ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು, ಒಂದು ನೂತನ ಕೇಂದ್ರೀಯ ಯೋಜನೆಗೆ ಒಪ್ಪಿಗೆ ನೀಡಿತು. ಇದು ಭಾರತದಾದ್ಯಂತ ರೈತರನ್ನು ಸಬಲೀಕರಣಗೊಳಿಸುವ ಐತಿಹಾಸಿಕ ನಿರ್ಧಾರವಾಗಿದೆ. ಹಗಲು ರಾತ್ರಿ ದುಡಿದು ದೇಶಕ್ಕೆ ಅನ್ನ ನೀಡುವ ರೈತರಿಗೆ ಪಿಂಚಣಿಯ ರಕ್ಷಣೆ ನೀಡುವ ಯೋಜನೆ ಇದಾಗಿದೆ. ರೈತರಿಗೆ ಪಿಂಚಣಿ ಸೌಲಭ್ಯ ಒದಗಿಸುತ್ತಿರುವುದು ಸ್ವತಂತ್ರ ಭಾರತದಲ್ಲಿ ಇದೇ ಮೊದಲಾಗಿದೆ.
ಮೊದಲ ಮೂರು ವರ್ಷಗಳಲ್ಲಿ ಸುಮಾರು 5 ಕೋಟಿ ಸಣ್ಣ ಮತ್ತು ಅತಿ ಸಣ್ಣ ರೈತರು ಈ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗಿದೆ. ಕೇಂದ್ರ ಸರ್ಕಾರವು ಈ ಯೋಜನೆಗಾಗಿ ಮೂರು ವರ್ಷಗಳಲ್ಲಿ ತನ್ನ ಪಾಲಿನ ಕೊಡುಗೆಯಾಗಿ 10774.50 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಿದೆ.
ಯೋಜನೆಯ ಪ್ರಮುಖ ಅಂಶಗಳು:
ದೇಶಾದ್ಯಂತದ ಎಲ್ಲ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಸ್ವಯಂಪ್ರೇರಿತ ಮತ್ತು ಕೊಡುಗೆಯಾಧರಿತ ಪಿಂಚಣಿ ಯೋಜನೆ.
ಯೋಜನೆಗೆ ಸೇರುವ 18 ರಿಂದ 40 ವರ್ಷದೊಳಗಿನ ರೈತರಿಗೆ 60 ವರ್ಷದ ನಂತರ ಕನಿಷ್ಠ 3,000 ರೂಪಾಯಿ ಪಿಂಚಣಿ.
ಉದಾಹರಣೆಗೆ, 29 ವರ್ಷದ ಒಬ್ಬ ರೈತ ಯೋಜನೆಗೆ ಸೇರಿದರೆ, ತಿಂಗಳಿಗೆ 100 ರೂ. ಕೊಡುಗೆ ನೀಡಬೇಕಾಗುತ್ತದೆ. ಕೇಂದ್ರ ಸರ್ಕಾರವೂ ಸಹ ಅರ್ಹ ರೈತರು ನೀಡಿದಷ್ಟೇ ಮೊತ್ತವನ್ನು ತನ್ನ ಪಾಲಿನ ಕೊಡುಗೆಯಾಗಿ ನೀಡುತ್ತದೆ.
ಪಿಂಚಣಿಯನ್ನು ಪಡೆಯುವ ಸಮಯದಲ್ಲಿ ರೈತ ಮೃತಪಟ್ಟರೆ, ಆತ ಪಡೆಯುತ್ತಿದ್ದ ಪಿಂಚಣಿಯಲ್ಲಿ ಶೇಕಡಾ 50 ರಷ್ಟನ್ನು ಕುಟುಂಬ ಪಿಂಚಣಿಯಾಗಿ ಈಗಾಗಲೇ ಪಿಂಚಣಿ ಯೋಜನೆಯಲ್ಲಿ ಸೇರಿರದ ಆತನ ಹೆಂಡತಿ/ ಗಂಡ ಪಡೆಯುತ್ತಾರೆ. ಪಿಂಚಣಿ ಯೋಜನೆಯ ಇನ್ನೂ ಕೊಡುಗೆ ಅವಧಿಯಲ್ಲೇ ರೈತ ಮೃತ ಪಟ್ಟರೆ, ಅವರ ಹೆಂಡತಿ/ಗಂಡ ಕೊಡುಗೆಯನ್ನು ನೀಡುವ ಮೂಲಕ ಯೋಜನೆಯನ್ನು ಮುಂದುವರಿಸಬಹುದು.
ಯೋಜನೆಗಳ ನಡುವಿನ ಸಹಕಾರ, ರೈತರಿಗೆ ಸಮೃದ್ಧಿ
ಈ ಯೋಜನೆಯ ಒಂದು ಆಸಕ್ತಿದಾಯಕ ವಿಚಾರವೆಂದರೆ, ಪ್ರಧಾನಮಂತ್ರಿ ಕಿಸಾನ ಸಮ್ಮಾನ್ ನಿಧಿ ಯೋಜನೆಯ ಮೂಲಕ ಪ್ರಯೋಜನ ಪಡೆಯುವ ರೈತ ನೇರವಾಗಿ ಪಿಂಚಣಿ ಯೋಜನೆಗೆ ತನ್ನ ತಿಂಗಳ ಕೊಡುಗೆಯನ್ನು ನೀಡಬಹುದು. ರೈತರು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ (MeitY) ಅಡಿಯಲ್ಲಿರುವ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡು ತಮ್ಮ ತಿಂಗಳ ಕೊಡುಗೆಯನ್ನು ಪಾವತಿಸಬಹುದು.
ಕೃಷಿ ಕ್ಷೇತ್ರವನ್ನು ಸದೃಢಗೊಳಿಸುವ ಪ್ರಮುಖ ಭರವಸೆಗಳ ಈಡೇರಿಕೆ
ಸ್ವಾತಂತ್ರ್ಯದ 70 ವರ್ಷಗಳ ನಂತರ, ರೈತರಿಗೆ ಇಂತಹದೊಂದು ರಕ್ಷಣೆಯ ಬಗ್ಗೆ ಯಾರೂ ಯೋಚಿಸಿರಲಿಲ್ಲ. 2019ರ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಪ್ರಧಾನಿ ಶ್ರೀ. ನರೇಂದ್ರ ಮೋದಿಯವರು ಮೊದಲಿಗೆ ಇಂತಹದೊಂದು ಪರಿಕಲ್ಪನೆಯನ್ನು ಮುಂದಿಟ್ಟರು. ಕ್ರಮೇಣ ಭಾರತದ ಉದ್ದಗಲಕ್ಕೂ ಇದಕ್ಕೆ ಬೆಂಬಲ ವ್ಯಕ್ತವಾಯಿತು. ಬಿಜೆಪಿ ಪಕ್ಷದ ಪ್ರಣಾಳಿಕೆಯಲ್ಲಿ ಈ ಯೋಜನೆಯನ್ನು ಪ್ರಸ್ತಾಪಿಸಲಾಗಿತ್ತು. ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರದ ಮೊದಲ ಸಂಪುಟ ಸಭೆಯಲ್ಲೇ ಇದು ಸಾಕಾರಗೊಂಡಿದೆ.