Search

ಪಿಎಂಇಂಡಿಯಾಪಿಎಂಇಂಡಿಯಾ

ತಾಜಾ ಸುದ್ದಿಗಳು

ಪಿ. .ಐ. ಬಿ. ಸ್ವಯಂ ಮೂಲದಿoದ ವಿಷಯ

ಗುಜರಾತ್‌ನ ವಡೋದರಾದಲ್ಲಿ ಸರ್ದಾರ್‌ಧಾಮ್ ಹಾಸ್ಟೆಲ್ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ

ಗುಜರಾತ್‌ನ ವಡೋದರಾದಲ್ಲಿ ಸರ್ದಾರ್‌ಧಾಮ್ ಹಾಸ್ಟೆಲ್ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಪ್ರಧಾನಮಂತ್ರಿ ಅವರ ಭಾಷಣ


ಭಾರತ ಮಾತೆಗೆ ಜಯವಾಗಲಿ.

ಭಾರತ ಮಾತೆಗೆ ಜಯವಾಗಲಿ.

ಗುಜರಾತ್‌ನ ಜನಪ್ರಿಯ ಮುಖ್ಯಮಂತ್ರಿ ಶ್ರೀ ಭೂಪೇಂದ್ರ ಭಾಯಿ ಪಟೇಲ್, ಉಪಮುಖ್ಯಮಂತ್ರಿ ಹರ್ಷ ಸಾಂಘ್ವಿ ಜಿ, ಕೇಂದ್ರ ಸಚಿವರು ಮತ್ತು ಸ್ಥಾಪಕ ಟ್ರಸ್ಟಿಗಳಾದ ಮನ್ಸುಖ್ ಭಾಯಿ ಮಾಂಡವೀಯ, ಸರ್ದಾರ್ ಧಾಮ್‌ನ ಅಧ್ಯಕ್ಷ ಗಗ್ಜಿ ಭಾಯಿ ಸುತಾರಿಯಾ ಜಿ, ದುಷ್ಯಂತ್ ಭಾಯಿ ಪಟೇಲ್, ಪಂಕಜ್ ಭಾಯಿ ಪಟೇಲ್, ರಾಜ್ಯ ಬಿಜೆಪಿ ಅಧ್ಯಕ್ಷ ಜಗದೀಶ್ ವಿಶ್ವಕರ್ಮ ಜಿ, ವೇದಿಕೆಯಲ್ಲಿರುವ ಗುಜರಾತ್ ಸರ್ಕಾರದ ಎಲ್ಲಾ ಸಚಿವರೆ, ಎಲ್ಲಾ ದಾನಿಗಳೆ, ಟ್ರಸ್ಟಿಗಳೆ, ಗಣ್ಯ ಅತಿಥಿಗಳೆ ಮತ್ತು ಗುಜರಾತ್‌ನ ಮೂಲೆ ಮೂಲೆಗಳಿಂದ ಇಲ್ಲಿಗೆ ಬಂದಿರುವ ನನ್ನ ಪ್ರೀತಿಯ ಸಹೋದರ ಸಹೋದರಿಯರೆ.

ಇಂದು ಪವಿತ್ರ ಹಬ್ಬಕ್ಕಿಂತ ಏನೂ ಕಡಿಮೆಯಿಲ್ಲ. ಇಲ್ಲಿಗೆ ಬರುವ ಮೊದಲು, ನಾನು ಸೋಮನಾಥ ದೇವಾಲಯದಲ್ಲಿದ್ದೆ. ಸೋಮನಾಥ ದೇವಾಲಯದ ಪ್ರತಿಷ್ಠಾಪನೆಯ 75 ವರ್ಷಗಳು ಪೂರ್ಣಗೊಂಡಿವೆ. ಸರ್ದಾರ್ ಪಟೇಲ್ ಅವರ ಸಂಕಲ್ಪದಿಂದ ಸೋಮನಾಥ ದೇವಾಲಯದ ಪುನಃಸ್ಥಾಪನೆ ನೆರವೇರಿತು. ಈ ಸಂದರ್ಭದಲ್ಲಿ ಪ್ರಭಾಸ್ ಪಠಾಣ್‌ನಲ್ಲಿ ಸೋಮನಾಥ ಅಮೃತ ಮಹೋತ್ಸವ ಆಚರಿಸಲಾಗುತ್ತಿದೆ. ಅದೇ ದಿನ ವಡೋದರಾದಲ್ಲಿ, ಸರ್ದಾರ್ ಧಾಮ್‌ಗೆ ಸಂಬಂಧಿಸಿದ ಹಲವಾರು ಪ್ರಮುಖ ಯೋಜನೆಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ  ನೆರವೇರುತ್ತಿದೆ. ಡಾ. ದುಷ್ಯಂತ್ ಮತ್ತು ದಕ್ಷಾ ಪಟೇಲ್ ಸಂಕೀರ್ಣದ ಉದ್ಘಾಟನೆ, ಶೈಕ್ಷಣಿಕ ಸಹಾಯ ಯೋಜನೆಯ ಉದ್ಘಾಟನೆ ಮತ್ತು ಹೊಸ ಯೋಜನೆಗಳ ಶಿಲಾನ್ಯಾಸ – ಈ ಎಲ್ಲಾ ಉಪಕ್ರಮಗಳು ಭವಿಷ್ಯದಲ್ಲಿ ರಾಷ್ಟ್ರ ನಿರ್ಮಾಣದ ಪರಿಣಾಮಕಾರಿ ಸಾಧನಗಳಾಗುತ್ತವೆ. ಒಂದು ರೀತಿಯಲ್ಲಿ, ಈ ಸಂಸ್ಥೆಗಳು ನಮ್ಮ ಯುವಕರ ಭವಿಷ್ಯದ ವೃತ್ತಿಜೀವನಕ್ಕೆ ದಿಕ್ಕು ತೋರುವ ವೇದಿಕೆಗಳಾಗಿ ಕಾರ್ಯ ನಿರ್ವಹಿಸುತ್ತವೆ. ಈ ಉದಾತ್ತ ಕಾರ್ಯಕ್ಕಾಗಿ ನಿಮ್ಮೆಲ್ಲರನ್ನೂ ಮತ್ತು ಸಮಾಜದ ಪ್ರತಿಯೊಬ್ಬ ಸದಸ್ಯರನ್ನೂ ನಾನು ಅಭಿನಂದಿಸುತ್ತೇನೆ.

ಸ್ನೇಹಿತರೆ,

ಇಂದು ನಿಮ್ಮೆಲ್ಲರ ಭೇಟಿ ನನಗೆ ಮತ್ತೊಂದು ಸಂತೋಷ ತರುತ್ತಿದೆ. ಬಂಗಾಳ, ಅಸ್ಸಾಂ ಮತ್ತು ಪುದುಚೇರಿ ಚುನಾವಣಾ ಫಲಿತಾಂಶಗಳು ದೇಶಾದ್ಯಂತ ಉತ್ಸಾಹದ ವಾತಾವರಣ ಸೃಷ್ಟಿಸಿವೆ. ಅದರೊಂದಿಗೆ, ನೀವೆಲ್ಲರೂ ಒಟ್ಟಾಗಿ ಇತಿಹಾಸ ಸೃಷ್ಟಿಸಿದ್ದೀರಿ – ಗುಜರಾತ್ ಪುರಸಭೆ ಮತ್ತು ಪಂಚಾಯಿ ಚುನಾವಣೆಗಳ ಫಲಿತಾಂಶಗಳು ಸಹ ಗಮನಾರ್ಹವಾಗಿದ್ದು, ಅವುಗಳ ಬಗ್ಗೆ ದೇಶಾದ್ಯಂತ ಚರ್ಚಿಸಲಾಗುತ್ತಿದೆ.

ಸ್ನೇಹಿತರೆ,

ಗುಜರಾತ್ ಜನರು ಯಾವಾಗಲೂ ರಾಜಕೀಯ ಸ್ಥಿರತೆಯನ್ನು ಗೌರವಿಸುತ್ತಾರೆ. ಇದು ಅವರ ರಾಜಕೀಯ ದೂರದೃಷ್ಟಿಯನ್ನು ಪ್ರತಿಬಿಂಬಿಸುತ್ತದೆ. ಅವರು ರಾಜಕೀಯ ಸ್ಥಿರತೆಯ ಮಹತ್ವವನ್ನು ಅರ್ಥ ಮಾಡಿಕೊಳ್ಳುತ್ತಾರೆ, ಏಕೆಂದರೆ ರಾಜಕೀಯ ಸ್ಥಿರತೆ ಇರುವಲ್ಲೆಲ್ಲಾ ಆರ್ಥಿಕ ಬೆಳವಣಿಗೆ ವೇಗಗೊಳ್ಳುತ್ತದೆ. ಗುಜರಾತ್ ಇದನ್ನು ಬಹಳ ಹಿಂದೆಯೇ ಅರ್ಥ ಮಾಡಿಕೊಂಡಿದೆ. ಫಲಿತಾಂಶಗಳು ಇಂದು ಗುಜರಾತ್‌ನ ಬೆಳವಣಿಗೆಯಲ್ಲಿ ಮತ್ತು ಒಂದರ ನಂತರ ಒಂದರಂತೆ ಚುನಾವಣಾ ಫಲಿತಾಂಶಗಳಲ್ಲಿ ಗೋಚರಿಸುತ್ತಿವೆ.

ಸ್ನೇಹಿತರೆ,

ನಿಮ್ಮೆಲ್ಲರ ಭೇಟಿ ಮತ್ತು ನಿಮ್ಮ ಕಾರ್ಯಕ್ರಮಗಳ ಭಾಗವಾಗುವುದು ನನಗೆ ಯಾವಾಗಲೂ ಸಂತೋಷದಾಯಕ ಅನುಭವ, ಅವು ನನಗೆ ಮನೆಗೆ ಬಂದಂತೆ ಭಾಸವಾಗುತ್ತದೆ. ಏಕೆಂದರೆ ನಿಮ್ಮಲ್ಲಿ, ಒಬ್ಬರು ಸಮಾಜದ ಶಕ್ತಿಯನ್ನು ಅನುಭವಿಸುತ್ತಾರೆ. ನಿಜವಾದ ಪರಿವರ್ತನೆ ಸಂಭವಿಸಿದಾಗಲೆಲ್ಲಾ ಅದನ್ನು ಸಮಾಜದ ಸಾಮೂಹಿಕ ಶಕ್ತಿಯ ಮೂಲಕ ಸಾಧಿಸಲಾಗುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ. ವಿಶೇಷವಾಗಿ ಶಿಕ್ಷಣಕ್ಕೆ ಆದ್ಯತೆ ನೀಡಿದ ಮತ್ತು ಶಿಕ್ಷಣದಲ್ಲಿ ಸಮಾನ ಭಾಗವಹಿಸುವಿಕೆಯನ್ನು ತಮ್ಮ ಗುರಿಯಾಗಿಸಿಕೊಂಡ ಸಮುದಾಯಗಳು ಯಾವಾಗಲೂ ಪ್ರಗತಿ ಸಾಧಿಸಿ, ಹೊಸ ಎತ್ತರ ತಲುಪಿವೆ.

ಅದಕ್ಕಾಗಿಯೇ ಸಹೋದರ ಸಹೋದರಿಯರೆ,

ಸರ್ದಾರ್ ಧಾಮ್‌ನ ಪ್ರತಿಯೊಂದು ಪ್ರಯತ್ನದಲ್ಲೂ, ನನಗೆ ಅವಕಾಶ ಸಿಕ್ಕಾಗಲೆಲ್ಲಾ, ನಾನು ಯಾವಾಗಲೂ ನಿಮ್ಮೊಂದಿಗೆ ನಿಲ್ಲಲು ಪ್ರಯತ್ನಿಸುತ್ತೇನೆ. ಗಗ್ಜಿ ಭಾಯ್ ವಿವರವಾಗಿ ವಿವರಿಸಿದಂತೆ, 2021ರಲ್ಲಿ ನಾನು ಅಹಮದಾಬಾದ್‌ನಲ್ಲಿ ನಡೆದ ಸರ್ದಾರ್ ಧಾಮ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ, ಅಲ್ಲಿ ಬಾಲಕಿಯರ ಹಾಸ್ಟೆಲ್‌ಗೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಕಳೆದ ವರ್ಷ ಅದನ್ನು ಉದ್ಘಾಟಿಸಲಾಯಿತು. ಇಂದು ಸಾವಿರಾರು ಹೆಣ್ಣು ಮಕ್ಕಳು ಅಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ, ಅವರ ಕನಸುಗಳಿಗೆ ಹೊಸ ನಿರ್ದೇಶನ ನೀಡಲಾಗುತ್ತಿದೆ. ಸೂರತ್, ರಾಜ್‌ಕೋಟ್, ಭುಜ್, ಮೆಹ್ಸಾನಾ ಮತ್ತು ದೆಹಲಿಯಲ್ಲಿ, ಸರ್ದಾರ್ ಧಾಮ್‌ನ ಅನೇಕ ಸಂಸ್ಥೆಗಳು ಯುವಕರ ಭವಿಷ್ಯವನ್ನು ರೂಪಿಸುತ್ತಿವೆ. ಇಂದಿಗೂ, ಅಹಮದಾಬಾದ್‌ನ ನಿಕೋಲ್‌ನಲ್ಲಿ 1 ಸಾವಿರ ಹೆಣ್ಣು ಮಕ್ಕಳಿಗೆ ಹೊಸ ಹಾಸ್ಟೆಲ್‌ ನಿರ್ಮಿಸಲು ಶಂಕುಸ್ಥಾಪನೆ ನೆರವೇರಿಸಲಾಗಿದೆ.

ಸ್ನೇಹಿತರೆ,

ಬದಲಾವಣೆ ವ್ಯಾಪಕವಾಗಲು ಮತ್ತು ಅದರ ಫಲಿತಾಂಶಗಳು ಶಾಶ್ವತವಾಗಲು, ಸಮಾಜ ಮತ್ತು ಸರ್ಕಾರ ಒಟ್ಟಾಗಿ ಕೆಲಸ ಮಾಡಬೇಕು. ಅದಕ್ಕಾಗಿಯೇ ಈಗ ಶಿಕ್ಷಣ ಕ್ಷೇತ್ರದಲ್ಲಿ ಮೂಲಭೂತ ವಾಸ್ತವಗಳ ಆಧಾರದ ಮೇಲೆ ಕೆಲಸ ಮಾಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಇದಕ್ಕೆ ಪ್ರಮುಖ ಉದಾಹರಣೆಯಾಗಿದೆ. ಇಂದು, ಯುವಕರ ಹಾದಿಯಲ್ಲಿ ಇದ್ದ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕಲಾಗುತ್ತಿದೆ. ಭಾಷೆಯ ಆಧಾರದ ಮೇಲೆ ತಾರತಮ್ಯ ಕೊನೆಗೊಳ್ಳುತ್ತಿದೆ. ಗಮನವು ಇನ್ನು ಮುಂದೆ ಪುಸ್ತಕಗಳು ಮತ್ತು ಪದವಿಗಳ ಮೇಲೆ ಮಾತ್ರ ಅಲ್ಲ. ಕೌಶಲ್ಯ ಅಭಿವೃದ್ಧಿ ಮತ್ತು ನಾವೀನ್ಯತೆಯನ್ನು ಶಿಕ್ಷಣದ ಭಾಗವನ್ನಾಗಿ ಮಾಡಲಾಗಿದೆ. ಸಂಶೋಧನೆಯಲ್ಲಿ ಆಸಕ್ತಿ ಹೊಂದಿರುವ ಯುವಕರಿಗೆ ಸಮರ್ಪಕ ವಾತಾವರಣ ಒದಗಿಸಲಾಗುತ್ತಿದೆ. ಪದವಿಗಳನ್ನು ಪೂರ್ಣಗೊಳಿಸಿದ ನಂತರ ಯುವಕರು ಅನುಭವವಿಲ್ಲದೆ ಅಲೆದಾಡದಂತೆ ನೋಡಿಕೊಳ್ಳಲು, ಅಪ್ರೆಂಟಿಸ್‌ಶಿಪ್ ಅವಕಾಶಗಳನ್ನು ಒದಗಿಸಲಾಗುತ್ತಿದೆ. ಭವಿಷ್ಯದಲ್ಲಿ ದೇಶವು ಎಷ್ಟು ದೊಡ್ಡ ಕೌಶಲ್ಯಪೂರ್ಣ ಕಾರ್ಯಪಡೆ ಹೊಂದಿರುತ್ತದೆ ಎಂಬುದನ್ನು ಊಹಿಸಿ. ಇದರ ದೊಡ್ಡ ಲಾಭ ಭಾರತದ ಉತ್ಪಾದನಾ ವಲಯಕ್ಕೆ ಹೋಗುತ್ತದೆ.

ಸ್ನೇಹಿತರೆ,

ಗುಜರಾತ್‌ನ ಯುವಕರು ಸ್ವಾಭಾವಿಕವಾಗಿಯೇ ಉದ್ಯಮಶೀಲತಾ ಶಕ್ತಿ ಹೊಂದಿದ್ದಾರೆ. ಇಂದು ಸ್ಟಾರ್ಟಪ್ ಇಂಡಿಯಾ ಮಿಷನ್ ಅವರ ಕನಸುಗಳನ್ನು ನನಸಾಗಿಸಲು ಸಹಾಯ ಮಾಡುತ್ತಿದೆ. ಸಣ್ಣ ಪಟ್ಟಣಗಳ ಯುವಕರು ಸಹ ಉದ್ಯಮಿಗಳಾಗುತ್ತಿದ್ದಾರೆ. ಸಣ್ಣ ನಗರಗಳಿಂದ ದೊಡ್ಡ ಸ್ಟಾರ್ಟಪ್‌ಗಳು ಹೊರಹೊಮ್ಮುತ್ತಿವೆ. ಸ್ಟಾರ್ಟಪ್‌ಗಳಲ್ಲಿ ಮಹಿಳೆಯರ ಭಾಗವಹಿಸುವಿಕೆ ನಿರಂತರವಾಗಿ ಹೆಚ್ಚುತ್ತಿದೆ. ಒಂದು ಕಾಲದಲ್ಲಿ ಅಪಾಯಕಾರಿ ಎಂದು ಪರಿಗಣಿಸಲಾಗಿದ್ದ ಕ್ಷೇತ್ರಗಳು ಈಗ ಯುವಕರ ಮೊದಲ ಆಯ್ಕೆಯಾಗುತ್ತಿವೆ. ಕ್ರೀಡೆಯಿಂದ ಬಾಹ್ಯಾಕಾಶ ತಂತ್ರಜ್ಞಾನದವರೆಗೆ ಕಳೆದ 10-12 ವರ್ಷಗಳಲ್ಲಿ ದೇಶದ ಸಾಧನೆಗಳು ಇದಕ್ಕೆ ದೊಡ್ಡ ಪುರಾವೆಯಾಗಿದೆ. ಗುಜರಾತ್‌ನ ನಮ್ಮ ಪುತ್ರರು ಮತ್ತು ಪುತ್ರಿಯರು ಇದರಿಂದ ಹೆಚ್ಚಿನ ಪ್ರಯೋಜನ ಪಡೆಯುತ್ತಿದ್ದಾರೆ.

ಸ್ನೇಹಿತರೆ,

ಸಮಾಜದಲ್ಲಿ ಪ್ರಗತಿಯ ಬಹುದೊಡ್ಡ ಅಡಿಪಾಯವೆಂದರೆ ಅದು ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ – ಅದರ ಇನ್ನೊಂದು ಭಾಗ. ಗುಜರಾತ್ ಇದನ್ನು 2 ದಶಕಗಳ ಹಿಂದೆಯೇ ಅರ್ಥ ಮಾಡಿಕೊಂಡಿತು, ಈ ದಿಕ್ಕಿನಲ್ಲಿ ಬಲವಾದ ಹೆಜ್ಜೆಗಳನ್ನು ಇಟ್ಟಿತು.

ಸ್ನೇಹಿತರೆ,

ಇಂದು ಗುಜರಾತ್ ಮಾದರಿಯ ಅದೇ ಯಶಸ್ಸನ್ನು ದೇಶಾದ್ಯಂತ ಪುನರಾವರ್ತಿಸಲಾಗುತ್ತಿದೆ. ಕೋಟ್ಯಂತರ ಮಹಿಳೆಯರಿಗೆ ಬ್ಯಾಂಕ್ ಖಾತೆಗಳನ್ನು ನೀಡಲಾಗಿದೆ. ಶೌಚಾಲಯಗಳು, ನಲ್ಲಿ ನೀರಿನ ಸಂಪರ್ಕಗಳು ಮತ್ತು ಅನಿಲ ಸಂಪರ್ಕಗಳನ್ನು ಒದಗಿಸಲಾಗಿದೆ. ಮುದ್ರಾ ಯೋಜನೆಯ ಮೂಲಕ ಮಹಿಳೆಯರು ಸ್ವಾವಲಂಬಿಗಳಾಗುತ್ತಿದ್ದಾರೆ. ಆಯುಷ್ಮಾನ್ ಭಾರತ್ ಮತ್ತು ಮಾತೃ ವಂದನದಂತಹ ಯೋಜನೆಗಳು ಕುಟುಂಬದಲ್ಲಿ ಮಹಿಳೆಯರು ಆರೋಗ್ಯವಾಗಿರುವುದನ್ನು ಖಚಿತಪಡಿಸಲು ರಕ್ಷಣಾತ್ಮಕ ಗುರಾಣಿಗಳಾಗಿ ಕಾರ್ಯ ನಿರ್ವಹಿಸುತ್ತಿವೆ.

ಸ್ನೇಹಿತರೆ,

ಹಿಂದೆ ಅನೇಕ ಕ್ಷೇತ್ರಗಳ ಬಾಗಿಲುಗಳು ಹೆಣ್ಣು ಮಕ್ಕಳಿಗೆ ಮುಚ್ಚಲ್ಪಟ್ಟಿದ್ದವು. ಆದರೆ ಇಂದು ಮಹಿಳೆಯರು ಆ ಕ್ಷೇತ್ರಗಳಲ್ಲಿ ನಾಯಕಿಯರಾಗಿ ಹೊರಹೊಮ್ಮುತ್ತಿದ್ದಾರೆ. ಮಹಿಳಾ ಕೆಡೆಟ್‌ಗಳು ಈಗ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ನಮ್ಮ ಹೆಣ್ಣು ಮಕ್ಕಳು ಫೈಟರ್ ಪೈಲಟ್‌ಗಳಾಗುತ್ತಿದ್ದಾರೆ. ರಾಜಕೀಯದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಿಸಲು ನಿರಂತರ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ನಾರಿ ಶಕ್ತಿ ವಂದನ ಅಧಿನಿಯಮ ತಿದ್ದುಪಡಿಯ ಮೂಲಕ, ನಾವು ಈ ದಿಕ್ಕಿನಲ್ಲಿ ಮತ್ತೊಂದು ಪ್ರಯತ್ನ ಮಾಡಿದ್ದೇವೆ. ರಾಜಕೀಯ ಕಾರಣಗಳಿಂದಾಗಿ ಇದು ಸಾಧ್ಯವಾಗಿಲ್ಲ, ಆದರೆ ನಾವು ಈ ದಿಕ್ಕಿನಲ್ಲಿ ಶ್ರಮಿಸುವುದನ್ನು ಮುಂದುವರಿಸುತ್ತೇವೆ ಎಂದು ನಾನು ನಿಮಗೆ ಮತ್ತು ದೇಶಾದ್ಯಂತದ ಮಹಿಳೆಯರಿಗೆ ಭರವಸೆ ನೀಡುತ್ತೇನೆ.

ಸ್ನೇಹಿತರೆ,

ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರಿಗೆ ಅವಕಾಶದ ಬಾಗಿಲು ತೆರೆಯುವುದು ಸರ್ಕಾರದ ಜವಾಬ್ದಾರಿ ಮಾತ್ರವಲ್ಲ, ಸಮಾಜದ ಜವಾಬ್ದಾರಿಯೂ ಆಗಿದೆ. ಸರ್ದಾರ್ ಧಾಮ್ ಈ ಜವಾಬ್ದಾರಿಯನ್ನು ಪೂರ್ಣ ಸಮರ್ಪಣೆಯೊಂದಿಗೆ ಪೂರೈಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ಈ ಪ್ರಯತ್ನಗಳಿಗಾಗಿ ನಾನು ನಿಮ್ಮೆಲ್ಲರನ್ನು ವಿಶೇಷವಾಗಿ ಅಭಿನಂದಿಸುತ್ತೇನೆ ಮತ್ತು ಧನ್ಯವಾದ ಹೇಳುತ್ತೇನೆ.

ಸ್ನೇಹಿತರೆ,

ಇಲ್ಲಿನ ಸಮಾಜವು ಸಮಯದ ದಿಕ್ಕನ್ನು ತ್ವರಿತವಾಗಿ ಗುರುತಿಸುತ್ತದೆ ಎಂಬುದು ಗುಜರಾತ್‌ ಹೊಂದಿರುವ ದೊಡ್ಡ ಶಕ್ತಿಗಳಲ್ಲಿ ಒಂದಾಗಿದೆ. ಬದಲಾವಣೆಯನ್ನು ಅವಕಾಶವಾಗಿ ಪರಿವರ್ತಿಸುವುದು, ಹೊಸ ಸಾಧ್ಯತೆಗಳನ್ನು ಅಳವಡಿಸಿಕೊಳ್ಳುವುದು ಮತ್ತು ಭವಿಷ್ಯಕ್ಕಾಗಿ ಮುಂಚಿತವಾಗಿ ತಯಾರಿ ಮಾಡುವುದು ಯಾವಾಗಲೂ ಗುಜರಾತ್‌ನ ಕೆಲಸದ ಸಂಸ್ಕೃತಿಯ ಭಾಗವಾಗಿದೆ. ಇಂದು ಜಗತ್ತು ಭವಿಷ್ಯದ ತಂತ್ರಜ್ಞಾನಗಳತ್ತ ಸಾಗುತ್ತಿರುವಾಗ, ಗುಜರಾತ್ ಕೂಡ ಹೊಸ ಆವೇಗದೊಂದಿಗೆ ಮುನ್ನಡೆಯುತ್ತಿದೆ. ಸೆಮಿಕಂಡಕ್ಟರ್ ಉತ್ಪಾದನೆ, ಏರೋಸ್ಪೇಸ್, ​​ಅಡ್ವಾನ್ಸ್ಡ್ ಎಂಜಿನಿಯರಿಂಗ್, ಹಸಿರು ಶಕ್ತಿ ಮತ್ತು ಹಣಕಾಸು ಸೇವೆಗಳಲ್ಲಿ ಗುಜರಾತ್ ಹೊಸ ಗುರುತನ್ನು ನಿರ್ಮಿಸುತ್ತಿದೆ. ಸನಂದ್‌ನಲ್ಲಿ ಮೇಡ್-ಇನ್-ಇಂಡಿಯಾ ಸೆಮಿಕಂಡಕ್ಟರ್‌ಗಳನ್ನು ಉತ್ಪಾದಿಸಲಾಗುತ್ತಿದೆ. ಕೇನ್ಸ್ ಸೆಮಿಕಂಡಕ್ಟರ್ ಸ್ಥಾವರದಲ್ಲಿಯೂ ಉತ್ಪಾದನೆ ಆರಂಭವಾಗಿದೆ. ಧೋಲೆರಾ ಮತ್ತು ಸೂರತ್‌ನಲ್ಲಿಯೂ ಹೊಸ ಸೆಮಿಕಂಡಕ್ಟರ್ ಯೋಜನೆಗಳು ಮುಂದುವರಿಯುತ್ತಿವೆ.

ಸ್ನೇಹಿತರೆ,

ಭಾರತ ಮತ್ತು ಗುಜರಾತ್ ಅನ್ನು ಜಾಗತಿಕ ಪೂರೈಕೆ ಸರಪಳಿಯ ಪ್ರಮುಖ ಕೇಂದ್ರಗಳನ್ನಾಗಿ ಮಾಡಲು ನಾವು ನಿರಂತರವಾಗಿ ಕೆಲಸ ಮಾಡುತ್ತಿದ್ದೇವೆ. ಮುಂಬರುವ ವರ್ಷಗಳಲ್ಲಿ ವಡೋದರಾ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇಲ್ಲಿ ತಯಾರಾಗುವ ಮೆಟ್ರೋ ಕೋಚ್‌ಗಳನ್ನು ಇತರ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಸಾವ್ಲಿಯಲ್ಲಿ ಆಧುನಿಕ ರೈಲು ವ್ಯವಸ್ಥೆಗಳು ಮತ್ತು ಕೋಚ್‌ಗಳನ್ನು ತಯಾರಿಸಲಾಗುತ್ತಿದೆ. ಎಂಜಿನಿಯರಿಂಗ್, ಭಾರಿ ಯಂತ್ರೋಪಕರಣಗಳು, ರಾಸಾಯನಿಕಗಳು ಮತ್ತು ಔಷಧಗಳು, ವಿದ್ಯುತ್ ಉಪಕರಣಗಳು ಮತ್ತು ಎಂಎಸ್ಎಂಇಗಳಲ್ಲಿ, ವಡೋದರಾ ಬಲಿಷ್ಠ ಉತ್ಪಾದನಾ ಕೇಂದ್ರವಾಗಿ ಹೊರಹೊಮ್ಮಿದೆ. ಇಲ್ಲಿನ ಗತಿ ಶಕ್ತಿ ವಿಶ್ವವಿದ್ಯಾಲಯವು ಸಾರಿಗೆ ಮತ್ತು ಸರಕು ಸಾಗಣೆಯಲ್ಲಿ ವೃತ್ತಿಪರರನ್ನು ಸಿದ್ಧಪಡಿಸುತ್ತಿದೆ. ಈಗ ವಡೋದರಾ ಕೂಡ ಏರೋಸ್ಪೇಸ್ ವಲಯದಲ್ಲಿ ಹೊಸ ಗುರುತಿನತ್ತ ಸಾಗುತ್ತಿದೆ. ಇಲ್ಲಿನ ವಿಮಾನ ಉತ್ಪಾದನಾ ಯೋಜನೆ ವೇಗವಾಗಿ ಪ್ರಗತಿಯಲ್ಲಿದೆ.

ಸ್ನೇಹಿತರೆ,

ಗುಜರಾತ್ ಮತ್ತು ದೇಶದಲ್ಲಿನ ಈ ಎಲ್ಲಾ ಅಭಿವೃದ್ಧಿ ಪ್ರಯತ್ನಗಳ ನಡುವೆ, ಮತ್ತೊಂದು ಸಮಸ್ಯೆ ಹೆಚ್ಚು ಸೂಕ್ಷ್ಮವಾಗುತ್ತಿದೆ. ಕಳೆದ ಕೆಲವು ವರ್ಷಗಳಿಂದ, ಜಗತ್ತು ಅಸ್ಥಿರ ಪರಿಸ್ಥಿತಿಗಳ ಮೂಲಕ ಹಾದುಹೋಗುತ್ತಿದೆ. ಮೊದಲು ಕೊರೊನಾ ಬಿಕ್ಕಟ್ಟು, ನಂತರ ಜಾಗತಿಕ ಆರ್ಥಿಕ ಸವಾಲುಗಳು ಮತ್ತು ಈಗ ಪಶ್ಚಿಮ ಏಷ್ಯಾದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಗಳು ಕಾಣಿಸಿಕೊಂಡಿವೆ. ಈ ಸನ್ನಿವೇಶಗಳು ನಿರಂತರವಾಗಿ ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರುತ್ತಿವೆ, ಭಾರತವು ಸಹ ಅವುಗಳಿಂದ ಮುಕ್ತವಾಗಿಲ್ಲ. ಕೊರೊನಾ ಸಾಂಕ್ರಾಮಿಕವು ಈ ಶತಮಾನದ ಅತಿದೊಡ್ಡ ಬಿಕ್ಕಟ್ಟಾಗಿದ್ದರೆ, ಪಶ್ಚಿಮ ಏಷ್ಯಾದಲ್ಲಿ ಯುದ್ಧದಿಂದ ಸೃಷ್ಟಿಸಲ್ಪಟ್ಟ ಪರಿಸ್ಥಿತಿಗಳು ಈ ದಶಕದ ಅತಿದೊಡ್ಡ ಬಿಕ್ಕಟ್ಟುಗಳಲ್ಲಿ ಸೇರಿವೆ. ನಾವು ಒಟ್ಟಾಗಿ ಸಾಂಕ್ರಾಮಿಕ ರೋಗವನ್ನು ಜಯಿಸಿದಂತೆಯೇ, ನಾವು ಈ ಬಿಕ್ಕಟ್ಟನ್ನು ಸಹ ನಿವಾರಿಸುತ್ತೇವೆ.

ಈ ಪ್ರತಿಕೂಲ ಸಂದರ್ಭಗಳು ಸಾಮಾನ್ಯ ನಾಗರಿಕರ ಮೇಲೆ ಕನಿಷ್ಠ ಪರಿಣಾಮ ಬೀರುತ್ತವೆ ಎಂದು ಖಚಿತಪಡಿಸಿಕೊಳ್ಳಲು ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದೆ. ಆದರೆ ಅಂತಹ ಸಮಯದಲ್ಲಿ, ದೇಶಕ್ಕೆ ಸಾರ್ವಜನಿಕ ಭಾಗವಹಿಸುವಿಕೆಯ ಶಕ್ತಿ ಬಹಳ ಅಗತ್ಯವಿದೆ. ಭಾರತದ ನಾಗರಿಕರಾಗಿ, ನಾವು ನಮ್ಮ ಕರ್ತವ್ಯಗಳಿಗೆ ಆದ್ಯತೆ ನೀಡಬೇಕು. ಹಿಂದಿನ ದಶಕಗಳಲ್ಲಿಯೂ ಸಹ, ದೇಶವು ಯುದ್ಧ ಅಥವಾ ದೊಡ್ಡ ಬಿಕ್ಕಟ್ಟುಗಳನ್ನು ಎದುರಿಸಿದಾಗಲೆಲ್ಲಾ, ಸರ್ಕಾರದ ಕರೆಗೆ ಸ್ಪಂದನೆಯಾಗಿ ನಾಗರಿಕರು ತಮ್ಮ ಜವಾಬ್ದಾರಿಗಳನ್ನು ಪೂರೈಸಿದರು. ಇಂದಿಗೂ, ದೇಶದ ಸಂಪನ್ಮೂಲಗಳ ಮೇಲಿನ ಹೊರೆ ಕಡಿಮೆ ಮಾಡಲು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಭಾರತವು ಅನೇಕ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಲು ಲಕ್ಷಾಂತರ ಕೋಟಿ ರೂಪಾಯಿಯನ್ನು ವಿದೇಶಿ ವಿನಿಮಯಕ್ಕೆ ಖರ್ಚು ಮಾಡುತ್ತದೆ. ಅದೇ ಸಮಯದಲ್ಲಿ, ಆಮದು ಮಾಡಿಕೊಂಡ ಸರಕುಗಳ ಬೆಲೆಗಳು ಗಗನಕ್ಕೇರುತ್ತಿವೆ, ಪೂರೈಕೆ ಸರಪಳಿಗಳು ಅಸ್ತವ್ಯಸ್ತಗೊಂಡಿವೆ. ಆದ್ದರಿಂದ, ದೇಶವು ಪ್ರಮುಖ 2 ಸವಾಲನ್ನು ಎದುರಿಸುತ್ತಿದೆ.

ಮಡಕೆ (ಹೂಜಿ)ಗೆ ಹನಿ ಹನಿ ನೀರು ತುಂಬುವಂತೆಯೇ, ನಾವು ಕೂಡ ಆಮದು ಮಾಡಿಕೊಂಡ ಉತ್ಪನ್ನಗಳ ಬಳಕೆಯನ್ನು ಪ್ರತಿ ಸಣ್ಣ ಪ್ರಯತ್ನದ ಮೂಲಕ ಕಡಿಮೆ ಮಾಡಬೇಕು, ಅನಗತ್ಯ ವಿದೇಶಿ ವಿನಿಮಯ ವೆಚ್ಚಕ್ಕೆ ಕಾರಣವಾಗುವ ವೈಯಕ್ತಿಕ ಚಟುವಟಿಕೆಗಳನ್ನು ತಪ್ಪಿಸಬೇಕು.

ಸ್ನೇಹಿತರೆ,

ಭಾರತದ ಆಮದಿನ ಪ್ರಮುಖ ಭಾಗ ಕಚ್ಚಾ ತೈಲ. ದುರದೃಷ್ಟವಶಾತ್, ವಿಶ್ವದ ಹೆಚ್ಚಿನ ತೈಲ ಪೂರೈಸುವ ಪ್ರದೇಶವು ಪ್ರಸ್ತುತ ಸಂಘರ್ಷ ಮತ್ತು ಯುದ್ಧದಲ್ಲಿ ಸಿಲುಕಿದೆ. ಆದ್ದರಿಂದ, ಪರಿಸ್ಥಿತಿಗಳು ಸಾಮಾನ್ಯವಾಗುವ ತನಕ, ನಾವೆಲ್ಲರೂ ಒಟ್ಟಿಗೆ ಸಣ್ಣ ಸಂಕಲ್ಪಗಳನ್ನು ಮಾಡಬೇಕು. ನಾನು ನಿನ್ನೆ ಕರ್ನಾಟಕ ಮತ್ತು ತೆಲಂಗಾಣದಲ್ಲಿ ಇದರ ಬಗ್ಗೆ ಮಾತನಾಡಿದ್ದೇನೆ, ಇಂದು ನಾನು ಗುಜರಾತ್‌ನಲ್ಲಿ ಅದನ್ನೇ ಮತ್ತೆ ಒತ್ತಿ ಹೇಳುತ್ತಿದ್ದೇನೆ. ನನಗೆ ನಿಮ್ಮ ಮೇಲೆ ಹೆಚ್ಚಿನ ಹಕ್ಕಿರುವುದರಿಂದ, ನಾನು ಪ್ರೀತಿಯಿಂದ ಹೇಳುತ್ತೇನೆ: ಸಾಧ್ಯವಾದಲ್ಲೆಲ್ಲಾ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಕಡಿಮೆ ಮಾಡಿ. ಮೆಟ್ರೋ ಸೇವೆಗಳು, ಎಲೆಕ್ಟ್ರಿಕ್ ಬಸ್‌ಗಳು ಮತ್ತು ಸಾರ್ವಜನಿಕ ಸಾರಿಗೆಯನ್ನು ಹೆಚ್ಚು ಬಳಸಿ. ಕಾರ್‌ಪೂಲಿಂಗ್ ಉತ್ತೇಜಿಸಿ. ಕಾರುಗಳನ್ನು ಹೊಂದಿರುವವರು ಹೆಚ್ಚಿನ ಜನರೊಂದಿಗೆ ಒಟ್ಟಿಗೆ ಪ್ರಯಾಣಿಸಬೇಕು. ಎಲೆಕ್ಟ್ರಿಕ್ ವಾಹನಗಳನ್ನು ಹೊಂದಿರುವವರು ಇತರರಿಗೆ ಸಹಾಯ ಮಾಡಲು ಮುಂದೆ ಬರಬೇಕು.

ಸ್ನೇಹಿತರೆ,

ಡಿಜಿಟಲ್ ತಂತ್ರಜ್ಞಾನವು ಅನೇಕ ವಿಷಯಗಳನ್ನು ಸುಲಭಗೊಳಿಸಿದೆ. ತಂತ್ರಜ್ಞಾನವು ನಮಗೆ ಹೆಚ್ಚಿನ ಪ್ರಯೋಜನ ನೀಡುತ್ತದೆ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ವರ್ಚುವಲ್ ಸಭೆಗಳು ಮತ್ತು ಮನೆಯಿಂದ ಕೆಲಸ ಮಾಡುವ ವ್ಯವಸ್ಥೆಗಳಿಗೆ ಆದ್ಯತೆ ನೀಡುವುದು ಮುಖ್ಯ. ಕೆಲವು ಶಾಲೆಗಳು ಸ್ವಲ್ಪ ಸಮಯದವರೆಗೆ ಆನ್‌ಲೈನ್ ತರಗತಿಗಳಿಗೆ ವ್ಯವಸ್ಥೆ ಮಾಡಿ, ಕೆಲಸ ಮಾಡುವಂತೆ ನಾನು ಮನವಿ ಮಾಡುತ್ತೇನೆ.

ಸ್ನೇಹಿತರೆ,

ಇಂಧನ ಮಾತ್ರವಲ್ಲ, ಖಾದ್ಯ ತೈಲ ಆಮದು ಕೂಡ ಹೆಚ್ಚಿನ ಪ್ರಮಾಣದ ವಿದೇಶಿ ವಿನಿಮಯವನ್ನು ಬಳಸುತ್ತದೆ. ನಾವು ಸಂಯಮ ವಹಿಸಿ ಅಡುಗೆ ಎಣ್ಣೆಯ ಬಳಕೆ ಕಡಿಮೆ ಮಾಡಿದರೆ, ದೇಶ ಮತ್ತು ನಮ್ಮ ಆರೋಗ್ಯ ಎರಡಕ್ಕೂ ಪ್ರಯೋಜನವಾಗುತ್ತದೆ. ನಾನು ವಿಶೇಷವಾಗಿ ಸೂರತ್ ಜನರಿಗೆ ಇದನ್ನು ಹೇಳುತ್ತೇನೆ.

ಅದೇ ರೀತಿ, ನಿಮ್ಮ ಕುಟುಂಬದ ಸದಸ್ಯನಾಗಿ, ನಾನು ಎಲ್ಲಾ ಸಹೋದರ ಸಹೋದರಿಯರಿಗೆ ಮನವಿ ಮಾಡುತ್ತೇನೆ, ಚಿನ್ನದ ಆಮದು ಕೂಡ ಭಾರಿ ವಿದೇಶಿ ವಿನಿಮಯ ಹೊರಹರಿವಿಗೆ ಕಾರಣವಾಗುತ್ತದೆ. ಪರಿಸ್ಥಿತಿಗಳು ಸಾಮಾನ್ಯವಾಗುವ ತನಕ, ನಾವು ಚಿನ್ನ ಖರೀದಿಸುವುದನ್ನು ಮುಂದೂಡಬೇಕೆಂದು ನಾನು ಎಲ್ಲಾ ದೇಶವಾಸಿಗಳನ್ನು ಒತ್ತಾಯಿಸುತ್ತೇನೆ. ಈಗ ಚಿನ್ನದ ಅಗತ್ಯವಿಲ್ಲ.

ಸ್ನೇಹಿತರೆ,

ಇಂದು “ಸ್ಥಳೀಯರ ಉತ್ಪನ್ನಗಳ ಉತ್ತೇಜನ”ವನ್ನು ಜನಾಂದೋಲನವನ್ನಾಗಿ ಮಾಡುವುದು ಈ ಸಮಯದ ಅಗತ್ಯವಾಗಿದೆ. ವಿದೇಶಿ ವಸ್ತುಗಳ ಖರೀದಿಸಿ ನಿಲ್ಲಿಸಿ, ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ. ನಿಮ್ಮ ಹಳ್ಳಿಗಳು, ನಗರಗಳು ಮತ್ತು ದೇಶದ ಉದ್ಯಮಿಗಳನ್ನು ಬಲಪಡಿಸಿ. ಇಲ್ಲಿ ಕುಳಿತಿರುವ ಅನೇಕ ಜನರು ಅತ್ಯುತ್ತಮ ಮತ್ತು ವಿಶ್ವ ದರ್ಜೆಯ ವಸ್ತುಗಳನ್ನು ಉತ್ಪಾದಿಸುತ್ತಾರೆ.

ಸ್ನೇಹಿತರೆ,

ನಮ್ಮಲ್ಲಿ ಹೆಚ್ಚಿನವರು ಕೃಷಿ ಹಿನ್ನೆಲೆಯಿಂದ ಬಂದವರು. ಕೃಷಿಯಲ್ಲಿ, ನಾವು ಸ್ಥಳೀಯ ರಸಗೊಬ್ಬರಗಳು ಮತ್ತು ನೈಸರ್ಗಿಕ ಕೃಷಿಯನ್ನು ಉತ್ತೇಜಿಸಬೇಕು. ಸೌರ ಪಂಪ್‌ಗಳು ಡೀಸೆಲ್ ಪಂಪ್‌ಗಳನ್ನು ಬದಲಾಯಿಸಬೇಕು. ನಾವೆಲ್ಲರೂ ರೈತರ ಮಕ್ಕಳಾಗಿದ್ದೇವೆ. ನಾವು ಮೊದಲು ನಮ್ಮ ಹೊಲಗಳು ಮತ್ತು ಭೂಮಿ ತಾಯಿಯನ್ನು ಉಳಿಸಬೇಕು. ರಾಸಾಯನಿಕ ಗೊಬ್ಬರಗಳ ಮೂಲಕ ನಾವು ನಮ್ಮ ಮಣ್ಣನ್ನು ನಾಶಪಡಿಸಬಾರದು. ಆದ್ದರಿಂದ, ನಿಮ್ಮ ಹಳ್ಳಿಯಲ್ಲಿರುವ ಪ್ರತಿಯೊಬ್ಬ ರೈತನಿಗೆ ರಾಸಾಯನಿಕ ಗೊಬ್ಬರಗಳಿಗೆ ಮುಕ್ತಿ ನೀಡಿ, ನೈಸರ್ಗಿಕ ಕೃಷಿಯ ಕಡೆಗೆ ಮಾರ್ಗದರ್ಶನ ನೀಡುವಂತೆ ನಾನು ನಿಮ್ಮೆಲ್ಲರನ್ನು ಕೋರುತ್ತೇನೆ.

ಸ್ನೇಹಿತರೆ,

ನಿಮ್ಮಲ್ಲಿ ಅನೇಕರಿಗೆ ಅನ್ವಯಿಸುವ ಇನ್ನೊಂದು ಪ್ರಮುಖ ವಿಷಯವಿದೆ. ದಯವಿಟ್ಟು ಆಕ್ಷೇಪಣೆ ತರಬೇಡಿ. ರಜೆಗಳು ಆರಂಭವಾದ ತಕ್ಷಣ, ಮಕ್ಕಳಿಗೆ ವಿದೇಶಗಳಿಗೆ ಹೋಗಲು ಟಿಕೆಟ್ ಒದಗಿಸುವುದು ಫ್ಯಾಷನ್ ಆಗಿಹೋಗಿದೆ. ಜನರು ವಿದೇಶಗಳಲ್ಲಿ ರಜೆಗಳನ್ನು ಕಳೆಯುತ್ತಾರೆ. ಬೇಸಿಗೆ ರಜಾದಿನಗಳು ಸಮೀಪಿಸುತ್ತಿವೆ. ಇತ್ತೀಚಿನ ದಿನಗಳಲ್ಲಿ ವಿದೇಶ ಪ್ರವಾಸ ಮತ್ತು ಗಮ್ಯಸ್ಥಾನ ವಿವಾಹಗಳು ಬೆಳೆಯುತ್ತಿರುವ ಪ್ರವೃತ್ತಿಯಾಗಿವೆ. ಮೊದಲು, ಜನರು ನನಗೆ ಆಹ್ವಾನಗಳನ್ನು ಕಳುಹಿಸುತ್ತಿದ್ದರು, ಈಗ ಅವರು ಕಳುಹಿಸುತ್ತಿಲ್ಲ, ಏಕೆಂದರೆ ಮದುವೆಗಳು ವಿದೇಶಗಳಲ್ಲಿ ನಡೆಯುತ್ತಿವೆ. ಆದರೆ ಇದು ಭಾರಿ ವಿದೇಶಿ ವಿನಿಮಯ ವೆಚ್ಚಕ್ಕೂ ಕಾರಣವಾಗುತ್ತಿದೆ.

ಸ್ನೇಹಿತರೆ,

ಇದರ ಬಗ್ಗೆ ಯೋಚಿಸಿ. ಭಾರತದಲ್ಲಿ ನಮ್ಮ ರಜಾ ದಿನಗಳನ್ನು ಕಳೆಯಲು ಯಾವುದೇ ಸುಂದರವಾದ ಸ್ಥಳಗಳಿಲ್ಲವೇ? ನಮ್ಮ ಮಕ್ಕಳಿಗೆ ನಮ್ಮ ಇತಿಹಾಸ ಕಲಿಸೋಣ, ನಮ್ಮ ಸ್ವಂತ ಸ್ಥಳಗಳ ಬಗ್ಗೆ ಹೆಮ್ಮೆ ಪಡೋಣ. ನಾವು ಭಾರತದೊಳಗೆ ರಜೆ ಕಳೆಯುವುದು ಮುಖ್ಯ, ಮದುವೆಗಳಿಗೂ ಸಹ. ಭಾರತಕ್ಕಿಂತ ಹೆಚ್ಚು ಪವಿತ್ರ ಸ್ಥಳ ಇರಬಹುದೆಂದು ನಾನು ನಂಬುವುದಿಲ್ಲ. ಇಲ್ಲಿ ಮದುವೆಗಳು ನಡೆದಾಗ, ನಮ್ಮ ಪೂರ್ವಜರ ಮಣ್ಣು ಸಹ ನಮ್ಮನ್ನು ಆಶೀರ್ವದಿಸುತ್ತದೆ.

ಮದುವೆಗಳಿಗೂ ಸಹ ಭಾರತವು ಅನೇಕ ಅದ್ಭುತ ಸ್ಥಳಗಳನ್ನು ಹೊಂದಿದೆ, ನಾವು ಅವುಗಳನ್ನು ಆಯ್ಕೆ ಮಾಡಬೇಕು. ಗುಜರಾತ್‌ನಲ್ಲೇ ಲೆಕ್ಕವಿಲ್ಲದಷ್ಟು ಸುಂದರವಾದ ಸ್ಥಳಗಳಿವೆ. ನಾನು ವಿಶೇಷವಾಗಿ ನನ್ನ ಪತಿ(ಪಾಟಿ)ದಾರ್ ಸಹೋದರರಿಗೆ ಹೇಳುತ್ತೇನೆ, ಈಗ ನೀವು ಏಕತಾ ಪ್ರತಿಮೆಯಲ್ಲಿ ವಿವಾಹಗಳನ್ನು ಆಯೋಜಿಸಬೇಕು, ಅಲ್ಲಿ ಸರ್ದಾರ್ ಸಾಹೇಬ್ ಸ್ವತಃ ಪ್ರತಿ ಮದುವೆಯನ್ನು ಆಶೀರ್ವದಿಸುತ್ತಾರೆ. ಹರಿದ್ವಾರ ಮತ್ತು ಋಷಿಕೇಶದಲ್ಲಿ ಶಾಂತಿ ಮತ್ತು ಆಧ್ಯಾತ್ಮಿಕತೆಗಾಗಿ ವ್ಯವಸ್ಥೆಗಳನ್ನು ಮಾಡಿರುವಂತೆಯೇ, ಮದುವೆಗಳಿಗೂ ಏಕತಾ ಪ್ರತಿಮೆಯಲ್ಲಿ ಇದೇ ರೀತಿಯ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಬೇಕು.

ಇತ್ತೀಚಿನ ವರ್ಷಗಳಲ್ಲಿ, ಏಕತಾ ಪ್ರತಿಮೆ ಮತ್ತು ಏಕತಾ ನಗರವು ಪ್ರಮುಖ ಪ್ರವಾಸೋದ್ಯಮ ಕೇಂದ್ರಗಳಾಗಿ ಹೊರಹೊಮ್ಮಿವೆ. ಸಾಧ್ಯವಾದಷ್ಟು ಜನರನ್ನು ಏಕತಾ ಪ್ರತಿಮೆಗೆ ಭೇಟಿ ನೀಡಲು ಪ್ರೋತ್ಸಾಹಿಸಲು ನಾವು ಸಂಕಲ್ಪ ಮಾಡಬಹುದೇ? ಅನೇಕ ಭಾರತೀಯರು ವಿದೇಶಗಳಲ್ಲಿ ವಾಸಿಸುತ್ತಿದ್ದಾರೆ, ಭಾರತವನ್ನು ನೋಡಲು ವಿದೇಶಿ ಕುಟುಂಬಗಳನ್ನು ಕರೆತರುವುದು ಅವರ ಜವಾಬ್ದಾರಿ ಎಂದು ನಾನು ಅವರಿಗೆ ಹೇಳುತ್ತೇನೆ. ಭಾರತ ಅಥವಾ ವಿದೇಶಗಳಲ್ಲಿ, ಇನ್ನೂ ಏಕತಾ ಪ್ರತಿಮೆಗೆ ಭೇಟಿ ನೀಡದ ನಿಮಗೆ ತಿಳಿದಿರುವ ಪ್ರತಿಯೊಂದು ಕುಟುಂಬವೂ ಅಲ್ಲಿಗೆ ಒಮ್ಮೆಯಾದರೂ ಭೇಟಿ ನೀಡುವಂತೆ ಪ್ರೇರೇಪಿಸಿ. ಏಕತಾ ನಗರವು ಮದುವೆಗಳಿಗೆ ಅದ್ಭುತ ತಾಣವಾಗಬಹುದು. ಏಕತಾ ಪ್ರತಿಮೆಯಲ್ಲಿನ ಸೌಲಭ್ಯಗಳು ಅತ್ಯುತ್ತಮವಾಗಿವೆ, ವಿಶ್ವದ ಅತಿ ಎತ್ತರದ ಪ್ರತಿಮೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರದು ಎಂದು ನಾವೆಲ್ಲರೂ ಹೆಮ್ಮೆಪಡುತ್ತೇವೆ. ಈ ದೇಶದ ಯಾವುದೇ ನಾಗರಿಕರು ಇದರಲ್ಲಿ ಹೆಮ್ಮೆಪಡದೆ ಇರಲು ಸಾಧ್ಯವಿಲ್ಲ.

ಸ್ನೇಹಿತರೆ,

ನಾನು ಉಲ್ಲೇಖಿಸಿರುವ ಪ್ರಯತ್ನಗಳೆಲ್ಲವೂ ಸಣ್ಣ ಪ್ರಯತ್ನಗಳಾಗಿವೆ. ನಾನು ನಿಮ್ಮನ್ನು ಕಷ್ಟಕರವಾದದ್ದನ್ನು ಮಾಡಲು ಕೇಳಿಲ್ಲ. ಆದರೆ ನೆನಪಿಡಿ, 140 ಕೋಟಿ ಭಾರತೀಯರು ಒಂದೇ ಸಂಕಲ್ಪದೊಂದಿಗೆ ಒಟ್ಟಾಗಿ ಸಾಗಿದಾಗ ಸಣ್ಣ ಪ್ರಯತ್ನಗಳು ಸಹ ದೇಶದ ದೊಡ್ಡ ಶಕ್ತಿಯಾಗುತ್ತವೆ. 140 ಕೋಟಿ ಜನರು ಒಂದು ಹೆಜ್ಜೆ ಮುಂದಿಟ್ಟಾಗ ದೇಶವು 140 ಕೋಟಿ ಹೆಜ್ಜೆ ಮುಂದಕ್ಕೆ ಸಾಗುತ್ತದೆ.

ಆದ್ದರಿಂದ, ಮತ್ತೊಮ್ಮೆ ಯಾವುದೇ ಬಿಕ್ಕಟ್ಟು ನಮ್ಮ ಪ್ರಗತಿ ಮತ್ತು ಅಭಿವೃದ್ಧಿಗೆ ಅಡ್ಡಿಯಾಗದಂತೆ ನಾವು ಒಂದಾಗಬೇಕು. ಒಟ್ಟಾಗಿ ನಾವು ಈ ಸಂಕಲ್ಪಗಳನ್ನು ಪೂರೈಸುತ್ತೇವೆ, ದೇಶವನ್ನು ಬಲಪಡಿಸುತ್ತೇವೆ ಎಂಬ ವಿಶ್ವಾಸ ನನಗಿದೆ.

ನಾನು ಗಗ್ಜಿ ಭಾಯಿ ಅವರಿಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ನೀವು ನನಗೆ ಸರ್ದಾರ್ ಗೌರವ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದೀರಿ. ಸರ್ದಾರ್ ಸಾಹೇಬರ ಹೆಸರಿನಲ್ಲಿ ಪ್ರಶಸ್ತಿಗೆ ಪಡೆದಾಗ, ಜವಾಬ್ದಾರಿ ಬಹಳ ಹೆಚ್ಚಾಗುತ್ತದೆ. ಒಂದು ರೀತಿಯಲ್ಲಿ, ಗಗ್ಜಿ ಭಾಯ್ ನನ್ನನ್ನು ಜಾಣತನದಿಂದ ಕಟ್ಟಿಹಾಕಿ ಹಿಂದೆ ಸರಿಯಬೇಡಿ ಎಂದು ಹೇಳಿದ್ದಾರೆ. ಬಹುಶಃ ನನ್ನ ಹಣೆಬರಹದಲ್ಲಿ ಸರ್ದಾರ್ ಸಾಹೇಬರ ಎಲ್ಲಾ ಕನಸುಗಳು ಮತ್ತು ಅಪೂರ್ಣ ಕೆಲಸಗಳು ನನ್ನಿಂದಲೇ ಪೂರ್ಣಗೊಳ್ಳಬೇಕು ಎಂದು ಬರೆಯಲಾಗಿದೆ.

ಇಂದು ಈ ಗೌರವ ಮತ್ತು ಪ್ರಶಸ್ತಿ ಪಡೆದ ನಂತರ ನಿಮ್ಮ ಆಶೀರ್ವಾದದೊಂದಿಗೆ, ಗುಜರಾತ್ ಮಣ್ಣಿನಿಂದ ನಾನು ಪಡೆದ ಶಕ್ತಿ ಮತ್ತು ಮೌಲ್ಯಗಳು ಸರ್ದಾರ್ ಸಾಹೇಬರ ಕನಸುಗಳನ್ನು ನನಸಾಗಿಸುವ ಕೆಲಸದಿಂದ ನಾನು ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ. ಗುಜರಾತ್ ನನ್ನ ಸ್ವಭಾವವನ್ನು ಚೆನ್ನಾಗಿ ತಿಳಿದಿದೆ,  ನನಗೆ ಹಿಂದೆ ಸರಿಯುವುದನ್ನು ಹೇಗೆ ಮಾಡಬೇಕೆಂದು ತಿಳಿದಿಲ್ಲ.

ಈ ಗೌರವ ನನಗೆ ತುಂಬಾ ಅರ್ಥಪೂರ್ಣವಾಗಿದೆ. ನಾನು ಒಮ್ಮೆ ಜನರಲ್ ಕಾರಿಯಪ್ಪ ಅವರ ಬಗ್ಗೆ ಒಂದು ಉಪಾಖ್ಯಾನವನ್ನು ಓದಿದ್ದೆ. ಅವರನ್ನು ಗೌರವಿಸಲು ಅವರ ಗ್ರಾಮದಲ್ಲಿ ಒಂದು ಸಮಾರಂಭ ನಡೆಯುತ್ತಿತ್ತು, ಅವರು ತುಂಬಾ ಸಂತೋಷಪಟ್ಟರು. ಜನರು ಏಕೆ ಎಂದು ಕೇಳಿದಾಗ, ಪ್ರಪಂಚದಾದ್ಯಂತ ಅವರು ಮಿಲಿಟರಿ ಸಂಪ್ರದಾಯಗಳ ಪ್ರಕಾರ ಸೆಲ್ಯೂಟ್ ಮತ್ತು ಗೌರವಗಳನ್ನು ಪಡೆದರು, ಆದರೆ ಸ್ವಂತ ಊರಿನಲ್ಲಿ (ಮನೆಯಲ್ಲಿ) ಗೌರವ ಪಡೆಯುವ ಸಂತೋಷವು ಸಂಪೂರ್ಣ ವಿಭಿನ್ನವಾಗಿದೆ ಎಂದು ಅವರು ಹೇಳಿದ್ದರು.

ಅಂತೆಯೇ ಇಂದು ಭಾರತವು ಶಕ್ತಿಶಾಲಿಯಾಗುತ್ತಿರುವುದರಿಂದ ಭಾರತದ ಪ್ರಧಾನ ಮಂತ್ರಿಯನ್ನು ವಿಶ್ವಾದ್ಯಂತ ಗೌರವಿಸಲಾಗಿದೆ. ಆದರೆ ಒಬ್ಬ ವ್ಯಕ್ತಿಯು ತನ್ನ ಸ್ವಂತ ಜನರಿಂದ, ತನ್ನ ಸ್ವಂತ ಊರಿನಿಂದ(ಕುಟುಂಬದಿಂದ) ಆಶೀರ್ವಾದ ಪಡೆದಾಗ, ಅದು ನಿಜಕ್ಕೂ ಕೆಲಸ ಮಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ.

ಈ ಸರ್ದಾರ್ ರತ್ನ ಪ್ರಶಸ್ತಿಯ ರೂಪದಲ್ಲಿ ನೀವು ನನಗೆ ನೀಡಿದ ಆಶೀರ್ವಾದಗಳಿಗಾಗಿ ನಾನು ನಿಮ್ಮೆಲ್ಲರಿಗೂ ತುಂಬಾ ಕೃತಜ್ಞನಾಗಿದ್ದೇನ, ನಾನು ಈ ಋಣವನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ.

ಮತ್ತೊಮ್ಮೆ, ನಿಮ್ಮ ಮುಂದುವರಿದ ಕನಸುಗಳು ಮತ್ತು ಸಂಕಲ್ಪಗಳನ್ನು ಈಡೇರಿಸಲು ದೇವರು ನಿಮಗೆ ಶಕ್ತಿ ನೀಡಲಿ. ಸರ್ದಾರ್ ಸಾಹೇಬರ ಆಶೀರ್ವಾದಗಳು ಯಾವಾಗಲೂ ನಿಮ್ಮ ಮೇಲೆ ಇರಲಿ, ನೀವು ಪಂಕಜ್ ಭಾಯಿಯಂತಹ ನಾಯಕರನ್ನು ಸದಾ ಹೊಂದಿರಲಿ. ಇಲ್ಲಿ ಕುಳಿತಿರುವ ನಮ್ಮಲ್ಲಿ ಮೂವರು – ಪಂಕಜ್ ಭಾಯಿ, ನರಹರಿ ಅಮೀನ್ ಮತ್ತು ನಾನು – ವಿಶೇಷ ಸಂಪರ್ಕವನ್ನು ಹಂಚಿಕೊಳ್ಳುತ್ತೇವೆ – ನಾವೆಲ್ಲರೂ ನವನಿರ್ಮಾಣ ಆಂದೋಲನದ ಮಕ್ಕಳಾಗಿದ್ದೇವೆ. ಇಂದು ಪಂಕಜ್ ಭಾಯಿ ಕೂಡ ಒಂದು ಪ್ರಮುಖ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಎಂಬುದನ್ನು ತಿಳಿದು ನನಗೆ ಸಂತೋಷವಾಗಿದೆ.

ಸರ್ದಾರ್ ಅವರಿಗೆ ನಮಸ್ಕಾರ! ಸರ್ದಾರ್ ಅವರಿಗೆ ನಮಸ್ಕಾರ! ಧನ್ಯವಾದಗಳು. ತುಂಬು ಧನ್ಯವಾದಗಳು.

ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾದ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.

 

*****