Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಭಾರತದ ರಾಷ್ಟ್ರಪತಿ ಅವರಿಂದ ಸಾಂಸ್ಕೃತಿಕ ಸೌಹಾರ್ದತೆಗಾಗಿರುವ 2014, 2015,2016 ರ ಸಾಲಿನ ಟ್ಯಾಗೋರ್ ಪ್ರಶಸ್ತಿಗಳ ಪ್ರದಾನ.

ಭಾರತದ ರಾಷ್ಟ್ರಪತಿ ಅವರಿಂದ ಸಾಂಸ್ಕೃತಿಕ ಸೌಹಾರ್ದತೆಗಾಗಿರುವ 2014, 2015,2016  ರ ಸಾಲಿನ ಟ್ಯಾಗೋರ್ ಪ್ರಶಸ್ತಿಗಳ ಪ್ರದಾನ.


ಪ್ರಶಸ್ತಿ ಪುರಸ್ಕೃತರಲ್ಲಿ ಮಣಿಪುರಿ ನೃತ್ಯಗಾರ, ಬಾಂಗ್ಲಾದೇಶದ ಶಿಲ್ಪಿ,

ಭಾರತದ ರಾಷ್ಟ್ರಪತಿಯವರಾದ ಶ್ರೀ ರಾಮ ನಾಥ ಕೋವಿಂದ ಅವರು 2014,2015 ಮತ್ತು 2016 ರ ಸಾಲಿನ ಸಾಂಸ್ಕೃತಿಕ ಸೌಹಾರ್ದತೆಗಾಗಿರುವ ಟ್ಯಾಗೋರ್ ಪ್ರಶಸ್ತಿಗಳನ್ನು ಅನುಕ್ರಮವಾಗಿ ಶ್ರೀ ರಾಜ್ ಕುಮಾರ ಸಿಂಗ್ಜಿತ್ ಸಿಂಗ್, ಛಾಯಾನೌತ್ (ಬಾಂಗ್ಲಾದೇಶದ ಸಾಂಸ್ಕೃತಿಕ ಸಂಘಟನೆ) ಮತ್ತು ಶ್ರೀ ರಾಮ್ ವಂಜಿ ಸುತಾರ್ ಅವರಿಗೆ ಇಂದಿಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನಿಸಿದರು. ಪ್ರಧಾನಮಂತ್ರಿ ನೇತೃತ್ವದ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ರಂಜನ್ ಗೊಗೋಯ್ , ಮಾಜಿ ಮುಖ್ಯ ಚುನಾವಣಾ ಆಯುಕ್ತ ಶ್ರೀ.. ಎನ್ .ಗೋಪಾಲಸ್ವಾಮಿ ಮತ್ತು ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿಯ ಅಧ್ಯಕ್ಷ ಶ್ರೀ ವಿನಯ ಸಹಸ್ರಬುದ್ದೆ ಅವರನ್ನೊಳಗೊಂಡ ತೀರ್ಪುಗಾರರ ಸಮಿತಿಯು ಪ್ರಶಸ್ತಿ ಪುರಸ್ಕೃತರನ್ನು ಆಯ್ಕೆ ಮಾಡಿದೆ.

ಈ ಸಂಧರ್ಭ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಸಂಸ್ಕೃತಿಯು ಯಾವುದೇ ರಾಷ್ಟ್ರಕ್ಕೆ ಗುರುತಿಸುವಿಕೆಯನ್ನು ಕೊಡುತ್ತದೆ ಆದುದರಿಂದ ಅದು ರಾಷ್ಟ್ರದ ಜೀವದ್ರವ ಎಂದರು. “ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ವಸಾಹತುಶಾಹೀ ಮತ್ತು ವಿದೇಶೀ ಆಕ್ರಮಣದ ನಡುವೆಯೂ ಸಂರಕ್ಷಿಸಲಾಯಿತು” ಎಂದವರು ಹೇಳಿದರು. ಗುರುದೇವ್ ಟ್ಯಾಗೋರ್ ಮತ್ತು ಸ್ವಾಮಿ ವಿವೇಕಾನಂದರಂತಹ ಜನರ ಕೊಡುಗೆಯಿಂದ ಇದು ಸಾಧ್ಯವಾಯಿತು ಎಂದವರು ನುಡಿದರು.

ಭಾರತದ ಬಹು ಆಯಾಮದ ಪರಂಪರೆ ಗುರುದೇವರ ಕೃತಿಗಳಲ್ಲಿ ಚೆನ್ನಾಗಿ ಪ್ರತಿಬಿಂಬಿತವಾಗಿದೆ ಎಂದೂ ಪ್ರಧಾನಮಂತ್ರಿ ಹೇಳಿದರು. ರವೀಂದ್ರ ಸಂಗೀತ ನಮ್ಮ ದೇಶದ ಎಲ್ಲಾ ವರ್ಣಗಳನ್ನು ಒಳಗೊಂಡಿದೆ ಮತ್ತು ಅದು ಭಾಷೆಯೊಂದರಿಂದ ಬಂಧಿಸಲ್ಪಟ್ಟು ಸೀಮಿತವಾಗಿಲ್ಲ . ಟ್ಯಾಗೋರರ ಬೋಧನೆಗಳು ಕಾಲಾತೀತ ಮತ್ತು ಆವರ ಕೃತಿಗಳಿಂದ ಬಹಳಷ್ಟನ್ನು ಕಲಿಯಲಿಕ್ಕಿದೆ ಎಂದೂ ನುಡಿದರು. “ ಅವರು ಜನಪದ ಕಲೆಗಳನ್ನು ಮತ್ತು ಸಾಂಪ್ರದಾಯಿಕ ನೃತ್ಯ ಪ್ರಕಾರಗಳನ್ನು ಭಾರತೀಯ ಸಂಸ್ಕೃತಿಯ ಸೂಚಕಗಳೆಂಬಂತೆ ಪರಿಗಣಿಸಿದರು” ಎಂದೂ ಪ್ರಧಾನಮಂತ್ರಿ ಅವರು ಅಭಿಪ್ರಾಯಪಟ್ಟರು.

ಪ್ರಖ್ಯಾತ ಮಣಿಪುರ ನೃತ್ಯ ತಜ್ಞ ಶ್ರೀ ರಾಜಕುಮಾರ್ ಸಿಂಗ್ಜಿತ್ ಸಿಂಗ್ ಅವರಿಗೆ 2014 ರ ಸಾಲಿನ ಪ್ರಶಸ್ತಿ ನೀಡಲಾಯಿತು. ಬಾಂಗ್ಲಾದೇಶದ ಸಾಂಸ್ಕೃತಿಕ ಸಂಘಟನೆ ಛಾಯಾನೌತ್ ಗೆ ಗುರುದೇವ್ ರವೀಂದ್ರನಾಥ ಟ್ಯಾಗೋರ್ ಅವರ ಕೃತಿಗಳನ್ನು ಮತ್ತು ಬಾಂಗ್ಲಾ ಕಲೆಯನ್ನು ಪ್ರಚುರಪಡಿಸಿದ್ದಕ್ಕಾಗಿ 2015 ರ ಸಾಲಿನ ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಖ್ಯಾತ ಶಿಲ್ಪಿ ಮತ್ತು ವಿದ್ವಾಂಸ ಶ್ರೀ ರಾಂ ವಂಜಿ ಸುತಾರ್ ಅವರಿಗೆ 2016 ರ ಸಾಲಿನ ಪ್ರಶಸ್ತಿಯನ್ನು ಕೊಡಮಾಡಲಾಗಿದೆ.

ಸಾಂಸ್ಕೃತಿಕ ಸೌಹಾರ್ದತೆಗಾಗಿರುವ ಟ್ಯಾಗೋರ ಪ್ರಶಸ್ತಿಯನ್ನು ರವೀಂದ್ರನಾಥ ಟ್ಯಾಗೋರ ಅವರ 150 ನೇ ಜನ್ಮ ವರ್ಷಾಚರಣೆ ಅಂಗವಾಗಿ ಸರಕಾರ ಸ್ಥಾಪಿಸಿದ್ದು 2012 ರಿಂದ ನೀಡಲಾಗುತ್ತಿದೆ. ಇದನ್ನು ವಾರ್ಷಿಕವಾಗಿ ಪ್ರದಾನ ಮಾಡಲಾಗುತ್ತಿದೆ. ಪ್ರಶಸ್ತಿಯು 1 ಕೋ.ರೂ. ನಗದು , ಪ್ರಶಸ್ತಿ ಫಲಕ, ಪ್ರಶಸ್ತಿ ಪತ್ರ ಮತ್ತು ಅತ್ಯಾಕರ್ಷಕ ಸಾಂಪ್ರದಾಯಿಕ ಕಲಾಕೃತಿ ಯಾ ಕೈಮಗ್ಗದ ವಸ್ತುವನ್ನು ಒಳಗೊಂಡಿರುತ್ತದೆ.