ಚುನಾವಣಾ ಆಯೋಗ ಇತರ ದೇಶಗಳು/ಅಂತಾರಾಷ್ಟ್ರೀಯ ಸಂಸ್ಥೆಗಳ ಚುನಾವಣಾ ನಿರ್ವಹಣೆ ಸಂಸ್ಥೆಗಳ ಜತೆ ಮಾಡಿಕೊಳ್ಳಲಿರುವ ಒಡಂಬಡಿಕೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ
30 Aug, 2017
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನವದೆಹಲಿಯಲ್ಲಿಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆ ಚುನಾವಣಾ ಆಯೋಗ ಚುನಾವಣಾ ನಿರ್ವಹಣೆ ಹಾಗೂ ಆಡಳಿತ ಕ್ಷೇತ್ರದಲ್ಲಿ ಇತರ ದೇಶಗಳು/ಅಂತಾರಾಷ್ಟ್ರೀಯ ಸಂಸ್ಥೆಗಳ ಚುನಾವಣಾ ನಿರ್ವಹಣೆ ವಿಭಾಗಗಳ ಜತೆ ಒಡಂಬಡಿಕೆ ಮಾಡಿಕೊಳ್ಳುವ ಸಂಬಂಧದ ಪ್ರಸ್ತಾವಕ್ಕೆ ಅನುಮೋದನೆ ನೀಡಿದೆ. ಅವುಗಳೆಂದರೆ:
1. ಈಕ್ವಡಾರ್ ನ ರಾಷ್ಟ್ರೀಯ ಚುನಾವಣಾ ಪರಿಷತ್.
2. ಅಲ್ಬಾನಿಯಾದ ಕೇಂದ್ರೀಯ ಚುನಾವಣಾ ಆಯೋಗ.
3. ಭೂತಾನ್ ನ ಚುನಾವಣಾ ಆಯೋಗ.
4. ಅಫ್ಘಾನಿಸ್ತಾನದ ಸ್ವತಂತ್ರ ಚುನಾವಣಾ ಆಯೋಗ.
5. ಗ್ವಿನಿಯಾದ ರಾಷ್ಟ್ರೀಯ ಸ್ವತಂತ್ರ ಚುನಾವಣಾ ಆಯೋಗ.
6. ಮ್ಯಾನ್ಮಾರ್ ನ ಕೇಂದ್ರ ಚುನಾವಣಾ ಆಯೋಗ; ಮತ್ತು
7. ಪ್ರಜಾಪ್ರಭುತ್ವ ಮತ್ತು ಚುನಾವಣಾ ನಿರ್ವಣೆ ಮೇಲಿನ ಭಾರತ ಅಂತಾರಾಷ್ಟ್ರೀಯ ಸಂಸ್ಥೆ (ಐ.ಐ.ಐ.ಡಿ.ಎ.ಎಮ್) ಮತ್ತು ಪ್ರಜಾಪ್ರಭುತ್ವ ಮತ್ತು ಚುನಾವಣಾ ನೆರವಿಗೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸಂಸ್ಥೆ (ಅಂತಾರಾಷ್ಟ್ರೀಯ ಐ.ಡಿ.ಎ.ಎ.)
ಈ ಒಡಂಬಡಿಕೆಗಳು ಚುನಾವಣಾ ಪ್ರಕ್ರಿಯೆಯ ಸಾಂಸ್ಥಿಕ ಮತ್ತು ತಾಂತ್ರಿಕ ಅಭಿವೃದ್ಧಿ ಕ್ಷೇತ್ರದಲ್ಲಿನ ಜ್ಞಾನ ಮತ್ತು ಅನುಭವ ವಿನಿಮಯ; ಮಾಹಿತಿ ವಿನಿಮಯಕ್ಕೆ ಬೆಂಬಲ, ಸಾಂಸ್ಥಿಕ ಬಲವರ್ಧನೆ ಮತ್ತು ಸಾಮರ್ಥ್ಯ ವೃದ್ಧಿ, ಸಿಬ್ಬಂದಿಯ ತರಬೇತಿ, ನಿಯಮಿತವಾಗಿ ಸಮಾಲೋಚನೆಗಳನ್ನು ನಡೆಸುವುದು – ಈ ವಲಯಗಳಲ್ಲಿ ಸಹಕಾರಕ್ಕೆ ಉತ್ತೇಜನ ನೀಡುವುದಕ್ಕೆ ಸಂಬಂಧಿಸಿ ಒಂದು ಮಾನದಂಡಕ್ಕೆ ಅನುಗುಣವಾದ ವಿಧಿಗಳನ್ನು ಒಳಗೊಂಡಿರುತ್ತವೆ.
ಈ ಒಡಂಬಡಿಕೆಗಳು ದ್ವಿಪಕ್ಷೀಯ ಸಹಕಾರಕ್ಕೆ ಉತ್ತೇಜನ ನೀಡುವುದರ ಜತೆಗೆ ಮೇಲಿನ ಚುನಾವಣಾ ನಿರ್ವಹಣೆ ಸಂಸ್ಥೆಗಳಿಗೆ ತಾಂತ್ರಿಕ ನೆರವು/ಸಾಮರ್ಥ್ಯ ಬೆಂಬಲ ಹೆಚ್ಚಿಸುವ ಗುರಿ ಹೊಂದಿವೆ.
ಹಿನ್ನೆಲೆ:
ಚುನಾವಣಾ ಆಯೋಗ ಚುನಾವಣಾ ವಿಷಯಗಳು ಹಾಗೂ ಚುನಾವಣಾ ಪ್ರಕ್ರಿಯೆಯಲ್ಲಿ ಜಗತ್ತಿನ ವಿವಿಧ ದೇಶಗಳು ಹಾಗೂ ಸಂಸ್ಥೆಗಳ ಜತೆ ಸಹಕಾರಕ್ಕೆ ಉತ್ತೇಜನ ನೀಡುವುದರಲ್ಲಿ ಭಾಗಿಯಾಗಿದೆ. ಇದು ಆಯಾ ಸಂಸ್ಥೆಗಳು ಮಾಡಿಕೊಳ್ಳುವ ಒಡಂಬಡಿಕೆಯನ್ನು ಆಧರಿಸಿದ್ದಾಗಿದೆ. ಸಾಂವಿಧಾನಿಕ ಸಂಸ್ಥೆಯಾದ ಚುನಾವಣಾ ಆಯೋಗ ಜಗತ್ತಿನಲ್ಲೆ ಅತಿ ದೊಡ್ಡ ಚುನಾವಣಾ ಪ್ರಕ್ರಿಯೆಯನ್ನು ನಿರ್ವಹಿಸುತ್ತಿದೆ. ವೈವಿಧ್ಯಮಯ ಸಾಮಾಜಿಕ-ರಾಜಕೀಯ ಹಾಗೂ ಆರ್ಥಿಕ ಹಿನ್ನೆಲೆಯ ಸುಮಾರು 85 ಕೋಟಿ ಮತದಾರರಿರುವ ದೇಶದಲ್ಲಿ ಮುಕ್ತ ಮತ್ತು ನ್ಯಾಯಸಮ್ಮತ ರೀತಿಯಲ್ಲಿ ಚುನಾವಣೆ ನಡೆಸುವುದು ಚುನಾವಣಾ ಆಯೋಗದ ಜವಾಬ್ದಾರಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಚುನಾವಣಾ ಆಯೋಗ ನಿರ್ವಹಿಸುತ್ತಿರುವ ಪಾತ್ರ ಜನತೆ ರಾಜಕೀಯ ಆಗುಹೋಗುಗಳಲ್ಲಿ ಹೆಚ್ಚಿನ ರೀತಿಯಲ್ಲಿ ಪಾಲ್ಗೊಳ್ಳುವುದನ್ನು ಖಾತ್ರಿಪಡಿಸುತ್ತದೆ. ಇಂದು ಭಾರತ ಜಗತ್ತಿನಲ್ಲೆ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾಗಿದೆ. ಭಾರತದಲ್ಲಿ ಪ್ರಜಾಸತ್ತೆಯ ಯಶಸ್ಸು ವಿಶ್ವದ ಬಹುತೇಕ ಪ್ರತಿಯೊಂದು ರಾಜಕೀಯ ವ್ಯವಸ್ಥೆಯ ಗಮನ ಸೆಳೆದಿದೆ.