ಪಿಎಂಇಂಡಿಯಾ
ತಮಿಳುನಾಡಿನ ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೇಕರ್ ಅವರೇ, ಮುಖ್ಯಮಂತ್ರಿ ಶ್ರೀ ಸಿ. ಜೋಸೆಫ್ ವಿಜಯ್ ಅವರೇ, ಕೇಂದ್ರ ಸಚಿವ ಸಂಪುಟದ ನನ್ನ ಸಹೋದ್ಯೋಗಿಗಳಾದ ಶ್ರೀ ಎಲ್. ಮುರುಗನ್ ಅವರೇ, ಶ್ರೀ ನೈನಾರ್ ನಾಗೇಂದ್ರನ್ ಅವರೇ, ನನ್ನ ತಮಿಳು ಸಹೋದರ ಸಹೋದರಿಯರೇ, ವಣಕ್ಕಂ.
ಚೆನ್ನೈನಲ್ಲಿ ನಿಮ್ಮೆಲ್ಲರೊಂದಿಗೆ ಇರುವುದು ನನಗೆ ಸಂತೋಷದ ಸಂಗತಿಯಾಗಿದೆ. ತಮಿಳುನಾಡಿಗೆ ಇಂದು ಐತಿಹಾಸಿಕ ದಿನವಾಗಿದೆ. ಇಂದಿನ ಕಾರ್ಯಕ್ರಮದಲ್ಲಿ ₹13,000 ಕೋಟಿ ಮೌಲ್ಯದ ಯೋಜನೆಗಳು ಸೇರಿವೆ. ಪೂರ್ಣಗೊಂಡಿರುವ ಹಲವು ಯೋಜನೆಗಳನ್ನು ಉದ್ಘಾಟಿಸುತ್ತಿದ್ದೇವೆ ಮತ್ತು ಹೊಸ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದೇವೆ. ಇವುಗಳಲ್ಲಿ ಕೆಲವು ಯೋಜನೆಗಳು ಜನರ ದೈನಂದಿನ ಪ್ರಯಾಣವನ್ನು ಸುಲಭಗೊಳಿಸಲಿವೆ. ಇನ್ನು ಕೆಲವು ಕೈಗಾರಿಕೆ ಮತ್ತು ವ್ಯಾಪಾರವನ್ನು ಬಲಪಡಿಸಲಿವೆ. ಈ ಎಲ್ಲ ಯೋಜನೆಗಳು ಒಟ್ಟಾಗಿ ತಮಿಳುನಾಡಿನ ಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿವೆ. ಈ ಸಂದರ್ಭದಲ್ಲಿ ರಾಜ್ಯದ ಜನರಿಗೆ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಇಂದು ಪವಿತ್ರ ನವರಾತ್ರಿ ಹಬ್ಬದ ಆರಂಭದ ದಿನವಾಗಿದೆ. ನವರಾತ್ರಿಯ ಈ ಶುಭ ಸಂದರ್ಭದಲ್ಲಿ, ಶಿವ ಮತ್ತು ಶಕ್ತಿಯ ಪವಿತ್ರ ನೆಲವಾದ ತಮಿಳುನಾಡಿನಲ್ಲಿ, ಈ ಕಾರ್ಯಕ್ರಮಕ್ಕೆ ಬರುವ ಮೊದಲು ಜಲಕಂಠೇಶ್ವರರ್ ದೇವಸ್ಥಾನದಲ್ಲಿ ಶಿವನ ಆಶೀರ್ವಾದ ಪಡೆಯುವ ಭಾಗ್ಯವೂ ನನಗೆ ದೊರೆಯಿತು. ತಮಿಳುನಾಡಿನ ಈ ಪವಿತ್ರ ಸ್ಥಳದಿಂದ ದೇಶದ ಸಮಸ್ತ ನಾಗರಿಕರಿಗೆ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರುತ್ತೇನೆ.
ಸ್ನೇಹಿತರೇ,
ಇಂದು ಭಾರತ ರತ್ನ ಜಯಪ್ರಕಾಶ್ ನಾರಾಯಣ್ ಮತ್ತು ಭಾರತ ರತ್ನ ನಾನಾಜಿ ದೇಶಮುಖ್ ಅವರ ಜನ್ಮದಿನವೂ ಆಗಿದೆ. ಈ ಇಬ್ಬರು ಮಹಾನ್ ವ್ಯಕ್ತಿಗಳ ಜೀವನವು ರಾಷ್ಟ್ರ ಸೇವೆಗಾಗಿ ಇನ್ನಷ್ಟು ಸಮರ್ಪಣಾಭಾವದಿಂದ ಕಾರ್ಯನಿರ್ವಹಿಸಲು ನಮಗೆ ಸ್ಫೂರ್ತಿ ನೀಡುತ್ತದೆ. ಈ ವೇದಿಕೆಯಿಂದ ಆ ಇಬ್ಬರು ಮಹಾನ್ ವ್ಯಕ್ತಿಗಳಿಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೇ,
ಸ್ವಲ್ಪ ಸಮಯದ ಹಿಂದೆ, ಐಐಟಿ ಮದ್ರಾಸ್ನಲ್ಲಿರುವ ಮೆದುಳು ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡುವ ಅವಕಾಶ ನನಗೆ ದೊರೆಯಿತು. ಈ ಕ್ಷೇತ್ರದಲ್ಲಿ ನಡೆಯುತ್ತಿರುವ ಸಂಶೋಧನೆಗಳು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಹಲವು ಹೊಸ ಅವಕಾಶಗಳನ್ನು ಸೃಷ್ಟಿಸಬಲ್ಲವು. ಈ ಭೇಟಿಯ ಜೊತೆಗೆ, ಚೆನ್ನೈ ಮೆಟ್ರೊದ ಮತ್ತೊಂದು ಮಾರ್ಗವನ್ನು ಸಾರ್ವಜನಿಕರ ಬಳಕೆಗೆ ಸಮರ್ಪಿಸುವ ಅವಕಾಶವೂ ನನಗೆ ದೊರೆಯಿತು.
ಸ್ನೇಹಿತರೇ,
ದೇವಾಲಯದಿಂದ ಮೆಟ್ರೊವರೆಗಿನ ಈ ಅನುಭವಗಳು ಇಂದಿನ ಭಾರತದ ಸ್ವರೂಪವನ್ನು ಪ್ರತಿಬಿಂಬಿಸುತ್ತವೆ. ಭಾರತವು ತನ್ನ ಸಾಂಸ್ಕೃತಿಕ ಶಕ್ತಿಯಿಂದ ಸ್ಫೂರ್ತಿ ಪಡೆದು, ವೈಜ್ಞಾನಿಕ ಪ್ರಗತಿಯ ಮೂಲಕ ಮುನ್ನಡೆಯುತ್ತಿದೆ ಮತ್ತು ಆಧುನಿಕ ಮೂಲಸೌಕರ್ಯದ ಮೂಲಕ ಹೊಸ ಅವಕಾಶಗಳನ್ನು ಸೃಷ್ಟಿಸುತ್ತಿದೆ. ನಮ್ಮ ಪರಂಪರೆ ಮತ್ತು ಭವಿಷ್ಯದ ಕುರಿತಾದ ನಮ್ಮ ಆಕಾಂಕ್ಷೆಗಳು ಜೊತೆಜೊತೆಯಾಗಿ ಮುನ್ನಡೆಯುತ್ತಿವೆ.
ಸ್ನೇಹಿತರೇ,
ಕೆಲವು ದಿನಗಳ ಹಿಂದೆ, ನಿಮ್ಮ ಆಶೀರ್ವಾದ ಮತ್ತು ದೇಶದ ಜನರ ಪ್ರೀತಿಯಿಂದ ಸರ್ಕಾರದ ಮುಖ್ಯಸ್ಥನಾಗಿ ನಿರಂತರ 25 ವರ್ಷಗಳನ್ನು ಪೂರ್ಣಗೊಳಿಸುವ ಮಹತ್ವದ ಮೈಲಿಗಲ್ಲನ್ನು ತಲುಪಿದ್ದೇನೆ. 2001ರ ಅಕ್ಟೋಬರ್ನಲ್ಲಿ ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದೆ. ಅಂದಿನಿಂದ ದೇಶದ ಜನರು ಮೊದಲು ಮುಖ್ಯಮಂತ್ರಿಯಾಗಿ, ನಂತರ ಪ್ರಧಾನಮಂತ್ರಿಯಾಗಿ ಸೇವೆ ಸಲ್ಲಿಸುವ ಅವಕಾಶವನ್ನು ನನಗೆ ನೀಡಿದ್ದಾರೆ. ಈ 25 ವರ್ಷಗಳಲ್ಲಿ ಪ್ರಜಾಪ್ರಭುತ್ವದ ಎರಡು ಶಕ್ತಿಗಳ ಮೇಲಿನ ನನ್ನ ನಂಬಿಕೆ ನಿರಂತರವಾಗಿ ಹೆಚ್ಚುತ್ತ ಬಂದಿದೆ. ಮೊದಲನೆಯದು ದೇಶದ ಜನರು. ಎರಡನೆಯದು ಸಹಕಾರಿ ಒಕ್ಕೂಟ ವ್ಯವಸ್ಥೆ. ರಾಜ್ಯಗಳ ಅಭಿವೃದ್ಧಿಯ ಮೂಲಕವೇ ರಾಷ್ಟ್ರದ ಅಭಿವೃದ್ಧಿ ಸಾಧ್ಯ ಎಂಬ ಮಂತ್ರವನ್ನು ನಾನು ಸದಾ ಅನುಸರಿಸಿದ್ದೇನೆ.
ಸ್ನೇಹಿತರೇ,
ಮುಖ್ಯಮಂತ್ರಿಯಾಗಿದ್ದಾಗ ರಾಜ್ಯಗಳ ನಿರೀಕ್ಷೆಗಳನ್ನು ಖುದ್ದಾಗಿ ಅರ್ಥಮಾಡಿಕೊಳ್ಳಲು ನನಗೆ ಸಾಧ್ಯವಾಯಿತು. ಆದ್ದರಿಂದ ಪ್ರಧಾನಿಯಾದ ಬಳಿಕ ಆ ನಿರೀಕ್ಷೆಗಳನ್ನು ಈಡೇರಿಸಲು ಪ್ರಯತ್ನಿಸುವುದರ ಜೊತೆಗೆ, ಪ್ರತಿಯೊಂದು ರಾಜ್ಯವೂ ತನ್ನದೇ ಆದ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವಂತಾಗಲು ಎಲ್ಲ ಪ್ರಯತ್ನಗಳನ್ನೂ ಮಾಡಿದ್ದೇನೆ.
ಸ್ನೇಹಿತರೇ,
ಮುಖ್ಯಮಂತ್ರಿಯಾಗಿದ್ದಾಗ ಕರುಣಾನಿಧಿ ಅವರು ಮತ್ತು ಅಮ್ಮ ಜಯಲಲಿತಾ ಅವರೊಂದಿಗೆ ಹಲವು ಬಾರಿ ಸಂವಾದ ನಡೆಸುವ ಅವಕಾಶ ನನಗೆ ದೊರೆಯಿತು. ಪ್ರಧಾನಿಯಾದ ಬಳಿಕ ಜಯಲಲಿತಾ, ಓ. ಪನ್ನೀರ್ಸೆಲ್ವಂ, ಇ. ಪಳನಿಸ್ವಾಮಿ ಮತ್ತು ಎಂ. ಕೆ. ಸ್ಟಾಲಿನ್ ಅವರೊಂದಿಗೆ ಕೆಲಸ ಮಾಡುವ ಅವಕಾಶವೂ ದೊರೆಯಿತು. ಸರ್ಕಾರಗಳು ಬದಲಾದರೂ ತಮಿಳುನಾಡಿನ ಅಭಿವೃದ್ಧಿ ಮತ್ತು ಇಲ್ಲಿನ ಜನರ ಸೇವೆಗೆ ನನ್ನ ಬದ್ಧತೆ ಎಂದಿಗೂ ಅಚಲವಾಗಿತ್ತು. ಇಂದು ಅದೇ ಬದ್ಧತೆಯೊಂದಿಗೆ ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಜೊತೆಯಲ್ಲಿ ತಮಿಳುನಾಡಿನ ಅಭಿವೃದ್ಧಿಯ ಪಯಣವನ್ನು ನಾವು ಮುಂದುವರಿಸುತ್ತಿದ್ದೇವೆ.
ಸ್ನೇಹಿತರೇ,
ಇಂದು ತಮಿಳುನಾಡಿನಲ್ಲಿ ನಗರಾಭಿವೃದ್ಧಿ ನಮ್ಮ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ನಗರೀಕರಣವನ್ನು ಸಮಸ್ಯೆಯಾಗಿ ನೋಡದೆ, ಒಂದು ಅವಕಾಶವಾಗಿ ಪರಿಗಣಿಸಬೇಕು ಎಂಬುದು ನನ್ನ ನಿಲುವಾಗಿದೆ. ಇದರಲ್ಲಿ ಸಾರ್ವಜನಿಕ ಸಾರಿಗೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಸಾರಿಗೆ ವ್ಯವಸ್ಥೆ ಉತ್ತಮವಾಗಿದ್ದರೆ ಜನರ ಜೀವನ ಸುಗಮವಾಗುತ್ತದೆ. ಉತ್ತಮ ಸಾರಿಗೆ ವ್ಯವಸ್ಥೆ ನಿರ್ಮಿಸಲು ರಸ್ತೆಗಳನ್ನು ಅಗಲಗೊಳಿಸುವುದಷ್ಟೇ ಸಾಕಾಗುವುದಿಲ್ಲ ಎಂಬುದು ನಮಗೆಲ್ಲ ತಿಳಿದಿದೆ. ಆಧುನಿಕ ನಗರಗಳಲ್ಲಿ ಸಮಗ್ರ ಮೂಲಸೌಕರ್ಯದ ಅಗತ್ಯವಿದೆ. ಹೀಗಾಗಿಯೇ ಕಳೆದ ದಶಕದಲ್ಲಿ ದೇಶಾದ್ಯಂತ ಮೆಟ್ರೊ ಜಾಲವನ್ನು ವ್ಯಾಪಕವಾಗಿ ವಿಸ್ತರಿಸಿದ್ದೇವೆ.
2014ರಲ್ಲಿ ದೇಶದ ಕೇವಲ ಐದು ನಗರಗಳಲ್ಲಿ ಮಾತ್ರ ಮೆಟ್ರೊ ಸೇವೆಗಳು ಕಾರ್ಯನಿರ್ವಹಿಸುತ್ತಿದ್ದವು. ಇಂದು ದೇಶಾದ್ಯಂತ 25 ನಗರಗಳಲ್ಲಿ ಮೆಟ್ರೊ ಸೇವೆಗಳು ಲಭ್ಯವಿವೆ. 2014ರಲ್ಲಿ ಭಾರತದ ಮೆಟ್ರೊ ಜಾಲವು ಸುಮಾರು 250 ಕಿಲೋಮೀಟರ್ಗಳಷ್ಟಿತ್ತು. 250 ಕಿಲೋಮೀಟರ್ಗಳು. ಇಂದು ಈ ಜಾಲವು 1,100 ಕಿಲೋಮೀಟರ್ಗಳನ್ನು ದಾಟಿದೆ. ಚೆನ್ನೈ ಮೆಟ್ರೊದ ಈ ವಿಸ್ತರಣೆಯಿಂದ ಮೆಟ್ರೊ ಜಾಲವು ಮತ್ತಷ್ಟು ಬೆಳೆಯುತ್ತಿರುವುದು ನನಗೆ ಸಂತಸ ತಂದಿದೆ. ಚೆನ್ನೈನಲ್ಲಿ ವಾಸಿಸುವ ಸಾಮಾನ್ಯ ನಾಗರಿಕರು, ಶ್ರಮಿಕ ಕುಟುಂಬಗಳು, ವಿದ್ಯಾರ್ಥಿಗಳು ಮತ್ತು ಹಿರಿಯ ನಾಗರಿಕರು ಎಲ್ಲರೂ ಹೆಚ್ಚು ಸುಲಭವಾಗಿ ಪ್ರಯಾಣಿಸಲು ಹಾಗೂ ಕಡಿಮೆ ಸಮಯದಲ್ಲಿ ತಮ್ಮ ಗಮ್ಯಸ್ಥಾನವನ್ನು ತಲುಪಲು ಅನುಕೂಲವಾಗುವಂತೆ ಈ ಕೆಲಸವನ್ನು ಕೈಗೊಳ್ಳಲಾಗಿದೆ.
ಸ್ನೇಹಿತರೇ,
ರಾಜ್ಯಗಳನ್ನು ಸಬಲಗೊಳಿಸುವ ಮೂಲಕ ನಾವು ಭಾರತವನ್ನು ಬಲಪಡಿಸಬೇಕು. ಆದ್ದರಿಂದ ಕೇಂದ್ರ ಸರ್ಕಾರವು ತಮಿಳುನಾಡಿನಂತಹ ರಾಜ್ಯಗಳಲ್ಲಿ ತಯಾರಿಕಾ ವಲಯಕ್ಕೆ ಉತ್ತೇಜನ ನೀಡುತ್ತಿದೆ. ತಮಿಳುನಾಡಿನ ತಯಾರಿಕಾ ವಲಯ, ಇಲ್ಲಿನ ಸಣ್ಣ ಕೈಗಾರಿಕೆಗಳು ಮತ್ತು ಅವುಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರ ಬಗ್ಗೆಯೂ ಭಾರತೀಯರೆಲ್ಲರೂ ಹೆಮ್ಮೆಪಡುತ್ತಾರೆ. ಇಂದು ‘ಮೇಕ್ ಇನ್ ಇಂಡಿಯಾ’ ಅಥವಾ ‘ವೋಕಲ್ ಫಾರ್ ಲೋಕಲ್’ ಆಗಿರಲಿ, ಕೇಂದ್ರ ಸರ್ಕಾರದ ಇಂತಹ ಉಪಕ್ರಮಗಳಿಂದ ತಮಿಳುನಾಡಿಗೂ ಪ್ರಯೋಜನವಾಗುತ್ತಿದೆ.
ಸ್ನೇಹಿತರೇ,
ಇಂದು ಕೇಂದ್ರ ಸರ್ಕಾರವು ಪ್ರತಿಯೊಂದು ರಾಜ್ಯದಲ್ಲೂ ಬಿಡಿಭಾಗಗಳಿಂದ ಹಿಡಿದು ತಂತ್ರಜ್ಞಾನ ಮತ್ತು ಸಿದ್ಧ ಉತ್ಪನ್ನಗಳವರೆಗೆ ಸಂಪೂರ್ಣ ಉತ್ಪಾದನಾ ಸರಪಳಿಯನ್ನು ಬಲಪಡಿಸುತ್ತಿದೆ. ಈ ಪ್ರಯತ್ನಗಳ ಫಲವಾಗಿ, ಇಂದು ಭಾರತವು ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರವಾಗಿದೆ. 2014ರಿಂದ ನಮ್ಮ ಎಲೆಕ್ಟ್ರಾನಿಕ್ಸ್ ರಫ್ತು ಹನ್ನೊಂದು ಪಟ್ಟು ಹೆಚ್ಚಾಗಿದೆ. ನಮ್ಮ ರಕ್ಷಣಾ ಉತ್ಪನ್ನಗಳ ರಫ್ತು ಐವತ್ತು ಪಟ್ಟು ಹೆಚ್ಚಾಗಿದೆ. ನಮ್ಮ ಎಂಜಿನಿಯರಿಂಗ್ ಉತ್ಪನ್ನಗಳ ರಫ್ತಿನಲ್ಲೂ ಹೊಸ ದಾಖಲೆಗಳು ನಿರ್ಮಾಣವಾಗಿವೆ.
ಸ್ನೇಹಿತರೇ,
ತಯಾರಿಕಾ ವಲಯದ ಈ ಬೆಳವಣಿಗೆಯಿಂದ ದೇಶದ ಯುವಜನರಿಗೆ ಲಕ್ಷಾಂತರ ನೇರ ಮತ್ತು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ. ಭಾರತದ ತಯಾರಿಕಾ ವಲಯದ ಈ ಬೆಳವಣಿಗೆಗೆ ತಮಿಳುನಾಡಿನ ಜನರು ಅತ್ಯಂತ ಶ್ಲಾಘನೀಯ ಕೊಡುಗೆ ನೀಡಿದ್ದಾರೆ. ಇಂದು ನಾವು ಸುಧಾರಿತ ಲೂಬ್ರಿಕಂಟ್ ಬೇಸ್ ಆಯಿಲ್ ಘಟಕದ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸುತ್ತಿದ್ದೇವೆ. ಇದರಿಂದ ಇಲ್ಲಿ ಹೊಸ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ. ದೇಶದ ಆಮದುಗಳನ್ನು ಕಡಿಮೆ ಮಾಡಲು ಸಹ ಇದು ಬಹಳಷ್ಟು ನೆರವಾಗಲಿದೆ.
ಬಲಿಷ್ಠ ಉತ್ಪಾದನಾ ವಲಯವನ್ನು ನಿರ್ಮಿಸಲು ನಮಗೆ ಉತ್ತಮ ರಸ್ತೆಗಳು ಬೇಕು. ಕಚ್ಚಾ ವಸ್ತುಗಳನ್ನು ಸಾಗಿಸಲು ರೈಲುಮಾರ್ಗಗಳು ಮತ್ತು ಬಂದರುಗಳ ಅಗತ್ಯವಿದೆ. ಇಂತಹ ಮೂಲಸೌಕರ್ಯ ನಿರ್ಮಾಣವಾದಾಗ ವಿವಿಧ ಹಂತಗಳಲ್ಲಿ ಹೆಚ್ಚಿನ ಸಂಖ್ಯೆಯ ಉದ್ಯೋಗಾವಕಾಶಗಳೂ ಸೃಷ್ಟಿಯಾಗುತ್ತವೆ.
ನಿರ್ಮಾಣ ಕಾರ್ಯ ನಡೆಯುವಾಗ ಎಂಜಿನಿಯರ್ಗಳಿಗೆ ಕೆಲಸ ಸಿಗುತ್ತದೆ, ತಂತ್ರಜ್ಞರಿಗೆ ಕೆಲಸ ಸಿಗುತ್ತದೆ, ಕಾರ್ಮಿಕರಿಗೆ ಕೆಲಸ ಸಿಗುತ್ತದೆ. ಹೀಗೆ ಎಲ್ಲರಿಗೂ ಉದ್ಯೋಗ ದೊರೆಯುತ್ತದೆ. ಸಿಮೆಂಟ್, ಉಕ್ಕು ಮತ್ತು ಉಪಕರಣಗಳಿಗೆ ಸಂಬಂಧಿಸಿದ ಕಾರ್ಖಾನೆಗಳಲ್ಲಿ ಹಾಗೂ ಸಣ್ಣ ಕಂಪನಿಗಳಲ್ಲಿಯೂ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ. ಯೋಜನೆ ಪೂರ್ಣಗೊಂಡ ಬಳಿಕ ಸುಧಾರಿತ ಸಂಪರ್ಕ ವ್ಯವಸ್ಥೆಯು ಕೈಗಾರಿಕೆಗಳು ಮತ್ತು ಸೇವಾ ವಲಯಗಳ ಪ್ರಗತಿಗೆ ನೆರವಾಗುತ್ತದೆ. ಆದ್ದರಿಂದ ಇಂದು ಉದ್ಘಾಟಿಸಲಾಗುತ್ತಿರುವ ಮತ್ತು ಚಾಲನೆ ನೀಡಲಾಗುತ್ತಿರುವ ರೈಲು ಹಾಗೂ ರಸ್ತೆ ಯೋಜನೆಗಳು ತಮಿಳುನಾಡಿನ ಪ್ರಗತಿಗೆ ಅತ್ಯಂತ ಮಹತ್ವದ್ದಾಗಿವೆ.
ಇಂದು ಹಡಗು ಸಾರಿಗೆ ಕ್ಷೇತ್ರವು ಹೊಸ ಎತ್ತರಗಳನ್ನು ತಲುಪಲು ದೇಶಾದ್ಯಂತ ಬಂದರು ಮೂಲಸೌಕರ್ಯವನ್ನೂ ಬಲಪಡಿಸಲಾಗುತ್ತಿದೆ. ಇದರಲ್ಲಿ ತಮಿಳುನಾಡಿನ ಪಾತ್ರವೂ ಅತ್ಯಂತ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇತ್ತೀಚೆಗೆ ಮಹತ್ವದ ನಿರ್ಧಾರ ಕೈಗೊಂಡಿದೆ. ಸುಮಾರು ₹₹17,000 ಕೋಟಿ ಹೂಡಿಕೆಯೊಂದಿಗೆ ತೂತುಕುಡಿಯಲ್ಲಿರುವ ವಿಒಸಿ ಬಂದರನ್ನು ವಿಶ್ವದರ್ಜೆಯ ಬೃಹತ್ ಕಂಟೇನರ್ ಮತ್ತು ಹಸಿರು ಇಂಧನ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಈ ಯೋಜನೆ ಪೂರ್ಣಗೊಂಡ ಬಳಿಕ ವಿಶ್ವದ ಅತಿ ದೊಡ್ಡ ಗಾತ್ರದ ಕಂಟೇನರ್ ಹಡಗುಗಳೂ ಇಲ್ಲಿ ಸುಲಭವಾಗಿ ಲಂಗರು ಹಾಕಲು ಸಾಧ್ಯವಾಗಲಿದೆ. ಇದರಿಂದ ತಮಿಳುನಾಡು ಕೈಗಾರಿಕೆ ಮತ್ತು ಸಾರಿಗೆಯ ಜಾಗತಿಕ ಕೇಂದ್ರವಾಗಿ ಬೆಳೆಯಲು ನೆರವಾಗಲಿದೆ.
ಕಳೆದ ಕೆಲವು ವರ್ಷಗಳಲ್ಲಿ ಭಾರತೀಯ ಬಂದರುಗಳ ಕೆಲಸದ ವೇಗ ಮತ್ತು ದಕ್ಷತೆ ಎರಡೂ ಸುಧಾರಿಸಿವೆ. ಬಂದರುಗಳ ಕೆಲಸದ ವೇಗ ಹೆಚ್ಚಿರುವುದರಿಂದ ಹಡಗುಗಳು ಬಂದರಿನಲ್ಲಿ ಉಳಿಯುವ ಅವಧಿ ಅರ್ಧದಷ್ಟು ಕಡಿಮೆಯಾಗಿದೆ. ಇದರ ಪರಿಣಾಮವಾಗಿ, ಭಾರತದ ಉತ್ಪನ್ನಗಳು ಈಗ ಹಿಂದೆಂದಿಗಿಂತಲೂ ವೇಗವಾಗಿ ಜಾಗತಿಕ ಮಾರುಕಟ್ಟೆಗಳನ್ನು ತಲುಪುತ್ತಿವೆ.
ನಮ್ಮ ಸಾಗರ ಆರ್ಥಿಕತೆಯ ದೃಷ್ಟಿಕೋನದಲ್ಲಿ ಮೀನುಗಾರರು ಅತ್ಯಂತ ಮಹತ್ವದ ಪಾತ್ರ ವಹಿಸುತ್ತಾರೆ. ಆದ್ದರಿಂದ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಮತ್ತು ಇತರ ಹಲವು ಯೋಜನೆಗಳ ಮೂಲಕ ತಮಿಳುನಾಡಿನಲ್ಲಿ ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇಲ್ಲಿ ಮೀನುಗಾರಿಕಾ ಬಂದರುಗಳನ್ನು ಉನ್ನತೀಕರಿಸಲಾಗುತ್ತಿದೆ. ಮೀನು ಇಳಿಸುವ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮೀನುಗಳನ್ನು ತಾಜಾವಾಗಿಡಲು ಅಗತ್ಯವಿರುವ ಶೀತಲ ಸರಪಳಿ ಸೌಲಭ್ಯಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ಮೀನುಗಳನ್ನು ತಾಜಾವಾಗಿ ಸಾಗಿಸಲು ಸಾರಿಗೆ ವಾಹನಗಳ ಖರೀದಿಗೂ ನೆರವು ನೀಡಲಾಗುತ್ತಿದೆ.
ಸ್ನೇಹಿತರೇ,
ನಮ್ಮ ಮೀನುಗಾರ ಸಹೋದರರಿಗಾಗಿ ಚೆನ್ನೈ ಮೀನುಗಾರಿಕಾ ಬಂದರನ್ನು ಆಧುನೀಕರಿಸುವುದಾಗಲಿ ಅಥವಾ ತಮಿಳುನಾಡಿನಲ್ಲಿ ಸಮುದ್ರಕಳೆ ಉದ್ಯಾನವನವನ್ನು ಅಭಿವೃದ್ಧಿಪಡಿಸುವುದಾಗಲಿ, ಇಂತಹ ಪ್ರಯತ್ನಗಳಿಗೂ ಕೇಂದ್ರ ಸರ್ಕಾರ ಬೆಂಬಲ ನೀಡುತ್ತಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯ ಮೂಲಕ ಮೀನುಗಾರರು ಈಗ ದುಡಿಯುವ ಬಂಡವಾಳವನ್ನು ಹೆಚ್ಚು ಸುಲಭವಾಗಿ ಪಡೆಯಲು ಸಾಧ್ಯವಾಗಿದೆ.
ಇಂದು ದೇಶದಲ್ಲಿ ಮೀನು ಉತ್ಪಾದನೆ ತ್ವರಿತವಾಗಿ ಹೆಚ್ಚಾಗಿದೆ. ಕಳೆದ ವರ್ಷ ನಮ್ಮ ಸಮುದ್ರ ಆಹಾರ ಉತ್ಪನ್ನಗಳ ರಫ್ತು ಪ್ರಮಾಣ ಮತ್ತು ಮೌಲ್ಯ ಎರಡರಲ್ಲೂ ಇದುವರೆಗಿನ ಗರಿಷ್ಠ ಮಟ್ಟವನ್ನು ತಲುಪಿದೆ. ಇದರಿಂದ ಮೀನುಗಾರ ಕುಟುಂಬಗಳು ಮತ್ತು ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರ ಜೀವನಮಟ್ಟ ಸುಧಾರಿಸಿದೆ.
ಸ್ನೇಹಿತರೇ,
ತಮಿಳುನಾಡು ನಿರಂತರವಾಗಿ ಅಭಿವೃದ್ಧಿಯ ಹೊಸ ಎತ್ತರಗಳನ್ನು ತಲುಪಬೇಕೆಂಬುದು ನಮ್ಮ ಆಶಯವಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಅಗತ್ಯವಿರುವ ಯಾವುದೇ ನೆರವನ್ನೂ ಒದಗಿಸಲು ನಾವು ಸಂಪೂರ್ಣ ಬದ್ಧತೆಯಿಂದ ನಿಮ್ಮೊಂದಿಗಿದ್ದೇವೆ. ವಿಕಸಿತ ತಮಿಳುನಾಡಿನ ಮೂಲಕ ವಿಕಸಿತ ಭಾರತದ ಸಂಕಲ್ಪವನ್ನು ನಾವೆಲ್ಲರೂ ಒಗ್ಗೂಡಿ ಸಾಕಾರಗೊಳಿಸೋಣ. ಈ ಸಂಕಲ್ಪದೊಂದಿಗೆ, ಈ ಯೋಜನೆಗಳಿಗಾಗಿ ನಿಮ್ಮೆಲ್ಲರಿಗೂ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಕೋರುತ್ತೇನೆ.
ನಂಡ್ರಿ, ವಣಕ್ಕಂ!!! (ಧನ್ಯವಾದಗಳು, ನಮಸ್ಕಾರ).
ಸೂಚನೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.
*****
Works over Rs. 13,000 crore being launched in Chennai! https://t.co/76Uo9a3UaS
— Narendra Modi (@narendramodi) October 11, 2026
It is a pleasure to be in Chennai with all of you. This is a historic day for Tamil Nadu. Today’s programme involves projects worth thirteen thousand crore rupees. We are inaugurating many completed projects and laying foundations for new ones: PM @narendramodi
— PMO India (@PMOIndia) October 11, 2026
भारत अपनी सांस्कृतिक शक्ति से प्रेरणा लेता है, विज्ञान की प्रगति से आगे बढ़ता है और आधुनिक infrastructure के जरिए नए अवसरों का निर्माण कर रहा है। हमारी विरासत और भविष्य की हमारी आकांक्षाएं साथ-साथ आगे बढ़ रही हैं: PM @narendramodi
— PMO India (@PMOIndia) October 11, 2026
आधुनिक शहरों में हमें holistic infrastructure की जरूरत होती है। और इसलिए बीते एक दशक में, हमने पूरे देश में metro network का बहुत बड़ा expansion किया है: PM @narendramodi
— PMO India (@PMOIndia) October 11, 2026
आज देश में port infrastructure को भी मजबूत बनाया जा रहा है, ताकि shipping sector नई ऊंचाइयों तक पहुंच सके: PM @narendramodi
— PMO India (@PMOIndia) October 11, 2026