ಪಿಎಂಇಂಡಿಯಾ
ಡೆನ್ಮಾರ್ಕ್ ಪ್ರಧಾನಮಂತ್ರಿ ಗೌರವಾನ್ವಿತರಾದ ಶ್ರೀ ಲಾರ್ಸ್ ಲೊಕ್ಕೆ ರಾಸ್ಮುಸ್ಸೇನ್ ಅವರು 2019ರ ಜನವರಿ 18-19 ರಂದು “ರೋಮಾಂಚಕ ಗುಜರಾತ್ ಜಾಗತಿಕ ಶೃಂಗ-2019”ಕ್ಕಾಗಿ ಭಾರತಕ್ಕೆ ಭೇಟಿ ನೀಡಿದ್ದಾರೆ . ಈ ಶೃಂಗದಲ್ಲಿ ಡೆನ್ಮಾರ್ಕ್ ಸಹಭಾಗಿ ಕಂಪೆನಿಯಾಗಿ ಭಾಗವಹಿಸುತ್ತಿದೆ. ಪ್ರಧಾನಮಂತ್ರಿ ರಾಸ್ಮುಸ್ಸೇನ್ ಅವರ ಜೊತೆ ಪ್ರಮುಖ ಡ್ಯಾನಿಷ್ ಕಂಪೆನಿಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಒಳಗೊಂಡ ವ್ಯಾಪಾರೋದ್ಯಮಿಗಳ ನಿಯೋಗವೂ ಬಂದಿದೆ.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಪ್ರಧಾನಮಂತ್ರಿ ಶ್ರೀ ರಾಸ್ಮುಸ್ಸೇನ್ ಅವರು 2019 ರ ಜನವರಿ 18 ರಂದು ಗಾಂಧೀನಗರದ ರೋಮಾಂಚಕ ಗುಜರಾತ್ ಶೃಂಗದ ಹಿನ್ನೆಲೆಯಲ್ಲಿ ದ್ವಿಪಕ್ಷೀಯ ಸಭೆ ನಡೆಸಿದರು. ಇಬ್ಬರೂ ಪ್ರಧಾನ ಮಂತ್ರಿಗಳು 2018 ರ ಏಪ್ರಿಲ್ ತಿಂಗಳಲ್ಲಿ ಸ್ಟಾಕ್ ಹೋಂನಲ್ಲಿ ನಡೆದ ಮೊದಲ ಭಾರತ-ನಾರ್ಡಿಕ್ ಸಮಾವೇಶದ ಸಂದರ್ಭದಲ್ಲಿ ಪರಸ್ಪರ ಭೇಟಿಯಾಗಿದ್ದರು.
ಸಭೆಯಲ್ಲಿ ಇಬ್ಬರು ನಾಯಕರೂ ದ್ವಿಪಕ್ಷೀಯ ಸಹಕಾರ ಸಹಿತ ವಿವಿಧ ಕ್ಷೇತ್ರಗಳ ಬಗ್ಗೆ ಸಮಾಲೋಚನೆ ನಡೆಸಿದ್ದಲ್ಲದೆ ಪರಸ್ಪರ ಹಿತಾಸಕ್ತಿಯ ಬಹುಕೋನೀಯ ವಿಷಯಗಳ ಬಗ್ಗೆಯೂ ತಮ್ಮ ಚಿಂತನೆಯನ್ನು ವಿನಿಮಯ ಮಾಡಿಕೊಂಡರು. ಅವರು ಎರಡೂ ದೇಶಗಳ ನಡುವೆ ದ್ವಿಪಕ್ಷೀಯ ವ್ಯಾಪಾರ ಮತ್ತು ಹೂಡಿಕೆ ವಿಸ್ತರಣೆಯ ಬೃಹತ್ ಸಾಮರ್ಥ್ಯದ ಬಗ್ಗೆಯೂ ಮಾತುಕತೆ ನಡೆಸಿದರು.
ಭಾರತಕ್ಕೆ ಪ್ರಸ್ತುತವಾದ ಹಲವು ನವೀನ ತಂತ್ರಜ್ಞಾನಗಳಲ್ಲಿ ಡೆನ್ಮಾರ್ಕ್ ಜಾಗತಿಕ ನಾಯಕನಾಗಿದೆ. ಡೆನ್ಮಾರ್ಕ್ ಕೌಶಲ್ಯಗಳನ್ನು ಹೊಂದಿದ್ದರೆ , ಭಾರತ ಅಭಿವೃದ್ದಿ ಮಾಪಕಗಳನ್ನು ಹೊಂದಿದೆ ಮತ್ತು ಜಗತ್ತಿಗೆ ಹಲವು ಹೊಸ ತಂತ್ರಜ್ಞಾನಗಳು ಬೇಕಾಗಿವೆ ಎಂಬುದನ್ನು ಪ್ರಸ್ತಾವಿಸಿದ ಪ್ರಧಾನಮಂತ್ರಿ ಮೋದಿ ಅವರು ಆಹಾರ ಸುರಕ್ಷೆ , ಜಲ ನಿರ್ವಹಣೆ, ವಾತಾವರಣ ಬದಲಾವಣೆ ಮತ್ತು ಸಹ್ಯ ಅಭಿವೃದ್ದಿಯಂತಹ ಜಾಗತಿಕ ಕಳವಳದ ವಿಷಯಗಳಿಗೆ ಪರಿಹಾರಗಳನ್ನು ಕಂಡುಹುಡುಕುವ ಸಂಶೋಧನಾ ವೇದಿಕೆಯನ್ನು ಸ್ಥಾಪಿಸುವಂತೆ ಭಾರತ ಮತ್ತು ಡೆನ್ಮಾರ್ಕನ್ನು ಪ್ರೋತ್ಸಾಹಿಸಿದರು.
ಸಭೆಯಲ್ಲಿ ಎರಡು ತಿಳುವಳಿಕಾ ಒಡಂಬಡಿಕೆಗಳನ್ನು ವಿನಿಮಯ ಮಾಡಿಕೊಳ್ಳಲಾಗಿದೆ. ಅವುಗಳೆಂದರೆ -ಭಾರತದ ಶಿಪ್ಪಿಂಗ್ ಸಚಿವಾಲಯ ಮತ್ತು ಡೆನ್ಮಾರ್ಕಿನ ಕೈಗಾರಿಕೆ, ವ್ಯಾಪಾರೋದ್ಯಮ, ಹಾಗು ಹಣಕಾಸು ವ್ಯವಹಾರಗಳ ಸಚಿವಾಲಯದ ನಡುವೆ ನಾವಿಕ ವಿಷಯಗಳಿಗೆ ಸಂಬಂಧಿಸಿ ತಿಳುವಳಿಕಾ ಒಡಂಬಡಿಕೆ, ಮತ್ತು ಇಮ್ಯಾಜಿನ್ ಪಣಜಿ ಸ್ಮಾರ್ಟ್ ಸಿಟಿ ಡೆವಲಪ್ಮೆಂಟ್ ಲಿಮಿಟೆಡ್ ಹಾಗು ಹೊಸದಿಲ್ಲಿಯ ಡ್ಯಾನಿಶ್ ರಾಯಭಾರಿ ಕಚೇರಿ ನಡುವೆ ಗೋವಾದ ಪಣಜಿಯಲ್ಲಿ ನಗರ ಜೀವನ ಪ್ರಯೋಗಾಲಯ ಸ್ಥಾಪನೆಗೆ ತಿಳುವಳಿಕಾ ಒಡಂಬಡಿಕೆ .
ಸುಮಾರು 130 ಡ್ಯಾನಿಶ್ ಕಂಪೆನಿಗಳು ಭಾರತದಲ್ಲಿ ಹೂಡಿಕೆ ಮಾಡಿವೆ. ಹಡಗು ಉದ್ಯಮ, ಪುನರ್ ನವೀಕರಿಸಬಹುದಾದ ಇಂಧನ, ಪರಿಸರ, ಕೃಷಿ, ಮತ್ತು ಆಹಾರ ಸಂಸ್ಕರಣೆ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿರುವ ಇವು ಇತರ ಕ್ಷೇತ್ರಗಳಾದ ಸ್ಮಾರ್ಟ್ ನಗರಾಭಿವೃದ್ದಿ, ಮತ್ತು ತ್ಯಾಜ್ಯದಿಂದ ಇಂಧನದಂತಹ ಕ್ಷೇತ್ರಗಳಲ್ಲೂ ತಮ್ಮ ಹೂಡಿಕೆಯನ್ನು ವಿಸ್ತರಿಸಲು ಆಸಕ್ತವಾಗಿವೆ. ಹಲವು ಪ್ರಮುಖ ಡ್ಯಾನಿಶ್ ಕಂಪೆನಿಗಳು ಈಗಾಗಲೇ ಗುಜರಾತಿನ ಹಡಗು ಉದ್ಯಮ ಮತ್ತು ಪುನರ್ ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ನೆಲೆ ಕಂಡುಕೊಂಡಿವೆ.
ಭೇಟಿಯಲ್ಲಿ ಪ್ರಧಾನಮಂತ್ರಿ ರಾಸ್ಮುಸ್ಸೇನ್ ಅವರು 2019 ರ ಜನವರಿ 19 ರಂದು ಹೊಸದಿಲ್ಲಿಯಲ್ಲಿ ಡ್ಯಾನಿಶ್ ರಾಯಭಾರ ಕಚೇರಿಯ ಹೊಸ ಕಟ್ಟಡ ಮತ್ತು ಡ್ಯಾನಿಶ್ ಸಾಂಸ್ಕೃತಿಕ ಸಂಸ್ಥೆಯನ್ನು ಉದ್ಘಾಟಿಸುವರು. ಅವರು ಆಗ್ರಾಕ್ಕೂ ಭೇಟಿ ನೀಡುವರು.
Had an excellent meeting with PM @larsloekke of Denmark.
— Narendra Modi (@narendramodi) January 18, 2019
Denmark is a valued friend and we discussed deepening cooperation in energy, trade, agriculture and other areas. pic.twitter.com/p3eP0jqUMW