ಪಿಎಂಇಂಡಿಯಾ

ಗೌರವಾನ್ವಿತ ಪ್ರಧಾನಿ ಓಲಿ ಅವರೇ, ಸಂಸ್ಕ್ರತಿ ಹಾಗೂ ಪ್ರವಾಸೋದ್ಯಮ ಸಚಿವ ರವಿಂದರ್ ಪ್ರಸಾದ್ ಅಧಿಕಾರಿ ಅವರೇ, ಪಶುಪತಿ ಪ್ರದೇಶಾಭಿವೃದ್ಧಿ ಟ್ರಸ್ಟ್ನ ಸದಸ್ಯ ಡಾ ಪ್ರದೀಪ್ ಧಾಕಾಲ್ ಅವರೇ ಹಾಗೂ ಹಾಜರಿರುವ ಗೌರವಾನ್ವಿತರೇ, ದೂರದ ಪ್ರದೇಶಗಳಿಂದ ಬಂದಿರುವ ಭೋಲೆ ಬಾಬಾನ ಭಕ್ತರೇ ಹಾಗೂ ನೇಪಾಳದ ಸೋದರ-ಸೋದರಿಯರೇ,
ಕಾಶಿಯ ಬಾಬಾ ವಿಶ್ವನಾಥನ ಭೂಮಿಯಿಂದ ಆಗಮಿಸಿದ ಪುತ್ರನೊಬ್ಬ ಇಂದು ಪಶುಪತಿನಾಥನ ಅಂಗಳದಲ್ಲಿ ಉಪಸ್ಥಿತರಿರುವವರಿಗೆ ತಲೆ ಬಾಗಿ ನಮಿಸುತ್ತಿದ್ದಾನೆ. ಕೆಲ ಹೊತ್ತು ಹಿಂದಷ್ಟೇ ಪ್ರಧಾನಿ ಓಲಿ ಅವರು ಹೇಳಿದಂತೆ, ಗುಜರಾತ್ನ ಜನರನ್ನು ಹಾಗೂ ನೇಪಾಳ ಭಾಷೆಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಸುಲಭ.
ಭಾರತ ಹಾಗೂ ನೇಪಾಳದ ಸ್ನೇಹ ಬಹಳ ಗಾಢವಾದುದು. ದುರಂತವೊಂದು ಸಂಭವಿಸಿ ನಿಮ್ಮನ್ನು ದಿಗ್ಮೂಢರಾಗಿಸಿರುವಾಗ, ನಿಮ್ಮ ನೆರವಿಗೆ ನಿಮ್ಮವರು ಧಾವಿಸಿದರೆ ಅದು ನಿಮಗೆ ಅಗಾಧ ಸಾಂತ್ವನ ನೀಡುತ್ತದೆ. ಅಟಲ್ ಅವರು ಮೃತಪಟ್ಟಾಗ, ಕೆಲವೇ ಕ್ಷಣಗಳಲ್ಲಿ ಓಲಿ ಅವರು ದೂರವಾಣಿ ಕರೆ ಮಾಡಿ, ತಮ್ಮ ಸಂತಾಪವನ್ನು ವ್ಯಕ್ತಪಡಿಸಿದರು. ಅದು ಬರಿದೇ ಶಿಷ್ಟಾಚಾರ ಎಂದು ನಾನು ಭಾವಿಸುವುದಿಲ್ಲ. ನಾವು ನಿಮ್ಮವರು ಎಂಬುದನ್ನು ತೋರಿಸುವ ಸ್ವಾಭಾವಿಕ ಅಭಿವ್ಯಕ್ತಿ ಅದು. ನಿಮ್ಮ ವಿದೇಶಾಂಗ ಸಚಿವರು ಅಟಲ್ಜಿ ಅವರ ಅಂತ್ಯಕ್ರಿಯೆಗೆ ಸ್ವಯಂ ಆಗಮಿಸಿ, ತಮ್ಮ ಗೌರವ ಹಾಗೂ ಭಾವನೆಗಳನ್ನು ವ್ಯಕ್ತಪಡಿಸಿದ್ದರು!
ಇಂದು ನೇಪಾಳ ಅಟಲ್ ಅವರ ಕವನಗಳನ್ನು ನೇಪಾಳಿ ಭಾಷೆಗೆ ಅನುವಾದಿಸಲು ನಿರ್ಧರಿಸಿದೆ.
ನಾವು ಮಹಾನ್ ಆತ್ಮವೊಂದರ ಸ್ಮರಣೆ ಹಾಗೂ ಸಂದೇಶಗಳನ್ನು ಮತ್ತು ಅವರು ಹಂಚಿಕೊಂಡ ಜ್ಞಾನವನ್ನು ಹೇಗೆ ಸಂರಕ್ಷಿಸುತ್ತೇವೆ ಹಾಗೂ ಬೆಳೆಸುತ್ತೇವೆ; ಮುಂದಿನ ಪೀಳಿಗೆಗೆ ಆ ಜ್ಞಾನವನ್ನು ಹೇಗೆ ವರ್ಗಾಯಿಸುತ್ತೇವೆ; ಅವುಗಳನ್ನು ನಮ್ಮ ಜೀವನದಲ್ಲಿ ಎಷ್ಟರ ಮಟ್ಟಿಗೆ ಅಳವಡಿಸಿಕೊಳ್ಳುತ್ತೇವೆ ಎನ್ನುವುದು ನನ್ನ ಪ್ರಕಾರ, ಮಹಾನ್ ಆತ್ಮವೊಂದಕ್ಕೆ ನಾವು ಸಲ್ಲಿಸುವ ಬಹು ದೊಡ್ಡ ಗೌರವ ಆಗುತ್ತದೆ. ಅಟಲ್ ಅವರ ಜ್ಞಾನವನ್ನು ಹಾಗೂ ಆಲೋಚನೆಗಳನ್ನು ಗೌರವಿಸಿ, ಅವರ ಕವನಗಳಲ್ಲಿ ಸಮಕಾಲೀನ ಪರಿಸ್ಥಿತಿಯನ್ನು ಅವಲೋಕಿಸಲು ನೀಡಿದ ದೃಷ್ಟಿಕೋನಗಳನ್ನು ಮುಂದಕ್ಕೆ ಒಯ್ಯಲು ನಿರ್ಧರಿಸುವ ಮೂಲಕ ಅಟಲ್ ಅವರಿಗೆ ಗೌರವವನ್ನು ಸಲ್ಲಿಸಿದ ಗೌರವಾನ್ವಿತ ಓಲಿ ಅವರಿಗೆ, ನೇಪಾಳ ಸರ್ಕಾರಕ್ಕೆ ಹಾಗೂ ಜನತೆಗೆ ನನ್ನ ಹೃದಯಪೂರ್ವಕ ಧನ್ಯವಾದವನ್ನು ಅರ್ಪಿಸುತ್ತೇನೆ.
ನಮ್ಮ ಎರಡೂ ದೇಶಗಳ ನಡುವಿನ ಸಾಂಸ್ಕ್ರತಿಕ ಸಂಬಂಧ ಬಹಳ ಹಳೆಯದು. ಆದರೆ, ಜನರ ನಡುವಿನ ಸಂಬಂಧ ದೃಢಗೊಳ್ಳದಿದ್ದರೆ, ದೇಶಗಳ ಸಂಬಂಧ ಖಂಡಿತವಾಗಿ ಬಲಿಷ್ಟವಾಗುದಿಲ್ಲ ಇಲ್ಲವೇ ದೀರ್ಘ ಕಾಲ ಬಾಳುವುದೂ ಇಲ್ಲ.
ಕಠ್ಮಂಡು ಮತ್ತು ದೆಹಲಿ ಹತ್ತಿರವಾದರೆ ಅಥವಾ ದೆಹಲಿ ಹಾಗೂ ಕಠ್ಮಂಡುವಿನ ಸರ್ಕಾರಗಳು ಒಟ್ಟಿಗೆ ಬಂದರೆ ಮಾತ್ರ ಸಾಲದು: ನೇಪಾಳ ಹಾಗೂ ಭಾರತದ ಜನರು ಪರಸ್ಪರ ಬೆರೆಯುವವರೆಗೆ, ಸಂಬಂಧ ಬಲಗೊಳ್ಳುವುದಿಲ್ಲ. ಭಾರತ ಮತ್ತು ನೇಪಾಳದ ಜನರು ಪರಸ್ಪರ ಬೆರೆಯಬೇಕು. ಭಾರತ-ನೇಪಾಳದ ಸ್ನೇಹದ ಪ್ರತೀಕದಂತೆ ಇರುವ ಧರ್ಮಶಾಲೆಯ ಉದ್ಘಾಟನೆಯೊಂದಿಗೆ, ಜನರ ನಡುವಿನ ಸಂಪರ್ಕವನ್ನು ದೃಢಗೊಳಿಸುವ ಉತ್ತಮ ಕೆಲಸ ಇಂದು ಆಗಿದೆ.
ಸೋದರರೇ ಮತ್ತು ಸೋದರಿಯರೇ, ನಾನು ಕಠ್ಮಂಡುಗೆ ಬಂದಾಗಲೆಲ್ಲ ನೇಪಾಳದ ಜನರ ಅಪಾರ ಪ್ರೀತಿ ಹಾಗೂ ವಾತ್ಸಲ್ಯವನ್ನು ಅನುಭವಿಸುತ್ತೇನೆ. ಇದು ನನಗೆ ಮಾತ್ರ ಸೀಮಿತವಲ್ಲ, ನೇಪಾಳದಲ್ಲೂ ಭಾರತದ ಬಗ್ಗೆ ಇದೇ ತರಹದ ತೀವ್ರ ಒಲವಿದೆ. ನಾಲ್ಕು ವರ್ಷಗಳ ಹಿಂದೆ ಶ್ರಾವಣ ಮಾಸದ ಕಡೆಯ ಸೋಮವಾರದಂದು ಪಶುಪತಿನಾಥನ ಪಾದಪೂಜೆಯನ್ನು ಮಾಡುವ ಅವಕಾಶ ನನಗೆ ಸಿಕ್ಕಿತ್ತು. ಕೆಲವು ತಿಂಗಳ ಹಿಂದೆ ನಾನು ಇಲ್ಲಿಗೆ ಬಂದಾಗ, ಮೂರು ಪ್ರಮುಖ ದೇವಾಲಯಗಳು ಅಂದರೆ, ಪಶುಪತಿನಾಥ, ಮುಕ್ತಿನಾಥ ಹಾಗೂ ಜಾನಕಿಧಾಮವನ್ನು ಸಂದರ್ಶಿಸುವ ಭಾಗ್ಯ ನನ್ನದಾಗಿತ್ತು. ಮತ್ತೊಮ್ಮೆ ಬಾಬಾ ಪಶುಪತಿನಾಥನ ದರ್ಶನ ಭಾಗ್ಯ ಲಭಿಸಿದ್ದಕ್ಕೆ ಹಾಗೂ ಆತನ ಪಾದಪೂಜೆಗೆ ಅವಕಾಶ ಸಿಕ್ಕಿರುವುದರಿಂದ, ನಾನು ಭಾವಪರವಶನಾಗಿದ್ದೇನೆ. ಈ ಭಾವನೆಗಳು ನನ್ನವು ಮಾತ್ರವಲ್ಲ, ಆಧ್ಯಾತ್ಮಿಕ ಜೀವನ ಹಾಗೂ ಧಾರ್ಮಿಕ ಆಚರಣೆಗಳನ್ನು ಅಳವಡಿಸಿಕೊಂಡಿರುವ, ದೇವರ ಧ್ಯಾನದಲ್ಲಿ ಸದಾ ತೊಡಗಿಸಿಕೊಂಡಿರುವ, ಜೀವನದಲ್ಲಿ ಒಮ್ಮೆಯಾದರೂ ಪಶುಪತಿನಾಥನ ದರ್ಶನ ಪಡೆಯಬೇಕು ಎನ್ನುವ ಹಂಬಲ ಇರಿಸಿಕೊಂಡಿರುವ ಭಾರತ ಹಾಗೂ ಜಗತ್ತಿನೆಲ್ಲೆಡೆಯ ಕೋಟ್ಯಂತರ ಜನರ ಭಾವನೆಗಳು ಕೂಡ.
ಭಗವಾನ್ ಶಿವನೊಡನೆ ಭಕ್ತಿಯ ಬಂಧನ ಹಾಗೂ ಭಾರತ ಮತ್ತು ನೇಪಾಳದಲ್ಲಿನ ಶಿವನ ಭಕ್ತರ ನಡುವಿನ ಬಂಧವು ಎಷ್ಟು ಗಟ್ಟಿಯಾಗಿದೆ ಎಂದರೆ, ದೂರ , ಕಾಲ ಅಥವಾ ಕಷ್ಟಕರ ಭೂಪ್ರದೇಶ ಎನ್ನುವ ಕಾರಣಗಳು ಇದರ ಮೇಲೆ ಯಾವುದೇ ಪರಿಣಾಮ ಬೀರಲಾರವು. ಕಠ್ಮಂಡು ಹಾಗೂ ಕನ್ಯಾಕುಮಾರಿ ನಡುವೆ ಸಾವಿರಾರು ಕಿಲೋಮೀಟರ್ ಅಂತರವಿದ್ದರೂ, 1,500 ವರ್ಷಗಳಿಂದಲೂ ಶಿವನ ಕಥನಗಳು ತಮಿಳುನಾಡಿನಲ್ಲಿ ಪ್ರತಿಧ್ವನಿಸುತ್ತಿವೆ. ಬಾಬಾ ಪಶುಪತಿನಾಥನು ದೂರದ ದಕ್ಷಿಣ ಭಾರತದ ತನ್ನ ಅಪಾರ ಸಂಖ್ಯೆಯ ಭಕ್ತರಿಗೆ ಗಣೇಶ ಹಾಗೂ ಕಾರ್ತಿಕನ ರೂಪದಲ್ಲಿ ದೇವಾಲಯದಲ್ಲಿ ಸ್ಥಾನ ನೀಡಿದ್ದಾನೆ. ಇಂದು ನನ್ನ ಮಿತ್ರ ಪ್ರಧಾನಮಂತ್ರಿ ಓಲಿ ಜೊತೆಗೂಡಿ, ನೇಪಾಳ ಮತ್ತು ಭಾರತದ ಮೈತ್ರಿಯ ಸಂಕೇತವಾಗಿ ಧರ್ಮಶಾಲೆಯನ್ನು ಉದ್ಘಾಟಿಸಿ , ಯಾತ್ರಿಗಳು, ಪ್ರವಾಸಿಗಳು, ಶಿವನ ಭಕ್ತರಿಗೆ ಸಮರ್ಪಿಸುತ್ತಿರುವುದರಿಂದ ನನ್ನ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ. ಜಗತ್ತಿನೆಲ್ಲೆಡೆಯಿಂದ ಇಲ್ಲಿಗೆ ಆಗಮಿಸುವ ಶ್ರದ್ಧಾಳುಗಳಿಗೆ ಸೌಕರ್ಯ ಕಲ್ಪಿಸಲು 125 ಕೋಟಿ ಭಾರತೀಯರ ಪರವಾಗಿ ಪಶುಪತಿನಾಥನ ಚರಣಗಳಿಗೆ ಈ ಸಣ್ಣ ಕಾಣಿಕೆಯನ್ನು ಸಮರ್ಪಿಸುವ ಸೌಭಾಗ್ಯ ನನಗೆ ಸಿಕ್ಕಿದೆ( और बाबा पशुपतिनाथ ने सुदूर दक्षिण भारत के अपने अनंत भक्तों को पीढ़ी-दर-पीढ़़ी सैकड़ों साल से गणेश और कार्तिक की तरह अपने आप इस मंदिर में स्थान दिया है। और इसलिए आज मेरे परम मित्रप्रधानमंत्री ओली जी के साथ मिलकर नेपाल-भारत मैत्री पशुपति धर्मशाला को विश्वभर के यात्रियों के लिए, टूरिस्टों के लिए, शिव भक्तों के लिए समर्पित करते हुए मेरी प्रसन्ता की कोई सीमा नहीं है। दुनियाभरसे यहां आने वाले श्रद्धालुओं की सुविधा के लिए सवा सौ करोड़ भारतवासियों की तरफ से पशुपतिनाथ जी के चरणों में यह एक छोटी सी भेंट देने का सौभाग्य मुझे मिला है।)
ಶೈವ ಕುರುವರ್ ಅವರು ರಚಿಸಿರುವ ಥೈವರಂನಲ್ಲಿ ಪಶುಪತಿನಾಥನಿಗೆ ಪ್ರಮುಖ ಸ್ಥಾನವನ್ನು ನೀಡಲಾಗಿದೆ; ಅದರಲ್ಲಿ ಒಂದು ಅತ್ಯುತ್ತಮ ಉಲ್ಲೇಖವಿದೆ. ಬಹು ದೂರದ ದಕ್ಷಿಣ ಭಾರತದಿಂದ ಬರುವ ಅಸಂಖ್ಯ ಭಕ್ತರಿಗೆ ಬಾಬಾ ಪಶುಪತಿನಾಥನು ಶತಮಾನಗಳಿಂದ ಹಾಗೂ ತಲೆಮಾರುಗಳಿಂದ ಗಣೇಶ ಹಾಗೂ ಕಾರ್ತಿಕರಂತೆಯೇ ಸ್ಥಾನ ಕಲ್ಪಿಸಿಕೊಟ್ಟಿದ್ದಾನೆ ಎಂದು ಉಲ್ಲೇಖದಲ್ಲಿದೆ. ಆಪ್ತಮಿತ್ರ ಪ್ರಧಾನಿ ಓಲಿ ಅವರೊಂದಿಗೆ, ನೇಪಾಳ-ಭಾರತ ಮೈತ್ರಿಯ ಸಂಕೇತವಾದ ಪಶುಪತಿ ಧರ್ಮಶಾಲೆಯನ್ನು ಯಾತ್ರಿಗಳು, ಪ್ರವಾಸಿಗರು ಹಾಗೂ ಜಗತ್ತಿನೆಲ್ಲೆಡೆಯ ಶಿವ ಭಕ್ತರಿಗೆ ಸಮರ್ಪಿಸಲು ನನಗೆ ಅಪಾರ ಸಂತಸವಾಗುತ್ತಿದೆ. ವಿಶ್ವದೆಲ್ಲೆಡೆಯಿಂದ ಇಲ್ಲಿಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ 1.25 ಶತಕೋಟಿ ಭಾರತೀಯರ ಪರವಾಗಿ ಸಣ್ಣ ಕಾಣಿಕೆಯೊಂದನ್ನು ಪಶುಪತಿನಾಥನ ಪಾದಕ್ಕೆ ಸಮರ್ಪಿಸುವ ಅವಕಾಶ ಇಂದು ಲಭಿಸಿರುವುದು ನನ್ನ ಭಾಗ್ಯ.
ಸ್ನೇಹಿತರೇ, ನೇಪಾಳದಲ್ಲಿರುವ ಪಶುಪತಿನಾಥ, ಮುಕ್ತಿನಾಥ ಹಾಗೂ ಜಾನಕಿಧಾಮಗಳು ನೇಪಾಳದ ವೈವಿಧ್ಯತೆಯಲ್ಲಿ ಏಕತೆಯನ್ನು ಸಂಯೋಜಿಸುತ್ತವೆ ಮತ್ತು ನೇಪಾಳದೊಡನೆ ಭಾರತದ ಸಂಬಂಧಕ್ಕೆ ಪ್ರತಿ ಕ್ಷಣವೂ ಹೊಸ ಬಲವನ್ನು ತುಂಬುತ್ತವೆ. ಬಾಬಾ ವಿಶ್ವನಾಥ ಹಾಗೂ ಪಶುಪತಿನಾಥರು ಕಾಶಿ ಹಾಗೂ ಕಠ್ಮಂಡುಗೆ ಸಂಪರ್ಕ ಕಲ್ಪಿಸುತ್ತಾರೆ .ನಾನು ಸೋಮನಾಥನ ನೆಲದಿಂದ ಬಂದವನು. ಸೋಮನಾಥನಿಂದ ವಿಶ್ವನಾಥ, ವಿಶ್ವನಾಥನಿಂದ ಪಶುಪತಿನಾಥ, ಇದೇ ರೀತಿ ಮಾತೆ ಸೀತಾ ಹಾಗೂ ಪ್ರಭು ಶ್ರೀರಾಮನ ಸಂಬಂಧ ಜನಕಪುರವನ್ನು ಅಯೋಧ್ಯೆಯೊಂದಿಗೆ ಜೋಡಿಸುತ್ತದೆ ಹಾಗೂ ಪ್ರಭು ಜಗನ್ನಾಥ ಹಾಗೂ ಮುಕ್ತಿನಾಥ ಪುರಿಯೊಂದಿಗೆ ಮಸ್ತಾಂಗ್ನ್ನು ಜೋಡಿಸುತ್ತದೆ. ಪ್ರಭು ಪಶುಪತಿನಾಥ ಇಲ್ಲಿನ ಸುಂದರವಾದ ಭಾಗ್ಮತಿ ಕಣಿವೆಯಲ್ಲಿ ನೆಲೆಸಿದ್ದು, ಒಂದೆಡೆ ಧವಳಗಿರಿ ಹಾಗೂ ಅನ್ನಪೂರ್ಣ ಪರ್ವತಶ್ರೇಣಿ ಇವೆ: ಇನ್ನೊಂದೆಡೆ ಸಾಗರಮಾತಾ ಹಾಗೂ ಕಾಂಚನಜುಂಗಾ ಶಿಖರಗಳಿವೆ. ಜಗತ್ತಿನೆಲ್ಲೆಡೆಯಿಂದ ಆಗಮಿಸುವ ಭಕ್ತರಿಗೆ ಹಾಗೂ ಪ್ರವಾಸಿಗಳಿಗೆ ಇದು ಸುಂದರ ಹಾಗೂ ಅದ್ಭುತ ಅನುಭವ ನೀಡುತ್ತದೆ. ಕಠ್ಮಂಡು, ಹಿಂದು ಹಾಗೂ ಬೌದ್ಧ ಧರ್ಮಗಳ ಸಂಗಮ ಸ್ಥಳ . ಎರಡೂ ಧರ್ಮಗಳ ಅನುಯಾಯಿಗಳ ನಡುವಿನ ಅನ್ಯೋನ್ಯತೆ ಕಠ್ಮಂಡುವಿನ ರಸ್ತೆ ಹಾಗೂ ಕಿರುದಾರಿಗಳನ್ನು ಹಾದು ಹೋಗುವವರಿಗೆ ಅನುಭವವಾಗುತ್ತದೆ. ಬೌದ್ಧ ಸನ್ಯಾಸಿಗಳ ಸಣ್ಣ ಗುಂಪುಗಳು ಒಂದರಲ್ಲಿ ಇನ್ನೊಂದು ಕೂಡಿಕೊಂಡಿರುವಂತೆ, ಪಶುಪತಿನಾಥನ ದೇವಾಲಯವನ್ನು ಹಲವು ಧಾರ್ಮಿಕ ಕೇಂದ್ರಗಳು ಸುತ್ತುವರಿದಿವೆ. ಸ್ವಲ್ಪ ಹಿಂದಷ್ಟೇ ಪ್ರದೀಪ್ ಅವರು ಹೇಳಿದಂತೆ, ಓಂ ಮಣಿ ಪದ್ಮಯೇ ಎನ್ನುವ ಮಂತ್ರವು ಭಗವಾನ್ ಶಿವನ ಭಕ್ತರ ಓಂ ನಮಃ ಶಿವಾಯ ಎಂಬ ಮಂತ್ರದೊಂದಿಗೆ ಯಾವಾಗ ಸೇರಿಕೊಳ್ಳುತ್ತದೆ ಎನ್ನುವುದು ಯಾರಿಗೂ ತಿಳಿಯುವುದಿಲ್ಲ. ಈ ಸಂಪ್ರದಾಯವು ಭಾರತ ಹಾಗೂ ನೇಪಾಳದ ನಡುವಿನ ಪ್ರಮುಖ ಕೊಂಡಿ ಸಹ. ನೇಪಾಳದ ಲುಂಬಿಣಿಯು ಜಗತ್ತಿಗೆ ಗೌತಮನನ್ನು ಕೊಟ್ಟರೆ, ಬೋಧಗಯಾ ಲೋಕಕ್ಕೆ ಆತನನ್ನು ಭಗವಾನ್ ಬುದ್ಧನನ್ನಾಗಿ ಪರಿವರ್ತಿಸಿತು. ಗೌತಮ ಬುದ್ಧನು ತೋರಿಸಿದ ಮಾರ್ಗವು ಉಗ್ರವಾದ ಹಾಗೂ ತೀವ್ರವಾದದಂಥ ಆಧುನಿಕ ಜಗತ್ತಿನ ಅನೇಕ ಸಮಸ್ಯೆಗಳನ್ನು ಪರಿಹರಿಸಲು ಸ್ಪೂರ್ತಿಯಾಗಿದೆ.
ಸ್ನೇಹಿತರೇ, ನಂಬಿಕೆ, ಆತ್ಮ ಹಾಗೂ ಸಾಮೀಪ್ಯತೆಗೆ ಸಂಬಂಧಿಸಿದಂತೆ ಭಾರತ ಮತ್ತು ನೇಪಾಳ ಚಾರಿತ್ರಿಕ ಸಹಭಾಗಿತ್ವವನ್ನು ಹೊಂದಿವೆ. ಇದು ಬೇರ್ಪಡಿಸಲಾಗದ ಬಂಧ, ಬೆಲೆಕಟ್ಟಲಾಗದ ಐಶ್ವರ್ಯ ಹಾಗೂ ಪರಂಪರೆ. ನಮ್ಮ ಸಾವಿರಾರು ವರ್ಷಗಳ ವೈಭವಯುತ ಚರಿತ್ರೆ ಮತ್ತು ವಸುದೈವ ಕುಟುಂಬಕಂ ಎನ್ನುವ ಮೌಲ್ಯದ ಕುರಿತ ನಮ್ಮ ನಿಷ್ಠೆ- ಇವೆರಡು ನಮ್ಮನ್ನು ಜಗತ್ತಿನ ಇತರ ಹಲವಾರು ನಾಗರೀಕತೆಗಳಿಂದ ವಿಶಿಷ್ಟವಾಗಿಸುತ್ತದೆ.
ಪ್ರಧಾನಿ ಓಲಿ ಅವರು ಸರ್ವೇ ಭವಂತು ಸುಖಿನಾಃ; ಸರ್ವೆ ಸಂತು ನಿರಾಮಯ ಎಂಬ ಬಗ್ಗೆ ಮಾತಾಡುತ್ತಿದ್ದರು; ನಮ್ಮ ಪ್ರೀತಿಪಾತ್ರರ ಒಳಿತಿಗಾಗಿ ಮಾತ್ರವಲ್ಲ, ಜಗತ್ತಿನ ಎಲ್ಲರ ಒಳಿತಿಗಾಗಿ ಪ್ರಾರ್ಥಿಸುವುದು. ಇದು ಎರಡೂ ದೇಶಗಳ ಮೂಲ ತತ್ವವಾಗಿದೆ. ಇಂಥ ಸಮೃದ್ಧ ಸಂಪ್ರದಾಯದಿಂದ ಬಂದ ಆತ್ಮವಿಶ್ವಾಸವು ಜಗತ್ತಿನಲ್ಲಿ ನಮ್ಮ ಸ್ಥಾನವನ್ನು ಭದ್ರಗೊಳಿಸುತ್ತದೆ. ಎರಡೂ ದೇಶಗಳ ಭವಿಷ್ಯವನ್ನು ಈ ನಂಬಿಕೆ ನಿರ್ಧರಿಸಲಿದೆ. ಎಲ್ಲರ ಅಭಿವೃದ್ಧಿ, ಅದರಲ್ಲೂ ಅಬಲರು, ಶಿಕ್ಷೆಗೊಳಗಾದವರು ಹಾಗೂ ಶೋಷಿತರು ಪ್ರಗತಿ ಹೊಂದಿದಾಗ ಮಾತ್ರ ನಮ್ಮ ಇಂದಿನ ಸಾಧನೆ ಅರ್ಥಪೂರ್ಣಗೊಳ್ಳುತ್ತದೆ. ಇಂದು, ಭಾರತ ಆರ್ಥಿಕ ಅಭಿವೃದ್ಧಿಯ ಹೊಸ ಶಿಖರಗಳನ್ನು ಏರುತ್ತಿದೆ. ಸುಧಾರಣೆ, ಕಾರ್ಯನಿರ್ವಹಣೆ ಹಾಗೂ ಪರಿವರ್ತನೆಯ ಹಾದಿಯಲ್ಲಿ ಮುನ್ನಡೆಯುತ್ತಿದೆ. ಅಭಿವೃದ್ಧಿಯ ಆಗಸದಲ್ಲಿ ಧ್ರುವ ತಾರೆಯಂತೆ ಕಂಗೊಳಿಸುತ್ತಿದೆ. “ಎಲ್ಲರ ಜೊತೆಗೆ- ಎಲ್ಲರ ವಿಕಾಸ’ ಎಂಬ ಧ್ಯೇಯದಿಂದ ನಾವು ಮುನ್ನಡೆಯುತ್ತಿದ್ದೇವೆ, ನೇಪಾಳದ ನಮ್ಮ ಸೋದರ-ಸೋದರಿಯರಿಗೂ ಇಂಥದ್ದೇ ಸ್ಥಾನವಿದೆ. ನಾವು “ಎಲ್ಲರ ಜೊತೆಗೆ ,ಎಲ್ಲರ ವಿಕಾಸ’ದ ಕುರಿತು ಮಾತಾಡಿದಾಗ, ಅದು ಎಲ್ಲರಿಗೂ ಅನ್ವಯಿಸುತ್ತದೆ . ನೆರೆಹೊರೆಯವರಿಗೆ ನೆರವಾಗುವುದು ಹಾಗೂ ಅವರ ಸಮೃದ್ಧಿಗೆ ಕೊಡುಗೆ ನೀಡುವುದು ನಮ್ಮ ಸಂಪ್ರದಾಯ. ಈ ಸಂಪ್ರದಾಯದ ಪ್ರಕಾರ ಹಾಗೂ ಬಾಬಾ ಪಶುಪತಿನಾಥನ ಆಶೀರ್ವಾದದೊಂದಿಗೆ ಎರಡೂ ದೇಶಗಳ ನಡುವಿನ ಸ್ನೇಹ ಸಂಬಂಧ ಮುನ್ನಡೆಯುತ್ತಿದೆ.
ಸ್ನೇಹಿತರೇ, ಇಂದು ನೇಪಾಳವು ರಾಜಕೀಯವಾಗಿ ಸ್ಥಿರವಾಗಿರುವುದನ್ನು ಕಂಡು ಸಮಸ್ತ ಭಾರತೀಯರು ಸಂತಸಗೊಂಡಿದ್ದಾರೆ. ಸ್ಥಿರತೆಯಿಂದ, ನೇಪಾಳದ ಅಭಿವೃದ್ಧಿಯ ವೇಗ ಹೆಚ್ಚಿದೆ. ಇಂದು, ಪ್ರಧಾನಿ ಹಾಗೂ ಇಲ್ಲಿ ನೆರೆದ ನೇಪಾಳದ ಜನತೆಗೆ ನಾನು ಕೊಡುವ ಆಶ್ವಾಸನೆಯೆಂದರೆ, ನೇಪಾಳದ ಕ್ಷೇಮ ಹಾಗೂ ನೇಪಾಳದ ಜನರ ಹಿತರಕ್ಷಣೆಗೆ ಭಾರತದ ಶುಭ ಹಾರೈಕೆ ಹಾಗೂ ಸಹಕಾರ ಎಂದೆದಿಗೂ ಇದೆ. ಪ್ರಭು ಪಶುಪತಿನಾಥನು ಎಂದೆಂದಿಗೂ ಈ ನೆಲವನ್ನು ಹರಸಲಿ ಹಾಗೂ ಭಾರತ-ನೇಪಾಳಗಳ ಸ್ನೇಹವನ್ನು ಪೊರೆಯಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಭಾರತ ಹಾಗೂ ನೇಪಾಳದ ನಡುವಿನ ನಂಬಿಕೆ, ನಾಗರೀಕತೆ ಹಾಗೂ ಸಂಸ್ಕ್ರತಿಗಳ ತಡೆರಹಿತ ಚಲನೆ ಲಕ್ಷಾಂತರ ಜನರ ಬದುಕನ್ನು ಸಮೃದ್ಧಗೊಳಿಸುತ್ತಿದೆ. ಭಾರತ- ನೇಪಾಳ ಮೈತ್ರಿ ಧರ್ಮಶಾಲೆ, ಕೇವಲ ಪ್ರವಾಸಿಗರು ಬಂದು ನಿಲ್ಲುವ ಕಟ್ಟಡ ಅಥವಾ ತಂಗುದಾಣ ಮಾತ್ರವಲ್ಲ. ಪ್ರವಾಸಿಗರ ಹೃದಯಗಳಲ್ಲಿ ಭಾರತ-ನೇಪಾಳದ ಮೈತ್ರಿ ಭಾವನೆಯು ಸದಾ ಇರುತ್ತದೆ. ಅವರು ತಮ್ಮ ಮನೆಗಳಿಗೆ ತೆರಳುವಾಗ, ಭಾರತ- ನೇಪಾಳಗಳ ನಡುವಿನ ಚಿರಂತನ ಸ್ನೇಹ ಭಾವನೆಯೊಂದಿಗೆ ಮರಳುತ್ತಾರೆ. ಈ ಎಲ್ಲ ಸಂಕೇತಗಳು ಉಭಯ ರಾಷ್ಟ್ರಗಳ ಮೈತ್ರಿಯ ಪ್ರತೀಕ. ಇವು ಎರಡೂ ದೇಶಗಳ ಜನಜೀವನವನ್ನು ಭದ್ರಪಡಿಸುತ್ತವೆ. ಧರ್ಮಶಾಲೆ ನಮ್ಮಲ್ಲಿ ಶಕ್ತಿ ತುಂಬುವ ಸಂಕೇತವಾಗಿದೆ. ಇದು ರಾತ್ರಿ ವೇಳೆ ಪ್ರವಾಸಿಗನೊಬ್ಬ ಬಂದು ತಂಗುವ ಕೇವಲ ಒಂದು ವ್ಯವಸ್ಥೆ ಮಾತ್ರವಲ್ಲ. ಈ ವ್ಯವಸ್ಥೆ ನೇಪಾಳದಲ್ಲಿ ಪ್ರವಾಸೋದ್ಯಮವನ್ನು ಬಲಪಡಿಸುತ್ತದೆ. ನೇಪಾಳಕ್ಕೆ ಆಗಮಿಸುವ ಪ್ರವಾಸಿಗರಿಗೆ ಹೆಚ್ಚುವರಿ ತಂಗುದಾಣವನ್ನು ಕಲ್ಪಿಸುತ್ತದೆ. ಇಂಥ ವ್ಯವಸ್ಥೆಯಿಂದ ಸಾಮಾನ್ಯ ಆದಾಯವಿರುವ ವ್ಯಕ್ತಿ ಕೂಡ ಪ್ರಯೋಜನ ಪಡೆದುಕೊಳ್ಳಬಹುದು. ಇದು ಬರಿಯ ಕಟ್ಟಡ ಮಾತ್ರವಲ್ಲ, ನಿದ್ರಿಸುವ ಇಲ್ಲವೇ ವಿಶ್ರಾಂತಿ ತೆಗೆದುಕೊಳ್ಳುವ ಸ್ಥಳ ಮಾತ್ರವಲ್ಲ. ನೇಪಾಳದ ಪ್ರವಾಸೋದ್ಯಮಕ್ಕೆ ಸಂಬಂಧಿಸಿದ ಆರ್ಥಿಕ ಚಟುವಟಿಕೆಗಳಿಗೆ ಈ ಕೇಂದ್ರ ಹೊಸ ಬಲ, ನವ ಶಕ್ತಿಯನ್ನು ತುಂಬುತ್ತದೆ. ಕನಿಷ್ಠ ಬಂಡವಾಳದಲ್ಲಿ ಗರಿಷ್ಠ ಉದ್ಯೋಗವನ್ನು ಸೃಷ್ಟಿಸುವ ಸಾಮರ್ಥ್ಯವಿರುವ ವಲಯ ಪ್ರವಾಸೋದ್ಯಮ. ಜನಸಾಮಾನ್ಯರಿಗೆ ಇಂತಹ ಸವಲತ್ತು ಲಭ್ಯವಾದಾಗ, ಪ್ರವಾಸಿಗರು ಇಂತಹ ಸ್ಥಳಗಳಿಗೆ ಭೇಟಿ ನೀಡಲು ಇಷ್ಟ ಪಡುತ್ತಾರೆ, ಇಲ್ಲಿ ಉಳಿದುಕೊಳ್ಳಲು ಇಚ್ಛಿಸುತ್ತಾರೆ ಹಾಗೂ ಪ್ರವಾಸಿಯೊಬ್ಬ ಇಲ್ಲಿ ತಂಗಿದರೆ, ಆತ ಖಂಡಿತವಾಗಿಯೂ ಪ್ರತಿಯಾಗಿ ಏನನ್ನಾದರೂ ಕೊಡುತ್ತಾನೆ.
ಭಾರತ-ನೇಪಾಳ ಮೈತ್ರಿಯ ಪಶುಪತಿನಾಥ ಧರ್ಮಶಾಲೆ ಕೇವಲ ಉಳಿದುಕೊಳ್ಳುವ ಅಥವಾ ವಿಶ್ರಾಂತಿ ತೆಗೆದುಕೊಳ್ಳುವ ಕಟ್ಟಡ ಮಾತ್ರವಲ್ಲ; ಬದಲಿಗೆ, ಸ್ನೇಹದ ಸ್ತಂಭ, ಇದು ಆರ್ಥಿಕ ವ್ಯವಸ್ಥೆಗೆ ವೇಗ ನೀಡುವ ಶಕ್ತಿ ಕೇಂದ್ರವಾಗಲಿದೆ ಎಂದು ನಾನು ನಂಬಿದ್ದೇನೆ. ಈ ನಂಬಿಕೆಯೊಂದಿಗೆ, ನಾನು ಮತ್ತೊಮ್ಮೆ ನೇಪಾಳದ ಪ್ರಧಾನಿಯವರಿಗೆ ಹೃದಯಪೂರ್ವಕ ಧನ್ಯವಾದವನ್ನು ತಿಳಿಸುತ್ತೇನೆ.
ಬಿಐಎಂಎಸ್ಟಿಇಸಿ ಅತ್ಯಂತ ಪ್ರಮುಖ ಕಾರ್ಯಕ್ರಮವಾಗಿದ್ದು, ಇಡೀ ವಿಶ್ವಕ್ಕೆ ಕಠ್ಮಂಡುವಿನಿಂದ ಸಕಾರಾತ್ಮಕ ಸಂದೇಶವೊಂದನ್ನು ಅದು ರವಾನಿಸಿದೆ. ಜಗತ್ತಿನ ಜನಸಂಖ್ಯೆಯ ಶೇ.22ರಷ್ಟು ಜನರನ್ನು ಪ್ರತಿನಿಧಿಸುವ ಬಿಐಎಂಎಸ್ಟಿಇಸಿ ಶೃಂಗವನ್ನು ನೇಪಾಳದಲ್ಲಿ ಪಶುಪತಿನಾಥನ ಪಾದದಡಿ ಸಂಘಟಿಸಿದಾಗ, ತೆಗೆದುಕೊಂಡ ಮಹತ್ವಪೂರ್ಣ ನಿರ್ಣಯಗಳು ಪೂರ್ಣಗೊಳ್ಳದೆ ಇರಲು ಸಾಧ್ಯವಿಲ್ಲ. ಹಾಗಾಗಿ, ಹಿಮಾಲಯದ ತಪ್ಪಲು ಕಠ್ಮಂಡುವಿನಲ್ಲಿ ಪ್ರಧಾನಿ ಓಲಿ ಅವರ ಸಮರ್ಥ ನಾಯಕತ್ವದಲ್ಲಿ ತೆಗೆದುಕೊಂಡ ನಿರ್ಣಯಗಳು ಈ ಪ್ರಾಂತ್ಯದಲ್ಲಿ ಶಾಂತಿ ಹಾಗೂ ಸುರಕ್ಷತೆಯನ್ನು ಸ್ಥಾಪಿಸುವಲ್ಲಿ ಪ್ರಮುಖ ಹಾಗೂ ನಿರ್ಣಾಯಕ ಪಾತ್ರ ವಹಿಸಲಿವೆ ಎಂದು ನಾನು ನಂಬುತ್ತೇನೆ. ಇಂಥ ಕಾರ್ಯವನ್ನು ಪೂರ್ಣಗೊಳಿಸಿದ ಗೌರವಾನ್ವಿತ ಓಲೀ ಅವರು ಶ್ಲಾಘನೆಗೆ ಅರ್ಹರಾಗಿದ್ದು ಅವರಿಗೆ ನಾನು ಶುಭಾಶಯ ಕೋರುತ್ತೇನೆ.
ಸಮಾರಂಭದಲ್ಲಿ ಪಾಲ್ಗೊಳ್ಳಲು ನೀವೆಲ್ಲರೂ ಸಮಯ ಮಾಡಿಕೊಂಡದ್ದನ್ನು ನಾನು ಮತ್ತೊಮ್ಮೆ ಇಲ್ಲಿ ಸ್ಮರಿಸುತ್ತೇನೆ. ನಾವು ಒಟ್ಟಾಗಿ, ಇಂಥ ಉಡುಗೊರೆಯನ್ನು ಕೊಡಲು ಸಾಧ್ಯವಾದದ್ದು ನಮ್ಮ ಅದೃಷ್ಟ. ಭಾರತ ಹಾಗೂ ನೇಪಾಳದ ಜನರು ಇಂತಹದೊಂದು ವ್ಯವಸ್ಥೆಯಿಂದ ಸಂತಸ ಪಡಲಿದ್ದಾರೆ. ಇಂತಹ ವ್ಯವಸ್ಥೆ ಆರ್ಥಿಕ ಬೆಳವಣಿಗೆಗೆ ನೂತನ ಅವಕಾಶಗಳನ್ನು ಒದಗಿಸಲಿದೆ. ಈ ಭಾವನೆಯೊಂದಿಗೆ, ಪ್ರಭು ಪಶುಪತಿನಾಥನಿಗೆ ಮತ್ತೊಮ್ಮೆ ಶಿರ ಬಾಗಿ ನಮಸ್ಕರಿಸಿ, ನನ್ನ ಮಾತುಗಳನ್ನು ಮುಗಿಸುತ್ತೇನೆ.
ಅನಂತಾನಂತ ವಂದನೆಗಳು