ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿಂದು ನಡೆದ ‘ಜನಜಾತೀಯ ಗೌರವ ದಿವಸ'(ಬುಡಕಟ್ಟು ಸಮುದಾಯದ ಗೌರವ ದಿನ) ಕಾರ್ಯಕ್ರಮದಲ್ಲಿ ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಸುಮಾರು 3,000 ಕೋಟಿ ರೂ. ಮೌಲ್ಯದ 246 ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿದರು, ಶಂಕುಸ್ಥಾಪನೆ ನೆರವೇರಿಸಿದರು. ‘ಧರ್ತಿ ಆಬಾ’ ಭಗವಾನ್ ಬಿರ್ಸಾ ಮುಂಡಾ ಅವರ 151ನೇ ಜನ್ಮದಿನದ ಅಂಗವಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿ, ದೇಶದಾದ್ಯಂತ ಇರುವ ನಾಗರಿಕರಿಗೆ ‘ಜೋಹಾರ್’ ಎಂದು ಶುಭಾಶಯ ಕೋರಿದರು. ಭಗವಾನ್ ಬಿರ್ಸಾ ಮುಂಡಾ ಅವರಿಗೆ ಗೌರವಪೂರ್ವಕ ನಮನ ಸಲ್ಲಿಸಿದ ಅವರು, ದೇಶವು ತನ್ನ ಬುಡಕಟ್ಟು ವೀರ ನಾರಿಯರನ್ನು ಸ್ಮರಿಸುತ್ತಿರುವ ಈ ರಾಷ್ಟ್ರವ್ಯಾಪಿ ಆಚರಣೆಗಳು, ಬುಡಕಟ್ಟು ಸಮುದಾಯಗಳ ಹೆಮ್ಮೆಯನ್ನು ಮತ್ತು ಬಿರ್ಸಾ ಮುಂಡಾ ಅವರು ನೀಡಿದ ಶಾಶ್ವತ ಸ್ಫೂರ್ತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಹೇಳಿದರು. ರಾಘೋಜಿ ಭಾಂಗ್ರೆ, ಭಗೋಜಿ ನಾಯಕ್ ಮತ್ತು ವೀರ ಬಾಬುರಾವ್ ಶೆಡ್ಮಾಕೆ ಅವರಂತಹ ವೀರರ ಕಥೆಗಳೊಂದಿಗೆ ನಂಟು ಹೊಂದಿರುವ ಶ್ರೀಮಂತ ಬುಡಕಟ್ಟು ಸಂಸ್ಕೃತಿಯ ನಾಡಾದ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ನಡೆಯುತ್ತಿರುವ ಈ ಭವ್ಯ ಆಚರಣೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಎಲ್ಲಾ ಬುಡಕಟ್ಟು ಯೋಧರಿಗೆ ನಮನ ಸಲ್ಲಿಸಿದರು. “ದೇಶದಾದ್ಯಂತ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಎಲ್ಲಾ ರಾಜ್ಯಪಾಲರು, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮತ್ತು ಪ್ರತಿಯೊಬ್ಬ ಜನಪ್ರತಿನಿಧಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಮೋದಿ ಹೇಳಿದರು.
2021 ನವೆಂಬರ್ 15ರಂದು ಆರಂಭವಾದ ‘ಜನಜಾತೀಯ ಗೌರವ ದಿವಸ’ ಆಚರಣೆಯು ಇದೀಗ ಒಂದು ರಾಷ್ಟ್ರೀಯ ಹಬ್ಬವಾಗಿ ಬೆಳೆದಿದೆ. ಕಳೆದ ವರ್ಷ ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮದಿನದ ಸಂದರ್ಭದಲ್ಲಿ, ದೇಶಾದ್ಯಂತ 2 ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಗಳು ನಡೆದವು, ಕೋಟ್ಯಂತರ ನಾಗರಿಕರು ಇದರಲ್ಲಿ ಪಾಲ್ಗೊಂಡಿದ್ದರು. “ಇಂದು ಭಾರತವು ತನ್ನ ಪರಂಪರೆ, ಇತಿಹಾಸ ಮತ್ತು ವೀರರನ್ನು ‘ಸ್ವದೇಶಿ ಸ್ವಾಭಿಮಾನ’ದೊಂದಿಗೆ ಸ್ಮರಿಸುತ್ತಿದೆ. ಇದು ನಮ್ಮ ರಾಷ್ಟ್ರೀಯ ಪ್ರಜ್ಞೆಯಲ್ಲಿ ಉಂಟಾಗಿರುವ ಒಂದು ದೊಡ್ಡ ಪರಿವರ್ತನೆಯ ಸಂಕೇತವಾಗಿದೆ” ಎಂದು ಪ್ರಧಾನ ಮಂತ್ರಿ ಮೋದಿ ತಿಳಿಸಿದರು.
ಖಾಸಿ ಬೆಟ್ಟಗಳಲ್ಲಿನ ಟಿರೋಟ್ ಸಿಂಗ್ ಅವರ ಹೋರಾಟ, ಛೋಟಾ ನಾಗ್ಪುರದ ‘ಕೋಲ್’ ಚಳುವಳಿ, ಸಿಡೋ-ಕನ್ಹು ನೇತೃತ್ವದ ಸಾಂತಾಲ್ ಕ್ರಾಂತಿ, ಮಂಗಢದಲ್ಲಿ ಗೋವಿಂದ ಗುರು ಅವರ ಅನುಯಾಯಿಗಳ ತ್ಯಾಗ ಹಾಗೂ ರಾಣಿ ಗೈದಿನ್ಲಿಯು, ತಾಂತಿಯಾ ಭಿಲ್, ಅಲ್ಲೂರಿ ಸೀತಾರಾಮ ರಾಜು ಮತ್ತು ರಾಣಿ ದುರ್ಗಾವತಿ ಅವರಂತಹ ವೀರರ ಧೈರ್ಯದ ಉದಾಹರಣೆಗಳನ್ನು ನೀಡಿದ ಪ್ರಧಾನಿ, ವಸಾಹತುಶಾಹಿ ಅನ್ಯಾಯದ ವಿರುದ್ಧ ಬುಡಕಟ್ಟು ಸಮುದಾಯಗಳು ನಿರಂತರವಾಗಿ ಧ್ವನಿ ಎತ್ತಿದ್ದನ್ನು ಸ್ಮರಿಸಿದರು. ಈ ಸ್ವಾತಂತ್ರ್ಯ ಚಳುವಳಿಗಳ ಮಹತ್ತರ ಪರಂಪರೆಯನ್ನು ಅವರು ಉಲ್ಲೇಖಿಸಿದರು. “ಈ ಎಲ್ಲಾ ಐತಿಹಾಸಿಕ ಕಥನಗಳ ಜತೆಗೆ, ಭಗವಾನ್ ಬಿರ್ಸಾ ಮುಂಡಾ ಅವರ ‘ಉಲ್ಗುಲಾನ್’ (ದಂಗೆ) ಮತ್ತು ಅವರು ಚಿಕ್ಕ ವಯಸ್ಸಿನಲ್ಲೇ ನಡೆಸಿದ ಹೋರಾಟವು, ಇಂದಿಗೂ ಕೋಟ್ಯಂತರ ದೇಶವಾಸಿಗಳಿಗೆ ದೊಡ್ಡ ಸ್ಫೂರ್ತಿಯಾಗಿದೆ” ಎಂದು ಮೋದಿ ಹೇಳಿದರು.
‘ಜನಜಾತೀಯ ಗೌರವ ದಿವಸ’ದ ಸಂದರ್ಭದಲ್ಲಿ, ವಿವಿಧ ರಾಜ್ಯಗಳಲ್ಲಿ ಸುಮಾರು 3,000 ಕೋಟಿ ರೂಪಾಯಿ ಮೌಲ್ಯದ 170ಕ್ಕೂ ಹೆಚ್ಚು ಬುಡಕಟ್ಟು ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಲಾಗಿದೆ, 70ಕ್ಕೂ ಹೆಚ್ಚು ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದರಲ್ಲಿ ಮಿಜೋರಾಂನಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ರೋಪುಯಿಲಿಯಾನಿ ಅವರಿಗೆ ಸಮರ್ಪಿತವಾದ ವಸ್ತುಸಂಗ್ರಹಾಲಯ, ಅರುಣಾಚಲ ಪ್ರದೇಶದಲ್ಲಿ ಬುಡಕಟ್ಟು ಸಂಶೋಧನಾ ಸಂಸ್ಥೆಯ ಹೊಸ ಕಟ್ಟಡ, ಹಾಗೂ ಶೈಕ್ಷಣಿಕ ಸಂಸ್ಥೆಗಳು, ಆರೋಗ್ಯ ಸೇವೆಗಳು, ಬುಡಕಟ್ಟು ಉತ್ಪನ್ನಗಳ ಮಾರುಕಟ್ಟೆ ಕೇಂದ್ರಗಳು ಮತ್ತು ಗ್ರಾಮೀಣ ಮೂಲಸೌಕರ್ಯ ಕಾಮಗಾರಿಗಳು ಸೇರಿವೆ. “ಈ ಎಲ್ಲಾ ಯೋಜನೆಗಳಿಗಾಗಿ ನಾನು ದೇಶದ ಜನತೆಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದರು.
ಈ ವರ್ಷದ ಆಚರಣೆಯು 2 ಐತಿಹಾಸಿಕ ರಾಷ್ಟ್ರೀಯ ಮೈಲಿಗಲ್ಲುಗಳ ಕುರಿತಾದ ವ್ಯಾಪಕ ಚರ್ಚೆಗಳೊಂದಿಗೆ ಏಕಕಾಲದಲ್ಲಿ ಬಂದಿದೆ. ಆ 2 ಸಾಧನೆಗಳು ಯಾವುವೆಂದರೆ, ಸುಮಾರು 50 ಕೋಟಿ ನಾಗರಿಕರು ತೀವ್ರ ಬಡತನದಿಂದ ಹೊರಬಂದಿದ್ದಾರೆ. ಭಾರತವು ನಕ್ಸಲಿಸಂ ಹಾಗೂ ಮಾವೋವಾದಿ ಭಯೋತ್ಪಾದನೆಯಿಂದ ಮುಕ್ತವಾಗಿದೆ. ಈ ಎರಡೂ ಸಾಧನೆಗಳು ಬುಡಕಟ್ಟು ಪ್ರದೇಶಗಳಿಗೆ ಅತ್ಯಂತ ಮಹತ್ವದ್ದಾಗಿವೆ. “ಈ ಎರಡೂ ಸಾಧನೆಗಳು ನಮ್ಮ ಬುಡಕಟ್ಟು ಸಹೋದರ ಸಹೋದರಿಯರ ಜೀವನದೊಂದಿಗೆ ಆಳವಾಗಿ ಬೆಸೆದುಕೊಂಡಿವೆ” ಎಂದು ಮೋದಿ ಹೇಳಿದರು.
ಕಳೆದ 12-13 ವರ್ಷಗಳಲ್ಲಿ ಸುಮಾರು 50 ಕೋಟಿ ಭಾರತೀಯರು ತೀವ್ರ ಬಡತನದಿಂದ ಪಾರಾಗಿದ್ದಾರೆ ಎಂದು ಇತ್ತೀಚಿನ ವಿಶ್ವ ಬ್ಯಾಂಕ್ ವರದಿ ತಿಳಿಸಿದೆ. ಇದು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಆಗಿರುವ ಅತ್ಯಂತ ದೊಡ್ಡ ಸಾಧನೆಗಳಲ್ಲಿ ಒಂದಾಗಿದೆ. ಇದು ಕೇವಲ ಒಂದು ನಿರ್ದಿಷ್ಟ ಸರ್ಕಾರದಿಂದ ಮಾತ್ರವಲ್ಲದೆ, ಸಮಾಜದ ಸಾಮೂಹಿಕ ಶಕ್ತಿ, ಪ್ರತಿಯೊಬ್ಬ ನಾಗರಿಕನ ಕಠಿಣ ಪರಿಶ್ರಮ ಹಾಗೂ ಕೇಂದ್ರ ಸರ್ಕಾರದ ಉದ್ದೇಶಿತ ಬುಡಕಟ್ಟು ಕಲ್ಯಾಣ ಯೋಜನೆಗಳು ಮತ್ತು ನಿರ್ಧಾರಗಳಿಂದ ಸಾಧ್ಯವಾಗಿದೆ. “ಈ ಸಾಧನೆಗಾಗಿ ನಾನು ಎಲ್ಲಾ ದೇಶವಾಸಿಗಳಿಗೆ, ವಿಶೇಷವಾಗಿ ನನ್ನ ಬುಡಕಟ್ಟು ಸಹೋದರ ಸಹೋದರಿಯರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ,” ಎಂದು ಪ್ರಧಾನಿ ಮೋದಿ ಹೇಳಿದರು.
ದಶಕಗಳಿಂದ ಅಭಿವೃದ್ಧಿಯಿಂದ ವಂಚಿತರಾದವರಿಗೆ ಆದ್ಯತೆ ನೀಡುವ ದೃಢ ಸಂಕಲ್ಪದ ಈಡೇರಿಕೆಯಾಗಿ, ಲಕ್ಷಾಂತರ ಜನರು ಬಡತನದಿಂದ ಹೊರಬಂದಿದ್ದಾರೆ. ಮೂಲಸೌಕರ್ಯಗಳ ಕೊರತೆಯಿದ್ದ ಅತ್ಯಂತ ಹಿಂದುಳಿದ ಬುಡಕಟ್ಟು ಪ್ರದೇಶಗಳಲ್ಲಿ ಸರ್ಕಾರ ತನ್ನ ಸಂಪೂರ್ಣ ಶಕ್ತಿ ವಿನಿಯೋಗಿಸಿದೆ. ಇದಕ್ಕಾಗಿ ‘ಪಿಎಂ-ಜನ್ಮನ್ ಯೋಜನೆ’ ಮತ್ತು ‘ಧರ್ತಿ ಆಬಾ ಜಂಜಾತೀಯ ಗ್ರಾಮ ಉತ್ಕರ್ಷ ಅಭಿಯಾನ’ದ ಅಡಿ 1 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹಣ ಮೀಸಲಿಡಲಾಗಿದೆ. “ಸ್ವಾತಂತ್ರ್ಯದ ನಂತರ ಯಾವ ಕುಟುಂಬಗಳಿಗೆ ಸೌಲಭ್ಯಗಳು ಅತಿ ತಡವಾಗಿ ತಲುಪಿದ್ದವೋ, ಅಂತಹ ಕುಟುಂಬಗಳಿಗೆ ಈಗ ಸೌಲಭ್ಯಗಳು ಅತಿ ವೇಗವಾಗಿ ತಲುಪುವಂತೆ ಮಾಡುವುದು ನಮ್ಮ ಪ್ರಯತ್ನವಾಗಿದೆ,” ಎಂದು ಮೋದಿ ಪ್ರತಿಪಾದಿಸಿದರು.
ಬಡವರಿಗೆ 4 ಕೋಟಿಗೂ ಹೆಚ್ಚು ಪಕ್ಕಾ ಮನೆಗಳನ್ನು ನಿರ್ಮಿಸಲಾಗಿದೆ. ಸ್ವಾತಂತ್ರ್ಯದ ನಂತರ ದಶಕಗಳ ಕಾಲ ಕತ್ತಲಲ್ಲಿದ್ದ 18,000 ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ‘ಆಯುಷ್ಮಾನ್ ಭಾರತ್’ ಅಡಿ 5 ಲಕ್ಷ ರೂಪಾಯಿವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಒದಗಿಸಲಾಗಿದೆ. ದೂರದ ಬುಡಕಟ್ಟು ಪ್ರದೇಶಗಳಲ್ಲಿ ಆರೋಗ್ಯ ಸೇವೆಗಳನ್ನು ತಲುಪಿಸಲು 1.75 ಲಕ್ಷಕ್ಕೂ ಹೆಚ್ಚು ‘ಆಯುಷ್ಮಾನ್ ಆರೋಗ್ಯ ಮಂದಿರ’ಗಳನ್ನು ಸ್ಥಾಪಿಸುವ ಮೂಲಕ ಸರ್ಕಾರವು ನಿರ್ಗತಿಕರಿಗೆ ಆದ್ಯತೆ ನೀಡಲು ಬದ್ಧವಾಗಿದೆ. ಗ್ರಾಮೀಣ ನೈರ್ಮಲ್ಯದ ಪ್ರಭಾವವನ್ನು ಎತ್ತಿ ತೋರಿಸಿದ ಪ್ರಧಾನಿ ಮೋದಿ, “ಬಡ ಕುಟುಂಬಗಳಿಗೆ ಶೌಚಾಲಯಗಳು ಸಿಕ್ಕಾಗ ಮತ್ತು ನೈರ್ಮಲ್ಯ ಸೌಲಭ್ಯಗಳು ಹೆಚ್ಚಾದಾಗ, ಅನೇಕ ರೋಗಗಳ ಅಪಾಯವೂ ಕಡಿಮೆಯಾಗಿದೆ” ಎಂದು ಹೇಳಿದರು.
ಬಡತನ ನಿರ್ಮೂಲನೆಗೆ ಬಡ ಕುಟುಂಬಗಳಿಗೆ ಆದಾಯದ ಅವಕಾಶಗಳನ್ನು ವಿಸ್ತರಿಸುವ ಅಗತ್ಯವಿದೆ. ಹಾಗಾಗಿ, ‘ಮುದ್ರಾ ಯೋಜನೆ’ಯ ಅಡಿ ಲಕ್ಷ ಕೋಟಿ ರೂಪಾಯಿಗಳಷ್ಟು ಮೇಲಾಧಾರ ರಹಿತ ಸಾಲಗಳನ್ನು ವಿತರಿಸಲಾಗಿದೆ. ಇದರಿಂದ ಬಡವರು, ದಲಿತರು, ಹಿಂದುಳಿದ ವರ್ಗಗಳು ಮತ್ತು ಬುಡಕಟ್ಟು ಸಮುದಾಯಗಳು ಪ್ರಯೋಜನ ಪಡೆದಿವೆ. “ಇದರ ಮೂಲಕ, ಅವರಲ್ಲಿ ಮುನ್ನಡೆಯಲು ಹೊಸ ಆತ್ಮವಿಶ್ವಾಸ ಮೂಡಿದೆ” ಎಂದು ಶ್ರೀ ಮೋದಿ ತಿಳಿಸಿದರು.
ಅಭಿವೃದ್ಧಿಯಲ್ಲಿ ದೀರ್ಘಕಾಲ ಹಿಂದುಳಿದಿದ್ದ ಪ್ರದೇಶಗಳಲ್ಲಿ ಕೈಗೊಂಡ ನಿರ್ದಿಷ್ಟ ಕ್ರಮಗಳನ್ನು ಪ್ರಧಾನ ಮಂತ್ರಿ ಉಲ್ಲೇಖಿಸಿದರು. ಇದರಲ್ಲಿ 100ಕ್ಕೂ ಹೆಚ್ಚು ‘ಆಕಾಂಕ್ಷಿತ ಜಿಲ್ಲೆ’ಗಳು ಮತ್ತು ಹೆಚ್ಚಿನ ಬುಡಕಟ್ಟು ಜನಸಂಖ್ಯೆ ಹೊಂದಿರುವ 500ಕ್ಕೂ ಹೆಚ್ಚು ‘ಆಕಾಂಕ್ಷಿತ ಬ್ಲಾಕ್’ಗಳಲ್ಲಿ ನಡೆಸಲಾದ ವಿಶೇಷ ಅಭಿಯಾನಗಳು ಸೇರಿವೆ. ಅಲ್ಲದೆ, ರೈತರು, ಬಡ ಕುಟುಂಬಗಳು ಮತ್ತು ಬುಡಕಟ್ಟು ಸಮುದಾಯಗಳಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲು ‘ಪ್ರಧಾನ ಮಂತ್ರಿ ಕೃಷಿ ಧನಧಾನ್ಯ ಯೋಜನೆ’ಯ ಅಡಿ, ಕೃಷಿ ಕ್ಷೇತ್ರದಲ್ಲಿ ಹಿಂದುಳಿದ 100 ಜಿಲ್ಲೆಗಳಲ್ಲಿ ವಿಶೇಷ ಅಭಿಯಾನಗಳನ್ನು ಹಮ್ಮಿಕೊಳ್ಳಲಾಗಿದೆ. ಸಾಮೂಹಿಕ ಪ್ರಯತ್ನಗಳ ಪರಿವರ್ತನಾ ಶಕ್ತಿಗೆ ಒತ್ತು ನೀಡಿದ ಪ್ರಧಾನ ಮಂತ್ರಿ, “ಈ ಸಾಮೂಹಿಕ ಪ್ರಯತ್ನಗಳು ಮತ್ತು ‘ಸಬ್ಕಾ ಸಾಥ್, ಸಬ್ಕಾ ವಿಕಾಸ್’ ಎಂಬ ಮಂತ್ರವು ದೇಶದ ಬಡವರಿಗೆ ಹೊಸ ಆತ್ಮವಿಶ್ವಾಸ ನೀಡಿತು. ಕೋಟ್ಯಂತರ ಬಡ ಜನರು ಬಡತನವನ್ನು ಸೋಲಿಸುವ ಮೂಲಕ ಇದನ್ನು ಸಾಬೀತುಪಡಿಸಿದ್ದಾರೆ” ಎಂದು ಪ್ರತಿಪಾದಿಸಿದರು.
ನಕ್ಸಲಿಸಂನಿಂದ ಮುಕ್ತವಾಗುವುದನ್ನು ದೇಶದ 2ನೇ ಪ್ರಮುಖ ಮೈಲಿಗಲ್ಲು ಎಂದು ಬಣ್ಣಿಸಿದ ಪ್ರಧಾನ ಮಂತ್ರಿ, ಗಡ್ಚಿರೋಲಿ ಮತ್ತು ಇತರೆ ಬುಡಕಟ್ಟು ಪ್ರದೇಶಗಳಲ್ಲಿ ನಕ್ಸಲಿಸಂ ಬುಡಕಟ್ಟು ಸಮುದಾಯಗಳಿಗೆ ಅತಿ ಹೆಚ್ಚು ಹಾನಿ ಉಂಟುಮಾಡಿದೆ. ಹಿಂದೆ ಸುಮಾರು 125 ಜಿಲ್ಲೆಗಳು ನಕ್ಸಲಿಸಂನಿಂದ ಬಾಧಿತವಾಗಿದ್ದವು. ಆಗ ಪ್ರತಿ ವರ್ಷ ನೂರಾರು ಹಿಂಸಾತ್ಮಕ ಘಟನೆಗಳು ನಡೆಯುತ್ತಿದ್ದವು. ಸಾವಿರಾರು ಅಮಾಯಕರು, ಮುಖ್ಯವಾಗಿ ನಮ್ಮ ಬುಡಕಟ್ಟು ಸಹೋದರ ಸಹೋದರಿಯರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದರು. ನಕ್ಸಲಿಸಂ ಅಂತ್ಯಗೊಂಡಿರುವುದರಿಂದ, ತಾಯಂದಿರು ಮತ್ತು ಸಹೋದರಿಯರು ಈಗ ಸುರಕ್ಷಿತ ಭಾವನೆಯೊಂದಿಗೆ ಸರ್ಕಾರವನ್ನು ಹರಸುತ್ತಿದ್ದಾರೆ. ಬಾಲ್ಯವನ್ನು ಕಳೆದುಕೊಂಡಿದ್ದ ಯುವ ಜನರು ಶಿಕ್ಷಣ ಮತ್ತು ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದಾರೆ. ಹಿಂದೆ ಜನರು ಭೇಟಿ ನೀಡಲು ಭಯಪಡುತ್ತಿದ್ದ ಛತ್ತೀಸ್ಗಢದ ಬಸ್ತಾರ್ನಲ್ಲಿ, ಭದ್ರತಾ ಪಡೆಗಳೊಂದಿಗೆ ತಾವೇ ದೀಪಾವಳಿ ಆಚರಿಸಿದ್ದನ್ನು ಅವರು ನೆನಪಿಸಿಕೊಂಡರು. “ಗಡ್ಚಿರೋಲಿ ಸೇರಿದಂತೆ ಹಿಂದೆ ನಕ್ಸಲ್ ಪೀಡಿತವಾಗಿದ್ದ ಎಲ್ಲಾ ಪ್ರದೇಶಗಳಲ್ಲಿ, ಈ ಬಾರಿಯ ದೀಪಾವಳಿಯಂದು ಮಣ್ಣಿನ ದೀಪಗಳ ಜತೆಗೆ, ಜನರ ಬದುಕಿನಲ್ಲಿ ಭರವಸೆಯ ಬೆಳಕು ಕೂಡ ಮೂಡಿದೆ” ಎಂದು ಪ್ರಧಾನಮಂತ್ರಿ ಮೋದಿ ಹೇಳಿದರು.
ಭಾರತದ ಪ್ರಗತಿಯಲ್ಲಿ ಬುಡಕಟ್ಟು ಸಮುದಾಯಗಳ ಉತ್ಸಾಹಭರಿತ ಕೊಡುಗೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ದೇಶದ ಅತ್ಯುನ್ನತ ಹುದ್ದೆಯಲ್ಲಿ ಬುಡಕಟ್ಟು ಸಮುದಾಯದ ಮಗಳೊಬ್ಬರು ಇರುವುದನ್ನು ಉಲ್ಲೇಖಿಸಿ, ಇಡೀ ರಾಷ್ಟ್ರವೇ ಹೆಮ್ಮೆಪಡುತ್ತಿದೆ ಎಂದು ತಿಳಿಸಿದರು. “ನಾವೆಲ್ಲರೂ ರಾಷ್ಟ್ರಪತಿ ದ್ರೌಪದಿ ಮುರ್ಮು ಜಿ ಅವರ ಬಗ್ಗೆ ಹೆಮ್ಮೆಪಡುತ್ತೇವೆ” ಎಂದು ಮೋದಿ ಹೇಳಿದರು.
‘ಜನಜಾತೀಯ ಗೌರವ ದಿವಸ’ದ ಶುಭಾಶಯಗಳೊಂದಿಗೆ ತಮ್ಮ ಭಾಷಣ ಮುಕ್ತಾಯಗೊಳಿಸಿದ ಪ್ರಧಾನ ಮಂತ್ರಿ, ಭಗವಾನ್ ಬಿರ್ಸಾ ಮುಂಡಾ ಅವರ ಜೀವನದಿಂದ ಸ್ಫೂರ್ತಿ ಪಡೆಯುವಂತೆ ನಾಗರಿಕರಿಗೆ ಕರೆ ನೀಡಿದರು. “ಭಗವಾನ್ ಬಿರ್ಸಾ ಮುಂಡಾ ಅವರಿಂದ ಸ್ಫೂರ್ತಿ ಪಡೆದು, ‘ವಿಕಸಿತ ಭಾರತ’ದ ಕನಸನ್ನು ನನಸಾಗಿಸಲು ನಾವೆಲ್ಲರೂ ನಮ್ಮ ಶಕ್ತಿಯನ್ನು ಇನ್ನಷ್ಟು ಹೆಚ್ಚಾಗಿ ವಿನಿಯೋಗಿಸಬೇಕಾದ ಸಮಯ ಇದಾಗಿದೆ” ಎಂದು ಪ್ರಧಾನಮಂತ್ರಿ ಮೋದಿ ಕರೆ ನೀಡಿದರು.
*****
Janjatiya Gaurav Diwas celebrates the rich heritage, culture and contributions of India's tribal communities. https://t.co/jaafdnMJ6n
— Narendra Modi (@narendramodi) November 15, 2026
15 नवंबर 2021 से जनजातीय गौरव दिवस मनाने की जो शुरुआत हुई, आज वो एक राष्ट्रीय उत्सव बन चुका है: PM @narendramodi
— PMO India (@PMOIndia) November 15, 2026
एक समय था, जब हमारे देश में अनेक दिवस और उत्सव विदेशी दृष्टिकोण से तय होते थे। लेकिन आज भारत अपनी विरासत को, अपने इतिहास को, अपने नायकों को स्वदेशी स्वाभिमान के साथ याद कर रहा है। ये हमारी राष्ट्रीय चेतना में आए एक बड़े परिवर्तन का प्रतीक है: PM @narendramodi
— PMO India (@PMOIndia) November 15, 2026
देश की दो बड़ी उपलब्धियों की चर्चा हर जगह हो रही है। पहली उपलब्धि है देश के करीब 50 करोड़ लोगों की भीषण गरीबी को परास्त करना। और दूसरी उपलब्धि है, देश का नक्सलवाद...माओवादी आतंक से मुक्ति पाना: PM @narendramodi
— PMO India (@PMOIndia) November 15, 2026
हमने उन क्षेत्रों पर भी विशेष ध्यान दिया, जो लंबे समय तक विकास में पीछे रह गए थे। देश के 100 से अधिक आकांक्षी जिलों और 500 से अधिक आकांक्षी ब्लॉकों में विशेष अभियान चलाया। इनमें बड़ी संख्या में जनजातीय आबादी वाले क्षेत्र शामिल हैं। अब पीएम कृषि धन धान्य योजना के तहत कृषि के क्षेत्र में पिछड़े 100 जिलों पर भी विशेष ध्यान दिया जा रहा है: PM @narendramodi
— PMO India (@PMOIndia) November 15, 2026