Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನಾವು ಈ ವಿಶ್ವವನ್ನು ಶಾಂತಿಯ ತೋಟವನ್ನಾಗಿ ಮಾಡೋಣ: ವಿಶ್ವ ಸೂಫಿ ವೇದಿಕೆಯಲ್ಲಿ ಪ್ರಧಾನ ಮಂತ್ರಿ

ನಾವು ಈ ವಿಶ್ವವನ್ನು ಶಾಂತಿಯ ತೋಟವನ್ನಾಗಿ ಮಾಡೋಣ: ವಿಶ್ವ ಸೂಫಿ ವೇದಿಕೆಯಲ್ಲಿ ಪ್ರಧಾನ ಮಂತ್ರಿ


•ಧರ್ಮದ ಹೆಸರಿನಲ್ಲಿ ಭಯವನ್ನು ಹರಡುವುದು ಧರ್ಮವಿರೋಧಿ : ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ.

•ಭಯೋತ್ಪಾದನೆ ಮತ್ತು ಧರ್ಮದ ನಡುವಿನ ಯಾವುದೇ ಸಂಪರ್ಕವನ್ನು ನಾವು ತಿರಸ್ಕರಿಸಬೇಕು-ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ

•ವಿಶ್ವ ಸೂಫಿ ವೇದಿಕೆ ಶಾಂತಿ , ತಾಳ್ಮೆ ಮತ್ತು ಪ್ರೀತಿಯನ್ನು ಜೀವನಾದರ್ಶ ಮಾಡಿಕೊಂಡು ಅದರ ಸಂದೇಶ ಸಾರುತ್ತಿರುವವರ ಸಂಘಟನೆ.: ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ

•ಸೂಫಿಗಳಿಗೆ ದೇವರ ಸೇವೆ ಎಂದರೆ ಮಾನವಕುಲದ, ಮಾನವತೆಯ ಸೇವೆ: ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ

•ಅಲ್ಲಾ ಅವರ 99 ಹೆಸರುಗಳಲ್ಲಿ ಒಬ್ಬರೂ ಹಿಂಸೆಯ ಪರ ನಿಂತವರಲ್ಲ-ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ.

•ಸೂಫಿಸಂ ಎಂದರೆ ಶಾಂತಿ, ಸಹಬಾಳ್ವೆ, ಅನುಕಂಪ ಮತ್ತು ಸಮಾನತೆಯ ಧ್ವನಿ , ವಿಶ್ವ ಭ್ರಾತೃತ್ವದ ಕರೆ- ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ.

•ಭಯೋತ್ಪಾದನೆ ಮತ್ತು ತೀವ್ರಗಾಮಿತ್ವ ನಮ್ಮ ಕಾಲದ ಅತ್ಯಂತ ವಿನಾಶಕಾರಕ ಶಕ್ತಿಯಾಗಿರುವಾಗ ಸೂಫಿಸಂ ಸಂದೇಶ ಜಾಗತಿಕವಾಗಿ ಪ್ರಸ್ತುತ: ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ.

•ಸೂಫಿಸಂ ಸಂದೇಶ ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಮಾತ್ರ ಸೀಮಿತವಾದುದಲ್ಲ, ಅದು ’ಸಬ್ ಕಾ ಸಾತ್, ಸಬ್ ಕಾ ವಿಕಾಸ್’ ತತ್ವವನ್ನು ಒಳಗೊಂಡಿದೆ-ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ.

•ಭಯೋತ್ಪಾದನೆ ವಿರುದ್ಧ ಹೋರಾಟವೆಂದರೆ ಯಾವುದೇ ಧರ್ಮದ ವಿರುದ್ಧದ ಘರ್ಷಣೆಯಲ್ಲ- ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ.

•ಭಯೋತ್ಪಾದನೆ ವಿರುದ್ಧದ ಹೋರಾಟವನ್ನು ನಮ್ಮ ಮೌಲ್ಯಗಳ ಶಕ್ತಿ ಮತ್ತು ಧರ್ಮಗಳ ನೈಜ ಸಂದೇಶಗಳ ಮೂಲಕ ಜಯಿಸಬೇಕು-ಪ್ರಧಾನ ಮಂತ್ರಿ ನರೇಂದ್ರ ಮೋದಿ.

ನವದೆಹಲಿಯ ವಿಜ್ಞಾನ ಭವನದಲ್ಲಿ 2016 ರ ಮಾರ್ಚ್ 19 ರಂದು ಸಂಜೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ವಿಶ್ವ ಸೂಫಿ ವೇದಿಕೆಯನ್ನುದ್ದೇಶಿಸಿ ಮಾತನಾಡಿದರು. ಅಖಿಲ ಭಾರತ ಉಲೇಮಾ ಮತ್ತು ಮಶೈಕ್ ಮಂಡಳಿ ಆಯೋಜಿಸಿದ್ದ 4 ದಿನಗಳ ಈ ಕಾರ್ಯಕ್ರಮ 20 ರಾಷ್ಟ್ರಗಳ ಹಲವು ಅಂತಾರಾಷ್ಟ್ರೀಯ ಮಟ್ಟದ ಗಣ್ಯರನ್ನು ಒಗ್ಗೂಡಿಸಿತ್ತು. ಈಜಿಪ್ಟ್, ಜೋರ್ಡಾನ್, ಟರ್ಕಿ,ಯುನೈಟೆಡ್ ಕಿಂಗ್ ಡಂ,ಅಮೇರಿಕಾ, ಕೆನಡಾ, ಪಾಕಿಸ್ತಾನ, ಮತ್ತು ಇತರ ರಾಷ್ಟ್ರಗಳಿಂದ ಧಾರ್ಮಿಕ ಮುಖಂಡರು, ವಿದ್ವಾಂಸರು, ಅಕಾಡೆಮಿಕ್ ತಜ್ಞರು, ಥಿಯೋಲೋಜಿಸ್ಟರು ಭಾಗವಹಿಸಿದ್ದರು.

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಸೂಫಿಸಂನ ಶ್ರೀಮಂತ ಮತ್ತು ಪ್ರಕಾಶಮಾನವಾದ ಇತಿಹಾಸದ ಕುರಿತು ವಿಸ್ತ್ರತವಾಗಿ ಪ್ರಸ್ತಾವಿಸಿದರು. ತಾಳ್ಮೆ, ಸಹಾನುಭೂತಿಯ ಪ್ರಾಮುಖ್ಯತೆಯನ್ನು ಉಲ್ಲೇಖಿಸಿದ ಅವರು ಭಯೋತ್ಪಾದನೆ ಮತ್ತು ದ್ವೇಷದ ಸವಾಲುಗಳನ್ನು ಮಾನವತಾವಾದದ ಎಲ್ಲಾ ಶಕ್ತಿಗಳೂ ಒಗ್ಗೂಡಿ ಎದುರಿಸಬೇಕು ಎಂದರು. ಧರ್ಮ ಮತ್ತು ಭಯೋತ್ಪಾದನೆಯ ನಡುವೆ ಯಾವುದೇ ಸಂಬಂಧ ಇಲ್ಲ ಎಂಬುದನ್ನು ಖಡಾ ಖಂಡಿತವಾಗಿ ಸ್ಪಷ್ಟಪಡಿಸಿದ ಪ್ರಧಾನಿಯವರು ಧರ್ಮದ ಹೆಸರಿನಲ್ಲಿ ಭಯವನ್ನು ಹರಡುತ್ತಿರುವವರು ಧರ್ಮ ವಿರೋಧಿಗಳು ಎಂದರು. ಕಾರ್ಯಕ್ರಮದಲ್ಲಿ ಹಾಜರಿದ್ದವರು ಮತ್ತು ಪ್ರಖ್ಯಾತ ವಾಗ್ಮಿಗಳು ಪ್ರಧಾನಿಯವರ ಭಾಷಣವನ್ನು ವ್ಯಾಪಕವಾಗಿ ಪ್ರಶಂಸಿಸಿದರು.

ವಿಶ್ವ ಸೂಫಿ ವೇದಿಕೆಯನ್ನು ’ ಜೀವನವೇ ಶಾಂತಿ, ಸಹಿಷ್ಣುತೆ ಮತ್ತು ಪ್ರೀತಿಯ ಸಂದೇಶವಾಗಿರುವವರ’ ಸಂಘಟನೆ ಎಂದು ಪ್ರಧಾನ ಮಂತ್ರಿಯವರು ಬಣ್ಣಿಸಿದರು. “ಹಿಂಸೆಯ ಕರಾಳ ಛಾಯೆ ದಟ್ಟವಾಗುತ್ತಿರುವ ಸಮಯದಲ್ಲಿ, ನೀವು ಭರವಸೆಯ ಬೆಳಕು. ಬೀದಿಗಳಲ್ಲಿ ಯುವ ನಗುವಿನ ಸದ್ದನ್ನು ಬಂದೂಕುಗಳು ನಿಶಬ್ದಗೊಳಿಸುವಾಗ , ನೀವು ಸಾಂತ್ವನದ ಧ್ವನಿಗಳು” ಎಂದು ಪ್ರಧಾನಿಯವರು ನೆರೆದಿದ್ದ ಸೂಫಿ ವಿದ್ವಾಂಸರು ಮತ್ತು ಆಧ್ಯಾತ್ಮಿಕ ನಾಯಕರನ್ನುದ್ದೇಶಿಸಿ ನುಡಿದರು.

“ಸೂಫಿ ತತ್ವ ಮಾನವ ಇತಿಹಾಸದ ಒಂದು ಪಾಠ-ಮುಕ್ತತೆ ಮತ್ತು ಚರ್ಚೆ, ಪರಸ್ಪರ ಹೊಂದಾಣಿಕೆ ,ಸಹಬಾಳ್ವೆ ಮತ್ತು ವೈವಿಧ್ಯತೆಯ ಬಗ್ಗೆ ಗೌರವ, ಮಾನವತೆಯ ಪ್ರಚಾರ, ರಾಷ್ಟ್ರದ ಪ್ರಗತಿ ಮತ್ತು ವಿಶ್ವದ ಸಮೃದ್ಧಿಯನ್ನು ಅದು ಒಳಗೊಳ್ಳುತ್ತದೆ ಎಂದು ಪ್ರಧಾನಿಯವರು ಹೇಳಿದರು.

ಮುಂದುವರಿದು ಮಾತನಾಡಿದ ಪ್ರಧಾನಿಯವರು ಸೂಫಿಗಳಿಗೆ ಮಾನವತೆಯ ಸೇವೆಯೇ ದೇವರ ಸೇವೆಯಾಗಿರುವುದನ್ನು ಪ್ರಸ್ತಾವಿಸಿ “ಖ್ವಾಜಾ ಮೊಇನುದ್ದೀನ್ ಚಿಸ್ತಿ ಅವರು ಎಲ್ಲಾ ಪೂಜೆ , ಪ್ರಾರ್ಥನೆಗಳಿಗಿಂತ ದುರ್ಬಲರಿಗೆ, ವಿನೀತರಿಗೆ ಪರಿಹಾರ ಒದಗಿಸುವುದೇ ಆ ಸರ್ವಶಕ್ತ ದೇವರನ್ನು ಸಂಪ್ರೀತಿಗೊಳಿಸುವ ಪೂಜೆ” ಎಂದು ಹೇಳಿರುವುದನ್ನು ಉದಾಹರಿಸಿದರು.

ಹಿಂದೂ ಸಂಪ್ರದಾಯದಲ್ಲಿ ಭಕ್ತಿ ಸಂತರು ಪ್ರತಿಪಾದಿಸಿದ ಆತ್ಮದ ಜತೆ ಸೌಹಾರ್ದತೆ, ಸೂಫಿ ತತ್ವದ ಸಂದೇಶವಾಗಿದೆ. ದೊಡ್ಡ ಸಮುದ್ರದ ಮಧ್ಯಭಾಗಕ್ಕೆ ಎಲ್ಲ ಕೋನಗಳ ಬೆಟ್ಟ ಗುಡ್ಡಗಳಿಂದ ಪ್ರವಾಹ ಹರಿದು ಬಂದು ಸೇರುವಂತೆ ಈ ತತ್ವಗಳು ಸಮ್ಮಿಳಿತವಾಗಿವೆ ಎಂದರು.

ಅಲ್ಲಾ ಅವರ 99 ಹೆಸರುಗಳ ಬಗ್ಗೆ ಯೋಚಿಸುವಾಗ ಯಾರೊಬ್ಬರೂ ಬಲ ಪ್ರಯೋಗ ಮತ್ತು ಹಿಂಸೆಯ ಪರ ನಿಂತವರಲ್ಲ ಎಂಬುದು ನನ್ನ ಸ್ಮರಣೆಗೆ ಬರುತ್ತದೆ. ಮೊದಲ ಎರಡು ಹೆಸರುಗಳು ಸಹಾನುಭೂತಿ ಮತ್ತು ದಯೆಯನ್ನು ಸೂಚಿಸುತ್ತವೆ.’ ಅಲ್ಲಾ’ ಎಂದರೆ ” ರಹಮಾನ್ ಮತ್ತು ರಹೀಂ” ಎಂದು ಪ್ರಧಾನ ಮಂತ್ರಿಯವರು ಹೇಳಿದರು. ಸೂಫಿಸಂ ಶಾಂತಿಯ, ಸಹಬಾಳ್ವೆಯ, ಅನುಕಂಪೆಯ ಮತ್ತು ಸಮಾನತೆಯ ದ್ವನಿ . ಅದು ವಿಶ್ವ ಭ್ರಾತೃತ್ವದ ಕರೆ ಎಂದೂ ಪ್ರಧಾನಿ ಹೇಳಿದರು.

ವಿಶ್ವ ಸಾಂಸ್ಕೃತಿಕ ನೇಯ್ಗೆಗೆ ಭಾರತದ ದೊಡ್ಡ ಕೊಡುಗೆಯಾದ ಎಲ್ಲರನ್ನೂ ಒಳಗೊಳ್ಳುವ ಸಂಸ್ಕೃತಿಯನ್ನು ಬಲಪಡಿಸಲು ಸೂಫಿಸಂ ನೀಡಿದ ಕೊಡುಗೆಯನ್ನು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿವರಿಸಿದರು.ಹೋರಾಟಗಳು, ತ್ಯಾಗ, ಶೌರ್ಯ, ಜ್ಞಾನ, ಕೌಶಲ್ಯ, ಕಲೆ ಮತ್ತು ನಮ್ಮ ವಿವಿಧತೆಯಲ್ಲಿ ಏಕತೆ ಎಂಬಂತಿರುವ ಅಖಂಡ ದೇಶದ ಪ್ರತೀ ಪಂಥದ ಪ್ರತೀ ಸದಸ್ಯರ ಹೆಮ್ಮೆಯ ಬಲದಿಂದ ಭಾರತ ಮುಂದುವರಿಯುತ್ತಿದೆ ಎಂದವರು ಹೇಳಿದರು.

ಜಾಗತಿಕ ಸವಾಲಾಗಿರುವ ಭಯೋತ್ಪಾದನೆಯ ಕುರಿತಂತೆ ಪ್ರಸ್ತಾವಿಸಿದ ಅವರು “ಸೂಫಿಸಂನ ಅಧ್ಯಾತ್ಮಿಕ ಪ್ರೀತಿ ಇರುವಾಗ ಭಯೋತ್ಪಾದನೆಯ ಹಿಂಸಾ ಬಲ ಗಡಿದಾಟಿ ಪ್ರಸರಿಸಲಾರದು. ಅಮೀರ್ ಖುಸ್ರೋ ಹೇಳಿದಂತೆ “ಈ ಭಾಗ ಭೂಮಿಯ ಮೇಲಿನ ಸ್ವರ್ಗ”. ಭಯೋತ್ಪಾದನೆ ಮತ್ತು ತೀವ್ರಗಾಮಿತ್ವ ನಮ್ಮ ಕಾಲದ ಅತ್ಯಂತ ಹಾನಿಕಾರಕ ಶಕ್ತಿಗಳಾಗಿರುವಾಗ ಸೂಫಿಸಂನ ಸಂದೇಶಕ್ಕೆ ಜಾಗತಿಕ ಮಹತ್ವ ಇದೆ ಎಂದರು.

ವಿಶ್ವದಾದ್ಯಂತ ಭಯೋತ್ಪಾದಕರು ಹರಡುತ್ತಿರುವ ಭಯದ ಕುರಿತು ಪ್ರಸ್ತಾವಿಸಿದ ಪ್ರಧಾನಿಯವರು ಭಯೋತ್ಪಾದನೆಯ ಪರಿಣಾಮವನ್ನು ಅಂಕಿ ಅಂಶಗಳಿಂದ ಮಾತ್ರವೇ ಅಳೆಯಬಾರದು. ಅಲ್ಲಿ ರಾಜ್ಯದ ಆಡಳಿತದ ನೀತಿ ಮತ್ತು ವಿನ್ಯಾಸವನ್ನು ರೂಪಿಸುವಲ್ಲಿ ಶಕ್ತಿಗಳು ಮತ್ತು ಗುಂಪುಗಳು ಪ್ರಮುಖ ಸಾಧನಗಳಾಗುತ್ತವೆ. ನಂಬಿಕೆಯನ್ನು ಬಳಸಿಕೊಂಡು ದಾರಿತಪ್ಪಿಸುವುದಕ್ಕಾಗಿಯೂ ಅಲ್ಲಿ ನೇಮಕಾತಿಗಳು ನಡೆಯುತ್ತವೆ. ಎಂದು ಪ್ರಧಾನಿಯವರು ನುಡಿದರು.

ಭಯೋತ್ಪಾದನೆ ವಿರುದ್ಧ ಮನುಕುಲ ನಡೆಸಬೇಕಾದ ಹೋರಾಟ ಕುರಿತಂತೆ ವಿವರಿಸಿದ ಪ್ರಧಾನಿಯವರು “ ಇದು ಯಾವುದೇ ಧರ್ಮದ ವಿರುದ್ದ ಘರ್ಷಣೆ ಅಲ್ಲ. ಮತ್ತು ಅದು ಹಾಗೆ ಆಗಲಾರದು. ಇದು ಮಾನವತೆಯ ಮೌಲ್ಯಗಳು ಮತ್ತು ಅಮಾನವೀಯತೆಯ ಶಕ್ತಿಗಳ ನಡುವಿನ ಹೋರಾಟ” ಎಂದರಲ್ಲದೆ ಈ ಹೋರಾಟವನ್ನು ನಮ್ಮ ಮೌಲ್ಯಗಳ ಶಕ್ತಿಯಿಂದ ಮತ್ತು ಧರ್ಮದ ನೈಜ ಸಂದೇಶದ ಬಲದಿಂದ ಗೆಲ್ಲಬೇಕು ಎಂದರು.

ಸೂಫಿಸಂನ ಸಂದೇಶ ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ಸೀಮಿತವಾದುದಲ್ಲ ’ಸಬ್ ಕಾ ಸಾತ್, ಸಬ್ ಕಾ ವಿಕಾಸ್’ ಅನ್ನು ಒಳಗೊಳ್ಳುತ್ತದೆ ಎಂದೂ ಹೇಳಿದರು.

ತಮ್ಮ ಭಾಷಣದಲ್ಲಿ ಪವಿತ್ರ ಗ್ರಂಥಗಳು ಮತ್ತು ಪ್ರಮುಖ ದಾರ್ಶನಿಕರನ್ನು ವ್ಯಾಪಕವಾಗಿ ಪ್ರಸ್ತಾವಿಸಿದ ಪ್ರಧಾನ ಮಂತ್ರಿಗಳು “ಹಿಂಸಾ ಶಕ್ತಿಗಳನ್ನು ನಮ್ಮ ಪ್ರೀತಿಯ ದಯೆಯ ಮೂಲಕ ಮತ್ತು ವಿಶ್ವಾತ್ಮಕವಾದ ಮಾನವ ಮೌಲ್ಯಗಳ ಮೂಲಕ ” ಎದುರಿಸಬೇಕು ಎಂದೂ ಕರೆ ನೀಡಿದರು.

ಆರಂಭದಲ್ಲಿ ಪ್ರಸ್ತಾವಿಕವಾಗಿ ಮಾತನಾಡಿದ ಅಖಿಲ ಭಾರತ ಉಲೇಮಾ ಮತ್ತು ಮಶೈಕ್ ಮಂಡಳಿಯ ಅಧ್ಯಕ್ಷರಾದ ಹಜರತ್ ಸೈಯದ್ ಮಹಮ್ಮದ್ ಅಶ್ರಫ಼್, ಭಾರತದ ಮುಸ್ಲಿಮರು ಈ ದೇಶದಲ್ಲಿ ತಮ್ಮ ಭವಿಷ್ಯದ ಬಗ್ಗೆ ದೃಢ ವಿಶ್ವಾಸ ಹೊಂದಿದ್ದಾರೆ, ಮತ್ತು ದೇಶದ ಏಕತೆ, ಸಮಗ್ರತೆ ಹಾಗು ಭೌಗೋಲಿಕ ಸಾರ್ವಭೌಮತೆಯನ್ನು ಎತ್ತಿಹಿಡಿಯಲು ಬದ್ಧರಾಗಿದ್ದಾರೆ ಎಂದರು. ಸಚಿವರಾದ ನಜ್ಮಾ ಹೆಪ್ತುಲ್ಲಾ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.