ಪಿಎಂಇಂಡಿಯಾ
ಪ್ರಧಾನಮಂತ್ರಿಶ್ರೀನರೇಂದ್ರಮೋದಿಅವರಅಧ್ಯಕ್ಷತೆಯಲ್ಲಿನಡೆದಕೇಂದ್ರಸಚಿವಸಂಪುಟಸಭೆ,ಆಂಧ್ರಪ್ರದೇಶದ ಗುಂಟೂರು ಬಳಿಯ ಮಂಗಳಗಿರಿ, ಪಶ್ಚಿಮ ಬಂಗಾಳದ ಕಲ್ಯಾಣಿ ಮತ್ತು ಮಹಾರಾಷ್ಟ್ರದ ನಾಗಪುರದಲ್ಲಿನ ಮೂರು ಹೊಸ ಏಮ್ಸ್ ಗಳಿಗಾಗಿ ಮೂವರು ನಿರ್ದೇಶಕರುಗಳ ಹುದ್ದೆಗಳನ್ನು ಪರಿಷ್ಕರಣೆ –ಪೂರ್ವ ವೇತನ ಶ್ರೇಣಿ ರೂ.80,000 (ನಿಶ್ಚಿತ) {ಮತ್ತು ಎನ್.ಪಿ.ಎ. ಗರಿಷ್ಠ ಮಿತಿ 85,000}ದಂತೆ ಸೃಷ್ಟಿಸಲು ತನ್ನ ಅನುಮೋದನೆ ನೀಡಿದೆ.
ಏಮ್ಸ ಕಾಯಿದೆ 1956ಕ್ಕೆ 2012ರಲ್ಲಿ ತರಲಾದ ಏಮ್ಸ್ ತಿದ್ದುಪಡಿ ಕಾಯಿದೆಯಂತೆ, ಸಂಸ್ಥೆಗೆ ಒಬ್ಬರು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಇರಬೇಕು. ಅವರನ್ನು ಸಂಸ್ಥೆಯ ನಿರ್ದೇಶಕರಾಗಿ ನಿಯುಕ್ತಿಗೊಳಿಸಬೇಕು ಮತ್ತು ಅವರು ಸಂಸ್ಥೆಯಿಂದ ನೇಮಕಗೊಳ್ಳಬೇಕು ಆದಾಗ್ಯೂ, ಪ್ರಥಮ ನಿರ್ದೇಶಕರನ್ನು ಕೇಂದ್ರ ಸರ್ಕಾರವೇ ನೇಮಕ ಮಾಡಬೇಕು. ಈ ನಿರ್ದೇಶಕರು ಸಂಸ್ಥೆಯ ಮತ್ತು ಆಡಳಿತ ಮಂಡಳಿಯ ಕಾರ್ಯದರ್ಶಿಯಂತೆ ಕಾರ್ಯ ನಿರ್ವಹಿಸುತ್ತಾರೆ ಮತ್ತು ಈ ಮೂರೂ ಏಮ್ಸ್ ಗಳ ಸೂಕ್ತ ಕಾರ್ಯನಿರ್ವಹಣೆ ಮತ್ತು ಆಡಳಿತಕ್ಕೆ ಬೆಂಬಲ ನೀಡುತ್ತಾರೆ.
ಈ ಹುದ್ದೆಯನ್ನು ತತ್ ಕ್ಷಣವೇ ಈ ಕೆಳಗಿನ ಸೂಕ್ತ ಪ್ರಕ್ರಿಯೆಯಂತೆ ಭರ್ತಿ ಮಾಡಲಾಗುತ್ತದೆ. ಈ ಹುದ್ದೆಯು ಪರಿಷ್ಕರಣೆ –ಪೂರ್ವ ವೇತನ ಶ್ರೇಣಿ ರೂ.80,000 (ನಿಶ್ಚಿತ) {ಮತ್ತು ಎನ್.ಪಿ.ಎ. ಗರಿಷ್ಠ ಮಿತಿ 85,000}ವಾಗಿರುತ್ತದೆ. ಪ್ರತಿ ನಿರ್ದೇಶಕರ ಹುದ್ದೆಯಿಂದ 6ನೇ ಸಿಪಿಸಿಯಂತೆ ವಾರ್ಷಿಕ ಸುಮಾರು 25 ಲಕ್ಷ ರೂ. ಆರ್ಥಿಕ ಹೊರೆ ಬೀಳುತ್ತದೆ.
ಹಿನ್ನೆಲೆ
ಕೇಂದ್ರ ಹಣಕಾಸು ಸಚಿವರು 2014-15ನೇ ಸಾಲಿನ ತಮ್ಮ ಬಜೆಟ್ ಭಾಷಣದಲ್ಲಿ ನಾಲ್ಕು ಹೊಸ ಏಮ್ಸ್ ಗಳನ್ನು ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಗಳಲ್ಲಿ ಸ್ಥಾಪಿಸುವುದಾಗಿ ಪ್ರಕಟಿಸಿದ್ದರು. ಸಂಪುಟವು 07.10.2015ರಂದು ಹೊಸ ಏಮ್ಸ್ ಗಳನ್ನು ಆಂಧ್ರಪ್ರದೇಶದ ಗುಂಟೂರು ಬಳಿಯ ಮಂಗಳಗಿರಿ, ಪಶ್ಚಿಮ ಬಂಗಾಳದ ಕಲ್ಯಾಣಿ, ಮಹಾರಾಷ್ಟ್ರದ ನಾಗಪುರಗಳಲ್ಲಿ 4949 ಕೋಟಿ ವೆಚ್ಚದಲ್ಲಿ ಸ್ಥಾಪಿಸಲು ಅನುಮೋದನೆ ನೀಡಿತ್ತು. ಈ ಮೂರು ಏಮ್ಸ್ ಗಳನ್ನು ಪ್ರಧಾನಮಂತ್ರಿಯವರ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್.ಎಸ್.ವೈ) ಭಾಗವಾಗಿ ಸ್ಥಾಪಿಸಲಾಗುತ್ತಿದೆ.
ದೇಶದಲ್ಲಿ ಕೈಗೆಟುಕುವ/ವಿಶ್ವಾಸಾರ್ಹ ತೃತೀಯ ಶ್ರೇಣಿಯ ಆರೋಗ್ಯ ಸೇವೆಗಳ ಲಭ್ಯತೆಯಲ್ಲಿನ ಪ್ರಾದೇಶಿಕ ಅಸಮತೋಲನ ಸರಿಪಡಿಸುವ ಮತ್ತು ಗುಣಮಟ್ಟದ ವೈದ್ಯಕೀಯ ಶಿಕ್ಷಣಕ್ಕಾಗಿ ಸೌಲಭ್ಯಗಳನ್ನು ವೃದ್ಧಿಸುವ ಉದ್ದೇಶಗಳೊಂದಿಗೆ ಪ್ರಧಾನಮಂತ್ರಿಯವರ ಸ್ವಾಸ್ಥ್ಯ ಸುರಕ್ಷಾ ಯೋಜನೆ (ಪಿಎಂಎಸ್.ಎಸ್.ವೈ)ಯನ್ನು 2003ರಲ್ಲಿ ಪ್ರಕಟಿಸಲಾಗಿತ್ತು. ಪಿಎಂಎಸ್.ಎಸ್.ವೈನಲ್ಲಿ ಎರಡು ವಿಭಾಗಗಳಿವೆ: (i) ಏಮ್ಸ್ ನಂತಹ ಸಂಸ್ಥೆಗಳ ಸ್ಥಾಪನೆ (ii) ಸರ್ಕಾರಿ ವೈದ್ಯಕೀಯ ಕಾಲೇಜು/ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸುವುದು.
ಈ ಯೋಜನೆಯಡಿ ಏಮ್ಸ್ ಗಳನ್ನು ಭುವನೇಶ್ವರ್, ಭೋಪಾಲ್, ರಾಯಪುರ್, ಜೋದ್ ಪುರ್, ಋಷಿಕೇಶ್ ಮತ್ತು ಪಾಟ್ನಾದಲ್ಲಿ ಸ್ಥಾಪಿಸಲಾಗಿದ್ದು, ರಾಯ್ ಭರೇಲಿಯಲ್ಲಿ ಎಮ್ಸ್ ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೆ ಮೂರು ಏಮ್ಸ್ ಗಳನ್ನು ನಾಗಪುರ್ (ಮಹಾರಾಷ್ಟ್ರ), ಕಲ್ಯಾಣಿ (ಪಶ್ಚಿಮ ಬಂಗಾಳ) ಮತ್ತು ಗುಂಟೂರಿನ ಮಂಗಲಗಿರಿ (ಆಂಧ್ರಪ್ರದೇಶ)ಕ್ಕೆ 2105ರಲ್ಲಿ ಮಂಜೂರು ಮಾಡಲಾಗಿದೆ ಮತ್ತು ಭಟಿಂಡಾ ಮತ್ತು ಗೋರಖ್ಪುರಗಳಿಗೆ 2016ರಲ್ಲಿ ಮತ್ತು ಅಸ್ಸಾಂಗೆ 2017ರಲ್ಲಿ ಏಮ್ಸ್ ಮಂಜೂರಾಗಿದೆ. ನಾಗಪುರ್ (ಮಹಾರಾಷ್ಟ್ರ), ಕಲ್ಯಾಣಿ (ಪಶ್ಚಿಮ ಬಂಗಾಳ) ಮತ್ತು ಗುಂಟೂರಿನ ಮಂಗಲಗಿರಿ (ಆಂಧ್ರಪ್ರದೇಶ)ಗಳಲ್ಲಿ ಈ ನೂತನ ಏಮ್ಸ್ ಗಳ ಕಾರ್ಯಾಚರಣೆಗೆ ಅಗತ್ಯವಾದ ಭೌತಿಕ ಮೂಲಸೌಕರ್ಯ ಮತ್ತು ಬೋಧಕ ಮತ್ತು ಬೋಧಕೇತರ ಸ್ಥಾನಗಳ ಸೃಷ್ಟಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಂಪುಟದ ಆದೇಶದಂತೆ ಜಾಗತಿಕ ಬಿಡ್ ಆಧಾರದ ಮೇಲೆ ಈ ಎಲ್ಲ ಮೂರು ಏಮ್ಸ್ ಗಳಿಗೆ ವಿನ್ಯಾಸ ಸಲಹೆಗಾರರನ್ನು ನೇಮಕ ಮಾಡಿಕೊಳ್ಳಲಾಗಿದೆ.
ಈ ಮೂರು ಏಮ್ಸ್ ಗಳ ಮಾಸ್ಟರ್ ಪ್ಲಾನ್ ಅನ್ನು ಆಖೈರುಗೊಳಿಸಲಾಗಿದೆ. ವಿಸ್ತೃತ ವಿನ್ಯಾಸ ಸಿದ್ಧತೆಯ ಹಂತದಲ್ಲಿದೆ. ಬೋಧಕ ಮತ್ತು ಬೋಧಕೇತರ ಸ್ಥಾನಗಳ ಸೃಷ್ಟಿಯ ಪ್ರಸ್ತಾಪ ವೆಚ್ಚ ಇಲಾಖೆಯ ಪರಿಗಣನೆ/ಚರ್ಚೆಯ ಹಂತದಲ್ಲಿದೆ.
***
AKT/VBA