Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತ್‌ನ ಪುನಃಸ್ಥಾಪಿತ ಸೋಮನಾಥ ದೇವಾಲಯ ಉದ್ಘಾಟನೆಯಾಗಿ 75 ವರ್ಷಗಳು, ಸೋಮನಾಥ ಅಮೃತ ಮಹೋತ್ಸವದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಗಿ

ಗುಜರಾತ್‌ನ ಪುನಃಸ್ಥಾಪಿತ ಸೋಮನಾಥ ದೇವಾಲಯ ಉದ್ಘಾಟನೆಯಾಗಿ 75 ವರ್ಷಗಳು, ಸೋಮನಾಥ ಅಮೃತ ಮಹೋತ್ಸವದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಗಿ


ಗುಜರಾತ್‌ನ ಪುನಃಸ್ಥಾಪಿತ ಸೋಮನಾಥ ದೇವಾಲಯ ಉದ್ಘಾಟನೆಗೊಂಡು 75 ವರ್ಷಗಳು ತುಂಬಿದ ಹಿನ್ನೆಲೆಯಲ್ಲಿ ಇಂದು ಸೋಮನಾಥ ಅಮೃತ ಮಹೋತ್ಸವದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಭಾಗವಹಿಸಿದ್ದರು.

ಸೋಮನಾಥ ದೇವಾಲಯ ಸಂಕೀರ್ಣದಲ್ಲಿ 75ನೇ ಪ್ರತಿಷ್ಠಾಪನಾ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ಭವ್ಯ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಈ ಕಾರ್ಯಕ್ರಮವನ್ನು ಕೇವಲ ಒಂದು ವಿಧ್ಯುಕ್ತ ಸಂದರ್ಭಕ್ಕಿಂತ ಹೆಚ್ಚಾಗಿ, ಭಾರತದ ಶಾಶ್ವತ/ಚಿರಂತನ ಪ್ರಜ್ಞೆ ಮತ್ತು ನಾಗರಿಕತೆಯ ಸ್ಥಿತಿಸ್ಥಾಪಕತ್ವದ ಘೋಷಣೆ ಎಂದು ಶ್ಲಾಘಿಸಿದರು. ಪವಿತ್ರ ಸ್ಥಳದ ಪುನಃಸ್ಥಾಪನೆಯನ್ನು ಸಂಭ್ರಮಿಸಲು ನೆರೆದಿದ್ದ ಮಹತ್ವದ ಸಭೆಯು ವೇದ ಮಂತ್ರಗಳು, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಸಾಗರ ಅಲೆಗಳ ಘರ್ಜನೆಗಳು ಒಟ್ಟುಗೂಡಿದಂತೆ, ರಾಷ್ಟ್ರೀಯ ಹೆಮ್ಮೆಯೊಂದಿಗೆ ಬೆಸೆದುಕೊಂಡಿರುವ ಸ್ವರ್ಗೀಯ ಭಕ್ತಿಗೆ ಸಾಕ್ಷಿಯಾಯಿತು.

ಪ್ರಾಚೀನ ಧರ್ಮಗ್ರಂಥಗಳ ಜ್ಞಾನವನ್ನು ಉಲ್ಲೇಖಿಸುತ್ತಾ, ಪ್ರಧಾನ ಮಂತ್ರಿಯವರು ಸೃಷ್ಟಿಯು ದೈವಿಕತೆಯಿಂದ ಹೇಗೆ ಹುಟ್ಟುತ್ತದೆ ಮತ್ತು ಅದರಲ್ಲಿ ಮತ್ತೆ ವಿಲೀನಗೊಳ್ಳುತ್ತದೆ ಎಂಬುದನ್ನು ವಿವರಿಸಿದರು. “ಯತೋ ಜಯತೇ ಪಲ್ಯತೇ ಯೇನ ವಿಶ್ವಂ, ತಮೀಷಂ ಭಜೇ ಲಿಯತೇ ಯತ್ರ ವಿಶ್ವಂ, ಇಂದು ನಾವು ದೇವರ ನಿವಾಸದ ಪುನರ್ನಿರ್ಮಾಣದ ಉತ್ಸವವನ್ನು ಆಚರಿಸುತ್ತಿದ್ದೇವೆ” ಎಂದು ಶ್ರೀ ಮೋದಿ ವಿವರಿಸಿದರು. ತಮ್ಮ ವೈಯಕ್ತಿಕ ಭಕ್ತಿಯನ್ನು ಹಂಚಿಕೊಂಡ ಪ್ರಧಾನಮಂತ್ರಿಯವರು, ದಾದಾ ಸೋಮನಾಥನ ಕಟ್ಟಾ ಭಕ್ತನಾಗಿ ದೇವಾಲಯಕ್ಕೆ ತಾವು ನೀಡಿದ ಅಸಂಖ್ಯಾತ ಭೇಟಿಗಳನ್ನು ನೆನಪಿಸಿಕೊಂಡರು. “ನಾನು ದೇವರ ಮುಂದೆ ಲೆಕ್ಕವಿಲ್ಲದಷ್ಟು ಬಾರಿ ನಮಸ್ಕರಿಸಿದ್ದೇನೆ, ಆದರೆ ಇಂದು ನಾನು ಇಲ್ಲಿಗೆ ಬರುತ್ತಿರುವಾಗ, ಕಾಲಾನುಕ್ರಮದ  ಪ್ರಯಾಣವು ನನಗೆ ಒಂದು ಸಂತೋಷಕರ ಅನುಭವವನ್ನು ನೀಡುತ್ತಿತ್ತು” ಎಂದು ಶ್ರೀ ಮೋದಿ ಹೇಳಿದರು.

ಸೋಮನಾಥ ಸ್ವಾಭಿಮಾನ್ ಪರ್ವ್ ಸಂದರ್ಭದಲ್ಲಿ ಕೆಲವೇ ತಿಂಗಳುಗಳ ಹಿಂದೆ ತಮ್ಮ ಇತ್ತೀಚಿನ ಭೇಟಿಯನ್ನು ನೆನಪಿಸಿಕೊಂಡ ಪ್ರಧಾನಮಂತ್ರಿ, ಎರಡೂ ಸ್ಮರಣಾರ್ಥಗಳನ್ನು ನಿಕಟ ಅನುಕ್ರಮದಲ್ಲಿ ವೀಕ್ಷಿಸುವ ವಿಶಿಷ್ಟ ಮಹತ್ವವನ್ನು ಎತ್ತಿ ತೋರಿಸಿದರು. “ಮೊದಲ ವಿನಾಶದ 1000 ವರ್ಷಗಳ ನಂತರವೂ ಸೋಮನಾಥ ಅವಿನಾಶಿಯಾಗಿ ಉಳಿಯುವ ಹೆಮ್ಮೆ ಮತ್ತು ಇಂದು ಆಧುನಿಕ ರೂಪದ ಪ್ರಾಣ ಪ್ರತಿಷ್ಠೆಯ 75 ವರ್ಷಗಳು, ಸಾವಿರ ವರ್ಷಗಳ ಅಮರ ಪ್ರಯಾಣವನ್ನು ಅನುಭವಿಸುವ ಅವಕಾಶ ನಮಗೆ ಸಿಕ್ಕಿದೆ” ಎಂದು ಶ್ರೀ ಮೋದಿ ದೃಢವಾಗಿ ನುಡಿದರು.

1951ರ ಪ್ರತಿಷ್ಠಾಪನೆಯ ಐತಿಹಾಸಿಕ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿ, ಇದು ಸಾಮಾನ್ಯ ಸಂದರ್ಭವಲ್ಲ ಎಂದು ಹೇಳಿದರು. “ಭಾರತ 1947ರಲ್ಲಿ ಸ್ವತಂತ್ರವಾದರೆ, 1951ರಲ್ಲಿ, ಸೋಮನಾಥದ ಪ್ರಾಣ ಪ್ರತಿಷ್ಠೆಯು ಭಾರತದ ಸ್ವತಂತ್ರ ಪ್ರಜ್ಞೆಯನ್ನು ಘೋಷಿಸಿತು” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಭಾರತ ಸ್ವಾತಂತ್ರ್ಯ ಪಡೆದ ಕೇವಲ ನಾಲ್ಕು ವರ್ಷಗಳ ನಂತರ, 1951ರಲ್ಲಿ ದೇವಾಲಯದ ಪುನರ್ನಿರ್ಮಾಣದ ಮಹತ್ವವನ್ನು ಪ್ರತಿಬಿಂಬಿಸುತ್ತಾ, ಪ್ರಧಾನಮಂತ್ರಿಯವರು ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 500 ರಾಜಪ್ರಭುತ್ವದ ರಾಜ್ಯಗಳ ರಾಜಕೀಯ ಏಕೀಕರಣ ಮತ್ತು ಸೋಮನಾಥವನ್ನು ಪುನರ್ನಿರ್ಮಿಸುವ ಅವರ ದೃಢಸಂಕಲ್ಪದ ನಡುವೆ ಗಮನಾರ್ಹವಾದ ಸಮಾನಾಂತರ ಹೋಲಿಕೆಯನ್ನು ಮಾಡಿದರು. “ರಾಷ್ಟ್ರವು ವಿದೇಶಿ ಸಂಕೋಲೆಗಳಿಂದ ತನ್ನನ್ನು ತಾನು ಮುಕ್ತಗೊಳಿಸಿಕೊಂಡಾಗ, ಸೋಮನಾಥದ ಪುನಃಸ್ಥಾಪನೆಯು ಅದೇ ಕಾಲದಲ್ಲಿ ಭಾರತವು ಕೇವಲ ಸ್ವತಂತ್ರವಾಗಿಲ್ಲ, ಅದು ಈಗಾಗಲೇ ತನ್ನ ಪ್ರಾಚೀನ ವೈಭವವನ್ನು ಮರಳಿ ಪಡೆಯುತ್ತಿದೆ ಎಂದು ಜಗತ್ತಿಗೆ ಘೋಷಿಸಿತು” ಎಂದು ಶ್ರೀ ಮೋದಿ ನುಡಿದರು.

ಸಂದರ್ಭದ ಬಹು-ಹಂತದ ಮಹತ್ವವನ್ನು ವಿವರಿಸುತ್ತಾ, ಪ್ರಧಾನಮಂತ್ರಿಯವರು ತಾವು ಕೇವಲ 75 ವರ್ಷಗಳ ಹಿಂದಿನ ಅವಲೋಕನವನ್ನು ನೋಡುತ್ತಿರುವುದಲ್ಲ ಎಂದು ಹೇಳಿದರು. “ವಿನಾಶದಲ್ಲಿಯೂ ಸೃಷ್ಟಿಯ ನಿರ್ಧಾರವನ್ನು,   ಸೋಮನಾಥನು ಅದನ್ನು ಈಡೇರಿಸಿದ್ದನ್ನು ನಾನು ಇಲ್ಲಿ ನೋಡುತ್ತಿದ್ದೇನೆ” ಎಂದು ಶ್ರೀ ಮೋದಿ ಹೇಳಿದರು. ಈ ಪವಿತ್ರ ಆವರಣದಲ್ಲಿ ಸುಳ್ಳಿನ ಮೇಲೆ ಸತ್ಯವು ಶಾಶ್ವತ ವಿಜಯ ಸಾರುತ್ತಿರುವುದನ್ನು ಅವರು ವಿವರಿಸಿದರು.

ಸಾರ್ವತ್ರಿಕ ಕಲ್ಯಾಣದ ಪಾಠಗಳನ್ನು ನೀಡಿದ ಸಹಸ್ರಾರು ವರ್ಷಗಳ ಆಧ್ಯಾತ್ಮಿಕ ಪ್ರಜ್ಞೆಯನ್ನು ಸಾಕ್ಷೀಕರಿಸುವ  ಬಗ್ಗೆ ಪ್ರಧಾನಮಂತ್ರಿ ಮಾತನಾಡಿದರು. ಸೋಮನಾಥದ ಸ್ಥಿತಿಸ್ಥಾಪಕತ್ವದಲ್ಲಿ ಸಾಕಾರಗೊಂಡಿರುವ ಭಾರತದ ಅವಿನಾಶೀ ಸಾರದ ಬಗ್ಗೆ ಅವರು ತಮ್ಮ ದೃಷ್ಟಿಕೋನವನ್ನು ವ್ಯಕ್ತಪಡಿಸಿದರು. “ಶತಮಾನಗಳ ದುಷ್ಟ ಪ್ರಯತ್ನಗಳಿಂದ ಅಳಿಸಲಾಗದ ಭಾರತದ ಅವಿನಾಶೀ  ರೂಪವನ್ನು ನಾನು ಇಲ್ಲಿ ನೋಡುತ್ತಿದ್ದೇನೆ” ಎಂದು ಶ್ರೀ ಮೋದಿ ನುಡಿದರು.

ಸೋಮನಾಥ ಅಮೃತ ಮಹೋತ್ಸವದ ಆಚರಣೆಯ ಭವಿಷ್ಯದ ಆಯಾಮವನ್ನು ಒತ್ತಿ ಹೇಳುತ್ತಾ, ಅವರು “ಇದು ಕೇವಲ ಭೂತಕಾಲದ ಆಚರಣೆಯಲ್ಲ, ಇದು ಮುಂದಿನ ಒಂದು ಸಾವಿರ ವರ್ಷಗಳ ಭಾರತದ ಸ್ಫೂರ್ತಿಯೂ ಆಗಿದೆ” ಎಂದು ದೃಢಪಡಿಸಿದರು. ಈ ಮಹತ್ವದ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಎಲ್ಲಾ ದೇಶವಾಸಿಗಳು ಮತ್ತು ಭಗವಾನ್ ಸೋಮನಾಥನ ಕೋಟ್ಯಂತರ ಭಕ್ತರಿಗೆ ತಮ್ಮ ಅಭಿನಂದನೆಗಳನ್ನು ಸಲ್ಲಿಸಿದರು.

ರಾಷ್ಟ್ರೀಯ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲಿಗೆ ದಿನವನ್ನು ಜೋಡಿಸುತ್ತ, ಮೇ 11 ಭಾರತವು 1998ರಲ್ಲಿ ನಡೆಸಿದ ಪೋಖ್ರಾನ್ ಪರಮಾಣು ಪರೀಕ್ಷೆಗಳ ವಾರ್ಷಿಕೋತ್ಸವವನ್ನು ಸಹ ಆಚರಿಸುತ್ತದೆ ಎಂದು ಅವರು ಸಭೆಗೆ ನೆನಪಿಸಿದರು. ಭಾರತೀಯ ವಿಜ್ಞಾನಿಗಳ ಸಾಮರ್ಥ್ಯವನ್ನು ಪ್ರದರ್ಶಿಸುವ ಮೂಲಕ ದೇಶವು ಮೇ 11 ರಂದು ಮೂರು ಪರಮಾಣು ಪರೀಕ್ಷೆಗಳನ್ನು ಹೇಗೆ ನಡೆಸಿತು ಎಂಬುದನ್ನು ಅವರು ವಿವರಿಸಿದರು. ಭಾರತದ ಅಚಲ ರಾಜಕೀಯ ಸಂಕಲ್ಪಕ್ಕೆ ಪುರಾವೆಯಾಗಿ ಮೇ 13 ರಂದು ನಡೆದ ಬಳಿಕದ ಪರೀಕ್ಷೆಗಳನ್ನು ಅವರು ಎತ್ತಿ ತೋರಿಸಿದರು. “ಆ ಸಮಯದಲ್ಲಿ ಇಡೀ ಪ್ರಪಂಚದ ಒತ್ತಡ ಭಾರತದ ಮೇಲೆ ಇತ್ತು, ಆದರೆ ಅಟಲ್ ಜೀ ಅವರ ನೇತೃತ್ವದಲ್ಲಿ, ಅಂದಿನ ಸರ್ಕಾರವು ನಮಗೆ, ರಾಷ್ಟ್ರವೇ ಮೊದಲು, ಜಗತ್ತಿನ ಯಾವುದೇ ಶಕ್ತಿಯು ಭಾರತವನ್ನು ತಲೆಬಾಗಿಸುವಂತೆ ಮಾಡಲು ಅಥವಾ ಒತ್ತಡಕ್ಕೆ ಒಳಪಡಿಸಲು ಸಾಧ್ಯವಿಲ್ಲ ಎಂಬುದನ್ನು ತೋರಿಸಿತು” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಕಾರ್ಯಾಚರಣೆಯ ಹೆಸರಿನ ಮಹತ್ವವನ್ನು ವಿವರಿಸಿದ ಪ್ರಧಾನಮಂತ್ರಿ, ಆಳವಾದ ಸಾಂಸ್ಕೃತಿಕ ಕಾರಣಗಳಿಗಾಗಿ ಪೋಖ್ರಾನ್ ಪರಮಾಣು ಪರೀಕ್ಷೆಯನ್ನು ಆಪರೇಷನ್ ಶಕ್ತಿ ಎಂದು ಕರೆಯಲಾಗಿದೆ ಎಂದು ಹೇಳಿದರು. “ಶಿವನೊಂದಿಗೆ ಶಕ್ತಿಯನ್ನು ಪೂಜಿಸುವುದು ನಮ್ಮ ಸಂಪ್ರದಾಯವಾಗಿದೆ” ಎಂದು ಶ್ರೀ ಮೋದಿ ಹೇಳಿದರು. ಹಿಂದೂ ಪ್ರತಿಮಾಶಾಸ್ತ್ರವನ್ನು ಬಳಸಿಕೊಂಡು, ಅರ್ಧನಾರೀಶ್ವರ ಶಿವನು ಶಿವ ಮತ್ತು ಶಕ್ತಿಯ ಅವಿನಾಭಾವವನ್ನು ಪ್ರದರ್ಶಿಸುತ್ತಾನೆ ಎಂದು ಅವರು ವಿವರಿಸಿದರು. ಭಾರತದ ಮಿಷನ್ ಚಂದ್ರಯಾನ ಚಂದ್ರನ ಮೇಲೆ ಯಶಸ್ವಿಯಾಗಿ ಇಳಿದಾಗ, ಲ್ಯಾಂಡಿಂಗ್ ಸ್ಥಳಕ್ಕೆ ಅದೇ ತತ್ವಶಾಸ್ತ್ರಕ್ಕೆ ಅನುಗುಣವಾಗಿ ಹೆಸರಿಸಲಾಯಿತು ಎಂದು ಪ್ರಧಾನಮಂತ್ರಿ ನೆನಪಿಸಿಕೊಂಡರು. ವ್ಯುತ್ಪತ್ತಿ ಸಂಬಂಧವನ್ನು ಎತ್ತಿ ತೋರಿಸುತ್ತಾ, ಪ್ರಾಚೀನ ಜ್ಞಾನ ಮತ್ತು ಆಧುನಿಕ ಸಾಧನೆಯ ಸಂಗಮದ ಬಗ್ಗೆ ಅವರು ಸಂತೋಷ ವ್ಯಕ್ತಪಡಿಸಿದರು. “ಈ ಜ್ಯೋತಿರ್ಲಿಂಗವನ್ನು ಚಂದ್ರನ (ಸೋಮ) ಹೆಸರಿನ ನಂತರ ಸೋಮನಾಥ ಎಂದು ಕರೆಯಲಾಗುತ್ತಿರುವುದು ಎಷ್ಟು ಸಂತೋಷಕರವಾಗಿದೆ” ಎಂದು ಶ್ರೀ ಮೋದಿ ಹೇಳಿದರು.

ಶಿವ ಮತ್ತು ಶಕ್ತಿಯನ್ನು ಒಟ್ಟಿಗೆ ಪೂಜಿಸುವ ತತ್ವಶಾಸ್ತ್ರವು ಈಗ ಭಾರತದ ವೈಜ್ಞಾನಿಕ ಪ್ರಗತಿಗೆ ಹೇಗೆ ಸ್ಫೂರ್ತಿ ನೀಡುತ್ತದೆ ಎಂಬುದನ್ನು ಪ್ರಧಾನಮಂತ್ರಿ ಸ್ಪಷ್ಟಪಡಿಸಿದರು. “ಶಿವ ಮತ್ತು ಶಕ್ತಿಯ ನಮ್ಮ ಆರಾಧನೆಯು ದೇಶದ ವೈಜ್ಞಾನಿಕ ಪ್ರಗತಿಗೆ ಸ್ಫೂರ್ತಿಯಾಗಬೇಕು ಎಂಬ ಸಂಕಲ್ಪವು ಇಂದು ಸಾಕಾರಗೊಳ್ಳುವುದನ್ನು ನಾವು ನೋಡುತ್ತಿದ್ದೇವೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು. ಆಪರೇಷನ್ ಶಕ್ತಿ ವಾರ್ಷಿಕೋತ್ಸವದಂದು ಅವರು ಎಲ್ಲಾ ದೇಶವಾಸಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

ದೇವಾಲಯದ ಸಾವಿರ ವರ್ಷಗಳ ವಿನಾಶ ಮತ್ತು ಪುನರುಜ್ಜೀವನದ ಇತಿಹಾಸವನ್ನು ಅವಲೋಕಿಸಿದ, ಪ್ರಧಾನ ಮಂತ್ರಿಯವರು ಇತಿಹಾಸವನ್ನು ಪ್ರೇರೇಪಿಸಿದ ಅದಮ್ಯ ಚೈತನ್ಯದ ಬಗ್ಗೆ ಬೆಳಕು ಚೆಲ್ಲಿದರು.  ಘಜ್ನಿಯ ಮಹಮ್ಮದ್ ಮತ್ತು ಅಲಾವುದ್ದೀನ್ ಖಿಲ್ಜಿಯಂತಹ ಆಕ್ರಮಣಕಾರರ ಸತತ ದಾಳಿಗಳ ಹೊರತಾಗಿಯೂ, ದೇವಾಲಯವನ್ನು ನಿಷ್ಠಾವಂತ ಆಡಳಿತಗಾರರಾದ ರಾಜ ಭೋಜ, ಭೀಮದೇವ್ I, ಕುಮಾರಪಾಲ, ಮಹಿಪಾಲ I ಮತ್ತು ರಾವ್ ಖಂಗರ್ ಪದೇ ಪದೇ ಪುನರ್ನಿರ್ಮಿಸಿದರು, ಪ್ರತಿಯೊಬ್ಬರೂ ಅದಮ್ಯ ಆಧ್ಯಾತ್ಮಿಕ ಕರೆಗೆ ಓಗೊಟ್ಟರು. “ನಾಶಪಡಿಸಿದವರು ಕಲ್ಲು ಮತ್ತು ಗಾರೆ ಮಾತ್ರ ನೋಡಿದರು, ಆದರೆ ಅವರು ನಮ್ಮ ನಾಗರಿಕತೆಯ ಬೌದ್ಧಿಕ ಮತ್ತು ಆಧ್ಯಾತ್ಮಿಕ ಶಕ್ತಿಯನ್ನು ಎಂದಿಗೂ ಅರ್ಥಮಾಡಿಕೊಳ್ಳಲಿಲ್ಲ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ದೇಶದ ಸಾಂಸ್ಕೃತಿಕ ಚೇತರಿಕೆಯನ್ನು ಗಮನಕ್ಕೆ ತಂದ ಪ್ರಧಾನಮಂತ್ರಿ, ಈ ಪ್ರದೇಶದ ಪವಿತ್ರ ಪರಂಪರೆಯನ್ನು ಸಂರಕ್ಷಿಸಿದ ಋಷಿಗಳಾದ ಲಕುಲೀಶ ಮತ್ತು ಸೋಮ ಶರ್ಮಾ ಅವರಂತಹ ದಿಗ್ಗಜರ ಕೊಡುಗೆಗಳನ್ನು ಶ್ಲಾಘಿಸಿದರು. ಭವ ಬೃಹಸ್ಪತಿ, ಪಶುಪತಾಚಾರ್ಯರು ಮತ್ತು ಪ್ರದೇಶದ ಆಧ್ಯಾತ್ಮಿಕ ಸಂಪ್ರದಾಯಗಳನ್ನು ಉಳಿಸಿಕೊಂಡ ಅನೇಕ ವಿದ್ವಾಂಸರ ವಿದ್ವತ್ಪೂರ್ಣ ಕೊಡುಗೆಗಳನ್ನು ಅವರು ಶ್ಲಾಘಿಸಿದರು. ಪ್ರದೇಶದ ಪ್ರಜ್ಞೆಯನ್ನು ಕಾಪಾಡಿದ ವಿಶಾಲದೇವ್ ಮತ್ತು ತ್ರಿಪುರಾಂತಕ್ ಅವರಂತಹ ಬೌದ್ಧಿಕ ವ್ಯಕ್ತಿಗಳನ್ನು ಪ್ರಧಾನಮಂತ್ರಿ ಮೋದಿ ಗುರುತಿಸಿದರು. ಪೂಜ್ಯತೆಯ ವಲಯವನ್ನು ವಿಸ್ತರಿಸುತ್ತಾ, ಅವರು ವೀರ್ ಹಮೀರ್ಜಿ ಗೋಹಿಲ್, ವೀರ್ ವೆಗ್ದಾಜಿ ಭಿಲ್, ಪುಣ್ಯಶ್ಲೋಕ ಅಹಲ್ಯಾಬಾಯಿ ಹೋಳ್ಕರ್ ಜೀ, ಬರೋಡಾದ ಗಾಯಕ್ವಾಡ್‌ಗಳು, ಸೋಮನಾಥನ ಸೇವೆಗೆ ತಮ್ಮನ್ನು ತಾವು ಅರ್ಪಿಸಿಕೊಂಡ ಜಾಮ್ ಸಾಹೇಬ್ ಮಹಾರಾಜ ದಿಗ್ವಿಜಯ್ ಸಿಂಗ್ ಜೀ ಅವರಂತಹ ಹಲವಾರು ಇತರ ಮಹಾನ್ ವ್ಯಕ್ತಿಗಳನ್ನು ಹೆಸರಿಸಿದರು. ಸೋಮನಾಥದ ಪುನಃಸ್ಥಾಪನೆಯ ಆಧುನಿಕ ವಾಸ್ತುಶಿಲ್ಪಿಗಳಾದ ಸರ್ದಾರ್ ಪಟೇಲ್, ಡಾ. ರಾಜೇಂದ್ರ ಪ್ರಸಾದ್, ಕೆ.ಎಂ. ಮುನ್ಷಿ ಜೀ ಮತ್ತು ಅಂತಹ ಎಲ್ಲಾ ದೈವಿಕ ಆತ್ಮಗಳಿಗೆ ಅವರು ನಿರ್ದಿಷ್ಟವಾಗಿ ತಲೆಬಾಗಿ ನಮನ ಸಲ್ಲಿಸಿದರು. ಸಮಕಾಲೀನ ಜವಾಬ್ದಾರಿಗಾಗಿ ಅವರ ಪರಂಪರೆಯಿಂದ ತಾವು ಸ್ಫೂರ್ತಿ ಪಡೆದುದಾಗಿಯೂ ಹೇಳಿದರು. ” ಅವರ ಸ್ಮರಣೆ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದಲ್ಲದೆ, ಈ ಜವಾಬ್ದಾರಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸಬೇಕೆಂಬುದಕ್ಕೂ ನಮಗೆ ಸ್ಫೂರ್ತಿ ನೀಡುತ್ತದೆ” ಎಂದು ಶ್ರೀ ಮೋದಿ ದೃಢಪಡಿಸಿದರು.

ಭಾರತದ ವಿಶಾಲ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುತ್ತಾ, ಸಾಂಸ್ಕೃತಿಕ ತಾಣಗಳು ಸಾವಿರಾರು ವರ್ಷಗಳಿಂದ ದೇಶದ ಗುರುತಾಗಿವೆ ಎಂದು ಪ್ರಧಾನಮಂತ್ರಿ ಗಮನಿಸಿದರು. ಸ್ವಾತಂತ್ರ್ಯಾನಂತರದ ಭಾರತದಲ್ಲಿ ನೋವಿನ ಅಪಹಾಸ್ಯ/ವ್ಯಂಗ್ಯದತ್ತಲೂ ಅವರು ಬೆಟ್ಟು ಮಾಡಿದರು.  ಅಂತರರಾಷ್ಟ್ರೀಯ ಹೋಲಿಕೆಗಳನ್ನು ನೀಡುತ್ತಾ, ಪ್ರಪಂಚದ ಬೇರೆಡೆ, ಆಕ್ರಮಣಕಾರರಿಂದ ಪರಂಪರೆ ನಾಶವಾದ ರಾಷ್ಟ್ರಗಳು ನಂತರ ಅದನ್ನು ಪುನಃಸ್ಥಾಪಿಸಲು ಒಗ್ಗೂಡಿದವು ಎಂದು ಅವರು ಗಮನಿಸಿದರು. ಈ ಗುರಿಯತ್ತ ಸ್ಥಾಪಕ ನಾಯಕರು ಮಾಡಿದ ಅಪಾರ ಪ್ರಯತ್ನಗಳನ್ನು ಪ್ರಧಾನಮಂತ್ರಿ ಒಪ್ಪಿಕೊಂಡರು. ಆದಾಗ್ಯೂ, ನಾಯಕತ್ವದ ಒಳಗಿನಿಂದ ಅವರು ಎದುರಿಸಿದ ದುರದೃಷ್ಟಕರ ವಿರೋಧವನ್ನು ಸಹ ಅವರು ಉಲ್ಲೇಖಿಸಿದರು. “ಆದಾಗ್ಯೂ ಸರ್ದಾರ್ ಸಾಹಬ್ ಅವರ ಅಚಲವಾದ ಸಂಕಲ್ಪವು ರಾಷ್ಟ್ರವು ಶತಮಾನಗಳ ಅವಮಾನವನ್ನು ತೊಳೆದುಕೊಳ್ಳುವಂತೆ ಮಾಡಿತು” ಎಂದು ಶ್ರೀ ಮೋದಿ ಹೇಳಿದರು.

ಸಮಕಾಲೀನ ಸವಾಲುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಮಂತ್ರಿ, ವಿಭಜಕ ಶಕ್ತಿಗಳು ಇಂದಿಗೂ ಪ್ರಭಾವಶಾಲಿಯಾಗಿವೆ ಎಂದು ಹೇಳಿದರು. ರಾಷ್ಟ್ರೀಯವಾಗಿ ಮಹತ್ವದ ಸಾಂಸ್ಕೃತಿಕ ಯೋಜನೆಗಳಿಗೆ ವಿರೋಧದ ಇತ್ತೀಚಿನ ಉದಾಹರಣೆಗಳನ್ನು ಅವರು ಉಲ್ಲೇಖಿಸಿದರು. ಅಂತಹ ವಿಭಜಕ ಚಿಂತನೆಯ ವಿರುದ್ಧ ಜಾಗರೂಕತೆ ವಹಿಸಬೇಕೆಂದು ಪ್ರಧಾನಮಂತ್ರಿ ಕರೆ ನೀಡಿದರು. ರಾಷ್ಟ್ರೀಯ ಅಭಿವೃದ್ಧಿಯ ಎರಡೂ ಆಯಾಮಗಳನ್ನು ಗೌರವಿಸುವ ಸಮತೋಲಿತ ಪ್ರಗತಿಯ ದೃಷ್ಟಿಕೋನವನ್ನು ಅವರು ವ್ಯಕ್ತಪಡಿಸಿದರು. “ನಾವು ಅಭಿವೃದ್ಧಿ ಮತ್ತು ಪರಂಪರೆಯನ್ನು ಒಟ್ಟಿಗೆ ತೆಗೆದುಕೊಂಡು ಮುಂದುವರಿಯಬೇಕು” ಎಂದು ಶ್ರೀ ಮೋದಿ ದೃಢವಾಗಿ ಹೇಳಿದರು.

ಆರ್ಥಿಕ ಪರಿವರ್ತನೆಯಲ್ಲಿ ದೇವಾಲಯ ಟ್ರಸ್ಟ್ ಪಾತ್ರವನ್ನು ಒಪ್ಪಿಕೊಂಡ ಪ್ರಧಾನಮಂತ್ರಿ, ಸೋಮನಾಥವು ಸಮಗ್ರ ಅಭಿವೃದ್ಧಿಯ ದಾರಿದೀಪವಾಗಿ, ಹಾಗು ಅದೇ ಕಾಲದಲ್ಲಿ ಆಧ್ಯಾತ್ಮಿಕ ಕೇಂದ್ರವಾಗಿ ಮತ್ತು ನೂರಾರು ಕುಟುಂಬಗಳು ಹಾಗು ಸಾವಿರಾರು ಜನರ ಜೀವನೋಪಾಯಕ್ಕೆ ಪ್ರಯೋಜನವನ್ನು ನೀಡುವ ಆರ್ಥಿಕ ಎಂಜಿನ್ ಆಗಿ ಹೇಗೆ ಮಾರ್ಪಟ್ಟಿದೆ ಎಂಬುದನ್ನು ಎತ್ತಿ ತೋರಿಸಿದರು. “ಈ ದೇವಾಲಯವು ಪ್ರಪಂಚದ ಮೂಲೆ ಮೂಲೆಗಳಿಂದ ಜನರನ್ನು ಆಕರ್ಷಿಸುತ್ತದೆ ಮತ್ತು ಅವರ ಭೇಟಿಗಳು ಇಡೀ ಪ್ರದೇಶದಾದ್ಯಂತ ಸಮೃದ್ಧಿಯನ್ನು ಸೃಷ್ಟಿಸುತ್ತವೆ” ಎಂಬುದರತ್ತ ಅವರು ಗಮನ ಸೆಳೆದರು.

ಭಾರತದ ಪವಿತ್ರಯಾತ್ರಾ ಜಾಲದ ಕುರಿತು  ತಮ್ಮ ಚಿಂತನೆಯನ್ನು ವಿಸ್ತರಿಸುತ್ತಾ, ಪ್ರಧಾನಮಂತ್ರಿಯವರು ಇತ್ತೀಚಿನ ವರ್ಷಗಳಲ್ಲಿ ದೇಶಾದ್ಯಂತ ಕೈಗೊಂಡ ಪರಿವರ್ತನಾಶೀಲ ಅಭಿವೃದ್ಧಿ, ಕೇದಾರನಾಥದ ಪುನರ್ನಿರ್ಮಾಣ, ಕಾಶಿಯ ವಿಶ್ವನಾಥ ಧಾಮದ ಸೌಂದರ್ಯೀಕರಣ, ಉಜ್ಜಯಿನಿಯ ಮಹಾಕಾಲ್ ಮಹಾಲೋಕ್, ಚಾರ್‌ಧಾಮ್ ಹೆದ್ದಾರಿ ಯೋಜನೆ, ಗೋವಿಂದಘಾಟ್‌ನಿಂದ ಕರ್ತಾರ್‌ಪುರ ಕಾರಿಡಾರ್‌ನ ಹೇಮಕುಂಡ್ ಸಾಹಿಬ್‌ವರೆಗಿನ ರೋಪ್‌ವೇ ಯೋಜನೆ ಮತ್ತು ಬೌದ್ಧ ಸರ್ಕ್ಯೂಟ್ ಅನ್ನು ಪಟ್ಟಿ ಮಾಡಿದರು. “ಇದೆಲ್ಲವೂ 10-12 ವರ್ಷಗಳಲ್ಲಿ ಸಂಭವಿಸಿದೆ, ಸಾಂಸ್ಕೃತಿಕ ತಾಣಗಳು ಪ್ರಗತಿಗೆ ಅಡೆತಡೆಗಳಲ್ಲ, ಆದರೆ ಅವು ನಿಜಕ್ಕೂ ಭಾರತದ ಆಧ್ಯಾತ್ಮಿಕ-ಸಾಮಾಜಿಕ ವ್ಯವಸ್ಥೆಯ ಕೇಂದ್ರಗಳಾಗಿವೆ ಮತ್ತು ದೇಶದ ಆರ್ಥಿಕ ಪ್ರಗತಿಯ ಮೂಲಗಳು ಹಾಗು ನಿಜವಾದ ಅಭಿವೃದ್ಧಿಯ ಹೆಬ್ಬಾಗಿಲುಗಳಾಗಿವೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

ಪ್ರಯತ್ನಕ್ಕೆ ತಾತ್ವಿಕ ಅಡಿಪಾಯವನ್ನು ರೂಪಿಸುತ್ತಾ, ಪ್ರಧಾನ ಮಂತ್ರಿಯವರು “ಸರ್ವಂ ಖಲ್ವಿದಂ ಬ್ರಹ್ಮ” ಎಂಬ ಉಪನಿಷತ್ತಿನ ಘೋಷಣೆಯನ್ನು ಪ್ರಸ್ತಾಪಿಸಿದರು, ಇದೆಲ್ಲವೂ ಬ್ರಹ್ಮ, ಈ ದೃಷ್ಟಿಕೋನವು ನದಿಗಳು, ಕಾಡುಗಳು, ಪರ್ವತಗಳು ಮತ್ತು ಪ್ರಕೃತಿಯ ಎಲ್ಲವನ್ನೂ ಪವಿತ್ರ ಅಭಿವ್ಯಕ್ತಿಗಳಾಗಿ ಒಳಗೊಂಡಿದೆ ಎಂದು ವಿವರಿಸಿದರು. “ಜಗತ್ತು ನೈಸರ್ಗಿಕ ಜೀವನದ ಕಡೆಗೆ ಸಾಗುತ್ತಿರುವಾಗ, ನಾವು ಪ್ರಾಚೀನ ಜ್ಞಾನವನ್ನು ಗುರುತಿಸಬೇಕು ಮತ್ತು ಹಂಚಿಕೊಳ್ಳಬೇಕು. ನಮ್ಮ ಪವಿತ್ರ ಸ್ಥಳಗಳನ್ನು ಇಡೀ ಜಗತ್ತಿಗೆ ಸಾಮರಸ್ಯದ ಅಭಿವೃದ್ಧಿಯ ಉದಾಹರಣೆಗಳನ್ನಾಗಿ ಮಾಡೋಣ” ಎಂದು ಶ್ರೀ ಮೋದಿ ಆಗ್ರಹಿಸಿದರು.

ರಾಷ್ಟ್ರೀಯ ಶಕ್ತಿಯಲ್ಲಿ ಸಾಂಸ್ಕೃತಿಕ ನಿರಂತರತೆಯ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಹೊಸ ಪೀಳಿಗೆಗಳು ತಮ್ಮ ಇತಿಹಾಸ, ನಂಬಿಕೆ ಮತ್ತು ಮೌಲ್ಯಗಳೊಂದಿಗೆ ಮತ್ತೆ ಒಂದಾದಾಗ, ರಾಷ್ಟ್ರದ ಆಂತರಿಕ ಶಕ್ತಿ ಅಗಾಧವಾಗಿ ಆಳವಾಗುತ್ತದೆ ಎಂದು ಪ್ರತಿಪಾದಿಸಿದರು. “ಭಾರತ ಇಂದು ಯಾವ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆಯೋ ಆತ್ಮವಿಶ್ವಾಸವು ಸಾಂಸ್ಕೃತಿಕ ನಿರಂತರತೆಗೆ ಅಪಾರ ಋಣಿಯಾಗಿದೆ” ಎಂಬುದರತ್ತ ಶ್ರೀ ಮೋದಿ ಗಮನ ಸೆಳೆದರು.

ಭವಿಷ್ಯದ ಪೀಳಿಗೆಗೆ ಕರೆಯನ್ನು ನೀಡುವ ಮೂಲಕ ತಮ್ಮ ಭಾಷಣವನ್ನು ಮುಕ್ತಾಯಗೊಳಿಸಿದ ಪ್ರಧಾನಮಂತ್ರಿ, ಎಪ್ಪತ್ತೈದು ವರ್ಷಗಳ ಹಿಂದೆ ಸೋಮನಾಥನ ಪ್ರತಿಷ್ಠಾಪನೆಯು ಪರಿವರ್ತನಾ ಪ್ರಯಾಣವನ್ನು ಪ್ರಾರಂಭಿಸಿತು ಎಂಬುದನ್ನು ಸಭೆಗೆ ನೆನಪಿಸಿದರು. “ಇಂದು, ಆ ಪ್ರಯಾಣವು ಇನ್ನಷ್ಟು ವಿಸ್ತಾರವಾದ ರೂಪದಲ್ಲಿ ನಮ್ಮ ಮುಂದೆ ನಿಂತಿದೆ. ನಮ್ಮ ಸಂಪ್ರದಾಯಗಳಲ್ಲಿ ಬೇರೂರಿ,  ನಾವು ಅದನ್ನು ಹೆಚ್ಚಿನ ಎತ್ತರಕ್ಕೆ ಕೊಂಡೊಯ್ಯಬೇಕು, ಇದು ನಮ್ಮ ಕಾಲದ ಕರೆ” ಎಂದು ಶ್ರೀ ಮೋದಿ ಪ್ರತಿಪಾದಿಸಿದರು.

 

*****