Search

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬೆಂಗಳೂರಿನ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅವತರಣಿಕೆ

ಬೆಂಗಳೂರಿನ ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರು ಮಾಡಿದ ಭಾಷಣದ ಕನ್ನಡ ಅವತರಣಿಕೆ


ಎಲ್ಲರಿಗೂ ನಮಸ್ಕಾರ!

ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಸುಧಾ ಯಾದವ್ ಜೀ , ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರು ಹಾಗೂ ನಮ್ಮ ಮಾರ್ಗದರ್ಶಕರಾದ ಶ್ರೀ ದತ್ತಾತ್ರೇಯ ಹೊಸಬಾಳೆ ಜೀ, ಎಸ್-ವ್ಯಾಸ (S-VYASA) ಸಂಸ್ಥೆಯ ಅಧ್ಯಕ್ಷರಾದ ಹೆಚ್. ಆರ್. ನಾಗೇಂದ್ರ ಜೀ, ಉಪಾಧ್ಯಕ್ಷರಾದ ಡಾ. ಆರ್. ನಾಗರತ್ನ ಜೀ, ಕುಲಾಧಿಪತಿಗಳಾದ ಹೆಚ್. ಆರ್. ದಯಾನಂದ ಸ್ವಾಮೀಜಿ, ಉಪಕುಲಪತಿಗಳಾದ ಮಂಜುನಾಥ ಎನ್. ಕೆ. ಜೀ, ಸಂಸದರಾದ ಸಿ. ಎನ್. ಮಂಜುನಾಥ ಜೀ, ದಕ್ಷಿಣ ಕೊರಿಯಾದ ಮಿರ್ಯಾಂಗ್ ನಗರದ ಮೇಯರ್ ಅವರೇ, ಹಾಗೂ ಇಲ್ಲಿ ಉಪಸ್ಥಿತರಿರುವ ಇತರ ಗಣ್ಯರೇ, ಮಹಿಳೆಯರೇ ಮತ್ತು ಸಜ್ಜನರೇ!

ಇಂದು, ಇಲ್ಲಿ ಬೆಂಗಳೂರಿನಲ್ಲಿ ಯೋಗದ ಅಸಾಧಾರಣ ಶಕ್ತಿಯನ್ನು ಅನುಭವಿಸುವ ಅವಕಾಶ ನನಗೆ ಸಿಕ್ಕಿದೆ. ಕರ್ನಾಟಕದ ಈ ನೆಲವು ಶತಮಾನಗಳಿಂದಲೂ ಯೋಗದ ಕೇಂದ್ರವಾಗಿದೆ. ಅನೇಕ ಶ್ರೇಷ್ಠ ಯೋಗ ಗುರುಗಳು ಮತ್ತು ವಿದ್ವಾಂಸರು ಇಲ್ಲಿ ಜನಿಸಿ, ಯೋಗ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಕನ್ನಡ ಚಿತ್ರರಂಗದ ದಿಗ್ಗಜ ಡಾ. ರಾಜಕುಮಾರ್ ಜೀ ಅವರು ಕೂಡ ಯೋಗಾಭ್ಯಾಸ ಮಾಡುತ್ತಿದ್ದರು ಮತ್ತು ಕಲಾಕ್ಷೇತ್ರದ ಜೊತೆಗೆ ಯೋಗ ಕ್ಷೇತ್ರಕ್ಕೂ ತಮ್ಮದೇ ಆದ ಕೊಡುಗೆ ನೀಡಿದ್ದರು ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಷಯವೇ.

ಸ್ನೇಹಿತರೇ,

ಕರ್ನಾಟಕದ ಈ ಮಹಾನ್ ಪರಂಪರೆಯ ನಡುವೆ, ಪ್ರಶಾಂತಿ ಕುಟೀರಮ್ ನ 50 ವರ್ಷಗಳ ಪ್ರಯಾಣವು ಅಸಾಧಾರಣ ಮತ್ತು ಅಭೂತಪೂರ್ವ ಸೇವೆ ಮತ್ತು ಸಮರ್ಪಣೆಯ ಸಾಹಸಕಥೆಯಾಗಿದೆ, ಇದನ್ನು ಪ್ರತಿಯೊಬ್ಬ ಭಾರತೀಯನೂ ತಿಳಿದುಕೊಳ್ಳಬೇಕು. ಒಂದು ಸಾಮಾನ್ಯ ಯೋಗ ಕೇಂದ್ರವು ಇಷ್ಟು ದೊಡ್ಡ ಆಂದೋಲನವಾಗಿ ಹೇಗೆ ರೂಪಾಂತರಗೊಂಡಿದೆ ಎಂಬುದು ಸ್ವತಃ ಸ್ಫೂರ್ತಿಯ ಮೂಲವಾಗಿದೆ.

ಸ್ನೇಹಿತರೇ,

ಈ ಸಂದರ್ಭದಲ್ಲಿ, ಹಲವಾರು ಹೊಸ ಸೌಲಭ್ಯಗಳನ್ನು ಸಹ ಪ್ರಾರಂಭಿಸಲಾಗಿದೆ. ಈ ಉಪಕ್ರಮಗಳಿಗಾಗಿ ನಾನು ಎಸ್-ವ್ಯಾಸ ಕುಟುಂಬಕ್ಕೆ ನನ್ನ ಶುಭಾಶಯಗಳನ್ನು ತಿಳಿಸುತ್ತೇನೆ. ಪ್ರಶಾಂತಿ ಕುಟೀರಮ್ ಸುವರ್ಣ ಮಹೋತ್ಸವದಂದು ನಿಮ್ಮೆಲ್ಲರನ್ನು  ಮತ್ತು ಅದರ ಜೊತೆ ಸಂಬಂಧ ಹೊಂದಿರುವ ಲಕ್ಷಾಂತರ ಅನುಯಯಿ ಅಭ್ಯಾಸಿಗಳನ್ನು  ನಾನು ಅಭಿನಂದಿಸುತ್ತೇನೆ.

ಮಿತ್ರರೇ,

ಪ್ರಶಾಂತಿ ಕುಟೀರದ ಸುವರ್ಣ ಮಹೋತ್ಸವದ ಜೊತೆಗೆ, ಈ ವರ್ಷ ನಾವು ಪೂಜ್ಯ ಎಚ್.ವಿ. ಶೇಷಾದ್ರಿ ಅವರ ಜನ್ಮ ಶತಮಾನೋತ್ಸವವನ್ನೂ ಆಚರಿಸುತ್ತಿದ್ದೇವೆ. ಅವರಿಗೆ ನಾನು ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ. ‘ವ್ಯಕ್ತಿ ವಿಕಾಸದ ಮೂಲಕ ರಾಷ್ಟ್ರ ನಿರ್ಮಾಣ’ ಎಂಬ ಧ್ಯೇಯವನ್ನು ಮುನ್ನಡೆಸಲು ಶೇಷಾದ್ರಿ ಜೀ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟಿದ್ದರು. ದೇಶವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯಬೇಕಾದರೆ, ಅದಕ್ಕೆ ಸಮರ್ಪಣಾಭಾವವುಳ್ಳ, ಸಮರ್ಥ ಮತ್ತು ಶಿಸ್ತುಬದ್ಧ ನಾಗರಿಕರ ಅಗತ್ಯವಿದೆ ಎಂಬುದನ್ನು ಅವರು ಅರಿತಿದ್ದರು. ಅಂತಹ ವ್ಯಕ್ತಿಗಳನ್ನು ರೂಪಿಸಲು ಶೇಷಾದ್ರಿ ಜೀ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದಲ್ಲಿ ಸೇವೆ ಸಲ್ಲಿಸುವಾಗ ಅವರು ಹಾಕಿಕೊಂಡಿದ್ದ ಗುರಿಗಳು, ಇಂದಿಗೂ ಕೋಟ್ಯಂತರ ಸ್ವಯಂಸೇವಕರಿಗೆ ಸ್ಫೂರ್ತಿಯನ್ನು ನೀಡುತ್ತಿವೆ.

ಸ್ನೇಹಿತರೇ,

ನಾವು ಅವರನ್ನು ನೆನಪಿಸಿಕೊಂಡಾಗಲೆಲ್ಲಾ, ನಮ್ಮ ಮನಸ್ಸಿಗೆ ಮೊದಲು ಹೊಳೆಯುವುದು ಅವರ ಸರಳ ವ್ಯಕ್ತಿತ್ವ. ದತ್ತಾಜಿಯವರು ಅವರ ಈ ಸರಳತೆಯನ್ನು ಎಷ್ಟು ಸುಂದರವಾದ ಮಾತುಗಳಲ್ಲಿ ವಿವರಿಸಿದ್ದಾರೆ! ಇಷ್ಟೊಂದು ಉನ್ನತ ವ್ಯಕ್ತಿತ್ವ, ಇಷ್ಟೊಂದು ಅಪಾರ ಅನುಭವ, ಆದರೂ ಅವರ ನಡವಳಿಕೆಯಲ್ಲಿ ಎಂತಹ ವಿನಮ್ರತೆ! ಇತರರು ಮುನ್ನಡೆಯುವಂತೆ ಪ್ರೋತ್ಸಾಹಿಸುತ್ತಾ ತಾವೇ ಹಿನ್ನೆಲೆಯಲ್ಲಿ ಉಳಿಯುವುದು, ಜನರನ್ನು ಒಗ್ಗೂಡಿಸಿ ಅವರನ್ನು ರಾಷ್ಟ್ರಸೇವೆಗೆ ಸಿದ್ಧಗೊಳಿಸುವುದು – ಇದೇ ಅವರ ಜೀವನದ ಶ್ರೇಷ್ಠ ಶಿಸ್ತಾಗಿತ್ತು. ಸಂಭಾಷಣೆಯ ಸಂದರ್ಭಗಳಲ್ಲಿ ಅವರು ಆಗಾಗ್ಗೆ ಒಂದು ಉದಾಹರಣೆಯನ್ನು ನೀಡುತ್ತಿದ್ದರು. ತಾಯಿಯ ನಡವಳಿಕೆಯಿಂದ ನಾವು ಕಲಿಯಬೇಕು ಎಂದು ಅವರು ಹೇಳುತ್ತಿದ್ದರು. ಮಗುವಿನ ಸೇವೆಗಾಗಿ ತಾಯಿಯು ಇಡೀ ರಾತ್ರಿ ಎಚ್ಚರದಿಂದಿದ್ದು, ಮಗುವನ್ನು ಪೋಷಿಸಿ, ನಿಸ್ವಾರ್ಥವಾಗಿ ದುಡಿಯುವಂತೆಯೇ; ಇದೇ ಭಾವನೆಯನ್ನು ನಾವು ಸಮಾಜಕ್ಕೂ ವಿಸ್ತರಿಸಿದರೆ, ಸಮಾಜಕ್ಕೆ ಎಷ್ಟು ಪ್ರಯೋಜನವಾಗಬಹುದು ಎಂದು ಊಹಿಸಿಕೊಳ್ಳಿ!

ಸ್ನೇಹಿತರೇ,

ಒಬ್ಬ ತಾಯಿಯಲ್ಲಿರುವ ನಿಸ್ವಾರ್ಥತೆಯಂತೆಯೇ, ಶೇಷಾದ್ರಿ ಜೀ ಸಮಾಜ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಅವರ ವಾತ್ಸಲ್ಯ ಮತ್ತು ಮಾರ್ಗದರ್ಶನ ನಿರಂತರವಾಗಿ ನನಗೆ ದೊರೆತಿದ್ದು ನನ್ನ ಭಾಗ್ಯವೇ ಸರಿ. ಅವರೊಂದಿಗೆ ಕಳೆದ ಕ್ಷಣಗಳ ನೆನಪುಗಳು ಮತ್ತು ಅವರು ಆಡಿದ ಮಾತುಗಳು ಇಂದಿಗೂ ನನಗೆ ಅತ್ಯಮೂಲ್ಯವಾಗಿವೆ.

ಸ್ನೇಹಿತರೇ,

ಶೇಷಾದ್ರಿ ಜೀ ಹೇಳುತ್ತಿದ್ದ ಮತ್ತೊಂದು ವಿಷಯವನ್ನು ನಾನೆಂದಿಗೂ ಮರೆಯಲು ಸಾಧ್ಯವಿಲ್ಲ. ನಾವು ಸಮಾಜಕ್ಕೆ ನಮ್ಮ ಎರಡೂ ಕೈಗಳಿಂದ ನೀಡಿದರೆ, ಸಮಾಜವು ನಮಗೆ ಲಕ್ಷಾಂತರ ಕೈಗಳಿಂದ ಮರಳಿ ನೀಡುತ್ತದೆ ಎಂದು ಅವರು ಹೇಳುತ್ತಿದ್ದರು. ನನ್ನ ಸ್ವಂತ ಜೀವನದಲ್ಲಿ ಈ ತತ್ವವು ಪದೇ ಪದೇ ಫಲ ನೀಡುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ‘ಜನತಾ ಜನಾರ್ದನ’ರಾದ ಜನರಿಗೆ ಸೇವೆ ಸಲ್ಲಿಸುವಾಗ, ಅವರು ಸದಾ ನನ್ನ ಮೇಲೆ ತಮ್ಮ ಆಶೀರ್ವಾದವನ್ನು ಸುರಿಸಿದ್ದಾರೆ; ಇದು ನನ್ನ ಜೀವನದ ಅತ್ಯಂತ ದೊಡ್ಡ ಸಂಪತ್ತುಗಳಲ್ಲಿ ಒಂದಾಗಿದೆ.

ಸ್ನೇಹಿತರೇ,

ಶೇಷಾದ್ರಿ ಜೀ ಅವರ ಕುಟುಂಬದಲ್ಲಿಯೂ ನಾವು ಇದೇ ರೀತಿಯ ಸೇವಾ ಮನೋಭಾವವನ್ನು ಕಾಣಬಹುದು. ಡಾ. ನಾಗೇಂದ್ರ ಜೀ ಮತ್ತು ಡಾ. ನಾಗರತ್ನ ಜೀ ಅವರು ತಮ್ಮ ಕಾರ್ಯಗಳ ಮೂಲಕ ಅವರ ಧ್ಯೇಯವನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ. ಅವರ ಈ ಎಲ್ಲಾ ಪ್ರಯತ್ನಗಳನ್ನು ನಾನು ಶ್ಲಾಘಿಸುತ್ತೇನೆ ಮತ್ತು ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

ಸ್ನೇಹಿತರೇ,

ದೇಶವು ವಸಾಹತುಶಾಹಿ ಆಳ್ವಿಕೆಯ ಸರಪಳಿಗಳಿಂದ ಬಂಧಿಸಲ್ಪಟ್ಟಿದ್ದಾಗ, ಒಂದು ಕಡೆ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರೆ, ಇನ್ನೊಂದು ಕಡೆ ಸ್ವಾಮಿ ವಿವೇಕಾನಂದರಂತಹ ರಾಷ್ಟ್ರದ ಮಹಾನ್ ಋಷಿಗಳು ಭಾರತದ ಆಧ್ಯಾತ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿದ್ದರು ಮತ್ತು ಭಾರತದ ಯುವಜನರಿಗೆ ಯೋಗದ ಮಾರ್ಗವನ್ನು ತೋರಿಸಿಕೊಡುತ್ತಿದ್ದರು.

ಸ್ನೇಹಿತರೇ,

ಸ್ವಾಮಿ ವಿವೇಕಾನಂದರಂತಹ ಮಹನೀಯರಿಂದ ಪಡೆದ ಸ್ಫೂರ್ತಿಯು ‘ಪ್ರಶಾಂತಿ ಕುಟೀರ’ದಂತಹ ಸಂಸ್ಥೆಗಳ ಸ್ಥಾಪನೆಗೆ ಕಾರಣವಾಯಿತು. ಇಲ್ಲಿ ಯೋಗವನ್ನು ಜನಸಾಮಾನ್ಯರಿಗೆ ತಲುಪಿಸುವುದರ ಜೊತೆಗೆ, ಆಧುನಿಕ ವಿಜ್ಞಾನದ ಮಾನದಂಡಗಳ ಮೂಲಕ ಅದರ ಕುರಿತು ಹೊಸ ಸಂಶೋಧನೆಗಳನ್ನು ನಡೆಸುವ ಪ್ರಯತ್ನವನ್ನೂ ಮಾಡಲಾಯಿತು. ಈ ಸಂಸ್ಥೆಯು ಕೇವಲ ಯೋಗಾಭ್ಯಾಸಿಗಳನ್ನು ಸೃಷ್ಟಿಸುವುದಷ್ಟೇ ಅಲ್ಲದೆ, ಸಮಾಜಕ್ಕೆ ಅಗತ್ಯವಾದ ತರಬೇತುದಾರರನ್ನು ಮತ್ತು ಚಿಂತಕರನ್ನೂ ರೂಪಿಸಿದೆ. ಇಲ್ಲಿಂದ ಹೊರಹೊಮ್ಮಿದ ಶಿಕ್ಷಕರು, ವೈದ್ಯರು ಮತ್ತು ಸಂಶೋಧಕರು ಯೋಗದ ಮೂಲಕ ದೇಶಾದ್ಯಂತ ಹಾಗೂ ಜಗತ್ತಿನಾದ್ಯಂತ ಜನರಿಗೆ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಶಾಂತಿ ಕುಟೀರದಿಂದ ವಿಕಸನಗೊಂಡ ‘ಎಸ್-ವ್ಯಾಸ’ (S-VYASA), ಯೋಗ ಶಿಕ್ಷಣ, ವೈಜ್ಞಾನಿಕ ಸಂಶೋಧನೆ ಮತ್ತು ಆರೋಗ್ಯ ಸೇವೆಗಳ ಕ್ಷೇತ್ರದಲ್ಲಿ ಒಂದು ಪ್ರಮುಖ ಸಂಸ್ಥೆಯಾಗಿ ಬೆಳೆದಿದೆ. ಯೋಗದ ಜೊತೆಗೆ, ಆಯುರ್ವೇದ, ನೈಸರ್ಗಿಕ ಚಿಕಿತ್ಸೆ (ನ್ಯಾಚುರೋಪತಿ) ಮತ್ತು ಆಧುನಿಕ ವೈದ್ಯಕೀಯ ವಿಜ್ಞಾನವನ್ನು ಒಳಗೊಂಡ ಸಮಗ್ರ ಆರೋಗ್ಯ ವ್ಯವಸ್ಥೆಯನ್ನು (ಕ್ಶೇಮ ಪರಿಸರ ವ್ಯವಸ್ಥೆ-wellness ecosystem) ನೀವು ಅಭಿವೃದ್ಧಿಪಡಿಸಿದ್ದೀರಿ. ಒತ್ತಡ ಸಂಬಂಧಿತ ಸವಾಲುಗಳು ಮತ್ತು ಜೀವನಶೈಲಿ ಕಾಯಿಲೆಗಳಂತಹ ಕ್ಷೇತ್ರಗಳಲ್ಲಿ ಇಲ್ಲಿ ನಡೆಸಿರುವ ಸಂಶೋಧನೆಗಳು ಇಡೀ ಜಗತ್ತಿಗೇ ಉಪಯುಕ್ತವಾಗಿವೆ. ಈ ಪ್ರಯತ್ನಗಳಿಗಾಗಿ ನಾನು ಪ್ರಶಾಂತಿ ಕುಟೀರವನ್ನು ಅಭಿನಂದಿಸುತ್ತೇನೆ.

ಸ್ನೇಹಿತರೇ,

ಕಳೆದ 12 ವರ್ಷಗಳಲ್ಲಿ, ಭಾರತವು ತನ್ನ ಸಂಸ್ಕೃತಿ, ಅಸ್ಮಿತೆ ಮತ್ತು ಜ್ಞಾನ ವ್ಯವಸ್ಥೆಗಳನ್ನು ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ಜಗತ್ತಿನ ಮುಂದೆ ಪ್ರಸ್ತುತಪಡಿಸುತ್ತಾ ಬಂದಿದೆ. ನಾನು ಇದನ್ನು ಸಂಪೂರ್ಣ ಜವಾಬ್ದಾರಿಯುತವಾಗಿ ಮತ್ತು ದೃಢವಾದ ಆತ್ಮವಿಶ್ವಾಸದಿಂದ ಹೇಳುತ್ತಿದ್ದೇನೆ. ಇದರ ಒಂದು ಫಲಿತಾಂಶವೆಂದರೆ, ಭಾರತದ ಉಪಕ್ರಮದ ಮೇರೆಗೆ ಇಂದು ಇಡೀ ಜಗತ್ತು ‘ಅಂತರರಾಷ್ಟ್ರೀಯ ಯೋಗ ದಿನ’ವನ್ನು ಆಚರಿಸುತ್ತಿದೆ. ಯೋಗ ದಿನದ ಸಂದರ್ಭದಲ್ಲಿ, ಆಸ್ಟ್ರೇಲಿಯಾದಿಂದ ಹಿಡಿದು ಆಫ್ರಿಕಾ ಮತ್ತು ಅಮೆರಿಕದವರೆಗೆ ಪ್ರಪಂಚದಾದ್ಯಂತ ಯೋಗಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇವುಗಳಲ್ಲಿ ಕೋಟ್ಯಂತರ ಜನರು ಭಾಗವಹಿಸುತ್ತಾರೆ. ಇಂದು, ಪ್ರಪಂಚದ ಅನೇಕ ದೇಶಗಳಲ್ಲಿ ಯೋಗವು ನಮ್ಮ ಶಾಲೆಗಳು, ಸಂಸ್ಥೆಗಳು ಮತ್ತು ಕೆಲಸದ ಸ್ಥಳಗಳನ್ನು ತಲುಪಿದೆ. ಉದಾಹರಣೆಗೆ, ಸೌದಿ ಅರೇಬಿಯಾದಲ್ಲಿ ಯೋಗವನ್ನು ಒಂದು ಕ್ರೀಡಾ ಚಟುವಟಿಕೆಯಾಗಿ ಗುರುತಿಸಲಾಗಿದೆ. ಅಲ್ಲಿನ ಕ್ರೀಡಾ ಸಚಿವಾಲಯವು ಯೋಗವನ್ನು ಉತ್ತೇಜಿಸಲು ಭಾರತದ ಆಯುಷ್ ಸಚಿವಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದೆ. ವಿದೇಶಿ ಪ್ರಜೆಗಳು ಯೋಗವನ್ನು ಉತ್ತೇಜಿಸುತ್ತಿರುವ ಉದಾಹರಣೆಗಳನ್ನು ನಾವು ನಿರಂತರವಾಗಿ ಕಾಣುತ್ತಿದ್ದೇವೆ. ಇದನ್ನು ನಾನು ಸ್ವತಃ ಅನುಭವಿಸಿದ್ದೇನೆ. ನಾನು ಪ್ರಪಂಚದಾದ್ಯಂತ ಎಲ್ಲಿಗೆ ಪ್ರಯಾಣಿಸಿದರೂ, ಮಧ್ಯಾಹ್ನದ ಅಥವಾ ರಾತ್ರಿಯ ಊಟದ ಸಮಯದಲ್ಲಿ ವಿದೇಶಿ ಅತಿಥಿಗಳು ಅಥವಾ ರಾಷ್ಟ್ರದ ಮುಖ್ಯಸ್ಥರೊಂದಿಗೆ ಕುಳಿತಾಗ, ಯೋಗದ ಬಗ್ಗೆ ಚರ್ಚೆ ಬರದೇ ಇರುವಂತಹ ಊಟದ ಸನ್ನಿವೇಶಗಳು ಬಹುತೇಕ ಇಲ್ಲವೇ ಇಲ್ಲ ಎನ್ನಬಹುದು. ಹಿಂದೆ, ನಾನು ಅವರಿಗೆ “ನಾನು ಯೋಗ ತಜ್ಞನಲ್ಲ, ಬದಲಾಗಿ ಯೋಗಾಭ್ಯಾಸಿ” ಎಂದು ವಿವರಿಸುತ್ತೇನೆ. ನಂತರ ನಾನು ಅವರಿಗೆ ಯೋಗದ ವಿವಿಧ ಪ್ರಯೋಜನಗಳ ಬಗ್ಗೆ ತಿಳಿಸುತ್ತೇನೆ, ಆಗ ಅವರು ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ತಮ್ಮ ಪತ್ನಿಯರು ವರ್ಷಕ್ಕೊಮ್ಮೆ ಭಾರತಕ್ಕೆ ಬಂದು ಯೋಗವನ್ನು ಕಲಿತು, ಅಲ್ಲಿ ಯೋಗವನ್ನು ಕಲಿಸುತ್ತಾರೆ ಎಂದು ಹೇಳುವ ಅನೇಕ ವಿಶ್ವ ನಾಯಕರನ್ನು ನಾನು ಭೇಟಿಯಾಗಿದ್ದೇನೆ. ಕೆಲವರು ತಮ್ಮ ಹೆಣ್ಣುಮಕ್ಕಳು ಯೋಗ ಕಲಿಯುತ್ತಿದ್ದಾರೆ ಎಂದು ಹೇಳಿದರೆ, ಇನ್ನು ಕೆಲವರು ತಮ್ಮ ಹೆಣ್ಣುಮಕ್ಕಳು ಯೋಗಕ್ಕಾಗಿಯೇ ತಮ್ಮನ್ನು ತಾವು ಸಮರ್ಪಿಸಿಕೊಂಡಿದ್ದಾರೆ ಎಂದು ಹೇಳುತ್ತಾರೆ. ಪ್ರಪಂಚದ ಅತ್ಯಂತ ಪ್ರಮುಖ ರಾಷ್ಟ್ರ ಮುಖ್ಯಸ್ಥರ ಕುಟುಂಬಗಳಲ್ಲಿಯೂ, ಯಾರಾದರೊಬ್ಬರು ಯೋಗದೊಂದಿಗೆ ಗುರುತಿಸಿಕೊಂಡಿರುತ್ತಾರೆ. ಯೋಗದ ಮೂಲಕ ಭಾರತವು ಎಷ್ಟು ದೂರ ತಲುಪಿದೆ ಎಂಬುದನ್ನು ಇದು ತೋರಿಸುತ್ತದೆ. ಯೋಗವು ಭಾರತವನ್ನು ಅರ್ಥಮಾಡಿಕೊಳ್ಳಲು ಒಂದು ದ್ವಾರದಂತಾಗಿದೆ ಎಂದು ತೋರುತ್ತದೆ. ಕತಾರ್‌ನ ರಾಜಮನೆತನದವರಾಗಿರಲಿ ಅಥವಾ ಬೇರೆ ಯಾವುದೇ ದೇಶದವರಾಗಿರಲಿ, ಯೋಗಕ್ಕೆ ಸಂಪೂರ್ಣವಾಗಿ ಸಮರ್ಪಿಸಿಕೊಂಡಿರುವ ವಿದೇಶಿ ಪ್ರಜೆಗಳನ್ನು ನಾನು ಕಂಡಿದ್ದೇನೆ. ಭಾರತವು ಅಂತಹ ಅನೇಕ ವ್ಯಕ್ತಿಗಳನ್ನು ‘ಪದ್ಮಶ್ರೀ’ ಪ್ರಶಸ್ತಿಯೊಂದಿಗೆ ಗೌರವಿಸಿದೆ ಮತ್ತು ಆ ಮೂಲಕ ಅವರ ಘನತೆಯನ್ನು ಹೆಚ್ಚಿಸಿದೆ.

ಸ್ನೇಹಿತರೇ,

ಪ್ರಪಂಚದಾದ್ಯಂತ ಜನರು ಯೋಗದ ಬಗ್ಗೆ ಹೆಚ್ಚು ಪರಿಚಿತರಾಗುತ್ತಿದ್ದಂತೆ, ಭಾರತದ ಬಗ್ಗೆ ತಿಳಿದುಕೊಳ್ಳುವ ಅವರ ಕುತೂಹಲವೂ ಹೆಚ್ಚುತ್ತಿದೆ. ನಮ್ಮ ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳ ಕಡೆಗೆ ಒಂದು ಹೊಸ ಆಕರ್ಷಣೆ ಮೂಡುತ್ತಿದೆ. ಇದು ಭಾರತ ಮತ್ತು ಜಗತ್ತಿನ ನಡುವೆ ಸಂಪರ್ಕದ ಹೊಸ ಮಾರ್ಗವನ್ನು ತೆರೆಯುತ್ತದೆ. ಇವೆಲ್ಲವೂ ನಮ್ಮ ಸಾಮೂಹಿಕ ಪ್ರಯತ್ನಗಳಿಂದ ಸಾಧ್ಯವಾಗಿದೆ. ಆಯುರ್ವೇದದ ಬಗ್ಗೆ ಹೇಳುವುದಾದರೆ, ಪ್ರಪಂಚದ ವಿವಿಧ ದೇಶಗಳಲ್ಲಿ 150ಕ್ಕೂ ಹೆಚ್ಚು ಆಯುರ್ವೇದ ತರಬೇತಿ ಕೋರ್ಸ್‌ಗಳಿಗೆ ಮಾನ್ಯತೆ ನೀಡಲಾಗಿದೆ. ಆಯುರ್ವೇದದ ವಿಸ್ತರಣೆಯಲ್ಲಿ ಸಹಕಾರವನ್ನು ಉತ್ತೇಜಿಸಲು 28 ದೇಶಗಳೊಂದಿಗೆ ತಿಳಿವಳಿಕೆ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಸ್ನೇಹಿತರೇ,

ಆಯುರ್ವೇದ ಮತ್ತು ಯೋಗದ ಪ್ರಯೋಜನಗಳು ದೇಶದ ಪ್ರತಿಯೊಬ್ಬ ನಾಗರಿಕರಿಗೂ ತಲುಪುವಂತೆ ಮಾಡುವುದು ನಮ್ಮ ಪ್ರಯತ್ನವಾಗಿದೆ. ಇಂದು, ಸಮಗ್ರ ಆರೋಗ್ಯ ರಕ್ಷಣೆಯು ಒಂದು ಹೊಸ ಜಾಗತಿಕ ಆಂದೋಲನವಾಗಿ ಹೊರಹೊಮ್ಮಿದೆ. ಇದರ ಪರಿಣಾಮವಾಗಿ, ಆಯುರ್ವೇದ ಮತ್ತು ನೈಸರ್ಗಿಕ ಚಿಕಿತ್ಸಾ ಪದ್ಧತಿಗಳ ಕಡೆಗೆ ಸಹಜವಾದ ಆಕರ್ಷಣೆ ಉಂಟಾಗಿದೆ.

ಮತ್ತು ಸ್ನೇಹಿತರೇ,

ಎಲ್ಲೆಡೆ ಇಂತಹ ಉತ್ಕೃಷ್ಟತೆ ಮತ್ತು ಉತ್ಸಾಹವಿರುವಾಗ, ಯೋಗವನ್ನು ಉತ್ತೇಜಿಸುವ ಮತ್ತು ಪ್ರಸಾರ ಮಾಡುವ ಜೊತೆಗೆ, ಅಗತ್ಯಗಳಿಗೆ ಅನುಗುಣವಾಗಿ ನಾವು ನಿಯಮಗಳಲ್ಲಿಯೂ ಹಲವಾರು ಬದಲಾವಣೆಗಳನ್ನು ಮಾಡಿದ್ದೇವೆ. ಭಾರತದಲ್ಲಿ, ಯೋಗಾಸನವನ್ನು ಸ್ಪರ್ಧಾತ್ಮಕ ಕ್ರೀಡೆಯಾಗಿಯೂ ಗುರುತಿಸಲಾಗಿದೆ. ‘ಖೇಲೋ ಇಂಡಿಯಾ’ ಮತ್ತು ‘ರಾಷ್ಟ್ರೀಯ ಕ್ರೀಡಾಕೂಟ’ಗಳಂತಹ ವೇದಿಕೆಗಳಲ್ಲಿ ಯೋಗಾಸನಕ್ಕಾಗಿ ಹೊಸ ಅವಕಾಶಗಳನ್ನು ಸೃಷ್ಟಿಸಲಾಗಿದೆ. ಈ ಬದಲಾವಣೆಗಳು ಭಾರತಕ್ಕೆ ಅತ್ಯಂತ ಮಹತ್ವದ್ದಾಗಿವೆ. ಕೆಲವೇ ದಿನಗಳ ಹಿಂದೆ, ಅಹಮದಾಬಾದ್‌ನಲ್ಲಿ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಯೊಂದು ನಡೆಯಿತು. ಅದನ್ನು ಕಂಡು ನಾನು ಬೆರಗಾದೆನು. ನಾನು ಉಜ್ಬೇಕಿಸ್ತಾನಕ್ಕೆ ಭೇಟಿ ನೀಡಿದಾಗ, ಅವರು ಜಗತ್ತಿನಲ್ಲೇ ಪ್ರಥಮ ಸ್ಥಾನವನ್ನು ಪಡೆದಿದ್ದರು; ಅಲ್ಲಿನ ವಿಜೇತರು ಮತ್ತು ಚಿನ್ನದ ಪದಕ ವಿಜೇತರೆಲ್ಲರೂ ಆ ದೇಶದ ನಾಗರಿಕರೇ ಆಗಿದ್ದರು. ನಾನು ಎಲ್ಲಿಗೆ ಹೋದರೂ, ಜನರನ್ನು ಭೇಟಿಯಾದಾಗ, ಯೋಗವು ಎಲ್ಲೆಡೆ ಚರ್ಚೆಯ ವಿಷಯವಾಗಿರುವುದನ್ನು ಕಾಣುತ್ತೇನೆ. ಇದು ಯೋಗದೊಂದಿಗೆ ಸಂಬಂಧ ಹೊಂದಿರುವವರಿಗೆ ಸ್ಪರ್ಧಾತ್ಮಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೊಸ ದಾರಿಗಳನ್ನು ತೆರೆದುಕೊಟ್ಟಿದೆ.

ಸ್ನೇಹಿತರೇ,

ಯೋಗದಂತೆಯೇ, ಭಾರತ ಸರ್ಕಾರವು ಆಯುರ್ವೇದವನ್ನೂ ನಿರಂತರವಾಗಿ ಉತ್ತೇಜಿಸುತ್ತಿದೆ. ನಮ್ಮ ದೇಶದಲ್ಲಿ ಅಂತಹ ಅನೇಕ ವಿಷಯಗಳಿವೆ, ಅವುಗಳ ಬಗ್ಗೆ ಆಸಕ್ತಿ ಹೊಂದಿರುವವರು ಮತ್ತು ಸಾಕಷ್ಟು ಮಾಹಿತಿ ಇರುವವರು ಸೇರಿದಂತೆ, ಯಾರಿಂದಲೂ ಅವುಗಳಿಗೆ ಸಿಗಬೇಕಾದಷ್ಟು ಗಮನವನ್ನು ಅವು ಪಡೆದಿಲ್ಲ. ಸ್ವಾತಂತ್ರ್ಯದ ಇಷ್ಟು ವರ್ಷಗಳ ನಂತರ, ಇದೇ ಮೊದಲ ಬಾರಿಗೆ ದೇಶದಲ್ಲಿ ‘ಆಯುಷ್’ ಎಂಬ ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಲಾಯಿತು. ನಾವು ಆಯುರ್ವೇದಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನು ಮತ್ತು ಆಯುರ್ವೇದ ಆಧಾರಿತ ಪೇಟೆಂಟ್‌ಗಳನ್ನು ಪ್ರೋತ್ಸಾಹಿಸಿದ್ದೇವೆ. ಇಂದು, ಈ ಪ್ರಯತ್ನಗಳ ಫಲಿತಾಂಶಗಳನ್ನು ನಾವು ಕಾಣುತ್ತಿದ್ದೇವೆ. ಭಾರತದಿಂದ ಆಯುಷ್ ಮತ್ತು ಗಿಡಮೂಲಿಕೆ ಉತ್ಪನ್ನಗಳ ರಫ್ತು ನಿರಂತರವಾಗಿ ಹೆಚ್ಚುತ್ತಿದೆ. ಆಯುಷ್ ವಲಯಕ್ಕೆ ಸಂಬಂಧಿಸಿದ ಆರ್ಥಿಕತೆಯು ಹಲವಾರು ಲಕ್ಷ ಕೋಟಿ ರೂಪಾಯಿಗಳಷ್ಟು ಬೆಳೆದಿದೆ. ಭಾರತೀಯ ಕುಟುಂಬಗಳು ತಲೆಮಾರುಗಳಿಂದ ತಮ್ಮ ಆಹಾರ ಪದ್ಧತಿ ಮತ್ತು ಮನೆಯ ಸಂಪ್ರದಾಯಗಳಲ್ಲಿ ಬಳಸಿಕೊಂಡು ಬರುತ್ತಿರುವ ಅರಿಶಿನಕ್ಕೆ, ಈಗ ಪ್ರಪಂಚದಾದ್ಯಂತ ಬೇಡಿಕೆ ಹೆಚ್ಚುತ್ತಿದೆ. ಹಿಂದೆ ಊಹಿಸಲೂ ಸಾಧ್ಯವಾಗದಷ್ಟು ಪ್ರಮಾಣದಲ್ಲಿ ಭಾರತವು ಅರಿಶಿನವನ್ನು ರಫ್ತು ಮಾಡುತ್ತಿದೆ. ಇದರ ರಫ್ತು ನಿರಂತರವಾಗಿ ಏರಿಕೆಯಾಗುತ್ತಿದೆ. ಅರಿಶಿನದ ಉತ್ಪಾದನೆ, ಗುಣಮಟ್ಟ ಮತ್ತು ರಫ್ತಿಗೆ ಹೊಸ ಚೈತನ್ಯ ನೀಡಲು ನಾವು ‘ರಾಷ್ಟ್ರೀಯ ಅರಿಶಿನ ಮಂಡಳಿ’ಯನ್ನು ಕೂಡ ಸ್ಥಾಪಿಸಿದ್ದೇವೆ.

ಸ್ನೇಹಿತರೇ,

ನಮ್ಮ ಪ್ರಾಚೀನ ವಿಜ್ಞಾನಗಳು ಮತ್ತು ಆಧುನಿಕ ಸಂಶೋಧನೆಗಳ ಪ್ರಯೋಜನಗಳನ್ನು ನಾವು ಮಾನವಕುಲದೊಂದಿಗೆ ಹಂಚಿಕೊಳ್ಳಬೇಕು; ಜೊತೆಗೆ, ಈ ಕ್ಷೇತ್ರಗಳಲ್ಲಿ ನಮ್ಮ ಯುವಜನರಿಗೆ ಲಭ್ಯವಿರುವ ಅವಕಾಶಗಳನ್ನು ಗುರುತಿಸಬೇಕು. ಈ ಉದ್ದೇಶದಿಂದ, ಸರ್ಕಾರವು ‘ಇ-ಆಯುಷ್ ವೀಸಾ’ ಸೌಲಭ್ಯವನ್ನು ಪರಿಚಯಿಸಿದೆ. ಇದು ವಿದೇಶಗಳಿಂದ ಚಿಕಿತ್ಸೆಗಾಗಿ ಭಾರತಕ್ಕೆ ಬರುವ ಜನರಿಗೆ ಪ್ರಕ್ರಿಯೆಯನ್ನು ಸುಲಭಗೊಳಿಸುತ್ತಿದೆ. ಜಾಮ್‌ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ‘ಸಾಂಪ್ರದಾಯಿಕ ವೈದ್ಯಕೀಯ ಜಾಗತಿಕ ಕೇಂದ್ರ’ವನ್ನು ಸ್ಥಾಪಿಸಲಾಗಿದೆ. ಈ ಕೇಂದ್ರದ ಮೂಲಕ, ಸಾಂಪ್ರದಾಯಿಕ ವೈದ್ಯಕೀಯ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಂತರರಾಷ್ಟ್ರೀಯ ಸಹಕಾರವನ್ನು ಉತ್ತೇಜಿಸಲಾಗುತ್ತಿದೆ.

ಸ್ನೇಹಿತರೇ,

ಇಂದು, ದೇಶದ 140 ಕೋಟಿ ನಾಗರಿಕರು ಒಂದು ಸಾಮಾನ್ಯ ಗುರಿಯೊಂದಿಗೆ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಆ ಗುರಿ ‘ವಿಕಸಿತ ಭಾರತ’ವನ್ನು ನಿರ್ಮಿಸುವುದಾಗಿದೆ! ವಿಶ್ವ ಬ್ಯಾಂಕ್‌ನ ಇತ್ತೀಚಿನ ವರದಿಯು ಈ ಅಭಿಯಾನಕ್ಕೆ ಹೊಸ ಚೈತನ್ಯವನ್ನು ನೀಡಿದೆ. ಕಳೆದ 12-13 ವರ್ಷಗಳಲ್ಲಿ ಸುಮಾರು 50 ಕೋಟಿ ಭಾರತೀಯರು – ಇದೊಂದು ಅತ್ಯಂತ ಮಹತ್ವದ ಸಂಖ್ಯೆ – ತೀವ್ರ ಬಡತನದಿಂದ ಹೊರಬಂದಿದ್ದಾರೆ ಎಂದು ವಿಶ್ವ ಬ್ಯಾಂಕ್ ವರದಿ ತಿಳಿಸಿದೆ. ಈಗ ಈ ಲಕ್ಷಾಂತರ ಕುಟುಂಬಗಳ ಮುಂದೆ ಉತ್ತಮ ಜೀವನಕ್ಕಾಗಿ ಹೊಸ ಅವಕಾಶಗಳು ತೆರೆದುಕೊಂಡಿವೆ. ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಮತ್ತು ತಮ್ಮ ಕುಟುಂಬದ ಆರೋಗ್ಯದ ಕಡೆಗೆ ಗಮನ ಹರಿಸಲು ಹೆಚ್ಚಿನ ಸಾಧ್ಯತೆಗಳು ನಿರ್ಮಾಣವಾಗಿವೆ. ಪ್ರತಿಯೊಂದು ಕುಟುಂಬದಲ್ಲೂ ಆರೋಗ್ಯಕರ ಜೀವನಶೈಲಿಗೆ ಆದ್ಯತೆ ಸಿಗುವಂತೆ ಮಾಡುವುದು ನಮ್ಮ ಪ್ರಯತ್ನವಾಗಿದೆ. ಇದರಲ್ಲಿ ಯೋಗವು ಅತ್ಯಂತ ಮಹತ್ವದ ಪಾತ್ರ ವಹಿಸಬಲ್ಲದು. ಯೋಗವು ನಮ್ಮನ್ನು ರೋಗಗಳಿಂದ ಮುಕ್ತಗೊಳಿಸುತ್ತದೆ ಮತ್ತು ಅತಿಯಾದ ಭೋಗಾಸಕ್ತಿಗಳಿಂದಲೂ (ಅತಿಯಾದ ಭೋಗ ಜೀವನದಿಂದಲೂ) ಮುಕ್ತಗೊಳಿಸುತ್ತದೆ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಇದಲ್ಲದೆ, ಇದು ಯಾವುದೇ ವೆಚ್ಚವಿಲ್ಲದೆ ಲಭ್ಯವಿರುವ ಅತ್ಯಂತ ಪರಿಣಾಮಕಾರಿ ಆರೋಗ್ಯ ಸುಧಾರಣಾ ಪರಿಹಾರವಾಗಿದೆ. ‘ಪ್ರಶಾಂತಿ ಕುಟೀರಂ’ ಈ ಅಭಿಯಾನದ ಒಂದು ಭಾಗವಾಗಿದೆ ಮತ್ತು ಈ ಸಂಸ್ಥೆಯು ಹಲವಾರು ಹೊಸ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ. ಇದು ತನ್ನ ಬೆಂಬಲವನ್ನೂ ವಿಸ್ತರಿಸುತ್ತಿದೆ. ಈ ಕಾರ್ಯದಲ್ಲಿ ಅವರ ಕೊಡುಗೆ ಅತ್ಯಂತ ಮೌಲ್ಯಯುತವಾಗಿದೆ. ಆದ್ದರಿಂದ, ಇಂದಿನಿಂದಲೇ ಹೊಸ ಗುರಿಗಳಿಗಾಗಿ ಒಂದು ಮಾರ್ಗಸೂಚಿಯನ್ನು ಸಿದ್ಧಪಡಿಸಲು ಪ್ರಾರಂಭಿಸಿ ಎಂದು ನಾನು ಅವರಿಗೆ ಹೇಳಲು ಬಯಸುತ್ತೇನೆ. ನಾನು ಇಲ್ಲಿಗೆ ಬಂದಿರುವುದರಿಂದ, ಇಲ್ಲಿಂದ ಹೊರಡುವ ಮೊದಲು ಡಾ. ನಾಗೇಂದ್ರ ಜೀ ಅವರಿಗೆ ಕೆಲವು ಜವಾಬ್ದಾರಿಗಳನ್ನು ವಹಿಸುತ್ತೇನೆ. ವಾಸ್ತವವಾಗಿ, ಕೆಲವೇ ದಿನಗಳ ಹಿಂದೆ ಡಾ. ನಾಗೇಂದ್ರ ಜೀ ಅವರು ನನಗೆ ಪತ್ರ ಬರೆದು, ತಮಗೆ ಹಿಂದೆಂದಿಗಿಂತಲೂ ಹೆಚ್ಚು ಯೌವನಭರಿತವಾಗಿದ್ದಂತೆ ಅನಿಸುತ್ತಿದೆ ಎಂದು ತಿಳಿಸಿದ್ದರು. ಅವರ ಈ ಯುವ ಸಹಜ ಶಕ್ತಿಯು ಪ್ರಶಾಂತಿ ಕುಟೀರಂಗೆ ಹಾಗೂ ಇಡೀ ರಾಷ್ಟ್ರಕ್ಕೆ ಪ್ರಯೋಜನಕಾರಿಯಾಗಲಿದೆ. ಪ್ರಶಾಂತಿ ಕುಟೀರಂ ತನ್ನ 75 ವರ್ಷಗಳನ್ನು ಪೂರೈಸುವ ಹೊತ್ತಿಗೆ, ದೇಶವು ‘ವಿಕಸಿತ ಭಾರತ’ವಾಗಿ ಮಾರ್ಪಟ್ಟಿರಬೇಕು ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಆದ್ದರಿಂದ, ‘ವಿಕಸಿತ ಭಾರತ’ದ ಈ ದೃಷ್ಟಿಕೋನವನ್ನು ಮನಸ್ಸಿನಲ್ಲಿಟ್ಟುಕೊಂಡು, ಮುಂದಿನ 25 ವರ್ಷಗಳು ಹೇಗಿರಬೇಕು ಎಂಬುದರ ಕುರಿತು ಈಗಲೇ ಯೋಜನೆ ರೂಪಿಸಲು ಪ್ರಾರಂಭಿಸಿ. ಈ ಅಭಿಯಾನಕ್ಕೆ ನಿಮ್ಮನ್ನು ನೀವು ಸಮರ್ಪಿಸಿಕೊಳ್ಳಿ; ಇದರಿಂದ ನೀವು ಸಾಗುವ ಹಾದಿಯು ರಾಷ್ಟ್ರವನ್ನು ಬಲಪಡಿಸಲು ಕೊಡುಗೆ ನೀಡಲಿ. ಪ್ರಶಾಂತಿ ಕುಟೀರಂನ 75ನೇ ವರ್ಷದವರೆಗಿನ ನಿಮ್ಮ ಮುಂದಿನ 25 ವರ್ಷಗಳ ಪಯಣವು ‘ವಿಕಸಿತ ಭಾರತ’ಕ್ಕೆ ಶಕ್ತಿಯ ಮೂಲವಾಗಲಿ. ಈ ದಿಕ್ಕಿನಲ್ಲಿ ಯೋಚಿಸುವಂತೆ ನಾನು ನಿಮ್ಮೆಲ್ಲರನ್ನೂ ಕೋರುತ್ತೇನೆ. ಈ ದೃಢ ನಂಬಿಕೆಯೊಂದಿಗೆ, ಸುವರ್ಣ ಮಹೋತ್ಸವದ ಆಚರಣೆಗಳಿಗಾಗಿ ನಿಮ್ಮೆಲ್ಲರಿಗೂ ನಾನು ಮತ್ತೊಮ್ಮೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಗೌರವಾನ್ವಿತ ಪೂಜ್ಯ ಶೇಷಾದ್ರಿ ಜೀ ಅವರ ಪಾದಕಮಲಗಳಿಗೆ ನಾನು ಮತ್ತೊಮ್ಮೆ ಭಕ್ತಿಯಿಂದ ನಮಸ್ಕರಿಸುತ್ತೇನೆ. ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು!

ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.

 

*****