Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಶ್ರೀನಗರದಲ್ಲಿ ಕಿಶನ್‍ಗಂಗಾ ಜಲ ವಿದ್ಯುತ್ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಅವರು ಮಾಡಿದ ಭಾಷಣ

ಶ್ರೀನಗರದಲ್ಲಿ ಕಿಶನ್‍ಗಂಗಾ ಜಲ ವಿದ್ಯುತ್ ಯೋಜನೆಯನ್ನು ರಾಷ್ಟ್ರಕ್ಕೆ ಸಮರ್ಪಣೆ ಕಾರ್ಯಕ್ರಮದಲ್ಲಿ ಪ್ರಧಾನಿ ಅವರು ಮಾಡಿದ ಭಾಷಣ


ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾದ ಶ್ರೀಯುತ ಎನ್ ಎನ್ ವೋಹ್ರಾ ಅವರೇ, ಮುಖ್ಯಮಂತ್ರಿ ಮೆಹಬೂಬಾ ಮಫ್ತಿ ಅವರೇ, ಸಚಿವ ಸಂಪುಟದ ಸಹೋದ್ಯೋಗಿಗಳಾದ ಶ್ರೀಯುತ ನಿತಿನ್ ಗಡ್ಕರಿ, ಡಾ.ಜಿತೇಂದ್ರ ಸಿಂಗ್ ಮತ್ತು ಆರ್ ಕೆ ಸಿಂಗ್ ಅವರೇ, ಜಮ್ಮು-ಕಾಶ್ಮೀರದ ಉಪ ಮುಖ್ಯಮಂತ್ರಿ ಶ್ರೀಯುತ ಕವೀಂದ್ರ ಗುಪ್ತಾ ಅವರೇ, ಇಂಧನ ಸಚಿವ ಸುನಿಲ್ ಕುಮಾರ್ ಶರ್ಮಾ ಅವರೇ, ಉಪ ಸಭಾಪತಿ ಶ್ರೀ ನಜೀರ್ ಅಹ್ಮದ್ ಖಾನ್, ಸಂಸದ ಹಾಗೂ ದೇಶದ ಹಿರಿಯ ಮುಖಂಡ ಗೌರವಾನ್ವಿತ ಡಾ.ಫಾರೂಕ್ ಅಬ್ದುಲ್ಲಾ ಅವರೇ, ಸಂಸದ ಮುಝಫ್ಫರ್ ಹುಸೇನ್ ಬೇಗ್ ಅವರೇ, ಇಲ್ಲಿ ನೆರೆದ ಎಲ್ಲ ಗೌರವಾನ್ವಿತರೇ ಮತ್ತು ಜಮ್ಮು-ಕಾಶ್ಮೀರದ ಪ್ರೀತಿಪಾತ್ರ ಸೋದರ-ಸೋದರಿಯರೇ,
 
 
ಮತ್ತೊಮ್ಮೆ ಜಮ್ಮು-ಕಾಶ್ಮೀರಕ್ಕೆ ಆಗಮಿಸಿ, ನಿಮ್ಮೊಡನೆ ಇರುವ ಅವಕಾಶ ನನಗೆ ಲಭ್ಯವಾಗಿದೆ. ನಿಮ್ಮ ಪ್ರೀತಿ ಹಾಗೂ ವಾತ್ಸಲ್ಯ ನನ್ನನ್ನು ಮತ್ತೆ ಮತ್ತೆ ಇಲ್ಲಿಗೆ ಕರೆ ತರುತ್ತಿದೆ. ಕಳೆದ ನಾಲ್ಕು ವರ್ಷದಲ್ಲಿ ಒಂದು ವರ್ಷ ಕೂಡ ತಪ್ಪದಂತೆ ನಾನು ಇಲ್ಲಿಗೆ ಬಂದಿದ್ದೇನೆ. ಪ್ರವಾಹದ ನಂತರ ದೀಪಾವಳಿಯನ್ನು ಆಚರಿಸಿದಾಗ, ಪ್ರವಾಹ ಸಂತ್ರಸ್ಥರೊಂದಿಗೆ ನಾನು ಹಬ್ಬವನ್ನು  ಆಚರಿಸಿದ್ದೆ. ಜತೆಗೆ, ಗಡಿಯಲ್ಲಿ ನಿಯೋಜನೆಗೊಂಡಿರುವ ಸೈನಿಕರೊಂದಿಗೂ ದೀಪಾವಳಿಯನ್ನು ಆಚರಿಸುವ ಅವಕಾಶ ನನಗೆ ಲಭ್ಯವಾಗಿತ್ತು. ಈಗ ರಮ್ಜಾನ್‍ನ ಪವಿತ್ರ ಮಾಸದಲ್ಲಿ ನಾನು ನಿಮ್ಮೊಡನೆ ಇದ್ದೇನೆ. ಈ ಮಾಸವು ಪ್ರವಾದಿ ಮೊಹಮ್ಮದ್ ಅವರನ್ನು ಹಾಗೂ ಅವರ ಬೋಧನೆಗಳನ್ನು ಸ್ಮರಿಸಿಕೊಳ್ಳುವ ಸಮಯ. ಅವರು ಜೀವನದಲ್ಲಿ ಅಳವಡಿಸಿಕೊಂಡ ಸಮಾನತೆ ಮತ್ತು ಭ್ರಾತೃತ್ವದ ಬೋಧನೆಗಳು ಮಾತ್ರವೇ ನಮ್ಮ ದೇಶವನ್ನು ಹಾಗೂ ಜಗತ್ತನ್ನು ಮುಂದಕ್ಕೆ ಕರೆದೊಯ್ಯಬಲ್ಲವು.
 
ದೊಡ್ಡದೊಂದು ಕನಸು ನನಸಾದ ಸಮಯದಲ್ಲೇ, ರಮ್ಜಾನ್‍ನ ಪವಿತ್ರ ಮಾಸದಲ್ಲಿ ನಾವು ಇಲ್ಲಿ ಸೇರಿರುವುದು ಒಂದು ಸಂತಸಕರ ಕಾಕತಾಳೀಯತೆ. ಇಂದು, ಕಿಶನ್‍ಗಂಗಾ ಜಲ ವಿದ್ಯುತ್ ಯೋಜನೆಯನ್ನು ರಾಷ್ಟ್ರಕ್ಕೆ ಅರ್ಪಿಸುವ ಸುವರ್ಣಾವಕಾಶ ನನಗೆ ಸಿಕ್ಕಿದೆ. ಹಲವು ಅಡೆತಡೆಗಳ ನಡುವೆಯೂ ಈ ಯೋಜನೆ ಸಂರ್ಪೂಣವಾಗಿದ್ದು, ಜಮ್ಮು-ಕಾಶ್ಮೀರ ರಾಜ್ಯದ ಅಭಿವೃದ್ಧಿ ಪಥಕ್ಕೆ ಹೊಸ ಆಯಾಮ ನೀಡಿದೆ. ಈ ಸಂದರ್ಭದಲ್ಲಿ ನಾನು ನಿಮ್ಮೆಲ್ಲರಿಗೂ ಶುಭಾಶಯ ಕೋರುತ್ತೇನೆ. ಯೋಜನೆಯು ರಾಜ್ಯಕ್ಕೆ ಅಗತ್ಯವಿರುವಷ್ಟು ವಿದ್ಯುತ್‍ನ್ನು ಪೂರೈಸಲಿದೆ. ಪ್ರಸ್ತುತ ಜಮ್ಮು-ಕಾಶ್ಮೀರದ ವಿದ್ಯುತ್ ಅಗತ್ಯದ ಹೆಚ್ಚು ಪಾಲನ್ನು ದೇಶದ ಇತರ ರಾಜ್ಯಗಳು ಪೂರೈಸುತ್ತಿವೆ. 330 ಮೆಗಾವ್ಯಾಟ್ ಸಾಮಥ್ರ್ಯದ ವಿದ್ಯುತ್ ಯೋಜನೆಯಿಂದ ರಾಜ್ಯದಲ್ಲಿ ವಿದ್ಯುತ್ ಕೊರತೆಯು ಬಹುತೇಕ ನಿವಾರಣೆಯಾಗಲಿದೆ.
 
ಸೋದರರೇ ಮತ್ತು ಸೋದರಿಯರೇ,
ಈ ಯೋಜನೆಯು ಎಂಜಿನಿಯರಿಂಗ್ ಕೌಶಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ. ಯೋಜನೆಯನ್ನು ಸಂಪೂರ್ಣಗೊಳಿಸಲು ಸಾಕಷ್ಟು ಜನ ಕೆಲಸ ಮಾಡಿದ್ದಾರೆ. ಕಿಶನ್‍ಗಂಗಾದ ನೀರನ್ನು ಗುಡ್ಡದಲ್ಲಿ ಕೊರೆದ ಸುರಂಗದ ಮೂಲಕ ಬಂಡಿಪೊರದ ಬೋನಾರ್ ನಾಲೆಗೆ ಪೂರೈಸಲಾಗುತ್ತಿದೆ. ಈ ಯೋಜನೆಯಲ್ಲಿ ಪಾಲ್ಗೊಂಡ ಎಲ್ಲ ಕೆಲಸಗಾರರು, ಎಲ್ಲ ಎಂಜಿನಿಯರ್‍ಗಳು, ಎಲ್ಲ ನೌಕರರು ಶ್ಲಾಘನೆಗೆ ಅರ್ಹರು. ಈ ಯೋಜನೆಯನ್ನು ನಾವು ನಿಮ್ಮೆಲ್ಲರ ಸಾಹಸದಿಂದಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು. 
 
ಇಂದು, ಶ್ರೀನಗರಕ್ಕೆ ವರ್ತುಲ ರಸ್ತೆಯ ನಿರ್ಮಾಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸುವ ಅವಕಾಶ ಕೂಡ ನನಗೆ ಸಿಕ್ಕಿದೆ. 42 ಕಿಮೀ ಉದ್ದದ ಈ ರಸ್ತೆಗೆ 500 ಕೋಟಿ ರೂ.ಗೂ ಅಧಿಕ ವೆಚ್ಚ ಮಾಡಲಾಗುತ್ತದೆ. ಈ ವರ್ತುಲ ರಸ್ತೆಯು ಶ್ರೀನಗರದ ಒಳ ಪ್ರದೇಶಗಳಲ್ಲಿ ವಾಹನ ದಟ್ಟಣೆ ಸಮಸ್ಯೆಯನ್ನು ಸಾಕಷ್ಟು ಮಟ್ಟಿಗೆ ನಿವಾರಿಸಲಿದ್ದು, ನಿಮ್ಮ ಬದುಕು ಅನುಕೂಲಕರ ವಾಗಲಿದೆ.
 
ಜಮ್ಮು-ಕಾಶ್ಮೀರದ ಜನರ ಬದುಕಿನಲ್ಲಿ ಬದಲಾವಣೆ ತರಲು ರಾಜ್ಯದ ಎಲ್ಲ ಮೂರೂ ಪ್ರಾಂತ್ಯಗಳಾದ ಕಾಶ್ಮೀರ, ಜಮ್ಮು ಮತ್ತು ಲಡಾಖ್ ಅಭಿವೃದ್ಧಿ ಆಗುವುದು ಅತ್ಯವಶ್ಯ. ಇದನ್ನು ಮನಸ್ಸಿನಲ್ಲಿ ಇರಿಸಿಕೊಂಡು 80,000 ಕೋಟಿ ರೂ.ಗಳ ಪ್ಯಾಕೇಜ್‍ನ್ನು ಸಿದ್ಧಗೊಳಿಸಲಾಗಿದೆ. ಅತಿ ಕಡಿಮೆ ಅವಧಿಯಲ್ಲಿ 63,000 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಮಂಜೂರು ಮಾಡಿದ್ದು, 20,000 ಕೋಟಿ ರೂ.ಗಳನ್ನು ಈಗಾಗಲೇ ವೆಚ್ಚ ಮಾಡಲಾಗಿದೆ. ಈ ಅನುದಾನದಲ್ಲಿ ಜಮ್ಮು-ಕಾಶ್ಮೀರದಲ್ಲಿ ಐಐಟಿ ಮತ್ತು ಐಐಎಂ ನಿರ್ಮಾಣ, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಹಿಡಿದು ಜಿಲ್ಲಾಸ್ಪತ್ರೆಗಳ ಆಧುನಿಕೀಕರಣ ಕಾರ್ಯ ನಡೆಯುತ್ತಿದೆ.  
 
ಹೊಸ ರಾಷ್ಟ್ರೀಯ ಹೆದ್ದಾರಿಗಳು, ಸರ್ವಋತು ರಸ್ತೆಗಳು, ಹೊಸ ಸುರಂಗಗಳು, ವಿದ್ಯುತ್ ಸಾಗಣೆ- ವಿತರಣೆ ಲೇನ್‍ಗಳು, ನದಿ-ಸರೋವರಗಳ ಸಂರಕ್ಷಣೆ, ರೈತರಿಗೆ ನಾನಾ ಯೋಜನೆಗಳು, ಶೀತಲಗೃಹಗಳು, ಗೋದಾಮುಗಳು ಹಾಗೂ ಯುವ ಜನತೆಗೆ ಉದ್ಯೋಗ ಒದಗಿಸಲು ಹೊಸ ಉಪಕ್ರಮಗಳು ಸೇರಿದಂತೆ ನಾನಾ ನೂತನ ಕಾರ್ಯಕ್ರಮಗಳನ್ನು ಆರಂಭಿಸಲಾಗಿದೆ. ಜನರ ಆಶಯ ಹಾಗೂ ನಿರೀಕ್ಷೆಗಳಿಗೆ ಅನುಗುಣವಾಗಿ 21ನೇ ಶತಮಾನದ ಜಮ್ಮು-ಕಾಶ್ಮೀರವನ್ನು ನಿರ್ಮಿಸಲು ಆದ್ಯತೆ ಮೇರೆಗೆ ಕೆಲಸ ಮಾಡಲಾಗುತ್ತಿದೆ.
 
ಸ್ನೇಹಿತರೇ,
ಬೆಟ್ಟ ಪ್ರದೇಶಕ್ಕೆ ಭೇಟಿ ನೀಡಿದಾಗಲೆಲ್ಲ ನನಗೆ ಒಂದು ಮಾತು ನೆನಪಿಗೆ ಬರುತ್ತದೆ. ಈ ಮೊದಲು ಪರ್ವತ ಪ್ರದೇಶದಲ್ಲಿನ ನೀರು ಹಾಗೂ ಯುವ ಜನರಿಂದ ಯಾವುದೇ ಪ್ರಯೋಜನ ಇಲ್ಲ ಎನ್ನುವ ಮಾತು ಇತ್ತು. ಆಧುನಿಕ ತಂತ್ರಜ್ಞಾನ ಹೆಚ್ಚು ವ್ಯಾಪಿಸಿರದ ಹಾಗೂ ಪ್ರಕೃತಿಯ ಎದುರು ಮನುಷ್ಯ ಅಸಹಾಯಕನಾಗಿದ್ದಾಗ ಇದ್ದ ಗಾದೆ ಮಾತಿದು. ಆದರೆ, ಈಗ ಕಾಲ ಬದಲಾಗಿದೆ.ನಿಮ್ಮ ನೆರವಿನಿಂದ ಈ ಮಾತನ್ನು ಸುಳ್ಳು ಮಾಡಲು ನಾವು ಮುಂದಾಗಿದ್ದೇವೆ. ಜಮ್ಮು-ಕಾಶ್ಮೀರದ ಯುವಜನರು ಹಾಗೂ ನೀರು ಎರಡೂ ಈ ಭೂಮಿಗೆ ಉಪಯುಕ್ತವಾಗಲಿದೆ. ಜಮ್ಮು- ಕಾ ಶ್ಮೀರದಲ್ಲಿ ಹಲವು ನದಿಗಳಿದ್ದು, ಜಲವಿದ್ಯುತ್ ಉತ್ಪಾದನೆಗೆ ಸಾಕಷ್ಟು ಅವಕಾಶವಿದೆ. ದೇಶದ ಈ ಭಾಗವು ತನಗೆ ಸಾಲುವಷ್ಟು ಮಾತ್ರವಲ್ಲ, ದೇಶಕ್ಕೂ ವಿದ್ಯುತ್‍ನ್ನು ಪೂರೈಸುವ ಸಾಮಥ್ರ್ಯ ವನ್ನು ಹೊಂದಿದೆ. ಇದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಕಳೆದ ನಾಲ್ಕು ವರ್ಷದಿಂದ ನಾವು ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದೇವೆ. ಶೀಘ್ರವೇ ಕಿಷ್ಟ್‍ವಾರ್‍ನಲ್ಲಿ ಎಂಟು ಸಾವಿರ ಕೋಟಿ ರೂ. ವೆಚ್ಚದಲ್ಲಿ ಜಲ ವಿದ್ಯುತ್ ಯೋಜನೆಯ ಕಾಮಗಾರಿಯನ್ನು ಆರಂಭಿಸಲಿದ್ದೇವೆ.
 
ಜಮ್ಮು- ಕಾಶ್ಮೀರದ ಪ್ರತಿಯೊಂದು ಮನೆಗೂ ನಿರಂತರ ವಿದ್ಯುತ್ ಪೂರೈಸಲು ನಿರಂತರ ಪ್ರಯತ್ನ ಮಾಡುತ್ತಿದ್ದೇವೆ. ಉನ್ನತ ತಂತ್ರಜ್ಞಾನವಾದ ಸ್ಮಾರ್ಟ್ ಗ್ರಿಡ್ ಮತ್ತು ಸ್ಮಾರ್ಟ್ ಮೀಟರ್‍ಗಳನ್ನು ಬಳಸಲಾಗುತ್ತಿದೆ. ಬೀದಿ ದೀಪಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ. ಜಮ್ಮು-ಕಾಶ್ಮೀರದ ಎಲ್ಲ ಹಳ್ಳಿಗಳಿಂದ ಹಿಡಿದು ಪಟ್ಟಣಗಳಿಗೆ ವಿದ್ಯುತ್ ಪೂರೈಸಲು ಹಾಗೂ ರಾಜ್ಯದಲ್ಲಿ ವಿದ್ಯುತ್ ವಿತರಣೆ ವ್ಯವಸ್ಥೆಯನ್ನು ಸುಧಾರಿಸಲು 4,000 ಕೋಟಿ ರೂ. ವೆಚ್ಚ ಮಾಡಲಾಗಿದೆ.
 
ಸ್ನೇಹಿತರೇ,
ಎಲ್ಲ ಹಳ್ಳಿಗಳು ಹಾಗೂ ಮನೆಗಳಿಗೆ ವಿದ್ಯುತ್ ಪೂರೈಸುವುದು ಮಾತ್ರವೇ ನಮ್ಮ ಗುರಿಯಲ್ಲ. ವಿದ್ಯುತ್ ಸಂಪರ್ಕವಿರುವ ಮನೆಗಳ ಮೇಲಿನ ಮಾಸಿಕ ಬಿಲ್ ಹೊರೆಯನ್ನು ಕಡಿಮೆಗೊಳಿ ಸಲು ಸಕಲ ಪ್ರಯತ್ನ ಮಾಡುತ್ತಿದ್ದೇವೆ. ಜಮ್ಮು-ಕಾಶ್ಮೀರದಲ್ಲಿ ಉಜಾಲ ಯೋಜನೆಯಡಿ 78 ಲಕ್ಷಕ್ಕೂ ಅಧಿಕ ಎಲ್‍ಇಡಿ ಬಲ್ಬ್‍ಗಳನ್ನು ವಿತರಿಸಲಾಗಿದೆ. ಇದರಿಂದ ರಾಜ್ಯದ ಜನರಿಗೆ ಬಲ್ಬ್ ಗೆ ತಗಲುವ ವೆಚ್ಚದಲ್ಲಿ ವಾರ್ಷಿಕ 400 ಕೋಟಿ ರೂ. ಉಳಿತಾಯವಾಗಲಿದೆ. ರಾಜ್ಯದ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಸರ್ಕಾರ ಎಡೆಬಿಡದೆ ಶ್ರಮಿಸುತ್ತಿದೆ. ಸೌಭಾಗ್ಯ ಯೋಜನೆಯಡಿ ಈವರೆಗೆ ವಿದ್ಯುತ್ ಸಂಪರ್ಕ ಹೊಂದಿಲ್ಲದ ಮನೆಗಳಿಗೆ ಸಂಪರ್ಕ ಕಲ್ಪಿಸುವ ಕೆಲಸ ನಡೆಯುತ್ತಿದೆ.
 
ಸ್ನೇಹಿತರೇ,
ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಇರುವ ಅತಿ ದೊಡ್ಡ ದಾರಿಯೆಂದರೆ, ಅದು ಪ್ರವಾಸೋದ್ಯಮ. ಈ ಕ್ಷೇತ್ರವು ಕನಿಷ್ಠ ಬಂಡವಾಳದಲ್ಲಿ ಅತಿ ಹೆಚ್ಚು ಉದ್ಯೋಗ ಸೃಷ್ಟಿಸುತ್ತಿದ್ದು, ರಾಜ್ಯದ ಭವಿಷ್ಯವನ್ನು ನಿರ್ಮಿಸುತ್ತಿರುವುದನ್ನು ನಾವು ದಶಕಗಳಿಂದ ನೋಡುತ್ತಿದ್ದೇವೆ. ಆದರೆ, ಈ ಕ್ಷೇತ್ರವು ಈಗಲೂ ಹಿಂದಿನಂತೆಯೇ ಕೆಲಸ ಮುಂದುವರಿಸಲು ಸಾಧ್ಯವಿಲ್ಲ. ಆಧುನಿಕ ಪ್ರವಾಸಿಗ ಒಂದು ಸ್ಥಳದಿಂದ ಇನ್ನೊಂದಕ್ಕೆ ಹೋಗಲು ಗಂಟೆಗಟ್ಟಲೆ ಕಾಯಲು ಸಿದ್ಧನಿಲ್ಲ, ಕಿರಿದಾದ ರಸ್ತೆಯಲ್ಲಿ ಸಿಕ್ಕಿಹಾಕಿಕೊಳ್ಳಲು ಆತನಿಗೆ ಇಷ್ಟವಿಲ್ಲ. ಆತ ನಿರಂತರ ವಿದ್ಯುತ್, ಸ್ವಚ್ಛತೆ ಹಾಗೂ ಗುಣಮಟ್ಟದ ವಾಯುಸಂಚಾರ ಸೌಲಭ್ಯವನ್ನು ಅಪೇಕ್ಷಿಸುತ್ತಾನೆ.
 
ಇದನ್ನು ಮನಸ್ಸಿನಲ್ಲಿರಿಸಿಕೊಂಡು ನಮ್ಮ ಸರ್ಕಾರವು ಪ್ರವಾಸೋದ್ಯಮಕ್ಕೆ ಅಗತ್ಯವಾದ ಆಧುನಿಕ ವ್ಯವಸ್ಥೆಯನ್ನು ರೂಪಿಸಲು ಹಲವು ಯೋಜನೆಗಳನ್ನು ರೂಪಿಸಿದೆ. ಈ ವ್ಯವಸ್ಥೆ ಹೆಚ್ಚು ಬಲಿಷ್ಠವಾದಷ್ಟೂ ಅಧಿಕ ಪ್ರವಾಸಿಗರು ಜಮ್ಮು-ಕಾಶ್ಮೀರಕ್ಕೆ ಆಗಮಿಸುತ್ತಾರೆ. ಇಷ್ಟು ಮಾತ್ರವಲ್ಲ, ಜಮ್ಮು-ಕಾಶ್ಮೀರದ ಯುವಜನರಿಗೆ ಉದ್ಯೋಗಾವಕಾಶದ ಹೊಸ ಮಾರ್ಗಗಳು ತೆರೆದುಕೊಳ್ಳುತ್ತದೆ ಹಾಗೂ ಆದಾಯವೂ ಹೆಚ್ಚಳಗೊಳ್ಳುತ್ತದೆ.
 
ಸ್ನೇಹಿತರೇ,
ಜಗತ್ತಿನ ಅನೇಕ ಪ್ರಾಂತ್ಯಗಳ ಆರ್ಥಿಕತೆಯು ಪ್ರವಾಸೋದ್ಯಮವನ್ನೇ ಗುರಿಯಾಗಿಸಿಕೊಂಡಿದ್ದು, ಪ್ರವಾಸೋದ್ಯಮವನ್ನೇ ಆಧರಿಸಿದ ಹಲವು ದೇಶಗಳಿವೆ. ಜಮ್ಮು-ಕಾಶ್ಮೀರಕ್ಕೆ ಅಂಥ ಸಾಮಥ್ರ್ಯ ಇದ್ದು, ಅದು ದೇಶದ ಆರ್ಥಿಕತೆಯ ಬೆಳವಣಿಗೆ ದರವನ್ನು ಇನ್ನಷ್ಟು ಹೆಚ್ಚಿಸಬಲ್ಲ ಸಾಮಥ್ರ್ಯವನ್ನು ಹೊಂದಿದೆ. ಪ್ರವಾಸೋದ್ಯಮದ ಬಗೆಗೆ ಮಾತ್ರವೇ ಹೇಳಬೇಕೆಂದರೆ, 12 ಅಭಿವೃದ್ಧಿ ಪ್ರಾಧಿಕಾರಗಳು, 3 ಪ್ರವಾಸೋದ್ಯಮ ಸರ್ಕೀಟ್‍ಗಳು ಮತ್ತು 50 ಪ್ರವಾಸೋದ್ಯಮ ಗ್ರಾಮಗಳನ್ನು 2,000 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಆದರೆ, ನಾನು ಈ ಮೊದಲೇ ಹೇಳಿದಂತೆ, ಪ್ರವಾಸೋದ್ಯಮ ಮಾತ್ರವಲ್ಲ, ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಇಡೀ ವ್ಯವಸ್ಥೆಯನ್ನೇ ಬಲಪಡಿಸಬೇಕಿದೆ. ಇಂಥ ವ್ಯವಸ್ಥೆಗೆ ಸಂಪರ್ಕ ಎನ್ನುವುದು ಭದ್ರ ಬುನಾದಿ ಇದ್ದಂತೆ. ಮತ್ತು ಇದೇ ಕಾರಣದಿಂದಾಗಿ ಜಮ್ಮು-ಕಾಶ್ಮೀರದಲ್ಲಿ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸಲು ದೊಡ್ಡ ಪ್ರಮಾಣದಲ್ಲಿ ಪ್ರಯತ್ನಗಳು ನಡೆಯುತ್ತಿವೆ. ರಾಷ್ಟ್ರೀಯ ಹೆದ್ದಾರಿಗಳ ಕಾರ್ಯಜಾಲವನ್ನೇ ನಿರ್ಮಿಸಲಾಗುತ್ತಿದೆ.
 
ನಾನು ದೇಶದ ಅತ್ಯಂತ ಉದ್ದದ ಸುರಂಗ ಝೋಜಿಲ್ಲಾವನ್ನು ಇಲ್ಲಿಗೆ ಬರುವ ಮುನ್ನ ಉದ್ಘಾಟಿಸಿದೆ. ಜಮ್ಮು-ಕಾಶ್ಮೀರದ ಅಭಿವೃದ್ಧಿಯ ನೂತನ ಕಥನವನ್ನು ಈ ಸುರಂಗ ಬರೆಯಲಿದೆ. ನೀವೇ ಊಹಿಸಿಕೊಳ್ಳಿ: ಸಂಪರ್ಕವು ಉತ್ತಮಗೊಂಡಲ್ಲಿ ಹಲವು ಅನನುಕೂಲಗಳು ಅಂದರೆ, ವಿದ್ಯಾಭ್ಯಾಸಕ್ಕೆ ಹೊರಗೆ ಹೋಗುವುದು, ಸಂಬಂಧಿಕರ ಭೇಟಿಗೆ ತೆರಳುವುದು ಅಥವಾ ಔಷಧೋಪಚಾರಕ್ಕೆ ಇಲ್ಲವೇ ವ್ಯಾಪಾರ ಉದ್ದೇಶದಿಂದ ಅಥವಾ ಉತ್ಪನ್ನಗಳ ಖರೀದಿ ಇಲ್ಲವೇ ಮಾರಾಟಕ್ಕೆ ತೆರಳುವಲ್ಲಿನ ಸಮಸ್ಯೆಗಳು ನಿವಾರಣೆಯಾಗಲಿವೆ. ರೈತರಿಗೆ ಆಗುತ್ತಿರುವ ನಷ್ಟವನ್ನು ಭಾರಿ ಪ್ರಮಾಣದಲ್ಲಿ ಕಡಿಮೆ ಮಾಡಲು ಸಾಧ್ಯವಿದೆ. ಸಾಗಣೆ ತಡವಾದಲ್ಲಿ ನಾಶವಾಗುವ ಇಲ್ಲವೇ ಬಳಕೆಗೆ ಬಾರದ ಸೇಬು ಮತ್ತು ತರಕಾರಿಗಳ ಪ್ರಮಾಣ ಕಡಿಮೆಯಾಗಲಿದ್ದು, ರೈತರಿಗೆ ನಷ್ಟ  ಕಡಿಮೆಯಾಗಲಿದೆ. 
 
ಶ್ರೀನಗರದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಆವೃತ್ತ ರಸ್ತೆ ಅಥವಾ ಶ್ರೀನಗರ-ಶೋಪಿಯಾನ್-ಕಾಝಿಗುಂಡ್ ರಾಷ್ಟ್ರೀಯ ಹೆದ್ದಾರಿ ಅಥವಾ ಚೆಂಗಣಿ-ಸುದ್-ಮಹದೇವ್ ಗೋಹಾ ರಸ್ತೆ ಯಾವುದೇ ಇರಲಿ, ಇವು ಪೂರ್ಣಗೊಂಡ ಬಳಿಕ ಸಮಯ ಮಾತ್ರವಲ್ಲದೆ, ನಿಮ್ಮ ಸಂಪನ್ಮೂಲಗಳ ನಷ್ಟವನ್ನು ಕಡಿಮೆಗೊಳಿಸುತ್ತವೆ. ಮಂಜು ಸುರಿಯುವಾಗ ತಲುಪಲು ಸಾಧ್ಯವಾಗದ ಪ್ರದೇಶಗಳಿಗೆ ಹೆಲಿಕಾಪ್ಟರ್ ಮೂಲಕ ಸಂಪರ್ಕ ಕಲ್ಪಿಸಲಾಗುವುದು. ಜಮ್ಮು ಮತ್ತು ಶ್ರೀನಗರವನ್ನು ಸರ್ಕಾರವು “ಸ್ಮಾರ್ಟ್ ಸಿಟಿ, ಚತುರ ನಗರ’ಗಳಾಗಿ ಅಭಿವೃದ್ಧಿಪಡಿಸುತ್ತಿರುವುದು ನಿಮಗೆ ಗೊತ್ತೇ ಇದೆ.  
 
ಈ ನಗರಗಳಲ್ಲಿ ನೀರಿನ ಪೂರೈಕೆ ಹಾಗೂ ಚರಂಡಿ ವ್ಯವಸ್ಥೆಯನ್ನು ಉತ್ತಮಗೊಳಿಸಲು 550 ಕೋಟಿ ರೂ. ವೆಚ್ಚ ಮಾಡಲಾಗಿದೆ. ಎಲ್ಲಿ ಆಧುನಿಕ ಸೌಲಭ್ಯ ಮತ್ತು ಆಧುನಿಕ ರಸ್ತೆಗಳು ಇರುತ್ತವೋ, ಅಲ್ಲಿ ಜನರ ಜೀವನ ಉತ್ತಮಗೊಳ್ಳುವುದಲ್ಲದೆ, ಜಮ್ಮು-ಕಾಶ್ಮೀರದ ಸೌಂದರ್ಯಕ್ಕೆ ಹೆಚ್ಚು ಮೌಲ್ಯವನ್ನು ಸೇರ್ಪಡೆಗೊಳಿಸುತ್ತವೆ.
ಸೋದರರೇ ಮತ್ತು ಸೋದರಿಯರೇ,
ನಗರ ಮತ್ತು ಗ್ರಾಮಗಳನ್ನು “ಚತುರ’ ವನ್ನಾಗಿಸುವ ಮಾತು ಆಡುವ ಹೊತ್ತಿನಲ್ಲೇ ಸ್ವಚ್ಛತೆ ಎನ್ನುವುದು ಇದರ ಮುಖ್ಯ ಭಾಗ ಆಗಿರಬೇಕು. ಜಮ್ಮು-ಕಾಶ್ಮೀರದ ಜನರು ಸ್ವಚ್ಛತೆ ಆಂದೋಲನವನ್ನು ತಮ್ಮೆಲ್ಲ ಶಕ್ತಿಯನ್ನು ಬಳಸಿ ಮುಂದಕ್ಕೆ ಒಯ್ಯುತ್ತಿದ್ದಾರೆ ಎನ್ನುವುದು ಸಂತಸದ ವಿಷಯ. ಇತ್ತೀಚೆಗೆ ನಾನು ಸಾಮಾಜಿಕ ಮಾಧ್ಯಮದಲ್ಲಿ ಕಾಶ್ಮೀರದ ಬಾಲಕಿಯೊಬ್ಬಳ ವಿಡಿಯೋ ನೋಡಿದೆ. ಐದು ವರ್ಷದ “ಜನ್ನತ್’ ದಾಲ್ ಸರೋವರವನ್ನು ಶುಚಿಗೊಳಿಸುತ್ತಿರುವ ಚಿತ್ರಣ ಅದರಲ್ಲಿ ಇತ್ತು. ಆಂದೋಲನದಲ್ಲಿ ಪಾಲ್ಗೊಳ್ಳುವವರು ಭವಿಷ್ಯದಲ್ಲೂ ಇಷ್ಟು ಪಾವಿತ್ರ್ಯ ಹಾಗೂ ಪ್ರಾಮಾಣಿಕತೆಯಿಂದ ಚಿಂತನೆ ನಡೆಸಿದಲ್ಲಿ, ನಾನು ಇನ್ನಷ್ಟು ಸಂತಸ ಪಡುತ್ತೇನೆ. ಸ್ನೇಹಿತರೇ, ಇಂಥ ಕೆಲಸಗಳನ್ನು ತಮ್ಮದೇ ಮಟ್ಟದಲ್ಲಿ ಮಾಡುತ್ತಿರುವವರು ಸಾಕಷ್ಟು ಜನ ಇದ್ದಾರೆ.
 
ಸೋದರರೇ ಮತ್ತು ಸೋದರಿಯರೇ, ಭಾರಿ ಪ್ರವಾಹದಿಂದಾದ ವಿನಾಶವು ನಿಮ್ಮ ಬದುಕನ್ನು ಮೂಲಭೂತವಾಗಿ ಬದಲಿಸಿದೆ ಎನ್ನುವುದು ನನಗೆ ಗೊತ್ತಿದೆ. ಇದರಿಂದಾದ ನಷ್ಟವನ್ನು ಭರಿಸಲು ನಾವು ಸಕಲ ಪ್ರಯತ್ನ ಮಾಡಿದ್ದೇವೆ. ಇದಕ್ಕಾಗಿ ರಾಜ್ಯ ಸರ್ಕಾರಕ್ಕೆ ನಿಯಮಿತವಾಗಿ ನೆರವು ನೀಡಲಾಗುತ್ತಿದೆ.
 
ಸ್ನೇಹಿತರೇ, ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರ ಮತ್ತು ಕೇಂದ್ರ ಸರ್ಕಾರ ಜಂಟಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಇನ್ನೊಂದು ಗಂಭೀರ ವಿಷಯವಿದೆ. ಅದು ಸ್ಥಳಾಂತರಗೊಂಡವರ ಸಮಸ್ಯೆ. ಪ್ರತಿಕೂಲ ಪರಿಸ್ಥಿತಿಯಿಂದಾಗಿ ಗಡಿಯಾಚೆಯಿಂದ ಬಂದವರು ಮತ್ತು ಸ್ಥಳೀಯ ಸಮಸ್ಯೆಯಿಂದಾಗಿ ತಮ್ಮ ಮನೆಗಳನ್ನು ತೊರೆದವರಿಗೆ, ನಾನಾ ಕಡೆ ಪುನರ್ವಸತಿ ಕಲ್ಪಿಸಲು ಅಂದಾಜು 3,500 ಕೋಟಿ ರೂ. ವೆಚ್ಚ ಮಾಡಲಾಗಿದೆ.
 
ಸ್ನೇಹಿತರೇ, ಇಂದು ಜಮ್ಮು-ಕಾಶ್ಮೀರದ ಯುವ ಜನರು ಇತರ ರಾಜ್ಯಗಳ ಯುವ ಜನರಿಗೆ ಮಾದರಿಯಾಗಿದ್ದಾರೆ. ನಾಗರಿಕ ಸೇವೆಗಳ ಪಟ್ಟಿಯಲ್ಲಿ ರಾಜ್ಯದ ಯುವ ಜನರ ಹೆಸರನ್ನು ನೋಡಿದಾ ಗ, ಅವರನ್ನು ಭೇಟಿ ಮಾಡಿದಾಗ, ನನಗೆ ಅಪಾರ ಸಂತೋಷ ಆಗುತ್ತದೆ. ಬಂಡಿಪೊರದ ಬಾಲಕಿಯೊಬ್ಬಳು ಕಿಕ್ ಬಾಕ್ಸಿಂಗ್‍ನಲ್ಲಿ ಸಾಧನೆ ಮಾಡಿದಾಗ,ಇಡೀ ದೇಶ ಆಕೆ ಬಗ್ಗೆ ಹೆಮ್ಮೆಪಟ್ಟಿತು. ತಜಮೂಲ್ ಅಂಥ ಪ್ರತಿಭೆ ವ್ಯರ್ಥವಾಗಲು ದೇಶ ಬಿಡುವುದಿಲ್ಲ. ಇದೇ ಕಾರಣಕ್ಕಾಗಿ ಕೇಂದ್ರ ಸರ್ಕಾರವು ಕ್ರೀಡಾ ಪ್ರತಿಭೆಗಳನ್ನು ರೂಪಿಸಲು ರಾಜ್ಯ ಸರ್ಕಾರದೊಟ್ಟಿಗೆ ಕೈ ಜೋಡಿಸಿದೆ. ರಾಜ್ಯದ ಲ್ಲಿ ಕ್ರೀಡಾ ಮೂಲಸೌಲಭ್ಯವನ್ನು ಅಭಿವೃದ್ಧಿಪಡಿಸಲು ಸಕಲ ಪ್ರಯತ್ನ ಮಾಡಲಾಗುತ್ತಿದೆ. 
 
ಸೋದರರೇ ಮತ್ತು ಸೋದರಿಯರೇ,   
ಜಮ್ಮು-ಕಾಶ್ಮೀರದ ಯುವ ಜನರಿಗೆ ಶೈಕ್ಷಣಿಕ ಮತ್ತು ಉದ್ಯೋಗಾವಕಾಶ ಒದಗಿಸಲು ಗಂಭೀರ ಪ್ರಯತ್ನ ಮಾಡಲಾಗುತ್ತಿದೆ. ರಾಜ್ಯ ಸರ್ಕಾರದೊಟ್ಟಿಗೆ ಕೈ ಜೋಡಿಸಿ, ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಹಿಮಾಯತ್ ಕಾರ್ಯಕ್ರಮದಡಿ ಒಂದು ಲಕ್ಷಕ್ಕೂ ಅಧಿಕ ಯುವಜನರಿಗೆ ತರಬೇತಿ ನೀಡುವ ಪ್ರಯತ್ನ ನಡೆಯುತ್ತಿದೆ. ಪ್ರಧಾನಮಂತ್ರಿ ಅವರ ವಿಶೇಷ ಶಿಷ್ಯವೇತನ ಯೋಜನೆಯ ಪ್ರಯೋಜನವನ್ನು 16,000ಕ್ಕೂ ಅಧಿಕ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ದೇಶದ ಪ್ರತಿಷ್ಠಿತ ಕಾಲೇಜು ಹಾಗೂ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಪಡೆದುಕೊಳ್ಳುವ ಅವಕಾಶ ಒದಗಿಸಲಾಗಿದೆ. ನಾನಾ ಕಾರಣಗಳಿಂದ ಮಧ್ಯದಲ್ಲೇ ಶಿಕ್ಷಣವನ್ನು ತೊರೆದ ಅಂದಾಜು 60,000 ವಿದ್ಯಾರ್ಥಿಗಳಿಗೆ ನೆರವು ಒದಗಿಸಲಾಗಿದೆ. 
ರಾಜ್ಯದ ಯುವ ಜನರಿಗೆ ಹೊಸ ಅವಕಾಶಗಳನ್ನು ಸೃಷ್ಟಿಸುವ ಮೂಲಕ ಅವರು ರಾಜ್ಯ ಹಾಗೂ ದೇಶದ ಜನರ ಸುರಕ್ಷತೆ ಹಾಗೂ ಭದ್ರತೆಗೆ ಉಪಯುಕ್ತವಾಗುವಂತೆ ಮಾಡಲಾಗುತ್ತಿದೆ. ಜಮ್ಮು-ಕಾಶ್ಮೀರದ ಪೊಲೀಸ್ ಪಡೆಯನ್ನು ಬಲಗೊಳಿಸಲು, ಭಾರತೀಯ ಕಾಯ್ದಿಟ್ಟ ದಳದ ಐದು ಬೆಟಾಲಿಯನ್‍ಗಳನ್ನು ಮಂಜೂರು ಮಾಡಲಾಗಿದೆ. ರಕ್ಷಣೆ ವಿಭಾಗದಲ್ಲಿ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ರಾಜ್ಯದ 5000ಕ್ಕೂ ಹೆಚ್ಚು ಯುವಜನರು ಉದ್ಯೋಗ ಪಡೆದುಕೊಳ್ಳಲಿದ್ದಾರೆ ಎಂದು ಕೇಳಿ ತಿಳಿದಿದ್ದೇನೆ.
 
ಸೋದರರೇ ಮತ್ತು ಸೋದರಿಯರೇ, 
ದೇಶ ಹಾಗೂ ನಾಗರಿಕ ಸುರಕ್ಷೆ ಮತ್ತು ಭದ್ರತೆ ನಮ್ಮ ಸರ್ಕಾರದ ಅತಿ ಪ್ರಮುಖ ಆದ್ಯತೆ. ಈ ಕರ್ತವ್ಯ ನಿರ್ವಹಣೆಗೆ ನಮ್ಮ ಸುರಕ್ಷಾ ದಳಗಳು ಸಂಪೂರ್ಣವಾಗಿ ಬದ್ಧವಾಗಿವೆ. ಜಮ್ಮು- ಕಾಶ್ಮೀರದ ಪೊಲೀಸರು, ಅರೆ ಮಿಲಿಟರಿ ಪಡೆಗಳು ಹಾಗೂ ಭಾರತೀಯ ಸೇನೆಯ ಸೈನಿಕರು ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲೂ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲು ಇಷ್ಟ ಪಡುತ್ತೇನೆ. ಅವರು ತೋರಿಸುತ್ತಿರುವ ಸಹಭಾಗಿತ್ವ ಮತ್ತು ಸಂಯೋಜನೆಗೆ ಧನ್ಯವಾದ ಸಲ್ಲಿಸಲೇಬೇಕು. ಪ್ರವಾಹ ಅಥವಾ ಬಿರುಗಾಳಿ ಇಲ್ಲವೇ ಅಥವಾ ಬೆಂಕಿ ಅವಘಡ ಇರಲಿ, ಇಂಥ ಕಠಿಣ ಪರಿಸ್ಥಿತಿಯಲ್ಲಿ ಸಿಲುಕಿಕೊಂಡ ಜಮ್ಮು-ಕಾಶ್ಮೀರದ ನಾಗರಿಕರಿಗೆ ಸೈನಿಕರು ಸಲ್ಲಿಸಿದ ಸೇವೆ ಅಗಾಧವಾದುದು. ಜಮ್ಮು-ಕಾಶ್ಮೀರದ ಜನರಿಗಾಗಿ ಅವರು ಎದುರಿಸಿದ ಸಂಕಷ್ಟದ ಬಿಂಬಗಳು ಭಾರತದ ನಾಗರಿಕರ ಮನಸ್ಸಿನಲ್ಲಿ ಅಳಿಸಲಾಗದಂತೆ ಅಚ್ಚೊತ್ತಿವೆ.
 
ಸೋದರರೇ ಮತ್ತು ಸೋದರಿಯರೇ, ದೇಶದ 1.25 ಶತ ಕೋಟಿ ಜನರು ನೂತನ ಭಾರತದ ನಿರ್ಮಾಣದ ಪ್ರತಿಜ್ಞೆಯನ್ನು ಆಗುಮಾಡಲು ಕೆಲಸ ಮಾಡುತ್ತಿದ್ದಾರೆ. ಜಮ್ಮು-ಕಾಶ್ಮೀರವು ನೂತನ ಭಾರತದ ಪ್ರಜ್ವಲಿಸುವ ನಕ್ಷತ್ರ ಆಗಬಹುದು. ಜಮ್ಮು-ಕಾಶ್ಮೀರದಲ್ಲಿ ದೇಶದ ಅತ್ಯುತ್ತಮ ಶೈಕ್ಷಣಿಕ ಸಂಸ್ಥೆಗಳು, ಆಸ್ಪತ್ರೆಗಳು, ರಸ್ತೆಗಳು ಮತ್ತು ಅತ್ಯಾಧುನಿಕ ವಿಮಾನ ನಿಲ್ದಾಣ ಏಕೆ ಇರಬಾರದು? ರಾಜ್ಯದ ಮಕ್ಕಳು ಉತ್ತಮ ವೈದ್ಯರು, ಎಂಜಿನಿಯರ್‍ಗಳು, ಪ್ರೊಫೆಸರ್‍ಗಳು ಇಲ್ಲವೇ ಅಧಿಕಾರಿಗಳು ಏಕೆ ಆಗಬಾರದು ಎನ್ನುವುದಕ್ಕೆ ಕಾರಣಗಳಿಲ್ಲ.
 
ಸ್ನೇಹಿತರೇ,
ಜಮ್ಮು-ಕಾಶ್ಮೀರದ ಅಭಿವೃದ್ಧಿ, ರಾಜ್ಯದ ಜನರು ಸಂತೋಷವಾಗಿರುವುದು ಇಷ್ಟವಿಲ್ಲದ ಹಲವು ಶಕ್ತಿಗಳಿವೆ. ಆದರೆ, ಅಂಥ ವಿದೇಶಿ ಶಕ್ತಿಗಳಿಗೆ ಸೂಕ್ತ ಉತ್ತರ ನೀಡಿ, ನಾವು ಮುಂದೆ ನಡೆಯ ಬೇಕಿದೆ. ಮೆಹಬೂಬಾ ಮುಫ್ತಿ ಮತ್ತು ಕೇಂದ್ರದ ಎನ್‍ಡಿಎ ಸರ್ಕಾರದ ನಾಯಕತ್ವದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪಿಡಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರವು ವಿದೇಶಿ ಅಪಪ್ರಚಾರದಿಂದ ಪ್ರೇರಣೆ ಪಡೆದ ಹಾಗೂ ಮಾತೃಭೂಮಿ ಮೇಲೆ ದಾಳಿ ನಡೆಸುತ್ತಿರುವ ಯುವ ಜನರನ್ನು ಮುಖ್ಯವಾಹಿನಿಗೆ ತರಲು ನಿರಂತರವಾಗಿ ಪ್ರಯತ್ನಿಸುತ್ತಿದೆ.
ಸ್ನೇಹಿತರೇ, ಶಾಂತಿ ಮತ್ತು ಸ್ಥಿರತೆಗೆ ಬೇರೆ ಪರ್ಯಾಯಗಳಿಲ್ಲ. ಹಾದಿ ತಪ್ಪಿದ ಯುವಜನರು ಮುಖ್ಯವಾಹಿನಿಗೆ ವಾಪಸಾಗಬೇಕೆಂದು ನಾನು ಕೋರುತ್ತೇನೆ. ಈ ಮುಖ್ಯವಾಹಿನಿ, ನಮ್ಮ ಕುಟುಂಬ ಹಾಗೂ ಪೋಷಕರು. ಈ ಮುಖ್ಯವಾಹಿನಿಯು ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಸಕ್ರಿಯ ಪಾಲು ಸಲ್ಲಿಸುತ್ತಿದೆ. ಜಮ್ಮು-ಕಾಶ್ಮೀರದ ಘನತೆಯನ್ನು ಹೆಚ್ಚಿಸುವುದು ಯುವ ಜನರ ಜವಾಬ್ದಾರಿ. ಇಲ್ಲಿ ಅಪಾರ ಸಂಪನ್ಮೂಲ, ಸಾಮಥ್ರ್ಯ ಹಾಗೂ ಮಾರ್ಗಗಳು ಇವೆ. ದೇಶದ ಬೇರೆ ಭಾಗಗಳಿಗೆ ಹೋಲಿಸಿದರೆ, ಜಮ್ಮು-ಕಾಶ್ಮೀರ ಏಕೆ ಹಿಂದುಳಿದಿರಬೇಕು ಎನ್ನುವುದಕ್ಕೆ ಯಾವುದೇ ಕಾರಣವಿಲ್ಲ. ಹಾದಿ ತಪ್ಪಿದ ಯುವಜನರು ಎತ್ತಿಕೊಳ್ಳುವ ಪ್ರತಿ ಕಲ್ಲು, ಪ್ರತಿ ಶಸ್ತ್ರಾಸ್ತ್ರವು ಅವರದೇ ಜಮ್ಮು-ಕಾಶ್ಮೀರವನ್ನು ಅಸ್ಥಿರಗೊಳಿಸುತ್ತದೆ.
ರಾಜ್ಯವು ಅಸ್ಥಿರತೆಯ ವಾತಾವರಣದಿಂದ ಹೊರಬರಬೇಕು. ತಮ್ಮ ಭವಿಷ್ಯ ಹಾಗೂ ಮುಂದಿನ ಪೀಳಿಗೆಯವರಿಗಾಗಿ, ದೇಶದ ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳಬೇಕು. ಸಾವಿರಾ ರು ವರ್ಷಗಳಿಂದ ಭಾರತ ಮಾತೆಯ ಮಕ್ಕಳಾಗಿ ನಾವು ಬದುಕಿದ್ದೇವೆ. ಸೋದರರ ನಡುವೆ ಭೇದವನ್ನು ಸೃಷ್ಟಿಸಲು ಜಗತ್ತಿನ ಯಾವುದೇ ಶಕ್ತಿಗೂ ಸಾಧ್ಯವಿಲ್ಲ. ದಶಕಗಳಿಂದ ಇಂಥ ಕೆಲಸವನ್ನು ಮಾಡುತ್ತಿದ್ದವರು ಈಗ ಛಿದ್ರಗೊಳ್ಳುವ ಸ್ಥಿತಿ ತಲುಪಿದ್ದಾರೆ.  
 
ಸೋದರರೇ ಮತ್ತು ಸೋದರಿಯರೇ,
ಕಳೆದ ವರ್ಷ ನಾನು ದೀಪಾವಳಿಯನ್ನು ಗುರೆಝ್‍ನಲ್ಲಿ ಸೈನಿಕರೊಂದಿಗೆ ಆಚರಿಸಿದೆ ಹಾಗೂ ಈ ವರ್ಷ ರಮ್ಜಾನ್‍ನ್ನು ನಿಮ್ಮೊಡನೆ ಆಚರಿಸುತ್ತಿದ್ದೇನೆ ಎಂದು ಇನ್ನೊಮ್ಮೆ ಹೇಳುತ್ತಿದ್ದೇನೆ. ಇದೇ ಕಾಶ್ಮೀರದ ಸಂವೇದನೆ ಹಾಗೂ ಇದು ಈ ನಾಡು ಮತ್ತು ಜಗತ್ತಿನ ಉಡುಗೊರೆ. ಇಲ್ಲಿ ಎಲ್ಲರೂ ಸ್ವಾಗತಾರ್ಹರು, ಎಲ್ಲರೂ ಗೌರವಾರ್ಹರು. ಇಂಥ ಸಂಪ್ರದಾಯವನ್ನು ಹೊಂದಿರುವ ನಾಡನ್ನು ಜಗತ್ತಿನ ಬೇರೆಲ್ಲೂ ನೀವು ಕಾಣಲಾರಿರಿ. ಈ ಭೂಮಿ ಇಂಥ ಸಂಪ್ರದಾಯಗಳಿಂದ ಸಮೃದ್ಧಗೊಂಡಿದೆಯೇ ಹೊರತು, ಭಿನ್ನ ಸಮುದಾಯಗಳು ಮತ್ತು ಜನಾಂಗಗಳಿಂದಲ್ಲ. ಅಟಲ್‍ಜಿ ಇಂಥ ಕಾಶ್ಮೀರಿಯತ್‍ನ ಅನುಯಾಯಿಯಾಗಿದ್ದರು, ಅಂತೆಯೇ ಮೋದಿ ಕೂಡ. ಕೆಂಪು ಕೋಟೆಯ ಮೇಲಿಂದ ನಾನು ಈ ಮಾತು ಹೇಳಿದ್ದೆ: ಪ್ರಸ್ತುತ ಸಮಸ್ಯೆಯನ್ನು ಕೀಳು ಭಾಷೆ ಇಲ್ಲವೇ ಗುಂಡಿನಿಂದ ಬಗೆಹರಿಸಲು ಸಾಧ್ಯವಿಲ್ಲ; ಪ್ರತಿಯೊಬ್ಬ ಕಾಶ್ಮೀರಿಯನ್ನು ಆಲಂಗಿಸುವ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಬಹುದು.
 
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ಸೂಕ್ತ ಕಾರ್ಯನೀತಿ ಮತ್ತು ಆಶಯವನ್ನು ಹೊಂದಿದ್ದು, ನಿರ್ಧಾರವನ್ನು ತೆಗೆದುಕೊಳ್ಳುವಲ್ಲಿ ನಾವು ಎಂದಿಗೂ ಹಿಂದೆ ಉ ಳಿಯುವುದಿಲ್ಲ. ವಿದ್ಯಾರ್ಥಿಗಳ ಮೇಲಿನ ಸಾವಿರಾರು ಪ್ರಕರಣಗಳನ್ನು ವಾಪಸ್ ಪಡೆದುಕೊಳ್ಳುವುದಾಗಲೀ ಅಥವಾ ಪವಿತ್ರ ರಮ್ಜಾನ್ ಮಾಸದಲ್ಲಿ ಯುದ್ಧವಿರಾಮ ಘೋಷಿಸುವುದಾಗಲಿ, ಈ ಆಲೋಚನೆಗಳ ಹಿಂದೆ ಕಾಶ್ಮೀರದ ಎಲ್ಲ ಯುವ ಜನರು, ಎಲ್ಲ ನಾಗರಿಕರು ಸ್ಥಿರತೆ ಹಾಗೂ ಅಭಿವೃದ್ಧಿ ಹೊಂದಬೇಕೆಂಬ ಆಶಯ ಇದೆ.
 
ಸ್ನೇಹಿತರೇ, ಇದು ಕೇವಲ ಕದನ ವಿರಾಮವಲ್ಲ, ಇಸ್ಲಾಂ ಹೆಸರಿನಲ್ಲಿ ಭೀತಿಯನ್ನು ಹರಡುವವರನ್ನು ಬಹಿರಂಗಗೊಳಿಸುವ ಒಂದು ಮಾರ್ಗ. ತಮ್ಮನ್ನು ಭ್ರಮೆಯಲ್ಲಿ ಇರಿಸಲು ಏನೆಲ್ಲ ಪ್ರಯ ತ್ನ ಮಾಡಲಾಗುತ್ತಿದೆ ಎನ್ನುವುದನ್ನು ಜಮ್ಮು-ಕಾಶ್ಮೀರದ ಜನರು ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಾನು ನಂಬುತ್ತೇನೆ. ಸ್ಥಿರತೆ ಪ್ರಕ್ರಿಯೆಯನ್ನು ಮುಂದೊಯ್ಯಲು ಸರ್ಕಾರವು ಮಧ್ಯಸ್ತಿಕೆ ದಾರನನ್ನು ನೇಮಿಸಿದೆ. ಜನಪ್ರತಿನಿಧಿಗಳು, ನಾನಾ ಸಂಘ ಸಂಸ್ಥೆಗಳು ಹಾಗೂ ರಾಜ್ಯದ ನಾನಾ ವಿಭಾಗಗಳವರನ್ನು ಅವರು ಭೇಟಿ ಮಾಡುತ್ತಿದ್ದಾರೆ. ಜನ ಅವರ ಬಳಿ ಹೋಗಿ, ವಿಷಯ ಹಂಚಿಕೊಳ್ಳುತ್ತಾರೆ ಎಂದು ನಿರೀಕ್ಷಿಸುತ್ತೇನೆ. ಎಲ್ಲರೊಡನೆ ಮಾತುಕತೆ ನಡೆಸುವ ಮೂಲಕ ಶಾಂತಿ ಪ್ರಕ್ರಿಯೆಯನ್ನು ಬಲಪಡಿಸಲು ಅವರು ಪ್ರಯತ್ನಿಸುತ್ತಿದ್ದಾರೆ.
 
ಸೋದರರೇ ಮತ್ತು ಸೋದರಿಯರೇ,
ಇದಕ್ಕಾಗಿ ಸರ್ಕಾರವು ಸಕಲ ಪ್ರಯತ್ನ ಮಾಡುತ್ತಿದೆ. ಜಮ್ಮು-ಕಾಶ್ಮೀರದ ಸಕಲ ಜನತೆಗೆ ನನ್ನ ಮನವಿಯೇನೆಂದರೆ, ಪ್ರಜಾಸತ್ತಾತ್ಮಕ ಜತೆಗಾರಿಕೆ ಹಾಗೂ ಕಾಶ್ಮೀರಿಯತ್‍ನ್ನು ಕಾಯ್ದುಕೊಳ್ಳಿ: ಇದು ಅತ್ಯಂತ ದೊಡ್ಡ ಜವಾಬ್ದಾರಿಯಾಗಿದ್ದು, ಇದರಲ್ಲಿ ರಾಜ್ಯದ ಪೋಷಕರು, ಯುವಜನರು, ಬುದ್ಧಿಜೀವಿಗಳು ಹಾಗೂ ಧಾರ್ಮಿಕ ನಾಯಕರ ಪಾತ್ರ ಬಹಳ ಪ್ರಮುಖವಾದುದು.
 
ನಾವೆಲ್ಲರೂ ನಮ್ಮೆಲ್ಲ ಶಕ್ತಿಯನ್ನು ಜಮ್ಮು-ಕಾಶ್ಮೀರದ ಅಭಿವೃದ್ಧಿ ಕಡೆಗೆ ಹರಿಸಬೇಕಿದೆ. ಎಲ್ಲ ಸಮಸ್ಯೆಗಳು, ಎಲ್ಲ ವಿವಾದಗಳು ಮತ್ತು ಅಭಿಪ್ರಾಯ ಭೇದಕ್ಕೆ ಇರುವುದು ಒಂದೇ ಪರಿಹಾರ: ಅದು ಅಭಿವೃದ್ಧಿ ಮತ್ತು ಅಭಿವೃದ್ಧಿ ಮಾತ್ರ.
ನೂತನ ಭಾರತದ ಜೊತೆಗೆ ನೂತನ ಜಮ್ಮು-ಕಾಶ್ಮೀರ, ಶಾಂತಿಯುತ ಮತ್ತು ಶ್ರೀಮಂತ ಜಮ್ಮು-ಕಾಶ್ಮೀರವು ಭಾರತದ ಅಭಿವೃದ್ಧಿ ಕಥನವನ್ನು ಇನ್ನಷ್ಟು ಬಲಪಡಿಸಲಿದೆ. ಈ ನಂಬಿಕೆಯಿಂದ ಲೇ ನಾನು ನನ್ನ ಭಾವನೆಗಳನ್ನು ಜನರೊಟ್ಟಿಗೆ ಮುಕ್ತವಾಗಿ ಹಂಚಿಕೊಂಡಿದ್ದೇನೆ. ನನ್ನ ಹೃದಯವನ್ನು ತೆರೆದಿದ್ದೇನೆ. ಜಗತ್ತಿನ ಎಲ್ಲ ದೇಶಗಳ ಜನರಿಗೆ ನಾನು ಹೇಳುವುದೇನೆಂದರೆ, ಭಯೋತ್ಪಾದಕತೆಯ ದಾರಿಯನ್ನು ತುಳಿದವರು ಇಂದು ಪಶ್ಚಾತ್ತಾಪ ಪಡುತ್ತಿದ್ದಾರೆ. ಎಲ್ಲರೂ ಹಿಂದಿರುಗಿ ನೋಡುತ್ತಿದ್ದಾರೆ. ಹಿಂದಿರುಗಲು ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಶತಮಾನಗಳಿಂದ ನಡೆದು ಬಂದ ಶಾಂತಿ ಮತ್ತು ನೆಮ್ಮದಿ, ಭ್ರಾತೃತ್ವ, ಶಾಂತಿ ಮತ್ತು ಸಮೃದ್ಧಿ ಹಾಗೂ ಸಂತೋಷ ಮತ್ತು ಸಂತೃಪ್ತ ಜೀವನದ ಮಾರ್ಗವನ್ನು ನಾವು ಮುಂದುವರಿಸಬೇಕಿದೆ. ಕೇಂದ್ರ ಸರ್ಕಾರ ವು ಇದಕ್ಕೆ ಅಗತ್ಯವಿರುವ ಎಲ್ಲವನ್ನೂ ಮಾಡಲಿದೆ, ಅಗತ್ಯವಿರುವ ಎಲ್ಲ ಹೆಜ್ಜೆಗಳನ್ನು ಇರಿಸಲಿದೆ ಮತ್ತು ಈ ವಿಚಾರದಲ್ಲಿ ನಿಮ್ಮ ಬೆಂಬಲ ನಮಗೆ ಇರಬೇಕಿದೆ. ಉದ್ದೇಶಿತ ಗುರಿಯನ್ನು ಮುಟ್ಟಲು ನಾವು ಪಯಣವನ್ನು ಆರಂಭಿಸಿದ್ದೇವೆ ಹಾಗೂ ಪ್ರೀತಿ ಮತ್ತು ಆಸ್ಥೆಯಿಂದ ಎಲ್ಲರನ್ನೂ ಆಲಂಗಿಸಲು ಜಮ್ಮು-ಕಾಶ್ಮೀರ ನಮಗೆ ಅವಕಾಶ  ನೀಡಲಿದೆ.
 
ಇಸೀ ಭಾವನಾ ಕೆ ಸಾಥ್ ಸೇತಾ ಸೇತಾ ಶುಕ್ರಿಯಾ, ಆಜ್ ದಿಯು ಇಜಾಜತ್, ಖುದಾ ತಾ ನವ್ ಖೋಶತ್ ಖುಷ್ ಹಾಲ್ ( Isi Bhawana Ke Saath Setha-Setha Shukriya, Aj Diyu Ijazat, Khudai Thai Nav Khoshat Khush-hal. ).
ಎಲ್ಲರಿಗೂ ಧನ್ಯವಾದಗಳು.