ಪಿಎಂಇಂಡಿಯಾ
ಎರಡು ಪವಿತ್ರ ಮಸೀದಿಗಳ ಉಸ್ತುವಾರಿಯಾದ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಅವರ ಆಹ್ವಾನದ ಮೇರೆಗೆ, ಭಾರತ ಗಣರಾಜ್ಯದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 29ನೇ ಅಕ್ಟೋಬರ್ 2019 ರಂದು ಸೌದಿ ಅರೇಬಿಯಾಕ್ಕೆ ಅಧಿಕೃತ ಭೇಟಿ ನೀಡಿದರು.
ಎರಡೂ ಕಡೆಯವರು ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಅವರು ಎರಡು ಸ್ನೇಹಪರ ದೇಶಗಳನ್ನು ಮತ್ತು ಅವರ ಜನರನ್ನು ಬೆಸೆಯುವ ಐತಿಹಾಸಿಕ ಮತ್ತು ನಿಕಟ ಸಂಬಂಧಗಳನ್ನು ಪರಿಶೀಲಿಸಿದರು. ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರು. ಉಭಯ ದೇಶಗಳ ಜನರ ನಡುವಿನ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ ಮತ್ತು ನಾಗರಿಕ ಸಂಬಂಧಗಳಲ್ಲಿ ಮೂಡಿಬಂದಿರುವ ಸ್ನೇಹ ಮತ್ತು ಸಹಭಾಗಿತ್ವದ ಸಂಬಂಧಗಳು ಮತ್ತು ಎರಡು ಸ್ನೇಹಪರ ರಾಷ್ಟ್ರಗಳ ನಡುವಿನ ಸಂಬಂಧಗಳ ವೃದ್ಧಿಗೆ ಬಲವಾದ ಆವೇಗವನ್ನು ಒದಗಿಸುವ ಪ್ರಮುಖ ಅವಕಾಶಗಳನ್ನು ಅವರು ಒತ್ತಿಹೇಳಿದರು.
ಫೆಬ್ರವರಿ 2014 ರಲ್ಲಿ ದೊರೆ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್ ಅವರ ಭಾರತ ಭೇಟಿ, ಗೌರವಾನ್ವಿತ ಭಾರತದ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು 2016 ರ ಏಪ್ರಿಲ್ನಲ್ಲಿ ಸೌದಿ ಅರೇಬಿಯಾಕ್ಕೆ ನೀಡಿದ ಭೇಟಿ, 2019 ರ ಫೆಬ್ರವರಿಯಲ್ಲಿ ರಾಜಕುಮಾರ, ಉಪ ಪ್ರಧಾನಿ ಮತ್ತು ರಕ್ಷಣಾ ಸಚಿವರ ನವ ದೆಹಲಿ ಭೇಟಿಯ ಸಂದರ್ಭದಲ್ಲಿ, ಮಾರ್ಚ್ 2010 ರ ‘ರಿಯಾದ್ ಘೋಷಣೆಯಲ್ಲಿ’ ರೂಪಿಸಲಾದ ಕಾರ್ಯತಂತ್ರದ ಸಹಭಾಗಿತ್ವವನ್ನು ಬಲಪಡಿಸಲು ಉಭಯ ಪಕ್ಷಗಳು ತಮ್ಮ ಬದ್ಧತೆಯನ್ನು ಪುನಃ ದೃಢಪಡಿಸಿದವು.
ಉಭಯ ದೇಶಗಳ ನಡುವೆ ಕಾರ್ಯತಂತ್ರದ ಸಹಭಾಗಿತ್ವ ಮಂಡಳಿ ಸ್ಥಾಪನೆ ಮತ್ತು ಅದರ ಸಂಸ್ಥಾಪಕ ದಾಖಲೆಗೆ ಸೌದಿ ಕಡೆಯಿಂದ ರಾಜಕುಮಾರ, ಉಪ ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವರು ಮತ್ತು ಭಾರತದ ಕಡೆಯಿಂದ ಗೌರವಾನ್ವಿತ ಪ್ರಧಾನಮಂತ್ರಿಯವರು ಸಹಿ ಹಾಕಿರುವ ಬಗ್ಗೆ ಎರಡೂ ಕಡೆಯವರು ತೃಪ್ತಿ ವ್ಯಕ್ತಪಡಿಸಿದರು. ಭೇಟಿಯ ಸಮಯದಲ್ಲಿ ಎರಡೂ ದೇಶಗಳಲ್ಲಿನ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳ ನಡುವೆ ವಿನಿಮಯ ಮಾಡಿಕೊಂಡ ಒಪ್ಪಂದಗಳು ಮತ್ತು ತಿಳುವಳಿಕೆಯ ಜ್ಞಾಪನಾಪತ್ರಗಳ ಬಗ್ಗೆಯೂ ಅವತು ತೃಪ್ತಿ ವ್ಯಕ್ತಪಡಿಸಿದರು.
ರಾಜಕೀಯ, ಆರ್ಥಿಕತೆ, ಭದ್ರತೆ, ರಕ್ಷಣೆ, ಮಾನವಶಕ್ತಿ ಮತ್ತು ಜನರ ನಡುವಿನ ವಿನಿಮಯಕ್ಕೆ ದ್ವಿಪಕ್ಷೀಯ ಸಂಬಂಧದ ಪ್ರಗತಿಗೆ ಎರಡೂ ಕಡೆಯವರು ಮೆಚ್ಚುಗೆ ವ್ಯಕ್ತಪಡಿಸಿದರು, ಇತ್ತೀಚಿನ ವರ್ಷಗಳಲ್ಲಿ ಇದು ದ್ವಿಪಕ್ಷೀಯ ಸಂಬಂಧಗಳನ್ನು ಬಲಪಡಿಸಿದೆ. ಜಗತ್ತಿನಲ್ಲಿ ಶಾಂತಿ, ಸ್ಥಿರತೆ ಮತ್ತು ಸುರಕ್ಷತೆಯನ್ನು ಉತ್ತೇಜಿಸುವ ಜವಾಬ್ದಾರಿಯ ಚೌಕಟ್ಟಿನಲ್ಲಿ ಪರಸ್ಪರ ಆಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಕುರಿತು ಉಭಯ ದೇಶಗಳ ನಡುವಿನ ಉನ್ನತ ಮಟ್ಟದ ಸಮಾಲೋಚನೆ ಮತ್ತು ಸಮನ್ವಯದ ಬಗ್ಗೆಯೂ ಅವರು ತೃಪ್ತಿ ವ್ಯಕ್ತಪಡಿಸಿದರು.
ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್, ಉಪ ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವರು ಭಾರತದ ಗೌರವಾನ್ವಿತ ಪ್ರಧಾನಿಯನ್ನು ಭೇಟಿಯಾದರು. ಉಭಯ ನಾಯಕರು ದ್ವಿಪಕ್ಷೀಯ ಚರ್ಚೆಗಳನ್ನು ನಡೆಸಿದರು, ಈ ಸಮಯದಲ್ಲಿ ಅವರು ಉಭಯ ದೇಶಗಳ ನಡುವೆ ವೃದ್ಧಿಸುತ್ತಿರುವ ಸ್ನೇಹ ಮತ್ತು ಸಹಕಾರದ ಸಂಬಂಧಗಳನ್ನು ಶ್ಲಾಘಿಸಿದರು. ಗೌರವಾನ್ವಿತ ಭಾರತ ಪ್ರಧಾನ ಮಂತ್ರಿ ರಿಯಾದ್ಗೆ 2016 ರ ಏಪ್ರಿಲ್ನಲ್ಲಿ ಭೇಟಿ ನೀಡಿದಾಗಿನಿಂದ ಮತ್ತು ರಾಜಕುಮಾರ ಮೊಹಮ್ಮದ್ ಬಿನ್ ಸಲ್ಮಾನ್ ಬಿನ್ ಅಬ್ದುಲಜೀಜ್ ಅಲ್ ಸೌದ್, ಉಪ ಪ್ರಧಾನ ಮಂತ್ರಿ ಮತ್ತು ರಕ್ಷಣಾ ಮಂತ್ರಿಯವರು 2019 ರ ಫೆಬ್ರವರಿಯಲ್ಲಿ ಭಾರತಕ್ಕೆ ಭೇಟಿಯ ನಂತರದಲ್ಲಿ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರದಲ್ಲಿ ಆಗಿರುವ ಪ್ರಗತಿಯನ್ನು ಉಭಯ ನಾಯಕರು ಶ್ಲಾಘಿಸಿದರು. ಇದು ಕಾರ್ಯತಂತ್ರದ ಸಹಭಾಗಿತ್ವವನ್ನು ಗಾಢವಾಗಿಸಿದೆ ಮತ್ತು ಸ್ನೇಹಪರ ರಾಷ್ಟ್ರಗಳು ಮತ್ತು ಜನರ ಒಳಿತಿಗಾಗಿ ವಿವಿಧ ಕ್ಷೇತ್ರಗಳಲ್ಲಿ ಉಭಯ ದೇಶಗಳ ನಡುವಿನ ಸಹಕಾರವನ್ನು ಬಲಪಡಿಸಿದೆ.
ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಎರಡೂ ಕಡೆಯವರು ಚರ್ಚಿಸಿದರು.ದೇಶಗಳ ಆಂತರಿಕ ವ್ಯವಹಾರಗಳ ಬಗೆಗಿನ ಯಾವುದೇ ರೀತಿಯ ಹಸ್ತಕ್ಷೇಪಗಳನ್ನು ಅವರು ಸ್ಪಷ್ಟವಾಗಿ ತಿರಸ್ಕರಿಸಿದರು. ರಾಷ್ಟ್ರಗಳ ಸಾರ್ವಭೌಮತ್ವದ ಮೇಲೆ ಯಾವುದೇ ದಾಳಿಯನ್ನು ತಡೆಗಟ್ಟುವಲ್ಲಿ ಅಂತರರಾಷ್ಟ್ರೀಯ ಸಮುದಾಯವು ತನ್ನ ಹೊಣೆಗಾರಿಕೆಯನ್ನು ಪೂರೈಸುವ ಅಗತ್ಯವನ್ನು ಪುನರುಚ್ಚರಿಸಿದರು. ಸಿರಿಯಾದಲ್ಲಿನ ಪರಿಸ್ಥಿತಿಗೆ ಸಂಬಂಧಿಸಿದಂತೆ ಭದ್ರತಾ ಮಂಡಳಿಯ ನಿರ್ಣಯ (2254) ಮತ್ತು ಯೆಮನ್ನ ಐಕ್ಯತೆಯನ್ನು ಕಾಪಾಡುವ ಮತ್ತು ಅದರ ಭದ್ರತೆ ಮತ್ತು ಸ್ಥಿರತೆಯನ್ನು ಸಾಧಿಸುವ ಮಹತ್ವವನ್ನು ಮತ್ತು ಜಿಸಿಸಿ ಉಪಕ್ರಮ, ಯೆಮೆನ್ ರಾಷ್ಟ್ರೀಯ ಸಂವಾದ ಮತ್ತು ಭದ್ರತಾ ಮಂಡಳಿಯ ನಿರ್ಣಯದ ಫಲಿತಾಂಶಗಳ (2216) ಆಧಾರದ ಮೇಲೆ ಯೆಮೆನ್ ಬಿಕ್ಕಟ್ಟಿಗೆ ರಾಜಕೀಯ ಪರಿಹಾರದ ಮಹತ್ವವನ್ನು ಒತ್ತಿ ಹೇಳಿದವು. ಪ್ಯಾಲೇಸ್ಟಿನಿಯನ್ ಜನರ ನ್ಯಾಯಸಮ್ಮತ ಹಕ್ಕುಗಳನ್ನು ಖಾತರಿಪಡಿಸಿಕೊಳ್ಳಲು ಮತ್ತು ಅರಬ್ ಶಾಂತಿ ಉಪಕ್ರಮ ಮತ್ತು ಸಂಬಂಧಿತ ವಿಶ್ವಸಂಸ್ಥೆ ನಿರ್ಣಯಗಳ ಆಧಾರದ ಮೇಲೆ 1967 ರಲ್ಲಿದ್ದ ಗಡಿಯಂತೆ ಜೆರುಸಲೆಮ್ ಅನ್ನು ರಾಜಧಾನಿಯಾಗಿಸಿಕೊಂಡು ಸ್ವತಂತ್ರ ರಾಷ್ಟ್ರವನ್ನು ಸ್ಥಾಪಿಸಲು, ಪ್ಯಾಲೆಸ್ಟೈನ್ನಲ್ಲಿ ನ್ಯಾಯಯುತ, ಸಮಗ್ರ ಮತ್ತು ಶಾಶ್ವತವಾದ ಶಾಂತಿಯನ್ನು ಸಾಧಿಸಲು ಎರಡೂ ಕಡೆಯವರು ಭರವಸೆ ವ್ಯಕ್ತಪಡಿಸಿದರು.
ಹಿಂದೂ ಮಹಾಸಾಗರ ಪ್ರದೇಶ ಮತ್ತು ಕೊಲ್ಲಿ ಪ್ರದೇಶದಲ್ಲಿನ ಜಲಮಾರ್ಗಗಳು ಮತ್ತು ರಾಷ್ಟ್ರೀಯ ಭದ್ರತೆ ಸೇರಿದಂತೆ ಉಭಯ ದೇಶಗಳ ಹಿತಾಸಕ್ತಿಗೆ ಧಕ್ಕೆ ತರುವ ಅಪಾಯಗಳಿಂದ ಸುರಕ್ಷತೆ ಮತ್ತು ಸುರಕ್ಷತೆಯನ್ನು ಖಾತರಿಪಡಿಸುವ ದ್ವಿಪಕ್ಷೀಯ ಮಾತುಕತೆಯ ಮಹತ್ವವನ್ನು ಉಭಯ ಪಕ್ಷಗಳು ಒಪ್ಪಿಕೊಂಡವು.
ಉಗ್ರವಾದ ಮತ್ತು ಭಯೋತ್ಪಾದನೆ ಎಲ್ಲ ರಾಷ್ಟ್ರಗಳು ಮತ್ತು ಸಮಾಜಗಳಿಗೆ ಬೆದರಿಕೆಯಾಗಿವೆ ಎಂದು ಎರಡೂ ಕಡೆಯವರು ಒತ್ತಿ ಹೇಳಿದರು. ಈ ಸಾರ್ವತ್ರಿಕ ವಿದ್ಯಮಾನವನ್ನು ಯಾವುದೇ ನಿರ್ದಿಷ್ಟ ಜನಾಂಗ, ಧರ್ಮ ಅಥವಾ ಸಂಸ್ಕೃತಿಗೆ ಜೋಡಿಸುವ ಯಾವುದೇ ಪ್ರಯತ್ನವನ್ನು ಅವರು ತಿರಸ್ಕರಿಸಿದರು. ಎಲ್ಲಾ ಭಯೋತ್ಪಾದಕ ಕೃತ್ಯಗಳನ್ನು ಎರಡೂ ಕಡೆಯವರು ತಿರಸ್ಕರಿಸಿದ್ದಾರೆ ಮತ್ತು ಇತರ ದೇಶಗಳ ವಿರುದ್ಧ ಭಯೋತ್ಪಾದಕ ಕೃತ್ಯಗಳನ್ನು ಮಾಡಲು ಕ್ಷಿಪಣಿಗಳು ಮತ್ತು ಡ್ರೋನ್ಗಳು ಸೇರಿದಂತೆ ಇತರ ಶಸ್ತ್ರಾಸ್ತ್ರಗಳ ಪ್ರವೇಶವನ್ನು ತಡೆಯುವ ಅಗತ್ಯವನ್ನು ಒತ್ತಿ ಹೇಳಿದರು.
ಸೌದಿಯಲ್ಲಿ ನಾಗರಿಕರ ವಿರುದ್ಧದ ಭಯೋತ್ಪಾದಕ ಕೃತ್ಯಗಳನ್ನು ಭಾರತದ ಕಡೆಯವರು ಖಂಡಿಸಿದರು. ವಿಶ್ವಸಂಸ್ಥೆಯ ಭಯೋತ್ಪಾದನಾ ನಿಗ್ರಹ ಕೇಂದ್ರದಲ್ಲಿ ನಿಕಟ ಸಹಕಾರ, ಭಯೋತ್ಪಾದಕ ಕೃತ್ಯಗಳನ್ನು ಎದುರಿಸಲು ಸಹಕಾರವನ್ನು ಬಲಪಡಿಸುವುದು, ಮಾಹಿತಿ ವಿನಿಮಯ, ಸಾಮರ್ಥ್ಯ ವೃದ್ಧಿ ಮತ್ತು ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಭದ್ರತಾ ಸಹಕಾರದ ಚೌಕಟ್ಟಿನೊಳಗೆದೇಶೀಯ ಅಪರಾಧಗಳನ್ನು ಎದುರಿಸುವಲ್ಲಿ ಸಹಕಾರವನ್ನು ಬಲಪಡಿಸಲು ಎರಡೂ ಕಡೆಯವರು ಕರೆ ನೀಡಿದರು.
ಉಭಯ ದೇಶಗಳಲ್ಲಿ ಮುಂದುವರಿದಿರುವ ಸಕಾರಾತ್ಮಕ ಆರ್ಥಿಕ ಸುಧಾರಣೆಯನ್ನು ಎರಡೂ ಕಡೆಯವರು ಗಮನಿಸಿದರು ಮತ್ತು ಕಾರ್ಯತಂತ್ರದ ಸಹಕಾರವನ್ನು ಹೆಚ್ಚಿಸುವ ಸಲುವಾಗಿ ವ್ಯಾಪಾರ ಮತ್ತು ಹೂಡಿಕೆ ಸಂಬಂಧಗಳನ್ನು ವಿಸ್ತರಿಸುವ ಮಹತ್ವವನ್ನು ಒತ್ತಿ ಹೇಳಿದರು. ಇತ್ತೀಚಿನ ವರ್ಷಗಳಲ್ಲಿ ದ್ವಿಪಕ್ಷೀಯ ವ್ಯಾಪಾರದಲ್ಲಿನ ಸಕಾರಾತ್ಮಕ ಪ್ರವೃತ್ತಿಯ ಬಗ್ಗೆ ಅವರು ಹರ್ಷ ವ್ಯಕ್ತಪಡಿಸಿದರು. ಸೌದಿ ಅರೇಬಿಯಾ ಸಾಮ್ರಾಜ್ಯದ ವಿಷನ್ 2030 ರ ಅಡಿಯಲ್ಲಿ ಉಭಯ ದೇಶಗಳ ನಡುವೆ ವ್ಯಾಪಾರ ಮತ್ತು ಹೂಡಿಕೆ ಸಹಕಾರವನ್ನು ಇನ್ನಷ್ಟು ಗಾಢವಾಗಿಸುವುದನ್ನು ಪುನರುಚ್ಚರಿಸಿದರು. ಎರಡೂ ದೇಶಗಳಲ್ಲಿನ ಹೂಡಿಕೆ ಅವಕಾಶಗಳನ್ನು ಬಳಸಿಕೊಳ್ಳುವಂತೆ ವಿಶೇಷವಾಗಿ ಮೂಲಸೌಕರ್ಯ, ಗಣಿಗಾರಿಕೆ, ನವೀಕರಿಸಬಹುದಾದ್ದೂ ಸೇರಿದಂತೆ ಇಂಧನ, ಕೃಷಿ, ತಂತ್ರಜ್ಞಾನ ವರ್ಗಾವಣೆ, ಮಾಹಿತಿ ತಂತ್ರಜ್ಞಾನ, ಎಲೆಕ್ಟ್ರಾನಿಕ್ಸ್ ಮತ್ತು ದೂರಸಂಪರ್ಕದಲ್ಲಿ ನುರಿತ ಮಾನವ ಸಂಪನ್ಮೂಲ ಕ್ಷೇತ್ರಗಳಲ್ಲಿರುವ ಅವಕಾಶಗಳನ್ನು ಉಪಯೋಗಿಸಿಕೊಳ್ಳುವಂತೆ ಎರಡೂ ದೇಶಗಳ.ವ್ಯಾಪಾರ ಸಮುದಾಯಗಳನ್ನು ಒತ್ತಾಯಿಸಿದರು.
ಭೇಟಿಯ ಸಮಯದಲ್ಲಿ, ಇಂಧನ, ನಾಗರಿಕ ವಿಮಾನಯಾನ, ಭದ್ರತಾ ಸಹಕಾರ, ರಕ್ಷಣೆ, ರುಪೇ ಕಾರ್ಡ್ಗಳ ಬಿಡುಗಡೆ ಮತ್ತು ವೈದ್ಯಕೀಯ ಉತ್ಪನ್ನಗಳ ನಿಯಂತ್ರಣ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸಲು ಹಲವಾರು ಒಪ್ಪಂದಗಳಿಗೆ ಸಹಿ ಮಾಡಲಾಯಿತು.
ಭೇಟಿಯ ಕೊನೆಯಲ್ಲಿ, ಭಾರತದ ಗೌರವಾನ್ವಿತ ಪ್ರಧಾನ ಮಂತ್ರಿಯವರು ತಮಗೆ ಮತ್ತು ತಮ್ಮ ಜೊತೆಗಿದ್ದ ನಿಯೋಗಕ್ಕೆ ನೀಡಿದ ಆತ್ಮೀಯ ಆತಿಥ್ಯಕ್ಕಾಗಿ ಸರ್ಕಾರ ಮತ್ತು ಸೌದಿ ಅರೇಬಿಯಾದ ಜನರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಮುಂಬರುವ 2020ರ ಜಿ 20 ಅಧ್ಯಕ್ಷ ಸ್ಥಾನಕ್ಕಾಗಿ ಸೌದಿ ಅರೇಬಿಯಾವನ್ನು ಭಾರತದ ದೊಡ್ಡ ಬೆಂಬಲ ಹಾಗೂ ಸ್ವಾಗತವನ್ನು ದೃಢಪಡಿಸಿದರು ಮತ್ತು ರಿಯಾದ್ ನಲ್ಲಿ ನಡೆಯಲಿರುವ ಜಿ 20 ದೇಶಗಳ ನಾಯಕರ ಮುಂದಿನ ಶೃಂಗಸಭೆಯಲ್ಲಿ ಭಾಗವಹಿಸಲು ತಾವು ಎದುರು ನೋಡುತ್ತಿರುವುದಾಗಿ ತಿಳಿಸಿದರು. ಜಿ 20 ರ ಚೌಕಟ್ಟಿನೊಳಗೆ ಸೌದಿ ಮಾಡಿದ ಮಹತ್ತರ ಪ್ರಯತ್ನಗಳನ್ನು ಪ್ರಧಾನಿ ಶ್ಲಾಘಿಸಿದರು.
ಭಾರತದ ಪ್ರಧಾನ ಮಂತ್ರಿಯವರ ಆರೋಗ್ಯ ಮತ್ತು ಸಂತೋಷಕ್ಕಾಗಿ ಮತ್ತು ಸ್ನೇಹಪರ ಭಾರತೀಯ ಜನರ ಪ್ರಗತಿ ಮತ್ತು ಸಮೃದ್ಧಿಗೆ ದೊರೆ ಶುಭ ಹಾರೈಸಿದರು.
ಎರಡು ಸ್ನೇಹಪರ ದೇಶಗಳು ಮತ್ತು ಅವುಗಳ ಜನತೆಯ.ಸಮಾಲೋಚನೆಗಳನ್ನು ಪೂರ್ಣಗೊಳಿಸಲು ಮತ್ತು ದ್ವಿಪಕ್ಷೀಯ ಸಹಕಾರ ಮತ್ತು ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚಿಸಲು, ಇಬ್ಬರ ಹಿತಾಸಕ್ತಿಗಳನ್ನು ಪೂರೈಸಲು ಭಾರತಕ್ಕೆ ಭೇಟಿ ನೀಡುವಂತೆ ಭಾರತದ ಪ್ರಧಾನಿಯವರು ನೀಡಿದ ಆಹ್ವಾನವನ್ನು ದೊರೆ ಸ್ವಾಗತಿಸಿದರು.