ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯು ಭಾರತದ ಮೊದಲ ರೈಲು ಮತ್ತು ಸಾರಿಗೆ ವಿಶ್ವವಿದ್ಯಾಲಯವಾದ ರಾಷ್ಟ್ರೀಯ ರೈಲು ಮತ್ತು ಸಾರಿಗೆ ಸಂಸ್ಥೆ (ಎನ್.ಆರ್.ಟಿ.ಐ.) ಗೆ ಉಪಕುಲಪತಿ ಹುದ್ದೆ ಸೃಜಿಸಲು ಅನುಮೋದನೆ ನೀಡಿತು.
ಉಪಕುಲಪತಿ ಅವರು ಸಂಸ್ಥೆಯ ಪ್ರಧಾನ ಕಾರ್ಯನಿರ್ವಹಣಾ ಅಧಿಕಾರಿಯಾಗಿರುತ್ತಾರೆ ಮತ್ತು ಅವರು ಸಂಸ್ಥೆಯ ವ್ಯವಹಾರಗಳ ನಿಯಂತ್ರಣ ಹಾಗು ಸಾಮಾನ್ಯ ಮೇಲುಸ್ತುವಾರಿಯ ಹೊಣೆಗಾರಿಕೆ ಹೊಂದಿರುತ್ತಾರೆ. ಜೊತೆಗೆ ಡೀಮ್ಡ್ ವಿಶ್ವವಿದ್ಯಾಲಯ ಸಂಸ್ಥೆಯ ಎಲ್ಲಾ ಪ್ರಾಧಿಕಾರಿಗಳ ನಿರ್ಧಾರವನ್ನು ಜಾರಿಗೆ ತರುವ ಪ್ರಮುಖ ಜವಾಬ್ದಾರಿಯನ್ನೂ ಹೊಂದಿರುತ್ತಾರೆ.
ಭಾರತದ 20 ರಾಜ್ಯಗಳ ಮೊದಲ ತಂಡದ 103 ವಿದ್ಯಾರ್ಥಿಗಳಿಗೆ ಎನ್.ಆರ್.ಟಿ.ಐ. ತನ್ನ ಬಾಗಿಲುಗಳನ್ನು ತೆರೆದಿದ್ದು, ಪೂರ್ಣ ಪ್ರಮಾಣದಲ್ಲಿ ನಿವಾಸಿ ಸೌಲಭ್ಯದೊಂದಿಗೆ ಸಾರಿಗೆ ತಂತ್ರಜ್ಞಾನದಲ್ಲಿ ಬಿ.ಎಸ್ಸಿ ಮತ್ತು ಸಾರಿಗೆ ಆಡಳಿತದಲ್ಲಿ ಡಿ.ಬಿ.ಎ.ಪದವಿ ಕೋರ್ಸುಗಳನ್ನು ಆರಂಭಿಸಿದೆ. ಇದರ ತರಗತಿಗಳು 2018 ರ ಸೆಪ್ಟೆಂಬರ್ 5 ರಿಂದ ಆರಂಭಗೊಂಡಿವೆ. ಈ ಮೂರು ವರ್ಷದ ಪದವಿ ಕಾರ್ಯಕ್ರಮಗಳು ಅಂತರ್ಶಿಸ್ತೀಯ ಪಠ್ಯಕ್ರಮವನ್ನು ಹೊಂದಿದ್ದು, ವಿಶ್ವದ ಪ್ರಮುಖ ಸಂಸ್ಥೆಗಳ ಉತ್ಕೃಷ್ಟ ಗುಣಮಟ್ಟಕ್ಕೆ ಸಮನಾಗಿವೆ. ಇವು ಮೂಲ, ಪ್ರಧಾನ ಮತ್ತು ಆಯ್ಕೆ ಆಧಾರಿತ ಕೋರ್ಸುಗಳಾಗಿವೆ.
ಎನ್.ಆರ್.ಟಿ.ಐ.ಯು ಪ್ರಮುಖ ಅಂತಾರಾಷ್ಟ್ರೀಯ ಸಂಸ್ಥೆಗಳ ಜೊತೆ ಜಂಟಿ ಸಂಶೋಧನೆ ಮತ್ತು ಬೋಧಕ ಹಾಗು ವಿದ್ಯಾರ್ಥಿ ವಿನಿಮಯ ಕ್ಷೇತ್ರಗಳಲ್ಲಿ ಸಹಯೋಗವನ್ನು ಬೆಸೆಯಲಿದೆ. ಎನ್.ಆರ್.ಟಿ.ಐ. ಮತ್ತು ಕೋರ್ನೆಲ್ ವಿಶ್ವವಿದ್ಯಾಲಯ, ಯು.ಎಸ್.ಎ., ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ, ಬರ್ಕಲಿ, ಎಂ.ಐ.ಐ.ಟಿ. ಮಾಸ್ಕೋ ಮತ್ತು ಸೈಂಟ್ ಪೀಟರ್ಸ್ ಬರ್ಗ್ ಸಾರಿಗೆ ವಿಶ್ವವಿದ್ಯಾಲಯ , ರಶ್ಯಾ ನಡುವೆ ಒಪ್ಪಂದದ ಒಡಂಬಡಿಕೆಗಳಿಗೆ ಅಂಕಿತ ಹಾಕಲಾಗಿದೆ.
ಹಿನ್ನೆಲೆ:
ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಚಿಂತನೆಯ ಫಲವಾಗಿರುವ ಎನ್.ಆರ್.ಟಿ.ಐ. ಯು ಸಾರಿಗೆ ಆಧಾರಿತ ಶಿಕ್ಷಣ, ಬಹುಶಿಸ್ತೀಯ ಸಂಶೋಧನೆ ಮತ್ತು ತರಬೇತಿಯನ್ನು ಆದ್ಯತೆಯನ್ನಾಗಿ ಹೊಂದಿದೆ. ರೈಲ್ವೇ ಮತ್ತು ಸಾರಿಗೆ ಕ್ಷೇತ್ರದಲ್ಲಿ ಅತ್ಯುತ್ತಮ ವೃತ್ತಿಪರರ ಸಂಪನ್ಮೂಲ ಸಮೂಹವನ್ನು ಹೊಂದುವುದಕ್ಕಾಗಿ ಇದನ್ನು 2018 ರಲ್ಲಿ ಡೀಮ್ಡ್ ಟು ಬಿ ವಿಶ್ವವಿದ್ಯಾಲಯವಾಗಿ ಇದನ್ನು ಸ್ಥಾಪಿಸಲಾಗಿತ್ತು.