ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು ಕೃಷಿ ಮತ್ತು ಆಹಾರ ಸಂಬಂಧಿತ ಕೈಗಾರಿಕೆಗಳ ಕ್ಷೇತ್ರದಲ್ಲಿನ ಸಹಕಾರಕ್ಕಾಗಿ ಭಾರತ ಮತ್ತು ಕಿರ್ಗಿಸ್ತಾನ್ ನಡುವೆ ಒಪ್ಪಂದಕ್ಕೆ ಅಂಕಿತ ಹಾಕುವ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಪ್ರಸ್ತಾಪಕ್ಕೆ ತನ್ನ ಅನುಮೋದನೆ ನೀಡಿದೆ.
ಭಾರತ ಮತ್ತು ಕಿರ್ಗಿಸ್ತಾನ್ ನಡುವಿನ ಉದ್ದೇಶಿತ ಒಪ್ಪಂದವು ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳ ವಿವಿಧ ಚಟುವಟಿಕೆಗಳಿಗೆ ಅನ್ವಯಿಸುತ್ತದೆ. ಇದರಲ್ಲಿ ಪಶು ತಳಿ ಸಂವರ್ಧನೆ, ಏವಿಯನ್ಇನ್ ಫ್ಲುಯನ್ಜಾ (ಹಕ್ಕಿ ಜ್ವರ) ಮತ್ತು ಕಾಲು ಮತ್ತುಬಾಯಿ ರೋಗ (ಎಫ್.ಎಂ.ಡಿ.); ಪಶು ಔಷಧ; ಸಸ್ಯ ಬೆಳೆಸುವುದು, ಆಧುನಿಕ ತಂತ್ರಜ್ಞಾನ ಆಧಾರಿತ ಬೀಜಗಳ ಉತ್ಪಾದನೆ, ಬೀಜ ಪ್ರಮಾಣೀಕರಣ; ವಿವಿಧ ರೀತಿಯ ನೀರಾವರಿ ಪರಿಚಯಿಸುವುದು ಮತ್ತು ಭಾರತೀಯ ಪ್ರಾಯೋಗಿಕ ಯೋಜನೆ ಸ್ಥಾಪನೆ; ಆಹಾರ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ತಂತ್ರಜ್ಞಾನದ ಸಮರ್ಥ ಬಳಕೆ ಮಾಹಿತಿಯನ್ನು ತಂತ್ರಜ್ಞಾನ ಕ್ಷೇತ್ರಗಳ ಸಂಶೋಧನೆಯ ಮಾಹಿತಿ ಮತ್ತು ಅನುಭವದ ವಿನಿಮಯವನ್ನು ಒಳಗೊಂಡಿರುತ್ತದೆ ಆದರೆ ಅದು ಅಷ್ಟಕ್ಕೇ ಸೀಮಿತವಾಗಿರುವುದಿಲ್ಲ.
ಮಾಹಿತಿ ವಿನಿಮಯದ ಜೊತೆಗೆ, ಈ ತಿಳಿವಳಿಕೆ ಒಪ್ಪಂದವು ಸಸ್ಯ ವೈವಿಧ್ಯದ ಹಕ್ಕುಗಳ ರಕ್ಷಣೆ; ಕೃಷಿ, ಆಹಾರ ವ್ಯಾಪಾರ ಮತ್ತು ತೋಟಗಾರಿಕೆ; ಕೃಷಿ ಸಂಶೋಧನೆ ಮತ್ತು ಶಿಕ್ಷಣ, ತೋಟಗಾರಿಕಾ ಸಂಶೋಧನೆ ಮತ್ತುಶಿಕ್ಷಣ ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ; ಆಕ್ವಾಕಲ್ಚರ್ ಮತ್ತು ಮೀನುಗಾರಿಕೆ, ಇತ್ಯಾದಿಕ್ಷೇತ್ರದಲ್ಲಿನ ಸಹಕಾರ ಒದಗಿಸುತ್ತದೆ.
ಈ ಒಪ್ಪಂದವು ಎರಡೂ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಕಾರ್ಯಗುಂಪು ರಚಿಸಲು ಅವಕಾಶ ನೀಡುತ್ತದೆ, ಇದು ಸಹಕಾರದ ಯೋಜನೆಗಳನ್ನು ಸಿದ್ಧಪಡಿಸುತ್ತದೆ ಮತ್ತು ಈ ಒಪ್ಪಂದದ ಜಾರಿಯ ಸಂದರ್ಭದಲ್ಲಿ ಎದುರಾಗುವ ಮತ್ತು ಪಕ್ಷಕಾರರು ಗುರುತಿಸುವ ಸಮಸ್ಯೆಗಳಿಗೆ ಪರಿಹಾರವನ್ನೂ ಒದಗಿಸುತ್ತದೆ.
ಈ ಒಪ್ಪಂದವು ಅಂಕಿತ ಹಾಕಿದ ದಿನಾಂಕದಿಂದ ಜಾರಿಗೆ ಬರಲಿದೆ ಮತ್ತು ಐದು ವರ್ಷಗಳ ಅವಧಿಗೆ ಚಾಲ್ತಿಯಲ್ಲಿರುತ್ತದೆ ಹಾಗೂ ಈ ಒಪ್ಪಂದದ ಅವಧಿ ಮುಗಿಯುವ ಕನಿಷ್ಠ ಆರು ತಿಂಗಳುಗಳ ಮುನ್ನ ಅದನ್ನು ರದ್ದು ಮಾಡುವ ಕುರಿತಂತೆ ಇಬ್ಬರೂ ಪಕ್ಷಕಾರರು ಮತ್ತೊಬ್ಬರಿಗೆ ರಾಜತಾಂತ್ರಿಕ ಮಾರ್ಗದಲ್ಲಿ ಲಿಖಿತ ಮೂಲಕ ನೋಟಿಸ್ ನೀಡದಿದ್ದಲ್ಲಿ ಒಪ್ಪಂದವು ಮುಂದಿನ ಐದು ವರ್ಷಗಳ ಅವಧಿಗೆ ತಂತಾನೇ ವಿಸ್ತರಣೆ ಆಗುತ್ತದೆ.