Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ “ರಿಯೋಗಾಗಿ ಓಟ” ಕ್ಕೆ ಹಸಿರು ನಿಶಾನೆ ತೋರಿಸಿದ ನಂತರ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ “ರಿಯೋಗಾಗಿ ಓಟ” ಕ್ಕೆ ಹಸಿರು ನಿಶಾನೆ ತೋರಿಸಿದ ನಂತರ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ನವದೆಹಲಿಯ ಮೇಜರ್ ಧ್ಯಾನ್ ಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ “ರಿಯೋಗಾಗಿ ಓಟ” ಕ್ಕೆ ಹಸಿರು ನಿಶಾನೆ ತೋರಿಸಿದ ನಂತರ ಪ್ರಧಾನಮಂತ್ರಿ ಶ್ರೀ ನರೇಂದ್ರಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ


ನಾನು ಮೊಟ್ಟಮೊದಲಿಗೆ, ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪಾಲ್ಗೊಂಡಿರುವ ಯುವಜನರಲ್ಲಿ ಒಂದು ಮನವಿ ಮಾಡುತ್ತೇನೆ, ಈಗಾಗಲೇ ರಿಯೋ ತಲುಪಿರುವ 119 ಕ್ರೀಡಾಪಟುಗಳ ಉತ್ಸಾಹ ವರ್ಧಿಸಲು ನೀವೆಲ್ಲರು ನನ್ನೊಂದಿಗೆ ಒಂದೇ ಧ್ವನಿಯಲ್ಲಿ ಭಾರತ ಮಾತಾ ಕಿ ಜಯ್, ಭಾರತ ಮಾತಾ ಕಿ ಜಯ್, ಭಾರತ್ ಮಾತಾ ಕಿ ಜಯ್ ಎಂದು ಹೇಳಿ.

ಈ 119 ಕ್ರೀಡಾಪಟುಗಳು ತಮ್ಮ ಕಠಿಣ ತಪಸ್ಸು ಮತ್ತು ಪರಿಶ್ರಮದಿಂದ ಭಾರತ ಮಾತೆಗೆ ಜಯಕಾರ ಮಾಡಲು ರಿಯೋ ತಲುಪಿದ್ದಾರೆ. ಎಲ್ಲ ಸವಾಲುಗಳನ್ನು ದಾಟಿ ಹೊರಟಿದ್ದಾರೆ. ಗೆಲ್ಲಲೇಬೇಕೆಂಬ ಸಂಕಲ್ಪವನ್ನಿಟ್ಟುಕೊಂಡು ಹೊರಟಿದ್ದಾರೆ. ಆ ಜಯವನ್ನು ತಮ್ಮ ವೈಯಕ್ತಿಕ ಕೀರ್ತಿಗಾಗಿ ಅಲ್ಲದೇ, ದೇಶದ 125 ಕೋಟಿ ಜನರ ಸಂತೋಷ, ಪ್ರತಿಷ್ಠೆಗಾಗಿ ಮೀಸಲಿಟ್ಟಿದ್ದಾರೆ.

ಹೆಚ್ಚಿನ ಪಂದ್ಯಗಳ ಮೌಲ್ಯಮಾಪನ ಸೋಲು ಮತ್ತು ಗೆಲುವಿಗಷ್ಟೇ ಸೀಮಿತವಾಗಿರುತ್ತದೆ. ಪಂದ್ಯಗಳ ಮೌಲ್ಯಮಾಪನವನ್ನು ಕೇವಲ ಸೋಲು ಗೆಲುವಿನಂದಷ್ಟೇ ಅಳೆಯಲು ಸಾಧ್ಯವಿಲ್ಲ. ಕ್ರೀಡಾಪಟುಗಳು ತಮ್ಮ ಸಂಪೂರ್ಣ ಕೌಶಲ್ಯ, ಶಕ್ತಿ ಮತ್ತು ಸಾಮರ್ಥ್ಯದಿಂದ ದೇಶದ ಗೌರವ ಪ್ರತಿಷ್ಠೆಗಾಗಿ ಹೋರಾಡುತ್ತಾರೆ. ಇದು ಅವರಿಗೆ ದೊಡ್ಡ ಸವಾಲಾಗಿರುತ್ತದೆ.

ಈ 119 ಜನ ಕ್ರೀಡಾಪಟುಗಳು, ದೇಶದ 125 ಕೋಟಿ ಜನರ ಶುಭಾಶಯಗಳೊಂದಿಗೆ ದೇಶದ ಪ್ರತಿಷ್ಠೆಯನ್ನು ಹೆಚ್ಚಿಸಲು ತಮ್ಮೆಲ್ಲ ಶಕ್ತಿ ಸಾಮರ್ಥ್ಯದಿಂದ ಹೋರಾಡುತ್ತಾರೆ ಎಂಬ ವಿಶ್ವಾಸ ನನಗಿದೆ. ಯಾವಾಗಲಾದರೂ ನಮ್ಮ ಕ್ರೀಡಾ ತಂಡ ವಿದೇಶಗಳಿಗೆ ಹೋದಾಗ ಕ್ರೀಡಾಂಗಣದಲ್ಲಿ ಅವರಿಗೆ ಕೇವಲ ದೇಶ ಮಾತ್ರ ಕಾಣುವುದಿಲ್ಲ, ನಮ್ಮ ಕ್ರೀಡಾಪಟುಗಳು ಸಂಪೂರ್ಣ ಒಲಂಪಿಕ್ ಅವಧಿಯಲ್ಲಿ ಅವರ ಮಾತುಕತೆ ಮತ್ತು ನಡವಳಿಕೆಯಿಂದ ಕೇವಲ ಕ್ರೀಡೆಯನ್ನಷ್ಟೇ ಅಲ್ಲದೇ ಸಂಪೂರ್ಣ ವಿಶ್ವದ ಹೃದಯವನ್ನು ಗೆಲ್ಲುವುದರಲ್ಲಿ ಸಫಲರಾಗುತ್ತಾರೆ ಎಂಬ ವಿಶ್ವಾಸ ನನಗಿದೆ. ಅವರುಗಳು ತಮ್ಮ ನಡವಳಿಕೆಯಿಂದ ವ್ಯವಹಾರದಿಂದ ಭಾರತದ ಮಹಾನ್ ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಲಿದ್ದಾರೆ.

ನಮ್ಮ ಕ್ರೀಡಾಪಟುಗಳು ರಿಯೋನಲ್ಲಿ ಏನು ಮಾಡಬಹುದು ಎಂಬುದರ ಬಗ್ಗೆ ನಾವು ಬಹಳ ಕುತೂಹಲದಿಂದ ಕಾಯುತ್ತಿದ್ದೇವೆ. ಒಂದು ಶತಮಾನಕ್ಕೂ ಅಧಿಕ ಕಾಲದಿಂದ ಒಲಂಪಿಕ್ ಕ್ರೀಡೆಗಳೊಂದಿಗೆ ಭಾರತ ಬೆಸೆದುಕೊಂಡಿದೆ. ನೂರಕ್ಕೂ ಹೆಚ್ಚು ವರ್ಷದಿಂದ ಒಲಂಪಿಕ್ ಕ್ರೀಡೆಯಲ್ಲಿ ನಾವು ಭಾಗವಹಿಸಿದ್ದೇವೆ. ಇದರಲ್ಲಿ ಭಾಗವಹಿಸುವ ಅವಕಾಶ ನಮ್ಮ ಕೆಲವೇ ಆಟಗಾರರಿಗೆ ದೊರೆತಿದೆ. ಸುಮಾರು ನೂರು ವರ್ಷಗಳಿಗೂ ಅಧಿಕ ಸಮಯದ ನಂತರ ಮೊಟ್ಟ ಮೊದಲ ಬಾರಿಗೆ 119 ಕ್ರೀಡಾಪಟುಗಳ ಒಂದು ದೊಡ್ಡ ತಂಡ ರಿಯೋ ತಲುಪಲು ಯಶಸ್ವಿಯಾಗಿದ್ದಾರೆ.

2020ರ ಒಲಂಪಿಕ್ ಟೋಕಿಯೋದಲ್ಲಿ ಆಯೋಜನೆಯಾಗಿದೆ. ಮುಂದಿನ ಟೋಕಿಯೋ ಒಲಂಪಿಕ್ ನಲ್ಲಿ ಕೇವಲ ತಮ್ಮ ರಾಜ್ಯದಿಂದ ಮಾತ್ರವಲ್ಲ, ತಮ್ಮ ಪ್ರತಿ ಜಿಲ್ಲೆಯಿಂದಲೂ ಒಬ್ಬ ಪ್ರತಿಭಾನ್ವಿತ ಕ್ರೀಡಾಪಟು ಟೋಕಿಯೋ ತಲುಪುವ ಸಂಕಲ್ಪ ಮಾಡುವಂತೆ ನಾನು ದೇಶದ ಯುವಜನರಲ್ಲಿ ಮತ್ತು ದೇಶದ 600ಕ್ಕೂ ಹೆಚ್ಚು ಜಿಲ್ಲೆಗಳಿಗೆ ಮನವಿ ಮಾಡುತ್ತೇನೆ. ಈ ಬಾರಿ 119 ಕ್ರೀಡಾಪಟುಗಳು ತೆರಳಿದ್ದಾರೆ, ಮುಂದಿನ ಬಾರಿ 200ಕ್ಕೂ ಹೆಚ್ಚು ಕ್ರೀಡಾಪಟುಗಳು ಒಲಂಪಿಕ್ ನಲ್ಲಿ ಭಾಗವಹಿಸುವಂತೆ ಮಾಡುವ ಸಂಕಲ್ಪವನ್ನು ನಾವಿಂದು ಮಾಡಬಹುದಲ್ಲವೇ?

ಯಾವ ಕ್ರೀಡೆಗಳಲ್ಲಿ ನಮಗೆ ಯಾವುದೇ ಸಂಬಂಧವಿಲ್ಲವೋ, ಈ ಮೊದಲು ನಾವು ಯಾವ ಕ್ರೀಡೆಗಳನ್ನು ಆಡೇ ಇಲ್ಲವೋ ಅಂತಹ ಹೊಸ ಕ್ರೀಡೆಗಳಲ್ಲಿ ಕೂಡಾ ಭಾರತದ ಯುವ ಕ್ರೀಡಾಪಟುಗಳನ್ನು ಸಿದ್ಧ ಮಾಡುವ ಕಾರ್ಯವನ್ನು ನಾವು ಇಂದಿನಿಂದಲೇ ಪ್ರಾರಂಭಿಸಬಹುದಲ್ಲವೇ? ಭಾರತದ ಕ್ರೀಡಾಪಟುಗಳಲ್ಲಿ ಸಾಮರ್ಥ್ಯವಿದೆ, ಪ್ರತಿಭೆ ಇದೆ, ಸಾಧಿಸುವ ಸಂಕಲ್ಪವಿದೆ, ಈ ಬಾರಿ ನಮಗೆ ಹೆಚ್ಚು ಸಮಯ ದೊರಕಲಿಲ್ಲ. ನಮ್ಮ ಸರ್ಕಾರ ಬಂದು ಎರಡು ವರ್ಷಗಳಾಗಿವೆ. ನಾವು ಅಧಿಕಾರಕ್ಕೆ ಬರುತ್ತಿದ್ದಂತೆ ಕ್ರೀಡೆಗೆ ಸಂಬಂಧಿಸಿದ ಎಲ್ಲಾ ಇಲಾಖೆಗಳನ್ನು ಒಂದುಗೂಡಿಸಿದ್ದೇವೆ, ಕ್ರೀಡೆಯ ಬಗ್ಗೆ ಎಲ್ಲರನ್ನೂ ಜಾಗರೂಕರನ್ನಾಗಿಸುವ, ಸಂವೇದನಶೀಲರನ್ನಾಗಿಸುವ, ಸಕ್ರಿಯರನ್ನಾಗಿ ಮಾಡುವ ಹೊಸ ಪ್ರಯತ್ನಗಳನ್ನು ಮಾಡಿದ್ದೇವೆ. ಮೊದಲಿಗೆ ಹೋಲಿಸಿದಲ್ಲಿ ಅತಿ ಹೆಚ್ಚು ಬದಲಾವಣೆ ತರುವಲ್ಲಿ ಯಶಸ್ವಿಯೂ ಕೂಡಾ ಆಗಿದ್ದೇವೆ. ನನ್ನ ದೇಶದ ಯುವಜನತೆ, ಭಾರತದ ಗೌರವ ಪ್ರತಿಷ್ಠೆಯ ಬಗ್ಗೆ ಚಿಂತಿಸುವ ಯುವ ಜನತೆ ಬದಲಾವಣೆಯನ್ನು ತಂದಿದ್ದಾರೆ. ನಾವು ಟೋಕಿಯೋಗಾಗಿ ಹೇಗೆ ತಯಾರಾಗಿದ್ದೇವೆ ಎಂಬುದು ತಮಗೆ ಈ ಬದಲಾವಣೆಯಿಂದ ಅರಿವಾಗುತ್ತಿದೆ.

ಈ ಮೊದಲು ನಮ್ಮ ಕ್ರೀಡಾಪಟುಗಳು ಪ್ರಪಂಚದ ಯಾವುದೇ ದೇಶಕ್ಕೆ ಕ್ರೀಡೆಗಾಗಿ, ಒಲಂಪಿಕ್ ಗಾಗಿ ತೆರಳುವಂತಹ ಸಮಯದಲ್ಲಿ ಕ್ರೀಡಾಸ್ಥಳಕ್ಕೆ ಎರಡು ದಿನ ಮೊದಲೇ ತಲುಪಬೇಕೆಂಬ ನಿಯಮವಿತ್ತು. ವಿಮಾನ ಪ್ರಯಾಣದಿಂದಾದ ದಣಿವು, ವಾತಾವರಣದ ಬದಲಾವಣೆ… ಎರಡು ದಿನಗಳಲ್ಲಿ ಆ ಕ್ರೀಡಾಪಟು ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಕ್ಕೆ ಆಗುತ್ತಿರಲಿಲ್ಲ, ತಕ್ಷಣದಲ್ಲಿ ಅವರಿಗೆ ಕ್ರೀಡಾಂಗಣಕ್ಕೆ ತೆರಳಬೇಕಾದ ಪರಿಸ್ಥಿತಿ ಇತ್ತು. ಈ ಬಾರಿ ನಾವು 15 ದಿನ ಮೊದಲು ರಿಯೋ ತಲುಪುವಂತೆ ವ್ಯವಸ್ಥೆ ಮಾಡಿದ್ದೇವೆ. ಈ ಮೂಲಕ ಅವರು ಅಲ್ಲಿನ ಪರಿಸರ, ಅಲ್ಲಿನ ಮೈದಾನಗಳು ಮತ್ತು ಅಲ್ಲಿನ ವಾತಾವರಣದ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಅದಕ್ಕೆ ಹೊಂದಿಕೊಳ್ಳಬೇಕೆಂಬುದು ಇದರ ಉದ್ದೇಶ.

ನನ್ನ ದೇಶದ ಪ್ರೀತಿಯ ಸಹೋದರ ಸಹೋದರಿಯರೇ, ಕ್ರೀಡಾಪಟುಗಳು ಕಷ್ಟಪಡಲು ಸಿದ್ಧರಿದ್ದಾರೆ. ಆದರೆ ಅವರಿಗೆ ಕೆಲವು ಸೌಕರ್ಯಗಳ ಅವಶ್ಯಕತೆ ಇದೆ. 20-25 ದಿನಗಳ ಕಾಲ ಇಲ್ಲಿ ಇರುತ್ತೇವೆ, ತಿಂಗಳು ಕಾಲ ಇರುತ್ತೇವೆ, ಎಲ್ಲಿಯಾದರೂ ತನ್ನ ದೇಶದ ಆಹಾರ ದೊರಕಬಹುದಾ ಎಂದು ಅವರು ಯೋಚಿಸುತ್ತಾರೆ. ಕ್ರೀಡೆಗಾಗಿ ತೆರಳುವ ನಮ್ಮ ದೇಶದ ಕ್ರೀಡಾಪಟುಗಳಿಗೆ ಆ ದೇಶದ ಆಹಾರ ಸೇವಿಸಬೇಕಾಗುತ್ತಿತ್ತು. ಅವರಿಗೆ ಈ ರೀತಿಯ ಚಿಕ್ಕ ಪುಟ್ಟ ಅನಾನುಕೂಲಗಳು ಆಗಬಾರದೆಂಬ ದೃಷ್ಟಿಯಿಂದ ಈ ಬಾರಿ ನಾವು ವಿಶೇಷ ಹಣಕಾಸು ವ್ಯವಸ್ಥೆ ಮಾಡಿದ್ದೇವೆ. ಭಾರತೀಯ ಕ್ರೀಡಾಪಟುಗಳಿಗೆ ತಮ್ಮ ಇಷ್ಟಕ್ಕೆ ತಕ್ಕಂತೆ, ಅವರು ಆಡುವ ಕ್ರೀಡೆಗಳಿಗೆ ಅನುಕೂಲವಾಗುವಂತೆ ಆಹಾರ ನೀಡುವ ಸೌಲಭ್ಯವನ್ನು ಭಾರತ ಸರ್ಕಾರ ಒದಗಿಸಿಕೊಟ್ಟಿದೆ.

ಒಲಂಪಿಕ್ ಕ್ರೀಡಾಕೂಟಗಳು ಮುಕ್ತಾಯವಾದ ನಂತರ ನಮ್ಮ ಮಾಧ್ಯಮಗಳ ಕ್ರೀಡಾಪುಟಗಳಲ್ಲಿ ಬಹಳಷ್ಟು ಟೀಕೆಗಳು ವ್ಯಕ್ತವಾಗುವುದನ್ನು ಕಂಡಾಗ ತಮಗೆ ಆಶ್ಚರ್ಯವಾಗಬಹುದು. ಸರಿ ಸುಮಾರು 15 ದಿನ, ತಿಂಗಳುಗಳ ಕಾಲ ಈ ರೀತಿಯ ಕಾಲೆಳೆಯುವ ಕಾರ್ಯ ನಡೆಯುತ್ತದೆ. ತಿಂಗಳ ನಂತರ ಎಲ್ಲವನ್ನು ಮರೆತುಬಿಡುತ್ತಾರೆ. ಮತ್ತೆ ನಾಲ್ಕು ವರ್ಷದ ನಂತರ ಮುಂದಿನ ಒಲಂಪಿಕ್ ಪ್ರಾರಂಭವಾದಾಗ ಹಿಂದಿನ ಬಾರಿ ಏನೇನಾಯಿತು ಎಂಬುದನ್ನು ನೆನಪು ಮಾಡಿಕೊಳ್ಳುತ್ತಾರೆ. ಆದರೆ ನಾವು ಈ ಬಾರಿ ಕಳೆದ ಒಲಂಪಿಕ್ ನಲ್ಲಿ ಏನೇನು ಟೀಕೆಗಳು ವ್ಯಕ್ತವಾಗಿತ್ತು ಎಂಬುದರ ಬಗ್ಗೆ ಎರಡು ವರ್ಷಗಳ ಮೊದಲಿನಿಂದಲೇ ಅಧ್ಯಯನ ನಡೆಸಲು ಪ್ರಾರಂಭಿಸಿದ್ದೇವೆ. ಸರ್ಕಾರ ರಚನೆಯಾದ ಕೂಡಲೇ ಆ ಕೊರತೆಗಳನ್ನು ದೂರ ಮಾಡುವುದಕ್ಕಾಗಿ ಒಂದೊಂದೆ ಹೆಜ್ಜೆಯನ್ನು ಇಡಲು ಪ್ರಾರಂಭಿಸಿದೆವು. ನಾವು ಆ ಟೀಕೆಗಳನ್ನು ಅವಕಾಶಗಳನ್ನಾಗಿ ಬದಲಾಯಿಸಿ ಅದರ ಉಪಯೋಗವನ್ನು ಪಡೆದೆವು. ಈ ಮೊದಲು ಒಲಂಪಿಕ್ ಕ್ರೀಡಾಕೂಟಕ್ಕೆ ಕ್ರೀಡಾಪಟುಗಳ ಜತೆ ತೆರಳುವ ಅಧಿಕಾರಿಗಳಿಗೆ ದಿನಭತ್ಯೆಯಾಗಿ 100 ಡಾಲರ್ ಗಳು ದೊರೆಯುತ್ತಿತ್ತು. ಆದರೆ ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟು ಆಡುವ ಕ್ರೀಡಾಪಟುಗಳಿಗೆ ಕೇವಲ 50 ಡಾಲರ್ ದೊರೆಯುತ್ತಿದೆ. ನಾವು ಅಧಿಕಾರಕ್ಕೆ ಬಂದ ನಂತರ ಈ ಭೇದಭಾವ ಯಾಕೆಂದು ಯೋಚಿಸಿದೆವು. ಅಧಿಕಾರಿಗಳಿಗೆ 100 ಡಾಲರ್, ಕ್ರೀಡಾಪಟುಗಳಿಗೆ 50 ಡಾಲರ್, ಈ ಭೇದಭಾವವೇಕೆ? ಕ್ರೀಡಾಕೂಟಕ್ಕೆ ತೆರಳುವ ಎಲ್ಲರಿಗೂ ದಿನಭತ್ಯೆಯಾಗಿ 100 ಡಾಲರ್ ನೀಡಬೇಕೆಂಬ ಬಗ್ಗೆ ನಿರ್ಧರಿಸಿದೆವು.

ನಮ್ಮಲ್ಲಿ ಪ್ರತಿಭೆ ಇದೆ, ಆದರೆ, ಅಂತಾರಾಷ್ಟ್ರೀಯ ಕ್ರೀಡೆಗಳಿಗೆ ಬೇಕಾದ ಸಾಧನ ಸಲಕರಣೆಗಳು, ನಿಯಮಗಳು, ಪದ್ಧತಿಗಳ ಬಗ್ಗೆ ನಮ್ಮ ಕ್ರೀಡಾಪಟುಗಳಿಗೆ ಅರಿವಿರುವುದಿಲ್ಲ. ಇದಕ್ಕಾಗಿ ಜಾಗತಿಕ ಮಟ್ಟದ ಒಂದು ಮಾನ್ಯತೆಯ ಅವಶ್ಯಕತೆ ಇದೆ. ಆದುದರಿಂದ ಕ್ರೀಡಾಕೂಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ, ನೀವು ಪ್ರಪಂಚದ ಯಾವ ಭಾಗಕ್ಕೆ ತರಬೇತಿ ಪಡೆಯಲು ಹೋಗ ಬಯಸುತ್ತೀರಾ? ತಾವು ಯಾರ ಬಳಿ ತರಬೇತಿ ಪಡೆಯಲು ಇಚ್ಚಿಸುತ್ತೀರ? ಯಾವ ದೇಶ, ಯಾವ ರಾಜ್ಯ, ಯಾವ ಕ್ರೀಡಾಂಗಣ, ತಮ್ಮ ತರಬೇತಿದಾರರು ಯಾರಾಗಿರಬೇಕು ತಾವು ನಿಶ್ಚಯಿಸಿ ಎಂದು ತಿಳಿಸಲಾಯಿತು. ಮೊಟ್ಟ ಮೊದಲ ಬಾರಿಗೆ ನಮ್ಮ ಕ್ರೀಡಾಪಟುಗಳು ತಮಗೆ ಇಷ್ಟವಾದ ಅಂತಾರಾಷ್ಟ್ರೀಯ ತರಬೇತಿದಾರರನ್ನು ಆಯ್ಕೆ ಮಾಡಿಕೊಂಡರು. ತಮಗೆ ಇಷ್ಟವಾದ ದೇಶವನ್ನು ಆಯ್ಕೆ ಮಾಡಿಕೊಂಡರು, ತಮಗೆ ಅನುಕೂಲವಾದ ಮೈದಾನವನ್ನು ಆಯ್ದುಕೊಂಡರು. ಭಾರತ ಸರ್ಕಾರವು ಪ್ರತಿಯೊಬ್ಬ ಕ್ರೀಡಾಪಟುವಿಗಾಗಿ 30 ಲಕ್ಷದಿಂದ ಒಂದೂವರೆ ಕೋಟಿ ರೂಪಾಯಿಯಷ್ಟು ವೆಚ್ಚ ಮಾಡಿದೆ.

ಈ ಸಮಾರಂಭ ಜಗತ್ತಿನಾದ್ಯಂತ ಸೋದರತ್ವದ ಸಂದೇಶವನ್ನು ನೀಡುತ್ತದೆ ಎಂಬ ವಿಶ್ವಾಸ ನನಗಿದೆ. ಈ ಕಾರ್ಯಕ್ರಮವು ಯಾವುದೇ ವಿಘ್ನವಿಲ್ಲದೆ ಮುಕ್ತಾಯಗೊಳ್ಳಲಿ, ಆತಿಥೇಯ ದೇಶದ ಗೌರವ, ಪ್ರತಿಷ್ಠೆಗಳು ವೃದ್ಧಿಯಾಗಲಿ ಎಂದು ನಾನು ಶುಭಾಶಯಗಳನ್ನು ಕೋರುತ್ತೇನೆ. ದೇಶದ 125 ಕೋಟಿ ಭಾರತೀಯರ ಪರವಾಗಿ ನಾನು ಕ್ರೀಡಾಕೂಟದಲ್ಲಿ ಭಾಗವಹಿಸಿರುವ 119 ಕ್ರೀಡಾಪಟುಗಳಿಗೆ ಶುಭಾಶಯಗಳನ್ನು ಕೋರುತ್ತೇನೆ.

ರಿಯೋದಲ್ಲಿ ಭಾಗವಹಿಸಿರುವ ನನ್ನ ಸಹೋದರ ಸಹೋದರಿ ಕ್ರೀಡಾಪಟುಗಳೇ, ವಿಶ್ವದಾದ್ಯಂತದಿಂದ ಅನೇಕ ಕ್ರೀಡಾಪಟುಗಳು ಅಲ್ಲಿ ತಲುಪಿರಬಹುದು. ಆದರೆ ತಮ್ಮ ಹಿಂದೆ 125 ಕೋಟಿ ಭಾರತೀಯರಿದ್ದಾರೆ. ಆಗಸ್ಟ್ 15 ರಂದು ಭಾರತ ಸ್ವಾತಂತ್ರದ 70ನೇ ವರ್ಷಾಚರಣೆ ಸಂದರ್ಭದಲ್ಲಿ ದೇಶದಲ್ಲಿ ತ್ರಿವರ್ಣ ಧ್ವಜ ಹಾರಾಡುವ ವೇಳೆಯಲ್ಲಿ, ರಿಯೋನಲ್ಲಿ ಪ್ರತಿದಿನವೂ ಒಂದಲ್ಲ ಒಂದು ಕಡೆ ಭಾರತದ ತ್ರಿವರ್ಣ ಧ್ವಜ ಹಾರಾಡುವ ಸೌಭಾಗ್ಯ ಲಭಿಸಲಿದೆ ಎಂಬ ವಿಶ್ವಾಸ ನನಗಿದೆ.

ಸಹೋದರ, ಸಹೋದರಿಯರೇ, ಕ್ರೀಡೆ, ಜೀವನದ ಅವಶ್ಯಕತೆಯಾಗಿದೆ. ಜೀವನದ ಜತೆ ಜತೆಗೆ ರಾಷ್ಟ್ರದ ಅವಶ್ಯಕತೆ ಕೂಡಾ ಆಗಿದೆ. ಬನ್ನಿ ಆಡಿ: ಆಡಿ ಹಾಗೂ ನಲಿಯಿರಿ. ನಾವೂ ನಲಿಯುತ್ತೇವೆ, ದೇಶ ಕೂಡಾ ನಲಿಯುತ್ತದೆ. ಎಲ್ಲರಿಗೂ ಶುಭಾಶಯಗಳು.