Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಡಿಜಿಟಲ್ ನ್ಯಾಯಾಲಯದ ಕಡೆಗೆ ಸರ್ವೋನ್ನತ ನ್ಯಾಯಾಲಯದ ಪಯಣ  – ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಪಠ್ಯ

ಡಿಜಿಟಲ್ ನ್ಯಾಯಾಲಯದ ಕಡೆಗೆ ಸರ್ವೋನ್ನತ ನ್ಯಾಯಾಲಯದ ಪಯಣ  – ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರ ಭಾಷಣದ ಪಠ್ಯ


ಈ ಸಭಾಂಗಣದಲ್ಲಿ ನೆರೆದಿರುವ  ಸರ್ವೋನ್ನತ ನ್ಯಾಯಾಲಯದ    ಎಲ್ಲ ನ್ಯಾಯಧೀಶರೆ, ಹೊರಗಿನಿಂದ ಬಂದಿರುವ ಅತಿಥಿಗಳೆ, ಸಹೋದರ ಸಹೋದರಿಯರೆ…
 
ಇಂದು ಬುದ್ಧ ಪೂರ್ಣಿಮೆ. ಈ ಬುದ್ಧ ಪೂರ್ಣಿಮೆಯ ಶುಭ ದಿನದಂದು ನಿಮಗೆ ಮತ್ತು ದೇಶದ ನಾಗರೀಕರಿಗೆ ನನ್ನ ಹಾರ್ದಿಕ ಶುಭಾಶಯಗಳು. ದೇಶ ಬದಲಾಗುತ್ತಿದೆ. ಇಂದು ರಜೆ, ಆದಾಗ್ಯೂ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ.
ಇಂದು 10ನೇ ಮೇ, ಅತ್ಯಂತ ಮಹತ್ವದ ದಿನ, 1857ರಲ್ಲಿ ಸ್ವಾತಂತ್ರ್ಯ  ಸಂಗ್ರಾಮದಲ್ಲಿ ದೊಡ್ಡದೊಂದು ಹೋರಾಟ ಪ್ರಾರಂಭಿಸಿದ ದಿನ.
 
ಇಂದು ಹೊಸ ಕಡೆಗೆ ಮತ್ತು ಒಂದು ಹೊಸ ಶಕೆ ಅದೂ ಸಹ ನ್ಯಾಯಾಂಗ ವ್ಯವಸ್ಧೆಯಲ್ಲಿ ಆಗುತ್ತಿದೆ. ನಮ್ಮ  ಮುಖ್ಯ ನ್ಯಾಯಾಧೀಶರಿಗೆ  ಮತ್ತು ಅವರ ಸಂಗಡಿಗರಿಗೆ ನಾನು ಮನಃಪೂರ್ವಕ ಶುಭಾಶಯಗಳನ್ನು ಕೋರುತ್ತೇನೆ ಮತ್ತು ಅಭಿನಂದಿಸುತ್ತೇನೆ. ಹಾಗೆ ನೋಡಿದರೆ ನಾವು ಅಲಹಾಬಾದ್ ಕಾರ್ಯಕ್ರಮದಲ್ಲಿ ಒಮ್ಮೆ ಭೇಟಿಯಾಗಿದ್ದುಂಟು. ಸಾಹೇಬರು ಸವಿಸ್ತಾರವಾಗಿ ಅಂಕಿ ಅಂಶಗಳೊಂದಿಗೆ ನ್ಯಾಯ ಪಾಲಿಕೆಯ ಬೇಕು ಬೇಡಗಳ ಬಗ್ಗೆ ಮಾಹಿತಿಯನ್ನು ನೀಡಿದ್ದರು. ಅಲ್ಲಿ ಎಲ್ಲರ ಮುಂದೆ ದೇಶದಲ್ಲಿ ವಿವಿಧ ನ್ಯಾಯಾಲಯಗಳಲ್ಲಿ ಬಾಕಿ ಉಳಿದಿರುವ ಮೊಕದ್ದಮೆಗಳು, ಚಾಲ್ತಿಯಲ್ಲಿರುವ ಮತ್ತು ಮುಂದೆ ಎದುರಿಸಬೇಕಾದ ಸ್ಥಿತಿಯ ಬಗೆಗೆ ವಿವರಿಸಿದ್ದರು. ಅವರು ದೇಶದ ಎಲ್ಲ ನ್ಯಾಯಧೀಶರೊಂದಿಗೆ “ನಿಮ್ಮ ರಜೆಯ ಸ್ವಲ್ಪ ಸಮಯವನ್ನು ಇದಕ್ಕಾಗಿ ಕಾದಿರಿಸಿ” ಎಂದು ಕರೆ ಕೊಟ್ಟಿದ್ದರು. ಈ ಒಂದು ಮಾತೇ ಸಾಕು, ನಾನು ಸಂತೋಷ ಪಡಲಿಕ್ಕೆ.  ಇದು ಅಂದಿನ ಸಭೆಯಲ್ಲಿ ತುಂಬಾ ಪ್ರೇರಣೆ ನೀಡುವ ಮಾತಾಗಿತ್ತು. ಅನಂತರ  ರಾಜ್ಯದ ಹಲವಾರು ಉಚ್ಛ ನ್ಯಾಯಾಲಯಗಳಲ್ಲಿ ಹಾಗೂ ಸರ್ವೊಚ್ಛ ನ್ಯಾಯಲಯಗಳಲ್ಲಿ ನ್ಯಾಯಾಧೀಶರು ತಮ್ಮ ಅಮೂಲ್ಯವಾದ ಸಮಯವನ್ನು ಇದಕ್ಕಾಗಿಯೇ ಮೀಸಲಿಟ್ಟಿದ್ದಾರೆಂದು ತಿಳಿದು ಸಂತಸಗೊಂಡಿದ್ದೇನೆ ಹಾಗೇಯೇ ದೇಶದ ಬಡ ನಾಗರೀಕರ ಅಹವಾಲುಗಳನ್ನು ಕೇಳಲು ತಮ್ಮ ಸಮಯವನ್ನು ವಿನಿಯೋಗಿಸುತ್ತಿದ್ದಾರೆಂದು ತಿಳಿದು ಸಂತಸಗೊಂಡಿದ್ದೇನೆ. ಇದಕ್ಕಾಗಿ ನಾನು ನಿಮಗೆ ಅತ್ಯಂತ ಋಣಿ.
 
ಇದರ ಪರಿಣಾಮ ಎಷ್ಟು ಪ್ರಭಾವ ಬೀರಲಿದೆಯೆಂಬುದು ಬೇರೆಯೆ ಮಾತು, ಅದು ಹಾಗಿರಲಿ. ಇಲ್ಲಿ ನಾವು ಗಮನಿಸಬೇಕಾದ್ದು, ಈ ರೀತಿಯ ನಿರ್ಧಾರ ಒಟ್ಟಾರೆ ಬದಲಾವಣೆಯನ್ನು ಹೇಗೆ ಪರಿವರ್ತಿಸುತ್ತದೆ ಎನ್ನುವುದು. ಹೊಣೆಗಾರಿಕೆಯನ್ನು ಹೇಗೆ ಸಮರ್ಥಿಸುತ್ತದೆ ಅನ್ನುವುದು. ಇದರಿಂದ ಸಾಮಾನ್ಯ ನಾಗರೀಕನ   ಮನಸ್ಸಿನಲ್ಲಿ  ಒಂದು ಹೊಸ ಆಶಾಭಾವವನ್ನು ಮೂಡಿಸುತ್ತದೆ. ಭವ್ಯ ಭಾರತದ ನಿರ್ಮಾಣಕ್ಕೆ ಇಂಥ ಒಂದು ಹೊಸ ವಿಶ್ವಾಸ ಅತಿ ಅಗತ್ಯ. ಇದಕ್ಕಾಗಿ ನಾನು ತಮ್ಮೆಲ್ಲರಿಗೂ ಹೃದಯಪೂರ್ವಕವಾದ ಕೃತಜ್ಞತೆಗಳನ್ನು ಸಮರ್ಪಿಸುತ್ತೇನೆ.
 
ನಾನು ಇಂದು, ತಂತ್ರಜ್ಞಾನದ ಬಗ್ಗೆ ಸರ್ಕಾರದ ಧೋರಣೆ ಹೇಗಿತ್ತು ಎನ್ನುವುದನ್ನು ಸೂಚ್ಯವಾಗಿ ತಿಳಿಸುತ್ತೇನೆ. ನಾನು ರಾಜ್ಯದಲ್ಲಿಯೂ ಸಹ ಕೆಲಸ ಮಾಡಿರುತ್ತೇನೆ. ಅಲ್ಲಿ ಇಡೀ ವ್ಯವಸ್ಥೆ ತುಂಬಾ ದುರ್ಬಲವಾಗಿದೆ. ಯಾರಿಗೂ ಅಲ್ಲಿ ಸರಿಯಾದ ಪರಿಕಲ್ಪನೆಯಿಲ್ಲ. ಅವರಿಗೆ ಗೊತ್ತಿರುವುದು ಹಾರ್ಡವೇರ್ ಬಗ್ಗೆ ಮಾತ್ರವೇ. ಅದನ್ನು ಅಲಂಕಾರಿಕವಾಗಿ ತಮ್ಮ ಮೇಜಿನ ಮೇಲಿನ ಫಾಶ್ಯನ್ ಗಾಗಿ ಇಟ್ಟುಕೊಳ್ಳುವುದಷ್ಟೆ ಆಗಿದೆ. ಈ ಹಿಂದೆ ಹೂದಾನಿ ಇಟ್ಟು ಕೊಳ್ಳುತ್ತಿದ್ದರು. ಈಗ ಹಾರ್ಡವೇರ್ ಇಟ್ಟುಕೊಳ್ಳುತ್ತಾರಷ್ಟೆ. ಕಾಲ ಬದಲಾಗಿದೆ. ಆಧುನಿಕತೆಗೆ ಒಗ್ಗಿಕೊಳ್ಳಬೇಕಾಗಿದೆ. ಹೂದಾನಿಯ ಬದಲಿಗೆ ಕಂಪ್ಯೂಟರ್ ಇಟ್ಟುಕೊಂಡರಷ್ಟೇ ಸಾಲದು, ಅದರ ಬಗ್ಗೆ ಸರಿಯಾದ ತಿಳುವಳಿಕೆಯನ್ನು ಪಡೆಯುವುದು ಅಷ್ಟೇ ಅಗತ್ಯ. ದೊಡ್ಡ-ದೊಡ್ಡ ಕಂಪ್ಯೂಟರ್ ಇಟ್ಟುಕೊಂಡು ಒಂದು ದಿನವೂ ತೆಗೆದು ನೋಡದಿದ್ದಲ್ಲಿ, ಬಳಸದೆ ಇದ್ದಲ್ಲಿ, ಇದು ಯಾವ ಪುರುಷಾರ್ಥಕ್ಕೆ? ಇಲ್ಲಿ ಸಮಸ್ಯೆ ಕಂಪ್ಯೂಟರ್ ದಾಗಲಿ ಅಥವಾ ಹಣದ ಸಮಸ್ಯೆಯಾಗಲಿ ಅಲ್ಲ. ಮಾನಸಿಕ ಸಿದ್ದತೆ ಅಥವಾ ಇಚ್ಛಾ ಶಕ್ತಿಯನ್ನು ಪ್ರದರ್ಶಿಸದೆ ಇರುವುದು. ಇಂದು ಬುದ್ಧ ಪೂರ್ಣಿಮೆ, ಬುದ್ಧ ಒಂದು ಮಾತನ್ನು ಹೇಳುತ್ತಾನೆ. ಮನಃ ಪರಿವರ್ತನೆಯಾಗಬೇಕೇ ಹೊರತು ಜಾತಿ ಮತಗಳಲ್ಲ ಎಂದು.
 
ಮನಃ ಪರಿವರ್ತನೆಯಾದಾಗ ಮಾತ್ರವೆ ಬದಲಾವಣೆಯ ಗಾಳಿ ಬೀಸ ತೊಡಗುತ್ತದೆ. ಇದು ನಿಜಕ್ಕೂ ಪ್ರೇರಣೆ ನೀಡುವ ಒಂದು ಸಂಗತಿ. ಇಂದು ಹಲವಾರು ಜನ ಈ ರೀತಿ ಮಾಡುವುದನ್ನು ನೋಡಿದ್ದೇನೆ. ತಮ್ಮ ಜೇಬುಗಳಲ್ಲಿ ಹೊಸ ಮಾಡೆಲ್ ನ ಮೊಬೈಲ್ ಇದ್ದಾಗಲೂ ಅದನ್ನು ತೆರೆದು ನೋಡದಯೇ ಇತರರ ಜೇಬಿನಲ್ಲಿರುವ ಮೊಬೈಲ್ ನಿಂದ ಸುದ್ದಿ ಕೇಳಿ ಸಂತಸಗೊಳ್ಳುತ್ತಾರೆ, ಮೊಬೈಲ್ ನಲ್ಲಿ ಕಾಂಟಾಕ್ಟ್  ಫೋಲ್ಡರ್ ನ ವ್ಯವಸ್ಥೆಯಿದ್ದಾಗಲೂ ಕಾಂಟಾಕ್ಟ್  ಲಿಸ್ಟ್  ಅನ್ನು ಡೇರಿ ಯಿಂದ  ಬಳಸುವುದನ್ನು ನೋಡಿದ್ದೇನೆ. ಅಂತಹವರಿಗೆ ಕೆಂಪು ಅಥವಾ ಗ್ರೀನ್ ಬಟನ್ ಗಳನ್ನು ಒತ್ತುವುದಷ್ಟೆ ಗೊತ್ತು. ಮಾಡೆಲ್ ಬದಲಾದ ಮಾತ್ರಕ್ಕೆ ಅದರ ತಂತ್ರಜ್ಞಾನದ ಮಾಹಿತಿ ಅವರ ಬಳಿ ಇರುವುದಿಲ್ಲ. ಎಸ್.ಎಮ್.ಎಸ್ ಮಾಡಿದ ನಂತರ ಫೋನ್ ಮಾಡ್ತೇವೆ…ಎಸ್.ಎಮ್.ಎಸ್ ಸಿಕ್ತಾ ಎಂದು …ಇದೆಂಥಾ ಅಜ್ಞಾನದ ಪರಮಾವಧಿ. ಇಲ್ಲಿ ನಮಗೆ ಕಾಣುವುದು ಹಾರ್ಡವೇರ್ ಆಗಲಿ ಸಾಫ್ಟವೇರ್ ದಾಗಲಿ ಸಮಸ್ಯೆ ಅಲ್ಲ. ಇದು ನಮ್ಮ ಮನಸ್ಥಿತಿ. ಇಲ್ಲಿ ಸಾಮೂಹಿಕ ಪರಿವರ್ತನೆಯನ್ನು ಬಯಸುತ್ತೇನೆ. ಪರಿವರ್ತನಾ ಕೊಂಡಿ ಕಿತ್ತಾಗ   ಪ್ರಕ್ರಿಯೆ ಅರ್ಧಕ್ಕೆ ನಿಂತು ಬಿಡುತ್ತೆ. ಈಗ ನಮ್ಮನ್ನೆ ಉದಾಹರಣೆಗೆ ತೆಗೆದುಕೊಳ್ಳಿ..ಸುದ್ದಿಗಾಗಿ ಪೇಪರ್ ಓದುವ ಆನಂದವೇ ಬೇರೆ. ಇಂದಿನ ಮಕ್ಕಳಿಗೆ ಪೇಪರ್ ಅಂದರೆ ಆಲರ್ಜಿ. ಆದರೆ ಸುದ್ದಿ ಮಾಹಿತಿಯೆಲ್ಲವನ್ನು ತಂತ್ರಜ್ಞಾನದ ಮೂಲಕ ವಿಶ್ವದ ಮೂಲೆ ಮೂಲೆಗಳಿಂದ ಕ್ಷಣ ಮಾತ್ರದಲ್ಲಿ ಪಡೆದು ಬಿಡುತ್ತಾರೆ. ಈ ರೀತಿಯ ಬದಲಾವಣೆಯೊಂದಿಗೆಯೇ ನಾವು ನಮ್ಮನ್ನು ಗುರುತಿಸಿಕೊಳ್ಳಬೇಕು  . ಇದು ಸಾಧ್ಯವಾಗಬೇಕಾದಲ್ಲಿ, ನಮಗೆ ಅಗತ್ಯವಾದ ಪರಿಸರವನ್ನು ನಾವೇ ಸೃಷ್ಟಿಸಿ ಕೊಳ್ಳಬೇಕಾಗುತ್ತದೆ. ಅಂಥಹವರು ಎಷ್ಟು ಮಂದಿ. ಬೆರಳೆಣಿಕೆಯಷ್ಟೆ. ಅಂತಹವರು ಇಡೀ ವ್ಯವಸ್ಥೆಯಲ್ಲಿ ಒಂಟಿಯಾಗಿ ಬಿಡುತ್ತಾರೆ. ಇಂಥ ವ್ಯವಸ್ಥೆಯಿಂದ ಹೊರಬರಲು ಇದೀಗ ನಿಮ್ಮ ಸಾಹೇಬರು ಒಂದು ಸಲಹೆಯನ್ನು ನಮ್ಮ ಮುಂದಿಟ್ಟಿದ್ದಾರೆ. ಅದೇನೆಂದರೆ ತಂತ್ರಜ್ಞಾನವನ್ನು ಕುರಿತು ಸವಿಸ್ತಾರವಾದ ತರಬೇತಿ ಕಾರ್ಯಕ್ರಮವನ್ನು ಕೆಳ ಹಂತದವರಿಗೂ ಕೊಂಡೊಯ್ಯುವುದು. ಆರಂಭದಲ್ಲಿ ಹಲವಾರು ಅಡೆತಡೆಗಳನ್ನು ಎದುರಿಸಬೇಕಾದರು ಮುಂದೊಂದು ದಿನ ಇದರಿಂದ ಖಂಡಿತಾ ಲಾಭ ಉಂಟು. ತಂತ್ರಜ್ಞಾನದಲ್ಲಿ ಅಂಥಾ ಶಕ್ತಿಯಿದೆ. ನೀವು ಕೆಲವರ ಮನೆಗಳಲ್ಲಿ ನೋಡಿರಬಹುದು ಹೊಸ ಟೀವಿ ಬಂದಾಗ, ಹೊಸ ವಿ.ಸಿ.ಆರ್ ಬಂದಾಗ ಅದು ಕೆಟ್ಟು ನಿಂತಲ್ಲಿ ಮನೆಯ ಅಜ್ಜ ತಡಬಡಿಸುತ್ತಾನೆ. ಆದರೆ ಮೊಮ್ಮಗ ತಕ್ಷಣವೆ ಬಂದು ಸರಿಪಡಿಸಿರುವುದುಂಟು. ಇದು ನಾವು ಕಂಡ ಒಂದು ಪೀಳಿಗೆಯ ಅಂತರ. ನಾವಿಂದು ಇದರ ಸಮತೋಲನ ಕಾಯ್ದುಕೊಳ್ಳ ಬೇಕಾಗಿದೆ.
 
 ಈ ಪೀಳಿಗೆಯೊಂದಿಗೆ ಸಮತೋಲನ ಕಾಯ್ದು ಕೊಳ್ಳುವುದು ಬಹಳ ಕಠಿಣವಾದರು ಕೆಳಮಟ್ಟದವರೊಂದಿಗೆ ಬೆಳೆಯಲು ಇದು ಸಹಕಾರಿಯಾಗುತ್ತದೆ. ಅಸಾಧ್ಯವಾದದ್ದನ್ನು ಸಾಧ್ಯಗೊಳಿಸಬೇಕಾದಲ್ಲಿ ಹೀಗೆ ಮಾಡುವುದು ಅನಿವಾರ್ಯ. ಹೀಗಾಗಿ ಇದೊಂದು ಸವಾಲೇ ಸರಿ.
 
ನನ್ನ ದೃಷ್ಟಿಯಲ್ಲಿ  e-governance ಎಂದಲ್ಲಿ Easy-Governance, Effective Governance, Economical Governance, Environment Friendly Governance ಅಂತಾ. ನಾವು e-governance ಅನ್ನು ಜೀವನದ ಎಲ್ಲ ಕ್ಷೇತ್ರಗಳಲ್ಲಿ ತರವುದಾದರು ಹೇಗೆ? ಈಗ ನಾವು ಎ-4 ಸೈಜ್ ನ ಹಾಳೆ ಅನ್ನು  ಬಳಸುತ್ತಿದ್ದೇವೆಯೊ ಅದು ಸಿದ್ದವಾಗಲಿಕ್ಕೆ ಕನಿಷ್ಠ 10 ಲೀಟರ್ ನಷ್ಟು ನೀರು ಖರ್ಚಾಗುತ್ತದೆ. ಅಂದರೆ ಕಾಗದ ರಹಿತ ವ್ಯವಸ್ಥೆಗೆ ನಮ್ಮನ್ನು ತೊಡಗಿಸಿ ಕೊಂಡಲ್ಲಿ ಮುಂದಿನ ಪೀಳಿಗೆಗೆ ನೀರು ಉಳಿಸುವುದರ ಮೂಲಕ, ಕಾಡನ್ನು ಉಳಿಸುವುದರ ಮೂಲಕ, ವಿದ್ಯುತ್ ಉಳಿಸುವುದರ ಮೂಲಕ ಮತ್ತು ಪರಿಸರ ಮಾಲಿನ್ಯ ತಡೆಗಟ್ಟುವುದರ ಮೂಲಕ ಎಂಥ ದೊಡ್ಡ ಸೇವೆ ಮಾಡಬಹುದು?  ಅಂದರೆ ಪರಿಸರ ಉಳಿಸುವಲ್ಲಿ ಹಾಗೂ ಒಂದು ಪರಿಹಾರವನ್ನು ದೊರಕಿಸಿ ಕೊಟ್ಟಂತೆ ಆಗುತ್ತದೆ. ಅಂದರೆ ವ್ಯವಸ್ಥೆಯಲ್ಲಿ ಒಂದು ಶಕ್ತಿಯಿದೆ. ಎಲ್ಲಿಯವರೆವಿಗೂ ‘ನಾವು ಇದೆಲ್ಲ ಎಲ್ಲಿ ಸಾಧ್ಯ’, ‘ಎಲ್ಲಿ ಆಗುತ್ತೆ’. ‘’ಅಯ್ಯೋ ಬಿಡಪ್ಪಾ ನಮ್ಮ ಕೈಯಲ್ಲಿ ಆಗೋ ಮಾತಲ್ಲ’’ ಅಂತಾ ಇದರ ಸಂಪೂರ್ಣ ಸ್ವರೂಪವನ್ನು ಬದಲಾಯಿಸುವುದಿಲ್ಲವೊ ಅಲ್ಲಿಯವರೆವಿಗೂ ಇದು ಸಾಧ್ಯವಾಗುವುದೇ ಇಲ್ಲ. ಇದು ಕೆಟ್ಟದ್ದು, ಇದು ಹಳೆಯದು, ಇದು ಹೊಸದಲ್ಲ, ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ ಎನ್ನುವ ಬದಲು ಇದು ಸುಲಭ, ಇದು ಸರಳ, ಹೀಗೆ ಮಾಡುವುದರಿಂದ ಬಹಳ ಪ್ರಯೋಜನವಿದೆ ಎಂಬುದಾಗಿ ಜನರನ್ನು ಹುರಿದುಂಬಿಸುವುದಾದಲ್ಲಿ ಆಗ ಎಲ್ಲವೂ ಅಲ್ಪಾವಧಿಯಲ್ಲಿ  ಸಾಧ್ಯ.
 
ಒಟ್ಟಾರೆಯಲ್ಲಿ ನಾವು ಕಂಡು ಕೊಂಡ ಅನುಭವವಿಷ್ಟು- ನಾವಿದನ್ನೇ ಪಾಲಿಸುವುದು, ನಮ್ಮ ಇಲಾಖೆ ಇದನ್ನೇ ಅನುಸರಿಸುವುದು, ನಾವು ಮಾಡುವುದೇ ಸರಿ, ನಮ್ಮದು ತಪ್ಪೇ ಇಲ್ಲ ಎಂಬುದು.  ಯಾವೊಬ್ಬ ವ್ಯಕ್ತಿ ತಾನು ಕೆಲಸ ಮಾಡುವ ವಿಭಾಗದಲ್ಲಿ ತಾನೇ ಸರಿ, ತನ್ನ ವಿಭಾಗವೇ ಸರಿ ಎನ್ನುವುದು ಸಹಜ. ಎರಡು ತಿಂಗಳ ಹಿಂದೆ ಇದರ ಬಗ್ಗೆ ತುಂಬಾ ಗಂಭೀರವಾಗಿ ಆಲೋಚಿಸಿ ಒಂದು ನಿರ್ಧಾರ ತೆಗೆದುಕೊಂಡೆ. ಎಲ್ಲ  ಇಲಾಖೆಗಳಿಗೂ ಪತ್ರ ಬರೆದು ನಿಮ್ಮ ಇಲಾಖೆಯಲ್ಲಿ ತೊಂದರೆಯೇನಿದೆ, ಎಲ್ಲಿಯಾದರು ವ್ಯವಸ್ಥೆಯಲ್ಲಿ ಲೋಪದೋಷಗಳಿವೆಯೆ? ಏನಾದರು ಸರಿಪಡಿಸ ಬೇಕಾಗಿದೆಯಾ? ಆಫೀಸಿನ ಪ್ರಕ್ರಿಯೆ ಸರಳಗೊಳಿಸ ಬೇಕಾಗಿದೆಯೆ? ಎಂದೆ. ಮೊದಮೊದಲು ಎಲ್ಲವು ಸರಿ ಎನ್ನುತ್ತಿದ್ದವರು ಅಂಥದ್ದೇನೂ ಸಮಸ್ಯೆ ಅಲ್ಲ ಅಂದರು.   ಅನಂತರ ಸುಮಾರು 400ಕ್ಕೂ ಹೆಚ್ಚು ಸಮಸ್ಯೆಗಳನ್ನು ಗುರುತಿಸಿ ನಮ್ಮ ಮುಂದೆ ತರಲಾರಂಭಿಸಿದರು. ಪ್ರತಿಯೊಂದು ಇಲಾಖೆಯಲ್ಲಿಯೂ ಆಯಾಯ ದಿನಗಳಲ್ಲಿ ಏನು ಸುಧಾರಣೆಯನ್ನು ಮಾಡಬಹುದಿತ್ತೊ ಅದನ್ನು ಮಾಡಲು ಪ್ರಾರಂಭಿಸಿದರು. ನಂತರ ನಾನು ವಿಶ್ವವಿದ್ಯಾಲಯಕ್ಕೆ ಈ ಜವಾಬ್ದಾರಿಯನ್ನು ಕೊಟ್ಟೆ. ಅಲ್ಲಿ 18 ರಿಂದ 20-22 ವಯಸ್ಸಿನ ಯುವಕರನ್ನು ಕಲೆ ಹಾಕಿ ಈ 400  ಸಮಸ್ಯೆಗೆ ಪರಿಹಾರ ಹುಡುಕಿ ಎಂದೆ. 42 ಸಾವಿರಕ್ಕೂ ಹೆಚ್ಚು ಮಕ್ಕಳನ್ನು ಇದಕ್ಕಾಗಿ  ನಿಯೋಜಿಸಿದೆ. ಇದರಲ್ಲಿ ಸುಮಾರು ನೂರಕ್ಕೂ ಹೆಚ್ಚು ವಿಶ್ವವಿದ್ಯಾಲಯ ಮತ್ತು ಕಾಲೇಜುಗಳನ್ನು ತೊಡಗಿಕೊಳ್ಳುವಂತೆ ಮಾಡಿದೆ. ಒಂದೆ ಸೂರಿನಡಿ 36 ಘಂಟೆಗಳ ಕಾಲ ಸತತವಾಗಿ ಕುಳಿತು  ಮಾಡಿದ ಅಭ್ಯಾಸದ ಪರಿಶ್ರಮವಿದು. ತುಂಬಾ ಅಶ್ಚರ್ಯವಾದ ಸಂಗತಿಯೆಂದರೆ ಹೆಚ್ಚಿನ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡಿದ್ದು ಇಲ್ಲಿಯೆ. ಕೆಲವು ಸಂದರ್ಭಗಳಲ್ಲಿ ಹಲವು ಹತ್ತು ವಿದ್ಯಾರ್ಥಿಗಳ ಗುಂಪುಗಳನ್ನು ರಚಿಸಿ ಆಯಾ ಇಲಾಖೆಯವರೊಂದಿಗೆ ಕೂಡಿಸಿ ಪರಿಹಾರ ಕಂಡು ಕೊಳ್ಳುವ ಪ್ರಯತ್ನ ಮಾಡಿದ್ದೇವೆ. ಹಲವಾರು ವಿಭಾಗಗಳು ತಮಗೆ ಸರಿ ಅನ್ನಿಸಿದ್ದನ್ನು  ಅಳವಡಿಸಿ ಕೊಂಡಿದ್ದಾರೆ. ಈ ಎಲ್ಲ ಪ್ರಯತ್ನಗಳು ಕಳೆದ ಎರಡು ತಿಂಗಳಲ್ಲಿ ನಡೆದಿವೆ. ಅಂದರೆ ಇಲ್ಲಿ ಕೌಶಲ್ಯಕ್ಕೆ ಬರವಿಲ್ಲ. ಇಚ್ಛಾ ಶಕ್ತಿ ಪ್ರದರ್ಶಿಸ ಬೇಕಾಗಿದೆ ಅಷ್ಟೆ. ತಾವು ಸಹ ದೇಶದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಧ್ಯಾರ್ಥಿಗಳಿಗೆ ಇಂಥಹ ಅವಕಾಶಗಳನ್ನು ದೊರೆಕಿಸಿ ಕೊಟ್ಟಲ್ಲಿ ಇಂಥದೊಂದು ಕಾರ್ಯ ಸಾಧ್ಯ ಎಂಬ ನಂಬಿಕೆ ನನಗಿದೆ. ನಮ್ಮ ಮಕ್ಕಳು ಹಲವಾರು ಪರಿಹಾರಗಳನ್ನು ಸಾಫ್ಟವೇರ್ ಮೂಲಕ ಓದಗಿಸ ಬಲ್ಲರು.  IT+IT=IT ಎನ್ನುವುದು ನನ್ನ ದೃಢವಾದ ನಂಬಿಕೆ. ನಾನು ಈ ಮಾತನ್ನು ಹೇಳುವಾಗ ನನ್ನಲ್ಲಿರುವ ವಿಶ್ವಾಸವೆ ಇದಕ್ಕೆ ಕಾರಣ.  IT+IT= IT ಅಂದರೆ Information technology + Indian Talents = India Tomorrow ಎಂದರ್ಥ. ಈ ಸಾಮರ್ಥ್ಯ ನಮ್ಮಲ್ಲಿದೆ . ಇದನ್ನು ಬಳಸಿಕೊಂಡು ಹೇಗೆ ಮುಂದುವರೆಯ ಬೇಕೆನ್ನುವುದನ್ನು ನಾವು ಆಲೋಚಿಸ ಬೇಕಷ್ಟೆ.
 
ಆದೊಂದು ಕಾಲ ಇತ್ತು ಟೆರಕೋಟ ಕರೆನ್ಸಿಯದು, ಮೊದಮೊದಲಿಗೆ ಮಣ್ಣಿನ ನಾಣ್ಯಗಳು ಚಲಾವಣೆಯಲ್ಲಿತ್ತು. ಆಗ ಇದರಿಂದಲೇ ವಹಿವಾಟು ವಿಶ್ವದಾದ್ಯಂತ ನಡೆಯುತ್ತಿತ್ತು. ಕಾಲ ಬದಲಾದಂತೆ ತಾಮ್ರದ ನಾಣ್ಯಗಳು, ಬೆಳ್ಳಿ ನಾಣ್ಯಗಳು ಚಲಾವಣೆಗೆ ಬಂದವು. ಕೆಲವೆಡೆ  ಚಿನ್ನದ ನಾಣ್ಯ ಮತ್ತು ಚರ್ಮದ ನಾಣ್ಯಗಳು ಸಹ ಚಲಾವಣೆಗೆ ಬಂದಿದ್ದುಂಟು. ಆದರೆ ಕಾಲಕ್ರಮೇಣ ಹಣ ಕಾಗದದ ರೂಪದಲ್ಲಿ ಬಂತು. ಈ ಬದಲಾವಣೆಯನ್ನು ನಾವು ಸ್ವೀಕರಿಸಿದ್ದೇವೆ. ಯುಗದ ಅವಶ್ಯಕತೆಗೆ ಅನುಗುಣವಾಗಿ ಕಾಲ ಬದಲಾಗಿದೆ. ಪೇಪರ್  ಕರೆನ್ಸಿಯ ಕಾಲ ಹಳೆಯದಾಯಿತು. ಪೆಪರ್ ಕರೆನ್ಸಿ ಮರೆಯಾಗುತ್ತಿದೆ. ಈಗ ಡಿಜಿಟಲ್ ಕರೆನ್ಸಿ ಬಳಕೆಗೆ ಬರುತ್ತಿದೆ. ನಾವು ನಮ್ಮನ್ನು ಈ ವ್ಯವಸ್ಥೆಗೆ ಹೊಂದಿಸಿಕೊಳ್ಳಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಅದರಲ್ಲೂ ನವೆಂಬರ್ 8 ರ ನಂತರ ನನ್ನದಲ್ಲದ ಕ್ಷೇತ್ರದಲ್ಲಿ ಆಸಕ್ತಿ ವಹಿಸಿದ್ದೇನೆ. ನವೆಂಬರ್ 8 ರಂದು ಡಿಜಿಟಲ್ ಕರೆನ್ಸಿಗಾಗಿ  ವಿಮುದ್ರೀಕರಣ ಮಾಡ ಬೇಕಾಯಿತು. ನನ್ನ ಅನುಭವದಲ್ಲಿ ನೋಟನ್ನು ಮುದ್ರಿಸುವುದು, ಆದರ ರಕ್ಷಣೆ ಹೊರುವುದು  ಮತ್ತು ಅದರ ವಿತರಣೆಗಾಗಿ ಮಾಡುವ ಸಾರಿಗೆ ವೆಚ್ಚ ಎಲ್ಲವೂ ದುಬಾರಿಯೆ.  ಒಂದು ಎ.ಟಿ.ಎಮ್ ನೋಡಿಕೊಳ್ಳಲಿಕ್ಕೆ ಕನಿಷ್ಠ 6 ಮಂದಿ ಪೊಲೀಸರು ಬೇಕಾಗುತ್ತಾರೆ  . ಈಗ ನಮ್ಮಲ್ಲಿ ತಂತ್ರಜ್ಞಾನದ ಸೌಲಭ್ಯವಿದೆ. ಈಗ ಜೇಬಿನಲ್ಲಿ ದುಡ್ಡಿರಬೇಕೆಂದೇನೂ ಇಲ್ಲ. ಸರ್ಕಾರ ಭೀಮ್ ಆಪ್ ಅನ್ನು ಬಳಕೆಗೆ ತಂದಂತೆ ಅದನ್ನೇ ಬಳಕೆಗೆ ಸದುಪಯೋಗ ಪಡಿಸಿಕೊಂಡಲ್ಲಿ ಒಂದು ರೂಪಾಯಿ ಸಹ ವೆಚ್ಚವಾಗದು. ಈ ತಂತ್ರಾಂಶವನ್ನೇ  ನೀವು ನಿಮ್ಮ ಮೊಬೈಲ್ ಗೆ ಡೌನ್ ಲೋಡ್ ಮಾಡಿಕೊಂಡಲ್ಲಿ ಹಾಗೂ ನಿಮ್ಮ ಎದುರಿಗಿನ ವ್ಯಕ್ತಿಯೂ ಇದನ್ನೆ ಬಳಸಿದ ಪಕ್ಷದಲ್ಲಿ ನಿಮ್ಮ ಹಾಗೂ ಅವನ ವ್ಯಾಪಾರ ವಹಿವಾಟು ಸುಸೂತ್ರವಾಗಿ ನಡೆಯುತ್ತದೆ. ಇದರಿಂದ ಯಾರಿಗೂ ಯಾವ ಸಮಸ್ಯೆಯೂ ಆಗದು. ಕೋಟ್ಯಾಂತರ ರೂಪಾಯಿಯ ಉಳಿತಾಯ ಸಾಧ್ಯ ವಾಗುತ್ತದೆ. ಹಾಗೇ ಉಳಿದ ಹಣವನ್ನು ಬಡವರ ಮನೆ ಕಟ್ಟಲಿಕ್ಕೆ ಅಥವಾ ಬಡ ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡ ಬಹುದಾಗಿದೆ.
 
ತಂತ್ರಜ್ಞಾನ ಇಡೀ ಅರ್ಥಿಕ ಜಗತ್ತನ್ನೇ ಬದಲಾಯಿಸುತ್ತದೆ. ಅದೇ ಇದರ ಶಕ್ತಿ. ಇದನ್ನು ನಾವು ಯಾವ ರೀತಿ ಬಳಸ ಬಹುದು, ಜೀವನದ ಎಲ್ಲ ಘಟ್ಟಗಳಲ್ಲಿ ಯಾವ ರೀತಿ ಪ್ರಯೋಗಕ್ಕೆ ತರಬಹುದು ಎಂಬುದನ್ನು ಆಲೋಚಿಸ ಬೇಕು. ನನ್ನ ಸ್ವಂತ ಅನುಭವದಲ್ಲಿ ಹೇಳಬಹುದಾದಲ್ಲಿ ನಮ್ಮ ಜನ ಬೇಗ ಅರ್ಥಮಾಡಿ ಕೊಳ್ಳುತ್ತಾರೆ ಎಂಬುದು. ಕೆಲವೊಮ್ಮೆ ಅವರಿಗೆ ತಿಳಿಯದೆ ಹೋದಲ್ಲಿ ಯುವಕರನ್ನು ಕೇಳಿ, ನನಗೆ ಅಭ್ಯಾಸವಿಲ್ಲ, ನನಗೆ ವಯಸ್ಸು ಆಯಿತು ಸ್ವಲ್ಪ ಸಹಾಯಮಾಡು..ಹೇಳಿ ಕೊಡು ಅಂತಾ ಕೇಳಿ ತಿಳಿದು ಕೊಳ್ಳುತ್ತಾರೆ. ಇವತ್ತು ತಂತ್ರಜ್ಞಾನ ಎಷ್ಟೊಂದು ಬೆಳೆದಿದೆಯೆಂದರೆ ಸಾವಿರ ವರ್ಷಗಳನ್ನು ಅದು ಹಿಂದೆ ಹಾಕಿದೆ. 30 ವರ್ಷಗಳಲ್ಲಿ ಆಗದ ಕೆಲಸವನ್ನು ಅದು ಸಾವಿರ ಪಟ್ಟು ಮಾಡಿದೆ. ಸಾವಿರ ವರ್ಷಗಳಲ್ಲಿ ಆಗದ್ದು ಇಂದು ಮೂವತ್ತು ವರ್ಷಗಳಲ್ಲಿ ಆಗಿದೆ. ಇವತ್ತು ಇಲ್ಲಿ ಎನು ನಡೆಯುತ್ತಿದೆಯೊ ಅದು ಇಲ್ಲಿಂದ ನಾನು ತೆರಳಿದ ಮೇಲೆ ಹೊಸ ತಂತ್ರಜ್ಞಾನವಾಗಿ ಮಾರ್ಪಡ ಬಹುದು, ಹಾಗೆಯೇ  ಅದು ಹಳೆಯದು ಅಥವಾ ಸವಕಲಾಗಲೂ ಬಹುದು. ಅಂದರೆ ಇದರ ವೇಗ ಹಾಗಿದೆ. ಮುಂದೊಂದು ದಿನ ಕೃತಕ ಬುದ್ಧಿವಂತಿಕೆಯ ಪ್ರಾಬಲ್ಯ (Artificial Intelligence dominate) ದೀರ್ಘಕಾಲದ ವರೆವಿಗೂ ಮುಂದುವರೆಯ ಬಹುದು. ಕೃತಕ ಬುದ್ದಿವಂತಿಕೆ  ಮುಂದಿನ ಜನಾಂಗವನ್ನು ಕೈ ಹಿಡಿದು ನಡೆಸ ಬಹುದಾಗಿದೆ. ಕೈಗಳಿಗೆ ಕೆಲಸವಿಲ್ಲ ಎಂಬ ಕೂಗು ಎಳಬಹುದು.   ಚಾಲಕ ರಹಿತ ಕಾರ್ (Driverless car ) ಮಾರುಕಟ್ಟೆಗೆ ಬರಬಹುದು. ಹಾಗಾದಲ್ಲಿ ಚಾಲಕನ ಗತಿಯೇನು? ಕೃತಕ ಬುದ್ಧಿವಂತಿಕೆ ಬಂದ ನಂತರ ಕೆಲಸ ಸೃಷ್ಟಿ ಸಾಕಷ್ಟು ಸಂಖ್ಯೆಯಲ್ಲಿ ಆಗಲಿದೆಯೆ ಎಂಬುದು. ಈ ಕ್ಷೇತ್ರದ ಪರಿಣಿತರು ಕೆಲಸಕ್ಕೆ ಬರವಿರದು, ಸಾಕಷ್ಟು ಅವಕಾಶಗಳು ಒದಗಿ ಬರುತ್ತದೆ ಎನ್ನುತ್ತಾರೆ. ಇಡೀ ವಿಶ್ವ ಇಂದು ಹೊಸ ದಿಗಂತದತ್ತ ಸಾಗಿದೆ. ಹೊಸ ಹೊಸ ಆಲೋಚನೆಗಳು ಹರಿದಾಡ ತೊಡಗಿವೆ. ಇದಕ್ಕೆಂದೇ ಹೊಸ ಪೀಳಿಗೆ ಸಿದ್ದವಾಗುತ್ತಿದೆ. ತಂತ್ರಜ್ಞಾನ ಮನುಷ್ಯನನ್ನ ಹೊಸ ದಿಕ್ಕಿನತ್ತ ಸೆಳೆಯುತ್ತಿದೆ. ನಾವೀಗ ಅದರೊಂದಿಗೆ ಸಮತೋಲನ ಕಾಯ್ದು ಕೊಳ್ಳದಿದ್ದಲ್ಲಿ ನಮ್ಮ ಮತ್ತು ಅವರ ನಡುವೆ ಒಂದು ದೊಡ್ಡ ಕಂದರ ಕಾಣಿಸಿ ಕೊಳ್ಳುತ್ತದೆ. ಒಂದು ದಿನ ನಾವು ಅವರಿಗೆ ಬೇಡದವರಾಗಿ ಬಿಡುತ್ತೇವೆ. ಹಾಗಾದಾಗ ಯಾರೂ ನಮ್ಮನ್ನು ಕೇಳುವುದಿಲ್ಲ. ಇಂಥ ಒಂದು ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ.
 
ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದ ಕ್ಷೇತ್ರದಲ್ಲಿ ಭಾರತ ದೊಡ್ಡ ಹೆಸರು ಮಾಡಿದೆ. ವಿಶ್ವದಲ್ಲಿ ನಮ್ಮ ಪ್ರತಿಷ್ಠೆ ಹೆಚ್ಚಾಗಿದೆ. ವಿಶ್ವದ ಯಾವುದೇ ರಾಷ್ಟ್ರ ತನ್ನ ಮೊದಲ ಪ್ರಯತ್ನದಲ್ಲಿ ಯಶಸ್ಸು ಕಂಡಿರುವುದು ಅಪರೂಪ. ಆದರೆ ಮಂಗಳ ಗ್ರಹದ ಅನ್ವೇಷಣೆಯಲ್ಲಿ ತನ್ನ ಮೊದಲ ಪ್ರಯತ್ನದಲ್ಲಿಯೇ ಭಾರತ ಸಾಕಷ್ಟು ಯಶಸ್ಸು ಪಡೆಯಿತು. ಇದರ ಖರ್ಚು ಎಷ್ಟಾಯಿತು ಎಂಬುದರ ಬಗ್ಗೆ ಆಲೋಚಿಸಿದಾಗ ಒಂದು ಟಾಕ್ಸಿಯಲ್ಲಿ ಒಂದು ಕಿ.ಮಿ.ಗೆ 10 ರಿಂದ 11 ರೂಪಾಯಿ ಅಂತಾ ಲೆಕ್ಕ ಹಾಕಿಕೊಂಡರೆ ಮಂಗಳ ಗ್ರಹ ತಲುಪಲು ಖರ್ಚಾದ ವೆಚ್ಚ ಸರಾಸರಿ ಕಿ.ಮಿ. 7 ರೂಪಾಯಿ ಮಾತ್ರ. ವಿಶ್ವದಲ್ಲಿ ಹಾಲಿವುಡ್ ಸಿನೇಮಾಗೆ ತಗಲುವ ಒಟ್ಟು ಖರ್ಚಿಗಿಂತ ಕಡಿಮೆ ವೆಚ್ಚದಲ್ಲಿ ಮಂಗಳ ಯಾನ ಯಶಸ್ವಿಯಾಗಿ ಮುಗಿದಿದೆ. ಇದು ನಮ್ಮ ವಿಜ್ಞಾನಿಗಳ ಯಶಸ್ಸಿನ ಸಾಧನೆ. ನಮ್ಮ ವಿಜ್ಞಾನಿಗಳಲ್ಲಿ ಇಂಥ ಸಾಧನೆ ಮಾಡುವ ಸಾಮರ್ಥ್ಯವಿದೆ. ನಮ್ಮ ದುರಂತವೆಂದರೆ ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಇಷ್ಟೆಲ್ಲ ಸಾಧನೆ ಮಾಡಿದಾಗ್ಯೂ ಅನ್ವಯಿಕ  ವಿಜ್ಞಾನ ದಲ್ಲಿ, ವಿಜ್ಞಾನವನ್ನು ಅಳವಡಿಸುವ ಸಂದರ್ಭ ಬಂದಾಗ ನಾವು ಈ ಕ್ಷೇತ್ರದಲ್ಲಿ ಸಾಕಾಷ್ಟು ಹಿಂದೆ ಬಿದ್ದಿದ್ದೇವೆ  ಅಂತಲೇ ಹೇಳಬೇಕು. ನಾನು ಇಲ್ಲಿಗೆ ಬಂದು ಕಾರ್ಯವಹಿಸಿ ಕೊಂಡ ನಂತರ ಎಲ್ಲ ಜಂಟೀ ಕಾರ್ಯದರ್ಶಿಯವರನ್ನು ಒಟ್ಟುಗೂಡಿಸಿ ಒಂದು ಕಮ್ಮಟವನ್ನು ಆಯೋಜಿಸಲಾಯಿತು. ಹಲವು ದಿನಗಳ ಕಾಲ ನಡೆದ ಈ ಕಾರ್ಯಕ್ರಮ ವಿಭಾಗವಾರು ನಡೆಯಿತು. ಅಂತರಿಕ್ಷ ವಿಭಾಗದಲ್ಲಿ ಅಲ್ಲಿನ ಆಡಳಿತ ವ್ಯವಸ್ಥೆ ಹೇಗೆ ನಡೆಯುತ್ತೆ. ಆಡಳಿತದಲ್ಲಿ ಎನೆಲ್ಲ ಸುಧಾರಣೆಯನ್ನು ಮಾಡಬಹುದು ಎಂಬುದಾಗಿ ಚರ್ಚಿಸಲಾಯಿತು. ರಸ್ತೆ ನಿರ್ಮಾಣ ಮಾಡಬೇಕಾದ ಸಂದರ್ಭದಲ್ಲಿ ಅಂಕುಡೊಂಕಾಗಿ ಮಾಡುವುದೇ ಹೆಚ್ಚು. ಬಾಹ್ಯಾಕಾಶ ತಂತ್ರಜ್ಞಾನ ಅಳವಡಿಸಿಕೊಂಡು ಉಪಗ್ರಹ ಚಿತ್ರಗಳ ಮುಖಾಂತರ ಅಂಕು ಡೊಂಕುಗಳೆಲ್ಲವನ್ನು ನಿವಾರಿಸಿ ನೇರ ರಸ್ತೆಯ ನಿರ್ಮಾಣವನ್ನು ಏಕೆ ಮಾಡಬಾರದು ಎಂಬುದಾಗಿ ಕೇಳಿದೆ. ರಸ್ತೆ ವಿನ್ಯಾಸ ಸಿದ್ದಗೊಳಿಸುವ ಸಂದರ್ಭದಲ್ಲಿ ಇಂಥದನ್ನು ನೆನಪಿಟ್ಚು ಕೊಂಡಲ್ಲಿ ನಮ್ಮವರು ಏನನ್ನಾದರೂ  ಮಾಡ ಬಹುದು. ನನಗೆ ಬುಡಕಟ್ಟು ಜನರಿಗೆ ಅವರ ಭೂಮಿಯ ಹಕ್ಕನ್ನು ಕೊಡ ಬೇಕಿತ್ತು. ಆಗ ನಾನು ಬಾಹ್ಯಾಕಾಶ ತಂತ್ರಜ್ಞಾನದ ನೆರವು ಪಡೆದೆ. ನನಗೆ ಯಾವುದೇ ಸಾಕ್ಷ್ಯಾಧಾರದ ಅವಶ್ಯಕತೆಯಿಲ್ಲ. ಬಾಹ್ಯಾಕಾಶ ತಂತ್ರಜ್ಞಾನದ ನೆರವಿನಿಂದ ಇದು ಕೃಷಿ ಉಪಯೋಗಕ್ಕಾಗಿ ಅರಣ್ಯ ಪ್ರದೇಶವೆಂದು ನೇರವಾಗಿ ಮಾಡಬಹುದಿತ್ತು. ಆದರೆ 15 ವರ್ಷಗಳ ಫೋಟೊ ಆಧಾರದ ಮೇಲೆ ಅವರಿಗೆ ಅವರ ಅಧಿಕಾರ ಕೊಡುವುದು ಮುಖ್ಯವಾಗಿತ್ತು.
 
ಇಂದು ನ್ಯಾಯಾಂಗ ವ್ಯವಸ್ಥೆಯಲ್ಲಿ ಅದರಲ್ಲೂ ವಿಶೇಷವಾಗಿ ಅಪರಾಧ ನ್ಯಾಯಾಂಗದವಿಷಯದಲ್ಲಿ ನ್ಯಾಯ ದೊರೆಕಿಸುಕೊಡುವಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸಲಾಗಿದೆ.  ತಂತ್ರಜ್ಞಾನ ಸಾಕಷ್ಟು ನೆರವಿಗೆ ಬಂದಿದೆ. ಮೊಬೈಲ್ ಸಿಕ್ಕರೂ ಅದನ್ನೆ ಸಾಕ್ಷ್ಯದ ರೂಪದಲ್ಲಿ ಬಳಸ ಬಹುದಾದ ಅವಕಾಶಗಳನ್ನ ಇದು ಹೆಚ್ಚಿಸಿದೆ. ಈ ದಿಕ್ಕಿನಲ್ಲಿ ಬೆರಳಚ್ಚು ವಿಜ್ಞಾನ   ಬಹು ದೊಡ್ಡ ಕಾರ್ಯ ನಿರ್ವಹಿಸುತ್ತಿದೆ. ದುರ್ಘಟನೆಯ ಸಂದರ್ಭದಲ್ಲಿ ಸಿ ಸಿ ಟಿ ವಿ ಕ್ಯಾಮೆರಾದ     ರೆಕಾರ್ಡ್  ನಿಂದ ತೀರ್ಪು ನೀಡುವಲ್ಲಿ ಸಹಾಯವಾಗುತ್ತಿದೆ. ಇದೆಲ್ಲ ಹೇಳುವುದರ ಹಿಂದಿನ ಉದ್ದೇಶ್ಯ ಫೋರಾನ್ಸಿಕ್ಸ್ ವಿಜ್ಞಾನದ ತಂತ್ರಜ್ಞಾನವನ್ನು ಮತ್ತಷ್ಟು ಬಲಗೊಳಿಸಿದಲ್ಲಿ ಇದು ಮತ್ತಷ್ಟು ನಿಖರವಾಗಿ ನೆರವಾಗುವಲ್ಲಿ ಸಂದೇಹವೇ ಇಲ್ಲ. ನಾವು ವಿಜ್ಞಾನದ ಅವಿಷ್ಕಾರಗಳನ್ನು ಎಷ್ಟು ಬೇಗ ಅಳವಡಿಸಿ ಕೊಳ್ಳುತ್ತೇವೆಯೋ ಅಷ್ಟೇ ಕರಾರುವಾಕ್ಕಾದ ತೀರ್ಪನ್ನು ನೀಡಬಹುದಾಗಿದೆ.
 
ನಮ್ಮ ಊಹೆಗೂ ನಿಲುಕದ ಸತ್ಯವೊಂದಿದೆ. ಉದಾಹರಣೆಗೆ ಕ್ರಿಕೆಟ್ ಮ್ಯಾಚಿನಲ್ಲಿ ಈ ಮೊದಲು ಆಂಪೈರುಗಳೇ ಸೋಲು ಗೆಲವುಗಳನ್ನು ನಿರ್ಧರಿಸಿ ಬಿಡುತ್ತಿದ್ದರು. ಆದರೆ ಈಗ ವಸ್ತುಸ್ಥಿತಿ ಹಾಗಲ್ಲ. ಥರ್ಡ್ ಆಂಪೈರ್ ಸೋಲು-ಗೆಲುವನ್ನು ನಿರ್ಧರಿಸುತ್ತಾನೆ .   ಅದು ಹೇಳುತ್ತೆ ನೀನು ಕೂದಲೆಳೆಯಂತರದಲ್ಲಿ ಹಿಡಿದೆಯೊ ಇಲ್ಲವೊ ಅನ್ನುವುದನ್ನು,. ಔಟಾದೆಯೊ ಅಥವಾ ಇಲ್ಲವೊ ಎನ್ನುವುದನ್ನು. ಈಗ ಯಾರು ಬೇಕಾದರು ಆಂಪೈರನ ಅಗತ್ಯವಿಲ್ಲ ಎನ್ನಬಹುದು. ಆದರೆ ಇದು ಅಂಪೈರ್  ನ  ಕಾರ್ಯ ಕುಶಲತೆಯನ್ನು ಹೆಚ್ಚಿಸಿದೆ. ಇಲ್ಲಿ ತಂತ್ರಜ್ಞಾನ ದಕ್ಷತೆಯನ್ನು ತಂದುಕೊಟ್ಟಿದೆ. ಈ ಕಾರಣದಿಂದ ನಾನು ಹೇಳುವುದು  ಇಷ್ಟೆ,  ಎಷ್ಟು ಸರಳವಾಗಿ ಕ್ಷಿಪ್ರಗತಿಯಲ್ಲಿ ತಂತ್ರಜ್ಞಾನವನ್ನು ಆಳವಡಿಸಿಕೊಳ್ಳುತ್ತೇವೆಯೊ ಅಷ್ಟೇ ಕ್ಷಿಪ್ರವಾಗಿ ಯಶಸ್ಸನ್ನು ಪಡೆಯುತ್ತೇವೆ.   ಮುಂದಿನ ದಿನಗಳಲ್ಲಿ ಇದರಿಂದ ಸಾಕಷ್ಟು ಲಾಭ ದೊರೆಯಲಿದೆಯೆಂದು ನನಗನ್ನಿಸುತ್ತದೆ.
 
ಇದೀಗ ತಾನೇ ಶ್ರೀಯುತ ರವಿಶಂಕರ್ ಜಿ ಯವರ ಜೊತೆ   ಮಾತಾನಾಡುತ್ತಿದ್ದೆ. ನಾನು ಇದರ ಬಗ್ಗೆ ನಿಮ್ಮೊಂದಿಗೆ ಚರ್ಚಿಸ ಬಯಸುತ್ತೇನೆ. ನಮ್ಮ ದೇಶದಲ್ಲಿ ಆಲೋಚನೆಗಳು ಹೇಗೆ ಹರಿಯುತ್ತವೆ ಅಂದರೆ ಈ ದೇಶದ ನಾಗರಿಕರೇ ಹೀಗೆ. ಜನವೇ ಹೀಗೆ…ಜನ ಸ್ವೀಕರಿಸಲೇ ಬೇಕು.  ಹಾಗೇ ಹೀಗೆ ಎಂದು ..ಆದರೆ ಇದು ಸತ್ಯ ಅಲ್ಲ. ದೇಶದ ಗತಿಯೆಂದರೆ ನಮ್ಮನ್ನು ಗುರುತಿಸುವುದು. ದೇಶ ಎನು ಆಲೋಚಿಸುತ್ತೆ ಎನ್ನುವುದು ಬೇರೆ ಮಾತು. ಈ ವೇದಿಕೆ ಅದಲ್ಲ. ಆದರೂ ನಾನು ಇಲ್ಲಿ ಉದಾಹರಿಸುತ್ತೇನೆ. ಕಾರಣ ಈ ವೇದಿಕೆ ನನ್ನ ಚಿಂತನೆಗೆ ಸೂಕ್ತವಾಗಿದೆ. ಈ ಕಾರಣದಿಂದ ನಾನು ಇಲ್ಲಿ ಹೇಳುತ್ತಾ ಇದ್ದೇನೆ. ತಪ್ಪಿದಲ್ಲಿ ಕ್ಷಮೆಯಿರಲಿ. 2014 ರ ಚುನಾವಣೆಯಲ್ಲಿ ನನ್ನ ಪಕ್ಷ ನನ್ನನ್ನು ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಿತು. ಪ್ರತಿಸ್ಪರ್ಧಿಯಾಗಿ  ಕಾಂಗ್ರೆಸ್  ಪಕ್ಷ ಚುನಾವಣೆಯ ಕಣದಲ್ಲಿ ಇಳಿಯಿತು. ಈ ಚುನಾವಣೆಗೂ ಮೊದಲು ತಮಗೆ ಗೊತ್ತಿರಬಹುದು. ಕಾಂಗ್ರೆಸ್ ಪಕ್ಷದ ಒಂದು ದೊಡ್ಡ ಸಭೆ ನಡೆಯಿತು. ಈ ಪಕ್ಷ ಏನನ್ನು ಮುಂದಿಟ್ಟು ಕೊಂಡು ಹೋರಾಡಲು ಹೊರಟಿದೆಯೆಂದು ಜನರು ಕಾತರದಿಂದ ನಿರೀಕ್ಷಿಸುತ್ತಿದ್ದರು. ಸಭೆಯ ನಂತರ ವಾರ್ತಾಗೋಷ್ಠಿಯಲ್ಲಿ, ಸುದ್ದಿ ಮಾದ್ಯಮಗಳ ಮುಂದೆ ಗೃಹ ಬಳಕೆಯ 9 ಅನಿಲ ಸಿಲಿಂಡರ್ ಗಳಿಗೆ ಬದಲಾಗಿ 12 ಅನಿಲ ಸಿಲಿಂಡರ್ ಗಳನ್ನು ಪ್ರತಿ ಕುಟುಂಬಕ್ಕೆ ಹಂಚಲಾಗುತ್ತದೆ ಎಂದರು. ಈ ರೀತಿಯಾಗಿ ಮತದಾರರನ್ನು ಸೆಳೆಯುವ  ತಂತ್ರ ಒಂದೆಡೆ ಮತ್ತೊಂದೆಡೆ ನಾನು. ಈ ಒಂದು ಚರ್ಚೆ ವಾದವಿವಾದ ಲೋಕಸಭಾ ಚುನಾವಣೆಯವರೆವಿಗೂ ಎಳೆದು ಕೊಂಡು ಹೋಯಿತು. ಚುನಾವಣಾ ಭವಿಷ್ಯವನ್ನು ನಿರ್ಧರಿಸುವಂತಾಯಿತು. ಸರ್ಕಾರ ರಚನೆಯಾದ ನಂತರ ಇದನ್ನೇ ಕುರಿತು ಆಲೋಚಿಸಿ, ಕೆಂಪು ಕೋಟೆಯ ಬತೇರಿ ಯಿಂದ ಜನರ ಬಳಿ ಮನವಿ ಮಾಡಿದೆ- ನನ್ನ ಪ್ರೀತಿಯ ನಾಗರಿಕರೇ ತಮ್ಮಲ್ಲಿ ಉಳ್ಳವರು ಗೃಹ ಬಳಕೆಯ ಅನಿಲ ಸಿಲಿಂಡರ್ ಸಬ್ಸಿಡಿಯನ್ನು ಬಿಟ್ಟು ಕೊಡಿ. ಇದರಿಂದ ಅಗತ್ಯವಿದ್ದವರಿಗೆ ಹಂಚ ಬಹುದು ಎಂದೆ. ನೀವು ನಂಬುತ್ತೀರೊ ಬಿಡ್ತೀರೊ ದೇಶದ ಒಂದು ಕೋಟಿ ಇಪ್ಪತ್ತು ಲಕ್ಷ ಕುಟುಂಬಗಳು ಇದನ್ನು ಸ್ವಇಚ್ಛೆಯಿಂದ ಬಿಟ್ಟು ಕೊಟ್ಟರು.  ನಮ್ಮ ಆಲೋಚನೆ 9 ಕೊಡುವುದೊ ಅಥವಾ 12 ಅನ್ನು ಕೊಡುವುದೊ ಎಂಬ ದ್ವಂದ್ವದಲ್ಲಿ ಸಿಲುಕಿತ್ತು. ಆದರೆ ಜನರ ಆಲೋಚನೆ ಹೇಗಿರುತ್ತೆ  ಅವರ ಬೇಕು ಬೇಡಗಳು ಎನು ಅನ್ನುವುದರ ಬಗ್ಗೆ ಚಿಂತನೆಯನ್ನೇ ಮಾಡಲ್ಲಿಲ್ಲ.
 
ಒಮ್ಮೆ ಡಾಕ್ಟರುಗಳ ಬಳಿ ನನ್ನ ಅಹವಾಲು ತೋಡಿಕೊಂಡೆ. ನನಗೆ ಸಹಾಯ ಮಾಡಿ..ನಿಮ್ಮ ಬಳಿ ತುಂಬಾ ಕೆಲಸ ಇರುತ್ತೆ ಅನ್ನುವುದು ಗೊತ್ತು. ಆದಾಗ್ಯೂ ತಿಂಗಳಿಗೊಂದು ದಿನ, ಪ್ರತಿ ತಿಂಗಳು 9 ರಂದು ಬಡ ಬಸುರಿ ಹೆಂಗಸರು ನಿಮ್ಮ ಬಳಿ ಬಂದಾಗ ಉಚಿತ  ಹೆರಿಗೆ ಚಿಕಿತ್ಸೆ ಮಾಡುತ್ತೀರಾ,  ಹಾಗೆಯೇ ಅವರಿಗೆ ಅಗತ್ಯವಾದ ಸುಶ್ರೂಷೆಯನ್ನು ನೀಡುತ್ತೀರಾ, ಉಚಿತ ಸಲಹೆ, ಮಾರ್ಗದರ್ಶನವನ್ನು ನೀಡ ಬಲ್ಲಿರಾ ಎಂದೆ. ನಿಮಗಿದನ್ನು ತಿಳಿದು ಸಂತೋಷವಾಗಲಿದೆ ದೇಶದ ಸಾವಿರಾರು ಪ್ರಸೂತಿ ವಿಶೇಷಜ್ಞರು ತಮ್ಮ ತಮ್ಮ ಆಸ್ಪತ್ರೆಯ ಮುಂದೆ ಪ್ರತಿ ತಿಂಗಳು 9 ರಂದು ಉಚಿತ ಹೆರಿಗೆ ಸೌಲಭ್ಯವನ್ನು ಅಗತ್ಯವುಳ್ಳವರಿಗೆ ನೀಡಲಿದ್ದೇವೆ ಎಂಬ ಫಲಕಗಳನ್ನು ಪ್ರದರ್ಶಿಸ ತೊಡಗಿದರು. ನಿಶುಲ್ಕ ಔಷಧೋಪಚಾರದ  ಸೇವೆ ಮಾಡಲು ಮುಂದೆ ಬಂದರು.
 
ಗುಜರಾತಿನಲ್ಲಿದ್ದ ಸಂದರ್ಭದಲ್ಲಿ ಭಯಂಕರವಾದ ಭೂಕಂಪ ಸಂಭವಿಸಿತು. ಆ ಸಂದರ್ಭದಲ್ಲಿ  ಇಂಜನಿಯರಿಂಗ್ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದೆ. ನನಗೊಂದು 6 ತಿಂಗಳ ಅವಕಾಶ ನೀಡಿ. ನನ್ನ ಮನವಿಗೆ ಓಗೊಟ್ಟು ಜೊತೆ ಜೊತೆಗೆ ಕೆಲಸ ಮಾಡಲು ಮುಂದೆ ಬಂದರು. ಕೊನೆಯವರೆವಿಗೂ ನನ್ನೊಂದಿಗಿದ್ದರು. ನಾನಿಂದು ಈ ದೇಶದ ಕಾನೂನು ಕಾಪಾಡುವ ವರ್ಗದವರೊಂದಿಗೆ ಅದರಲ್ಲೂ ಮುಖ್ಯವಾಗಿ ವಕೀಲ ವೃಂದದವರಲ್ಲಿ  ಮನವಿ ಮಾಡಿ ಕೊಳ್ಳುತ್ತೇನೆ ಈ “pro-bono”ವಿನ ಬಗ್ಗೆ ಸದ್ಯದಲ್ಲೆ ಒಂದು app ತರಲಿದ್ದೇವೆ, ಅದರಲ್ಲಿ ತಾವು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಿ, ಕಾನೂನು ನೆರವು ಅಗತ್ಯವಿರುವ ಬಡ ಬಗ್ಗರಿಗೆ ಇದರಿಂದ ಉಚಿತ ಕಾನೂನಿನ ನೆರವು ನೀಡಿದಂತಾಗುತ್ತದೆ. ಬಡವರಿಗೆ ಉಚಿತ ಕಾನೂನು ನೆರವು ನೀಡಲು ಸಹಕರಿಸೋಣ ಹಾಗೂ ಇದಕ್ಕೊಂದು ಆಂದೋಳನದ ರೂಪ ಕೊಡೋಣ. ಇದು ತಂತ್ರಜ್ಞಾನದ ಅವಿಷ್ಕಾರವಷ್ಟೆ. ಈ ತಂತ್ರಜ್ಞಾನದ ಆಪ್ ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿದ ತಕ್ಷಣ ಅಗತ್ಯವುಳ್ಳವನು ತಮ್ಮ ಬಳಿಗೆ ಬರುತ್ತಾನೆ ಅಥವಾ ನಮ್ಮ ಚಿಕ್ಕ-ಪುಟ್ಟ ಸಂಘಟನೆಗಳು ಇವುಗಳೊಂದಿಗೆ ಸಂಪರ್ಕ ಹೊಂದುತ್ತವೆ. ನಮ್ಮ ದೇಶದ ಬಡವರು, ವಿಧವೆಯರು, ನಿವೃತ್ತ ಅಧ್ಯಾಪಕರು ಸಾಲಿನಲ್ಲಿ ನಿಂತು ಅನಿಲ ಸಿಲೆಂಡರ್ ಗೆ ಸಿಗಬಹುದಾದ ಸಬ್ಸಿಡಿಯನ್ನು ಒಪ್ಪಿಸುವುದಾದಲ್ಲಿ, ನನ್ನ ದೇಶದ ಪ್ರಸೂತಿ ತಜ್ಞ ವೈದ್ಯರು ತಿಂಗಳಿಗೊಮ್ಮೆ ಉಚಿತ ಸೇವೆ ನೀಡ ಬಹುದಾದಲ್ಲಿ, ನನ್ನ ದೇಶದ ಯುವಕರು ತಮ್ಮ ಇಂಜನೀಯರಿಂಗ್ ಕೌಶಲ್ಯವನ್ನು ನೈಸರ್ಗಿಕ ಸಂಕಟ ಸಮಯದಲ್ಲಿ  ಸಮಾಜಕ್ಕೆ ವಿನಿಯೋಗಿಸಬಹುದಾದಲ್ಲಿ, ನನ್ನ ದೇಶದ ಐ.ಟಿ. ತಜ್ಞರು  ಆಹಾರ-ಪಾನೀಯಗಳನ್ನು ತೊರೆದು, ಒಂದೇ ಸೂರಿನಡಿ  ಶ್ರಮಿಸಬಹುದಾದಲ್ಲಿ, ದೇಶದ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸ ಬಹುದಾದಲ್ಲಿ, 42 ಸಾವಿರ ಯುವಕರು 36 ಘಂಟೆಗಳ ಕಾಲ ಅವಿರತವಾಗಿ ಶ್ರಮಿಸಿ 400 ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾದಲ್ಲಿ, ನಮ್ಮ ದೇಶದ ವಕೀಲರು ಸಹ  ಈ ತಂತ್ರಜ್ಞಾನದ ಮೂಲಕ ಬಡವರಿಗೆ ಕಾನೂನಿನ ನೆರವು ನೀಡಲು ಮುಂದೆ ಬರುತ್ತಾರೆಂಬ ವಿಶ್ವಾಸವಿದೆ. ದೇಶದ ಭವಿಷ್ಯವನ್ನು ಬದಲಾಯಿಸತ್ತಾರೆಂಬ ನಂಬಿಕೆಯಿದೆ.
 
ಈ ಒಂದು ಆಶಾಭಾವನೆಯಿಂದ ನೀವೇನು ಹೊಸ ಕಾರ್ಯವನ್ನು ಆರಂಬಿಸುತ್ತಿದ್ದೀರೋ ಅದರಲ್ಲಿ ನಿಮಗೆ ಯಶಸ್ಸು ಸಿಗಲಿ ಎಂದು ಹಾರೈಸುತ್ತೇನೆ. ಶ್ರೀ ಕನ್ವೀಲ್ಕರ್ ರವರಿಗೆ ನನ್ನ ಅಭಿನಂದನೆಗಳು ಹಾಗೆಯೆ ಚೀಫ್ ಸಾಹೇಬರಿಗೂ ನನ್ನ ಅನಂತಾನಂತ ಅಭಿನಂದನೆಗಳು. ಡಿಜಟಲ್ ಇಂಡಿಯಾದ ಹೊಸ ದಾರಿಯಲ್ಲಿ ನ್ಯಾಯಾಂಗ ವ್ಯವಸ್ಥೆಯಲ್ಲಿ ತಂತ್ರಜ್ಞಾನವನ್ನು ತರುವುದು ದೇಶ ಸೇವೆ ಮಾಡಿದಂತಯೇ ಸರಿ.
ನನ್ನ ಮಾತುಗಳನ್ನು ಆಲಿಸಿದ ತಮ್ಮಗೆಲ್ಲರಿಗೂ  ಧನ್ಯವಾದಗಳು.