ಪಿಎಂಇಂಡಿಯಾ
ಜುಲೈ 2, 2026 ರಂದು, ಭಾರತ ಗಣರಾಜ್ಯದ ಗೌರವಾನ್ವಿತ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಜಪಾನ್ ದೇಶದ ಗೌರವಾನ್ವಿತ ಪ್ರಧಾನಮಂತ್ರಿ ಟಕೈಚಿ ಸನಾಯೆ ಅವರು ಭಾರತದ ನವದೆಹಲಿಯಲ್ಲಿ ಭೇಟಿಯಾದರು. ಪ್ರಸ್ತುತ ಭೌಗೋಳಿಕ ರಾಜಕೀಯ ಪರಿಸ್ಥಿತಿಯ ಹಿನ್ನೆಲೆಯಲ್ಲಿ, ಏಷ್ಯಾದ ಜವಾಬ್ದಾರಿಯುತ ಶಕ್ತಿಗಳು ಮತ್ತು ಪ್ರಮುಖ ಇಂಧನ ಬಳಕೆಯ ದೇಶಗಳಾಗಿ ಜಂಟಿಯಾಗಿ ಇಂಧನ ಚೇತರಿಕೆಯನ್ನು ಬಲಪಡಿಸಲು ಒಟ್ಟಾಗಿ ಕೆಲಸ ಮಾಡುವ ತಮ್ಮ ಜಂಟಿ ಸಂಕಲ್ಪದ ಆಶಯವನ್ನು ವ್ಯಕ್ತಪಡಿಸಿದರು.
ದಕ್ಷಿಣ ಏಷ್ಯಾದಲ್ಲಿ ಇಂಧನ ಭದ್ರತೆಗೆ ಭಾರತದ ಬೆಂಬಲ ಮತ್ತು ಜಪಾನ್ ನ ವಿಶಾಲ ಇಂಧನ ಮತ್ತು ಸಂಪನ್ಮೂಲಗಳ ಚೇತರಿಕೆ (OWERR Asia) ಯಂತಹ ಇಂಧನ ಚೇತರಿಕೆಯನ್ನು ಬಲಪಡಿಸುವ ಪ್ರಾದೇಶಿಕ ಉಪಕ್ರಮಗಳ ಮಹತ್ವವನ್ನು ಎರಡೂ ಕಡೆಯವರು ಒತ್ತಿಹೇಳಿದರು. ನಾಯಕರ ಚರ್ಚೆಗಳ ಆಧಾರದ ಮೇಲೆ, ಭಾರತ ಗಣರಾಜ್ಯದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಹಾಗೂ ಜಪಾನ್ ನ ಆರ್ಥಿಕತೆ, ವ್ಯಾಪಾರ ಮತ್ತು ಕೈಗಾರಿಕಾ ಸಚಿವಾಲಯವು ಈ ಕೆಳಗಿನ ನಿರ್ದಿಷ್ಟ ಉಪಕ್ರಮಗಳಲ್ಲಿ ಸಹಕರಿಸಲಿವೆ:
1. ಕಾರ್ಯತಂತ್ರದ ದಾಸ್ತಾನು ಪರಿಸರ ವ್ಯವಸ್ಥೆಯಲ್ಲಿ ಸಹಕಾರ
ಕಚ್ಚಾ ತೈಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ದಾಸ್ತಾನು ವ್ಯವಸ್ಥೆಗಳು ಹಾಗೂ ಮೀಸಲು ಕಾರ್ಯವಿಧಾನಗಳಿಗೆ ಸಂಬಂಧಿಸಿದಂತೆ ತಮ್ಮದೇ ಆದ ಜ್ಞಾನ ಮತ್ತು ಅನುಭವವನ್ನು ಹಂಚಿಕೊಳ್ಳುವ ಮತ್ತು ಸೂಕ್ತವಾದ ಕಡೆಗಳಲ್ಲಿ ನಿರ್ದಿಷ್ಟ ಸಹಕಾರವನ್ನು ಉತ್ತೇಜಿಸುವ ಮಹತ್ವವನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. ಸಹಕಾರವು ಇತರ ವಿಷಯಗಳ ಜೊತೆಗೆ ಈ ಕೆಳಗಿನ ಅಂಶಗಳ ಮೇಲೆ ಕೇಂದ್ರೀಕರಿಸುತ್ತದೆ:
• ಉದ್ಯಮದ ದಾಸ್ತಾನುಗಳು ಸೇರಿದಂತೆ ರಾಷ್ಟ್ರೀಯ ದಾಸ್ತಾನು ವ್ಯವಸ್ಥೆಗಳು ಮತ್ತು ಮೀಸಲುಗಳಿಗೆ ಸಂಬಂಧಿಸಿದ ಕಾರ್ಯವಿಧಾನಗಳು
• ತೈಲ ಉತ್ಪಾದಕ ದೇಶಗಳೊಂದಿಗಿನ ವ್ಯವಸ್ಥೆಗಳ ಕುರಿತು ಸಮನ್ವಯತೆ
• ತುರ್ತು ಸಂದರ್ಭದ ಪ್ರತಿಕ್ರಿಯೆ ಮತ್ತು ಮಾರುಕಟ್ಟೆ ಸ್ಥಿರೀಕರಣ
2. ಇಂಧನ ಬಳಕೆಯ ದೇಶಗಳ ಧ್ವನಿಯನ್ನು ಬಲಪಡಿಸುವುದು
ಪೂರೈಕೆಯ ಭರವಸೆ, ಚೇತರಿಕೆಯನ್ನು ಹೆಚ್ಚಿಸುವುದು ಮತ್ತು ಮಾರುಕಟ್ಟೆಯ ಏರಿಳಿತವನ್ನು ತಗ್ಗಿಸುವ ಕಾರ್ಯವಿಧಾನಗಳನ್ನು ರಚಿಸುವ ಮೂಲಕ ಇಂಧನ ಲಭ್ಯತೆ ಮತ್ತು ಕೈಗೆಟುಕುವ ದರದ ಹಂಚಿಕೆಯ ಸವಾಲುಗಳನ್ನು ಎದುರಿಸಲು ಸಹಕಾರದ ಮಹತ್ವವನ್ನು ಎರಡೂ ಕಡೆಯವರು ಪುನರುಚ್ಚರಿಸಿದರು, ತನ್ಮೂಲಕ ತೈಲ ಮತ್ತು ಅನಿಲ ಬಳಕೆ ಮಾಡುವ ದೇಶಗಳ ಧ್ವನಿಯನ್ನು ಬಲಪಡಿಸಲು ನಿರ್ಧರಿಸಿದರು. ಸಹಕಾರವು ಈ ಕೆಳಗಿನ ವಿಷಯಗಳ ಮೇಲೆ ಕೇಂದ್ರೀಕರಿಸುತ್ತದೆ:
• ಮಾರುಕಟ್ಟೆ ಪ್ರವೃತ್ತಿಗಳ ಕುರಿತು ಮಾಹಿತಿ ಹಂಚಿಕೆಯಲ್ಲಿ ಸಹಕಾರ ಮತ್ತು ಮಾರುಕಟ್ಟೆ ಸ್ಥಿರೀಕರಣಕ್ಕಾಗಿ ಜಂಟಿ ಪ್ರಯತ್ನಗಳು
• ಇತರ ದೇಶಗಳಿಂದ ಇಂಧನ ಪೂರೈಕೆಗಾಗಿ ಒಪ್ಪಂದಗಳ ಸಾಧ್ಯತೆಗಳನ್ನು ಅನ್ವೇಷಿಸುವುದು
• ಇತರ ದೇಶಗಳಲ್ಲಿನ ಪರಿಶೋಧನೆ ಮತ್ತು ಉತ್ಪಾದನೆ ವಲಯದಲ್ಲಿ ಹೂಡಿಕೆಗಳಿಗಾಗಿ ವಾಣಿಜ್ಯ ಒಪ್ಪಂದಗಳನ್ನು ಅನ್ವೇಷಿಸುವುದು.
3. ಇಂಧನ ಸಾರಿಗೆಯಲ್ಲಿ ಸಹಕಾರ
ಎರಡೂ ದೇಶಗಳ ಇಂಧನ ಭದ್ರತೆಯ ನಿರ್ಣಾಯಕ ಸ್ತಂಭವಾಗಿ ತೈಲ ಮತ್ತು ಅನಿಲದ ಚೇತರಿಕೆ, ಸ್ವಾವಲಂಬಿ ಮತ್ತು ಪರಿಣಾಮಕಾರಿ ಕಡಲ ಸಾರಿಗೆಯ ಮಹತ್ವವನ್ನು ಎರಡೂ ಕಡೆಯವರು ಪುನರುಚ್ಚರಿಸಿದರು. ಅಲ್ಲದೆ, ಕಡಲ ಇಂಧನ ಸಾರಿಗೆ ಮೌಲ್ಯ ಸರಪಳಿಯಾದ್ಯಂತ ಜಂಟಿ ಹೂಡಿಕೆಗಳು ಸೇರಿದಂತೆ ಸಹಯೋಗದ ಅವಕಾಶಗಳನ್ನು ಅನ್ವೇಷಿಸಲು ಉಭಯ ದೇಶದವರೂ ಸಮ್ಮತಿಸಿದರು.
4. ಸಾಂಸ್ಥಿಕ ಸಹಕಾರ
ತಾಂತ್ರಿಕ ಮತ್ತು ಆರ್ಥಿಕ ಸಹಕಾರ ಸೇರಿದಂತೆ ಇಂಧನ ವಲಯದಲ್ಲಿ ಸಮಗ್ರ ಸಹಕಾರವನ್ನು ಆಳಗೊಳಿಸಲು, ಕೆಳಗೆ ಪಟ್ಟಿ ಮಾಡಲಾದ ಸಂಸ್ಥೆಗಳು ಸೇರಿದಂತೆ ಸಂಬಂಧಿತ ಪಾಲುದಾರರ ನಡುವೆ ಸಾಂಸ್ಥಿಕ ಸಹಯೋಗವನ್ನು ಉತ್ತೇಜಿಸುವ ತಮ್ಮ ಉದ್ದೇಶವನ್ನು ಎರಡೂ ಕಡೆಯವರು ದೃಢಪಡಿಸಿದರು:
•ಭಾರತದ ಸಂಸ್ಥೆಗಳು: ಭಾರತೀಯ ರಾಷ್ಟ್ರೀಯ ತೈಲ ಕಂಪನಿಗಳು, ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ಸ್ ಲಿಮಿಟೆಡ್ (ಐಎಸ್ ಪಿ ಆರ್ ಎಲ್); ಮತ್ತು ಇತರ ಸಂಬಂಧಿತ ಪಾಲುದಾರರು
•ಜಪಾನಿನ ಸಂಸ್ಥೆಗಳು: ಜಪಾನ್ ಆರ್ಗನೈಸೇಶನ್ ಫಾರ್ ಮೆಟಲ್ಸ್ ಅಂಡ್ ಎನರ್ಜಿ ಸೆಕ್ಯುರಿಟಿ (ಜೆಒಜಿಎಂಇಸಿ) ; ಜಪಾನ್ ಬ್ಯಾಂಕ್ ಫಾರ್ ಇಂಟರ್ನ್ಯಾಷನಲ್ ಕೋಆಪರೇಷನ್ (ಜೆಬಿಐಸಿ); ಮತ್ತು ಇತರ ಸಂಬಂಧಿತ ಪಾಲುದಾರರು
5. ಸಂವಾದಕ್ಕಾಗಿ ವೇದಿಕೆ
ಈ ಹೇಳಿಕೆಯಲ್ಲಿ ಗುರುತಿಸಲಾದ ಆದ್ಯತೆಯ ಕ್ಷೇತ್ರಗಳಲ್ಲಿ ಸಹಕಾರವನ್ನು ಮುನ್ನಡೆಸುವ ಗುರಿಯೊಂದಿಗೆ, ಭಾರತ-ಜಪಾನ್ ಇಂಧನ ಸಂವಾದದ ಆಶ್ರಯದಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದ ಮೇಲಿನ ಭಾರತ-ಜಪಾನ್ ಜಂಟಿ ಕಾರ್ಯನಿರತ ಗುಂಪಿನ ಅಡಿಯಲ್ಲಿ ಚರ್ಚೆಗಳನ್ನು ನಡೆಸಲು ಎರಡೂ ಕಡೆಯವರು ನಿರ್ಧರಿಸಿದರು. ಈ ವೇದಿಕೆಯ ಮೂಲಕ, ಉಭಯ ದೇಶಗಳು ಇತ್ತೀಚಿನ ಆಧುನಿಕ ಜ್ಞಾನ ಮತ್ತು ಅನುಭವವನ್ನು ಹಂಚಿಕೊಳ್ಳಲಿವೆ ಮತ್ತು ಸಹಕಾರಕ್ಕಾಗಿ ಪರಸ್ಪರ ಪ್ರಯೋಜನಕಾರಿ ಅವಕಾಶಗಳನ್ನು ಅನ್ವೇಷಿಸಲಿವೆ.
*****