ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ,ಸಾಂಪ್ರದಾಯಿಕ ವೈದ್ಯ ಪದ್ಧತಿಯ ಸಹಕಾರಕ್ಕಾಗಿ ಭಾರತ ಮತ್ತು ಇರಾನ್ ನಡುವಿನ ತಿಳಿವಳಿಕೆ ಒಪ್ಪಂದಕ್ಕೆ ತನ್ನ ಅನುಮೋದನೆ ನೀಡಿದೆ.
ಪ್ರಯೋಜನಗಳು:
ಈ ತಿಳಿವಳಿಕೆ ಒಪ್ಪಂದವುಸಾಂಪ್ರದಾಯಿಕ ವೈದ್ಯ ಪದ್ಧತಿಯ ಕ್ಷೇತ್ರದಲ್ಲಿ ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ಸಹಕಾರವನ್ನು ಹೆಚ್ಚಿಸಲಿದೆ. ಇದು ಎರಡೂ ದೇಶಗಳಿಗೆ ಅವುಗಳ ಹಂಚಿಕೆಯ ಸಾಂಸ್ಕೃತಿಕ ಪರಂಪರೆಯ ಹಿನ್ನೆಲೆಯಲ್ಲಿ ಅಪಾರ ಪ್ರಾಮುಖ್ಯತೆಯನ್ನು ಪಡೆದಿದೆ.
ಹಿನ್ನೆಲೆ:
ಭಾರತವು ಔಷಧೀಯ ಸಸ್ಯಗಳು ಸೇರಿದಂತೆ ಸಂಪೂರ್ಣ ಅಭಿವೃದ್ಧಿಹೊಂದಿದ ಸಾಂಪ್ರದಾಯಿಕ ವೈದ್ಯ ಪದ್ಧತಿಯಿಂದ ಹರಸಲ್ಪಟ್ಟಿದೆ, ಇದು ಜಾಗತಿಕ ಆರೋಗ್ಯ ಸನ್ನಿವೇಶದಲ್ಲಿ ಅದ್ಭುತ ಸಾಮರ್ಥ್ಯವನ್ನು ಹೊಂದಿದೆ.
ಭಾರತ ಮತ್ತು ಇರಾನ್ ತಮ್ಮ ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಹಲವು ಸಮಾನ ಲಕ್ಷಣಗಳನ್ನು ಹೊಂದಿವೆ. ಹಾಗೂ ಗಿಡಮೂಲಿಕೆಯ ಔಷಧ ಬಳಕೆಯಲ್ಲಿ ಸಮಾನ ಹಿರಿಮೆಯನ್ನು ಪಡೆದಿವೆ. ಎರಡೂ ದೇಶಗಳು ಅಪಾರವಾದ ಜೀವ ವೈವಿಧ್ಯ ಹೊಂದಿದ್ದು, ಕೆಲವು ಅಪರೂಪದ ಔಷಧ ಸಸ್ಯಗಳ ತವರಾಗಿದೆ, ಇವುಗಳನ್ನು ಸಾಂಪ್ರದಾಯಿಕ ವೈದ್ಯ ಪದ್ಧತಿಯಲ್ಲಿ ಪದೇ ಪದೇ ಬಳಸಲಾಗುತ್ತದೆ.ಮಿಗಿಲಾಗಿ, ಭಾರತವು ಅಪಾರ ಮತ್ತು ಬಲವಾದ ಮೂಲಸೌಕರ್ಯದ ಬೆಂಬಲದೊಂದಿಗೆ ಮತ್ತು ಸುಸಜ್ಜಿತ ಉತ್ಪಾದನಾ ಘಟಕಗಳ ಬೆಂಬಲದೊಂದಿಗೆಸಾಂಪ್ರದಾಯಿಕ ವೈದ್ಯ ಪದ್ಧತಿಯ ಕ್ಷೇತ್ರದಲ್ಲಿ ನೈಜ ನಾಯಕ ಎಂಬುದನ್ನು ಇರಾನ್ ಅನುಮೋದಿಸಿದೆ.
ಭಾರತ ಸರ್ಕಾರದ ಆಯುಷ್ ಸಚಿವಾಲಯ ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ, ಸಿದ್ಧ, ಸೋವಾ-ರಿಗ್ಪಾ ಮತ್ತು ಹೋಮಿಯೋಪತಿ ಸೇರಿದಂತೆ ಸಾಂಪ್ರದಾಯಿಕ ವೈದ್ಯ ಪದ್ಧತಿಗಳನ್ನು ಉತ್ತೇಜಿಸುವ, ಪ್ರಚಾರ ಮಾಡುವ ಮತ್ತು ಜಾಗತೀಕರಣಗೊಳಿಸುವ ಅಧಿಕಾರ ಹೊಂದಿದ್ದು, ಅದು ಚೀನಾ, ಮಲೇಷಿಯಾ, ಟ್ರಿನಿಡಾಡ್ ಮತ್ತು ಟೊಬ್ಯಾಗೋ, ಹಂಗೇರಿ, ಬಾಂಗ್ಲಾದೇಶ, ನೇಪಾಳ, ಮಾರಿಷಸ್ ಮತ್ತು ಮಂಗೋಲಿಯಾ ನಡುವೆ ಸಾಂಪ್ರದಾಯಿಕ ವೈದ್ಯ ಪದ್ಧತಿಗಳ ಸಹಕಾರಕ್ಕಾಗಿ ತಿಳಿವಳಿಕೆ ಒಪ್ಪಂದ ಮಾಡಿಕೊಳ್ಳಲು ಸಮರ್ಥ ಕ್ರಮಗಳನ್ನು ಕೈಗೊಂಡಿದೆ. ಶ್ರೀಲಂಕಾದೊಂದಿಗೆ ಮತ್ತೊಂದು ತಿಳಿವಳಿಕೆ ಒಪ್ಪಂದಕ್ಕೆ ಅಂಕಿತ ಹಾಕಲು ಉದ್ದೇಶಿಸಲಾಗಿದೆ.