ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಉತ್ತರ ಪ್ರದೇಶದ ಗೋರಖ್ಪುರದಲ್ಲಿ ಪ್ರಧಾನಮಂತ್ರಿ ಸ್ವಾಸ್ಥ್ಯ ಸುರಕ್ಷಾ ಯೋಜನೆ ಅಡಿಯಲ್ಲಿ (ಪಿ.ಎಂ.ಎಸ್.ಎಸ್.ವೈ.) ನೂತನ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎ.ಐ.ಐ.ಎಂ.ಎಸ್.) ಸ್ಥಾಪನೆಗೆ ತನ್ನ ಅನುಮೋದನೆ ನೀಡಿದೆ.
ಗೋರಖ್ಪುರದಲ್ಲಿ ನೂತನ ಎ.ಐ.ಐ.ಎಂ.ಎಸ್. ಸ್ಥಾಪನೆಗೆ 1011 ಕೋಟಿ ರೂಪಾಯಿಗಳ ವೆಚ್ಚ ಆಗಲಿದೆ. ಈ ಮೇಲಿನ ಅಂದಾಜು ವೆಚ್ಚವು ಆವರ್ತನ ವೆಚ್ಚ (ವೇತನ ಮತ್ತು ಕೂಲಿ ಹಾಗೂ ನಿರ್ವಹಣೆ ಮತ್ತು ಕಾರ್ಯಾಚರಣೆ ವೆಚ್ಚಗಳು)ಗಳನ್ನು ಒಳಗೊಂಡಿರುವುದಿಲ್ಲ. ಹೊಸ ಎ.ಐ.ಐ.ಎಂ.ಎಸ್.ಗಳು ತಮ್ಮ ಆವರ್ತನ ವೆಚ್ಚಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಪಿ.ಎಂ.ಎಸ್.ಎಸ್.ವೈ. ಶೀರ್ಷಿಕೆಯಡಿ ಯೋಜನಾ ಆಯವ್ಯಯದಡಿ ನೀಡಲಾಗುವ ಅನುದಾನದ ತಮ್ಮ ವಾರ್ಷಿಕ ಆಯವ್ಯಯದಿಂದ ಭರಿಸುತ್ತವೆ.
ಈ ಸಂಸ್ಥೆಯು ತುರ್ತುಚಿಕಿತ್ಸೆ/ಅಪಘಾತ ವಿಭಾಗದ ಹಾಸಿಗೆ, ಆಯುಷ್ ಹಾಸಿಗೆಗಳು, ಖಾಸಗಿ ಹಾಸಿಗೆ ಮತ್ತು ಐ.ಸಿ.ಯು. ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಹಾಸಿಗೆ ಸೇರಿದಂತೆ ಒಟ್ಟು 750 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯನ್ನು ಹೊಂದಲಿದೆ. ಇದರ ಜೊತೆಗೆ ಆಡಳಿತ ವಿಭಾಗ, ಆಯುಷ್ ವಿಭಾಗ, ಸಭಾಂಗಣ, ರಾತ್ರಿ ತಂಗುದಾಣ, ಹಾಸ್ಟೆಲ್ ಗಳು ಮತ್ತು ವಸತಿ ಸೌಲಭ್ಯವನ್ನೂ ಹೊಂದಿರುತ್ತದೆ.
ನೂತನ ಎ.ಐ.ಐ.ಎಂ.ಎಸ್. ಸ್ಥಾಪನೆಯಿಂದ ಎರಡು ಉದ್ದೇಶಗಳು ಸಫಲವಾಗುತ್ತವೆ. ಜನತೆಗೆ ಸೂಪರ್ ಸ್ಪೆಷಾಲಿಟಿ ಆರೋಗ್ಯ ಸೇವೆ ಒದಗಿಸುವುದರ ಜೊತೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್.ಎಚ್.ಎಂ.) ಅಡಿ ಈ ವಲಯದಲ್ಲಿ ಸೃಷ್ಟಿಸಲಾಗುವ ಪ್ರಾಥಮಿಕ ಮತ್ತು ಮಾಧ್ಯಮಕ ಹಂತದ ಸಂಸ್ಥೆಗಳು/ಸೌಲಭ್ಯಗಳಲ್ಲಿ ಲಭ್ಯವಾಗುವ ದೊಡ್ಡ ಸಂಖ್ಯೆಯ ವೈದ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರ ದಂಡನ್ನೇ ರಚಿಸುತ್ತದೆ. ಈ ಸಂಸ್ಥೆಯು ಪ್ರಾದೇಶಿಕ ಪ್ರಚಲಿತ ಕಾಯಿಲೆಗಳ ಮತ್ತು ಇತರ ಆರೋಗ್ಯ ಸಮಸ್ಯೆಗಳ ಬಗ್ಗೆ ಸಂಶೋಧನೆ ನಡೆಸುತ್ತದೆ ಮತ್ತು ಅಂಥ ಕಾಯಿಲೆಗಳ ನಿಯಂತ್ರಣ ಮತ್ತು ಉತ್ತಮ ಚಿಕಿತ್ಸೆ ಒದಗಿಸುತ್ತದೆ.
ಉತ್ತರ ಪ್ರದೇಶದ 14 ಜಿಲ್ಲೆಗಳು, ಉತ್ತರ ಪ್ರದೇಶದ ಪೂರ್ವ ವಲಯದಲ್ಲಿನ ನಾಲ್ಕು ಆಯುಕ್ತಾಲಯ (ಗೋರಖ್ಪುರ, ಅಜಂಗಢ, ಬಸ್ತಿ ಮತ್ತು ಪಟಾನ್) ಮತ್ತು ಪೂರ್ವ ಬಿಹಾರದ 5 ಜಿಲ್ಲೆಗಳು (ಪಶ್ಚಿಮ ಚಂಪಾರಣ್, ಪೂರ್ವ ಚಂಪಾರಣ್, ಸರನ್, ಸಿವಾನ್ ಮತ್ತು ಗೋಪಾಲಗಂಜ್) ಒಳಗೊಂಡ ಎಲ್ಲ ಜನಸಂಖ್ಯೆಗೆ ಈ ನೂತನ ಎ.ಐ.ಐ.ಎಂ.ಎಸ್.ನಿಂದ ಲಾಭವಾಗಲಿದೆ.
ಹಿನ್ನೆಲೆ
ಪಿ.ಎಂ.ಎಸ್.ಎಸ್.ವೈ. ಅಡಿಯಲ್ಲಿ ಎ.ಐ.ಐ.ಎಂ.ಎಸ್. ಸ್ಥಾಪನೆಯ ಉದ್ದೇಶ ದೇಶದಲ್ಲಿನ ಆರೋಗ್ಯ ಸೇವೆಯ ಮಟ್ಟದಲ್ಲಿ ವಲಯದಲ್ಲಿ ಕೈಗೆಟಕುವ/ವಿಶ್ವಾಸಾರ್ಹ ಸೇವೆಯ ಲಭ್ಯತೆಯ ಅಸಮತೋಲವನ್ನು ಸರಿಪಡಿಸುವುದು ಮತ್ತು ಹಿಂದುಳಿದ ಅಥವಾ ಸೇವೆವಂಚಿತ ರಾಜ್ಯಗಳಲ್ಲಿ ಗುಣಮಟ್ಟದ ಆರೋಗ್ಯ ಶಿಕ್ಷಣ ವ್ಯವಸ್ಥೆಯನ್ನು ತ್ವರಿತಗೊಳಿಸುವುದಾಗಿದೆ.
ಈ ಯೋಜನೆಯಡಿ ಭುವನೇಶ್ವರ್, ಭೋಪಾಲ್, ರಾಯಪುರ, ಜೋದ್ಪುರ, ಋಷಿಕೇಶ್ ಮತ್ತು ಪಟ್ನಾಗಳಲ್ಲಿ ಎ.ಐ.ಐ.ಎಂ.ಎಸ್. ಸ್ಥಾಪಿಸಲಾಗುತ್ತಿದ್ದರೆ, ರಾಯ್ ಬರೇಲಿಯ ಎ.ಐ.ಐ.ಎಂ.ಎಸ್. ಕಾಮಗಾರಿ ಪ್ರಗತಿಯಲ್ಲಿದೆ. ಅಲ್ಲದೆ ನಾಗ್ಪುರ (ಮಹಾರಾಷ್ಟ್ರ), ಕಲ್ಯಾಣಿ (ಪಶ್ಚಿಮ) ಮತ್ತು ಗುಂಟೂರಿನ ಮಂಗಳಗಿರಿ (ಎ.ಪಿ.)ಗಳಲ್ಲಿ ಮೂರು ಎ.ಐ.ಐ.ಎಂ.ಎಸ್.ಗಳಿಗೆ 2015ರಲ್ಲಿ ಮಂಜೂರಾತಿ ನೀಡಲಾಗಿದೆ.