ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, ಪ್ರಾದೇಶಿಕ ಸಂಪರ್ಕ ಯೋಜನೆ – ಪರಿಷ್ಕೃತ ಉಡಾನ್ ಅನ್ನು ಜಾರಿಗೊಳಿಸಲು ಅನುಮೋದನೆ ನೀಡಿದೆ. ಭಾರತ ಸರ್ಕಾರದ ಬಜೆಟ್ ಬೆಂಬಲದೊಂದಿಗೆ ಒಟ್ಟು 28,840 ಕೋಟಿ ರೂ. ವೆಚ್ಚದಲ್ಲಿ, 2026-27ನೇ ಹಣಕಾಸು ವರ್ಷದಿಂದ 2035-36ರವರೆಗೆ ಹತ್ತು ವರ್ಷಗಳ ಅವಧಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು.
ಪರಿಣಾಮಗಳು:
ಯೋಜನೆಯ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:
(ಅ) ವಿಮಾನ ನಿಲ್ದಾಣಗಳ ಅಭಿವೃದ್ಧಿ (ಕ್ಯಾಪೆಕ್ಸ್):
ಪರಿಷ್ಕೃತ ಉಡಾನ್ ಯೋಜನೆಯಡಿ, ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು ಪ್ರಸ್ತುತ ಬಳಕೆಯಿಲ್ಲದ 100 ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಇದು ಮೂಲಸೌಕರ್ಯ ವಿಸ್ತರಣೆ ಮತ್ತು ಭಾರತವನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ವಿಮಾನಯಾನ ವ್ಯವಸ್ಥೆಯನ್ನಾಗಿ ಪರಿವರ್ತಿಸುವ ‘ವಿಕಸಿತ ಭಾರತ 2047’ ದೃಷ್ಟಿಕೋನಕ್ಕೆ ಅನುಗುಣವಾಗಿದೆ. ಮುಂದಿನ ಎಂಟು ವರ್ಷಗಳಲ್ಲಿ ಇದಕ್ಕೆ ಒಟ್ಟು 12,159 ಕೋಟಿ ರೂ. ವೆಚ್ಚ ಮಾಡಲಾಗುವುದು.
(ಆ) ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಮತ್ತು ನಿರ್ವಹಣೆ (ಒ&ಎಂ):
ಕೇವಲ ಪ್ರಾದೇಶಿಕ ಸಂಪರ್ಕ ಯೋಜನೆ (ಆರ್ ಸಿ ಎಸ್) ಅಡಿಯಲ್ಲಿ ಬರುವ ವಿಮಾನ ನಿಲ್ದಾಣಗಳಿಗೆ ಹೆಚ್ಚಿನ ನಿರ್ವಹಣಾ ವೆಚ್ಚ ಮತ್ತು ಸೀಮಿತ ಆದಾಯ ಇರುವುದನ್ನು ಗಮನಿಸಿ, ಈ ಯೋಜನೆಯು ಕಾರ್ಯಾಚರಣೆ ಮತ್ತು ನಿರ್ವಹಣೆ (ಒ&ಎಂ) ಬೆಂಬಲವನ್ನು ನೀಡಲು ಉದ್ದೇಶಿಸಿದೆ. ಪ್ರತಿ ವಿಮಾನ ನಿಲ್ದಾಣಕ್ಕೆ ವರ್ಷಕ್ಕೆ ಗರಿಷ್ಠ 3.06 ಕೋಟಿ ರೂ. ಮತ್ತು ಪ್ರತಿ ಹೆಲಿಪೋರ್ಟ್/ವಾಟರ್ ಏರೋಡ್ರೋಮ್ ಗೆ ವರ್ಷಕ್ಕೆ 0.90 ಕೋಟಿ ರೂ.ಗಳಂತೆ ಮೂರು ವರ್ಷಗಳ ಕಾಲ ಬೆಂಬಲ ನೀಡಲಾಗುವುದು. ಸುಮಾರು 441 ನಿಲ್ದಾಣಗಳಿಗಾಗಿ ಅಂದಾಜು 2,577 ಕೋಟಿ ರೂ. ಗಳನ್ನು ಮೀಸಲಿಡಲಾಗಿದೆ.
(ಇ) ಆಧುನಿಕ ಹೆಲಿಪ್ಯಾಡ್ಗಳ ಅಭಿವೃದ್ಧಿ:
ಗುಡ್ಡಗಾಡು, ದೂರದ ಪ್ರದೇಶಗಳು, ದ್ವೀಪಗಳು ಮತ್ತು ಮಹತ್ವಾಕಾಂಕ್ಷಿ ಜಿಲ್ಲೆಗಳಲ್ಲಿನ ಸಂಪರ್ಕ ಸವಾಲುಗಳನ್ನು ಎದುರಿಸಲು, ತಲಾ 15 ಕೋಟಿ ರೂ. ವೆಚ್ಚದಲ್ಲಿ 200 ಆಧುನಿಕ ಹೆಲಿಪ್ಯಾಡ್ ಗಳನ್ನು ಅಭಿವೃದ್ಧಿಪಡಿಸಲು ಯೋಜನೆ ಉದ್ದೇಶಿಸಿದೆ. ಕೊನೆಯ ಹಂತದ ಸಂಪರ್ಕ ಮತ್ತು ತುರ್ತು ಸ್ಪಂದನೆಯನ್ನು ಸುಧಾರಿಸಲು ಮುಂದಿನ ಎಂಟು ವರ್ಷಗಳಲ್ಲಿ ಒಟ್ಟು 3,661 ಕೋಟಿ ರೂ. (ಹಣದುಬ್ಬರಕ್ಕೆ ಅನುಗುಣವಾಗಿ ಹೊಂದಾಣಿಕೆ ಮಾಡಿದಂತೆ) ವೆಚ್ಚ ಮಾಡಲಾಗುವುದು.
(ಈ) ಕಾರ್ಯಸಾಧ್ಯತಾ ಅಂತರ ನಿಧಿ (ವಿಜಿಎಫ್):
ಪ್ರಾದೇಶಿಕ ಸಂಪರ್ಕ ಯೋಜನೆಯಡಿ, ವಿಮಾನಯಾನ ಸಂಸ್ಥೆಗಳು ನಿಗದಿತ ಮಾರ್ಗಗಳಲ್ಲಿ ಕಾರ್ಯನಿರ್ವಹಿಸಲು ‘ವಯಾಬಿಲಿಟಿ ಗ್ಯಾಪ್ ಫಂಡಿಂಗ್’ (ವಿಜಿಎಫ್) ರೂಪದಲ್ಲಿ ಆರ್ಥಿಕ ಬೆಂಬಲವನ್ನು ಪಡೆಯುತ್ತವೆ. ಮಾರುಕಟ್ಟೆ ಅಭಿವೃದ್ಧಿಗೆ ಹೆಚ್ಚಿನ ಸಮಯದ ಅಗತ್ಯವಿರುವುದನ್ನು ಮನಗಂಡು, ಮುಂದಿನ 10 ವರ್ಷಗಳಲ್ಲಿ ವಿಮಾನಯಾನ ಸಂಸ್ಥೆಗಳಿಗೆ 10,043 ಕೋಟಿ ರೂ. ಗಳ ವಿಜಿಎಫ್ ಬೆಂಬಲವನ್ನು ನೀಡಲು ಉದ್ದೇಶಿಸಲಾಗಿದೆ.
(ಉ) ಆತ್ಮನಿರ್ಭರ ಭಾರತ ವಿಮಾನ ಸ್ವಾಧೀನ:
ದೂರದ ಮತ್ತು ಕಷ್ಟಕರ ಭೂಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಲು ಅಗತ್ಯವಿರುವ ಸಣ್ಣ ವಿಮಾನಗಳು ಮತ್ತು ಹೆಲಿಕಾಪ್ಟರ್ ಗಳ ಕೊರತೆಯನ್ನು ನೀಗಿಸಲು ಹಾಗೂ ಆತ್ಮನಿರ್ಭರ ಭಾರತ ದೃಷ್ಟಿಕೋನವನ್ನು ಮುನ್ನಡೆಸಲು, ಪವನ್ ಹನ್ಸ್ ಸಂಸ್ಥೆಗಾಗಿ ಎರಡು ‘ಎಚ್ ಎ ಎಲ್ ಧ್ರುವ’ ಹೆಲಿಕಾಪ್ಟರ್ ಗಳನ್ನು ಮತ್ತು ಅಲಯನ್ಸ್ ಏರ್ ಸಂಸ್ಥೆಗಾಗಿ ಎರಡು ‘ಎಚ್ ಎ ಎಲ್ ಡೋರ್ನಿಯರ್’ ವಿಮಾನಗಳನ್ನು ಖರೀದಿಸಲು ಈ ಯೋಜನೆಯು ಉದ್ದೇಶಿಸಿದೆ.
ಹಿನ್ನೆಲೆ
ಅಕ್ಟೋಬರ್ 2016ರಲ್ಲಿ ವಿಮಾನ ಪ್ರಯಾಣವನ್ನು ಕೈಗೆಟುಕುವಂತೆ ಮಾಡುವ ಮತ್ತು ಎರಡನೇ ಹಾಗೂ ಮೂರನೇ ಹಂತದ ನಗರಗಳಿಗೆ ಸಂಪರ್ಕವನ್ನು ಬಲಪಡಿಸುವ ಉದ್ದೇಶದೊಂದಿಗೆ ಮೂಲ ಉಡಾನ್ ಯೋಜನೆಯನ್ನು ಪ್ರಾರಂಭಿಸಲಾಯಿತು. ಒಂಬತ್ತು ವರ್ಷಗಳ ಅನುಷ್ಠಾನದಲ್ಲಿ:
*****