Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಮಾನ್ಯ ಪ್ರಧಾನಮಂತ್ರಿಗಳು ಮಾಡಿದ ಭಾಷಣದ ಪೂರ್ಣಪಾಠ.

ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಮಾನ್ಯ ಪ್ರಧಾನಮಂತ್ರಿಗಳು ಮಾಡಿದ ಭಾಷಣದ ಪೂರ್ಣಪಾಠ.


ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಮಿತಿಯ ಸರ್ವ ಸದಸ್ಯರ ಸಭೆಯಲ್ಲಿ ಪಾಲ್ಗೊಳ್ಳಲು ನನಗೆ ತುಂಬಾ ಸಂತೋಷವಾಗುತ್ತಿದೆ. ಈ ಸಂದರ್ಭದಲ್ಲಿ ನಾನು, ಇಲ್ಲಿ ನೆರೆದಿರುವ ನಿಮ್ಮೆಲ್ಲರನ್ನೂ ಈ ಸಭೆಗೆ ಸ್ವಾಗತಿಸುತ್ತಿದ್ದೇನೆ. ಈಗಾಗಲೇ ನಿನ್ನೆಯಿಂದ ಇಲ್ಲಿ ನಡೆದಿರುವ ಚರ್ಚೆಗಳು ಮತ್ತು ಇಂದು ನಡೆಯಲಿರುವ ವಿಚಾರ ವಿನಿಮಯಗಳು ದೇಶದ ಈಶಾನ್ಯ ಭಾಗದಲ್ಲಿ ಅಭಿವೃದ್ಧಿಗೆ ವೇಗವನ್ನು ಒದಗಿಸಲು ಸಹಾಯ ಮಾಡಲಿವೆ ಎನ್ನುವ ಭರವಸೆ ನನ್ನದಾಗಿದೆ.
 
ದೇಶದ ಈಶಾನ್ಯ ಭಾಗದ ಅಭಿವೃದ್ಧಿಗೆ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಮಿತಿಯು ಸಾಕಷ್ಟು ಸಹಾಯ ಒದಗಿಸಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತಿದೆ. ಈ ಭಾಗದಲ್ಲಿ ಹತ್ತುಹಲವು ಸಂಸ್ಥೆಗಳು ಮೈದಾಳಲು ಮತ್ತು ಮೂಲಸೌಲಭ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಈ ಸಮಿತಿಯು ಮಹತ್ವದ ಪಾತ್ರ ವಹಿಸಿದೆ. 
 
ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಮಿತಿಯನ್ನು 1972ರಲ್ಲಿ ಸ್ಥಾಪಿಸಲಾಯಿತು. ಅಲ್ಲಿಂದಲೂ ಈ ಸಮಿತಿಯು, ಈಶಾನ್ಯ ಭಾಗದ ಪ್ರಗತಿಗೆ ತನ್ನ ಕೊಡುಗೆ ನೀಡುತ್ತಲೇ ಇದೆ. ಆದರೆ, ಜನರ ನಿರೀಕ್ಷೆಗಳು/ಬಯಕೆಗಳು ಒಂದೇ ಸಮನೆ ಹೆಚ್ಚುತ್ತಲೇ ಇವೆ. ಈ ಹಿನ್ನೆಲೆಯಲ್ಲಿ, ತಾನು ತನ್ನ ಗುರಿಯನ್ನು ಎಷ್ಟರ ಮಟ್ಟಿಗೆ ಸಾಧಿಸಿದ್ದೇನೆ ಎನ್ನುವ ಬಗ್ಗೆ ಸಮಿತಿಯು ಆತ್ಮಾವಲೋಕನ ಮಾಡಿಕೊಳ್ಳುವುದೂ ಮುಖ್ಯ. ನಿಜ ಹೇಳಬೇಕೆಂದರೆ, ಈ ಸಮಿತಿಯನ್ನು ಮೇಲ್ದರ್ಜೆಗೇರಿಸಿ, ಪುನಾರೂಪಿಸಬೇಕಾದ ಜರೂರಿದೆ. ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಮಿತಿಯನ್ನು ಅಗತ್ಯ ಸಂಪನ್ಮೂಲಗಳು, ಜ್ಞಾನಧಾರೆಗಳು ಮತ್ತು ಕೌಶಲ್ಯಗಳೊಂದಿಗೆ ಸಂಪೂರ್ಣವಾಗಿ ಸುಸಜ್ಜಿತಗೊಳಿಸಿ, ಒಂದು ಪರಿಪೂರ್ಣ ಕೇಂದ್ರವನ್ನಾಗಿ ಬೆಳೆಸಬೇಕೆಂಬುದು ನಿಮ್ಮ ಇಷ್ಟವಾಗಿರಬಹುದು. ಇಂಥದೊಂದು ಸಂಪನ್ಮೂಲ ಕೇಂದ್ರವು ಈಶಾನ್ಯ ಭಾಗದ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳ ಸಮರ್ಪಕ ಅನುಷ್ಠಾನದ ಮೇಲೆ ನಿಗಾ ಇಡಬಹುದು; ಹಾಗೆಯೇ, ಈ ಭಾಗದಲ್ಲಿ ಸಂಶೋಧನೆ ಮತ್ತು ಆವಿಷ್ಕಾರಗಳನ್ನು ಉತ್ತೇಜಿಸಬಹುದು ಮತ್ತು ಈ ಭಾಗಕ್ಕೆ ಬೇಕಾದ ವ್ಯೂಹಾತ್ಮಕ ನೀತಿಯನ್ನು ಒದಗಿಸಬಹುದು. 
 
ಈ ಭಾಗಕ್ಕೆ ಬೇಕಾದ ಅಭಿವೃದ್ಧಿ ಯೋಜನೆಗಳನ್ನು ಇಲ್ಲಿನ ರಾಜ್ಯ ಸರಕಾರಗಳೂ ಕೇಂದ್ರ ಸರಕಾರದ ಹಲವು ಸಚಿವಾಲಯಗಳೂ ರೂಪಿಸುತ್ತವಷ್ಟೆ. ಹಾಗೆಯೇ, ಈ ಭಾಗದ ಸಮಸ್ಯೆಗಳಿಗೆ ಬೇಕಾದ ಪರಿಹಾರದತ್ತಲೂ ಅವು ಗಮನ ಹರಿಸುತ್ತವೆ, ನಿಜ. ಇದಕ್ಕೆಲ್ಲ ಒಂದು ಬಗೆಯ ಪರಿಣತಿ ಅತ್ಯಗತ್ಯವಾಗಿ ಬೇಕಾಗಿದೆ. ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಮಿತಿಯು ಸ್ವತಃ ತಾನೇ ಇಂಥದೊಂದು ಪರಿಣತಿಯನ್ನು ರೂಪಿಸಲು ಅಥವಾ ಯಾವುದಾದರೂ ಒಂದು ಸೂಕ್ತ ಸಂಸ್ಥೆಯ ಮೂಲಕ ಇದನ್ನು ಒದಗಿಸುವತ್ತ ದೃಷ್ಟಿ ಹರಿಸಬಹುದು. ಇದು ಸಾಧ್ಯವಾದರೆ, ಈ ಭಾಗದಲ್ಲಿ ಸುಗಮ/ಉತ್ತಮ ಆಡಳಿತ ಮತ್ತು ಅತ್ಯುತ್ತಮ ಕಾರ್ಯವಿಧಾನ ನಿಜವಾಗಲಿದೆ. ಇದಲ್ಲದೆ, ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಮಿತಿಯು, ಪ್ರವರ್ಧಮಾನಕ್ಕೆ ಬರುತ್ತಿರುವ ಜೀವನೋಪಾಯ, ಉದ್ಯಮಶೀಲತೆ, ವೆಂಚರ್ ನಿಧಿ, ನವೋದ್ಯಮಗಳು ಮತ್ತು ಕೌಶಲಾಭಿವೃದ್ಧಿಗಳತ್ತಲೂ ತನ್ನ ಗಮನ ಹರಿಸಬೇಕು. ಇವೆಲ್ಲವೂ ಉದ್ಯೋಗವನ್ನು ಸೃಷ್ಟಿಸಲು ನೆರವಾಗುತ್ತವೆ. 
 
ಕೇಂದ್ರ ಸರಕಾರವು ತನ್ನ `ಪೂರ್ವದೆಡೆಗೆ ಗಮನ ಹರಿಸಿ’ (ಆಕ್ಟ್ ಈಸ್ಟ್ ಪಾಲಿಸಿ) ನೀತಿಯಡಿ, ದೇಶದ ಈಶಾನ್ಯ ಭಾಗದ ಅಭಿವೃದ್ಧಿಯತ್ತ ಗಮನ ಹರಿಸಿದೆ. ಈ ನೀತಿಯ ಪ್ರಕಾರ, ರಸ್ತೆ, ರೈಲು, ದೂರಸಂಪರ್ಕ, ವಿದ್ಯುತ್ ಮತ್ತು ಜಲಸಾರಿಗೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸುವ ಮೂಲಕ ಈ ಭಾಗವು ದೇಶದ ಉಳಿದ ಭಾಗಗಳಿಗಿಂತ ಪ್ರತ್ಯೇಕವಾಗಿ ಉಳಿಯುವುದನ್ನು ಆದಷ್ಟೂ ಕಡಿಮೆ ಮಾಡಲು ನಾವು ಆದ್ಯತೆ ಕೊಟ್ಟಿದ್ದೇವೆ. 
 
ನಮ್ಮ ದೇಶದ ಪಶ್ಚಿಮ ಭಾಗವು ಚೆನ್ನಾಗಿ ಅಭಿವೃದ್ಧಿ ಹೊಂದಬಹುದಾದರೆ, ಹಾಗೆಯೇ ಉಳಿದ ಭಾಗಗಳು ಕೂಡ ಈ ನಿಟ್ಟಿನಲ್ಲಿ ಸಾಧನೆ ಮಾಡಬಹುದಾದರೆ, ಈಶಾನ್ಯ ಭಾಗವೂ ಇದನ್ನು ಮಾಡಿ ತೋರಿಸಬಹುದು. ಈ ಭಾಗವು ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲವೆನ್ನುವುದಕ್ಕೆ ನನಗಂತೂ ಯಾವ ಕಾರಣಗಳೂ ಕಾಣುತ್ತಿಲ್ಲ. ದೇಶದ ಈಶಾನ್ಯ ಭಾಗವೂ ಸೇರಿದಂತೆ ಎಲ್ಲ ಭಾಗಗಳೂ ಅಭಿವೃದ್ಧಿ ಹೊಂದಿದರೆ ಮಾತ್ರ ಭಾರತವು ಮುಂದಡಿ ಇಡಬಹುದು ಎನ್ನುವುದು ನನ್ನ ನಂಬಿಕೆಯಾಗಿದೆ. ದೇಶದ ರಕ್ಷಣೆಯ ದೃಷ್ಟಿಯಿಂದಲೂ ಈಶಾನ್ಯ ಭಾಗವು ನಮಗೆ ಅತ್ಯಂತ ಮುಖ್ಯವಾಗಿದೆ. ಹೀಗಾಗಿ, ದೇಶದಲ್ಲಿ ಅಭಿವೃದ್ಧಿ ಹೊಂದಿರುವ ಇನ್ನಿತರ ಭಾಗಗಳಂತೆಯೇ ಈ ಭಾಗವನ್ನು ಕೂಡ, ಅವುಗಳಿಗೆ ಸರಿಸಮನಾಗಿ ನಿಲ್ಲಿಸಬೇಕಾಗಿದೆ. 
 
ಈ ವರ್ಷದ ಆಯವ್ಯಯ ಪತ್ರದಲ್ಲಿ ಈಶಾನ್ಯ ಭಾಗಕ್ಕೆ 30,000 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಈ ಹಣವೆಲ್ಲವೂ ಈ ಭಾಗದ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗವಾಗುವಂತೆ ನೋಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯವಾಗಿದೆ. 
 
ನಾವು ಪರಸ್ಪರ ಸಹಕಾರದಿಂದಲೂ ಸ್ಪರ್ಧಾತ್ಮಕತೆಯಿಂದಲೂ ಕೂಡಿರುವ ಒಕ್ಕೂಟ ವ್ಯವಸ್ಥೆಯಲ್ಲಿ ನಂಬಿಕೆ ಇಟ್ಟುಕೊಂಡಿದ್ದೇವೆ. ಪ್ರಬಲವಾಗಿರುವ ಮತ್ತು ಮತ್ತಷ್ಟು ಬೆಳೆಯಲು ಉತ್ಸುಕವಾಗಿರುವ ರಾಜ್ಯಗಳಿಗೆ ನಾವಿಲ್ಲಿ ಅಗತ್ಯ ಅಧಿಕಾರ ಮತ್ತು ಸಂಪನ್ಮೂಲಗಳನ್ನು ಕೊಡಬೇಕಾಗಿದೆ. ಹಾಗೆಯೇ, ಅಷ್ಟೇನೂ ಪ್ರಬಲವಾಗಿಲ್ಲದ ರಾಜ್ಯಗಳಿಗೆ ಸಂಪೂರ್ಣ ನೆರವನ್ನು ಪೂರೈಸಬೇಕಾಗಿದೆ. ಹೀಗಾಗಿಯೇ, `ಮುಖ್ಯಮಂತ್ರಿಗಳ ಸಮಿತಿ’ಯ ವರದಿಯ ಅನುಸಾರ ಈಶಾನ್ಯ ಭಾಗದ ರಾಜ್ಯಗಳಿಗೆ ಕೇಂದ್ರ ಸರಕಾರ ಅಪಾರ ನೆರವು ನೀಡುತ್ತಿದೆ. ಅಂದರೆ, ಕೇಂದ್ರ ಸರಕಾರ ಮಹತ್ವದ ಯೋಜನೆಗಳಿಗೆ ನಾವು 90:10ರ ಅನುಪಾತದಲ್ಲೂ, ಉಳಿದ ಯೋಜನೆಗಳಿಗೆ 80:20ರ ಅನುಪಾತದಲ್ಲೂ ಸಹಕರಿಸುತ್ತಿದ್ದೇವೆ. 
 
ಇತ್ತೀಚೆಗೆ ನಾವು ಈ ಭಾಗದ ಅಸ್ಸಾಂನಲ್ಲಿ ಅತ್ಯಂತ ಮಹತ್ವದ ಎರಡು ಯೋಜನೆಗಳನ್ನು ಆರಂಭಿಸಿದ್ದೇವೆ. ಅವೆಂದರೆ- ಬ್ರಹ್ಮಪುತ್ರಾ ಕ್ರ್ಯಾಕರ್ ಅಂಡ್ ಪಾಲಿಮರ್ ಲಿಮಿಟೆಡ್ ಮತ್ತು ನುಮಾಲಿಘಡ ರಿಫೈನರಿ ಲಿಮಿಟೆಡ್ನಲ್ಲಿ ಮೇಣದ ಘಟಕಗಳ ಸ್ಥಾಪನೆ. ಇವೆರಡೂ ಅತ್ಯಂತ ಬೃಹತ್ ಯೋಜನೆಗಳಾಗಿದ್ದು, ಈಶಾನ್ಯ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಉದ್ಯೋಗಗಳನ್ನು ಸೃಷ್ಟಿಸಲಿವೆ. ಇದೇನೇ ಇದ್ದರೂ, ಈ ಯೋಜನೆಗಳನ್ನು ಸಾಕಾರಗೊಳಿಸಲು ನಾವು ಸಿಕ್ಕಾಬಟ್ಟೆ ಸಮಯ ತೆಗೆದುಕೊಂಡಿದ್ದೇವೆ. ಇಂಥ ಪ್ರವೃತ್ತಿ ತಪ್ಪಬೇಕು. ಯಾವುದೇ ಯೋಜನೆಯನ್ನೇ ಆಗಲಿ, ನಾವು ಕಾಲಮಿತಿಯೊಳಗೆ ಮತ್ತು ನಿಗದಿಪಡಿಸಿದ ಮೊತ್ತದೊಳಗೆ ಮುಗಿಸುತ್ತೇವೆ ಎನ್ನುವ ಖಾತ್ರಿಯನ್ನು ಕೊಡಬೇಕಾದ್ದು ಮುಖ್ಯ. ಹೀಗಾದಾಗ ಮಾತ್ರ, ನಾವು ಇಂಥ ಯೋಜನೆಗಳ ನಿಜವಾದ ಲಾಭ ಪಡೆಯಬಹುದು. 
 
ದೇಶದ ಈಶಾನ್ಯ ಭಾಗವು ಆಗ್ನೇಯ ಏಷ್ಯಾ ರಾಷ್ಟ್ರಗಳಿಗೆ ಹೋಗಲು ಹೆಬ್ಬಾಗಿಲಾಗಿದ್ದು, ನಾವು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಇದನ್ನು ಗಮನಿಸಿಯೇ ನಾವು, ನಮ್ಮ ಅಕ್ಕಪಕ್ಕದ ದೇಶಗಳಿಗೆ ರಸ್ತೆ ಮತ್ತು ರೈಲು ಮಾರ್ಗಗಳನ್ನು ಮುಕ್ತಗೊಳಿಸುತ್ತಿದ್ದೇವೆ. ಇದು, ಈ ಭಾಗದ ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ಬಲ ತುಂಬಲಿದೆ.
 
ಈಶಾನ್ಯ ಭಾಗದ ರಾಜ್ಯಗಳ ಅನುಕೂಲಕ್ಕೆಂದೇ ನಾವು `ರಾಷ್ಟ್ರೀಯ ಹೆದ್ದಾರಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮ’ವನ್ನು ಸ್ಥಾಪಿಸಿದ್ದೇವೆ. ಹೆದ್ದಾರಿಗಳ ನಿರ್ಮಾಣದಲ್ಲಿ ಪರಿಣತಿ ಹೊಂದಿರುವ ಈ ನಿಗಮವನ್ನು ನಾವು, 2014ರ ಜುಲೈ 18ರಂದು ಅಸ್ತಿತ್ವಕ್ಕೆ ತಂದೆವು. ಇದು, ಈಶಾನ್ಯ ಭಾಗದ ಎಲ್ಲ ರಾಜ್ಯಗಳಲ್ಲೂ ತನ್ನ ಒಂದೊಂದು ಶಾಖೆಗಳನ್ನು ಹೊಂದಿದ್ದು, ಇಲ್ಲಿಯವರೆಗೂ 34 ಯೋಜನೆಗಳನ್ನು ಕೈಗೆತ್ತಿಕೊಂಡಿದೆ. ಒಟ್ಟಾರೆಯಾಗಿ, ಈ ಯೋಜನೆಗಳ ಮೂಲಕ 10,000 ಕೋಟಿ ರೂಪಾಯಿ ವೆಚ್ಚದಲ್ಲಿ 1,001 ಕಿಲೋಮೀಟರ್ ಉದ್ದದಷ್ಟು ಹೆದ್ದಾರಿಯನ್ನು ಈ ನಿಗಮವು ನಿರ್ಮಿಸುತ್ತಿದೆ. 
 
ರಸ್ತೆಗಳ ವಿಷಯಕ್ಕೆ ಬಂದರೆ, ನಾವು ಈಶಾನ್ಯ ಭಾಗದಲ್ಲಿ ರಸ್ತೆಗಳನ್ನು ನಿರ್ಮಿಸುವಾಗ ಇಲ್ಲಿಯ ಭೂರಚನೆಗಿರುವ ವಿಶಿಷ್ಟ ಗುಣ ಮತ್ತು ಹವಾಮಾನವನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಏಕೆಂದರೆ, ಈಶಾನ್ಯ ಭಾಗದ ಹೆಚ್ಚಿನ ರಾಜ್ಯಗಳಲ್ಲಿ ಮಳೆಯ ಪ್ರಮಾಣ ಜಾಸ್ತಿ. ಜೊತೆಗೆ, ಈ ಭಾಗದಲ್ಲಿ ಪದೇಪದೇ ಭೂಕುಸಿತ ಸಂಭವಿಸುತ್ತಿರುತ್ತದೆ. ಹೀಗಾಗಿ, ರಸ್ತೆ ನಿರ್ಮಿಸುವಾಗ ನಾವು ಸೂಕ್ತ ತಂತ್ರಜ್ಞಾನವನ್ನು ಬಳಸಬೇಕು.
 
ಇತ್ತೀಚೆಗೆ ನಾವು, ಬಾಂಗ್ಲಾದೇಶದ ಜತೆಗೂಡಿ ಈಶಾನ್ಯ ರಾಜ್ಯಗಳಿಗೆ ಅನುಕೂಲವಾಗುವ `ಸುಧಾರಿತ ಅಂತರ್ಜಾಲ ಸಂಪರ್ಕ ಯೋಜನೆ’ಯನ್ನು ಜಾರಿಗೆ ತಂದಿದ್ದೇವೆ. ಇದರಿಂದಾಗಿ ಈ ಭಾಗಕ್ಕೆ 10 ಗಿಗಾಬೈಟ್ನಷ್ಟು ಅಂತರ್ಜಾಲ ಲಭ್ಯವಾಗಲಿದೆ. ಈ ರೀತಿಯ ಕ್ರಮಗಳು ಈಶಾನ್ಯ ಭಾಗಕ್ಕೆ ಅಪಾರ ಲಾಭ ತಂದುಕೊಡಲಿವೆ.
 
ಹಾಗೆಯೇ, ಈಶಾನ್ಯ ಭಾಗದ ಎಂಟೂ ರಾಜ್ಯಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವ ಗುರಿಯುಳ್ಳ ಯೋಜನೆಯನ್ನು 10,000 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದರಿಂದಾಗಿ, ಈ ಭಾಗದ ಹೆಚ್ಚುಹೆಚ್ಚು ಪ್ರದೇಶಗಳಿಗೆ ವಿದ್ಯುತ್ ಪೂರೈಕೆ ಸಾಧ್ಯವಾಗಲಿದೆ. ಇತ್ತೀಚೆಗೆ ಉದ್ಘಾಟಿಸಲಾದ ವಿಶ್ವನಾಥ್-ಚರಿಯಾಲಿ-ಆಗ್ರಾ ಮಾರ್ಗದ ವಿದ್ಯುತ್ ಪೂರೈಕೆ ಯೋಜನೆಯಿಂದ, ಈಶಾನ್ಯ ಭಾಗಕ್ಕೆ ಹೆಚ್ಚುವರಿಯಾಗಿ 500 ಮೆಗಾವ್ಯಾಟ್ ವಿದ್ಯುತ್ ಸಿಗುತ್ತಿದೆ. 
 
ರೈಲ್ವೆ ಇಲಾಖೆಯೂ ಇತ್ತ ಗಮನ ಹರಿಸಿದ್ದು, 10,000 ಕೋಟಿ ರೂಪಾಯಿ ವೆಚ್ಚದಲ್ಲಿ ರೈಲ್ವೆ ಸೌಲಭ್ಯಗಳ ಬೃಹತ್ ವಿಸ್ತರಣೆಯನ್ನು ಕೈಗೆತ್ತಿಕೊಂಡಿದೆ. ಇಷ್ಟೇ ಅಲ್ಲ, ಇಂಥ ಪ್ರಯತ್ನಗಳಿಂದಾಗಿ ಈ ಭಾಗದ ಅರುಣಾಚಲ ಪ್ರದೇಶ ಮತ್ತು ಮೇಘಾಲಯ ರಾಜ್ಯಗಳು 2014ರ ನವೆಂಬರ್ನಲ್ಲಿ ದೇಶದ ರೈಲ್ವೆ ನಕಾಶೆಯೊಳಗೆ ಕಾಣಿಸಿಕೊಂಡವು. ತ್ರಿಪುರಾದ ರಾಜಧಾನಿ ಅಗರ್ತಲಾಕ್ಕೂ ಬ್ರಾಡ್ಗೇಜ್ ರೈಲು ಸಂಪರ್ಕ ಕಲ್ಪಿಸಲಾಗಿದೆ. ಈಶಾನ್ಯ ಭಾಗದ ಎಲ್ಲ ರಾಜ್ಯಗಳೂ ಸದ್ಯದಲ್ಲೇ ರೈಲ್ವೆ ಸೌಲಭ್ಯ ಹೊಂದಲಿವೆ. 
 
ಭಾರತೀಯ ರೈಲ್ವೆಯು ಕಳೆದ ಎರಡು ವರ್ಷಗಳಲ್ಲಿ ಈ ಭಾಗದಲ್ಲಿ 900 ಕಿಲೋಮೀಟರ್ ಉದ್ದದ ಹಳಿಯನ್ನು ಬ್ರಾಡ್ಗೇಜ್ ಮಾರ್ಗವಾಗಿ ಪರಿವರ್ತಿಸಿದೆ. ಇದರ ಪರಿಣಾಮವಾಗಿ, 2016-17ರ ಹೊತ್ತಿಗೆ ಈ ಭಾಗದಲ್ಲಿ ಕೇವಲ 50 ಕಿಲೋಮೀಟರ್ ಉದ್ದದ ಮೀಟರ್ಗೇಜ್ ಮಾರ್ಗದ ಪರಿವರ್ತನೆ ಕೆಲಸ ಮಾತ್ರ ಬಾಕಿ ಉಳಿದುಕೊಂಡಿದೆಯಷ್ಟೆ. ಇದರ ಜತೆಗೆ, ಈಶಾನ್ಯ ಭಾಗಕ್ಕೆ ರೈಲು ಸಂಪರ್ಕ ಕಲ್ಪಿಸುವ ಮೂರನೇ ಪರ್ಯಾಯ ಮಾರ್ಗವನ್ನು ನಾವು ಅಭಿವೃದ್ಧಿ ಪಡಿಸಿದ್ದೇವೆ. ಹೊಸ ಮೈನಾಗುರಿ-ಜೋಗಿಗ್ಹೋಪ ನಡುವಿನ ಈ ಮಾರ್ಗವು ಒಟ್ಟು 132 ಕಿಲೋಮೀಟರ್ ಉದ್ದವಿದೆ. 
 
ಈಶಾನ್ಯ ಭಾಗದ ರಾಜ್ಯಗಳು ಅನೇಕ ಶಕ್ತಿಗಳನ್ನೂ ಹೊಂದಿದ್ದು, ಈ ಭಾಗದ ಆರೋಗ್ಯಕರ ಬೆಳವಣಿಗೆಗೆ ನಾವು ಇವನ್ನೆಲ್ಲ ಸಮರ್ಪಕವಾಗಿ ಬಳಸಿಕೊಳ್ಳಬೇಕಾಗಿದೆ. ಈಶಾನ್ಯ ಭಾಗವು ನೈಸರ್ಗಿಕ ಚೆಲುವು, ವಿಶಿಷ್ಟವಾದ ಚಾರಿತ್ರಿಕ ಸಾಂಸ್ಕೃತಿಕ ಸಂಪತ್ತು ಮತ್ತು ಸ್ಥಳೀಯ ಪರಂಪರೆಯಿಂದ ಸಂಪದ್ಭರಿತವಾಗಿದೆ. ಇವೆಲ್ಲವೂ ಈ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಸಮೃದ್ಧ ಅವಕಾಶ ನೀಡಿವೆ. ಅಲ್ಲದೆ, ಪರ್ವತಾರೋಹಣ, ಟ್ರೆಕ್ಕಿಂಗ್ ಮತ್ತು ಸಾಹಸಕ್ರೀಡೆಗಳಿಗೂ ಈ ಭಾಗ ಹೇಳಿಮಾಡಿಸಿದಂತಿದೆ. ಇದನ್ನು ನಾವು ಸರಿಯಾಗಿ ಅಭಿವೃದ್ಧಿಪಡಿಸಿ, ವ್ಯವಸ್ಥಿತವಾಗಿ ಪ್ರೋತ್ಸಾಹಿಸಿದ್ದೇ ಆದರೆ, ಪ್ರವಾಸೋದ್ಯಮವು ಈ ಭಾಗದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಅತ್ಯಂತ ದೊಡ್ಡ ಕ್ಷೇತ್ರವಾಗಲಿದೆ. ಅಲ್ಲದೆ, ಇದು ಈ ಭಾಗದ ಬೆಳವಣಿಗೆ ಮತ್ತು ಆದಾಯಕ್ಕೂ ತನ್ನ ಕೊಡುಗೆ ನೀಡಬಹುದು. 
 
ಪ್ರವಾಸೋದ್ಯಮ ಸಚಿವಾಲಯವು ಈಶಾನ್ಯ ಭಾಗದ ರಾಜ್ಯಗಳಲ್ಲಿ ಒಂದು `ಆಶಯ/ವಿಷಯಾಧಾರಿತ ಪ್ರವಾಸ’ವೆನ್ನುವ ಪರಿಕಲ್ಪನೆಯನ್ನು ಜಾರಿಗೆ ತರಲು ತೀರ್ಮಾನಿಸಿದೆ ಎನ್ನುವುದನ್ನು ನಾನು ಬಲ್ಲೆ. ಈ ಭಾಗದ ರಾಜ್ಯಗಳು ಈ ಯೋಜನೆಯ ಗರಿಷ್ಠ ಪ್ರಯೋಜನ ಪಡೆದುಕೊಂಡು, ಪ್ರಪಂಚದ ಎಲ್ಲೆಡೆಯ ಪ್ರವಾಸಿಗರನ್ನು ತಮ್ಮತ್ತ ಸೆಳೆಯುತ್ತವೆ ಎನ್ನುವುದು ನನ್ನ ನಂಬಿಕೆಯಾಗಿದೆ. ಇಷ್ಟೇ ಅಲ್ಲ, ಈ ರಾಜ್ಯಗಳು ಇಂಥ ವಿಶಿಷ್ಟ ಪರಿಕಲ್ಪನೆಯ ಪ್ರವಾಸದಲ್ಲಿ, ನೆರೆಹೊರೆಯ ದೇಶಗಳ ಒಂದೆರಡು ತಾಣಗಳನ್ನೂ ಸೇರಿಸಿಕೊಳ್ಳುವ ಕುರಿತು ಆಲೋಚಿಸಬಹುದು. ಇದರಿಂದಾಗಿ, ಪ್ರವಾಸಿಗರ ಪಾಲಿಗೆ ಇಂಥ ಪ್ರವಾಸ ಹೆಚ್ಚು ಆಕರ್ಷಣೀಯವಾಗುತ್ತದೆ. 
 
ಈಶಾನ್ಯ ಭಾಗದ ಹೆಚ್ಚಿನ ಯುವಜನರು ಇಂಗ್ಲಿಷ್ ಮಾತನಾಡುವವರಾಗಿದ್ದಾರೆ. ಹೀಗಾಗಿ, ಸುಧಾರಿತ ಸಂಪರ್ಕ ತಂತ್ರಜ್ಞಾನ ಮತ್ತು ತಮಗಿರುವ ಭಾಷಿಕ ಕೌಶಲವನ್ನು ಬಳಸಿಕೊಂಡು, ಇವರೆಲ್ಲ ಈ ಭಾಗದಲ್ಲಿ ಬಿ.ಪಿ.ಓ. ಉದ್ದಿಮೆಗಳನ್ನು ಹುಟ್ಟುಹಾಕುವ ಬಗ್ಗೆ ಯೋಚಿಸಬಹುದು. 
 
ಈ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ಉದ್ಯೋಗಸೃಷ್ಟಿ ಸಾಧ್ಯವಾಗಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರಕಾರವು `ಡಿಜಿಟಲ್ ಇಂಡಿಯಾ’ ಯೋಜನೆಯಡಿ, ಈಶಾನ್ಯ ರಾಜ್ಯಗಳಿಗೆಂದೇ ಪ್ರತ್ಯೇಕ `ಬಿಪಿಓ ಉತ್ತೇಜನಾ ಯೋಜನೆ’ಯನ್ನು ಅನುಮೋದಿಸಿದೆ. ಈಶಾನ್ಯದ ರಾಜ್ಯಗಳು ಇದರ ಸೌಲಭ್ಯವನ್ನು ಪಡೆದುಕೊಂಡು, ತಮ್ಮತಮ್ಮ ರಾಜ್ಯಗಳಲ್ಲಿ ಬಿಪಿಓಗಳು ಕಾರ್ಯಾರಂಭ ಮಾಡುವಂತೆ ನೋಡಿಕೊಳ್ಳಬೇಕು. ಇದು, ಈ ಭಾಗದ ಬೆಳವಣಿಗೆಗೆ ಪ್ರೇರಣೆ ನೀಡುವುದಲ್ಲದೆ, ಯುವಜನರಿಗೆ ಉದ್ಯೋಗಗಳನ್ನೂ ನೀಡುತ್ತದೆ. 
 
ಈಶಾನ್ಯದ ರಾಜ್ಯಗಳು ಅತ್ಯಂತ ವಿಶಿಷ್ಟವಾದ ಹೂವುಗಳು, ಹಣ್ಣುಗಳು, ತರಕಾರಿಗಳು, ಸುವಾಸಿತ ಗಿಡಗಳು ಮತ್ತು ಮೂಲಿಕೆಗಳ ಆಡುಂಬೊಲವಾಗಿದೆ. ಇವುಗಳಲ್ಲಿ ಹೆಚ್ಚಿನವು ಮೂಲತಃ ಸಾವಯವ ವರ್ಗಕ್ಕೆ ಸೇರಿವೆ. ಹೀಗಾಗಿ, ನಾವು ಸಾವಯವ ಕೃಷಿಯನ್ನು ಅಭಿವೃದ್ಧಿ ಪಡಿಸುವತ್ತ ಗಮನ ಹರಿಸಿ, ಸೂಕ್ತ ಕಾರ್ಯಕ್ರಮ ರೂಪಿಸಿದರೆ, ಅದರಿಂದ ದೇಶದ ಈಶಾನ್ಯ ಭಾಗಕ್ಕೆ ಅಪಾರ ಪ್ರಯೋಜನವಾಗಲಿದೆ.
 
ಕೆಲ ತಿಂಗಳ ಹಿಂದೆ ನಾನು, ಸಿಕ್ಕಿಂ ರಾಜ್ಯವನ್ನು `ದೇಶದ ಮೊಟ್ಟಮೊದಲ ಸಾವಯವ ಕೃಷಿ ರಾಜ್ಯ’ ಎಂದು ಘೋಷಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆ. ಉಳಿದ ರಾಜ್ಯಗಳೂ ಈ ವಿಚಾರದಲ್ಲಿ ಸಿಕ್ಕಿಂನಿಂದ ಪ್ರೇರಣೆ ಪಡೆಯಬಹುದು. ಅಲ್ಲದೆ, `ಈಶಾನ್ಯ ರಾಜ್ಯಗಳ ಸಮಿತಿ’ಯು ಈ ಭಾಗದಲ್ಲಿ ಸಾವಯವ ಕೃಷಿಯನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು. ಹೀಗಾದರೆ, ಈಶಾನ್ಯದ ರಾಜ್ಯಗಳು ಇಡೀ ದೇಶದ ಪಾಲಿಗೆ `ಸಾವಯವ ಕೃಷಿ ಕಣಜ’ವಾಗಿ ಬೆಳೆಯಬಹುದು. ಏಕೆಂದರೆ, ದಿನದಿಂದ ದಿನಕ್ಕೆ ಎಲ್ಲೆಡೆಯೂ ಸಾವಯವ ಪದಾರ್ಥಗಳ ಬಳಕೆ ಹೆಚ್ಚಾಗುತ್ತಿದೆ. ಹೀಗಾಗಿ, ಸಾವಯವ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ `ಈಶಾನ್ಯ ರಾಜ್ಯಗಳ ಸಮಿತಿ’ಯು ಈ ಭಾಗದ ರಾಜ್ಯಗಳಿಗೆ ನೆರವು ನೀಡಿದರೆ, ಅದರಿಂದ ಇಲ್ಲಿನ ಜನರ ಮತ್ತು ಈ ಭಾಗದ ಆದಾಯ ಹೆಚ್ಚಳಕ್ಕೆ ಅದರಿಂದ ಭಾರೀ ಸಹಾಯ ಸಿಗಲಿದೆ. 
 
ಈಶಾನ್ಯ ರಾಜ್ಯಗಳಲ್ಲಿ ಬಹುಪಾಲು ಜನರು ಗ್ರಾಮೀಣ ವಾಸಿಗಳಾಗಿದ್ದಾರೆ. ಉದಾಹರಣೆಗೆ, ಅಸ್ಸಾಂ ರಾಜ್ಯವನ್ನೇ ನೋಡಿದರೆ, ಅಲ್ಲಿನ ಶೇಕಡ 86ರಷ್ಟು ಜನರು ಹಳ್ಳಿಗಳಲ್ಲಿದ್ದಾರೆ. ಇದನ್ನು ಗಮನಿಸಿಯೇ ನಾವು, ಸಾಮುದಾಯಿಕ ಮಾದರಿಯಲ್ಲಿ ಹಳ್ಳಿಗಳನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ತಳ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲೆಂದು `ಶಾಮ್ಪ್ರಸಾದ್ ಮುಖರ್ಜಿ ಮಿಷನ್’ ಅನ್ನು ಜಾರಿಗೆ ತಂದಿದ್ದೇವೆ. ಈ ಭಾಗದ ಹಳ್ಳಿಗಳನ್ನು ಅಭಿವೃದ್ಧಿಪಡಿಸಲು ಈಶಾನ್ಯ ರಾಜ್ಯಗಳು ಈ ಯೋಜನೆಯ ಪ್ರಯೋಜನವನ್ನು ಸರಿಯಾದ ರೀತಿಯಲ್ಲಿ ಪಡೆದುಕೊಳ್ಳಬೇಕಾಗಿದೆ.
 
ಕೊನೆಯದಾಗಿ, ಶಿಲಾಂಗ್ನಲ್ಲಿ ನಡೆದ ಈ ಸರ್ವ ಸದಸ್ಯರ ಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ ಈಶಾನ್ಯ ರಾಜ್ಯಗಳ ಸಮಿತಿಯ ಅಧ್ಯಕ್ಷರಿಗೂ ಸದಸ್ಯರಿಗೂ ಕೃತಜ್ಞತೆಗಳನ್ನು ಹೇಳಬಯಸುತ್ತೇನೆ.
 
ಈ ಸಭೆಯನ್ನು ಇಲ್ಲಿ ಏರ್ಪಾಡು ಮಾಡಿದ ಮೇಘಾಲಯದ ರಾಜ್ಯಪಾಲರಿಗೂ ಮುಖ್ಯಮಂತ್ರಿಗಳಿಗೂ ನನ್ನ ವಿಶೇಷ ಧನ್ಯವಾದಗಳು. ಈ ಸಭೆಯಲ್ಲಿ ನಡೆದ ವಿಚಾರ ವಿನಿಮಯಗಳು ಈ ಭಾಗದ ಅಭಿವೃದ್ಧಿಗೆ ದೀರ್ಘಕಾಲದಲ್ಲಿ ಸರಿಯಾದ ದಿಕ್ಕನ್ನು ತೋರಿಸುತ್ತವೆ ಎನ್ನುವ ಖಾತ್ರಿ ನನ್ನದಾಗಿದೆ. ಧನ್ಯವಾದಗಳು.