ಪಿಎಂಇಂಡಿಯಾ
ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರೇ, ಮಾಜಿ ಪ್ರಧಾನಮಂತ್ರಿಗಳಾದ ಗೌರವಾನ್ವಿತ ಶ್ರೀ ಹೆಚ್.ಡಿ. ದೇವೇಗೌಡ ಅವರೇ, ರಾಜ್ಯದ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರೇ, ಪರಮಪೂಜ್ಯ ಜಗದ್ಗುರು ಸ್ವಾಮಿ ಪರಮಾತ್ಮಾನಂದ ಸರಸ್ವತಿ ಜೀ ಅವರೇ, ಕೇಂದ್ರದಲ್ಲಿನ ನನ್ನ ಸಹೋದ್ಯೋಗಿಗಳಾದ ಹೆಚ್.ಡಿ. ಕುಮಾರಸ್ವಾಮಿ ಅವರೇ, ಶೋಭಾ ಕರಂದ್ಲಾಜೆ ಅವರೇ, ಕರ್ನಾಟಕದ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ ಅವರೇ, ರಾಜ್ಯದ ಸಚಿವರಾದ ಎನ್. ಚಲುವರಾಯಸ್ವಾಮಿ ಅವರೇ, ಉಪಸ್ಥಿತರಿರುವ ಎಲ್ಲಾ ಪೂಜ್ಯ ಸಂತರುಗಳೇ, ಗಣ್ಯ ವ್ಯಕ್ತಿಗಳೇ ಹಾಗೂ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವ ನನ್ನ ಎಲ್ಲಾ ಸಹೋದರ ಸಹೋದರಿಯರೇ.
ಸ್ನೇಹಿತರೇ,
ಇಂದು ನನ್ನ ಹೃದಯವು ಪದಗಳಲ್ಲಿ ವಿವರಿಸಲಾಗದ ಭಾವನೆಗಳಿಂದ ತುಂಬಿದೆ. ಶ್ರೀ ಕಾಲಭೈರವೇಶ್ವರ ಸ್ವಾಮಿಯ ದರ್ಶನ ಮತ್ತು ಪೂಜೆ, ಶ್ರೀ ಗುರು ಭೈರವೈಕ್ಯ ಮಂದಿರದ ಭವ್ಯ ಉದ್ಘಾಟನೆಗೆ ಸಾಕ್ಷಿಯಾಗುವುದು, ಐತಿಹಾಸಿಕ ಜ್ವಾಲಾ ಪೀಠದಲ್ಲಿ ಸಮಯ ಕಳೆಯುವುದು, ಆಧ್ಯಾತ್ಮಿಕ ಎತ್ತರಕ್ಕೇರಿದ ಸಂತರ ಸಾನ್ನಿಧ್ಯ ಮತ್ತು ಇಲ್ಲಿ ನೆರೆದಿರುವ ಈ ಜನಸ್ತೋಮವನ್ನು ನೋಡುವುದು—ಈ ಅನುಭವಗಳು ಸದಾ ನನ್ನೊಂದಿಗಿರುತ್ತವೆ. ನಿಮ್ಮ ನಡುವೆ ಇರುವ ಅವಕಾಶ ಸಿಕ್ಕಿದ್ದನ್ನು ನನ್ನ ಸೌಭಾಗ್ಯವೆಂದು ಭಾವಿಸುತ್ತೇನೆ. ಈ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನಾನು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಕರ್ನಾಟಕಕ್ಕೆ ಬರುವುದು ನನಗೆ ಯಾವಾಗಲೂ ಮಹಾನ್ ಸಂತೋಷವನ್ನು ನೀಡುತ್ತದೆ. ಪ್ರತಿ ಬಾರಿ ಇಲ್ಲಿಗೆ ಬಂದಾಗಲೂ ನನಗೆ ಹೊಸ ಸ್ಫೂರ್ತಿ ಸಿಗುತ್ತದೆ. ಆದರೆ ಮಂಡ್ಯ ಜಿಲ್ಲೆಯ ಸಕ್ಕರೆ ನಾಡಿಗೆ ಇಂದಿನ ಭೇಟಿಯು ಹಲವು ಕಾರಣಗಳಿಗಾಗಿ ಪ್ರಮುಖವಾದುದು. ಈ ಮಣ್ಣು ಕಬ್ಬಿನ ಸಿಹಿಗೆ ಹೆಸರುವಾಸಿಯಾಗಿದೆ ಮತ್ತು ಅದೇ ಸಿಹಿ ಇಲ್ಲಿನ ಜನರ ಮಾತುಗಳಲ್ಲೂ ಕಾಣುತ್ತದೆ. ಅವರ ಆತ್ಮೀಯತೆ ಮತ್ತು ಸ್ವಾಗತಿಸುವ ಗುಣ ಹೃದಯಕ್ಕೆ ತಾಕುತ್ತದೆ. ಕರ್ನಾಟಕವು ತತ್ವಜ್ಞಾನ ಮತ್ತು ತಂತ್ರಜ್ಞಾನ ಎರಡರಲ್ಲೂ ಶ್ರೀಮಂತವಾಗಿದೆ ಎಂದು ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ಅಂದರೆ, ತತ್ವಶಾಸ್ತ್ರದ ಆಳ ಮತ್ತು ತಂತ್ರಜ್ಞಾನದ ಶಕ್ತಿ ಎರಡೂ ಇಲ್ಲಿ ನೆಲೆಸಿವೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಂತಹ ಆಧ್ಯಾತ್ಮಿಕ ಕೇಂದ್ರಗಳು ಈ ನಾಡಿನ ದೊಡ್ಡ ಕೊಡುಗೆಗಳಾಗಿವೆ. ಈ ಸಂಸ್ಥೆಯು ತತ್ವಶಾಸ್ತ್ರ, ಆಧ್ಯಾತ್ಮ ಮತ್ತು ನೈತಿಕ ಮೌಲ್ಯಗಳ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡುತ್ತಿದೆ.
ಗೆಳೆಯರೇ,
ಭಾರತವು ಸಾವಿರಾರು ವರ್ಷಗಳಿಂದ ಮುಂದುವರಿಯುತ್ತಿರುವ ಜೀವಂತ ನಾಗರಿಕತೆಯಾಗಿದೆ. ವಿಶ್ವದಲ್ಲಿ ಇಷ್ಟು ಸುದೀರ್ಘ ಕಾಲದವರೆಗೆ ಸಂಪ್ರದಾಯಗಳು ಮುಂದುವರಿಯುತ್ತಿರುವ ಉದಾಹರಣೆಗಳು ಬಹಳ ಕಡಿಮೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವನ್ನು ನೋಡಿದಾಗ, ಈ ನಿರಂತರತೆಯ ಜೀವಂತ ರೂಪ ನಮಗೆ ಕಾಣುತ್ತದೆ. ಈ ಪವಿತ್ರ ಮಠದ ಇತಿಹಾಸವು ಸುಮಾರು ಎರಡು ಸಾವಿರ ವರ್ಷಗಳಷ್ಟು ಹಳೆಯದು. ಇದರ ಗುರು ಪರಂಪರೆ, ಆಧ್ಯಾತ್ಮಿಕ ದರ್ಶನ ಮತ್ತು ಸೇವೆಯ ಸಂಪ್ರದಾಯವು ತಲೆಮಾರುಗಳಿಂದ ಈ ಮಣ್ಣನ್ನು ಸಮೃದ್ಧಗೊಳಿಸಿದೆ. ಈ ಪರಂಪರೆಯಲ್ಲಿ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳಂತಹ ಮಹಾನ್ ಸಂತರು ಉದಯಿಸಿದರು, ಅವರು ಈ ಪರಂಪರೆಯನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಇಂದು ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ಅದೇ ಪ್ರವಾಹವನ್ನು ಹೊಸ ಚೈತನ್ಯ, ವೇಗ ಮತ್ತು ಸಮರ್ಪಣಾ ಭಾವದೊಂದಿಗೆ ಎಲ್ಲರನ್ನೂ ಜೊತೆಗೂಡಿಸಿ ಮುನ್ನಡೆಸುತ್ತಿದ್ದಾರೆ.
ಮಿತ್ರರೇ,
ನಮ್ಮ ಸಮಾಜದಲ್ಲಿ ಕಾಲಕಾಲಕ್ಕೆ ಕೇವಲ ಆಧ್ಯಾತ್ಮಿಕ ಮಾರ್ಗದರ್ಶನಕ್ಕೆ ಸೀಮಿತವಾಗದ ಇಂತಹ ಮಹಾನ್ ಚೇತನಗಳು ಅವತರಿಸಿದ್ದಾರೆ. ಅವರು ಜನಸಾಮಾನ್ಯರ ನಡುವೆಯೇ ಬದುಕಿ, ಅವರ ಸುಖ-ದುಃಖಗಳನ್ನು ಆಪ್ತವಾಗಿ ಅರಿತವರು; ಜನರ ಸಂಘರ್ಷಗಳನ್ನು ತಾವೂ ಅನುಭವಿಸಿ, ಸಮಾಜವನ್ನು ಕಷ್ಟದ ಕಾರ್ಮೋಡದಿಂದ ಹೊರತಂದು ಸನ್ಮಾರ್ಗ ತೋರಿಸಿದವರು. ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳು ಅಂತಹ ದಿವ್ಯ ಚೇತನರಾಗಿದ್ದರು. ಅವರು ಇಂದು ಭೌತಿಕವಾಗಿ ನಮ್ಮೊಂದಿಗಿಲ್ಲದಿರಬಹುದು, ಆದರೆ ಅವರು ಇಲ್ಲೇ ಇದ್ದಾರೆ. ಜನರ ಜೀವನವನ್ನು ಸುಧಾರಿಸಲು ಅವರು ಹಲವು ಸ್ತರಗಳಲ್ಲಿ ಕೆಲಸ ಮಾಡಿದರು. ಅವರು ಅಗಾಧವಾದ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದ್ದರು, ಆದರೆ ಅವರ ಜೀವನ ಧ್ಯಾನಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಗ್ರಾಮೀಣ ಹಿನ್ನೆಲೆಯಿಂದ ಬಂದ ಅವರು ಗ್ರಾಮೀಣ ಯುವಕರ ಆಕಾಂಕ್ಷೆಗಳನ್ನು ಮತ್ತು ಸಾಮಾನ್ಯ ಜನರ ಸವಾಲುಗಳನ್ನು ಅರಿತಿದ್ದರು. ಆದ್ದರಿಂದ, ಅವರಿಗೆ ಭಕ್ತಿಯೆಂದರೆ ಸಮಾಜದಿಂದ ದೂರ ಹೋಗುವುದಲ್ಲ, ಬದಲಾಗಿ ಸಮಾಜದ ಜವಾಬ್ದಾರಿಯನ್ನು ಹೊತ್ತು ಮುಂದೆ ಸಾಗುವುದಾಗಿತ್ತು.
ಗೆಳೆಯರೇ,
ಮಹಾಸ್ವಾಮೀಜಿಗಳು ಶಿಕ್ಷಣ ಕ್ಷೇತ್ರದಲ್ಲಿ ನೂರಾರು ಸಂಸ್ಥೆಗಳನ್ನು ಸ್ಥಾಪಿಸಿದರು, ಇಲ್ಲಿ ಪ್ರಾಥಮಿಕ ಹಂತದಿಂದ ವೈದ್ಯಕೀಯ ಮತ್ತು ಎಂಜಿನಿಯರಿಂಗ್ ನಂತಹ ವೃತ್ತಿಪರ ಕೋರ್ಸ್ ಗಳವರೆಗೆ ಶಿಕ್ಷಣ ನೀಡಲಾಗುತ್ತಿದೆ. ಇದರ ಹೆಚ್ಚಿನ ಪ್ರಯೋಜನ ಬಡ ಮತ್ತು ಗ್ರಾಮೀಣ ಕುಟುಂಬಗಳ ಮಕ್ಕಳಿಗೆ ಸಂದಿದೆ. ಆರೋಗ್ಯ ಕ್ಷೇತ್ರದಲ್ಲಿ ಅವರ ದೂರದೃಷ್ಟಿಯು ಅಷ್ಟೇ ಪರಿವರ್ತನಾಕಾರಿಯಾಗಿತ್ತು. ಅವರು ಆರೋಗ್ಯ ಸಂಸ್ಥೆಗಳನ್ನು ನಿರ್ಮಿಸಿದರು, ಅಲ್ಲಿ ಇಂದಿಗೂ ಸೇವಾ ಮನೋಭಾವದಿಂದ ಕೆಲಸ ಮಾಡಲಾಗುತ್ತಿದೆ. ಗುಣಮಟ್ಟದ ಆರೋಗ್ಯ ರಕ್ಷಣೆ ಕೇವಲ ಕೆಲವು ಜನರ ವಿಶೇಷ ಹಕ್ಕಾಗಿರಬಾರದು, ಅದು ಪ್ರತಿ ಪ್ರಜೆಗೂ ತಲುಪಬೇಕು ಎಂದು ಅವರು ನಂಬಿದ್ದರು.
ಸ್ನೇಹಿತರೇ,
ಇಂದು ನಮ್ಮ ಸರ್ಕಾರವೂ ಸಹ ಅದೇ ದೂರದೃಷ್ಟಿಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಕೋಟ್ಯಂತರ ಬಡವರು ಉಚಿತ ಆಸ್ಪತ್ರೆ ಚಿಕಿತ್ಸೆ ಪಡೆದಿದ್ದಾರೆ. ಈ ಯೋಜನೆಯನ್ನು ನಾವು 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಹಿರಿಯ ನಾಗರಿಕರಿಗೂ ವಿಸ್ತರಿಸಿದ್ದೇವೆ, ಇದರಿಂದ ಅವರು ಘನತೆಯಿಂದ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಪಡೆಯಬಹುದು.
ಗೆಳೆಯರೇ,
ಇಂದು ಈ ಶ್ರೀ ಗುರು ಭೈರವೈಕ್ಯ ಮಂದಿರದಲ್ಲಿ ಉಪಸ್ಥಿತರಿರುವುದು ಮತ್ತು ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಆಶೀರ್ವಾದವನ್ನು ಪಡೆಯುವುದು ನನಗೆ ಸೌಭಾಗ್ಯದ ವಿಷಯವಾಗಿದೆ. ಮಹಾಸ್ವಾಮೀಜಿಗಳು ಕರುಣೆಯ ಸಾಕಾರ ರೂಪವಾಗಿದ್ದರು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಅವರ ಕರುಣೆ ಕೇವಲ ಮಾನವರಿಗೆ ಸೀಮಿತವಾಗಿರಲಿಲ್ಲ, ಅದು ಎಲ್ಲಾ ಜೀವಿಗಳಿಗೂ ವಿಸ್ತರಿಸಿತ್ತು. ನವಿಲುಗಳ ಸಂರಕ್ಷಣೆಗಾಗಿ ಅವರು ಪ್ರಾರಂಭಿಸಿದ ಸಾಮಾಜಿಕ ಆಂದೋಲನ ಇದಕ್ಕೆ ಸಾಕ್ಷಿ. ಇಂದು ಸ್ವಾಮೀಜಿಗಳು ನನಗೆ ನೀಡಿದ ಸ್ಮರಣಿಕೆಯಲ್ಲೂ ನವಿಲಿದೆ. ಇದು ಕೇವಲ ಪರಿಸರ ಸಂರಕ್ಷಣೆ ಮಾತ್ರವಲ್ಲ, ನಮ್ಮ ಸಾಂಸ್ಕೃತಿಕ ಪ್ರಜ್ಞೆಯೂ ಹೌದು, ಏಕೆಂದರೆ ನವಿಲು ನಮ್ಮ ರಾಷ್ಟ್ರೀಯ ಪಕ್ಷಿ ಮತ್ತು ಭಗವಾನ್ ಸುಬ್ರಹ್ಮಣ್ಯನ ವಾಹನವೂ ಹೌದು. ದೆಹಲಿಯಲ್ಲಿ ಜನರ ಆಶೀರ್ವಾದದಿಂದ ಭಾರತ ಸರ್ಕಾರ ನನಗೆ ನೀಡಿದ ಅಧಿಕೃತ ನಿವಾಸದಲ್ಲಿ ಅನೇಕ ನವಿಲುಗಳಿವೆ. ಕೆಲವು ನವಿಲುಗಳೊಂದಿಗೆ ನಾನು ಉತ್ತಮ ಸ್ನೇಹವನ್ನೂ ಬೆಳೆಸಿಕೊಂಡಿದ್ದೇನೆ. ನವಿಲು ಎಷ್ಟು ಶಾಂತಿಯುತ ಮತ್ತು ಸುಂದರವಾಗಿದೆ ಎಂಬುದನ್ನು ನಾನು ನೇರವಾಗಿ ನೋಡುತ್ತೇನೆ.
ಸ್ನೇಹಿತರೇ,
ಇಂದು ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳು ತಮ್ಮ ಗುರುವಿನ ಪರಂಪರೆಯನ್ನು ಮುನ್ನಡೆಸುತ್ತಿದ್ದಾರೆ. ತಮ್ಮ ಗುರುಗಳು ತೋರಿಸಿದ ದಾರಿಯಲ್ಲಿ ನಡೆಯುತ್ತಾ, ಅವರು ಜನರ ಜೀವನದಲ್ಲಿ ಧನಾತ್ಮಕ ಬದಲಾವಣೆಯನ್ನು ತರುತ್ತಿದ್ದಾರೆ. ತಮ್ಮ ಗುರುಗಳ ಗೌರವಾರ್ಥವಾಗಿ ಶ್ರೀ ಗುರು ಭೈರವೈಕ್ಯ ಮಂದಿರವನ್ನು ನಿರ್ಮಿಸುವುದು ಕೇವಲ ಕಟ್ಟಡವನ್ನು ಕಟ್ಟುವುದು ಮಾತ್ರವಲ್ಲ, ಅದು ಒಂದು ಭಾವನೆಯನ್ನು ಸಾಕಾರಗೊಳಿಸುವುದು. ಮುಂಬರುವ ಸಮಯದಲ್ಲಿ, ಈ ಸ್ಥಳವು ನಿಸ್ಸಂದೇಹವಾಗಿ ಸೇವೆ, ಧ್ಯಾನ ಮತ್ತು ಸ್ಫೂರ್ತಿಯ ಕೇಂದ್ರವಾಗಲಿದೆ.
ಗೆಳೆಯರೇ,
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಒಂಬತ್ತು ತತ್ವಗಳ ಮೇಲೆ ಕೆಲಸ ಮಾಡುತ್ತದೆ—ಅನ್ನ, ಅಕ್ಷರ, ಆರೋಗ್ಯ, ಆಧ್ಯಾತ್ಮ, ಆಶ್ರಯ, ಅರಣ್ಯ, ಆಕಳು, ಅನುಕಂಪ ಮತ್ತು ಅನುಬಂಧ. ಅದೇ ಸ್ಫೂರ್ತಿಯೊಂದಿಗೆ, ನಾವೆಲ್ಲರೂ ಸಾಮೂಹಿಕ ಸಂಕಲ್ಪವನ್ನು ಮಾಡಬಹುದಾದ ಒಂಬತ್ತು ಕ್ಷೇತ್ರಗಳನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ. ನಾನು ನನ್ನ ಒಂಬತ್ತು ವಿನಂತಿಗಳನ್ನು ನಿಮ್ಮ ಮುಂದೆ ಇಡಲು ಬಯಸುತ್ತೇನೆ.
ಗೆಳೆಯರೇ,
ಈ ಮಂಡ್ಯಕ್ಕೆ ನೀರಿನ ಮಹತ್ವ ತಿಳಿದಿದೆ. ಈ ಇಡೀ ಪ್ರದೇಶವು ತಾಯಿ ಕಾವೇರಿಯ ಆಶೀರ್ವಾದದಿಂದ ಬೆಳೆದಿದೆ. ಆದ್ದರಿಂದ, ನನ್ನ ಮೊದಲ ವಿನಂತಿಯೆಂದರೆ, ನಾವೆಲ್ಲರೂ ನೀರನ್ನು ಉಳಿಸಲು ಮತ್ತು ನೀರಿನ ಉತ್ತಮ ನಿರ್ವಹಣೆಗೆ ಸಂಕಲ್ಪ ಮಾಡೋಣ. ನನ್ನ ಎರಡನೇ ವಿನಂತಿಯು ಮರಗಳು ಮತ್ತು ಪ್ರಕೃತಿಗೆ ಸಂಬಂಧಿಸಿದ್ದಾಗಿದೆ. ‘ಏಕ್ ಪೇಡ್ ಮಾ ಕೆ ನಾಮ್’ (ತಾಯಿಯ ಹೆಸರಲ್ಲಿ ಒಂದು ಮರ) ಅಭಿಯಾನದಡಿ ಕೋಟ್ಯಂತರ ಜನರು ತಮ್ಮ ತಾಯಿಯ ಹೆಸರಿನಲ್ಲಿ ಗಿಡಗಳನ್ನು ನೆಟ್ಟಿದ್ದಾರೆ. ನಾವೂ ಸಹ ನಮ್ಮ ತಾಯಿಯ ಗೌರವಾರ್ಥವಾಗಿ ಗಿಡಗಳನ್ನು ನೆಡೋಣ ಮತ್ತು ಭೂತಾಯಿಯನ್ನು ರಕ್ಷಿಸಲು ಸಂಕಲ್ಪ ಮಾಡೋಣ. ನನ್ನ ಮೂರನೇ ವಿನಂತಿಯು ಸ್ವಚ್ಛತೆಯ ಬಗ್ಗೆಯಾಗಿದೆ. ಅದು ಧಾರ್ಮಿಕ ಸ್ಥಳವಾಗಿರಲಿ, ಸಾರ್ವಜನಿಕ ಸ್ಥಳವಾಗಿರಲಿ, ಗ್ರಾಮ ಅಥವಾ ನಗರವಾಗಿರಲಿ, ಎಲ್ಲೆಡೆ ಸ್ವಚ್ಛತೆಯನ್ನು ಕಾಪಾಡುವುದು ನಮ್ಮ ಸಾಮೂಹಿಕ ಜವಾಬ್ದಾರಿ ಮತ್ತು ಕರ್ತವ್ಯವಾಗಿದೆ. ನನ್ನ ನಾಲ್ಕನೇ ವಿನಂತಿಯು ಸ್ವದೇಶಿ ಮತ್ತು ಸ್ವಾವಲಂಬನೆಗೆ ಸಂಬಂಧಿಸಿದೆ. ನಾವು ಭಾರತೀಯ ಉತ್ಪನ್ನಗಳನ್ನು ಅಳವಡಿಸಿಕೊಳ್ಳಬೇಕು, ಭಾರತೀಯ ತಯಾರಕರು ಮತ್ತು ಕೈಗಾರಿಕೆಗಳನ್ನು ಬಲಪಡಿಸಬೇಕು. ‘ವೋಕಲ್ ಫಾರ್ ಲೋಕಲ್’ ಎಂಬ ಮಂತ್ರದೊಂದಿಗೆ ಬದುಕಬೇಕು. ನನ್ನ ಐದನೇ ವಿನಂತಿಯು ದೇಶದ ಸೌಂದರ್ಯವನ್ನು ನೋಡುವುದಕ್ಕೆ ಸಂಬಂಧಿಸಿದ್ದಾಗಿದೆ. ನಾವು ನಮ್ಮ ದೇಶವನ್ನು ತಿಳಿಯಬೇಕು, ದೇಶದ ಮೂಲೆ ಮೂಲೆಗಳಿಗೆ ಪ್ರವಾಸ ಮಾಡಬೇಕು ಮತ್ತು ದೇಶೀಯ ಪ್ರವಾಸೋದ್ಯಮವನ್ನು ಉತ್ತೇಜಿಸಬೇಕು.
ಸ್ನೇಹಿತರೇ,
ಮಂಡ್ಯವು ಕಠಿಣ ಪರಿಶ್ರಮದ ರೈತರ ನಾಡು. ನನ್ನ ಆರನೇ ವಿನಂತಿಯು ರೈತರಿಗೆ—ಅವರು ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಯತ್ತ ಸಾಗಬೇಕು. ನನ್ನ ಏಳನೇ ವಿನಂತಿಯು ಆರೋಗ್ಯಕರ ಆಹಾರಕ್ಕೆ ಸಂಬಂಧಿಸಿದ್ದಾಗಿದೆ. ಈಗ ನಮ್ಮ ನಡುವೆ ಗೌರವಾನ್ವಿತ ಶ್ರೀ ದೇವೇಗೌಡ ಅವರು ಉಪಸ್ಥಿತರಿದ್ದಾರೆ. ಅವರು ‘ರಾಗಿ ಮುದ್ದೆ’ಯನ್ನು ಜನಪ್ರಿಯಗೊಳಿಸಲು ಹೆಸರುವಾಸಿಯಾಗಿದ್ದಾರೆ. ರಾಗಿಯ ಮಹತ್ವ ಈ ಇಡೀ ಪ್ರದೇಶಕ್ಕೆ ತಿಳಿದಿದೆ. ಯುವ ಪೀಳಿಗೆಯೂ ತಮ್ಮ ಆಹಾರದಲ್ಲಿ ಸಿರಿಧಾನ್ಯಗಳನ್ನು ಸೇರಿಸಿಕೊಳ್ಳಬೇಕು. ನಮ್ಮ ದೇಶದಲ್ಲಿ ಸ್ಥೂಲಕಾಯವು ದೊಡ್ಡ ಸವಾಲಾಗಿದೆ. ಇದನ್ನು ಎದುರಿಸಲು, ಆಹಾರದಲ್ಲಿ ಎಣ್ಣೆಯ ಪ್ರಮಾಣವನ್ನು ಶೇಕಡಾ 10 ರಷ್ಟು ಕಡಿಮೆ ಮಾಡಲು ಪ್ರಯತ್ನಿಸಿ. ನನ್ನ ಎಂಟನೇ ವಿನಂತಿಯು ಯೋಗ, ಕ್ರೀಡೆ ಮತ್ತು ಫಿಟ್‌ನೆಸ್ ಗೆ ಸಂಬಂಧಿಸಿದೆ. ನಾವೆಲ್ಲರೂ ಇವುಗಳನ್ನು ನಮ್ಮ ಜೀವನದ ಭಾಗವಾಗಿಸಿಕೊಳ್ಳಬೇಕು. ನನ್ನ ಒಂಬತ್ತನೇ ವಿನಂತಿಯು ಸೇವಾ ಮನೋಭಾವಕ್ಕೆ ಸಂಬಂಧಿಸಿದೆ, ಇದನ್ನು ನೀವು ನಿಮ್ಮ ಕಾರ್ಯಗಳ ಮೂಲಕ ನಿರಂತರವಾಗಿ ಸಾಬೀತುಪಡಿಸುತ್ತಿದ್ದೀರಿ.
ಗೆಳೆಯರೇ,
ಅಗತ್ಯವಿರುವವರಿಗೆ ಸೇವೆ ಮಾಡುವುದು ಸಮಾಜವನ್ನು ಬಲಪಡಿಸುತ್ತದೆ, ಅದು ನಿಮ್ಮ ಜೀವನಕ್ಕೆ ದೊಡ್ಡ ಉದ್ದೇಶವನ್ನು ನೀಡುತ್ತದೆ. ನಾವೆಲ್ಲರೂ ಈ ಒಂಬತ್ತು ವಿನಂತಿಗಳ ಮೇಲೆ ಪ್ರಾಮಾಣಿಕತೆ ಮತ್ತು ಸಂಕಲ್ಪದೊಂದಿಗೆ ಮುಂದೆ ಸಾಗಿದರೆ, ನಾವು ಅಭಿವೃದ್ಧಿ ಹೊಂದಿದ ಕರ್ನಾಟಕ ಮತ್ತು ಅಭಿವೃದ್ಧಿ ಹೊಂದಿದ ಭಾರತದತ್ತ ವೇಗವಾಗಿ ಸಾಗಬಹುದು. ಮತ್ತೊಮ್ಮೆ, ಈ ಸಂದರ್ಭದಲ್ಲಿ ನಿಮ್ಮೆಲ್ಲರಿಗೂ ನಾನು ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಈ ಪವಿತ್ರ ಸಂದರ್ಭದಲ್ಲಿ, ಈ ಪುಣ್ಯಭೂಮಿಯಲ್ಲಿ, ಈ ತಪೋಭೂಮಿಯಲ್ಲಿ ನನ್ನನ್ನು ಆಹ್ವಾನಿಸಿ, ನಿಮ್ಮೊಂದಿಗೆ ಕೆಲವು ಕ್ಷಣಗಳನ್ನು ಕಳೆಯುವ ಅವಕಾಶ ನೀಡಿದ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳಿಗೆ ಮತ್ತು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠಕ್ಕೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ನಿಮ್ಮೆಲ್ಲರಿಗೂ ನಾನು ಹೃತ್ಪೂರ್ವಕವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಎಲ್ಲರಿಗೂ ಧನ್ಯವಾದಗಳು. ಅಭಿನಂದನೆಗಳು. ತುಂಬು ಧನ್ಯವಾದಗಳು.
ಗಮನಿಸಿ: ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿತ್ತು.
*****
Speaking at the inauguration of Sri Guru Bhairavaikya Mandira in Mandya, Karnataka. https://t.co/qvYxPUNhYA
— Narendra Modi (@narendramodi) April 15, 2026
भारत, हजारों वर्षों से चलती आ रही एक जीवंत सभ्यता है।
— PMO India (@PMOIndia) April 15, 2026
दुनिया में बहुत कम ऐसे उदाहरण मिलते हैं जहां परंपराएं इतनी लंबी अवधि तक निरंतर बनी रहती हैं: PM @narendramodi
हमारे समाज में समय-समय पर ऐसे महान व्यक्तित्व आते रहे हैं,
— PMO India (@PMOIndia) April 15, 2026
जो केवल आध्यात्मिक मार्गदर्शन तक सीमित नहीं रहे।
वे लोगों के बीच रहे, उन्होंने लोगों के सुख-दुख को समझा, उनके संघर्ष को महसूस किया और समाज को दुख से, पीड़ा से, कठिनाई से बाहर निकालने का रास्ता दिखाया: PM @narendramodi
मेरा आठवां आग्रह योग, खेल और फिटनेस से जुड़ा है। हम सभी को इन्हें अपने जीवन का हिस्सा बनाना चाहिए।
— PMO India (@PMOIndia) April 15, 2026
मेरा नौवां आग्रह सेवा भावना से जुड़ा है: PM @narendramodi
मेरा छठा आग्रह किसानों से है कि वे प्राकृतिक खेती की ओर बढ़ें।
— PMO India (@PMOIndia) April 15, 2026
मेरा सातवां आग्रह स्वस्थ खानपान से जुड़ा है। हमारे बीच आदरणीय श्री देवेगौड़ा जी मौजूद हैं। वे ‘रागी मुद्दे’ को लोकप्रिय बनाने के लिए जाने जाते हैं। ये पूरा क्षेत्र रागी के महत्व को समझता है। युवा पीढ़ी भी मिलेट्स को…
मेरा पहला आग्रह है कि हम सभी पानी बचाने और उसके बेहतर प्रबंधन का संकल्प लें।
— PMO India (@PMOIndia) April 15, 2026
मेरा दूसरा आग्रह पेड़ और प्रकृति से जुड़ा है। ‘एक पेड़ मां के नाम’ अभियान के तहत करोड़ों लोगों ने अपनी माताओं के नाम पर पेड़ लगाए हैं। हम भी अपनी मां के सम्मान में पेड़ लगाएं और धरती माता की रक्षा का…