Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಆಕಾಶವಾಣಿಯಲ್ಲಿ 25.06.2017ರಂದು ಪ್ರಧಾನಿಯವರ‘ಮನ್ ಕಿ ಬಾತ್’ ಕಾರ್ಯಕ್ರಮ ಪಠ್ಯದ ಕನ್ನಡ ರೂಪಾಂತರ


ನನ್ನ ಪ್ರೀತಿಯ ದೇಶವಾಸಿಗಳೇ ನಮಸ್ಕಾರ, ಹವಾಮಾನ ಬದಲಾಗುತ್ತಿದೆ. ಈ ವರ್ಷ ಬಿಸಿಲೂ ಹೆಚ್ಚಾಗಿತ್ತು. ಆದರೆ ಶುಭ ಸಂಗತಿ ಎಂದರೆ ಮುಂಗಾರು ಸ್ವಾಭಾವಿಕತೆಯಂತೆ  ಸರಿಯಾದ ಸಮಯಕ್ಕೆ ಆರಂಭವಾಗಿ ಮುಂದುವರಿದಿದೆ. ದೇಶದ ಹಲವಾರು ಸ್ಥಳಗಳಲ್ಲಿ ಉತ್ತಮ ಮಳೆ ಸುರಿಯುತ್ತಿದ್ದು ವಾತಾವರಣ ಆಹ್ಲಾದಕರವಾಗಿದೆ. ಮಳೆಯಾಗುತ್ತಿರುವ ಕಾರಣ, ಕುಳಿರ್ಗಾಳಿ ಬೀಸುತ್ತಿದ್ದು, ಕೆಲವು ದಿನಗಳ ಹಿಂದಿನ ಬಿಸಿಲ ಬೇಗೆ ತಗ್ಗಿ ಆಹ್ಲಾದಕರವೆನಿಸಿದೆ. ಜೀವನದಲ್ಲಿ ಎಷ್ಟೇ ಒತ್ತಡ ಇರಲಿ, ಎಷ್ಟೇ ಉದ್ವೇಗ ಆತಂಕಗಳಿರಲಿ,ವೈಯಕ್ತಿಕ ಜೀವನದಲ್ಲಾಗಲಿ ಇಲ್ಲ ಸಾರ್ವಜನಿಕ ಜೀವನದಲ್ಲಾಗಲೀ ಮಳೆಯ ಆಗಮನ ಪ್ರತಿಯೊಬ್ಬರ ಸ್ಫೂರ್ತಿಯನ್ನು ಹೆಚ್ಚಿಸುತ್ತದೆ ಎಂಬುದನ್ನು ನಾವೆಲ್ಲರೂ ಗಮನಿಸಿದ್ದೇವೆ.

 

ಇಂದು ಭಗವಾನ್ ಜಗನ್ನಾಥನ ಕಾರ್ ಉತ್ಸವ,  ರಥಯಾತ್ರೆಯನ್ನು ದೇಶದ ಹಲವಾರು ಭಾಗಗಳಲ್ಲಿ ಜನರು ಶೃದ್ಧಾಭಕ್ತಿಯಿಂದ ಮತ್ತು ಉತ್ಸಾಹದಾಯಕವಾಗಿ ಆಚರಿಸಲಾಗುತ್ತಿದೆ.  ಈಗ ವಿಶ್ವದ ಹಲವು ಭಾಗಗಳಲ್ಲಿ ಭಗವಾನ್ ಜಗನ್ನಾಥ ರಥಯಾತ್ರೆಯನ್ನು ನಡೆಸಲಾಗುತ್ತಿದೆ. ದೇಶದಲ್ಲಿ ಶೋಷಿತರು ಭಗವಾನ್ ಜಗನ್ನಾಥನೊಂದಿಗೆ ಆಳವಾದ ನಂಟು ಹೊಂದಿದ್ದಾರೆ. ಯಾರು ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ ಬದುಕು ಮತ್ತು ಕಾರ್ಯವನ್ನು ಓದಿದ್ದಾರೋ ಅವರಿಗೆ – ಅಂಬೇಡ್ಕರ್ ಅವರು ಜಗನ್ನಾಥ ದೇವಾಲಯ ಮತ್ತು ಅಲ್ಲಿಯ ಸಂಪ್ರದಾಯದ ಬಗ್ಗೆ ಹೃದಯಾಂತರಾಳದಿಂದ ಮೆಚ್ಚುಗೆ ವ್ಯಕ್ತಪಡಿಸಿರುವುದು ತಿಳಿದಿರುತ್ತದೆ, ಏಕೆಂದರೆ ಇದರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಸಾಮರಸ್ಯ ಅಂತರ್ಗತವಾಗಿದೆ. ಭಗವಾನ್ ಜಗನ್ನಾಥ ಬಡವರ ದೇವರು.‘ಜುಗ್ಗೇರ್ನೌತ್’ ಅಂದರೆ ಅದ್ಭುತವಾದ ರಥ, ಅದನ್ನು ನಿಲ್ಲಿಸಲು ಸಾಧ್ಯವೇ ಇಲ್ಲ. ನಿಘಂಟಿನಲ್ಲಿ, ವ್ಯುತ್ಪತ್ತಿಶಾಸ್ತ್ರದ ಪ್ರಕಾರ ‘ಜುಗ್ಗೇರ್ನೌತ್’ ಮೂಲ ಹುಡುಕಿದರೆ, ಅದು ಭಗವಾನ್ ಜಗನ್ನಾಥನ ರಥದಿಂದ ಬಂದಿದೆ ಎಂಬುದು ತಿಳಿಯುತ್ತದೆ. ಹೀಗಾಗಿಯೇ ವಿಶ್ವದಲ್ಲಿ ತನ್ನದೇ ರೀತಿಯಲ್ಲಿ ಭಗವಾನ್ ಜಗನ್ನಾಥ ರಥ ಯಾತ್ರೆಯನ್ನು ಆಚರಿಸಲಾಗುತ್ತದೆ, ಮತ್ತು ಜಗನ್ನಾಥನ ಕಾರ್ ಹಬ್ಬದ ಮಹತ್ವವನ್ನು ಅಂಗೀಕರಿಸಲಾಗಿದೆ. ಭಗವಾನ್ ಜಗನ್ನಾಥನ ಕಾರ್ ಹಬ್ಬದ ರಥಯಾತ್ರೆಯ ಸಂದರ್ಭದಲ್ಲಿ ನಾನು, ದೇಶದ ಸಮಸ್ತ ಜನರಿಗೆ ಶುಭ ಕೋರುತ್ತೇನೆ ಮತ್ತು ಭಗವಾನ್ ಜಗನ್ನಾಥನಿಗೆ ಪ್ರಾರ್ಥನೆ ಸಲ್ಲಿಸುತ್ತೇನೆ.

ಭಾರತದ ವೈವಿಧ್ಯತೆಯಲ್ಲಿ ವಿಶೇಷತೆಯಿದೆ. ವಿವಿಧತೆಯೇ ಭಾರತದ ಶಕ್ತಿಯೂ ಆಗಿದೆ. ರಂಜಾನ್ ಪವಿತ್ರ ಮಾಸವನ್ನು ಎಲ್ಲೆಡೆ ಪ್ರಾರ್ಥನೆ ಮತ್ತು ಧರ್ಮನಿಷ್ಠೆಯಿಂದ ಆಚರಿಸುತ್ತಿದ್ದಾರೆ. ಈಗ  ಈದ್ ಹಬ್ಬದ ಸಂಭ್ರಮ. ಈದ್ ಉಲ್ ಫಿತರ್ ಸಂದರ್ಭದಲ್ಲಿ ಎಲ್ಲರಿಗೂ ಹಾರ್ದಿಕ ಶುಭಾಶಯಗಳು. ರಂಜಾನ್ ಮಾಸ ಧರ್ಮಕಾರ್ಯದ ಮತ್ತು ಸಂತಸ ಹಂಚಿಕೊಳ್ಳುವ ಮಾಸ. ನೀವು ಸಂತೋಷವನ್ನು ಹಂಚಿಕೊಳ್ಳುತ್ತಿರೋ ಅದು ಅಷ್ಟು ಗುಣಿತವಾಗುತ್ತದೆ. ಬನ್ನಿ, ನಾವೆಲ್ಲರೂ ಈ ಪವಿತ್ರ ಹಬ್ಬದ ಸ್ಫೂರ್ತಿಯನ್ನು ಪಡೆಯೋಣ, ಆನಂದದ ಭಂಡಾರವನ್ನು ಹಂಚಿಕೊಳ್ಳೋಣ, ದೇಶವನ್ನು ಮುನ್ನಡೆಸೋಣ.

ರಂಜಾನ್ ಪವಿತ್ರ ಮಾಸದಲ್ಲಿ ಉತ್ತರ ಪ್ರದೇಶದ ಬಿಜನೌರ್‌ನ ಮುಬಾರಕ್‌ಪುರ್ ಗ್ರಾಮದ ಒಂದು ಘಟನೆ ನನಗೆ ಪ್ರೇರಣಾದಾಯಕವಾಗಿ ಕಂಡಿದೆ. ಈ ಪುಟ್ಟ ಹಳ್ಳಿಯಲ್ಲಿ ಸುಮಾರು ಮೂರುವರೆ ಸಾವಿರದಷ್ಟು ಜನಸಂಖ್ಯೆಯ ಮುಸ್ಲಿಂ ಬಾಂಧವರ ಕುಟುಂಬಗಳು ಇಲ್ಲಿ ವಾಸಿಸುತ್ತಿವೆ. ಒಂದು ರೀತಿ ಹೇಳುವುದಾದರೆ ಇಲ್ಲಿನ ಒಟ್ಟು ಜನಸಂಖ್ಯೆಯಲ್ಲಿ ಅವರು ಬಹುಸಂಖ್ಯೆಯಲ್ಲಿ ಇದ್ದಾರೆ. ಈ ರಂಜಾನ್ ಮಾಸದಲ್ಲಿ ಈ ಗ್ರಾಮಸ್ಥರು ಒಟ್ಟಾಗಿ ಸೇರಿ ಶೌಚಾಲಯ ನಿರ್ಮಿಸುವ ನಿರ್ಣಯ ಕೈಗೊಂಡಿದ್ದಾರೆ. ಮನೆಗಳಲ್ಲಿ ವೈಯಕ್ತಿಕ ಶೌಚಾಲಯಗಳ ನಿರ್ಮಾಣಕ್ಕೆ ಸರ್ಕಾರ ಹಣಕಾಸು ನೆರವೂ ನೀಡುತ್ತದೆ. ಅದರಡಿ ಅವರಿಗೆ 17 ಲಕ್ಷ ರೂಪಾಯಿ ಒದಗಿಸಲಾಗಿತ್ತು. ನಿಮಗೆ ಆಶ್ಚರ್ಯ ಆಗಬಹುದು ಮತ್ತು ಕೇಳಿ ಸಂತೋಷವೂ ಆಗಬಹುದು, ಈ ಪವಿತ್ರ ರಂಜಾನ್ ಮಾಸದಲ್ಲಿ, ಈ ಮುಸ್ಲಿ ಸೋದರ ಮತ್ತು ಸೋದರಿಯರು, ಈ ಹಣವನ್ನು ಸರ್ಕಾರಕ್ಕೆ ಹಿಂತಿರುಗಿಸಿ, ತಮ್ಮ ಮನೆಯ ಶೌಚಾಲಯಗಳನ್ನು ತಾವೇ ತಮ್ಮದೇ ಖರ್ಚು ಹಾಗೂ ಶ್ರಮದಿಂದ ನಿರ್ಮಿಸಿಕೊಳ್ಳುವುದಾಗಿ ಮತ್ತು ಈ ಹಣವನ್ನು ಗ್ರಾಮದಲ್ಲಿ ಇನ್ನಿತರ ಮೂಲ ಸೌಕರ್ಯ ಒದಗಿಸಲು ಬಳಸುವಂತೆ ಕೋರಿದ್ದಾರೆ.ರಂಜಾನ್ ಮಾಸದ ಈ ಪವಿತ್ರ ಸಂದರ್ಭವನ್ನು ಸಮಾಜದ ಕಲ್ಯಾಣಕ್ಕಾಗಿ ಅವಕಾಶವಾಗಿ ಪರಿವರ್ತಿಸಿಕೊಂಡ ಮುಬಾರಕ್ ಪುರದ ನಿವಾಸಿಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅವರ ಬಗೆಗಿನ ಒಂದೊಂದು ವಿಷಯವೂ ಸ್ಫೂರ್ತಿದಾಯಕವಾಗಿದೆ. ಮತ್ತು ಎಲ್ಲಕ್ಕಿಂತ ಮಿಗಿಲಾಗಿ, ಅವರು ಮುಬಾರಕ್‌ ಪುರವನ್ನು ಬಯಲು ಶೌಚಮುಕ್ತ ಮಾಡಿದ್ದಾರೆ. ಈಗಾಗಲೇ ಸಿಕ್ಕಿಂ, ಹಿಮಾಚಲ ಪ್ರದೇಶ ಮತ್ತು ಕೇರಳ ರಾಜ್ಯಗಳು ಬಯಲು ಶೌಚಮುಕ್ತ ರಾಜ್ಯ ಎಂದು ಘೋಷಿಸಿಕೊಂಡಿವೆ ಎಂಬುದು ನಿಮಗೂ ತಿಳಿದಿದೆ. ಈ ವಾರ ಉತ್ತರಾಖಂಡ ಮತ್ತು ಹರಿಯಾಣಾ ಕೂಡಾ ಬಯಲ ಶೌಚ ಮುಕ್ತ ಎಂದು ಘೋಷಿಸಿಕೊಂಡಿವೆ. ಈ ಕಾರ್ಯ ಸಾಧನೆಗಾಗಿ ನಾನು ಈ ಐದೂ ರಾಜ್ಯಗಳ ಆಡಳಿತಕ್ಕೆ, ಸರ್ಕಾರಕ್ಕೆ ಮತ್ತು ಜನತಾ ಜನಾರ್ದನರಿಗೆ ವಿಶೇಷವಾಗಿ ನನ್ನ ಕೃತಜ್ಞತೆ ಸಲ್ಲಿಸುತ್ತೇನೆ.

 

ಯಾವುದೇ ವ್ಯಕ್ತಿಯ ವೈಯಕ್ತಿಕ ಜೀವನದಲ್ಲಿ ಅಥವಾಸಮಾಜದಲ್ಲಿ ಏನನ್ನಾದರೂ ಒಳಿತನ್ನು ಮಾಡಬೇಕಾದರೆ ಬಹಳ ಶ್ರಮಿಸಬೇಕಾಗುತ್ತದೆ ಎಂಬುದು ನಮಗೆಲ್ಲರಿಗೂ ಚೆನ್ನಾಗಿ ತಿಳಿದ ಸಂಗತಿಯಾಗಿದೆ. ನಮ್ಮ ಕೈ ಬರಹ ಚೆನ್ನಾಗಿಲ್ಲದಿದ್ದರೆ, ನಾವು ಅದನ್ನು ಉತ್ತಮಪಡಿಸಿಕೊಳ್ಳಬೇಕು. ನಾವು ದೀರ್ಘಕಾಲ ಅದನ್ನು ಅಭ್ಯಾಸ ಮಾಡಬೇಕಾಗುತ್ತದೆ. ಆಗ ಮಾತ್ರ ನಮ್ಮ ದೈಹಿಕ ಮತ್ತು ಮಾನಸಿಕ ಅಭ್ಯಾಸ ಬದಲಾಗುತ್ತದೆ. ಶುಚಿತ್ವ ಕೂಡ ಇದೇ ಪ್ರಕಾರದ್ದಾಗಿದೆ. ಈ ಕೆಟ್ಟ ಅಭ್ಯಾಸಗಳು ನಮ್ಮ ನಮ್ಮ ಸ್ವಭಾವದ ಭಾಗವಾಗಿ ಹೋಗಿವೆ. ನಾವು ಅದಕ್ಕೆ ಹೊಂದಿಕೊಂಡುಬಿಟ್ಟಿದ್ದೇವೆ. ಇದರಿಂದ ಹೊರಬರಲು ಅವಿರತ ಪ್ರಯತ್ನ ಮಾಡಬೇಕಾಗುತ್ತದೆ. ಎಲ್ಲರ ಗಮನ ಸೆಳೆಯಬೇಕಾಗುತ್ತದೆ. ಉತ್ತಮ ಸ್ಫೂರ್ತಿದಾಯಕ ಘಟನೆಗಳನ್ನು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾಗುತ್ತದೆ. ಇಂದು ಸ್ವಚ್ಛತೆಯೆಂಬುದು ಸರ್ಕಾರೀ ಕಾರ್ಯಕ್ರಮವಾಗಿ ಉಳಿದಿಲ್ಲ ಎಂಬುದು ನನಗೆ ಸಂತೋಷವೆನಿಸುತ್ತದೆ. ಅದು ಜನರ ಮತ್ತು ಸಾಮಾಜಿಕ ಆಂದೋಲನವಾಗಿ ಪರಿವರ್ತನೆಯಾಗಿದೆ. ಅಲ್ಲದೇ ಆಡಳಿತ ವರ್ಗದಲ್ಲಿರುವವರು ಜನರ ಸಹಭಾಗಿತ್ವದಲ್ಲಿ ಇಂಥ ಕಾರ್ಯವನ್ನು ಮಾಡಿದಾಗ ಅದು ಇನ್ನೂ ಹೆಚ್ಚು ಶಕ್ತಿಶಾಲಿಯಾಗುತ್ತದೆ.

ಇತ್ತೀಚೆಗೆ ಒಂದು ಉತ್ತಮವಾದ ಘಟನೆ ನನ್ನ ಗಮನಕ್ಕೆ ಬಂತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ. ಇದು ಆಂಧ್ರ ಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ನಡೆದ ಘಟನೆ. ಅಲ್ಲಿನ ಜಿಲ್ಲಾಡಳಿತ ಜನರ ಸಹಭಾಗಿತ್ವದಲ್ಲಿ ಒಂದು ದೊಡ್ಡ ಕೆಲಸವನ್ನು ಕೈಗೆತ್ತಿಕೊಂಡಿತು.

ಮಾರ್ಚ್ 10ರ ಬೆಳಗ್ಗೆ 6 ರಿಂದ ಮಾರ್ಚ್ 14 ಬೆಳಗ್ಗೆ 10 ಗಂಟೆವರೆಗೆ 1೦೦ ಗಂಟೆಗಳ ನಿರಂತರ ಅಭಿಯಾನ ಅದಾಗಿತ್ತು. ಅವರ ಗುರಿ ಏನಿತ್ತು? ನೂರು ಗಂಟೆಗಳಲ್ಲಿ 71 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ ಹತ್ತು ಸಾವಿರ ಮನೆಗಳಲ್ಲಿ ಶೌಚಾಲಯ ನಿರ್ಮಿಸುವುದಾಗಿತ್ತು. ನನ್ನ ಪ್ರಿಯ ದೇಶವಾಸಿಗಳೇ, ನಿಮಗೆ ಇದನ್ನು ಕೇಳಿ ಸಂತೋಷವೆನಿಸಬಹುದು, ಜನರು ಮತ್ತು ಜಿಲ್ಲಾಡಳಿತ ಸೇರಿ 100 ಗಂಟೆಗಳಲ್ಲಿ 10 ಸಾವಿರ ಮನೆಗಳಲ್ಲಿ ಶೌಚಾಲಯ ನಿರ್ಮಿಸುವ ಕೆಲಸವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.71 ಗ್ರಾಮಗಳು ಈಗ ಬಯಲು ಶೌಚ ಮುಕ್ತವಾಗಿವೆ. ನಾನು ಅಪರಿಮಿತ ಪರಿಶ್ರಮದ ಮೂಲಕ ಈ ಶ್ರೇಷ್ಠ ಕಾರ್ಯವನ್ನು ಮಾಡಿದ ಸರ್ಕಾರದಲ್ಲಿರುವವರಿಗೆ, ಸರ್ಕಾರಿ ಅಧಿಕಾರಿಗಳಿಗೆ ಮತ್ತು ವಿಜಯನಗರಂ ಜಿಲ್ಲೆಯ ಆ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸುತ್ತೇನೆ. ನೀವು ಒಂದು ಮಾದರಿಯನ್ನೇ ಸೃಷ್ಟಿಸಿದ್ದೀರಿ.

 

ಇತ್ತೀಚಿನ ದಿನಗಳಲ್ಲಿ ಮನ್ ಕಿ ಬಾತ್- ಮನದ ಮಾತಿಗೆNarendraModiApp, MyGov.in ಮೂಲಕ ಜನರಿಂದ ಸಲಹೆಗಳು ನಿರಂತರವಾಗಿ ಬರುತ್ತಿರುತ್ತವೆ. ಆಕಾಶವಾಣಿಯ ಮೂಲಕ ಹಾಗೂ ಪತ್ರದ ಮೂಲಕವೂ ಬರುತ್ತವೆ.

ಶ್ರೀಮಾನ್ ಪ್ರಕಾಶ್ ತ್ರಿಪಾಠಿ ಅವರು ತುರ್ತುಪರಿಸ್ಥಿತಿಯನ್ನು ನೆನಪಿಸಿಕೊಳ್ಳುತ್ತಾ ಜೂನ್ 25 ನ್ನು ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಒಂದು ಕರಾಳ ಕಾಲಘಟ್ಟವೆಂದು ಬಣ್ಣಿಸಿದ್ದಾರೆ. ಪ್ರಕಾಶ್ ತ್ರಿಪಾಠಿ ಅವರ ಪ್ರಜಾತಂತ್ರದ ಬಗೆಗಿನ ಕಾಳಜಿ ಮೌಲ್ಯಯುತವಾದ್ದು. ಪ್ರಜಾಪ್ರಭುತ್ವ  ಕೇವಲ ಒಂದು ವ್ಯವಸ್ಥೆಯಲ್ಲ ಅದು ಒಂದು ಸಂಸ್ಕಾರವೂ ಹೌದು. ಅದು ನಮ್ಮ ಸಿದ್ಧಾಂತದ ಭಾಗವೂ ಹೌದು. ಹೀಗಾಗಿ ಪ್ರಜಾಸತ್ತೆಗೆ ಆಘಾತವೊಡ್ಡುವ ವಿಷಯಗಳನ್ನೂ ಸ್ಮರಿಸುವುದು ಅಗತ್ಯ ಮತ್ತು ಪ್ರಜಾಪ್ರಭುತ್ವವನ್ನು ಉತ್ತಮ ಮಾರ್ಗದಲ್ಲಿ ಕೊಂಡೊಯ್ಯುವ ಅವಶ್ಯಕತೆಯೂ ಇದೆ. 1975 ಜೂನ್ 25 ಎಂಥ ಕರಾಳ ರಾತ್ರಿಯಾಗಿತ್ತೆಂದರೆ ಯಾವುದೇ ಪ್ರಜಾಪ್ರಭುತ್ವದ ಪ್ರೇಮಿಯೂ ಇದನ್ನು ಮರೆಯಲು ಸಾಧ್ಯವಿಲ್ಲ. ಯಾವುದೇ ಭಾರತೀಯ ಇದನ್ನು ಮರೆಯಲಾರ. ದೇಶ ಒಂದು ರೀತಿಯಲ್ಲಿ ಬಂದೀಖಾನೆಯಾಗಿ ಪರಿವರ್ತನೆಯಾಗಿತ್ತು. ವಿರೋಧದ ಧ್ವನಿಯನ್ನು ಹತ್ತಿಕ್ಕಲಾಗಿತ್ತು. ಜಯಪ್ರಕಾಶ್ ನಾರಾಯಣ್ ಸೇರಿದಂತೆ ದೇಶದ ಗಣ್ಯಾತಿಗಣ್ಯ ನಾಯಕರನ್ನು ಕಾರಾಗೃಹದಲ್ಲಿ ಬಂಧಿಸಿಡಲಾಗಿತ್ತು. ನ್ಯಾಯಾಂಗ ವ್ಯವಸ್ಥೆ ಕೂಡ ತುರ್ತುಸ್ಥಿತಿಯ ಕರಾಳ ಛಾಯೆಯಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಪತ್ರಿಕೆಗಳ ದನಿಯನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗಿತ್ತು. ಇಂದಿನ ಪತ್ರಿಕೋದ್ಯಮ ವಿದ್ಯಾರ್ಥಿಗಳು, ಪ್ರಜಾಪ್ರಭುತ್ವದಲ್ಲಿ ಕೆಲಸ ಮಾಡುವವರು ಆ ಕರಾಳ ರಾತ್ರಿಯ ನೆನಪನ್ನು ಮತ್ತೆ ಮತ್ತೆ ಮೆಲುಕು ಹಾಕುತ್ತಾ ಪ್ರಜಾಪ್ರಭುತ್ವ ಕುರಿತು ಜಾಗರೂಕತೆಯನ್ನು ಹೆಚ್ಚಿಸುವ ನಿರಂತರ ಪ್ರಯತ್ನ ಮಾಡುತ್ತಿದ್ದಾರೆ ಮತ್ತು ಮಾಡಲೂ ಬೇಕು. ಆಗ ಅಟಲ್ ಬಿಹಾರಿ ವಾಜಪೇಯಿ ಅವರೂ ಸಹ ಸೆರೆವಾಸದಲ್ಲಿದ್ದರು. ಒಂದು ವರ್ಷದ ತುರ್ತು ಸ್ಥಿತಿಯ ತರುವಾಯ, ಅಟಲ್ ಜೀ ಅವರು ಒಂದು ಕವನ ಬರೆದಿದ್ದರು, ಅದರಲ್ಲಿ ಆ ಸಂದಿಗ್ಧ ಕಾಲದ ಮನಸ್ಥಿತಿಯನ್ನು ವರ್ಣಿಸಿದ್ದರು.

ಬಿರು ಬೇಸಿಗೆಯ ಮಾಸ

ಚಳಿಗಾಲದ ಬೆಳದಿಂಗಳೂ ನೀರಸ,

ಬಿಕ್ಕುವ ಮಳೆಗಾಲದಲ್ಲಿ

ರಿಕ್ತತನ ಅಡಗಿದೆಯಲ್ಲಾ

ಇಡೀ ವರ್ಷ ಕಳೆಯಿತಲ್ಲ

ವಿಶ್ವವನ್ನೇ ಕಂಬಿಯ ಹಿಂದೆ ಹಾಕಿದೆಯಲ್ಲ,

ಆದರೆ ಆತ್ಮ ಶ್ರಮರಹಿತ ಹಕ್ಕಿಯಾಗಿದೆಯಲ್ಲ

ಸ್ವಾತಂತ್ರ್ಯ ಗೀತೆ ಅನುರಣಿಸುತ್ತದೆ

ಭೂಮಿಯಿಂದ ಆಕಾಶಕ್ಕೆ,

ಇಡೀ ವರ್ಷ ಕಳೆದಿದೆಯಲ್ಲ

ಕಣ್ಣುಗಳು ನಿರೀಕ್ಷೆಯಲ್ಲಿವೆ

ದಿನಗಳು ಮತ್ತು ಕ್ಷಣಗಳನ್ನು ಎಣಿಸುತ್ತಲಿವೆ

ಆಪ್ತ ಪ್ರೀತಿ ದೂರ ಸರಿದು ಹೋಗಿದೆ

ಒಂದು ದಿನ ಹಿಂತಿರುಗಿ ಬರುತ್ತದೆ,

ಇಡೀ ವರ್ಷ ಕಳೆದಿದೆಯಲ್ಲ

ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟವರು, ದೀರ್ಘ ಯುದ್ಧವನ್ನೇ ಮಾಡಿದ್ದಾರೆ. ಭಾರತದಂತಹ ವಿಶಾಲವಾದ ದೇಶದಲ್ಲಿ ಯಾವಾಗ ಅವಕಾಶಗಳು ಸಿಕ್ಕರೂ ಜನರ ನರನಾಡಿಗಳಲ್ಲಿ ಒಂದಾದ ಪ್ರಜಾಪ್ರಭುತ್ವವನ್ನು, ಅದರ ಶಕ್ತಿಯನ್ನು ಮುಂಬರುವ ಚುನಾವಣೆಯ ಸಮಯದಲ್ಲಿ ಪ್ರದರ್ಶಿಸಿದ್ದಾರೆ. ನಾವು ಆ ಪರಂಪರೆಯನ್ನು ಇನ್ನಷ್ಟು ಸಶಕ್ತಗೊಳಿಸಬೇಕಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಪ್ರತಿಯೊಬ್ಬ ಭಾರತೀಯನೂ ಇಂದು ವಿಶ್ವದಲ್ಲಿ ಹೆಮ್ಮೆಯಿಂದ ತಲೆ ಎತ್ತಿ ಗೌರವದಿಂದ ಬಾಳುತ್ತಿದ್ದಾನೆ. 2017 ರ ಜೂನ್ 21 ವಿಶ್ವವೆಲ್ಲ ಯೋಗಯುಕ್ತವಾಗಿತ್ತು. ನದಿ ತಟಾಕದಿಂದ ಪರ್ವತದವರೆಗೆ ಜನರು ಬೆಳಗಿನ ಸೂರ್ಯಕಿರಣಗಳನ್ನು ಯೋಗದ ಮೂಲಕ ಸ್ವಾಗತಿಸಿದರು.  ಯಾವ ಭಾರತೀಯನಿಗೆ ಇದರ ಬಗ್ಗೆ ಹೆಮ್ಮೆ ಎನ್ನಿಸುವುದಿಲ್ಲ ಹೇಳಿ. ಹಿಂದೆ ಯೋಗ ಇರಲಿಲ್ಲ ಎಂದಲ್ಲ. ಇಂದು ಯೋಗವೆಂಬ ಸೂತ್ರದೊಂದಿಗೆ ನಾವು ಒಂದಾಗಿದ್ದರಿಂದ ವಿಶ್ವವನ್ನೇ ಅದರೊಂದಿಗೆ ಒಗ್ಗೂಡಿಸಲು ಸಾಧ್ಯವಾಗಿದೆ. ವಿಶ್ವದ ಬಹುತೇಕ ಎಲ್ಲ ದೇಶಗಳೂ ಯೋಗದಿನದ ಈ ಸಂದರ್ಭವನ್ನು ತಮ್ಮದಾಗಿಸಿಕೊಳ್ಳುವತ್ತ ಸಾಗಿದ್ದವು. ಚೀನಾದ  ಮಹಾ ಗೋಡೆಯ ಮೇಲೆ ಜನರು ಯೋಗಾಭ್ಯಾಸ ಮಾಡಿದ್ದಾರೆ. ಅದೇ ರೀತಿ ಪೆರುವಿನಲ್ಲಿ ಸಮುದ್ರ ಮಟ್ಟದಿಂದ 24೦೦ ಮೀಟರ್ ಎತ್ತರದ ವಿಶ್ವ ಪಾರಂಪರಿಕ ತಾಣಮಾಚು ಪಿಚ್ಚುವಿನಲ್ಲಿ ಜನರು ಯೋಗ ಪ್ರದರ್ಶನ ಮಾಡಿದರು. ಫ್ರಾನ್ಸ್ ನ ಐಫೆಲ್ ಗೋಪುರದ ನೆರಳಲ್ಲಿ ಜನರು ಯೋಗ ಪ್ರದರ್ಶನ ಕೈಗೊಂಡರು. ಅಬುದಾಬಿಯಲ್ಲಿ 4000 ಕ್ಕೂ ಅಧಿಕ ಜನರು ಸಾಮೂಹಿಕ ಯೋಗ ಕಾರ್ಯಕ್ರಮ ನಡೆಸಿದರು. ಅಪ್ಘಾನಿಸ್ತಾನದ ಹೆರತ್‌ ನಲ್ಲಿ ಭಾರತ ಮತ್ತು ಆಫ್ಘಾನಿಸ್ತಾನದ ಸ್ನೇಹ ಸಂಕೇತವಾಗಿರುವ  ಸಲ್ಮಾ ಅಣೆಕಟ್ಟೆ ಬಳಿ ಯೋಗ ಪ್ರದರ್ಶನ ನಡೆಸಿದರು. ಯೋಗ ಭಾರತದ ಗೆಳೆತನಕ್ಕೆ ಹೊಸ ಆಯಾಮ ನೀಡಿತು.  ಸಿಂಗಾಪೂರದಂತಹ ಸಣ್ಣ ರಾಷ್ಟ್ರದಲ್ಲಿಯೂ ವಾರವಿಡಿಯ ಅಭಿಯಾನದೊಂದಿಗೆ 70 ಸ್ಥಳಗಳಲ್ಲಿ ಯೋಗ ಕಾರ್ಯಕ್ರಮಗಳು ನಡೆದವು, ಅಂತಾರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ವಿಶ್ವಸಂಸ್ಥೆ ಹತ್ತು ಅಂಚೆ ಚೀಟಿಗಳನ್ನು ಹೊರತಂದಿದೆ. ಯೋಗಾ ಗುರುಗಳೊಂದಿಗೆ ಯೋಗ ಅಧಿವೇಶನವನ್ನು ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಆಯೋಜಿಸಲಾಗಿತ್ತು. ವಿಶ್ವಸಂಸ್ಥೆಯ ಸಿಬ್ಬಂದಿ, ವಿಶ್ವಾದ್ಯಂತದ ರಾಜತಾಂತ್ರಿಕರುಭಾಗವಹಿಸಿದ್ದರು.

ಈ ಬಾರಿಯೂ ಯೋಗ ಮತ್ತೊಮ್ಮೆ ವಿಶ್ ದಾಖಲೆ ಮಾಡಿತು. ಗುಜರಾತ್‌ ನ ಅಹ್ಮದಾಬಾದ್‌ನಲ್ಲಿ ಸುಮಾರು 55 ಸಾವಿರ ಜನರು ಒಟ್ಟಿಗೇ ಯೋಗ ಮಾಡಿ ಹೊಸ ವಿಶ್ವ ದಾಖಲೆ ನಿರ್ಮಿಸಿದರು. ನನಗೂ ಲಖನೌದಲ್ಲಿ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಲಭಿಸಿತು. ಆದರೆ ಮೊದಲ ಬಾರಿಗೆ ನನಗೆ ಮಳೆಯಲ್ಲಿ ಯೋಗ ಮಾಡುವ ಸದವಕಾಶ ದೊರೆಯಿತು. ನಮ್ಮ ಸೈನಿಕರು  ಮೈನಸ್ 20, 25, 40 ಡಿಗ್ರಿ ತಾಪಮಾನಇರುವ ಸಿಯಾಚಿನ್‌ನಲ್ಲಿ ಕೂಡ ಯೋಗ ಮಾಡಿದರು. ಅದು ನಮ್ಮ ಸಶಸ್ತ್ರ ಪಡೆ ಇರಲಿ ಅಥವಾ ಬಿ.ಎಸ್.ಎಫ್., ಐಟಿಬಿಪಿ,ಸಿಆರ್.ಪಿ.ಎಫ್. ಮತ್ತು ಸಿ.ಐ.ಎಸ್.ಎಫ್. ಪ್ರತಿಯೊಬ್ಬರೂ ತಮ್ಮ ಕರ್ತವ್ಯದ ಜೊತೆಗೆ ಯೋಗವನ್ನು ತಮ್ಮ ಬದುಕಿನ ಭಾಗವಾಗಿ ಮಾಡಿಕೊಂಡಿದ್ದರು. ಈ ಯೋಗ ದಿನದಂದು ಇದು3 ನೇ ಅಂತಾರಾಷ್ಟ್ರೀಯ ಯೋಗ ದಿನವಾದ್ದರಿಂದ ಮೂರು ತಲೆಮಾರಿನವರು ಒಟ್ಟಿಗೇ ಸೇರಿ ಯೋಗ ಮಾಡುವ ಫೋಟೊ ಶೇರ್ ಮಾಡಿ ಎಂದು ಹೇಳಿದ್ದೆ. ಕೆಲ ಟಿ ವಿ ವಾಹಿನಿಗಳೂ ಈ ವಿಷಯಕ್ಕೆ ಪ್ರೊತ್ಸಾಹಿಸಿದವು. ನನಗೆ ಇಂಥ ಹಲವು ಫೋಟೊಗಳು ಸಿಕ್ಕವು. ಅದರಲ್ಲಿ ಕೆಲವು ಆಯ್ದ ಫೋಟೋಗಳನ್ನು ಹೆಕ್ಕಿ NarendraModiApp ನಲ್ಲಿ ಅಪ್ ಲೋಡ್ ಮಾಡಲಾಗಿದೆ. ವಿಶ್ವಾದ್ಯಂತ ಯೋಗದ ಚರ್ಚೆ ಆಗುತ್ತಿದೆ. ಅದರಿಂದ ಒಂದು ಉತ್ತಮ ಅಂಶವೂ ಹೊರಹೊಮ್ಮಿದೆ. ಇಂದಿನ ಆರೋಗ್ಯ ಕಾಳಜಿಯ ಸಮಾಜದವು ದೃಢ ಕಾಯದಿಂದ ಉತ್ತಮಿಕೆಯಕಡೆಗೆ ದಾಪುಗಾಲಿಟ್ಟಿದೆ. ಅವರಿಗೆ ದೇಶದಾರ್ಢ್ಯಮಹತ್ವಪೂರ್ಣ ಹೌದು, ಅದರ ಜೊತೆಗೆ ಉತ್ತಮಿಕೆ (ವೆಲ್ ನೆಸ್)ಗೆ ಯೋಗ ಅವಶ್ಯಕ ಎಂಬುದು ಅರಿವಾಗುತ್ತಿದೆ.

 

(ಧ್ವನಿ) ಮಾನ್ಯ ಪ್ರಧಾನ ಮಂತ್ರಿಗಳೇ, ನಾನು ಡಾ. ಅನಿಲ್ ಸೊನಾರಾ, ಅಹ್ಮದಾಬಾದ್,ಗುಜರಾತಿನಿಂದ ಮಾತಾಡುತ್ತಿದ್ದೇನೆ. ಸಾರ್, ನನ್ನದೊಂದು ಪ್ರಶ್ನೆ, ನೀವು ಇತ್ತೀಚೆಗೆ ಕೇರಳದಲ್ಲಿ ಮಾತಾಡಿದ್ದನ್ನ ನಾವು ಕೇಳಿದ್ದೆವು. ವಿವಿಧ ಶುಭ ಸಂದರ್ಭಗಳಲ್ಲಿ ನಾವು ಹೂಗುಚ್ಛವನ್ನು ಉಡುಗೊರೆಯಾಗಿ ನೀಡುತ್ತೇವೆ, ಅದರ ಬದಲಿಗೆ ಒಳ್ಳೆಯ ಪುಸ್ತಕಗಳನ್ನ ಸ್ಮರಣಿಕೆಯಂತೆ ನೀಡಬೇಕೆಂದು ನೀವು ಹೇಳಿದನ್ನ ನಾವು ಕೇಳಿದ್ದೆವು. ನೀವು ಗುಜರಾತಿನ ಕಛೇರಿಯಲ್ಲಿ ಇದನ್ನ ಪ್ರಾರಂಭ ಮಾಡಿಸಿದ್ದಿರಿ. ಆದರೆ, ಸಾರ್ ಇತ್ತೀಚಿನ ದಿನಗಳಲ್ಲಿ ನಾವಿದನ್ನ ಹೆಚ್ಚಾಗಿ ಕಾಣುತ್ತಿಲ್ಲ. ಹೀಗಾಗಿ ನಾವು ಇದಕ್ಕೆ ಏನಾದರೂ ಮಾಡಲು ಸಾಧ್ಯವೇ? ನಾವಿದರ ಬಗ್ಗೆ ಏನೂ ಮಾಡಲು ಸಾಧ್ಯವಿಲ್ಲವೇ, ದೇಶವ್ಯಾಪಿ ಇದರ ಅಳವಡಿಕೆ ಆಗುವಂತೆ ನಾವೇನೂ ಮಾಡಲಾಗುವುದಿಲ್ಲವೇ ಸಾರ್? ” 

 

ಇತ್ತೀಚೆಗೆ ನನಗೆಅತ್ಯಂತ ಪ್ರಿಯವಾದ ಕಾರ್ಯಕ್ರಮವೊಂದಕ್ಕೆ ಹೋಗುವ ಅವಕಾಶ ದೊರೆಯಿತು. ಕೆಲ ವರ್ಷಗಳಿಂದ ಕೇರಳದಲ್ಲಿ ತುಂಬಾ ಒಳ್ಳೇ ಕಾರ್ಯಕ್ರಮಗಳು ನಡೆಯುತ್ತಿವೆ. ಅದು ಪಿ ಎನ್ ಪಣಿಕ್ಕರ್ ಪ್ರತಿಷ್ಠಾನದ ಹೆಸರಲ್ಲಿ ನಡೆಯುತ್ತದೆ. ಜನರಿಗೆ ಓದುವ ಅಭ್ಯಾಸ ಬೆಳೆಯಲಿ, ಓದಿನತ್ತ ಜನರು ಜಾಗೃತರಾಗಲಿ ಎಂದು ಓದುವ ದಿನ, ಓದಿನ ಮಾಸ ಆಚರಿಸಲಾಗುತ್ತದೆ.  ನನಗೆ ಅದರ ಪ್ರಾರಂಭೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಿತು. ಅಲ್ಲಿ ನನಗೆ ’ನಾವು ಹೂಗುಚ್ಛ ಕೊಡುವುದಿಲ್ಲ ಬದಲಾಗಿ ಪುಸ್ತಕ ಕೊಡುತ್ತೇವೆ’ ಎಂದು ಹೇಳಲಾಯಿತು. ನನಗೆ ತುಂಬಾ ಸಂತೋಷವಾಯಿತು. ನನಗೂ ನನ್ನ ಮನದಿಂದ ಅಳಿಸಿ ಹೋಗಿದ್ದ, ನೆನಪು ಮರುಕಳಿಸಿತು. ಏಕೆಂದರೆ ನಾನು ಗುಜರಾತ್‌ನಲ್ಲಿದ್ದಾಗ ನನ್ನ ಆಡಳಿತದಲ್ಲಿ ಒಂದು ನಿಯಮವನ್ನು ಮಾಡಿದ್ದೆ. ಏನೆಂದರೆ ನಾವು ಹೂಗುಚ್ಛ ಕೊಡುವುದಿಲ್ಲ ಪುಸ್ತಕ ಮಾತ್ರ ಕೊಡುತ್ತೇವೆ ಇಲ್ಲ ಕರವಸ್ತ್ರ ನೀಡಿ ಸ್ವಾಗತಿಸುತ್ತೇವೆ ಎಂದು. ಅದರಲ್ಲೂ ಖಾದಿಗೆ  ಪ್ರೋತ್ಸಾಹ ದೊರೆಯಲೆಂದು, ಖಾದಿ ಕರವಸ್ತ್ರ ಬಳಸುವುದು ಎಂದು ನಿರ್ಧರಿಸಿದ್ದೆ. ನಾನು ಗುಜರಾತ್‌ನಲ್ಲಿ ಇರುವವರೆಗೂ ಅದು ಒಂದು ಅಭ್ಯಾಸವಾಗಿ ಹೋಗಿತ್ತು ಆದರೆ ಇಲ್ಲಿಗೆ ಬಂದ ಮೇಲೆ ಆ ಅಭ್ಯಾಸ ತಪ್ಪಿ ಹೋಗಿದೆ. ಆದರೆ ಕೇರಳಾಕ್ಕೆ  ಹೋದಮೇಲೆ, ಮತ್ತೊಮ್ಮೆ ಅದು ಜಾಗೃತವಾಯಿತು. ನಾನು ಈಗಾಗಲೇ ಈ ಆಡಳಿತದಲ್ಲಿಯೂ ಸೂಚನೆಗಳನ್ನು ನೀಡಲು ಆರಂಭಿಸಿದ್ದೇನೆ. ಹೂಗುಚ್ಛದ ಆಯಸ್ಸು ಬಹಳ ಅಲ್ಪ, ಒಮ್ಮೆ ಕೈಗೆ ತೆಗೆದುಗೊಂಡ ನಂತರ ಅದನ್ನ ಬಿಟ್ಟು ಬಿಡುತ್ತೇವೆ. ಆದರೆ, ಪುಸ್ತಕವನ್ನು ನೀಡಿದರೆ, ಅದು ಒಂದು ರೀತಿ ಮನೆಯ ಭಾಗವಾಗಿ ಹೋಗುತ್ತೆ,ಕುಟುಂಬದ ಒಂದ ಭಾಗವಾಗಿ ಬಿಡುತ್ತದೆ. ಇಲ್ಲ ಖಾದಿ ಕರವಸ್ತ್ರ ನೀಡಿ ಸ್ವಾಗತಿಸಬಹುದು,ಇದರಿಂದ ಎಷ್ಟೊಂದು ಬಡವರಿಗೆ ಸಹಾಯವಾಗುತ್ತದೆ. ಖರ್ಚು ಕಡಿಮೆಯಾಗುವುದರ ಜೊತೆಗೆ ಸರಿಯಾದ ರೀತಿಯಲ್ಲಿ ಅದರ ಉಪಯೋಗವೂ ಆಗುತ್ತದೆ. ನಾನು ಇಂಥ ಮಾತುಗಳನ್ನ ಹೇಳುತ್ತಿದ್ದೇನೆ ಅಂದರೆ, ಇಂಥ ವಸ್ತುಗಳಿಗೆ ಎಷ್ಟು ಐತಿಹಾಸಿಕ ಮೌಲ್ಯವಿರಬಹುದು? ನಾನು ಕಳೆದ ವರ್ಷ ಇಂಗ್ಲೆಂಡ್ ಗೆ ಭೇಟಿ ನೀಡಿದ್ದಾಗ ಬ್ರಿಟನ್ ಮಹಾರಾಣಿ ಕ್ವೀನ್ ಎಲಿಜಬೆತ್, ನನ್ನನ್ನು ಅವರೊಂದಿಗೆ ಭೋಜನಕೂಟಕ್ಕೆ ಆಮಂತ್ರಿಸಿದ್ದರು. ಆಗ ನನಗೆ ತಾಯಿಯ ಬಳಿ ಇರುವಂಥ ಅನುಭವವಾಗಿತ್ತು. ಬಹಳ ವಾತ್ಸಲ್ಯದಿಂದ ಉಣ ಬಡಿಸಿದರು, ನಂತರ ಅವರು ಬಹಳ ಗೌರವದಿಂದ, ಭಾವಾತ್ಮಕ ಸ್ವರದೊಂದಿಗೆ ನೂಲಿನಿಂದ ನೇಯ್ದ ಖಾದಿಯ ಒಂದು ಪುಟ್ಟ ಕರವಸ್ತ್ರ ತೋರಿಸಿದರು. ಅವರ ಕಣ್ಣು ಮಿಂಚುತ್ತಿದ್ದವು, ತಮ್ಮ ಮದುವೆಯ ಸಮಯದಲ್ಲಿ ಶುಭಹಾರೈಸಲು, ಮಹಾತ್ಮ ಗಾಂಧಿಯವರು ಇದನ್ನು ಉಡುಗಿರೆಯಾಗಿ ನೀಡಿದ್ದರೆಂದು ಹೇಳಿದರು. ಎಷ್ಟೊಂದು ವರ್ಷಗಳು ಉರುಳಿವೆ, ಆದರೆ, ಕ್ವೀನ್ ಎಲಿಜೆಬೆತ್ ಅವರುಮಹಾತ್ಮ ಗಾಂಧಿಯವರು ತಮಗೆ ನೀಡಿದ್ದ ಖಾದಿ ಕರವಸ್ತ್ರವನ್ನು ಜತನವಾಗಿ ಇಟ್ಟಿದ್ದಾರೆ.  ನಾನು ಹೋಗಿದ್ದಾಗ ಅದನ್ನು ತೋರಿಸಿ ನನಗೆ ಈ ಮಾತುಗಳನ್ನ ಹೇಳಲು, ಅವರಿಗೆ ಬಹಳ ಸಂತಸ ಪಟ್ಟರು. ನಾನು ನೋಡುತ್ತಿದ್ದಂತೆಯೇ ಅವರು ಅದನ್ನು ಸ್ಪರ್ಶಿಸಿ ನೋಡಲು ಒತ್ತಾಯಿಸಿದರು. ಮಹಾತ್ಮ ಗಾಂಧಿಯವರ ಒಂದು ಪುಟ್ಟ ಉಡುಗೊರೆ ಅವರ ಜೀವನದ ಒಂದು ಭಾಗವಾಗಿಬಿಟ್ಟಿತ್ತು, ಅವರ ಇತಿಹಾಸದ ಒಂದು ಭಾಗವಾಗಿಬಿಟ್ಟಿದೆ. ಈ ಅಭ್ಯಾಸಗಳು ರಾತ್ರೋ-ರಾತ್ರಿ ಬದಲಾಗುತ್ತವೆ ಎಂಬ ನಂಬಿಕೆ ನನಗಿಲ್ಲ ಮತ್ತು ನಾವೆಂದಾದರೂ ಇಂಥ ಮಾತುಗಳನ್ನಾಡಿದಾಗ, ಆಲೋಚನೆಗಳಿಗೂ ಗುರಿಯಾಗಬೇಕಾಗುತ್ತದೆ. ಆದರೂ ಸಹ ಇಂತಹ ಮಾತುಗಳನ್ನ ಆಡುತ್ತಲೇ ಇರಬೇಕಾಗುತ್ತದೆ, ಪ್ರಯತ್ನ ಮಾಡುತ್ತಲೇ ಇರಬೇಕಾಗುತ್ತದೆ. ನಾನು ಎಲ್ಲಾದರೂ ಹೋದಾಗ, ಯಾರಾದರೂ ಹುಗುಚ್ಛ  ತಂದರೆ,ನಾನು ಅದನ್ನು ತಿರಸ್ಕರಿಸುತ್ತೇನೆ ಎಂದು ಹೇಳಲಾಗುವುದಿಲ್ಲ, ನಾನು ಹಾಗೆ ಮಾಡಲಾಗುವುದಿಲ್ಲ. ಆದರೆ ಯೋಚನೆಯಂತೂ ಇದ್ದೇ ಇರುತ್ತದೆ, ಇದರ ಬಗ್ಗೆ ಮಾತನಾಡುತ್ತಲೇ ಇದ್ದರೆ, ನಿಧಾನವಾಗಿ ಸುಧಾರಣೆಯಾಗುತ್ತದೆ. ನನ್ನ ಪ್ರಿಯ ದೇಶವಾಸಿಗಳೇ, ಪ್ರಧಾನ ಮಂತ್ರಿಯಾಗಿ ನನಗೆ ಅನೇಕ ಬಗೆಯ ಕೆಲಸಗಳಿರುತ್ತವೆ. ಕಡತಗಳಲ್ಲಿ ಮುಳುಗಿ ಹೋಗಿರುತ್ತೇನೆ, ಆದರೆ, ನಾನು ನನಗೋಸ್ಕರ ಒಂದು ಅಭ್ಯಾಸ ಮಾಡಿಕೊಂಡಿದ್ದೇನೆ, ಅದೇನೆಂದರೆ, ನಾನು ಪ್ರತಿದಿನ, ನನಗೆ ಬಂದಂತಹ ಪತ್ರಗಳಲ್ಲಿ ಕೆಲವನ್ನು ಓದುತ್ತೇನೆ, ಇದರಿಂದ ನನಗೆ ಶ್ರೀಸಾಮಾನ್ಯರ ಜೊತೆ ಬೆರೆಯಲು ಒಂದು ಅವಕಾಶ ದೊರೆಯುತ್ತದೆ. ವಿಭಿನ್ನ ರೀತಿಯ ಪತ್ರಗಳು ಬರುತ್ತವೆ, ವಿಭಿನ್ನ ಜನರು ಪತ್ರಗಳನ್ನು ಬರೆಯುತ್ತಾರೆ. ಇತ್ತೀಚೆಗೆ ನನಗೆ ಒಂದು ಪತ್ರ ಓದಲು ದೊರಕಿತ್ತು,ನಾನದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇನೆ. ದೂರದ ದಕ್ಷಿಣ ಭಾರತದಲ್ಲಿ,ತಮಿಳುನಾಡಿನಲ್ಲಿ, ಮದುರೈನಿಂದ ಒಬ್ಬರು ಗೃಹಿಣಿ, ಅರುಳ್ ಮೋಳಿ ಶರವಣನ್ ಅವರು,ನನಗೊಂದು ಪತ್ರ ಬರೆದು ಕಳುಹಿಸಿದ್ದಾರೆ. ಆ ಪತ್ರ ಏನು?ಅವರು ಏನು ಬರೆದಿದ್ದರೆ ಎಂದರೆ ತಮ್ಮ ಕುಟುಂಬದಲ್ಲಿ, ಮಕ್ಕಳ ವಿದ್ಯಾಭ್ಯಾಸ ಇತ್ಯಾದಿಗಳನ್ನು ನೋಡಿಕೊಳ್ಳುತ್ತಾ ಏನಾದರೂ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಕೊಂಡರೆ, ತಮ್ಮ ಕುಟುಂಬಕ್ಕೆ ಸ್ವಲ್ಪ ಮಟ್ಟಿಗಾದರೂ ಆರ್ಥಿಕ ಸಹಾಯವಾಗಬಹುದೆಂದು ತಾವು ಯೋಚೆಸಿದೆ. ಹೀಗಾಗಿ’ಮುದ್ರಾ’ ಯೋಜನೆಯಡಿ, ಬ್ಯಾಂಕಿನಿಂದ ಹಣ ಸಾಲ ಪಡೆದೆ ಮತ್ತು ಮಾರುಕಟ್ಟೆಯಿಂದ ಕೆಲ ವಸ್ತುಗಳನ್ನ ತಂದು ಮಾರಾಟ ಮಾಡುವ, ಕೆಲಸ ಪ್ರಾರಂಭಿಸಿದ್ದೇನೆ. ಈ ಮಧ್ಯೆ ಭಾರತ ಸರ್ಕಾರ, ಇ ಮಾರುಕಟ್ಟೆ ಸ್ಥಳ,ಎಂಬ ವ್ಯವಸ್ಥೆಯನ್ನು ಆರಂಭಿಸಿರುವದರ ಬಗ್ಗೆ  ಅವರ ಗಮನ ಹೋಯಿತು. ಆಗ ಅವರು ಆ ಬಗ್ಗೆ ಹುಡಿಕಿದರು, ಇದೇನೆಂದು ಕೆಲವರನ್ನು ಪ್ರಶ್ನಿಸಿದರು,  ಬಳಿಕ ಸ್ವತಃ ಅದರಲ್ಲಿ ನೋಂದಣಿ ಮಾಡಿಸಿಕೊಂಡರು. ನಾನು ದೇಶದ ಜನತೆಗೆ ಹೇಳುವುದೇನೆಂದರೆ, ನಿಮಗೆ ಅವಕಾಶ ಸಿಕ್ಕಾಗE-G-E-M, E-GEM ಅಂತರ್ಜಾಲ ತಾಣಕ್ಕೆ ಒಮ್ಮೆ ಭೇಟಿ ನೀಡಿ. ಇದೊಂದು ಹೊಸ ರೀತಿಯ ವ್ಯವಸ್ಥೆಯಾಗಿದೆ. ಯಾರಾದರೂ ಸರ್ಕಾರಕ್ಕೆ ಏನನ್ನಾದರೂ ಏನಾದರೂ ವಸ್ತುವನ್ನು ಸರ್ಕಾರಕ್ಕೆ ಪೂರೈಕೆಮಾಡಬೇಕೆಂದಿದ್ದರೆ, ಚಿಕ್ಕ ಚಿಕ್ಕ ವಸ್ತುಗಳನ್ನು ಅಂದರೆ, ವಿದ್ಯುತ್ ಬಲ್ಬ್, ಕಸದ ಡಬ್ಬ, ಪೊರಕೆ, ಕುರ್ಚಿಗಳು ಮತ್ತು ಮೇಜುಗಳನ್ನು ಮಾರಾಟ ಮಾಡಬೇಕೆಂದಿದ್ದರೆ – ನೀವು ಅದರಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಅವರು ವಸ್ತುವಿನ ಗುಣಮಟ್ಟ, ಅವರು ಅದನ್ನು ಮಾರಾಟ ಮಾಡುವ ದರ ನಮೂದಿಸಬೇಕು. ಜೊತೆಗೆ ಸರ್ಕಾರದ ಇಲಾಖೆಯವರು ಈ ತಾಣಕ್ಕೆ ಬೇಟಿ ನೀಡಿ ಪರಿಶೀಲಿಸುವುದು ಖಡ್ಡಾಯವಾಗಿದೆ, ಗುಣಮಟ್ಟದಲ್ಲಿ ರಾಜೀ ಮಾಡಿಕೊಳ್ಳದೆಮಾರಾಟ ಮಾಡುವವರು  ಇದನ್ನು ಕಡಿಮೆ ಬೆಲೆಯಲ್ಲಿ ಯಾರು ಮಾರುತ್ತಾರೆಂದು ಪರಿಶಿಲಿಸಿ ಅದನ್ನು ಬೇಡಿಕೆಯನ್ನು ಸಲ್ಲಿಸಬೇಕಾಗುತ್ತದೆ ಇದರಿಂದ ಮಧ್ಯವರ್ತಿಗಳ ಕಾಟ ತಪ್ಪಿ, ಎಲ್ಲವೂ ಪಾರದರ್ಶಕವಾಗುತ್ತದೆ. ಯಾವುದೇ ಮಧ್ಯಪ್ರವೇಶ ಇರುವುದಿಲ್ಲ, ಎಲ್ಲವೂ ತಂತ್ರಜ್ಞಾನದಿಂದ ನಡೆಯುತ್ತದೆ, ಹಾಗಾಗಿ ಯಾವಾಗ ಜನ E-GEM ನಲ್ಲಿ ನೋಂದಣಿ ಮಾಡಿಸುತ್ತಾರೋ, ಆಗ ಸರ್ಕಾರದ ಎಲ್ಲ ಇಲಾಖೆಗಳೂ ಅದನ್ನು ನೋಡಬಹುದು. ಮಧ್ಯದಲ್ಲಿ ದಲ್ಲಾಳಿಗಳು ಇಲ್ಲದಿರುವುದರಿಂದ ವಸ್ತುಗಳು ಕಡಿಮೆಬೆಲಾಗೆ ಲಭಿಸುತ್ತವೆ. ಈಗ, ಈ ಅರುಳ್ ಮೋಳಿ ಅವರು,ಸರ್ಕಾರದ ಈ ಅಂತರ್ಜಾಲ ತಾಣದಲ್ಲಿ,ಅವರು ಏನೇನು ಪೂರೈಸಬಹುದೋ, ಅವೆಲ್ಲವನ್ನೂ ನೋಂದಣಿ ಮಾಡಿಸಿಬಿಟ್ಟಿದ್ದಾರೆ. ಅದರಲ್ಲೂ ಆಸಕ್ತಿಕರವಾದ ವಿಷಯವೆಂದರೆ, ಅವರು ನನಗೆ ಬರೆದಿರುವಂಥ ಪತ್ರದ ಸಾಲು ಬಹಳ ಆಸಕ್ತಿದಾಯಕವಾಗಿದೆ. ಅವರು ಬರೆಯುತ್ತಾರೆ, ನನಗೆ’ಮುದ್ರಾ’ದಿಂದ ಸಾಲ ಲಭಿಸಿದೆ, ನನ್ನ ವ್ಯಾಪಾರ ಆರಂಭವಾಗಿದೆ, E-GEM ಅಂತರ್ಜಾಲ ತಾಣದಲ್ಲಿ ಏನೇನು ಮಾರಬಹುದೋ, ಅವೆಲ್ಲವನ್ನೂ ನಮೂದಿಸಿದ್ದೇನೆ ಮತ್ತು ನನಗೆ ಪ್ರಧಾನ ಮಂತ್ರಿಗಳ ಕಾರ್ಯಾಲಯದಿಂದ ಅರ್ಡರ್ ದೊರೆತಿದೆ ಎಂದು ಹೇಳಿದ್ದಾರೆ. ಇದು ನನಗೂ ಒಂದು ಸುದ್ದಿಯಾಗಿದೆ.ಅವರು, ಪ್ರಧಾನಮಂತ್ರಿಯವರ ಕಾರ್ಯಾಲಯಕ್ಕೆ ಏನೇನು ಪೂರೈಕೆ ಮಾಡಿದರು ಎಂದು ಅಚ್ಚರಿ ಆಯಿತು. ಅವರು, ಪ್ರಧಾನ ಮಂತ್ರಿಯವರ ಕಾರ್ಯಾಲಯ ತಮ್ಮಿಂದ  ಎರಡು ಥರ್ಮಾಸ್ ಖರೀದಿಸಿದ್ದಾರೆಂದು ಬರೆಯುತ್ತಾರೆ, ಜೊತೆಗೆ 16೦೦ರೂಪಾಯಿಯ ಹಣ  ಅವರಿಗೆ ಸಂದಾಯವಾಗಿದೆ. ಇದು ಸಬಲೀಕರಣ,ಇದುಉದ್ಯಮಶೀಲತೆಯನ್ನು ಪ್ರೋತ್ಸಾಹಿಸುವ ಅವಕಾಶ. ಒಂದು ವೇಳೆ, ಅರುಳ್ ಮೋಳಿ ಅವರು ನನಗೆ ಪತ್ರ ಬರೆಯದೇ ಹೋಗಿದ್ದರೆ, E-GEM ವ್ಯವಸ್ಥೆಯಿಂದ, ದೂರದಲ್ಲಿರುವ ಒಬ್ಬ ಗೃಹಿಣಿ, ಚಿಕ್ಕ ಕೆಲಸ ಮಾಡಿತ್ತಿದ್ದಾಳೆಂದು ಮತ್ತು ಅವರು ಮಾರಿದ ವಸ್ತುಗಳನ್ನು ಪ್ರಧಾನ ಮಂತ್ರಿಗಳ ಕಚೇರಿಯವರೂ ಖರೀದಿಸಬಹುದೆಂದು ನನಗೆ ತಿಳಿಯುತ್ತಿರಲಿಲ್ಲ. ಇದು ದೇಶದ ಶಕ್ತಿ. ಇದುವೇ ಪಾರದರ್ಶಕತೆ, ಇದು ಸಬಲೀಕರಣ, ಇದು ಉದ್ಯಮಶೀಲತೆಯೂ ಹೌದು. ಸರ್ಕಾರದ ಇ ಮಾರುಕಟ್ಟೆ ಪ್ರದೇಶ, E-GEM.ಯಾರೇ ಸರ್ಕಾರಕ್ಕೆ ಹೀಗೆ ತಮ್ಮ ವಸ್ತುಗಳನ್ನು ಮಾರಾಟಮಾಡಲು ಇಷ್ಟಪಡುತ್ತೀರೋ, ಅವರು ಹೆಚ್ಚೆಚ್ಚು ಈ ಅಂತರ್ಜಾಲ ತಾಣದಲ್ಲಿ ತೊಡಗಿಸಿಕೊಳ್ಳಿ. ಇದು ಕನಿಷ್ಠ ಸರ್ಕಾರ,ಗರಿಷ್ಠ ಆಡಳಿತಕ್ಕೆ  ಒಂದು ಉತ್ತಮ ಉದಾಹರಣೆ ಮತ್ತು  ಇದರ ಉದ್ದೇಶ ಕನಿಷ್ಠ ದರ ಮತ್ತು ಗರಿಷ್ಠ ನೆಮ್ಮದಿ, ಸಾಮರ್ಥ್ಯ ಮತ್ತು ಪಾರದರ್ಶಕತೆಯಾಗಿದೆ.

 

ನನ್ನ ಪ್ರಿಯ ದೇಶ ವಾಸಿಗಳೇ, ಒಂದೆಡೆ ನಾವು ನಮ್ಮ ಯೋಗ ಕುರಿತು ಹೆಮ್ಮೆ ಪಟ್ಟರೆ,ಮತ್ತೊಂದೆಡೆ ನಾವು ಬಾಹ್ಯಾಕಾಶ ವಿಜ್ಞಾನದಲ್ಲಿನ ನಮ್ಮ ಸಾಧನೆಗೆ ಅಭಿಮಾನ ಪಡೆಬೇಕು. ಇದೇ ನಮ್ಮ ಭಾರತದ ವಿಶೇಷತೆ, ನಮ್ಮ ಪಾದಗಳು ಯೋಗದಿಂದ ಕೂಡಿದ ಭೂಮಿಯ ಮೇಲಿದ್ದರೆ, ನಮ್ಮ ಕನಸುಗಳು, ದೂರದ ದಿಗಂತಗಳಾಚೆ ಇವೆ. ಇತ್ತೀಚೆಗೆ,ಭಾರತ ಕ್ರೀಡೆಯಲ್ಲಿ ಮತ್ತು ವಿಜ್ಞಾನದಲ್ಲೂ ಬಹಳಷ್ಟು ಸಾಧನೆ ಮಾಡಿ ತೋರಿಸಿದೆ. ಇಂದು ಭಾರತ ಕೇವಲ ಭೂಮಿಯ ಮೇಲಷ್ಟೇ ಅಲ್ಲ, ಬಾಹ್ಯಾಕಾಶದಲ್ಲೂ ತನ್ನ ಪತಾಕೆ ಹಾರಿಸುತ್ತಿದೆ. ಎರಡು ದಿನಗಳ ಹಿಂದಷ್ಟೇ ಇಸ್ರೋ ಕಾರ್ಟೋಸ್ಯಾಟ್ 2 ಸರಣಿಯಉಪಗ್ರಹದ ಜೊತೆಗೆ 30 ನ್ಯಾನೋಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆಮಾಡಿದೆ. ಈ ಉಪಗ್ರಹಗಳಲ್ಲಿ ಭಾರತವಷ್ಟೇ ಅಲ್ಲ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್,ಬ್ರಿಟನ್ ಅಮೆರಿಕಾ ಸೇರಿದಂತೆ 14 ದೇಶಗಳ ಉಪಗ್ರಹಗಳನ್ನು ಭಾರತ ಉಡ್ಡಯನ ಮಾಡಿದೆ. ಈ ನ್ಯಾನೋ ಉಪಗ್ರಹ ಉಡಾವಣೆಯಿಂದ, ನಮಗೆ ಕೃಷಿ, ತೋಟಗಾರಿಕೆ ಮತ್ತು ಪ್ರಕೃತಿ ವಿಕೋಪದ ವಿರುದ್ಧ ಸೆಣೆಸಲು ಉಪಯುಕ್ತವಾಗಲಿದೆ.

 

ಕೆಲ ದಿನಗಳ ಹಿಂದೆ ಇಸ್ರೋ ಜಿಸ್ಯಾಟ್ 19ನ್ನು ಯಶಸ್ವಿಯಾಗಿ ಉಡ್ಡಯನ ಮಾಡಿದ್ದು, ನಿಮಗೆ ತಿಳಿದಿರಬಹುದು. ಇಲ್ಲಿಯವರೆಗೆ ಭಾರತ ಉಡಾವಣೆ ಮಾಡಿದ ಉಪಗ್ರಹಗಳ ಪೈಕಿ, ಇದು ಅತ್ಯಂತ ಭಾರವಾದ ಉಪಗ್ರಹವಾಗಿದೆ. ನಮ್ಮ ಭಾರತದ ಮಾಧ್ಯಮಗಳು ಇದರ ಭಾರವನ್ನು ಆನೆಯ ತೂಕಕ್ಕೆ ಹೋಲಿಸಿದ್ದರು, ಅಂದರೆ ಬಾಹ್ಯಾಕಾಶ ಕ್ಷೇತ್ರದಲ್ಲಿ ನಮ್ಮ ಭಾರತದ ವಿಜ್ಞಾನಿಗಳು ಎಷ್ಟು ಮಹತ್ತರವಾದ ಸಾಧನೆ ಮಾಡಿದ್ದಾರೆಂದು ನೀವೇ ಊಹಿಸಿಕೊಳ್ಳಬಹುದು. ಜೂನ್ 19ಕ್ಕೆ ನಮ್ಮ ಮಂಗಳಯಾನ 1000 ದಿನಗಳನ್ನು ಪೂರೈಸಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ, ’ಮಂಗಳಯಾನ’ದಲ್ಲಿ ನಾವು ಯಶಸ್ವಿಯಾಗಿ ಕಕ್ಷೆ ತಲುಪಿದ್ದೆವು, ಈ ಸಂಪೂರ್ಣ ಅಭಿಯಾನ ಆರು ತಿಂಗಳ ಅವಧಿಯದ್ದಾಗಿತ್ತು. ಅದರ ಜೀವಿತಾವಧಿ ಆರು ತಿಂಗಳದ್ದಾಗಿತ್ತು. ಆದರೆ, ನಮ್ಮ ವಿಜ್ಞಾನಿಗಳ ಪ್ರಯೋಗದ ಶಕ್ತಿಯಿಂದ, ಇದು ಆರು ತಿಂಗಳ ಅವಧಿಯನ್ನು ಮೀರಿದ ವಿಷಯ ನನಗೆ ತುಂಬಾ ಸಂತೋಷ ನೀಡಿದೆ. 1000 ದಿನಗಳ ನಂತರವೂ ಈ ನಮ್ಮ’ಮಂಗಳಯಾನ’ ಇನ್ನೂ ಯಶಸ್ವಿಯಾಗಿ ಮುಂದುವರೆದಿದೆ, ಚಿತ್ರಗಳನ್ನು ಕಳುಹಿಸುತ್ತಲೇ ಇದೆ, ಮಾಹಿತಿಯನ್ನು ನೀಡುತ್ತಿದೆ, ತನ್ನ ನಿಗದಿತ ಕಾಲಾವಧಿಯ ಬಳಿಕವೂ ವೈಜ್ಞಾನಿಕ ದತ್ತಾಂಶಗಳನ್ನು ಸಂಗ್ರಹಿಸುತ್ತಿದೆ, ಆಯುಷ್ಯ ಮೀರಿ ಕಾರ್ಯ ನಿರ್ವಹಿಸುತ್ತಿದೆ. ಒಂದು ಸಾವಿರ  ದಿನಗಳು ಪೂರ್ಣಗೊಂಡಿರುವುದು ನಮ್ಮ ವೈಜ್ಞಾನಿಕ ಯಾತ್ರೆಯಲ್ಲಿ ಹಾಗೂಬಾಹ್ಯಾಕಾಶದ ಯಾನದಲ್ಲಿ ಒಂದು ಮಹತ್ವ ಮೈಲಿಗಲ್ಲಾಗಿದೆ.

ಇಂದಿನ ದಿನಗಳಲ್ಲಿ ಕ್ರೀಡೆಯಲ್ಲೂ ನಮ್ಮ ಯುವಜನರ ಒಲವು ಹೆಚ್ಚಾಗುತ್ತಿದೆ. ಇಂದು ತಮ್ಮ ವಿದ್ಯಾಭ್ಯಾಸದ ಜೊತೆಗೆ ಕ್ರೀಡೆಯಲ್ಲೂ ಯುವಜನರು ತಮ್ಮ ಭವಿಷ್ಯ ಕಾಣುತ್ತಿದ್ದಾರೆ.ಹಾಗೆಯೇ ನಮ್ಮ ಕ್ರೀಡಾಳುಗಳಿಂದಾಗಿ, ಅವರ ಕೆಚ್ಚೆದೆಯಿಂದಾಗಿ, ಅವರ ಸಾಧನೆಯಿಂದಾಗಿ ದೇಶದ ಹೆಸರು ರಾರಾಜಿಸುತ್ತಿದೆ. ಇತ್ತೀಚೆಗೆ ಭಾರತದ ಬ್ಯಾಂಡ್ಮಿಂಟನ್ ಆಟಗಾರ ಕಿಡಂಬಿ ಶ್ರೀಕಾಂತ್ ಇಂಡೋನೇಷ್ಯಾ ಮುಕ್ತ ಪಂದ್ಯಾವಳಿಯಲ್ಲಿ  ಗೆಲುವು ಸಾಧಿಸುವ ಮೂಲಕ ದೇಶದ ಗೌರವವನ್ನು ಹೆಚ್ಚಿಸಿದ್ದಾರೆ. ಈ ಸಾಧನೆಗಾಗಿ ನಾನು ಅವರಿಗೆ ಮತ್ತು ಅವರ ತರಬೇತುದಾರರಿಗೆ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ.

ನನಗೆ ಕೆಲ ದಿನಗಳ ಹಿಂದೆ ಅಥ್ಲಿಟ್ ಪಿ ಟಿ ಉಷಾ ಅವರ ಉಶಾ ಅಥ್ಲೆಟಿಕ್ಸ್ ಶಾಲೆಯ ಸಿಂಥೆಟಿಕ್ ಟ್ರಾಕ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿತ್ತು. ನಾವು ಕ್ರೀಡೆಗೆ ಪ್ರೋತ್ಸಾಹ ನೀಡಿದಷ್ಟೂ ಕ್ರೀಡಾ ಮನೋಭಾವ ವೃದ್ಧಿಸುತ್ತದೆ. ಕ್ರೀಡೆ ವ್ಯಕ್ತಿತ್ವ ವಿಕಸನದಲ್ಲೂ ಮಹತ್ವದ ಪಾತ್ರ  ವಹಿಸುತ್ತದೆ. ಸಮಗ್ರ ವ್ಯಕ್ತಿತ್ವದ ವಿಕಾಸದಲ್ಲಿ ಕ್ರೀಡೆಯ ಪಾತ್ರ ಮಹತ್ವದ್ದು. ನಮ್ಮ ದೇಶದಲ್ಲಿ ಪ್ರತಿಭೆಗೆ ಬರವಿಲ್ಲ. ನಮ್ಮ ಕುಟುಂಬದಲ್ಲಿ ಮಕ್ಕಳಿಗೆ ಕ್ರೀಡೆಯಲ್ಲಿ ಆಸಕ್ತಿ ಇದ್ದರೆ ಅವರಿಗೆ ಅವಕಾಶ ಕೊಡಬೇಕು. ಅವರನ್ನು ಮೈದಾನದಿಂದ ಹೊರತಂದು ಕೋಣೆಯಲ್ಲಿ ಕೂಡಿಹಾಕಿ ಪುಸ್ತಕಗಳ ಮುಂದೆ ಕೂರುವಂತೆ ಒತ್ತಾಯಿಸಬಾರದು. ಅವರು ಓದಲೂ ಬೇಕು, ಅದರಲ್ಲಿ ಮುಂದುವರಿಯುವುದಾದರೆ ಮುಂದುವರಿಯಲಿ. ಆದರೆ ಕ್ರೀಡೆಯಲ್ಲಿ ಅವರಿಗೆ ಸಾಮರ್ಥ್ಯವಿದ್ದರೆ, ಆಸಕ್ತಿಯಿದ್ದರೆ, ಅದನ್ನು ಪ್ರೋತ್ಸಾಹಿಸಲೇಬೇಕು ಮತ್ತು ಶಾಲೆ, ಕಾಲೇಜುಗಳು, ಕುಟುಂಬದವರು ಮತ್ತು ಅವರ ಸುತ್ತ ಇರುವ ಜನರು ಅವರನ್ನು ಉತ್ತೇಜಿಸಬೇಕು,ಬೆಂಬಲಿಸಬೇಕು. ಪ್ರತಿಯೊಬ್ಬರೂ ಮುಂದಿನ ಒಲಿಂಪಿಕ್ಸ್ ನ ಕನಸು ಕಾಣಬೇಕು. 

ನನ್ನ ನಲ್ಮೆಯ ದೇಶವಾಸಿಗಳೇ, ನಾನು ಮತ್ತೊಮ್ಮೆ ನಿರಂತರವಾದ ಉತ್ಸವಗಳ ವಾತಾವರಣದಮುಂಗಾರಿನ ಬಗ್ಗೆ ಪ್ರಸ್ತಾಪ ಮಾಡುತ್ತೇನೆ.ಒಂದು ರೀತಿಯಲ್ಲಿ ಈ ಕಾಲದ ಅನುಭವ ಹೊಸತನದಿಂದ ಕೂಡಿ ವಿಶಿಷ್ಠ ಅನುಭವ ನೀಡುತ್ತದೆ. ನಾನು ಮತ್ತೊಮ್ಮೆ ತಮ್ಮೆಲ್ಲರಿಗೂ ಶುಭ ಹಾರೈಸುತ್ತೇನೆ. ಮುಂದಿನ ಮನದಾಳದ ಮಾತಿನ ಸಂಚಿಕೆಯಲ್ಲಿ ನನ್ನ ಅನಿಸಿಕೆಗಳನ್ನು ನಿಮ್ಮೊಂದಿಗೆ ಮತ್ತೊಮ್ಮೆ ಹಂಚಿಕೊಳ್ಳುತ್ತೇನೆ. ನಮಸ್ಕಾರ.

*****