ಪಿಎಂಇಂಡಿಯಾ
ನಮಸ್ಕಾರ,
ಗಣ್ಯರೇ, ಪ್ರಕೃತಿ ಚಿಕಿತ್ಸಾ ಕೇಂದ್ರದ ಉದ್ಘಾಟನೆಗಾಗಿ ನ್ಯೂಯಾರ್ಕಿನಲ್ಲಿ ಸೇರಿರುವ ಆಹ್ವಾನಿತರೇ , ಆನ್ ಲೈನ್ ಮೂಲಕ ಮತ್ತು ಟೆಲಿವಿಷನ್ ಮೂಲಕ ಈ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವ ವೀಕ್ಷಕರೇ, ಮಹಿಳೆಯರೇ ಮತ್ತು ಮಹನೀಯರೇ, ಅಂತಾರಾಷ್ಟ್ರೀಯ ಯೋಗ ದಿನದ ಶುಭಾಶಯಗಳು!.
ಇಂದು ಬೆಳಿಗ್ಗೆ , ಈ ಸಂಧರ್ಭವನ್ನು ಆಚರಿಸಲು ಹಿಮಾಲಯದ ತಪ್ಪಲಿನಲ್ಲಿರುವ ಸುಂದರ ನಗರ ಡೆಹ್ರಾಡೂನಿನಲ್ಲಿ ವಿವಿಧ ವಯೋಮಾನದ , ಜೀವನದ ವಿವಿಧ ಕ್ಷೇತ್ರಗಳ ಜನರೊಂದಿಗೆ ಸೇರಿ ಕೈಜೋಡಿಸಿದ್ದು ನನಗೆ ಅತ್ಯಂತ ಸಂತೋಷ ತಂದಿದೆ. ಕಳೆದ ಕೆಲವು ದಿನಗಳಿಂದ ವಿಶ್ವದಾದ್ಯಂತ ಜನರು ಯೋಗಾಚರಣೆಯಲ್ಲಿ ಪಾಲ್ಗೊಂಡ ದೃಶ್ಯ,
ನಾನು ನೋಡುತ್ತಿದ್ದೇನೆ. ನಿಜವಾಗಿಯೂ, ಮೂರು ವರ್ಷಗಳಲ್ಲಿ ಈ ಕಾರ್ಯಕ್ರಮ ವಿಶ್ವ ವ್ಯಾಪೀ ಜನಾಂದೋಲನವಾಗಿದೆ. ಇದು ಹಲವು ರಾಷ್ಟ್ರಗಳಲ್ಲಿಯ ಜನಜೀವನದ ಅವಿಭಾಜ್ಯ ಅಂಗವಾಗಿದೆ. ಅದರ ಪರಿಣಾಮ ವ್ಯಾಪಕವಾಗಿ ಹರಡಿದೆ. ಭಾರತದಲ್ಲಿ ನಾನು ಅಂತಾರಾಷ್ಟ್ರೀಯ ಯೋಗ ದಿನ ಆಚರಣೆಯಲ್ಲಿ ಮೂರು ಪ್ರತ್ಯೇಕ ಅಂಶಗಳನ್ನು ಕಾಣುತ್ತೇನೆ. ನನಗೆ ಖಚಿತವಿದೆ, ಬೇರೆ ಹಲವು ದೇಶಗಳಲ್ಲಿಯೂ ಇದೇ ರೀತಿ ಇದೆ.
ಮೊದಲನೇಯದಾಗಿ ಇದು ಮಿಲಿಯಾಂತರ ಜನರಿಗೆ ಪ್ರೇರಣೆ ನೀಡುವ ಕಾರ್ಯಕ್ರಮ. ಯೋಗದ ಸ್ಪೂರ್ತಿಯಿಂದ ಪ್ರೇರೇಪಣೆಗೊಂಡು ತಮ್ಮನ್ನು ತಾವು ಯೋಗಕ್ಕಾಗಿ ದುಡಿಯುವ ಬದ್ದತೆಯನ್ನು ಕೈಗೊಳ್ಳುವ ಅವಕಾಶ.
ಎರಡನೇಯದಾಗಿ, ಈಗಾಗಲೇ ಯೋಗವನ್ನು ಅಳವಡಿಸಿಕೊಂಡವರು ಮತ್ತೆ ಅದಕ್ಕಾಗಿಯೇ ತಮ್ಮನ್ನು ತಾವು ಮುಡಿಪಾಗಿಡುವ ಸಂಧರ್ಭ.
ಮೂರನೇ ವಿಷಯವೆಂದರೆ ಉತ್ತಮ ಮಾತುಗಳನ್ನು ಹರಡುವುದು. ಯೋಗದಿಂದ ಪ್ರಯೋಜನ ಪಡೆದ ಸಾವಿರಾರು ವ್ಯಕ್ತಿಗಳು ಮತ್ತು ಸಂಸ್ಥೆಗಳು ಯೋಗ ಇನ್ನೂ ತಲುಪದವರನ್ನು ತಲುಪುವಂತಹ ನಿಟ್ಟಿನಲ್ಲಿ ಮುಂದುವರಿಯಬೇಕು.ಈ ಪ್ರಕ್ರಿಯೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವದಾದ್ಯಂತ ಒಂದು ಹಬ್ಬದ ರೀತಿಯಲ್ಲಿ ಆಚರಿಸುವಂತಾಗಬೇಕು. ಯೋಗ ಎಂದರೆ ಒಗ್ಗೂಡುವುದು. ಆದ್ದರಿಂದ ಯೋಗದಲ್ಲಿ ಆಸಕ್ತಿಯ ಹೆಚ್ಚಳ, ನನ್ನಲ್ಲಿ ಭರವಸೆಯನ್ನು ತುಂಬಿದೆ. ಯೋಗವು ವಿಶ್ವವನ್ನು ಜೋಡಿಸುವ ಶಕ್ತಿಯಾಗುತ್ತದೆ ಎಂಬ ಬಗ್ಗೆ ನನಗೆ ಭರವಸೆ ಮೂಡಿದೆ.
ನೀವು ಅಂತಾರಾಷ್ಟ್ರೀಯ ಯೋಗ ದಿನವನ್ನು ಈ ಪ್ರಕೃತಿ ಚಿಕಿತ್ಸಾ ಕೇಂದ್ರದ ಉದ್ಘಾಟನೆಗಾಗಿ ಆಯ್ದುಕೊಂಡದ್ದು ನನಗೆ ಸಂತೋಷ ತಂದಿದೆ. ಈ ಕೇಂದ್ರವು ತನ್ನ ಎಲ್ಲಾ ಕಾರ್ಯಕ್ರಮಗಳಲ್ಲಿ ಮತ್ತು ಉಪಕ್ರಮಗಳಲ್ಲಿ ಯೋಗದ ವಿವಿಧ ಅಂಶಗಳನ್ನು ಒಗ್ಗೂಡಿಸಿಕೊಂಡು ಮುಂದುವರಿಯುತ್ತದೆ ಎಂದು ನಾನು ಭರವಸೆ ಹೊಂದಿದ್ದೇನೆ.
ಸ್ನೇಹಿತರೇ ,
ಭಾರತದ ಸಾಂಪ್ರದಾಯಿಕ ಜ್ಞಾನ ವ್ಯವಸ್ಥೆಗಳಾದ ಯೋಗ ಮತ್ತು ಆಯುರ್ವೇದಗಳು ನಮ್ಮನ್ನು ಆರೋಗ್ಯದಿಂದಿರಲು ಸಹಾಯ ಮಾಡುತ್ತವೆ. ಅವುಗಳು ನಮ್ಮ ದೇಹದೊಳಗಿನ ಮತ್ತು ಮನಸ್ಸಿನೊಳಗಿನ ಜನ್ಮದಾತ ದೌರ್ಬಲ್ಯಗಳನ್ನು ಮೀರಲು ಸಹಾಯ ಮಾಡುತ್ತವೆ.
ಈ ವ್ಯವಸ್ಥೆಗಳು , ಪದ್ದತಿಗಳು ವ್ಯಕ್ತಿಗಳನ್ನು ಜಾಗ್ರತೆಯಿಂದ ಮತ್ತು ಗೌರವದೊಂದಿಗೆ ಚಿಕಿತ್ಸೆಗೆ ಒಳಪಡಿಸುತ್ತವೆ . ಅವುಗಳ ಧೋರಣೆ ನೇರ ಆಕ್ರಮಣಕಾರಿ ಅಲ್ಲ, ಯರ್ರಾಬಿರ್ರಿಯೂ ಅಲ್ಲ.
ಸಾಂಪ್ರದಾಯಿಕ ಚಿಕಿತ್ಸಾ ಪದ್ದತಿಯನ್ನು ಬಳಸುತ್ತಿರುವವರಿಗೆ ಒಂದು ಚೇತೋಹಾರಿಯಾದ ಬದಲಾವಣೆ ದೊರೆಯುತ್ತದೆ. ಆಧುನಿಕ ಜೀವನ ವಿಧಾನ ದೇಹ ಮತ್ತು ಮನಸ್ಸಿನ ಮೇಲೆ ಪರಿಣಾಮ ಬೀರಿದೆ.
ಸಾಂಪ್ರದಾಯಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯ ಆದ್ಯತೆ ದುರ್ದೈವವಶಾತ್ ರೋಗವನ್ನು ಗುಣಪಡಿಸುವುದಾಗುತ್ತಿದೆಯೇ ಹೊರತು ರೋಗಗಳು ಬಾರದಂತೆ ತಡೆಯುವುದರತ್ತ ಸಾಕಷ್ಟು ಗಮನ ಕೊಡುತ್ತಿಲ್ಲ.
ಇಂದು ಎದುರಾಗುತ್ತಿರುವ ಭಾರೀ ಆರೋಗ್ಯ ಸವಾಲುಗಳನ್ನು ಎದುರಿಸಿ ಪರಿಹಾರ ಹುಡುಕಲು ನಮಗೆ ಸಾಂಪ್ರದಾಯಿಕ ವೈದ್ಯ ಪದ್ದತಿಗಳು ಅಗತ್ಯ ಎಂಬುದನ್ನು ನಿರಾಕರಿಸಲಾಗದು. ಆದರೆ ಅಲ್ಲಿ ಇನ್ನೂ ಪರಿಹಾರ ಹುಡುಕದ ಅಂತರಗಳು ಇವೆ ಎಂಬುದೂ ಇಂದು ವಸ್ತು ಸ್ಥಿತಿ. ಯೋಗ ಮತ್ತು ಆಯುರ್ವೇದಗಳು ಸಾಂಪ್ರದಾಯಿಕ ವೈದ್ಯಪದ್ದತಿಗೆ ಪೂರಕವಾಗಿ ಅತ್ಯುತ್ತಮವಾಗಿ ಸ್ಪಂದಿಸುತ್ತವೆ ಎಂಬುದನ್ನು ವಿಶ್ವದಾದ್ಯಂತದ ಆರೋಗ್ಯ ಕ್ಷೇತ್ರದ ತಜ್ಞರು ಒಪ್ಪುತ್ತಾರೆ. ಈ ಪರಿಪೂರ್ಣ, ಸಮಗ್ರ ಪದ್ದತಿಗಳು ಕ್ಷೇಮ ಮತ್ತು ರೋಗ ನಿಯಂತ್ರಣಕ್ಕೆ ಆದ್ಯತೆ ನೀಡುತ್ತವೆ. ಈ ಸಮಗ್ರ ಪದ್ದತಿಗಳ ಅನುಸರಿಸುವಿಕೆಯಿಂದ ವ್ಯಕ್ತಿಗಳಲ್ಲಿ ಮಾತ್ರವಲ್ಲ ಸಮಾಜದಲ್ಲಿಯೂ ಆರೋಗ್ಯ ಮತ್ತು ಕ್ಷೇಮದ ವಾತಾವರಣ ವೃದ್ಧಿಸುತ್ತದೆ. ಕೆಲವು ವ್ಯಕ್ತಿಗಳ ನಿಲುವಿಗೆ ವಿರುದ್ಧವೆಂಬಂತೆ ಯೋಗವು ಬರೇ ದೇಹಭಂಗಿ ಮತ್ತು ವ್ಯಾಯಾಮಕ್ಕೆ ಸೀಮಿತವಾಗಿಲ್ಲ. ಅದು ಮನಸ್ಸಿನಲ್ಲಿ ಆಳವಾದ ಶೋಧನೆಗೆ ದಾರಿ ಮಾಡಿಕೊಡುತ್ತದೆ. ದೇಹದಲ್ಲಿ ಚೈತನ್ಯವನ್ನೂ, ಸ್ಪೂರ್ತಿಯನ್ನೂ ತುಂಬುತ್ತದೆ. ನಮ್ಮನ್ನು ನಾವೇ ಅರಿತುಕೊಳ್ಳಲು ಅವಕಾಶ ಮಾಡಿಕೊಡುತ್ತದೆ. ಇದು ಸಾಮಾಜಿಕ ಶಿಸ್ತು, ಮತ್ತು ಆ ಮೂಲಕ ನೈತಿಕತೆ ಮತ್ತು ಜೀವನ ಮೌಲ್ಯಗಳನ್ನು ರೂಪಿಸುತ್ತದೆ. ಯೋಗವು ನಮ್ಮನ್ನು ಮುಕ್ತಿಯತ್ತ ಅಥವಾ ಚಿಂತೆಯಿಂದ ಮುಕ್ತವಾದ ಹಾದಿಯಲ್ಲಿ ನಡೆಯಲು ಸಹಾಯ ಮಾಡುತ್ತದೆ.
ಸ್ನೇಹಿತರೇ,
ಯೋಗಕ್ಕೆ ಯಾವುದೇ ಧರ್ಮ ಇಲ್ಲ ಎಂದು ನಾನು ಸದಾ ನಂಬಿದ್ದೇನೆ. ತಾವು ಧಾರ್ಮಿಕರಲ್ಲ ಎಂದು ತಮ್ಮನ್ನು ತಾವು ಭಾವಿಸಿಕೊಂಡವರೂ ಸೇರಿದಂತೆ ಪ್ರತಿಯೊಬ್ಬರಿಗೂ ಪ್ರಯೋಜನವಾಗುವಂತಹ ಪ್ರಾಯೋಗಿಕ ಕ್ರಮಗಳನ್ನು ಯೋಗವು ಒಳಗೊಂಡಿದೆ. ಆಧುನಿಕ ಯೋಗದ ಅಭ್ಯಾಸವು ಪ್ರಾಚೀನ ಜ್ಞಾನ ಶಾಖೆಯ ವಿವಿಧ ಅಂಶಗಳನ್ನು ಒಳಗೊಂಡಿದೆ. ಇದರಲ್ಲಿ ನೈತಿಕ ತತ್ವಗಳು, ದೇಹವನ್ನು ಸದೃಢವಾಗಿಸುವ ಭಂಗಿಗಳು, ಧಾರ್ಮಿಕ ತತ್ವಶಾಸ್ತ್ರ, ಗುರುವಿನ ಮುಖೇನ ಸೂಚನೆಗಳು, ಮಂತ್ರಗಳ ಪಠಣ, ಶ್ವಾಸೋಚ್ಚಾಸಗಳ ನಿಯಂತ್ರಣ , ಧ್ಯಾನದ ಮೂಲಕ ಮನಸ್ಸಿನ ನಿಯಂತ್ರಣ ಸೇರಿದೆ. ಯೋಗವು ಮನುಷ್ಯನ ಜೀವನ ವಿಧಾನವನ್ನು ಬದಲಾಯಿಸಲು ಆದ್ಯತೆ ನೀಡುತ್ತದೆ. ಆ ಮೂಲಕ ಜೀವನ ಶೈಲಿ ಆಧಾರಿತ ತೊಂದರೆಗಳನ್ನು ಸುಲಭವಾಗಿ ನಿವಾರಿಸಬಹುದು. ಯೋಗವನ್ನು ದಿನನಿತ್ಯ ಅಭ್ಯಾಸ ಮಾಡುವುದರಿಂದ ಆರೋಗ್ಯ ಸುಧಾರಿಸುತ್ತದೆ ಮಾತ್ರವಲ್ಲ, ಮಾನಸಿಕವಾಗಿ ಉತ್ತಮ ಸ್ಥಿತಿಯನ್ನು ಹೊಂದಲು ಸಾಧ್ಯವಾಗುತ್ತದೆ ಹಾಗು ಜೀವನದಲ್ಲಿ ಸಂತೋಷ ಮತ್ತು ಮಾನಸಿಕ ಸ್ಪಷ್ಟತೆ ದೊರೆಯುತ್ತದೆ ಎಂಬುದಾಗಿ ಯೋಗ ತಜ್ಞರು ಹೇಳುತ್ತಾರೆ. ಕೆಲವು ಯೋಗ ಭಂಗಿಗಳು, ಮತ್ತು ಪ್ರಾಣಾಯಾಮ ಭಾರತದಲ್ಲಿ ಶತಮಾನಗಳಿಂದ ಇದ್ದ ರೋಗಗಳನ್ನು ನಿಯಂತ್ರಿಸಲು ಸಹಾಯ ಮಾಡಿದೆ. ಇದಕ್ಕೀಗ ಪೂರಕ ಸಾಕ್ಷಾಧಾರಗಳನ್ನು ರೂಪಿಸಲು ಆಧುನಿಕ ವಿಜ್ಞಾನ ಮುಂದಾಗಿದೆ. ಹೃದಯ, ಮೆದುಳು ಮತ್ತು ಅಂತಸ್ರಾವ ಗ್ರಂಥಿಗಳು ಸಹಿತ ದೇಹದೊಳಗಿನ ಹಲವು ಅಂಗಾಂಗಗಳ ಮೇಲೆ ನಿಯಂತ್ರಣ ಸಾಧಿಸಲು ಯೋಗದಿಂದ ಸಾಧ್ಯವಿದೆ ಎಂಬುದನ್ನು ವಿಜ್ಞಾನ ಸಾಬೀತು ಮಾಡಿದೆ.
ಇಂದು, ಪಾಶ್ಚಿಮಾತ್ಯ ದೇಶಗಳಲ್ಲಿ ಯೋಗದಲ್ಲಿ ಆಸಕ್ತಿ ತ್ವರಿತವಾಗಿ ಬೆಳೆಯುತ್ತಿದೆ. ಪಾಶ್ಚಿಮಾತ್ಯ ವಿಶ್ವದಲ್ಲಿ ಯೋಗಕ್ಕೆ ಭಾರೀ ಶ್ಲ್ಯಾಘನೆ ದೊರೆಯುತ್ತಿದೆ ಎಂದು ಹೇಳಿದರೆ ಅದು ಅತಿಶಯೋಕ್ತಿಯಲ್ಲ. ಅಮೇರಿಕಾ ಒಂದರಲ್ಲೇ 20 ಮಿಲಿಯನ್ ಗೂ ಅಧಿಕ ಜನರು ಯೋಗಾಭ್ಯಾಸ ಮಾಡುತ್ತಿದ್ದಾರೆಂದು ನನಗೆ ತಿಳಿಸಲಾಗಿದೆ. ಮತ್ತು ಈ ಸಂಖ್ಯೆ ಪ್ರತೀ ವರ್ಷಕ್ಕೆ ಸರಾಸರಿ 5 ಪ್ರತಿಶತ ಹೆಚ್ಚುತ್ತಿದೆ, ಅಮೇರಿಕಾ ಮತ್ತು ಯುರೋಪಿನ ಹಲವು ಆಧುನಿಕ ವೈದ್ಯ ವಿಜ್ಞಾನ ಸಂಸ್ಥೆಗಳು ಹಲವು ಖಾಯಿಲೆಗಳಿಗೆ ಯೋಗವನ್ನು ಪರ್ಯಾಯ ಚಿಕಿತ್ಸೆಯಾಗಿ ಅಂಗೀಕರಿಸಿವೆ. ತಡವಾಗಿಯಾದರೂ ಯೋಗದಲ್ಲಿ ಬಹಳ ಸಂಶೋಧನೆ ನಡೆಯತೊಡಗಿದೆ. ಭಾರತ ಸರಕಾರವು ಸಾರ್ವಜನಿಕ ಆರೋಗ್ಯ ವ್ಯವಸ್ಥೆಯಲ್ಲಿ ಫಲಿತಾಂಶ ಆಧಾರಿತ ಪಾರಂಪರಿಕ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನು ಜಾರಿಗೆ ತರಲು ಬದ್ದವಾಗಿದೆ. ಕಳೆದ ವರ್ಷ ಘೋಷಿಸಲಾದ ನಮ್ಮ ರಾಷ್ಟ್ರೀಯ ಆರೋಗ್ಯ ನೀತಿ ರೋಗಗಳನ್ನು ತಡೆಯುವುದಕ್ಕೆ ಆದ್ಯತೆ ಕೊಡುತ್ತಿದೆ. ನಾವು ರಾಷ್ಟ್ರವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಗಳ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮಗಳನ್ನು ಆರಂಭಿಸಿದ್ದೇವೆ. ವಿಶ್ವದಲ್ಲಿ ಅತೀ ಹೆಚ್ಚು ಜನಸಂಖ್ಯೆ ಇರುವ ಎರಡನೇ ರಾಷ್ಟ್ರ ಭಾರತ. ಇಂದು ಕೈಗೊಂಡ ಕ್ರಮಗಳ ಫಲಿತಾಂಶ ಲಭಿಸಲು ಹಲವು ವರ್ಷಗಳು ಬೇಕಾಗುತ್ತವೆ, ಆದರೆ ನನಗೆ ವಿಶ್ವಾಸವಿದೆ, ಸದ್ಯದಲ್ಲಿಯೇ ಕಣ್ಣಿಗೆ ಕಾಣಿಸುವಂತಹ ಫಲಿತಾಂಶಗಳು ಬರುತ್ತವೆ ಎಂದು.
ಒಟ್ಟು ಸಾರಾಂಶ ರೂಪವಾಗಿ ನಾನು ಮತ್ತೊಮ್ಮೆ ಹೇಳಬಯಸುವುದೇನೆಂದರೆ ಆರಾಮ ಮತ್ತು ಪರಿಹಾರ ಹುಡುಕಿಕೊಂಡು ಬರುವವರಿಗೆ ನಿಮ್ಮ ಪ್ರಕೃತಿ ಚಿಕಿತ್ಸಾ ಸೌಲಭ್ಯವು ಯೋಗದ ಪ್ರಯೋಜನಗಳನ್ನು ದೊರಕುವಂತೆ ಮಾಡುವ ನಿಟ್ತಿನಲ್ಲಿ ಕೆಲಸ ಮಾಡಬಲ್ಲುದು. ನಿಮ್ಮ ಕೇಂದ್ರವು ಸ್ವಾಸ್ಥ್ಯ ಮತ್ತು ಕ್ಷೇಮಕ್ಕೆ ಸಂಬಂಧಿಸಿ ರೂಪಿಸಿದ ಪಥವು ವ್ಯಕ್ತಿಗಳ ಖಾಸಗಿ ಕಳವಳಗಳನ್ನು ಪರಿಹಾರ ಮಾಡುವ ಉದ್ದೇಶಗಳನ್ನು ಒಳಗೊಂಡಿದೆ, ಇದು ನನಗೆ ಸಂತೋಷದ ಸಂಗತಿಯಾಗಿದೆ. ಇದರ ಉದ್ದೇಶ ಜೀವನ ಪೂರ್ತಿ ಸ್ವಾಸ್ಥ್ಯ ಮತ್ತು ಕ್ಷೇಮದಿಂದಿರುವುದು ಆಗಿದೆ ಎಂಬುದು ಬಹಳ ಪ್ರಮುಖ ವಿಷಯ. ವೈಜ್ಞಾನಿಕ ಧೋರಣೆಯಲ್ಲಿ ನಂಬಿಕೆ ಮತ್ತು ಅಧಿಕೃತತೆ ಈ ಉದ್ದೇಶದ ಹಿಂದೆ ಇದೆ. ಇಂತಹ ಧೋರಣೆಯ ಮೂಲಕ ಕೇಂದ್ರವು ಕ್ಷೇಮ ಸಂಬಂಧಿ ಆಂದೋಲನದಲ್ಲಿ ಹೆಚ್ಚಿನ ಕೊಡುಗೆ ನೀಡಬಲ್ಲುದು ಮತ್ತು ಅಮೇರಿಕಾದ ಬೃಹತ್ ಸಂಖ್ಯೆಯ ಜನರಿಗೆ ಯೋಗದ ಲಾಭಗಳು ದೊರೆಯುವಂತೆ ಮಾಡಬಲ್ಲುದು. ನಿಮ್ಮ ಕೇಂದ್ರವು ಈ ಕ್ಷೇತ್ರದಲ್ಲಿ 500 ನೇರ ಮತ್ತು 1500 ಪರೋಕ್ಷ ಉದ್ಯೋಗಗಳನ್ನು ಸೃಷ್ಟಿ ಮಾಡಲಿದೆ ಎಂಬುದನ್ನು ತಿಳಿದು ನನಗೆ ಇನ್ನಷ್ಟು ಸಂತೋಷವಾಗಿದೆ. ಇದರಿಂದ ಅದು ಸಮುದಾಯದ ಜವಾಬ್ದಾರಿಯುತ ಸದಸ್ಯನಾಗುತ್ತದೆ.ಈ ಸಾಹಸದಲ್ಲಿ ನಿಮಗೆ ಶುಭವಾಗಲಿ ಎಂದು ನಾನು ಹಾರೈಸುತ್ತೇನೆ.
ನಿಮಗೆಲ್ಲರಿಗೂ ತುಂಬಾ ಧನ್ಯವಾದಗಳು
Inaugurated a Nature Cure Centre in New York, via video conferencing. Here is my speech. https://t.co/U3BkA7wyK7
— Narendra Modi (@narendramodi) June 21, 2018