ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆ, ಕೃಷಿ ಕ್ಷೇತ್ರ ಮತ್ತು ಪೂರಕ ವಲಯದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಪೋಲ್ಯಾಂಡ್ ನಡುವೆ ಒಪ್ಪಂದಕ್ಕೆ ಅಂಕಿತ ಹಾಕಲು ತನ್ನ ಅನುಮೋದನೆ ನೀಡಿದೆ.
ಈ ಒಪ್ಪಂದವು, ಪ್ರಸಕ್ತ ಕೃಷಿ ಸನ್ನಿವೇಶ, ಬೆಳೆಗಳ ಆರೋಗ್ಯದ ಸ್ಥಿತಿ, ಅಪಾಯಕಾರಿ ಜೀವಿಗಳಿಂದ ಎದುರಾಗುವ ಅಪಾಯ ಮತ್ತು ಪ್ರಾಣಿಗಳ ಸೋಂಕಿನ ಕಾಯಿಲೆಗಳಿಂದ ಎದುರಾಗುವ ಅಪಾಯ ಕುರಿತ ಮಾಹಿತಿಯ ವಿನಿಮಯ ಸೇರಿದಂತೆ ಕೃಷಿ ಮತ್ತು ಪೂರಕ ವಲಯದ ವಿವಿಧ ಚಟುವಟಿಕೆಗಳನ್ನು ಒಳಗೊಂಡಿರುತ್ತದೆ. ಕೃಷಿ ಮತ್ತು ಕೃಷಿ -ಆಹಾರ ಸಂಸ್ಕರಣೆ ಕುರಿತ ಮೇಳಗಳು, ವಸ್ತುಪ್ರದರ್ಶನ, ವಿಚಾರ ಸಂಕಿರಣ ಮತ್ತು ಸಮಾವೇಶಗಳಲ್ಲಿ ಪಾಲ್ಗೊಳ್ಳುವುದು; ಒಪ್ಪಂದ ಮಾಡಿಕೊಂಡ ಪಕ್ಷಕಾರರ ರಾಷ್ಟ್ರಗಳ ನಡುವೆ ಕೃಷಿ ಆಹಾರ ವ್ಯಾಪಾರ ಅಥವಾ ಬೆಂಬಲದ ಉಪಕ್ರಮ ಸೇರಿದಂತೆ ಜಂಟಿ ಆರ್ಥಿಕ ಪಕ್ರಮಗಳ ಅಭಿವೃದ್ಧಿಯನ್ನೂ ಇದು ಒಳಗೊಂಡಿರುತ್ತದೆ.
ಎರಡೂ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಕಾರ್ಯ ಪಡೆ (ಜೆ.ಡಬ್ಲ್ಯು.ಜಿ.) ಸ್ಥಾಪನೆಗೂ ಈ ಒಪ್ಪಂದ ಅವಕಾಶ ನೀಡುತ್ತದೆ. ಈ ಜೆಡಬ್ಲ್ಯುಜಿಯು ಒಪ್ಪಂದದ ಜಾರಿಯ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳಿಗೆ ಪರಿಹಾರವನ್ನೂ ಒದಗಿಸುತ್ತದೆ ಮತ್ತು ಸಹಕಾರದ ಯೋಜನೆಗಳನ್ನು ರೂಪಿಸುತ್ತದೆ.