Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಅಸ್ಸಾಂನ ಕಾಮರೂಪ್ ನಲ್ಲಿ ನೂತನ ಏಮ್ಸ್ ಸ್ಥಾಪನೆಗೆ ಸಂಪುಟದ ಅನುಮೋದನೆ


ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕಾಮರೂಪ (ಉತ್ತರ ಗುವಾಹಟಿಯ ಕಂದಾಯ ವೃತ್ತ)ದಲ್ಲಿ ನೂತನ ಎ.ಐ.ಐ.ಎಂ.ಎಸ್. ಸ್ಥಾಪನೆಗೆ ತನ್ನ ಅನುಮೋದನೆ ನೀಡಿದೆ. ಈ ಯೋಜನೆಯ ವೆಚ್ಚ 1123 ಕೋಟಿ ರೂಪಾಯಿ ಮತ್ತು ಇದನ್ನು ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿ.ಎಂ.ಎಸ್.ಎಸ್.ವೈ) ಅಡಿಯಲ್ಲಿ ಸ್ಥಾಪಿಸಲಾಗುತ್ತದೆ.

ಹೊಸ ಎ.ಐ.ಐ.ಎಂ.ಎಸ್. ಅನ್ನು ಶೂನ್ಯ ದಿನ (ಭಾರತ ಸರ್ಕಾರದಿಂದ ಅನುಮೋದನೆ ಆದಿ ದಿನಾಂಕ)ದಿಂದ 48 ತಿಂಗಳುಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುತ್ತದೆ, ಇದರಲ್ಲಿ ನಿರ್ಮಾಣ ಪೂರ್ವ 15 ತಿಂಗಳುಗಳು, ನಿರ್ಮಾಣ ಹಂತದ 30 ತಿಂಗಳುಗಳು ಮತ್ತು ಸ್ಥಿರೀಕರಣ/ಸ್ಥಾಪನೆಯ ಹಂತದ ಮೂರು ತಿಂಗಳೂ ಸೇರಿರುತ್ತವೆ.

ವಿವರ:

ಈ ನಿರ್ಮಾಣವು 750 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆ, ತುರ್ತು ಸೌಲಭ್ಯ ಕೇಂದ್ರ, ವಾರ್ಷಿಕ 100 ವಿದ್ಯಾರ್ಥಿಗಳ ಪ್ರವೇಶಾವಕಾಶದ ವೈದ್ಯಕೀಯ ಕಾಲೇಜು, ವಾರ್ಷಿಕ 60 ಬಿ.ಎಸ್.ಸಿ. (ನರ್ಸಿಂಗ್) ಪ್ರವೇಶಾವಕಾಶದ ನರ್ಸಿಂಗ್ ಕಾಲೇಜು, ವಸತಿ ಸಮುಚ್ಛಯ ಮತ್ತು ಪೂರಕ ಸೌಲಭ್ಯಗಳು/ಸೇವೆಗಳು, ವಿಶಾಲವಾಗಿ ನವದೆಹಲಿಯ ಎ.ಐ.ಐ.ಎಂ.ಎಸ್. ಮಾದರಿಯಲ್ಲೇ ಇರುತ್ತದೆ. ಆಸ್ಪತ್ರೆಯು 16 ಶಸ್ತ್ರಚಿಕಿತ್ಸಾ ಕೊಠಡಿಗಳನ್ನು ಒಳಗೊಂಡಂತೆ 22 ಸ್ಪೆಷಾಲಿಟಿ/ಸೂಪರ್ ಸ್ಪೆಷಾಲಿಟಿ ವಿಭಾಗಗಳನ್ನೂ ಒಳಗೊಂಡಿರುತ್ತದೆ. ಸಾಂಪ್ರದಾಯಿಕ ವೈದ್ಯಕೀಯ ಸೇವೆ ಒದಗಿಸಲು ಇದು 30 ಹಾಸಿಗೆಗಳ ಆಯುಷ್ ವಿಭಾಗಗವನ್ನೂ ಹೊಂದಿರುತ್ತದೆ.

ಪರಿಣಾಮ:

ನೂತನ ಎ.ಐ.ಐ.ಎಂ.ಎಸ್ ಸ್ಥಾಪನೆಯು ವಲಯದ ಜನತೆಗೆ ಸೂಪರ್ ಸ್ಪೆಷಾಲಿಟಿ ಆರೋಗ್ಯ ಸೇವೆ ಒದಗಿಸುವುದರ ಜೊತೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಎಚ್.ಎಂ.) ದಡಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಹಂತದ ಸಂಸ್ಥೆಗಳು/ಸೌಲಭ್ಯಗಳಿಗೆ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರ ದೊಡ್ಡ ಪಡೆಯ ಲಭ್ಯತೆಗೂ ನೆರವಾಗುತ್ತದೆ.

ಹಿನ್ನೆಲೆ:

ಈ ಯೋಜನೆಯಡಿ, ಎ.ಐ.ಐ.ಎಂ.ಎಸ್. ಅನ್ನು ಭುವನೇಶ್ವರ್, ಭೋಪಾಲ್, ರಾಯಪುರ್, ಜೋದ್ ಪುರ್, ಋಷಿಕೇಶ್ ಮತ್ತು ಪಾಟ್ನಾದಲ್ಲಿ ಸ್ಥಾಪಿಸಲಾಗಿದ್ದು, ರಾಯ್ ಭರೇಲಿಯಲ್ಲಿ ಎಮ್ಸ್ ಕಾಮಗಾರಿ ಪ್ರಗತಿಯಲ್ಲಿದೆ. ನಾಗಪುರ್ (ಮಹಾರಾಷ್ಟ್ರ), ಕಲ್ಯಾಣಿ (ಪಶ್ಚಿಮ ಬಂಗಾಳ) ಮತ್ತು ಗುಂಟೂರಿನ ಮಂಗಲಗಿರಿ (ಆಂಧ್ರಪ್ರದೇಶ)ಗೆ ಮೂರು ಏಮ್ಸ್ ಅನ್ನು 2105ರಲ್ಲಿ ಮಂಜೂರು ಮಾಡಲಾಗಿದೆ ಮತ್ತು ಭಟಿಂಡಾ ಮತ್ತು ಗೋರಖ್ಪುರಗಳಿಗೆ 2016ರಲ್ಲಿ ಏಮ್ಸ್ ಮಂಜೂರಾಗಿದೆ.

*****

AKT/SH