Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಉತ್ತರ ಪ್ರದೇಶದ ಹರ್ದೋಯಿಯಲ್ಲಿ 594 ಕಿ.ಮೀ ಉದ್ದದ ಪ್ರವೇಶ-ನಿಯಂತ್ರಿತ ಗ್ರೀನ್‌ಫೀಲ್ಡ್ ಗಂಗಾ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ

ಉತ್ತರ ಪ್ರದೇಶದ ಹರ್ದೋಯಿಯಲ್ಲಿ 594 ಕಿ.ಮೀ ಉದ್ದದ ಪ್ರವೇಶ-ನಿಯಂತ್ರಿತ ಗ್ರೀನ್‌ಫೀಲ್ಡ್ ಗಂಗಾ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ


ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಉತ್ತರ ಪ್ರದೇಶದ ಹರ್ದೋಯಿಯಲ್ಲಿ 594 ಕಿ.ಮೀ ಉದ್ದದ ಪ್ರವೇಶ-ನಿಯಂತ್ರಿತ ಗ್ರೀನ್‌ಫೀಲ್ಡ್ ಗಂಗಾ ಎಕ್ಸ್‌ಪ್ರೆಸ್‌ವೇಯನ್ನು ಉದ್ಘಾಟಿಸಿದರು. ಭಗವಾನ್ ನರಸಿಂಹನ ಪವಿತ್ರ ಭೂಮಿ ಮತ್ತು ಕೇವಲ ಕಿಲೋಮೀಟರ್‌ಗಳಷ್ಟು ದೂರದಲ್ಲಿ ಹರಿಯುವ ಮಾತೆ ಗಂಗೆಯ ದೈವಿಕ ಉಪಸ್ಥಿತಿಯನ್ನು ಸ್ತುತಿಸುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದ ಪ್ರಧಾನಮಂತ್ರಿ, ಇಡೀ ಪ್ರದೇಶವು ನದಿಯ ಆಧ್ಯಾತ್ಮಿಕ ಮತ್ತು ಪೋಷಿಸುವ ಅನುಗ್ರಹದಿಂದ ಆಶೀರ್ವದಿಸಲ್ಪಟ್ಟ ಯಾತ್ರಾ ಸ್ಥಳವಾಗಿದೆ ಎಂದು ಒತ್ತಿ ಹೇಳಿದರು. “ಉತ್ತರ ಪ್ರದೇಶಕ್ಕೆ ಎಕ್ಸ್‌ಪ್ರೆಸ್‌ವೇಗಳ ವರವು ಮಾತೆ ಗಂಗೆಯ ಆಶೀರ್ವಾದವೂ ಆಗಿದೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು, ಎಕ್ಸ್‌ಪ್ರೆಸ್‌ವೇ ಕೆಲವೇ ಗಂಟೆಗಳಲ್ಲಿ ಪವಿತ್ರ ಸ್ಥಳಗಳಿಗೆ ಪ್ರಯಾಣವನ್ನು ಹೇಗೆ ಪರಿವರ್ತಿಸುತ್ತದೆ ಎಂಬುದನ್ನು ಉಲ್ಲೇಖಿಸಿದರು.

ಗಂಗಾ ಮಾತೆಯ ಅಭೂತಪೂರ್ವ ಮಹತ್ವ ಮತ್ತು ಆಧುನಿಕ ಮೂಲಸೌಕರ್ಯದ ನಡುವೆ ಸಮಾನಾಂತರವನ್ನು ಚಿತ್ರಿಸುತ್ತಾ, ರಾಜ್ಯದ ಅಭಿವೃದ್ಧಿ ಪ್ರಯಾಣದಲ್ಲಿ ಎಕ್ಸ್‌ಪ್ರೆಸ್‌ವೇಯ ಪರಿವರ್ತನಾತ್ಮಕ ಪಾತ್ರವನ್ನು ಪ್ರಧಾನಮಂತ್ರಿ ಒತ್ತಿ ಹೇಳಿದರು. ಈ ಹೊಸದಾಗಿ ನಿರ್ಮಿಸಲಾದ ಹೆದ್ದಾರಿಗಳು ಅಭಿವೃದ್ಧಿ ಹೊಂದುತ್ತಿರುವ ಭಾರತದ ಜೀವನಾಡಿಗಳನ್ನು ಪ್ರತಿನಿಧಿಸುತ್ತವೆ ಎಂದು ಹೇಳಿದ ಶ್ರೀ ಮೋದಿ, “ಈ ಆಧುನಿಕ ಜೀವನಾಡಿಗಳು ಇಂದು ಭಾರತದ ಉಜ್ವಲ ಭವಿಷ್ಯವನ್ನು ಘೋಷಿಸುತ್ತಿವೆ” ಎಂದೂ ಹೇಳಿದರು.

ತಮ್ಮ ಇತ್ತೀಚಿನ ಆಧ್ಯಾತ್ಮಿಕ ಕಾರ್ಯಗಳ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿ, ಹಿಂದಿನ ದಿನಗಳಲ್ಲಿ ಏಪ್ರಿಲ್ 24 ರಂದು ಬಂಗಾಳದಿಂದ ಕಾಶಿಯವರೆಗೆ ಮತ್ತು ಇಂದು ಬೆಳಿಗ್ಗೆ ಮತ್ತೆ ಮಾತೆ ಗಂಗೆ ಬಳಿ ತಮ್ಮ ಉಪಸ್ಥಿತಿಯು ನಂಬಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿಯ ಗಮನಾರ್ಹ ಸಂಗಮವನ್ನು ರೂಪಿಸಿದೆ ಎಂದು ಗಮನಿಸಿದರು. ಎಕ್ಸ್‌ಪ್ರೆಸ್‌ವೇಗೆ ಗಂಗಾ ಮಾತೆಯ ಹೆಸರಿಡುವ ರಾಜ್ಯ ಸರ್ಕಾರದ ನಿರ್ಧಾರದ ಬಗ್ಗೆ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ ಶ್ರೀ ಮೋದಿ, “ಇದು ನಮ್ಮ ಅಭಿವೃದ್ಧಿಯ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಮತ್ತು ನಮ್ಮ ಪರಂಪರೆಯ ನೋಟವನ್ನು ನೀಡುತ್ತದೆ” ಎಂದು ಹೇಳಿದರು.

ಸರ್ಕಾರದ ಮೂಲಸೌಕರ್ಯ ನಿರ್ಮಾಣದ ವೇಗವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ದೇಶದ ಅತಿ ಉದ್ದದ ಹಸಿರು ಕಾರಿಡಾರ್ ಎಕ್ಸ್‌ಪ್ರೆಸ್‌ವೇ ಆಗಿರುವ ಗಂಗಾ ಎಕ್ಸ್‌ಪ್ರೆಸ್‌ವೇಯನ್ನು ಐದು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿರುವುದನ್ನು ಗಮನಿಸಿದರು. ತ್ವರಿತ ಆಧುನೀಕರಣದ ದೃಷ್ಟಿಕೋನವನ್ನು ಪ್ರತಿಪಾದಿಸುತ್ತಾ ಅವರು, “ಇದು ಪ್ರಸ್ತುತ ಸರ್ಕಾರದ ಕೆಲಸದ ವೇಗ! ಇದು ಪ್ರಸ್ತುತ ಸರ್ಕಾರ ಕೆಲಸ ಮಾಡುವ ರೀತಿ!” ಎಂದು ಹೇಳಿದರು.

ಎಕ್ಸ್‌ಪ್ರೆಸ್‌ವೇಯ ಕಾರ್ಯತಂತ್ರದ ಮಹತ್ವವನ್ನು ವಿವರಿಸುತ್ತಾ, ಪ್ರಧಾನಮಂತ್ರಿಯವರು ಪಶ್ಚಿಮ ಯುಪಿಯ ವಾಣಿಜ್ಯ ಕೇಂದ್ರಗಳನ್ನು ಮಧ್ಯ ಯುಪಿಯ ಕೃಷಿ ಕೇಂದ್ರದ ಮೂಲಕ ಪೂರ್ವ ಯುಪಿಯ ಸಾಂಸ್ಕೃತಿಕ ತಾಣಗಳಿಗೆ ಸಂಪರ್ಕಿಸುವ 600 ಕಿಲೋಮೀಟರ್ ವ್ಯಾಪ್ತಿಯ ಬಗ್ಗೆ ವಿವರಿಸಿದರು, ಇದು ಹನ್ನೆರಡು ಜಿಲ್ಲೆಗಳಾದ್ಯಂತ ಕೋಟ್ಯಂತರ ನಾಗರಿಕರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. “ಗಂಗಾ ಎಕ್ಸ್‌ಪ್ರೆಸ್‌ವೇ ಕೇವಲ ಅತಿ ವೇಗದ ರಸ್ತೆಯಲ್ಲ. ಇದು ಹೊಸ ಸಾಧ್ಯತೆಗಳು, ಹೊಸ ಕನಸುಗಳು ಮತ್ತು ಹೊಸ ಅವಕಾಶಗಳಿಗೆ ದ್ವಾರವಾಗಿದೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಕೃಷಿ ಸಮುದಾಯಗಳು ಎದುರಿಸುತ್ತಿರುವ ದೀರ್ಘಕಾಲದ ಸವಾಲುಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಮೋದಿ, ಈ ಫಲವತ್ತಾದ ಪ್ರದೇಶಗಳಲ್ಲಿನ ರೈತರು ಐತಿಹಾಸಿಕವಾಗಿ ಅಸಮರ್ಪಕ ಲಾಜಿಸ್ಟಿಕ್ಸ್ ಮೂಲಸೌಕರ್ಯ ಮತ್ತು ಶೀತಲೀಕರಣ ಸೌಲಭ್ಯಗಳಿಂದಾಗಿ ಪ್ರಮುಖ ಮಾರುಕಟ್ಟೆಗಳನ್ನು ಪ್ರವೇಶಿಸಲು ಹೆಣಗಾಡುತ್ತಿದ್ದಾರೆ ಎಂಬುದರತ್ತ ಬೆಟ್ಟು ಮಾಡಿದರು. ಸುಧಾರಿತ ಸಂಪರ್ಕದ ಪರಿವರ್ತಕ ಸಾಮರ್ಥ್ಯವನ್ನು ದೃಢಪಡಿಸುತ್ತಾ, “ಇದು ನಮ್ಮ ರೈತರ ಆದಾಯವನ್ನು ಹೆಚ್ಚಿಸುತ್ತದೆ” ಎಂದು ಅವರು ಪ್ರತಿಪಾದಿಸಿದರು.

ಎಕ್ಸ್‌ಪ್ರೆಸ್‌ವೇಯ ಸಂಪರ್ಕ ಪ್ರಯೋಜನಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, “ಇದು ಉತ್ತರ ಪ್ರದೇಶದ ಒಂದು ತುದಿಯನ್ನು ಇನ್ನೊಂದು ತುದಿಗೆ ಸಂಪರ್ಕಿಸುತ್ತದೆ, ಜೊತೆಗೆ ರಾಷ್ಟ್ರೀಯ ರಾಜಧಾನಿ ಪ್ರದೇಶದ ಅಪಾರ ಸಾಧ್ಯತೆಗಳನ್ನು ಹತ್ತಿರ ತರುತ್ತದೆ, ವಾಹನಗಳು ಅದರ ಮೇಲೆ ಚಲಿಸುವಾಗ ಅದರ ಬದಿಗಳಲ್ಲಿ ಹೊಸ ಕೈಗಾರಿಕಾ ಅವಕಾಶಗಳು ಅಭಿವೃದ್ಧಿಗೊಳ್ಳುತ್ತವೆ” ಎಂದು ಹೇಳಿದರು.

ಎಕ್ಸ್‌ಪ್ರೆಸ್‌ವೇ ಜೊತೆಗೆ ಕೈಗಾರಿಕಾ ಅವಕಾಶಗಳು ಉದಯಿಸುವುದನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಹರ್ದೋಯಿಯಂತಹ ಜಿಲ್ಲೆಗಳಲ್ಲಿ ಔಷಧ, ಜವಳಿ, ಕೈಮಗ್ಗ, ಚರ್ಮದ ವಸ್ತುಗಳು ಮತ್ತು ಕರಕುಶಲ ವಸ್ತುಗಳ ಉತ್ಪಾದನಾ ಸಮೂಹಗಳನ್ನು ಆಕರ್ಷಿಸಲು ಮತ್ತು ಯುವಜನರಿಗೆ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಕೈಗಾರಿಕಾ ಕಾರಿಡಾರ್‌ಗಳನ್ನು ಕಾರ್ಯತಂತ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಹೇಳಿದರು. ಮುದ್ರಾ ಯೋಜನೆ ಮತ್ತು ಒ.ಡಿ.ಒ.ಪಿ. (ಒಂದು ಜಿಲ್ಲೆ ಒಂದು ಉತ್ಪನ್ನ) ನಂತಹ ಯೋಜನೆಗಳಿಂದ ರಾಜ್ಯದ ಯುವಜನರು ಸಬಲೀಕರಣಗೊಂಡಿರುವ ಉದ್ಯಮಶೀಲತಾ ಮನೋಭಾವವನ್ನು ಶ್ಲಾಘಿಸಿದ ಪ್ರಧಾನಮಂತ್ರಿ, ಸಣ್ಣ ಕೈಗಾರಿಕೆಗಳು ಮತ್ತು ಎಂ.ಎಸ್.ಎಂ.ಇ. ಗಳು ಉತ್ತೇಜನ ಪಡೆಯುತ್ತಿವೆ ಮತ್ತು ಉತ್ತಮ ಸಂಪರ್ಕವು ಅವರಿಗೆ ಹೊಸ ಮಾರ್ಗಗಳನ್ನು ತೆರೆಯುತ್ತದೆ ಎಂದು ಗಮನಿಸಿದರು. “ಇವೆಲ್ಲವೂ ದೊಡ್ಡ ಪ್ರಮಾಣದಲ್ಲಿ ದೇಶೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳನ್ನು ತಲುಪುತ್ತವೆ. ಇದು ಲಕ್ಷಾಂತರ ಕುಟುಂಬಗಳ ಆದಾಯವನ್ನು ಹೆಚ್ಚಿಸುತ್ತದೆ” ಎಂದು ಶ್ರೀ ಮೋದಿ ನುಡಿದರು.

ಉತ್ತರ ಪ್ರದೇಶದ ಗಮನಾರ್ಹ ಪರಿವರ್ತನೆಯನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ, ಒಂದು ಕಾಲದಲ್ಲಿ ಹಿಂದುಳಿದ ರಾಜ್ಯ ಎಂದು ಹೆಸರಿಸಲ್ಪಟ್ಟಿದ್ದ ಬಿಮಾರು ಇಂದು 1 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗುವತ್ತ ಮುನ್ನಡೆಯುತ್ತಿದೆ ಎಂದರು. ರಾಜ್ಯದ ಅಪಾರ ಸಾಮರ್ಥ್ಯ ಮತ್ತು ದೇಶದ ದೊಡ್ಡ ಯುವ ಜನಸಂಖ್ಯೆಯ ಸಾಮರ್ಥ್ಯದಿಂದಾಗಿ ಅಷ್ಟೇ ದೊಡ್ಡ ಸಿದ್ಧತೆಯಿಂದ ಬೆಂಬಲಿತವಾದ ಒಂದು ದೊಡ್ಡ ಗುರಿ ಇದಾಗಿದೆ ಎಂದರು. ಈ ಜನಸಂಖ್ಯಾ ಲಾಭಾಂಶವನ್ನು ಬಳಸಿಕೊಳ್ಳುವ ಕಾರ್ಯತಂತ್ರವನ್ನು ವಿವರಿಸಿದ ಪ್ರಧಾನಮಂತ್ರಿ ಮೋದಿ, ಈ ಶಕ್ತಿಯನ್ನು ಉತ್ತರ ಪ್ರದೇಶವನ್ನು ಉತ್ಪಾದನಾ ಕೇಂದ್ರವನ್ನಾಗಿ ಮಾಡಲು ಬಳಸಲಾಗುತ್ತಿದೆ, ಅಲ್ಲಿ ಹೊಸ ಕೈಗಾರಿಕೆಗಳು ಮತ್ತು ಕಾರ್ಖಾನೆಗಳು ಸ್ಥಾಪನೆಯಾಗುತ್ತವೆ, ದೊಡ್ಡ ಪ್ರಮಾಣದ ಹೂಡಿಕೆಗಳು ಬರುತ್ತವೆ, ಆರ್ಥಿಕ ಪ್ರಗತಿ ವೇಗಗೊಳ್ಳುತ್ತದೆ ಮತ್ತು ಯುವಜನರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ ಎಂದು ವಿವರಿಸಿದರು. ಉತ್ಪಾದನೆಯ ಅರ್ಧದಷ್ಟು ಭಾಗ ಉತ್ತರ ಪ್ರದೇಶದಲ್ಲಿ ಆಗುತ್ತಿದೆ, ಇದರಿಂದ ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ತಯಾರಕ ರಾಷ್ಟ್ರವಾಗಿ ಭಾರತದ ಮೂಡಿ ಬಂದಿದೆ ಎಂಬುದನ್ನು  ಉಲ್ಲೇಖಿಸಿದ  ಶ್ರೀ ಮೋದಿ, “ಯುಪಿ ಇದಕ್ಕೆ ಗಮನಾರ್ಹ ಕೊಡುಗೆ ನೀಡಿದೆ” ಎಂದೂ ಹೇಳಿದರು.

ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ರಾಜ್ಯದ ಉದಯೋನ್ಮುಖ ಪಾತ್ರವನ್ನು ಒತ್ತಿಹೇಳುತ್ತಾ, ನೋಯ್ಡಾದಲ್ಲಿ ಇತ್ತೀಚೆಗೆ ನಡೆದ ಶಿಲಾನ್ಯಾಸ  ಕಾರ್ಯಕ್ರಮದ  ನಂತರ ಸೆಮಿಕಂಡಕ್ಟರ್ ಉತ್ಪಾದನೆಯಲ್ಲಿ ಯುಪಿಯ ಪ್ರಗತಿಯನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. “ಭವಿಷ್ಯದಲ್ಲಿ ಅನಿಯಮಿತ ಅವಕಾಶಗಳಿಂದ ತುಂಬಿರುವ ವಿಶಾಲ ಪ್ರದೇಶಗಳು ಯುಪಿಯ ಜನರಿಗೆ ತೆರೆದುಕೊಳ್ಳುತ್ತಿವೆ” ಎಂದು ಶ್ರೀ ಮೋದಿ ಗಮನಿಸಿದರು, ಇದರಿಂದ ಎಐ-ಚಾಲಿತ ಆರ್ಥಿಕತೆಯಲ್ಲಿ ರಾಜ್ಯವು  ಮುಂಚೂಣಿ ನಾಯಕ ಸ್ಥಾನದಲ್ಲಿ ಇರುತ್ತದೆ ಎಂದರು.

ರಾಷ್ಟ್ರೀಯ ಭದ್ರತೆಗೆ ಯುಪಿಯ ಕೈಗಾರಿಕಾ ಅಭಿವೃದ್ಧಿಯನ್ನು ಒಂದು ಕಾರ್ಯತಂತ್ರದ ಆಸ್ತಿಯಾಗಿ ಇರಿಸಿಕೊಂಡು, ಭಾರತದ ಎರಡು ರಕ್ಷಣಾ ಕಾರಿಡಾರ್‌ಗಳಲ್ಲಿ ಒಂದು ರಾಜ್ಯದೊಳಗೆ ಕಾರ್ಯನಿರ್ವಹಿಸುತ್ತಿದೆ ಮತ್ತು ಪ್ರಮುಖ ರಕ್ಷಣಾ ತಯಾರಕರು ಅಲ್ಲಿ ತಮ್ಮ ಸ್ಥಾವರಗಳನ್ನು ಸ್ಥಾಪಿಸುತ್ತಿದ್ದಾರೆ ಎಂದು ಪ್ರಧಾನಮಂತ್ರಿ ಗಮನಿಸಿದರು. ಯುಪಿಯಲ್ಲಿ ಬ್ರಹ್ಮೋಸ್ ಕ್ಷಿಪಣಿಗಳಂತಹ ಜಾಗತಿಕವಾಗಿ ಗೌರವಿಸಲ್ಪಟ್ಟ ವ್ಯವಸ್ಥೆಗಳ ತಯಾರಿಕೆಯನ್ನು ಗಮನಿಸಿದ ಶ್ರೀ ಮೋದಿ, “ಯುಪಿಯ ಕೈಗಾರಿಕಾ ಅಭಿವೃದ್ಧಿ ಇಂದು ಭಾರತಕ್ಕೆ ಕಾರ್ಯತಂತ್ರದ ಶಕ್ತಿಯಾಗುತ್ತಿದೆ” ಎಂದು ಹೇಳಿದರು.

ಯುಪಿಯ ಸಂಪರ್ಕ ಮೂಲಸೌಕರ್ಯದ ಸಮಗ್ರ ಆಧುನೀಕರಣವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಗಂಗಾ ಎಕ್ಸ್‌ಪ್ರೆಸ್‌ವೇ ಕಾರಿಡಾರ್‌ನಿಂದ ಕೆಲವೇ ಗಂಟೆಗಳ ದೂರದಲ್ಲಿ ಹೊಸದಾಗಿ ಉದ್ಘಾಟನೆಯಾದ ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದೊಂದಿಗೆ ವಿಮಾನ ನಿಲ್ದಾಣ ಜಾಲವನ್ನು 5 ಅಂತರರಾಷ್ಟ್ರೀಯ ಸೌಲಭ್ಯಗಳು ಸೇರಿದಂತೆ 21 ಕಾರ್ಯಾಚರಣಾ ವಿಮಾನ ನಿಲ್ದಾಣಗಳಿಗೆ ವಿಸ್ತರಿಸಲಾಗಿದೆ ಎಂದು ಹೇಳಿದರು.

ಯುಪಿಯ ಪ್ರಸ್ತುತ ಪಥವನ್ನು ಅದರ ಸಮಸ್ಯೆ ಬಾಧಿತ  ಭೂತಕಾಲದೊಂದಿಗೆ ಹೋಲಿಸಿದ ಪ್ರಧಾನಮಂತ್ರಿ, ಅಪರಾಧ ಮತ್ತು ಕಾನೂನುಬಾಹಿರ ಕೃತ್ಯಗಳಿಂದ ಕೂಡಿದ್ದ ಹಿಂದಿನ ಯುಗ ಮತ್ತು ಕಾನೂನು ಮತ್ತು ಸುವ್ಯವಸ್ಥೆ ಪಾಲನೆ ಅನುಕರಣೀಯವಾಗಿರುವ ಇಂದಿನ ವಾಸ್ತವದ ನಡುವಿನ ತೀವ್ರ  ವ್ಯತ್ಯಾಸವನ್ನು ತುಲನೆ ಮಾಡಿದರು. “ಈಗ, ಯುಪಿಯ ಕಾನೂನು ಮತ್ತು ಸುವ್ಯವಸ್ಥೆಯನ್ನು ದೇಶಾದ್ಯಂತ ಒಂದು ಉದಾಹರಣೆಯಾಗಿ ಉಲ್ಲೇಖಿಸಲಾಗುತ್ತಿದೆ” ಎಂದು ಶ್ರೀ ಮೋದಿ ಹೇಳಿದರು.

ಯುಪಿಯ ಅಭಿವೃದ್ಧಿಯನ್ನು ಭಾರತದ ವಿಶಾಲ ನಾಗರಿಕತೆ ಮತ್ತು ಆರ್ಥಿಕ ಮಹತ್ವಾಕಾಂಕ್ಷೆಗಳಲ್ಲಿ ಪ್ರಮುಖ ಭಾಗ ಎಂದ ಪ್ರಧಾನಮಂತ್ರಿ ರಾಜ್ಯದ ರೂಪಾಂತರವು ರಾಷ್ಟ್ರದ ಮೂಲ ಸಂಕಲ್ಪವನ್ನು ಸಾಕಾರಗೊಳಿಸುತ್ತದೆ ಎಂದು ಪ್ರತಿಪಾದಿಸಿದರು. “ಇಂದು, ಇಡೀ ದೇಶವು ಒಂದೇ ಸಂಕಲ್ಪದೊಂದಿಗೆ ಮುಂದುವರಿಯುತ್ತಿದೆ, ಅದು ವಿಕ್ಷಿತ ಭಾರತಕ್ಕಾಗಿ ಸಂಕಲ್ಪ! ಈ ಸಂಕಲ್ಪವನ್ನು ಈಡೇರಿಸುವಲ್ಲಿ ಯುಪಿ ಪ್ರಮುಖ ಪಾತ್ರ ವಹಿಸುತ್ತದೆ” ಎಂದು ಶ್ರೀ ಮೋದಿ ಹೇಳಿದರು.

ಭಾರತದ ಪ್ರಗತಿಯ ಆರೋಹಣಕ್ಕೆ ಜಾಗತಿಕ ಅಸ್ಥಿರತೆ ಮತ್ತು ಬಾಹ್ಯ ವಿರೋಧವನ್ನು ಒಪ್ಪಿಕೊಂಡ ಪ್ರಧಾನಮಂತ್ರಿ, ಬಾಹ್ಯ ಬೆದರಿಕೆಗಳ ಹೊರತಾಗಿಯೂ ಅಭಿವೃದ್ಧಿಗೆ ರಾಷ್ಟ್ರದ ಅಚಲ ಬದ್ಧತೆಯನ್ನು ದೃಢಪಡಿಸಿದರು. “ನಾವು ಸುರಕ್ಷಿತರಾಗಿದ್ದೇವೆ ಮಾತ್ರವಲ್ಲದೆ ಅಭಿವೃದ್ಧಿಯ ಹೊಸ ಮೈಲಿಗಲ್ಲುಗಳನ್ನು ಸಹ ಸೃಷ್ಟಿಸುತ್ತಿದ್ದೇವೆ. ನಾವು ಆತ್ಮನಿರ್ಭರ ಭಾರತ ಅಭಿಯಾನವನ್ನು ಮುನ್ನಡೆಸುತ್ತಿದ್ದೇವೆ. ನಾವು ಅತ್ಯಂತ ಆಧುನಿಕ ಮೂಲಸೌಕರ್ಯವನ್ನು ನಿರ್ಮಿಸುತ್ತಿದ್ದೇವೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಗಂಗಾ ಎಕ್ಸ್‌ಪ್ರೆಸ್‌ವೇಯನ್ನು ಈ ವಿಶಾಲ ಅಭಿವೃದ್ಧಿ ಮಾದರಿಯ ಸಂಕೇತವಾಗಿಸುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿ, ಉದಯೋನ್ಮುಖ ಅವಕಾಶಗಳನ್ನು ಸ್ಪಷ್ಟವಾದ ಸಮೃದ್ಧಿಯಾಗಿ ಪರಿವರ್ತಿಸುವ ಬಗ್ಗೆ ಉತ್ತರ ಪ್ರದೇಶದ ಜನರ ಮೇಲೆ ತಮಗಿರುವ ವಿಶ್ವಾಸವನ್ನು ದೃಢಪಡಿಸಿದರು. “ಗಂಗಾ ಎಕ್ಸ್‌ಪ್ರೆಸ್‌ವೇ ನಮ್ಮ ಮನೆ ಬಾಗಿಲಿಗೆ ತರುವ ಸಾಧ್ಯತೆಗಳನ್ನು, ಉತ್ತರ ಪ್ರದೇಶದ ಜನರು ತಮ್ಮ ಕಠಿಣ ಪರಿಶ್ರಮ ಮತ್ತು ಪ್ರತಿಭೆಯ ಮೂಲಕ ಬಳಸಿಕೊಳ್ಳುತ್ತಾರೆ ಎಂದು ನನಗೆ ವಿಶ್ವಾಸವಿದೆ” ಎಂದು ಶ್ರೀ ಮೋದಿ ಹೇಳಿದರು.

 

*****