಚಾರ ಮಾಡುತ್ತಿದ್ದರು ಎಂದು ಪ್ರಧಾನಮಂತ್ರಿಯವರು ಸ್ಮರಿಸಿದರು. ಆರ್ಯಭಟ, ವರಾಹಮಿಹಿರ, ಭಾಸ್ಕರಾಚಾರ್ಯ ಮತ್ತು ನೀಲಕಂಠ ಸೋಮಯಾಜಿ ಅವರಂತಹ ಮಹಾನ್ ಭಾರತೀಯ ಖಗೋಳ ವಿಜ್ಞಾನಿಗಳ ಪರಂಪರೆಯನ್ನು ಅವರು ಉಲ್ಲೇಖಿಸಿದರು. “ಅಂದು ಇಂದಿನಂತೆ ಅತ್ಯಾಧುನಿಕ ಉಪಕರಣಗಳು ಮತ್ತು ತಂತ್ರಜ್ಞಾನ ಲಭ್ಯವಿರಲಿಲ್ಲ. ಆದರೂ ಅವರು ಮಹತ್ವದ ಆವಿಷ್ಕಾರಗಳನ್ನು ಮಾಡಿದರು ಮತ್ತು ಕಠಿಣ ಲೆಕ್ಕಾಚಾರಗಳನ್ನು ಮಾಡಿದರು” ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು.
ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪನೆ ಹಾಗೂ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯ ಸ್ಥಾಪನೆಗೆ ಅಡಿಪಾಯ ಹಾಕುವಲ್ಲಿ ಒಡೆಯರ್ ರಾಜಮನೆತನವು ವಹಿಸಿದ ಮಹತ್ವದ ಪಾತ್ರವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಜ್ಞಾನ ಸಂಸ್ಥೆಗಳನ್ನು ಬೆಳೆಸುವ ಶ್ರೀಮಂತ ಪರಂಪರೆ ಮೈಸೂರಿಗಿದೆ ಎಂದು ಹೇಳಿದರು. ತಲೆಮಾರುಗಳ ವಿದ್ವಾಂಸರಿಗೆ ಪ್ರೋತ್ಸಾಹ ನೀಡುವಲ್ಲಿ ಈ ಸಂಸ್ಥೆಗಳು ಮಹತ್ವದ ಪಾತ್ರ ವಹಿಸಿವೆ. ಇದೀಗ ಅತ್ಯಾಧುನಿಕ ತಾರಾಲಯವನ್ನು ಯುವಜನರಿಗೆ ಮತ್ತು ನಾಗರಿಕರಿಗೆ ಸಮರ್ಪಿಸುವ ಮೂಲಕ ಮೈಸೂರು ಭಾರತದ ವೈಜ್ಞಾನಿಕ ಪಯಣಕ್ಕೆ ಹೊಸ ಅಧ್ಯಾಯವನ್ನು ಸೇರಿಸುತ್ತಿದೆ ಎಂದು ಅವರು ತಿಳಿಸಿದರು. ಎಲ್ಇಡಿ ಗುಮ್ಮಟದೊಳಗೆ ಪ್ರದರ್ಶನ ವೀಕ್ಷಿಸುವುದೇ ಒಂದು ಅದ್ಭುತ ಅನುಭವವಾಗಿದೆ ಎಂದು ಹೇಳಿದ ಪ್ರಧಾನಮಂತ್ರಿಯವರು, ಈ ಮಹತ್ವದ ಸಾಧನೆಗಾಗಿ ದೇಶದ ಜನರನ್ನು ಅಭಿನಂದಿಸಿದರು. “ಈ ತಾರಾಲಯದ ನಿರ್ಮಾಣದಲ್ಲಿ ತೊಡಗಿಸಿಕೊಂಡ ಭಾರತೀಯ ಖಭೌತಶಾಸ್ತ್ರ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಎಲ್ಲರನ್ನೂ ನಾನು ಅಭಿನಂದಿಸುತ್ತೇನೆ” ಎಂದು ಶ್ರೀ ಮೋದಿ ಹೇಳಿದರು.
ಭಾರತದ ರಾಷ್ಟ್ರೀಯ ಘೋಷವಾಕ್ಯವಾದ ‘ಜೈ ಜವಾನ್, ಜೈ ಕಿಸಾನ್’ ಎಂಬುದಕ್ಕೆ ಅಟಲ್ ಬಿಹಾರಿ ವಾಜಪೇಯಿ ಅವರು ‘ಜೈ ವಿಜ್ಞಾನ’ವನ್ನು ಸೇರಿಸಿದ್ದು, 21ನೇ ಶತಮಾನದ ಭಾರತಕ್ಕೆ ಮಾರ್ಗದರ್ಶನ ನೀಡಲು ತಾವು ‘ಜೈ ಅನುಸಂಧಾನ’ವನ್ನು ಸೇರ್ಪಡೆಗೊಳಿಸಿದ್ದನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಕಳೆದ ವರ್ಷ ಮುಂಬೈನಲ್ಲಿ ನಡೆದ ಖಗೋಳಶಾಸ್ತ್ರ ಮತ್ತು ಖಭೌತಶಾಸ್ತ್ರದ ಅಂತರರಾಷ್ಟ್ರೀಯ ಒಲಿಂಪಿಯಾಡ್ನಲ್ಲಿ ಭಾರತೀಯ ಯುವಜನರು ಉತ್ಸಾಹದಿಂದ ಭಾಗವಹಿಸಿದ್ದನ್ನು ಅವರು ಶ್ಲಾಘಿಸಿದರು. ಈ ವರ್ಷ ವಿಯೆಟ್ನಾಂನಲ್ಲಿ ನಡೆದ ಸ್ಪರ್ಧೆಯಲ್ಲಿಯೂ ಭಾರತೀಯ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿದ್ದಾರೆ ಎಂದು ಉಲ್ಲೇಖಿಸಿದರು. “ಭಾರತದಿಂದ ಐವರು ವಿದ್ಯಾರ್ಥಿಗಳು ವಿಯೆಟ್ನಾಂಗೆ ತೆರಳಿದ್ದರು. ಅವರಲ್ಲಿ ನಾಲ್ವರು ಚಿನ್ನದ ಪದಕ ಮತ್ತು ಒಬ್ಬರು ಬೆಳ್ಳಿ ಪದಕ ಗೆದ್ದಿದ್ದಾರೆ. ಇದು ಇಡೀ ದೇಶಕ್ಕೆ ಹೆಮ್ಮೆಯ ವಿಷಯವಾಗಿದೆ” ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು.
ಈ ವರ್ಷದ ಅಂತರರಾಷ್ಟ್ರೀಯ ಒಲಿಂಪಿಯಾಡ್ಗಳಲ್ಲಿ ಗಣಿತ, ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಭಾಗಗಳಲ್ಲಿ ಚಿನ್ನ ಅಥವಾ ಬೆಳ್ಳಿ ಪದಕಗಳನ್ನು ಗೆದ್ದ ಯುವ ಭಾರತೀಯ ವಿದ್ಯಾರ್ಥಿಗಳ ದಾಖಲೆಯ ಸಾಧನೆಯನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಕಲಿಕೆಗೆ ಅಗತ್ಯವಾದ ಸಂಪನ್ಮೂಲಗಳು, ತಂತ್ರಜ್ಞಾನ, ಉಪಕರಣಗಳು ಮತ್ತು ಸಾಂಸ್ಥಿಕ ಬೆಂಬಲ ದೊರೆತಾಗ ಭಾರತೀಯ ಯುವಜನರು ಅಸಾಧಾರಣ ಸಾಧನೆಗಳನ್ನು ಮಾಡುತ್ತಾರೆ ಎಂದು ಅವರು ಒತ್ತಿಹೇಳಿದರು. “ಈ ಕಾಸ್ಮಾಸ್ ತಾರಾಲಯವು ಅವರ ಕನಸುಗಳಿಗೆ ರೂಪ ನೀಡುವಲ್ಲಿ ಅಪಾರವಾಗಿ ಸಹಾಯ ಮಾಡಲಿದೆ” ಎಂದು ಶ್ರೀ ಮೋದಿ ಹೇಳಿದರು.
ಜಗತ್ತಿನಲ್ಲಿ ತಂತ್ರಜ್ಞಾನವು ಕ್ಷಿಪ್ರವಾಗಿ ಬದಲಾಗುತ್ತಿರುವ ಸಂದರ್ಭದಲ್ಲಿ ಯಾವುದೇ ದೇಶವು ನಿಧಾನಗತಿಯಲ್ಲಿ ಮುನ್ನಡೆಯಲು ಸಾಧ್ಯವಿಲ್ಲ ಎಂದು ಪ್ರಧಾನಮಂತ್ರಿಯವರು ಹೇಳಿದರು. ಕಳೆದ ದಶಕದಲ್ಲಿ ಖಗೋಳಶಾಸ್ತ್ರ, ಖಭೌತಶಾಸ್ತ್ರ ಮತ್ತು ಬಾಹ್ಯಾಕಾಶ ಅನ್ವೇಷಣೆ ಕ್ಷೇತ್ರಗಳಲ್ಲಿ ಭಾರತವು ಅಭೂತಪೂರ್ವ ವೇಗದಲ್ಲಿ ಪ್ರಗತಿ ಸಾಧಿಸಿರುವುದನ್ನು ಅವರು ವಿವರಿಸಿದರು. ಹೊಸ ದೂರದರ್ಶಕಗಳ ಸ್ಥಾಪನೆ ಮತ್ತು ಇಸ್ರೋದ ಮಹತ್ವದ ಬಾಹ್ಯಾಕಾಶ ಕಾರ್ಯಾಚರಣೆಗಳು ಈ ಪ್ರಗತಿಗೆ ಸಾಕ್ಷಿಯಾಗಿವೆ. ಚಂದ್ರಯಾನ-3 ಮೂಲಕ ಚಂದ್ರನ ದಕ್ಷಿಣ ಧ್ರುವದ ಸಮೀಪ ಇಳಿದ ಮೊದಲ ದೇಶವಾಗಿ ಭಾರತ ಹೊರಹೊಮ್ಮಿದ್ದು, ಭಾರತದ ಮೊದಲ ಬಾಹ್ಯಾಕಾಶ ಸೌರ ವೀಕ್ಷಣಾಲಯವಾದ ಆದಿತ್ಯ-ಎಲ್1 ಅನ್ನು ಉಡಾವಣೆ ಮಾಡಿರುವುದನ್ನೂ ಅವರು ಉಲ್ಲೇಖಿಸಿದರು. “ಕಳೆದ ವರ್ಷವೇ ಭಾರತವು ಬಾಹ್ಯಾಕಾಶದಲ್ಲಿ ಡಾಕಿಂಗ್ ಮತ್ತು ಅನ್ಡಾಕಿಂಗ್ ಸಾಮರ್ಥ್ಯವನ್ನು ಪ್ರದರ್ಶಿಸಿದ ವಿಶ್ವದ ನಾಲ್ಕನೇ ದೇಶವಾಯಿತು” ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು.
ಇತ್ತೀಚೆಗೆ ಒಬ್ಬ ಭಾರತೀಯ ಗಗನಯಾತ್ರಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಪ್ರಯಾಣಿಸಿ, ಈ ಅವಧಿಯಲ್ಲಿ ಹಲವು ಹೊಸ ಪ್ರಯೋಗಗಳನ್ನು ನಡೆಸಿರುವುದನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಈ ಕಾರ್ಯಾಚರಣೆಯ ಮೂಲಕ ದೊರೆತ ಸಂಶೋಧನಾ ಫಲಿತಾಂಶಗಳ ಕಾರ್ಯತಂತ್ರದ ಮಹತ್ವವನ್ನು ಅವರು ವಿವರಿಸಿದರು. “ಈ ಕಾರ್ಯಾಚರಣೆಯ ಮೂಲಕ ಗಳಿಸಿದ ಅನುಭವವು ನಮ್ಮದೇ ಆದ ಮಾನವಸಹಿತ ಬಾಹ್ಯಾಕಾಶ ಯಾನ ಕಾರ್ಯಕ್ರಮವಾದ ಗಗನಯಾನಕ್ಕೂ ಉಪಯುಕ್ತವಾಗುತ್ತಿದೆ” ಎಂದು ಶ್ರೀ ಮೋದಿ ಹೇಳಿದರು.
ಖಾಸಗಿ ವಲಯದ ಭಾಗವಹಿಸುವಿಕೆಗೆ ಬಾಹ್ಯಾಕಾಶ ಕ್ಷೇತ್ರವನ್ನು ಮುಕ್ತಗೊಳಿಸಿದ ಸರ್ಕಾರದ ನಿರ್ಧಾರವನ್ನು ಪ್ರಧಾನಮಂತ್ರಿಯವರು ಉಲ್ಲೇಖಿಸಿದರು. ಇದರಿಂದ ಭಾರತೀಯ ನವೋದ್ಯಮಗಳು ಮತ್ತು ಯುವಜನರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಅವಕಾಶ ದೊರೆತಿದೆ. ಖಾಸಗಿ ರಾಕೆಟ್ಗಳನ್ನು ಉಡಾವಣೆ ಮಾಡುವುದು, ಉಪಗ್ರಹಗಳನ್ನು ಕಕ್ಷೆಗೆ ಸೇರಿಸುವುದು ಹಾಗೂ ಹಿಂದೆಂದೂ ಕೈಗೊಳ್ಳದ ಬಾಹ್ಯಾಕಾಶ ಚಟುವಟಿಕೆಗಳನ್ನು ನಡೆಸುವುದು ಸಾಧ್ಯವಾಗಿದೆ ಎಂದು ಅವರು ಹೇಳಿದರು. ಇದು ನವಭಾರತದ ವೈಜ್ಞಾನಿಕ ಮನೋಭಾವವನ್ನು ಪ್ರತಿಬಿಂಬಿಸುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದರು. “ಇಲ್ಲಿ ಹೊಸ ಆವಿಷ್ಕಾರಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ, ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಮತ್ತು ನಮ್ಮ ಯುವಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಾಗುತ್ತಿದೆ” ಎಂದು ಶ್ರೀ ಮೋದಿ ಹೇಳಿದರು.
‘ಮಾನವೀಯತೆಯೇ ಮೊದಲು’ ಎಂಬ ಮಂತ್ರವು ಭಾರತಕ್ಕೆ ಸದಾ ಮಾರ್ಗದರ್ಶನ ನೀಡಿದೆ ಮತ್ತು ದೇಶದ ಬಾಹ್ಯಾಕಾಶ ಕಾರ್ಯಕ್ರಮವನ್ನು ಮಾನವ ಕಲ್ಯಾಣಕ್ಕೆ ಸಮರ್ಪಿಸಲಾಗಿದೆ ಎಂದು ಪ್ರಧಾನಮಂತ್ರಿಯವರು ಒತ್ತಿಹೇಳಿದರು. ಮೀನುಗಾರರಿಗಾಗಿ ಇಸ್ರೋ ಅಭಿವೃದ್ಧಿಪಡಿಸಿರುವ ಉಪಗ್ರಹ ಸಂವಹನ ವ್ಯವಸ್ಥೆಯನ್ನು ಅವರು ಉದಾಹರಣೆಯಾಗಿ ಉಲ್ಲೇಖಿಸಿದರು. “ಈ ವ್ಯವಸ್ಥೆಯ ನೆರವಿನಿಂದ, ಸಂಕೇತ ಸ್ವೀಕರಿಸುವ ಸಾಧನಗಳನ್ನು ಅಳವಡಿಸಿಕೊಂಡಿರುವ ದೋಣಿಗಳಿಗೆ ಚಂಡಮಾರುತದ ಸಂದರ್ಭದಲ್ಲಿ ಅಧಿಕಾರಿಗಳು ಸಕಾಲದಲ್ಲಿ ಎಚ್ಚರಿಕೆಗಳನ್ನು ನೀಡಬಹುದು. ಅಲ್ಲದೆ, ಅವು ಸುರಕ್ಷಿತವಾಗಿ ದಡಕ್ಕೆ ಮರಳುವುದನ್ನೂ ಪತ್ತೆಹಚ್ಚಬಹುದು” ಎಂದು ಶ್ರೀ ಮೋದಿ ಹೇಳಿದರು.
ಬಾಹ್ಯಾಕಾಶ ತಂತ್ರಜ್ಞಾನದ ದೈನಂದಿನ ಬಳಕೆಯ ಹಲವು ಉದಾಹರಣೆಗಳನ್ನು ಪ್ರಧಾನಮಂತ್ರಿಯವರು ವಿವರಿಸಿದರು. ರೈಲುಗಳ ನೈಜ ಸಮಯದ ಸ್ಥಳವನ್ನು ಪತ್ತೆಹಚ್ಚಲು ಭಾರತೀಯ ರೈಲ್ವೆ ಮತ್ತು ಇಸ್ರೋ ಅಭಿವೃದ್ಧಿಪಡಿಸಿರುವ ನೈಜ ಸಮಯದ ರೈಲು ಸಂಚಾರ ಪತ್ತೆ ವ್ಯವಸ್ಥೆ ಹಾಗೂ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆ ಇಳುವರಿಯನ್ನು ಅಂದಾಜಿಸಲು ಮತ್ತು ರೈತರ ವಿಮಾ ಕ್ಲೈಮುಗಳ ಇತ್ಯರ್ಥಕ್ಕೆ ಕ್ಷೇತ್ರಮಟ್ಟದ ಮಾಹಿತಿಯ ಜೊತೆಗೆ ಉಪಗ್ರಹ ದತ್ತಾಂಶವನ್ನು ಬಳಸುತ್ತಿರುವುದನ್ನು ಅವರು ಉಲ್ಲೇಖಿಸಿದರು. ಭಾರತದ ಬಾಹ್ಯಾಕಾಶ ಸಂಪನ್ಮೂಲಗಳ ಎರಡು ಬಗೆಯ ಪ್ರಯೋಜನವನ್ನು ಪ್ರಧಾನಮಂತ್ರಿಯವರು ಒತ್ತಿಹೇಳಿದರು. “ಇಂದು ನಮ್ಮ ಉಪಗ್ರಹಗಳು ಬಾಹ್ಯಾಕಾಶದ ಎತ್ತರವನ್ನು ತಲುಪುತ್ತಿವೆ. ಅದೇ ಸಮಯದಲ್ಲಿ, ಭೂಮಿಯ ಮೇಲಿನ ಜನರ ಜೀವನವನ್ನು ಉತ್ತಮಗೊಳಿಸಲೂ ಅವುಗಳನ್ನು ಬಳಸಲಾಗುತ್ತಿದೆ” ಎಂದು ಶ್ರೀ ಮೋದಿ ಹೇಳಿದರು.
‘ಸಮಾಜಕ್ಕಾಗಿ ವಿಜ್ಞಾನ’ ಎಂಬ ಸರ್ಕಾರದ ಮಾರ್ಗದರ್ಶಿ ತತ್ವವು ದೇಶಾದ್ಯಂತ ಸಂಶೋಧನೆ ಮತ್ತು ನಾವೀನ್ಯತೆಗೆ ನಿರಂತರ ಉತ್ತೇಜನ ನೀಡುತ್ತಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು. ದೇಶಾದ್ಯಂತ ಇರುವ 10,000ಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಪ್ರಯೋಗಾಲಯಗಳಿಂದ ಈಗಾಗಲೇ ಒಂದು ಕೋಟಿಗೂ ಅಧಿಕ ವಿದ್ಯಾರ್ಥಿಗಳು ಪ್ರಯೋಜನ ಪಡೆದಿದ್ದಾರೆ ಎಂದು ಅವರು ತಿಳಿಸಿದರು. “ಈ ಪ್ರಯೋಗಾಲಯಗಳಲ್ಲಿ ಮಕ್ಕಳು ತಮ್ಮ ಆಲೋಚನೆಗಳ ಮೇಲೆ ಕೆಲಸ ಮಾಡಲು, ಹೊಸ ಪ್ರಯೋಗಗಳನ್ನು ನಡೆಸಲು ಮತ್ತು ನಾವೀನ್ಯತೆಯನ್ನು ಸಾಧಿಸಲು ಅವಕಾಶಗಳನ್ನು ಪಡೆಯುತ್ತಿದ್ದಾರೆ” ಎಂದು ಶ್ರೀ ಮೋದಿ ಹೇಳಿದರು.
ಸಂಶೋಧನೆಯನ್ನು ಮುನ್ನಡೆಸಲು ವಿದ್ಯಾರ್ಥಿಗಳು ಮತ್ತು ಸಂಶೋಧಕರಿಗೆ ವಿಶ್ವದ ಅತ್ಯುತ್ತಮ ವೈಜ್ಞಾನಿಕ ಸಾಹಿತ್ಯ ಲಭ್ಯವಾಗುವಂತೆ ಮಾಡುವುದು ಅಗತ್ಯ ಎಂದು ಪ್ರಧಾನಮಂತ್ರಿಯವರು ಹೇಳಿದರು. ದೇಶದ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳಿಗೆ ಜಾಗತಿಕ ಮಟ್ಟದ ಪ್ರಮುಖ ನಿಯತಕಾಲಿಕೆಗಳನ್ನು ಲಭ್ಯವಾಗಿಸಲು ‘ಒಂದು ರಾಷ್ಟ್ರ, ಒಂದು ಚಂದಾದಾರಿಕೆ’ ಯೋಜನೆಯನ್ನು ಆರಂಭಿಸಿರುವುದನ್ನು ಹಾಗೂ ಅನುಸಂಧಾನ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು ಸ್ಥಾಪಿಸಿರುವುದನ್ನು ಅವರು ಉಲ್ಲೇಖಿಸಿದರು. “ಇದರ ಮೂಲಕ ಹೆಚ್ಚಿನ ಸಂಖ್ಯೆಯ ವಿಶ್ವವಿದ್ಯಾಲಯಗಳಲ್ಲಿ ಹೊಸ ಸಂಶೋಧನೆಗಳನ್ನು ಕೈಗೊಳ್ಳಲು ನಾವು ನೆರವಾಗುತ್ತಿದ್ದೇವೆ” ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು.
ದೇಶದ ಸಂಶೋಧಕರಿಗೆ ನಿರಂತರವಾಗಿ ಹಣಕಾಸಿನ ನೆರವು ಒದಗಿಸುವ ಉದ್ದೇಶದಿಂದ ಕಳೆದ ವರ್ಷ ಆರಂಭಿಸಲಾದ ಒಂದು ಲಕ್ಷ ಕೋಟಿ ರೂಪಾಯಿಗಳ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ಯೋಜನೆಯನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಈ ಉಪಕ್ರಮದಿಂದ ದೊರೆಯುತ್ತಿರುವ ಪ್ರಾಯೋಗಿಕ ಪ್ರಯೋಜನಗಳನ್ನು ಅವರು ವಿವರಿಸಿದರು. “ಇದು ಹೊಸ ತಂತ್ರಜ್ಞಾನವನ್ನು ಪ್ರಯೋಗಾಲಯಗಳಿಂದ ಹೊರತಂದು ಪ್ರಾಯೋಗಿಕ ಬಳಕೆಗೆ ತಲುಪಿಸುವಲ್ಲಿ ನೆರವಾಗುತ್ತಿದೆ” ಎಂದು ಶ್ರೀ ಮೋದಿ ಹೇಳಿದರು.
ಭಾರತದ ಬೆಳೆಯುತ್ತಿರುವ ವಿಜ್ಞಾನ ಮತ್ತು ಸಂಶೋಧನಾ ಪರಿಸರ ವ್ಯವಸ್ಥೆಯಲ್ಲಿ ಯುವಜನರಲ್ಲಿ ಕುತೂಹಲವನ್ನು ಹುಟ್ಟುಹಾಕುವಲ್ಲಿ ತಾರಾಲಯಗಳು ಮತ್ತು ವಿಜ್ಞಾನ ಕೇಂದ್ರಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳುವ ಮೂಲಕ ಪ್ರಧಾನಮಂತ್ರಿಯವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದರು. ಕಾಸ್ಮಾಸ್ ತಾರಾಲಯದೊಂದಿಗೆ ಸಂಬಂಧ ಹೊಂದಿರುವವರು ಈ ಪ್ರದೇಶದ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳನ್ನು ನಿರಂತರವಾಗಿ ಇಲ್ಲಿಗೆ ಆಹ್ವಾನಿಸುವಂತೆ ಅವರು ಕರೆ ನೀಡಿದರು ಮತ್ತು ಮುಂದಿನ ಪಯಣಕ್ಕೆ ಶುಭ ಹಾರೈಸಿದರು. “ಬ್ರಹ್ಮಾಂಡದ ಬಗ್ಗೆ ತಿಳಿದುಕೊಳ್ಳಲು ಇಲ್ಲಿಗೆ ಬರುವ ಮಕ್ಕಳಲ್ಲಿ ಕೆಲವರು ಒಂದು ದಿನ ಮತ್ತೆ ಇಲ್ಲಿಗೆ ಬಂದು, ಬ್ರಹ್ಮಾಂಡದ ಕುರಿತು ತಾವು ಮಾಡಿರುವ ಹೊಸ ಆವಿಷ್ಕಾರಗಳ ಬಗ್ಗೆ ನಮಗೆ ತಿಳಿಸುವ ಸಾಧ್ಯತೆಯಿದೆ. ಅದೊಂದೇ ಈ ಕಾಸ್ಮಾಸ್ ತಾರಾಲಯದ ಅತಿ ದೊಡ್ಡ ಯಶಸ್ಸಾಗಲಿದೆ” ಎಂದು ಪ್ರಧಾನಮಂತ್ರಿ ಶ್ರೀ ಮೋದಿ ಹೇಳಿದರು.
*****
The new COSMOS Planetarium in Mysuru brings the wonders of the universe closer to young minds. https://t.co/AhdAkpkSGF
— Narendra Modi (@narendramodi) November 13, 2026
भारत में आर्यभट्ट, वराहमिहिर, भास्कराचार्य और नीलकंठ सोमयाजी जैसे अनेक महान astronomers हुए। आज जैसे advanced instruments और technology उस समय नहीं थे। इसके बावजूद उन्होंने बड़ी-बड़ी खोजें कीं, मुश्किल calculations किए: PM @narendramodi
— PMO India (@PMOIndia) November 13, 2026
आज जब भारत science के क्षेत्र में एक के बाद एक नई उपलब्धियां हासिल कर रहा है, तब इस अत्याधुनिक COSMOS Planetarium के रूप में मैसूरु भी भारत की scientific journey में एक नया chapter जोड़ रहा है: PM @narendramodi
— PMO India (@PMOIndia) November 13, 2026
हमारी सरकार ने space sector को open किया। इससे private sector के लिए नई संभावनाएं बनी हैं। भारत के startups को भी अपनी क्षमता दिखाने का अवसर मिला है: PM @narendramodi
— PMO India (@PMOIndia) November 13, 2026