Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಬ್ರಹ್ಮಕುಮಾರಿ ಕುಟುಂಬದ 80ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಮಂತ್ರಿಯವರು ವಿಡಿಯೋ ಸಂವಾದ ಮೂಲಕ ಮಾಡಿದ ಭಾಷಣ

ಬ್ರಹ್ಮಕುಮಾರಿ ಕುಟುಂಬದ 80ನೇ ವಾರ್ಷಿಕೋತ್ಸವದಲ್ಲಿ ಪ್ರಧಾನಮಂತ್ರಿಯವರು ವಿಡಿಯೋ ಸಂವಾದ ಮೂಲಕ ಮಾಡಿದ ಭಾಷಣ


ಬ್ರಹ್ಮಕುಮಾರಿ ಸಮಾಜದ ಎಲ್ಲಾ ಸದಸ್ಯರನ್ನು ಮತ್ತು ಈ ಅಂತರ ರಾಷ್ಟ್ರೀಯ ಸಾಂಸ್ಕೃತಿಕ ಸಮಾವೇಶದಲ್ಲಿ ಪಾಲ್ಗೊಂಡ ಎಲ್ಲಾ ಸಭಾಸದರನ್ನುನಾನು ಸ್ವಾಗತಿಸುತ್ತೇನೆ. 

 

’ಓಂ ಶಾಂತಿ’ ಪಠಿಸುತ್ತಿರುವ ನಿಮಗೆಲ್ಲರಿಗೂ ನನ್ನ ನಮಸ್ಕಾರಗಳು. ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾನಿಲಯದ ಸ್ಥಾಪಕರಾದ ದಾದಾ ಲೇಖರಾಜ್ ಅವರ ಆತ್ಮ ,ಅವರ ಬೋಧನೆ,  ಮಹಿಳಾ ಶಕ್ತಿಯ ಮೂಲಕ ಈ ಸಂಸ್ಥೆ ಒಂದು ಆಂದೋಲನವಾಗಿ ರೂಪುಗೊಂಡು 80 ವರ್ಷ ಪೂರೈಸಿರುವುದನ್ನು ನೋಡುತ್ತಾ ಸಂತೋಷಪಡುತ್ತಿರಬಹುದು. 

 

ನಮ್ಮ ದೇಶದಲ್ಲಿ 80 ವರ್ಷ ಆಚರಣೆಗೆ ವಿಶೇಷ ಮಹತ್ವವಿದೆ.ವಿಶ್ವದಲ್ಲಿ 25 ವರ್ಷ, 50 ವರ್ಷ, 75 ವರ್ಷ ಮತ್ತು 100 ವರ್ಷಗಳ ಆಚರಣೆ ಇದೆ, ಆದರೆ ಭಾರತದಲ್ಲಿ 80 ವರ್ಷ ಒಂದು ನಿರ್ದಿಷ್ಟ ಘಟ್ಟ ಎಂದು ಪರಿಗಣಿಸಲಾಗುತ್ತದೆ.ಮತ್ತು ಓರ್ವ ವ್ಯಕ್ತಿಗೆ  ಅಥವಾ ಸಂಸ್ಥೆಗೆ 80 ವರ್ಷವಾದಾಗ ಅದು ಪೂರ್ಣ ಚಂದ್ರನನ್ನು 1000ನೇ ಬಾರಿ ನೋಡುವ ಸಂದರ್ಭ.

 

ದಾದಾ ಲೇಖರಾಜ್ ಅವರು ಆರಂಭಿಸಿದ ಚಳವಳಿ,  ಬ್ರಹ್ಮಕುಮಾರಿ ವಿಶ್ವವಿದ್ಯಾಲಯಕ್ಕೆ ಇಂದು ಪೂರ್ಣಚಂದ್ರನನ್ನು 1000ನೇ ಬಾರಿ ನೋಡುವ ಸದವಕಾಶ. ಈ ವಿಶ್ವದಲ್ಲಿ ಮಾನವ ಜನಾಂಗಕ್ಕೆ ಶಾಂತಿ ಪ್ರಸಾರಿಸುವ ಅವರ ಯತ್ನಗಳು ಹೊಸ ಶಕ್ತಿ ಸಾಮರ್ಥ್ಯದೊಂದಿಗೆ ಮುಂದೆ ಸಾಗಲಿವೆ.

 

ದಾದಿ ಜಾನಕೀಜಿ ಅವರು ಕಳೆದ ವರ್ಷ ತಮ್ಮ ಶತಮಾನೋತ್ಸವವನ್ನು ಪೂರ್ಣಗೊಳಿಸಿದರು, ಅವರಿಗೀಗ 100ಕ್ಕೂ ಅಧಿಕ ವಯಸ್ಸು. ಅವರು ಈಗಲೂ ನಮ್ಮನ್ನು ಕರ್ಮಯೋಗಿಯಂತೆ ಆಶೀರ್ವದಿಸುತ್ತಿದ್ದಾರೆ ಮತ್ತು ಇಂದು ನಮಗಾಗಿ ಸಮಯ ವಿನಿಯೋಗಿಸಿದ್ದಾರೆ. ನಾನು ಇಲ್ಲಿಂದ ದಾದೀಜಿ ಅವರಿಗೆ ಶುಭಾಶಯ  ಹೇಳುತ್ತೇನೆ. ಎರಡು ದಿವಸಗಳ ಬಳಿಕ ’ಚೇಟಿ ಚಂದ್’ , ಹೊಸ ವರ್ಷದ (ಸಂವತ್ಸರ್) ಹಬ್ಬವನ್ನು ಇಡೀ ದೇಶಾದ್ಯಂತ ಆಚರಿಸಲಾಗುತ್ತದೆ. ನವ ಸಂವತ್ಸರದ ಈ ಸಂಧರ್ಭದಲ್ಲಿ ನಾನು ನಿಮ್ಮೆಲ್ಲರಿಗೂ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.

 

ನಿಮ್ಮೊಂದಿಗಿರಲು ನನಗೆ ಹಲವು ಅವಕಾಶಗಳು ದೊರಕಿವೆ ಮತ್ತು ನನ್ನ ಮೇಲೆ ತೋರಿದ ಪ್ರೀತಿ, ಗೌರವಕ್ಕಾಗಿ ನಾನು ಅಭಾರಿಯಾಗಿದ್ದೇನೆ. ಸಂಸ್ಥೆಯೊಂದಕ್ಕೆ 80 ವರ್ಷದ ಅವಧಿ ಸಣ್ಣದೇನಲ್ಲ. ಇವತ್ತಿನ ಪರಿಸ್ಥಿತಿಯಲ್ಲಿ ಯಾವ ಸಂಸ್ಥೆಯೂ 10,15 ಅಥವಾ 20 ವರ್ಷಗಳ ಅವಧಿಯಲ್ಲಿ ನಾಶವಾಗಿ ಹೋಗಬಹುದು. ಗುಂಪುಗಾರಿಕೆ,ಬಣಗಳ ಮೇಲಾಟ ಆರಂಭವಾಗುತ್ತದೆ.ಒಂದರಿಂದ 10 ಸಂಸ್ಥೆಗಳು ಹುಟ್ಟು ಪಡೆಯುತ್ತವೆ. ದಾದಾ ಲೇಖರಾಜ್ ಜೀ ಅವರ ವಿವೇಕ-ಬುದ್ದಿವಂತಿಕೆಯಿಂದಾಗಿ ಅವರು ಮೌಲ್ಯ್ಗಗಳು ಮತ್ತು ದೂರದೃಷ್ಟಿಯೊಂದಿಗೆ ಬ್ರಹ್ಮಕುಮಾರಿ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದರು ಮತ್ತು ಬ್ರಹ್ಮಕುಮಾರಿ ಆಂದೋಲನ ಈಗಲೂ ಅದೇ ಅರ್ಪಣಾ ಮನೋಭಾವ, ಕಲ್ಪನೆ ಮತ್ತು ಬದ್ಧತೆಯೊಂದಿಗೆ ವಿಶ್ವದ ಇತರೆಡೆಗಳಿಗೆ ಜ್ಞಾನ ಪ್ರಸಾರ ಮಾಡುತ್ತಿದೆ ಮಾತ್ರವಲ್ಲ ಲಕ್ಷಾಂತರ ಕಾರ್ಯಕರ್ತರ ಸರಪಳಿಯನ್ನೂ ಅದು ನಿರ್ಮಿಸಿದೆ.ಬ್ರಹ್ಮಕುಮಾರರು ಮತ್ತು ಬ್ರಹ್ಮಕುಮಾರಿಯರು ಭಾರತೀಯ ಅಧ್ಯಾತ್ಮದ ಸಂದೇಶವನ್ನು ಇಡೀ ಜಗತ್ತಿಗೆ ಪ್ರಸಾರಿಸುತ್ತಿದ್ದಾರೆ. ನಿಮಗೆಲ್ಲರಿಗೂ ಗೌರವಗಳು ಸಲ್ಲಬೇಕು. ನಾನು ನಿಮ್ಮೆಲ್ಲರಿಗೂ ವಂದಿಸುತ್ತೇನೆ.

 

ನಾನು ಹಲವು ಬಾರಿ ನಿಮ್ಮೊಂದಿಗಿರುವ ಅದೃಷ್ಟ ಪಡೆದಿದ್ದೇನೆ.ಮತ್ತು ನಿಮ್ಮ ಶಕ್ತಿ, ಸಾಮರ್ಥ್ಯಗಳನ್ನು ನೋಡಿದ್ದೇನೆ. ನಾನು ನಿಮ್ಮ ತತ್ವಜ್ಞಾನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದ್ದೇನೆ.

ಪ್ರಸ್ತುತ ನಾನು ಹೆಚ್ಚಾಗಿ ಪೂರ್ವ ನಿಗದಿತ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವುದರಿಂದ ನನಗೆ ಸಮಯ ಸಿಗುವುದಿಲ್ಲ.ನಾನು ಭೌತಿಕವಾಗಿ ನಿಮ್ಮ ಎದುರು ಇಲ್ಲದಿದ್ದರೂ, ನನಗೆ ವೀಡಿಯೋ ಕಾನ್ಫ಼ರೆನ್ಸ್ ಮೂಲಕ ಸಂಪರ್ಕಿಸುವ ಅವಕಾಶ ದೊರೆತಿದೆ. ಬ್ರಹ್ಮಕುಮಾರಿಯರ ಕಾರ್ಯ ಯೋಜನೆ ಸದಾಕಾಲವೂ ವೈಶಿಷ್ಟ್ಯಮಯ. ಇಂದು ನೀವೆಲ್ಲ ನನಗೆ ದೀಪಗಳ ಮೂಲಕ ಶುಭ ಹಾರೈಸಿದಿರಿ, ಸ್ವಾಗತಿಸಿದಿರಿ, ಮತ್ತು ಇಡೀ ಆವರಣವನ್ನು ನೀವು ದೀಪಗಳ ಮೂಲಕ ಬೆಳಗುವ ಮೂಲಕ ದಾದಾ ಲೇಖರಾಜ್ ಜೀ ಮತ್ತು ದಾದೀ ಜೀ ಅವರು ತೋರಿದ ದಾರಿಯಲ್ಲಿ  ವಾಸ್ತವದಲ್ಲಿ ಜ್ಞಾನದ, ವಿವೇಕದ ಬೆಳಕನ್ನು ವಿಶ್ವಕ್ಕೆ ಪಸರಿಸುವ ಯತ್ನ ಮಾಡಿರುವುದನ್ನು ನಾನು ಟಿ.ವಿ.ಯಲ್ಲಿ ನೋಡುವಂತಾಯಿತು.

 

ತನ್ನ ವಿಚಾರಧಾರೆಯನ್ನು ಎಂದೂ ಇತರರ ಮೇಲೆ ಬಲವಂತವಾಗಿ ಹೇರದ ದೇಶವನ್ನು ನಾವು ಪ್ರತಿನಿಧಿಸುತ್ತಿದ್ದೇವೆ. ಜ್ಞಾನಕ್ಕೆ ಗಡಿಗಳಿಲ್ಲ, ಮಿತಿ ಇಲ್ಲ ಮತ್ತು ಸಮಯದ ಚೌಕಟ್ಟು ಇಲ್ಲ ಎಂಬುದು ನಮ್ಮ ದೃಷ್ಟಿ. ಜ್ಞಾನಕ್ಕೆ ಪಾಸ್ ಪೋರ್ಟ್ ಆಗಲೀ ವೀಸಾ ಆಗಲೀ ಬೇಕಿಲ್ಲ. ತಲತಲಾಂತರದಿಂದ ಜ್ಞಾನ ಮಾನವನ ಆಸ್ತಿಯಾಗಿದೆ, ಅದು ಸದಾ ಕಾಲವೂ ಹೊಸತು. ನಾವು ಆ ಜ್ಞಾನದ ಪಥವನ್ನು ಅನುಸರಿಸುವ ಮೂಲಕ ಜೀವನ ದರ್ಶನ ಸಾಧಿಸಬಹುದು.

 

ಬ್ರಹ್ಮಕುಮಾರಿಯರ ಈ ಸತತ ಪ್ರಯತ್ನ ಭಾರತದ ಒಂದು ವೈಶಿಷ್ಟ್ಯ. ದೇವರು ಒಂದೇ ಎಂದು ಅಧಿಕಾರಯುತವಾಗಿ ವಿಶ್ವಕ್ಕೆ ಸಾರಿದ ದೇಶ ಭಾರತ. ದೇವರಿಗೆ ವಿವಿಧ ಹೆಸರು. ಹಿಂದುಗಳಿಗೆ ಪ್ರತ್ಯೇಕ ದೇವರು, ಮುಸಲ್ಮಾನರಿಗೆ , ಕ್ರಿಸ್ಚಿಯನ್ನರಿಗೆ, ಪಾರ್ಸಿಯನ್ನರಿಗೆ ಬೇರೆ ಬೇರೆ ದೇವರು- ಎಂಬುದು ನಮ್ಮ ವಿಚಾರಧಾರೆಯಲ್ಲ. ವೇದಗಳ ಕಾಲದಲ್ಲಿಯೂ ನಮ್ಮ ಜ್ಞಾನಿಗಳು ಮತ್ತು ಸಂತರು ಇದನ್ನೇ ಸಾರಿದರು.

 

ಸತ್ಯ ಒಂದೇ-ಸಂತರು ಇದನ್ನು ಬೇರೆ ಬೇರೆ ರೀತಿಯಲ್ಲಿ ಹೇಳಿದರು.

 

ಬೇರೆ ಬೇರೆ ಜನರು ಇದನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸಿದರು. ಆದರೆ ಸತ್ಯದ  ಕುರಿತು ನಮ್ಮ ಧೋರಣೆ, ನಿಲುವು ಒಂದೇ ಭಾವನೆಯನ್ನು ಅವಲಂಬಿಸಿದುದಾಗಿದೆ.

 

ನೀವಿಂದು ಶಾಂತಿ ವನದಲ್ಲಿ ಸೌರ ಯೋಜನೆಯನ್ನು ಆರಂಭಿಸುತ್ತೀರೆಂದು ಕೇಳಲ್ಪಟ್ಟೆ. ನಿಮ್ಮ ಶಾಂತಿ ವನ್ ಆಸ್ಪತ್ರೆಗೆ ನಾನೊಮ್ಮೆ ಭೇಟಿ ಕೊಟ್ಟಿದ್ದೆ. ಅಲ್ಲಿ ಬಡವರಿಗೆ ನೀವು ನೀಡುತ್ತಿರುವ ಸೇವೆಯನ್ನು ನೋಡಿದ್ದೆ. ಸೌರ ವಿದ್ಯುತ್ ಕ್ಷೇತ್ರದಲ್ಲಿ  ನಿಮ್ಮ ಪರಿಣಾಮಕಾರಿ ಪ್ರಯತ್ನ, ಅಬು ರಸ್ತೆಯ ನಿಮ್ಮ ಆವರಣವನ್ನು ಸೌರ ವಿದ್ಯುತ್ತಿನಿಂದ ಬೆಳಗುವ ಬಗ್ಗೆ ಹಲವು ವರ್ಷಗಳ ಹಿಂದೆ ನೀವು ಕೈಗೊಂಡ ನಿರ್ಧಾರ  ಇಂದು ನನ್ನ ನೆನಪಿಗೆ ಬಂದಿತು. ಆಗ ಜಾಗತಿಕ ತಾಪಮಾನ ಏರಿಕೆ ಈಗಿರುವಂತೆ ಬಿಸಿ ಚರ್ಚೆಯ ವಿಷಯವಾಗಿರಲಿಲ್ಲ. ಇದು ನಿಮ್ಮ ದೂರದೃಷ್ಟಿಗೊಂದು ರೋಮಾಂಚಕ ಉದಾಹರಣೆ. ಆದ್ದರಿಂದ ನಿಮ್ಮ ಮಾರ್ಗದರ್ಶನದಲ್ಲಿ ದೇಶದಲ್ಲೊಂದು ಮತ್ತು ಮಾನವನ ದೈನಂದಿನ ಬದುಕಿನಲ್ಲಿ ಇಂಧನ ಕ್ರಾಂತಿ ಈಗಷ್ಟೇ ಆರಂಭವಾಗಿದೆ ಎಂಬುದು ನನ್ನ ನಂಬಿಕೆ. ಮನುಷ್ಯ ಪರಾಕ್ರಮಕ್ಕಿಂತ ಸೌರ ಶಕ್ತಿಯ ಮಹತ್ವ ಕಡಿಮೆಯದೇನಲ್ಲ. ಮತ್ತು ಪರಾಕ್ರಮ , ಸಾಮರ್ಥ್ಯ, ಮತ್ತು ಪರಿಹಾರಗಳು ಜತೆಯಾದಾಗ , ಆ ವ್ಯಕ್ತಿ ಹೊಸ ಎತ್ತರಕ್ಕೆ ತಲುಪುತ್ತಾನೆ.ನೀವು ಇಂದು 3 ಮೆಗಾ ವಾಟ್ ಸೌರ ವಿದ್ಯುತ್ ಉತ್ಪಾದನಾ ಘಟಕಕ್ಕಾಗಿ  ಕೈಗೊಂಡ ಆರಂಭಿಕ ಕ್ರಮ  ಹಲವು ರೀತಿಯಲ್ಲಿ ಪ್ರಭಾವ ಬೀರಬಹುದು.

 

ವರ್ಷಗಳ ಹಿಂದೆ ಗುಜರಾತ್ ಸೌರ ವಿದ್ಯುತ್ತಿಗೆ ಸಂಬಂಧಿಸಿ ದೊಡ್ಡ ಮಟ್ಟದಲ್ಲಿ ಆರಂಭಿಕ ಕ್ರಮಗಳನ್ನು ಕೈಗೊಂಡಿತು. ಇದು ಇತರ ರಾಜ್ಯಗಳಿಗೂ ಸೌರ ವಿದ್ಯುತ್ತಿನ ಬಗ್ಗೆ ಚಿಂತಿಸಲು ಪ್ರಚೋದನೆ ನೀಡಿತು. ಗುಜರಾತ್ ಪ್ರಯೋಗ ಯಶಸ್ವಿಯಾಯಿತು.ಇಂದು ಶಾಂತಿ ವನ್ ಕೂಡಾ ಅದರ ಜತೆಗೂಡಿದೆ.ಇದು ಪ್ರಕೃತಿಯನ್ನು ರಕ್ಷಿಸುವ ಕೆಲಸ.ಈ ಸೌರ ಘಟಕದಿಂದ ದಿನವೊಂದಕ್ಕೆ 38 ಸಾವಿರ ಜನರಿಗೆ ಆಹಾರ ತಯಾರಿಸಲು ಸಾಧ್ಯ. ಪ್ರಕೃತಿಯನ್ನು , ನಿಸರ್ಗವನ್ನು ರಕ್ಷಿಸಲು ಎಂಥ ದೊಡ್ಡ ಕೆಲಸ ನೀವು ಮಾಡುತ್ತಿದ್ದೀರಿ.!. ಪ್ರಚಾರಾಂದೋಲನದ ಮಾದರಿಯಲ್ಲಿ ನೀವು ಸೌರ ಲಾಟೀನುಗಳು, ಗೃಹ ದೀಪಗಳ ವ್ಯವಸ್ಥೆ, ಸೌರ ಅಡುಗೆ ಬಾಕ್ಸ್ ಗಳು , ಇತ್ಯಾದಿಗಳನ್ನು ಮನೆಗಳಿಗೆ ತಲುಪಿಸುತ್ತಿದ್ದೀರಿ.ಇದು ಸಮಾಜದಲ್ಲಿ ಭಾರೀ ಬದಲಾವಣೆ ತರುವ ಪ್ರಯತ್ನ. ಆಧ್ಯಾತ್ಮ ಬೋಧಿಸುವುದರ ಜತೆಗೆ ನೀವು ಬಡವರಲ್ಲಿ ಬಡವರ ಬದುಕಿನಲ್ಲಿ ಬದಲಾವಣೆ ತರಲು ನಿರಂತರವಾಗಿ ಕೆಲಸ ಮಾಡುತ್ತ ನಿಸರ್ಗದ ಜತೆ ಮಿಳಿತವಾಗಿದ್ದೀರಿ.

 

ಜಾಗತಿಕ ತಾಪಮಾನ ಏರಿಕೆ ವಿಷಯದಲ್ಲಿ ಭಾರತ ಈಗ ಉಳಿದ ದೇಶಗಳ ಜತೆ ಹೇಗೆ ಕಾರ್ಯ ನಿರ್ವಹಿಸಬಹುದು?. 2030ರೊಳಗೆ ಅಂದರೆ ಇನ್ನು 13 ವರ್ಷದಲ್ಲಿ ನಮ್ಮ ಇಂಧನದ ಆವಶ್ಯಕತೆಯ 40 ಶೇಖಡಾದಷ್ಟನ್ನು ಪುನರ್ಬಳಕೆ ಇಂಧನ ಮೂಲದಿಂದ ಪಡೆಯುವ ಗುರಿ ಹಾಕಲಾಗಿದೆ.

 

2022ರಲ್ಲಿ ಭಾರತವು ತನ್ನ 75 ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸಲಿದೆ. ಆ ಹೊತ್ತಿಗಾಗಿ ನಾವು ಸೌರ ವಿದ್ಯುತ್ ಕ್ಷೇತ್ರಕ್ಕೆ ಸಂಬಂಧಿಸಿ ಯಾವ ಆರಂಭಿಕ ಕ್ರಮಗಳನ್ನು ತೆಗೆದುಕೊಳ್ಲಬಹುದು?. ಭಾರತವು 175 ಗಿಗಾ ವಾಟ್ ಪುನರ್ಬಳಕೆ ವಿದ್ಯುತ್ತನ್ನು ಉತ್ಪಾದಿಸಲು ನಿರ್ಧರಿಸಿದೆ.ಇದು ಸರಕಾರದ ಅತಿ ದೊಡ್ಡ ಗುರಿ, ನೀವು 3 ಮೆಗಾ ವಾಟ್ ಘಟಕವನ್ನು ಆರಂಭಿಸಿದ ರೀತಿಯಲ್ಲೇ ,  ಸಮಾಜ ಮತ್ತು ಸಂಸ್ಥೆಗಳು ಇದನ್ನು ಸಾಧಿಸುತ್ತವೆ. ನಾವು ಹೆಚ್ಚು ಹೆಚ್ಚು ಈ ಮಾದರಿಯನ್ನು ಬಳಸಿದಂತೆ ನಾವು ಮಾನವ ಕುಲಕ್ಕೆ , ನಿಸರ್ಗಕ್ಕೆ  ಮತ್ತು ಆ ಸರ್ವಶಕ್ತನಿಗೆ   ಸೇವೆ ಮಾಡಿದಂತಾಗುತ್ತದೆ. ಈ ಕ್ಷೇತ್ರದಲ್ಲಿ ನಿಮ್ಮ ಕೊಡುಗೆಗಾಗಿ ನಿಮ್ಮನ್ನು ನಾನು ಅಭಿನಂದಿಸುತ್ತೇನೆ. ನೀವು ಬಹು ವಿಧದಲ್ಲಿ ನಿಸರ್ಗದ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿದ್ದೀರಿ. ಇದು ದೇಶಕ್ಕೆ ದೊಡ್ಡ ಪ್ರಮಾಣದಲ್ಲಿ  ಲಾಭ ತರುತ್ತದೆ.

ಇದೇ ರೀತಿ, ಹಸಿರು ಕ್ರಾಂತಿ, ಶ್ವೇತ ಕ್ರಾಂತಿ ಮತ್ತು ಇಂಧನ ಕ್ರಾಂತಿಗಳು ನಿಸರ್ಗವನ್ನು ರಕ್ಷಿಸುವಂತಹವು ಮತ್ತು ಮಾನವ ಕುಲವನ್ನು ಹೊಸ ದಿಕ್ಕಿನತ್ತ ಸಾಗಲು ಮಾರ್ಗದರ್ಶನ ಮಾಡುವಂತಹವು. ಈ ಕ್ಷೇತ್ರಗಳಲ್ಲು ನಿಮ್ಮ ಪಾಲುದಾರಿಕೆಗಾಗಿ ನಿಮ್ಮನ್ನು ಅಭಿನಂದಿಸುತ್ತೇನೆ.ಇಂಧನ ಉಳಿತಾಯ ಕ್ಷೇತ್ರದಲ್ಲಿ ಭಾರತ ಸರಕಾರ ಮತ್ತೊಂದು ಕ್ರಮವನ್ನು ತೆಗೆದುಕೊಂಡಿದೆ, ಅದೆಂದರೆ ಎಲ್.ಇ.ಡಿ. ಬಲ್ಬುಗಳ ವಿತರಣೆ. ಇಂದು 22 ಕೋಟಿಗೂ ಅಧಿಕ ಎಲ್.ಇ.ಡಿ. ಬಲ್ಬುಗಳು  ಮುನ್ಸಿಪಾಲಿಟಿಗಳು,ಪಾಲಿಕೆಗಳು, ಮತ್ತು ಜನಸಾಮಾನ್ಯರ ಮನೆಗಳಲ್ಲಿ ಬಳಕೆಯಲ್ಲಿವೆ ಹಾಗು ಸುಮಾರು 11 ಸಾವಿರ ಕೋಟಿ ರೂಪಾಯಿಗಳ ಉಳಿತಾಯವಾಗುತ್ತಿದೆ.

 

ಇಂದು ಲಕ್ಷಾಂತರ ಸ್ವಯಂ ಸೇವಕರೊಂದಿಗೆ  8,500 ಬ್ರಹ್ಮಕುಮಾರಿ ಕೇಂದ್ರಗಳನ್ನು ನೀವು ಹೊಂದಿದ್ದೀರಿ. ಸೌರ ಶಕ್ತಿ ಬಳಸುವ ಮೂಲಕ ಸಮಾಜಕ್ಕೆ ಹೊಸ ದಾರಿ ತೋರಿದ್ದೀರಿ. ಅದನ್ನೇ ಎಲ್.ಇ.ಡಿ. ಬಲ್ಬ್ ಗಳಿಗೂ ಮಾಡಬಹುದು. ಎಲ್.ಇ.ಡಿ. ಬಲ್ಬುಗಳ ಬಳಕೆಗೆ ಸಂಬಂಧಿಸಿ ದೇಶದಲ್ಲಿ ಜನಜಾಗೃತಿ ಮೂಡಿಸಲು ನಿಮ್ಮ ಸ್ವಯಂ ಸೇವಕರು ಸಮರ್ಥರಾಗಿದ್ದಾರೆ.ಇದರಿಂದ ವಿದ್ಯುತ್ ಉಳಿತಾಯ ಮಾತ್ರವಲ್ಲ ಬಡವರಿಗೆ ಹಣ ಉಳಿತಾಯವೂ ಆಗುತ್ತದೆ.ಮುನ್ಸಿಪಾಲಿಟಿಗಳು, ಪಾಲಿಕೆಗಳು ಕೂಡಾ ಹಣ ಉಳಿತಾಯ ಮಾಡಬಲ್ಲವು ಮತ್ತು ಆ ಮೊತ್ತವನ್ನು ಇತರ ಉದ್ದೇಶಗಳಿಗೆ ಬಳಸಬಹುದು. ಮೊದಲು ಎಲ್.ಇ.ಡಿ. ಬಲ್ಬಿನ ದರ 400-500 ರೂ.ಗಳಷ್ಟಿತ್ತು. ಈಗ ಅದು 50-60 ರೂ.ಗಳಿಗೆ ಸಿಗುತ್ತಿದೆ.ಈ ಕೆಲಸವನ್ನು ಬ್ರಹ್ಮಕುಮಾರಿಯರು ತಮ್ಮ ಹಾಲಿ ಕೆಲಸದ ಜತೆ ಸೇರಿಸಿಕೊಳ್ಳಬಹುದು.

ಇಂದು ನಾವು ಆಮದು ಮಾಡಲಾಗುವ ಡೀಸಿಲ್ ಮತ್ತು ಪೆಟ್ರೋಲ್ ಅವಲಂಬಿಸಿದ್ದೇವೆ. ನಾವು ಗಾಳಿ ಮೂಲಕ ವಿದ್ಯುತ್ ಉತ್ಪಾದಿಸುವಿಕೆಯನ್ನು ಪ್ರಾಯೋಜಿಸಿದರೆ ಅಥವಾ ಉತ್ತೇಜಿಸಿದರೆ , ಜಲವಿದ್ಯುತ್, ಸೌರ ವಿದ್ಯುತ್ ಉತ್ಪಾದನೆಗೆ ಒತ್ತು ಕೊಟ್ಟರೆ ಆಗ ಪೆಟ್ರೋಲಿಯಂ ಖರೀದಿಗಾಗಿ ಪಾವತಿಸುವ ಮಿಲಿಯಾಂತರ ಮತ್ತು ಟ್ರಿಲಿಯಾಂತರ ರೂಪಾಯಿಗಳು ಉಳಿತಾಯವಾಗುತ್ತವೆ ಮತ್ತು ಅವುಗಳನ್ನು ಬಡವರಿಗಾಗಿ ಬಳಸಬಹುದು.ಈ ನಿಟ್ಟಿನಲ್ಲಿ ನಿಮ್ಮ ಕೊಡುಗೆ ಸರಿಯಾದ ಹಾದಿಯಲ್ಲಿದೆ ಮತ್ತು ನಿಮಗೆ ಅಭಿನಂದನೆ ಸಲ್ಲಬೇಕಾಗಿದೆ.

 

ನಮ್ಮ, ಶಾಸ್ತ್ರಗಳು ಪ್ರಕೃತಿಯನ್ನು  ಶೋಷಿಸುವುದನ್ನು ನಿಷೇಧಿಸಿವೆ ಮತ್ತು ಅದನ್ನು ಪಾಪವೆಂದು ಪರಿಗಣಿಸಿವೆ.ನಾವು ಪ್ರಕೃತಿಯನ್ನು ನ್ಯಾಯೋಚಿತವಾಗಿ ಬಳಸಬೇಕು ಮತ್ತು ಈ ನಿಟ್ಟಿನಲ್ಲಿ ನಿಮ್ಮ ಆರಂಭಿಕ ಕ್ರ,ಮಗಳು ಫಲಪ್ರದವಾಗಬಲ್ಲವು.

 

ಬ್ರಹ್ಮಕುಮಾರಿಯರ ಸಂಸ್ಥೆಯ ಮಂತ್ರ –ಒಬ್ಬನೇ ದೇವರು, ಒಂದೇ ವಿಶ್ವ ಕುಟುಂಬ ಎಂಬುದು ಮೂಲತಹ ನಮ್ಮ ದೇಶದ ತತ್ವಜ್ಞಾನವೇ ಆಗಿದೆ. ’ವಸುದೈವ ಕುಟುಂಬಕಂ’ ಎಂಬ ವಿಶಾಲ ಮನೋಭಾವ ಈ ಭೂಮಿಯಲ್ಲಿ ಮಾತ್ರ ರೂಪುಗೊಳ್ಳಬಲ್ಲುದು. ಕಾಲ ಕಾಲಕ್ಕೆ ಇದು ಬೇರೆ ಬೇರೆ ವಿವರಣೆಗಳನ್ನು ಮತ್ತು ಪದ ವ್ಯಾಖ್ಯಾನಕ್ಕೆ ಒಳಗಾಗಿರಬಹುದು, ಆದರೆ ಭಾರತ ಸತತವಾಗಿ ವಿಶ್ವದ ಎಲ್ಲರಿಗೂ ಸಮೃದ್ಧಿ, ನ್ಯಾಯ, ಹೆಮ್ಮೆ, ಅವಕಾಶ ಗಳನ್ನು ಹಾರೈಸಿದೆ., ಆ ನಿಟ್ಟಿನಲ್ಲಿ ಸತತ ಪ್ರಯತ್ನಗಳನ್ನು ಮಾಡಿದೆ. ಪ್ರಕೃತಿಯನ್ನು ರಕ್ಷಿಸುವ ಉದ್ದೇಶದ ಅಂತಾರಾಷ್ಟ್ರೀಯ ಸೌರ ಮಿತ್ರಕೂಟ ದಲ್ಲಿ ಭಾರತ ಇಂತಹ ಆರಂಭಿಕ ಕ್ರಮಗಳನ್ನು ಮಂಡಿಸಿದೆ,ಮತ್ತು ಇತರ ರಾಷ್ಟ್ರಗಳು ಈ ಆಂದೋಲನದಲ್ಲಿ ನಮ್ಮ ಜತೆ ಕೈಜೋಡಿಸಿವೆ.

 

ಇಂದು 80ನೇ ವರ್ಷಾಚರಣೆಯ ಈ ನಿಮ್ಮ ಕಾರ್ಯಕ್ರಮದಲ್ಲಿ ನೀವೆಲ್ಲರೂ 2022ರಲ್ಲಿ ಬರುವ 75ನೇ ಸ್ವಾತಂತ್ರ್ಯೋತ್ಸವದ ಬಗ್ಗೆ ಯೋಚಿಸಬೇಕು ಎಂದು ಮನವಿ ಮಾಡುತ್ತೇನೆ. ನಮ್ಮ ಸ್ವಾತಂತ್ರ್ಯಕ್ಕಾಗಿ ಜೀವ ತೆತ್ತ  ಹೋರಾಟಗಾರರು ಕಂಡ ಕನಸುಗಳನ್ನು ನಾವು ಸಾಕಾರಗೊಳಿಸಬೇಡವೇ? .ಅವುಗಳನ್ನು ಈಡೇರಿಸಲು ಕೆಲಸ ಮಾಡುವುದು  ನಮ್ಮ ಸಾಮೂಹಿಕ ಜವಾಬ್ದಾರಿಯಲ್ಲವೇ? ನಾವು ಸರಿಯಾದ ದಿಕ್ಕಿನಲ್ಲಿ ಒಗ್ಗೂಡಿ ಕೆಲಸ ಮಾಡುವ ನಿರ್ಧಾರ ಮಾಡಬೇಕು. ಮತ್ತು  ದೊಡ್ದ ಪ್ರಮಾಣದ ಜನಸಂಖ್ಯೆಯ ಬದುಕಿನಲ್ಲಿ ತರುವ   ಯಾವುದೇ ಬದಲಾವಣೆವಿಶ್ವ ಕಲ್ಯಾಣಕ್ಕೆ ವೇದಿಕೆಯಾಗುತ್ತದೆ.ನೀವಿಲ್ಲಿ ಬಹು  ದೊಡ್ಡ  ಸಂಖ್ಯೆಯಲ್ಲಿ  ಸೇರಿದ್ದೀರಿ. ಈಗ ನೀವು ನಿಮಗೆ ಸೂಕ್ತವೆನಿಸುವ ಪ್ರಮಾಣ ಮಾಡಿ, 2,3,4, ಅಥವಾ 7 ಘಟಕಗಳು ಮತ್ತು 2022 ರೊಳಗೆ ದೇಶದೊಳಗೆ ಮತ್ತು ವಿದೇಶದಲ್ಲಿ ಹರಡಿರುವ ನಿಮ್ಮ ಶಾಖೆಗಳ ಮೂಲಕ ಕೆಲಸ ಪುರ್ಣಗೊಳಿಸಿ. ಮತ್ತು ನಿಮ್ಮ ಭಾಗವಹಿಸುವಿಕೆಯ ಗುರುತ್ವವವನ್ನು ನೋಡಿ. ಸೌರ ವಿದ್ಯುತ್ ವಲಯದಲ್ಲಿ ಭಾರತದಲ್ಲಿ ಈಗ ಏನು ನಡೆಯುತ್ತಿದೆ,….ನಿಮ್ಮ ಪ್ರಯತ್ನಗಳ ಮೂಲಕ ಅದನ್ನು ನೀವು ಬೆಂಬಲಿಸುತ್ತೀರಿ ಎಂಬ ಬಗ್ಗೆ ನನಗೆ ಖಾತ್ರಿ ಇದೆ.

 

ಇತ್ತೀಚೆಗೆ ಅಪನಗದೀಕರಣದ ಬಳಿಕ ನಾವು ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ದ ನಿರ್ಣಾಯಕ ಹೋರಾಟ ನಡೆಸಿದ್ದನ್ನು  ನೀವು ಸಾಕ್ಷೀಕರಿಸಿದ್ದೀರಿ. ದೇಶ ಇನ್ನೊಮ್ಮೆ ಕಪ್ಪು ಹಣದ ಹಿಂದೆ ಹೋಗುವುದನ್ನು ತಡೆಯಲು , ಡಿಜಿಟಲ್ ತಂತಜ್ಞಾನ ಹೆಚ್ಚು ಉಪಯುಕ್ತ. ನಾವು ಅತೀ ಕಡಿಮೆ ನಗದು ಬಳಕೆಯ ಮತ್ತು ಹೆಚ್ಚು ಡಿಜಿಟಲ್ ಪಾವತಿಯ ಪಾರದರ್ಶಕ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬಹುದು.ಬ್ರಹ್ಮಕುಮಾರರು ಮತ್ತು ಬ್ರಹ್ಮಕುಮಾರಿಯರು ತಾವು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವಲ್ಲೆಲ್ಲ ತಮ್ಮ ಮೊಬೈಲ್ ಗಳಲ್ಲಿ ಭೀಮ್ ತಂತ್ರಾಂಶವನ್ನು  ಅಳವಡಿಸಿಕೊಂಡು ನಗದು ವ್ಯವಹಾರಕ್ಕೆ ಬದಲಾಗಿ ಡಿಜಿಟಲ್ ಪಾವತಿಯನ್ನು ಮಾಡಬಲ್ಲರೇ? . ನಾನಿವತ್ತು ನಿಮ್ಮ ಜತೆ ಡಿಜಿಟಲ್ ತಂತ್ರಜ್ಞಾನದ ಮೂಲಕ ಮಾತನಾಡುತ್ತಿದ್ದೇನೆ. ನಿಮ್ಮ ವ್ಯಾಪಕವಾದ ಸುಸಂಸ್ಕೃತ ಮಾನವ ಸಂಪನ್ಮೂಲ ಈ ಕೆಲಸದಲ್ಲಿ ತೊಡಗಿಕೊಂಡು ದೇಶದಲ್ಲಿ ಬದಲಾವಣೆಯ ಮುನ್ಸೂಚನೆ ಕೊಡುವ ಕಾರ್ಯಕ್ಕೆ ಕೈಜೋಡಿಸಿ ಎಂದು ನಿಮ್ಮನ್ನು ಕೇಳಬಹುದೇ, ಅಂತಹ ಒಂದು ಸಂಬಂಧ ನಾನು ನಿಮ್ಮ ಜತೆ ಹೊಂದಿದ್ದೇನೆ ಎಂದು ನಾನು ಭಾವಿಸುತ್ತೇನೆ. 

 

ಇದಕ್ಕೆ  ಹೊರತಾಗಿ ಬ್ರಹ್ಮಕುಮಾರರು ಮತ್ತು ಬ್ರಹ್ಮಕುಮಾರಿಯರು ಹೆಚ್ಚು ಕ್ರಿಯಾಶೀಲರು. ನಮ್ಮ ದೇಶದ ಬಹುಸಂಖ್ಯಾತ ಮಕ್ಕಳು ರೋಗ ನಿರೋಧಕ ವ್ಯವಸ್ಥೆಯಿಂದ ಹೊರಗಿದ್ದಾರೆ.ಇದರಿಂದಾಗಿ ಅವರು ರೋಗಗಳಿಗೆ ತುತ್ತಾಗುತ್ತಿದ್ದಾರೆ. ತಾಯಿ ಮತ್ತು ಮಗುವಿನ ಮರಣದ ಸರಾಸರಿ ಮತ್ತು ಅಪೌಷ್ಟಿಕತೆ ಕಲವಳಕಾರಿಯಾಗಿದೆ. ಸರಕಾರ ರೋಗನಿರೋಧಕ ಶಕ್ತಿಯ ಲಸಿಕಾ ಕಾರ್ಯಕ್ರಮವನ್ನು ದೊಡ್ಡ ಪ್ರಮಾಣದಲ್ಲಿ ಪ್ರತೀ ಮನೆಗಳಿಗೆ ಇಂದ್ರಧನುಷ್ ಯೋಜನೆಯಡಿ ತಲುಪಿಸುವ ಬದ್ಧತೆಯೊಂದಿಗೆ ಜಾರಿ ಮಾಡುತ್ತಿದೆ.ಬ್ರಹ್ಮಕುಮಾರರು ಮತ್ತು ಬ್ರಹ್ಮಕುಮಾರಿಯರು ಭವಿಷ್ಯದ ಲಸಿಕಾ ಕಾರ್ಯಕ್ರಮಗಳಲ್ಲಿ ಸ್ವಯಂಸೇವಕರಾಗಿ ಪಾಲ್ಗೊಂಡು ನವಜಾತ ಶಿಶುಗಳ ಜೀವರಕ್ಷಕರಾಗಬೇಕು ಮತ್ತು ಇದೊಂದು ದೊಡ್ಡ ಸೇವಾಕಾರ್ಯ. ನೀವು ಈಗಾಗಲೇ ಮಾನವ ಕುಲಕ್ಕಾಗಿ ದುಡಿಯುತ್ತಿದ್ದೀರಿ,ಹಾಗಿರುವಾಗ ಹೆಚ್ಚುವರಿಯಾಗಿ ಈ ಕಾರ್ಯದಲ್ಲಿಯೂ ಭಾಗವಹಿಸುವುದು ಗಮನಾರ್ಹ ಸಾಧನೆಯಾಗಲಿದೆ.

 

ಇನ್ನೊಂದು ಕೆಲಸಕ್ಕಾಗಿ ನಾನು ನಿಮ್ಮಲ್ಲಿ ಮನವಿ ಮಾಡುತ್ತೇನೆ. ಬ್ರಹ್ಮಕುಮಾರಿ ವಿಶ್ವವಿದ್ಯಾಲಯವು ಪೌಷ್ಟಿಕತೆ ಕುರಿತು ಆನ್ ಲೈನ್ ಸರ್ಟಿಫ಼ಿಕೇಟ್ ಕೋರ್ಸ್ ಆರಂಭಿಸುವ ಸ್ಥಿತಿಯಲ್ಲಿ ಇದೆಯೇ?. ಹಾಗಿದ್ದರೆ ಈ ದೇಶದ ಜನರಿಗೆಪೌಷ್ಟಿಕತೆ ವಿಷಯದ ಕುರಿತು ಅಧ್ಯಯನ ನಡೆಸಲು ಪ್ರೇರೇಪಣೆ ನೀಡಿ ಆನ್ ಲೈನ್ ಮೂಲಕ ಪರಿಕ್ಷೆಗೆ ಹಾಜರಾಗುವಂತೆ ಮಾಡಬಹುದು. ಈ ವಿಷಯದಲ್ಲಿ ಅವರನ್ನು ಸುಶಿಕ್ಷಿತರನ್ನಾಗಿಸಬಹುದು.ಈಗಲೂ ಈ ಕ್ಷೇತ್ರದ  ಬಗ್ಗೆ ಸಾಕಷ್ಟು ತಪ್ಪು ಅಭಿಪ್ರಾಯಗಳಿವೆ. ನಿರ್ದಿಷ್ಟ ವಯಸ್ಸಿನಲ್ಲಿ ಯಾವ ರೀತಿಯ ಆಹಾರ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಹಲವರಿಗೆ ಗೊತ್ತಿಲ್ಲ. ಬಹುಪಾಲು ಜನರು ದಿನಕ್ಕೆರಡು ಬಾರಿ ಊಟ ಮಾಡಿದರೆ ಸಾಕು ಎಂದು ಭಾವಿಸುತ್ತಾರೆ. 

 

ಹಣಕಾಸು ದೃಷ್ಟಿಯಿಂದ ಒಳ್ಳೆಯ ಸ್ಥಿತಿಯಲ್ಲಿರುವವರು ದಿನಕ್ಕೆರಡು ಬಾರಿ ಗುಣಮಟ್ಟದ ಆಹಾರ ಸೇವಿಸಬಲ್ಲವರೂ ಕೂಡಾ ಮೂಲ ವಸ್ತುಸ್ಥಿತಿಯ ಬಗ್ಗೆ ತಿಳಿದಿರುವುದಿಲ್ಲ.ಏನನ್ನು ತಿನ್ನಬೇಕು, ಯಾವಾಗ ಮತ್ತು ಹೇಗೆ ತಿನ್ನಬೇಕು ಎಂಬ ಅರಿವಿರುವುದಿಲ್ಲ. ಹೀಗಿರುವಾಗ ಆನ್ ಲೈನ್ ಸರ್ಟಿಫ಼ಿಕೇಟ್ ಕೋರ್ಸ್ ಮತ್ತು ಜತೆಗೆ ಆನ್ ಲೈನ್ ಪರೀಕ್ಷೆಗಳನ್ನು ಪೌಷ್ಟಿಕತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಮತ್ತು ಅಪೌಷ್ಟಿಕತೆಯ ದುಷ್ಪರಿಣಾಮಗಳ ಬಗ್ಗೆ ಬ್ರಹ್ಮಕುಮಾರ ವಿಶ್ವವಿದ್ಯಾಲಯದಿಂದ ಆರಂಭಿಸುವುದು ಸಾಧ್ಯವೇ?. ಮತ್ತು ದೇಶದ ಎಲ್ಲಾ ವಿಶ್ವವಿದ್ಯಾಲಯಗಳನ್ನು ಇದರ ವ್ಯಾಪ್ತಿಯೊಳಗೆ ತರಬಹುದೇ? ನಿಮ್ಮ ಸಂಸ್ಥೆಯ ಬಹುಪಾಲು ಸದಸ್ಯರು ಮಹಿಳೆಯರು. ಮಹಿಳೆಯರಿಗೂ ಕ್ರಿಯಾಶೀಲ ಪಾತ್ರವಿದೆ. ಪೌಷ್ಟಿಕಾಂಶಗಳ ಸಮಸ್ಯೆಯನ್ನು ಪರಿಹರಿಸುವಲ್ಲಿ ಮತ್ತು ನಮ್ಮ ಮಕ್ಕಳನ್ನು ಅಪೌಷ್ಟಿಕತೆಯಿಂದ ಹೊರಗೆ ತರುವ ನಿಟ್ಟಿನಲ್ಲಿ ನೀವು ದೊಡ್ದ ಪ್ರಮಾಣದ ಸೇವೆ ಸಲ್ಲಿಸಬಹುದು. ಈ ನಿಟ್ಟಿನಲ್ಲಿ ನೀವು ಚಿಂತನೆ ನಡೆಸಬೇಕು ಎಂದು ನಾನು ಮನವಿ ಮಾಡುತ್ತೇನೆ. ನಿಮಗೆ ಸಹಾಯ ಹಸ್ತ ಚಾಚುವಂತೆ ನಾನು ಭಾರತ ಸರಕಾರ ಮತ್ತು ರಾಜ್ಯ ಸರಕಾರಗಳಿಗೆ ಕೇಳಿಕೊಳ್ಳುತ್ತೇನೆ ಮತ್ತು ಅಗತ್ಯ ಸಹಕಾರ ಒದಗಿಸುವಂತೆಯೂ ಸೂಚಿಸುತ್ತೇನೆ, ನಾವಿದನ್ನು ಆಂದೋಲನವಾಗಿ ಕೈಗೆತ್ತಿಕೊಳ್ಳಬೇಕು.

 

9, 10, 11, 12 ನೇ ತರಗತಿಗಳಲ್ಲಿ ಕಲಿಯುತ್ತಿರುವ ನಮ್ಮ ಬಾಲಕಿಯರು ಪೌಷ್ಟಿಕತೆ ವಿಷಯದಲ್ಲಿ ಶಿಕ್ಷಣ ಪಡೆದರೆ , ಆಗ ಅವರು ಖಂಡಿತವಾಗಿಯೂ ಗೃಹ ಕೃತ್ಯಗಳಲ್ಲಿ ತೊಡಗಿಸಿಕೊಂಡಾಗ ಅಡುಗೆ ಕೋಣೆಯನ್ನು ನಿಯಂತ್ರಿಸುತ್ತಾರೆ. ಅವರು ವೃತ್ತಿಪರರಾದಾಗಲೂ , ಅಡುಗೆ ವಿಷಯದಲ್ಲಿ ಗಮನ ಇಟ್ಟಿರುತ್ತಾರೆ.  ನೀವು ತರಬಹುದಾದ ಭಾರೀ ಬದಲಾವಣೆಯ ಬಗ್ಗೆ ನೀವು ಕಲ್ಪಿಸಿಕೊಳ್ಳಬಹುದು.ಇದನ್ನು ನಿಮ್ಮ  ಭಾಗವಹಿಸುವಿಕೆಯ ಮೂಲಕ ಮಾಡಬಹುದು, ಮತ್ತು ಆದ್ದರಿಂದ 2022ರೊಳಗೆ ಇಂತಹ ಬದಲಾವಣೆ ಆಗುವಂತೆ ತಾವು ಪ್ರಮಾಣ ಕೈಗೊಳ್ಳಬೇಕು ಎಂದು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ.

ಮಹಿಳಾ ಸಶಕ್ತೀಕರಣಕ್ಕೆ ಸಂಬಂಧಿಸಿ ಭಾರತ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದೆ. 

 

ನಿಮಗೆಲ್ಲ ಗೊತ್ತಿರುವಂತೆ  ಉದ್ಯೋಗಸ್ಥ ಮಹಿಳೆಯರಿಗೆ ಹೆರಿಗೆ ರಜೆಯನ್ನು ಹಾಲಿ ಇರುವ 12 ವಾರಗಳಿಂದ 26 ವಾರಗಳಿಗೆ ಹೆಚ್ಚಿಸಲಾಗಿದೆ. ನವಜಾತ ಶಿಶುವಿಗೆ ಮೊದಲ ತಿಂಗಳುಗಳ ಅವಧಿ ಅದರ ಒಟ್ತು ಬೆಳವಣಿಗೆಗೆ ಸಂಬಂಧಿಸಿ ಮಹತ್ವದ್ದು, ಈ ಹಿನ್ನೆಲೆಯಲ್ಲಿ ತಾಯಿಗೆ ತನ್ನ ಮಗುವಿಗೆ ಅಗತ್ಯದ ಸಮಯದಲ್ಲಿ ಪೂರ್ಣ ಗಮನ ಕೊಡಲು ಇದರಿಂದ ಸಾಧ್ಯವಾಗುತ್ತದೆ. ಈ ಅವಧಿಯಲ್ಲಿ ಮಗುವಿನ ಜತೆ ತಾಯಿಯ ಇರುವಿಕೆ ಬಹು ಮುಖ್ಯ ಪಾತ್ರ ವಹಿಸುತ್ತದೆ. ಬಹುಷ 2 ಅಥವಾ 3 ರಾಷ್ಟ್ರಗಳಲ್ಲಿ ಮಾತ್ರವೇ 26 ವಾರಗಳಿಗಿಂತ ಹೆಚ್ಚು ರಜೆ ಚಾಲ್ತಿಯಲ್ಲಿದೆ. ಅಭಿವೃದ್ಧಿ ಹೊಂದಿದ, ಪ್ರಗತಿ ಹೊಂದಿದ ರಾಷ್ಟ್ರಗಳಲ್ಲಿ ಕೂಡಾ 26 ವಾರಗಳ ಹೆರಿಗೆ ರಜೆ ಕೊಡುತ್ತಿಲ್ಲ. ಭಾರತ ಸರಕಾರ ತಾಯಂದಿರನ್ನು ಸಶಕ್ತೀಕರಣಗೊಳಿಸಲು, ದೇಶಕ್ಕೆ ಹೊಸ ಶಕ್ತಿ ತುಂಬಲು ಮತ್ತು ಉನ್ನತ ಮಟ್ಟದ ಯಶಸ್ಸು ಸಾಧಿಸಲು ಈ ಕ್ರಮವನ್ನು ಜಾರಿಗೆ ತಂದಿತು.

 

ತಾಯಿಯಾಗುವವರ ಬ್ಯಾಂಕ್ ಖಾತೆಗೆ ಮೂರು ಕಂತುಗಳಲ್ಲಿ 6,000 ರೂಪಾಯಿ  ಪಾವತಿಸುವ ಕನ್ಯಾ ಸಮೃದ್ಧಿ ಯೋಜನೆಯಾಗಲೀ  ಅಥವಾ ಪ್ರಧಾನ ಮಂತ್ರಿ ಸುರಕ್ಷಿತ್ ಮಾತೃತ್ವ ಅಭಿಯಾನವಾಗಲೀ,  ನಾವು ಹಲವು ಆರಂಭಿಕ ಕ್ರಮಗಳನ್ನು ಕೈಗೊಂಡಿದ್ದೇವೆ.ಉಜ್ವಲ್ ಯೋಜನೆಯಡಿ ನಾವು ಇತ್ತೀಚೆಗೆ ದೊಡ್ಡ ಆಂದೋಲನ ಆರಂಭಿಸಿದ್ದೇವೆ. ಬಡ ಸಮುದಾಯದ ನಮ್ಮ ತಾಯಂದಿರು ಮತ್ತು ಸಹೋದರಿಯರು ಆಹಾರ ತಯಾರಿಸಲು ಕಟ್ಟಿಗೆ, ಉರುವಲು ಬಳಸುತ್ತಿದ್ದರು,ಮತ್ತು ವೈದ್ಯಕೀಯ ತಜ್ಞರ ಪ್ರಕಾರ ಉರುವಲು ಬಳಸಿ ಆಹಾರ ತಯಾರಿಸುವಾಗ ಉಸಿರಾಟದ ಮೂಲಕ ಒಳಸೇರುವ ಹೊಗೆಯ ಪ್ರಮಾಣ ದಿನಕ್ಕೆ 400 ಸಿಗರೇಟಿಗೆ ಸಮ. ಅವರ ಬಳಿ ಆಡುವ ಮಕ್ಕಳು ಕೂಡಾ ಅದನ್ನೇ ಉಸಿರಾಡುತ್ತಿರುತ್ತಾರೆ.ಇಂತಹ ಪರಿಸ್ಥಿತಿಯಲ್ಲಿ ಆ ತಾಯಂದಿರ , ಸಹೋದರಿಯರ ಆರೋಗ್ಯದ ಸ್ಥಿತಿ ಏನು?. 

 

ಭಾರತ ಸರಕಾರ ಉರುವಲಿನಿಂದ ಆಹಾರ ತಯಾರಿಸುವ ಪರಿಸ್ಥಿತಿಯಿಂದ ಅವರಿಗೆ ಮುಕ್ತಿ ನೀಡುವ ಉದ್ದೇಶದಿಂದ ಬೃಹತ್ ಯೋಜನೆಗೆ ಚಾಲನೆ ನೀಡಿತು. ಇದಕ್ಕಾಗಿ ಅಡುಗೆ ಅನಿಲ ಸಂಪರ್ಕ ಒದಗಿಸುವ ದೊಡ್ಡ ಆಂದೋಲನ ಆರಂಭಿಸಿತು.ಇದೀಗ ಪ್ರಗತಿಯಲ್ಲಿದೆ ಮತ್ತು 2 ಕೋಟಿ ಅನಿಲ ಜಾಡಿಗಳು ಬಡ ಕುಟುಂಬಗಳನ್ನು ತಲುಪಿವೆ.ಅವರು ಉರುವಲು ಬಳಸುವ ಒಲೆಗಳನ್ನು ತೊರೆದು ಅನಿಲದ ಒಲೆಗಳನ್ನು ಬಳಸುತ್ತಿದ್ದಾರೆ. ಮೂರು ವರ್ಷಗಳಲ್ಲಿ 5 ಕೋಟಿ ಕುಟುಂಬಗಳಿಗೆ ಈ ಸೌಲಭ್ಯ ದೊರೆಯುವಂತೆ ಮಾಡಲು ನಾವು ನಿರ್ಧರಿಸಿದ್ದೇವೆ.

ಈಗ ನಮ್ಮ ತಾಯಂದಿರನ್ನು ಮತ್ತು ಮಹಿಳೆಯರನ್ನು ಸಶಕ್ತೀಕರಣಗೊಳಿಸುವುದು ನಮ್ಮ ಆದ್ಯತೆ.ಇದರಲ್ಲಿ ಬ್ರಹ್ಮಕುಮಾರಿಯರು ದೊಡ್ದ ಪ್ರಮಾಣದಲ್ಲಿ ತೊಡಗಿಕೊಳ್ಳಬಹುದು. ನಿಮ್ಮ ಕೈಯಲ್ಲಿ ಮಾಡಲು ಹಲವು ಕೆಲಸಗಳಿದ್ದರೂ ನೀವು ಇದರಲ್ಲಿ ಹೆಚ್ಚು ವಿಶ್ವಾಸ ಪೂರ್ವಕವಾಗಿ ತೊಡಗಿಕೊಂಡು ಕೆಲಸ ಮಾಡಬೇಕೆಂದು ನಾನು ಮನವಿ ಮಾಡುತೇನೆ. ನಿಮ್ಮ ಕ್ರಿಯಾತ್ಮಕ  ಧೋರಣೆ ಈ ಆಂದೋಲನಕ್ಕೆ ದೊಡ್ಡ ಫಲಿತಾಂಶವನ್ನು, ಯಶಸ್ಸನ್ನು  ತರಬಲ್ಲುದು.

 

ನಿಮ್ಮ ಸಭೆಯಲ್ಲಿ ಸೇರಲು ನನಗೆ ಇನ್ನೊಂದು ಅವಕಾಶ ದೊರೆಯಿತು. ನಿಸರ್ಗ ಸಂರಕ್ಷಣೆ , ತಾಯಿಯ ಅಧಿಕಾರ/ಶಕ್ತಿಯ ರಕ್ಷಣೆ ಮತ್ತು ಮಕ್ಕಳ ಬದುಕಿನಲ್ಲಿ ಬದಲಾವಣೆ ತರುವ ಪ್ರಯತ್ನಗಳು ಬಹು ಮುಖ್ಯವಾದ ವಿಷಯಗಳು. ವಿಶ್ವದ ಬೇರೆ ಬೇರೆ ಭಾಗಗಳಿಂದ ಬಂದಿರುವ ಜನರು   ಶ್ರೇಷ್ಟ   ಉದ್ದೇಶದಿಂದ ಇಲ್ಲಿ ಸೇರಿದ್ದಾರೆ, ಮತ್ತು ಅವರು ಇಲ್ಲಿ ಉದ್ಭವಿಸಿದ ಭಾರತದ ಶ್ರೇಷ್ಟ ಚಿಂತನೆಗಳನ್ನು ತಮ್ಮೊಂದಿಗೆ ಕೊಂಡೊಯ್ಯಲಿದ್ದಾರೆ. ಇಲ್ಲಿಯ ಜ್ಞಾನ ದೂರದ ಭೂಮಿಗೆ ಸಾಗಿ ಮನುಕುಲದ ಒಳಿತಿಗೆ ಬಳಕೆಯಾಗಲಿದೆ. ದಾದಾ ಲೇಖಿ ರಾಜ್ ಜೀ ಅವರ ಮೊದಲ ಹೆಜ್ಜೆಗೆ ನಿಮ್ಮ ಪ್ರಯತ್ನಗಳು ಹೊಸ ಶಕ್ತಿಯನ್ನು ತುಂಬಲಿವೆ.ಮತ್ತು ನಿಮ್ಮ ನೂರು ವರ್ಷದ ಹಿರಿಯ ಜೀವ ದಾದೀ ಜೀ ಅವರ ಶ್ರಮ ಹೊಸ ತಲೆಮಾರಿನ ಜನರನ್ನು ನಿರಂತರವಾಗಿ ಪ್ರಭಾವಿಸಲಿದೆ, ಜನರು ತಮ್ಮ ಕಾರ್ಯಚಟುವಟಿಕೆಗಳಲ್ಲಿ ಹೊಸ ಶಕ್ತಿ ಪಡೆದುಕೊಳ್ಳಲಿದ್ದಾರೆ.

 

ದಾದೀ ಜೀ ಅವರು ನನ್ನ ಸ್ವಚ್ಚ ಭಾರತ್ ಅಭಿಯಾನದಲ್ಲಿ ನಮ್ಮ ಬ್ರಾಂಡ್ ರಾಯಭಾರಿಯಾಗಿದ್ದವರು. ದಾದೀ ಜಿ ಅವರು ಬ್ರಹ್ಮಕುಮಾರಿಯರ ಮೂಲಕ ಸ್ವಚ್ಚ ಭಾರತ ಅಭಿಯಾನವನ್ನು ಬಲಪಡಿಸಿದ್ದಾರೆ. ನಮ್ಮ ಬ್ರಹ್ಮಕುಮಾರರು ಮತ್ತು ಬ್ರಹ್ಮಕುಮಾರಿಯರು ಬಿಳಿ ಉಡುಗೆ ತೊಡುಗೆಗಳಲ್ಲಿ ವ್ಯಾಪಕ ರೀತಿಯಲ್ಲಿ ನಮ್ಮ ಸ್ಚಚ್ಚ ಭಾರತ ಆಂದೋಲನವನ್ನು ಬಲಪಡಿಸುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ಬಗ್ಗೆ ನನಗೆ ಖಾತ್ರಿ ಇದೆ.

 

ಇಂತಹ ಬದ್ದತೆಯೊಂದಿಗೆ ನಾವು 2022ರವರೆಗೆ ಸಾಗಬೇಕಾಗಿದೆ. ಮತ್ತು 2019ರಲ್ಲಿ , ಮಹಾತ್ಮಾ ಗಾಂಧಿಯವರ 150ನೇ ಜನ್ಮವರ್ಷದಂದು  ಪ್ರತೀಯೊಬ್ಬರೂ ಮತ್ತು ಪ್ರತೀ ಮನೆಯೂ ಸ್ವಚ್ಚತೆಯನ್ನು ಒಂದು ಅಭ್ಯಾಸ ಮಾಡಿಕೊಳ್ಳುವ ಅಂತಿಮ ಗುರಿಯನ್ನು ತಲುಪಬೇಕಾಗಿದೆ.

 

ಇಂದು ನಾನು ನಿಮ್ಮ ಮಧ್ಯೆ ನಿಂತು ನಿಮ್ಮಲ್ಲಿ  ಕೆಲ ಬದ್ಧತೆಗಳನ್ನು ಕೇಳಿಕೊಳ್ಳುತ್ತಿದ್ದೇನೆ ಮತ್ತು ಅವುಗಳನ್ನು ನೀವು ಈಡೇರಿಸುತ್ತೀರೆಂಬ ಬಗ್ಗೆ ನನಗೆ ಖಾತ್ರಿ ಇದೆ. ನಿಮ್ಮಲ್ಲಿ ಸಾಮರ್ಥ್ಯ ತುಂಬಿದೆ, ಸಾಂಸ್ಥಿಕ ಬಲವಿದೆ, ಸ್ವಯಂಸ್ಪೂರ್ತಿಯ ಕಾರ್ಯಕರ್ತರಿದ್ದಾರೆ. 

 

ನೀವು ಫಲಿತಾಂಶಗಳನ್ನು ಕೊಡಬಲ್ಲಿರಿ. ನಾನು ಮತ್ತೊಮ್ಮೆ ವಿಶ್ವದ ವಿವಿಧೆಡೆಯಿಂದ ಬಂದಿರುವ ಗಣ್ಯರನ್ನು ತುಂಬು ಹೃದಯದಿಂದ ಸ್ವಾಗತಿಸುತ್ತೇನೆ, ಮತ್ತು ಈ ಜ್ಞಾನದ ಸಂದೇಶವನ್ನು ಪ್ರಸಾರಿಸುವಲ್ಲಿ ತಮ್ಮ ಸಹಕಾರವನ್ನು ನಿರೀಕ್ಷಿಸುತ್ತೇನೆ.

 

ನಿಮ್ಮ ಮಧ್ಯೆ ಇರಲು ಅವಕಾಶ ನನಗೆ ಅವಕಾಶ ಮಾಡಿಕೊಟ್ಟದ್ದಕ್ಕಾಗಿ ನಾನು ನಿಮಗೆಲ್ಲರಿಗೂ  ಅಭಾರಿಯಾಗಿದ್ದೇನೆ. 

ಓಂ ಶಾಂತಿ, ಓಂ ಶಾಂತಿ, ಓಂ ಶಾಂತಿ.