ಪಿಎಂಇಂಡಿಯಾ
ನಮಸ್ಕಾರ!
ಜಪಾನಿನಂತಹ ದೇಶ, ಅಕಿ ಋತುವಿನ ಈ ಹಿತಕರ ವಾತಾವರಣ ಮತ್ತು ನಿಮ್ಮ ಈ ಸಹಯೋಗ- ಇವು ನಿಜಕ್ಕೂ ಒಂದು ಅಸಾಧಾರಣವಾದ ಸಂಗಮವೇ ಸರಿ. ಭಾರತದಲ್ಲಿ ಕೆಲಸದ ದಿನವಾದ ಸೋಮವಾರದಂದು ಬೆಳ್ಳಂಬೆಳಗ್ಗೆ ಒಂಬತ್ತು ಗಂಟೆಗೆ ಹೀಗೊಂದು ಸಮಾವೇಶವನ್ನು/ ಸಭೆಯನ್ನು ಏರ್ಪಡಿಸಿರುವುವುದು, ಆಮೇಲೆ ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಕಾರ್ಯಕ್ರಮಕ್ಕೆ ನೀವು ಬಂದಿರುವುದಕ್ಕೆ ಮತ್ತು ಎಣೆಯಿಲ್ಲದ ಪ್ರೀತಿ-ಹಾರೈಕೆಗಳನ್ನು ಧಾರೆಯೆರೆಯುತ್ತಿರುವುದಕ್ಕೆ ನಾನು ನನ್ನ ಹೃದಯಾಂತರಾಳದಿಂದ ಕೃತಜ್ಞನಾಗಿದ್ದೇನೆ.
ಇವತ್ತಿನ ಈ ಸಭೆ ಕೂಡ ವಿಶೇಷವಾಗಿದೆ. ಏಕೆಂದರೆ, 2016ರ ನಂತರ ಜಪಾನಿನಲ್ಲಿ ನೆಲೆಸಿರುವ ನನ್ನ ರಕ್ತಸಂಬಂಧಿಗಳನ್ನು ನಾನಿಲ್ಲಿ ಸಂಧಿಸುತ್ತಿದ್ದೇನೆ.
ಈ ಸಂದರ್ಭದಲ್ಲಿ ನಾನು ಜಪಾನಿನ ನಾಯಕರಾಗಿ ಪುರಾಯ್ಕೆಯಾಗಿರುವ ನಮ್ಮ ಅತ್ಯುತ್ತಮ ಮಿತ್ರರಾದ ಪ್ರಧಾನಮಂತ್ರಿ ಶಿಂಜೋ ಅಬೆ ಅವರನ್ನು ಭಾರತದ ಪರವಾಗಿಯೂ ನಿಮ್ಮೆಲ್ಲರ ಪರವಾಗಿಯೂ ಅಭಿನಂದಿಸುತ್ತೇನೆ.
ಪ್ರಧಾನಮಂತ್ರಿ ಅಬೆ ಅವರು ಸದಾ ನನ್ನೆಡೆಗೂ ಭಾರತದ ಬಗೆಗೂ ಪ್ರೀತಿ-ವಿಶ್ವಾಸಗಳನ್ನು ಹೊಂದಿದ್ದಾರೆ. ಅವರು ನನ್ನನ್ನು ವಿಶೇಷವಾಗಿ ಬರಮಾಡಿಕೊಂಡ ರೀತಿಯು ಈ ಪ್ರೀತಿ-ವಿಶ್ವಾಸಗಳಿಗೆ ಹೊಸ ಆಯಾಮವನ್ನು ತಂದುಕೊಟ್ಟಿದೆ. ಹೀಗಾಗಿ, ಪ್ರಧಾನಮಂತ್ರಿ ಅಬೆ ಮತ್ತು ಜಪಾನಿನ ಜನರಿಗೆ ನಾನು ಮತ್ತೊಮ್ಮೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.
ಇದರ ಜತೆಗೆ, ನಿಮ್ಮೆಲ್ಲರಿಗೂ ದೀಪಾವಳಿಯ ಈ ಶುಭಸಂದರ್ಭದಲ್ಲಿ ನನ್ನ ಹೃತ್ಪೂರ್ವಕ ಶುಭ ಹಾರೈಕೆಗಳು. ದೀಪಾವಳಿಯ ಸಂದರ್ಭದಲ್ಲಿ ನಾವು ಹಚ್ಚುವ ದೀಪವು ಹೇಗೆ ತನ್ನ ಸುತ್ತಲಿನ ಜಾಗವನ್ನು ಬೆಳಗುವಂತೆಯೇ ನೀವು ಕೂಡ ಜಪಾನಿನಲಲ್ಲಾಗಲಿ, ಜಗತ್ತಿನ ಉಳಿದೆಡೆಗಳಲ್ಲೇ ಆಗಲಿ ಒಳ್ಳೆಯ ಹೆಸರು ಸಂಪಾದಿಸಬೇಕು ಮತ್ತು ಭಾರತ ದೇಶಕ್ಕೂ ಖ್ಯಾತಿಯನ್ನು ತಂದುಕೊಡಬೇಕು.
ಸ್ನೇಹಿತರೇ,
ಭಾರತದ ಪ್ರಧಾನಮಂತ್ರಿಯಾಗಿ ಜಪಾನಿಗೆ ಇದು ನನ್ನ ಮೂರನೇ ಭೇಟಿಯಾಗಿದೆ. ನಾನು ಜಪಾನಿಗೆ ಬಂದಾಗಲೆಲ್ಲ ನನಗೆ ಇಲ್ಲಿ ಪ್ರೀತಿಪೂರ್ವಕವಾದ ಅನುಭವವಾಗಿದೆ. ನಮ್ಮ ಎರಡೂ ದೇಶಗಳ ಬಾಂಧವ್ಯವು ಸಂಸ್ಕೃತಿ ಮತ್ತು ಪರಂಪರೆಗಳಲ್ಲಿ ಆಳವಾಗಿ ಬೇರು ಬಿಟ್ಟಿರುವುದೇ ಇದಕ್ಕೆ ಕಾರಣ. ಹಿಂದೂ ಧರ್ಮವೇ ಇರಲಿ, ಬೌದ್ಧ ಧರ್ಮವೇ ಇರಲಿ, ನಾವು ಪರಂಪರೆಯನ್ನು ಪರಸ್ಪರ ಹಂಚಿಕೊಂಡಿದ್ದೇವೆ. ನಮ್ಮ ವರ್ಣಮಾಲೆಗಳನ್ನು ನಾವು -ಜನರು- ಪ್ರೀತಿಸುವ ಪರಿಯಲ್ಲಿ ಈ ಪರಂಪರೆಯ ಪ್ರತಿಫಲನಗಳು ಕಾಣಿಸುತ್ತವೆ.
ಸರಸ್ವತಿ ದೇವಿಯೇ ಇರಲಿ, ಲಕ್ಷ್ಮಿಯೇ ಇರಲಿ, ಶಿವನೇ ಇರಲಿ ಅಥವಾ ಗಣೇಶನೇ ಇರಲಿ, ಜಪಾನ್ ಸಮಾಜದಲ್ಲೂ ಇವಕ್ಕೆ ಸರಿಸಮನಾದ ದೇವ-ದೇವಿಯರಿದ್ದಾರೆ. `ಸೇವೆ’ ಎನ್ನುವ ಪದಕ್ಕೆ ಹಿಂದಿ ಮತ್ತು ಜಪಾನಿ ಭಾಷೆಗಳಲ್ಲಿರುವ ಅರ್ಥ ಒಂದೇ. ಹಾಗೆಯೇ `ಹೋಮ್’ ಎನ್ನುವ ಪದ ಜಪಾನಿನಲ್ಲಿ `ಗೋಮ’ ಆಗಿದೆ; `ಫೆಸ್ತೂನ್’ ಎನ್ನುವ ಪದವು ಜಪಾನಿನಲ್ಲಿ `ತೋರಿ’ ಆಗಿದೆ. ಜಪಾನಿನಲ್ಲಿರುವ ಪವಿತ್ರ ಮೌಂಟ್ ಒಂಟಕೆಗೆ ಯಾತ್ರೆ ಹೋಗುವ ಯಾತ್ರಾರ್ಥಿಗಳು ತಾವು ಧರಿಸುವ ಶ್ವೇತವಸ್ತ್ರದ ಮೇಲೆ ಸಂಸ್ಕೃತ ಲಿಪಿಯಲ್ಲಿರುವ ಸಂದೇಶಗಳನ್ನು ಹೊತ್ತಿರುತ್ತಾರೆ. ಹಾಗೆಯೇ, ಜಪಾನಿ ಸಂಸ್ಕೃತಿಯಲ್ಲಿರುವ ಟೆಂಗುಯಿ ಎನ್ನುವ ಅಚ್ಚಬಿಳಿ ಉಡುಪಿನ ಮೇಲೆ ಇಲ್ಲಿನ ಜನರು `ಓಂ’ ಎಂದು ಬರೆಸಿಕೊಳ್ಳುತ್ತಾರೆ.
ಮಿತ್ರರೇ,
ಭಾರತ ಮತ್ತು ಜಪಾನ್ ನಡುವಿನ ಬಾಂಧವ್ಯದಲ್ಲಿ ಗತಕಾಲದಿಂದಲೂ ಅನೂಚಾನವಾಗಿ ಬಂದಿರುವ ಗಟ್ಟಿಯಾದ ಎಳೆಗಳಿವೆ. ಇತಿಹಾಸದಲ್ಲಿ ಬುದ್ಧ ಮತ್ತು ಬೋಸ್ ಭಾರತ-ಜಪಾನ್ ನಡುವೆ ಸಂಪರ್ಕಸೇತುಗಳಾಗಿದ್ದರೆ, ಈಗ ನಿಮ್ಮಂತಹ ದೂತರಿಂದ ಎರಡೂ ದೇಶಗಳ ಸಂಬಂಧ ಬಲವರ್ಧನೆಗೊಂಡಿದೆ. ನಮ್ಮ ದೇಶದ ಸರಕಾರದ ಪರವಾಗಿ ಒಬ್ಬ ರಾಯಭಾರಿ ಇಲ್ಲಿರುತ್ತಾರೆ ನಿಜ. ಆದರೆ ನಮ್ಮ ದೇಶದ ಪರವಾಗಿ ನಿಮ್ಮಂತಹ ಸಾವಿರಾರು ರಾಯಭಾರಿಗಳು ಇಲ್ಲಿರುವಿರಿ.
ಭಾರತ ಮತ್ತು ಜಪಾನ್ ದೇಶಗಳನ್ನು, ಎರಡೂ ದೇಶಗಳ ಜನರನ್ನು, ಸಂಸ್ಕೃತಿಗಳನ್ನು ಮತ್ತು ಆಸೆ-ಆಕಾಂಕ್ಷೆಗಳನ್ನು ನಿಜವಾಗಿಯೂ ಬೆಸೆದಿರುವವರು ನೀವು. ನೀವು ಈ ಹೊಣೆಗಾರಿಕೆಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ.
ಗೆಳೆಯರೇ,
ಇಲ್ಲಿನ ಪ್ರಧಾನಮಂತ್ರಿಗಳಾದ ಅಬೆಯವರೊಂದಿಗೆ ನಾನು ಮಾತನಾಡುವಾಗಲೆಲ್ಲ ಅವರು ಭಾರತೀಯ ಸಮುದಾಯವನ್ನು ಮನಸಾರೆ ಪ್ರಶಂಸಿಸುತ್ತಾರೆ. ಇದರಿಂದ ನನಗಾಗುವ ಸಂತೋಷ ಅಷ್ಟಿಷ್ಟಲ್ಲ. ನೀವೆಲ್ಲರೂ ನಿಮಗಿರುವ ಕೌಶಲ್ಯ ಮತ್ತು ನೀವು ರೂಢಿಸಿಕೊಂಡಿರುವ ಸಾಂಸ್ಕೃತಿಕ ಮೌಲ್ಯಗಳ ಬಲದಿಂದ ಈ ದೇಶದಲ್ಲಿ ಅಪಾರ ಗೌರವವನ್ನು ಸಂಪಾದಿಸಿಕೊಂಡಿದ್ದೀರಿ.
ಇಷ್ಟೇ ಅಲ್ಲ, ನಮ್ಮ ಯೋಗವನ್ನು ನೀವು ಜಪಾನಿನ ಜನಜೀವನದ ಒಂದು ಭಾಗವನ್ನಾಗಿಸಿದ್ದೀರಿ. ನಮ್ಮ ದೇಶದ ಜನಪ್ರಿಯ ಆಹಾರಧಾನ್ಯವಾದ ಅಕ್ಕಿಯು ಇಲ್ಲಿನ ಹೋಟೆಲುಗಳ ಮೆನುಗಳಲ್ಲಿ ಜಾಗ ಗಿಟ್ಟಿಸಿಕೊಳ್ಳುವಂತೆ ಮಾಡಿದ್ದೀರಿ. ಮತ್ತೀಗ ನಿಮ್ಮ ಜಪಾನಿ ಸ್ನೇಹಿತರ ಜತೆಗೂಡಿ ದೀಪಾವಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದೀರಿ. ಸಮರಕಲೆಗಳ ನಾಡಾದ ಜಪಾನಿಗೆ ನೀವು ನಮ್ಮ ದೇಶದ ಕಬಡ್ಡಿಯನ್ನು ಕೊಟ್ಟಿದ್ದೀರಿ ಮತ್ತು ನೀವೆಲ್ಲರೂ ಇಲ್ಲಿ ಈಗ ಕ್ರಿಕೆಟ್ ಸಂಸ್ಕೃತಿಯನ್ನು ಬೆಳೆಸುತ್ತಿದ್ದೀರಿ.
ಉದಾರ ಕೊಡುಗೆ ಮತ್ತು ಸಹಬಾಳ್ವೆ ಎನ್ನುವ ಮಂತ್ರಗಳ ಮೂಲಕ ನೀವು ಜಪಾನೀಯರ ಹೃದಯದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದೀರಿ. ನಮ್ಮ ಸಂಸ್ಕೃತಿಯ ರಾಯಭಾರಿಗಳಾಗಿ 30 ಸಾವಿರಕ್ಕೂ ಹೆಚ್ಚು ಜನರು ಈ ದೇಶದಲ್ಲಿ ಕೆಲಸ ಮಾಡುತ್ತಿದ್ದೀರಿ ಎನ್ನುವುದನ್ನು ತಿಳಿದು ನನಗೆ ಸಂತೋಷವಾಗಿದೆ.
ಮಿತ್ರರೇ,
ನಿಮ್ಮಲ್ಲಿ ಹೆಚ್ಚಿನ ಜನರು ಭಾರತಕ್ಕೆ ಬರುತ್ತಲೇ ಇರುತ್ತೀರಿ. ಒಂದು ವೇಳೆ ಯಾರಾದರೂ ಇತ್ತೀಚೆಗೆ ಭಾರತಕ್ಕೆ ಬಾರದೆ ಇದ್ದಲ್ಲಿ ಅಂಥವರು ನಮ್ಮ ದೇಶದಲ್ಲಿ ಇತ್ತೀಚೆಗೆ ಎಂತೆಂತಹ ಬದಲಾವಣೆಗಳು ಆಗುತ್ತಿವೆ ಎನ್ನುವುದನ್ನು ದಿನಪತ್ರಿಕೆಗಳು ಮತ್ತು ಅಂತರ್ಜಾಲದ ಮೂಲಕ ಖಂಡಿತವಾಗಿಯೂ ತಿಳಿದುಕೊಂಡಿರುತ್ತಾರೆ. ಈಗ ಭಾರತವು ಭಾರೀ ಬದಲಾವಣೆಗಳ ಮಹತ್ತ್ವದ ಅವಸ್ಥೆಯಲ್ಲಿದೆ. ಮನುಕುಲದ ಸೇವೆಯ ವಿಚಾರ ಬಂದರೆ ಇಡೀ ಜಗತ್ತು ಇಂದು ಭಾರತವನ್ನು ಪ್ರಶಂಸಿಸುತ್ತಿದೆ. ಸಾರ್ವಜನಿಕ ಸೇವೆಯ ವಿಚಾರಕ್ಕೆ ಸಂಬಂಧಿಸಿದಂತೆ ನಾವು ಮಾಡಿರುವ ಕೆಲಸಕ್ಕಾಗಿ ಇಡೀ ದೇಶವನ್ನು ಇಂದು ಗೌರವಿಸಲಾಗುತ್ತಿದೆ. ಅಲ್ಲದೆ, ಭಾರತದಲ್ಲಿ ಇಂದು ರೂಪಿಸುತ್ತಿರುವ ಅತ್ಯುತ್ತಮ ನೀತಿಗಳಿಗಾಗಿಯೂ ನಮ್ಮ ದೇಶವನ್ನು ಪುರಸ್ಕರಿಸಲಾಗುತ್ತಿದೆ.
ತೀರಾ ಇತ್ತೀಚೆಗೆ ಜಾಗತಿಕ ಮಟ್ಟದ ಎರಡು ಉನ್ನತ ಸಂಸ್ಥೆಗಳು ಭಾರತದ ಪ್ರಯತ್ನಗಳನ್ನು ಮೆಚ್ಚಿಕೊಂಡಿರುವುದರ ಜತೆಗೆ ಗೌರವಿಸಿವೆ. ಪರಿಸರಸ್ನೇಹಿ ಭವಿಷ್ಯವನ್ನು ನಿರ್ಮಿಸುವತ್ತ ನಾವು ನೀಡುತ್ತಿರುವ ಮೌಲಿಕ ಕೊಡುಗೆಗಳಿಗಾಗಿ ವಿಶ್ವಸಂಸ್ಥೆಯು ನಮ್ಮನ್ನು ಗುರುತಿಸಿದ್ದು, `ಚಾಂಪಿಯನ್ ಆಫ್ ದಿ ಅರ್ತ್’ ಪುರಸ್ಕಾರವನ್ನು ನೀಡಿದೆ. ಹಾಗೆಯೇ, ದಕ್ಷಿಣ ಕೊರಿಯಾದ `ಸಿಯೋಲ್ ಶಾಂತಿ ಪ್ರತಿಷ್ಠಾನ’ವು ಭಾರತಕ್ಕೆ `ಸಿಯೋಲ್ ಶಾಂತಿ ಪ್ರಶಸ್ತಿ’ಯನ್ನು ಪ್ರದಾನ ಮಾಡಿದೆ.
ಮಿತ್ರರೇ,
125 ಕೋಟಿ ಭಾರತೀಯರ ಪ್ರತಿನಿಧಿಯಾಗಿ ಈ ಪ್ರತಿಷ್ಠಿತ ಸಂಸ್ಥೆಗಳು ನನಗೆ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಿರಬಹುದು. ನಿಜ ಹೇಳಬೇಕೆಂದರೆ, ಹಾರವೊಂದರಲ್ಲಿ ಬರುವ ಮಣಿಗಳು ಗಟ್ಟಿಯಾಗಿರುವಂತೆ ಮಾಡಲು ದಾರದ ಎಳೆಯು ಹೇಗೆ ಸಹಾಯ ಮಾಡುತ್ತದೋ ಅದಷ್ಟೇ ನನ್ನ ಕಾಣಿಕೆಯಾಗಿದೆ. ಮಾಲೆಯೊಂದು ಗಟ್ಟಿಯಾಗಿದ್ದರೆ ಅದರಲ್ಲಿರುವ ಮಣಿಗಳೆಲ್ಲವೂ ಒಟ್ಟಾಗಿ ಮುಂದಕ್ಕೆ ಹೋಗುತ್ತವೆ. ನಮ್ಮ ಇಡೀ ದೇಶದ ತುಂಬೆಲ್ಲ ಇಂತಹ ಮುತ್ತುರತ್ನಗಳು ಮತ್ತು ವಜ್ರ-ವೈಡೂರ್ಯಗಳು ತುಂಬಿ ತುಳುಕುತ್ತಿವೆ. ಇದು ಫಲ ನೀಡಬೇಕೆಂದರೆ ಸರಿಯಾಗಿ ಗಮನ ಕೊಡುವುದಷ್ಟೇ ಮುಖ್ಯ. ಅಂದಂತೆ, ಕಳೆದ ನಾಲ್ಕು ವರ್ಷಗಳಿಂದ ನಾವು ಇದನ್ನೇ ಮಾಡುತ್ತಿದ್ದೇವೆ. ಹೀಗಾಗಿ, ಸಾಮೂಹಿಕ ಶಕ್ತಿಯ ಬಲವೇನೆಂಬುದನ್ನು ಮತ್ತು ಸಾರ್ವಜನಿಕ ಸಹಭಾಗಿತ್ವದ ಪರಿಣಾಮವೇನೆಂಬುದನ್ನು ಇಡೀ ಜಗತ್ತೇ ಗುರುತಿಸುತ್ತಿದ್ದು, ಮನ್ನಣೆ ನೀಡುತ್ತಿದೆ.
ಪರಿಸರ ಸಂರಕ್ಷಣೆ, ವಿಶ್ವಶಾಂತಿ ಸ್ಥಾಪನೆ ಮತ್ತು ಆರ್ಥಿಕ ತಾರತಮ್ಯವನ್ನು ಆದಷ್ಟೂ ಕಡಿಮೆ ಮಾಡುವ ನಿಟ್ಟಿನಲ್ಲಿ ಭಾರತವು ಇಂದು ಮುಂಚೂಣಿಯಲ್ಲಿದೆ. ನಾವು ಮುಂಚೂಣಿಗೆ ತಂದಿರುವ `ಮೋದಿನಾಮಿಕ್ಸ್’ ಅನ್ನು ಗುರುತಿಸಿದ `ಸಿಯೋಲ್ ಶಾಂತಿ ಪ್ರಶಸ್ತಿ ಸಮಿತಿ’ಯ ಆಯ್ಕೆದಾರರಿಗೆ ನನ್ನ ಧನ್ಯವಾದಗಳು. ನಾನು ಈ ಆಯ್ಕೆ ಸಮಿತಿ ಸದಸ್ಯರ ಭಾವನೆಗಳನ್ನು ಗುರುತಿಸುತ್ತೇನೆ. ಆದರೆ, ಇದು `ಮೋದಿನಾಮಿಕ್ಸ್’ಗಿಂತ ಹೆಚ್ಚಾಗಿ `ಇಂಡೊನಾಮಿಕ್ಸ್’ಗೆ ಸಂದ ಗೌರವವೇ ಆಗಿದೆ ಎನ್ನುವುದನ್ನು ನಾನು ಹೇಳಬಯಸುತ್ತೇನೆ.
ಸರಕಾರದ ಮುಖ್ಯಸ್ಥನಾಗಿರುವ ನಾನು, ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯ ಏನನ್ನು ಹೇಳುತ್ತದೆಯೋ ಅದನ್ನಷ್ಟೇ ಮಾಡುತ್ತಿದ್ದೇನೆ. ಇದರ ಹೊರತಾಗಿ ಬೇರೇನನ್ನೂ ನಾನು ಮಾಡುತ್ತಿಲ್ಲ. `ಇಡೀ ವಿಶ್ವವೇ ಒಂದು ಕುಟುಂಬ’ ಮತ್ತು `ಪ್ರತಿಯೊಬ್ಬರೂ ಸಂತೋಷದಿಂದಲೂ ಆರೋಗ್ಯದಿಂದಲೂ ಇರಲಿ’ (ವಸುಧೈವ ಕುಟುಂಬಕಂ) ಎನ್ನುವ ನಮ್ಮ ಪುರಾತನ ಮೌಲ್ಯಗಳಿಗೆ ನಾವು ನಮ್ಮನ್ನು ಸಮರ್ಪಿಸಿಕೊಂಡಿದ್ದೇವೆ. ನಾವು ತಂದಿರುವ ಬದಲಾವಣೆ ಏನೆಂದರೆ, ಭಾರತದ ಮೂಲಕ ಇಡೀ ಜಗತ್ತನ್ನು ನೋಡುವಂತೆ ಮಾಡಿದ್ದೇವೆ.
ಯಾವುದೇ ಸಮಸ್ಯೆ ಇರಲಿ, ಅದಕ್ಕೆ ಭಾರತೀಯವೆನ್ನುವಂತಹ ಪರಿಹಾರವನ್ನು ನಾವು ಕಂಡುಹಿಡಿಯಬೇಕು ಮತ್ತು ಬಳಿಕ ಅದನ್ನು ಜಾಗತಿಕ ಮಟ್ಟದಲ್ಲಿ ಅಳವಡಿಸಿಕೊಳ್ಳಬೇಕು ಎನ್ನುವ ಉತ್ಸಾಹದೊಂದಿಗೆ ನಮ್ಮ ಸರಕಾರವು ಕೆಲಸ ಮಾಡುತ್ತಿದೆ. ಈ ನಿಟ್ಟಿನಲ್ಲಿ ಮೊದಲಿಗೆ ನಾವು ಭಾರತದ ಸಮಸ್ಯೆಗಳನ್ನು ಪರಿಹರಿಸುತ್ತಿದ್ದು, ಬಳಿಕ ಈ ಮಾದರಿಯನ್ನು ಜಗತ್ತಿನ ಉಳಿದ ರಾಷ್ಟ್ರಗಳ ಮುಂದಿಡುತ್ತಿದ್ದೇವೆ.
ಸ್ನೇಹಿತರೇ,
ಭಾರತದಲ್ಲಿ ಕೇವಲ ಜನಧನ್, ಆಧಾರ್ ಮತ್ತು ಮೊಬೈಲ್ ಎನ್ನುವ ಮೂರೇಮೂರು ಪದಗಳ ಮೂಲಕ ಪಾರದರ್ಶಕತೆಯನ್ನು ತರಲಾಯಿತು ಎಂದರೆ ನಿಮಗೆ ಹೆಮ್ಮೆಯ ಭಾವನೆ ಮೂಡುತ್ತದೆ. ಈ ನಿಟ್ಟಿನಲ್ಲಿ ಭಾರತವು ಜಗತ್ತಿನ ಉಳಿದ ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ಸ್ಫೂರ್ತಿಯನ್ನು ನೀಡುತ್ತಿದೆ. ಭಾರತದಲ್ಲಿ ಈಗ ಮೈದಾಳಿರುವ ವ್ಯವಸ್ಥೆಯು ಹೊಸದಾಗಿತ್ತು, ಇದನ್ನು ಅಧ್ಯಯನ ಮಾಡಲಾಗುತ್ತಿದೆ. ಇದಲ್ಲದೆ ಡಿಜಿಟಲ್ ವಹಿವಾಟನ್ನು ಉತ್ತೇಜಿಸಲು ಭೀಮ್ ಆ್ಯಪ್, ರೂಪೇ ಕಾರ್ಡ್ ಮುಂತಾದ ವ್ಯವಸ್ಥೆಗಳನ್ನು ನಾವು ತಂದಿದ್ದು, ನಾನಾ ದೇಶಗಳು ಇವುಗಳ ಬಗ್ಗೆ ಕುತೂಹಲ ತಾಳಿವೆ.
ಜಪಾನ್ ದೇಶ ಕೂಡ ತನ್ನ ಅರ್ಥವ್ಯವಸ್ಥೆಯಲ್ಲಿ ನಗದಿನ ಓಡಾಟವನ್ನು ಆದಷ್ಟೂ ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ ಎಂದು ನನಗೆ ತಿಳಿಸಲಾಯಿತು. ಈ ನಿಟ್ಟಿನಲ್ಲಿ ಭಾರತವು ಈಗಾಗಲೇ ಸಾಕಷ್ಟು ದೂರವನ್ನು ಕ್ರಮಿಸಿದೆ ಎಂದರೆ ನಿಮಗೆ ಸಂತೋಷವಾಗಲಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಯುಪಿಐ, ಭೀಮ್ ಆ್ಯಪ್ ಮತ್ತು ಇನ್ನಿತರ ಡಿಜಿಟಲ್ ವೇದಿಕೆಗಳಿಂದಾಗಿ ನಮ್ಮಲ್ಲಿ ಡಿಜಿಟಲ್ ವಹಿವಾಟಿನ ಪ್ರಮಾಣವು ಏಳು ಪಟ್ಟುಗಳಷ್ಟು ಹೆಚ್ಚಾಗಿದೆ.
ಇದೇ ವೇಳೆಯಲ್ಲಿ ನಾವು ಜನರ ಒಳಗೊಳ್ಳುವಿಕೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಿದ್ದು, ಗ್ರಾಮೀಣ ಭಾಗದಲ್ಲಿ ಅಂಚೆ ಕಚೇರಿಗಳ ಮೂಲಕ ಹಣಕಾಸು ಸೇವೆಗಳನ್ನು ಜನರ ಮನೆಬಾಗಿಲಿಗೇ ಕೊಂಡೊಯ್ಯುತ್ತಿದ್ದೇವೆ. ನೀವೆಲ್ಲರೂ ನಿಮ್ಮ ಬಾಲ್ಯದಲ್ಲಿ ಅಂಚೆಯಣ್ಣನನ್ನು ನೋಡಿರುತ್ತೀರಿ. ಆ ಅಂಚೆಯಣ್ಣ ಈಗ ಬ್ಯಾಂಕ್ ಅಧಿಕಾರಿಯಾಗುತ್ತಿದ್ದಾನೆ.
ಗೆಳೆಯರೇ,
ಡಿಜಿಟಲ್ ಮೂಲಸೌಲಭ್ಯ ಅಭಿವೃದ್ಧಿಯ ವಿಚಾರಕ್ಕೆ ಸಂಬಂಧಿಸಿದಂತೆ ಭಾರತವು ಇಂದು ಅಭೂತಪೂರ್ವ ಸಾಧನೆಯನ್ನು ಮಾಡುತ್ತಿದೆ. ಬ್ರಾಡ್ ಬ್ಯಾಂಡ್ ಸೌಲಭ್ಯವು ಇಂದು ಹಳ್ಳಿಗಳನ್ನೆಲ್ಲ ತಲುಪುತ್ತಿದ್ದು, ಭಾರತದಲ್ಲಿ ಈಗ 100 ಕೋಟಿಗೂ ಹೆಚ್ಚು ಮೊಬೈಲ್ ಫೋನುಗಳು ಸಕ್ರಿಯವಾಗಿವೆ. ಇಂದು ನಮ್ಮ ದೇಶದಲ್ಲಿ 1 ಗಿಗಾಬೈಟ್ ಡೇಟಾದ ಬೆಲೆಯು ಒಂದು ಸೀಸೆ ತಂಪು ಪಾನೀಯದ ಬೆಲೆಗಿಂತಲೂ ಕಡಿಮೆ ಇದೆ. ತುಂಬಾ ಕಡಿಮೆ ಬೆಲೆಗೆ ಸಿಗುವ ಈ ಡೇಟಾವೇ ಇಂದಯು ಸೇವಾ ಪೂರೈಕೆಯ ಪರಿಣಾಮಕಾರಿ ಮಾಧ್ಯಮವಾಗಿದೆ.
ಇನ್ನೊಂದೆಡೆ, `ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಯು ಜಾಗತಿಕ ಮಟ್ಟದ ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಇಂದು ನಾವು ಕೇವಲ ಭಾರತದ ಉಪಯೋಗಕ್ಕಷ್ಟೇ ದೊಡ್ಡದೊಡ್ಡ ಉತ್ಪನ್ನಗಳನ್ನು ತಯಾರಿಸಲು ಸೀಮಿತವಾಗಿಲ್ಲ, ಬದಲಿಗೆ ಇಡೀ ಜಗತ್ತಿನ ಪ್ರಯೋಜನಕ್ಕಾಗಿ ಇದನ್ನು ಮಾಡಬಲ್ಲವರಾಗಿದ್ದೇವೆ. ಅದರಲ್ಲೂ ಎಲೆಕ್ಟ್ರಾನಿಕ್ಸ್ (ವಿದ್ಯುನ್ಮಾನ) ಮತ್ತು ಆಟೋಮೊಬೈಲ್ (ವಾಹನೋದ್ಯಮ) ಕ್ಷೇತ್ರಗಳಲ್ಲಿ ಭಾರತವು ಜಾಗತಿಕ ಮಟ್ಟದ ಉತ್ಪಾದನಾ ತಾಣವಾಗಿದೆ. ಇದೇ ರೀತಿಯಲ್ಲಿ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ನಾವು ಇಷ್ಟರಲ್ಲೇ ಪ್ರಥಮ ಸ್ಥಾನದಲ್ಲಿ ನಿಲ್ಲಲಿದ್ದೇವೆ.
ಮಿತ್ರರೇ,
`ಮೇಕ್ ಇನ್ ಇಂಡಿಯಾ’ ಆಂದೋಲನವು ಯಶಸ್ವಿಯಾಗಲು ನಾವು ವ್ಯಾಪಾರ-ವಹಿವಾಟನ್ನು ಸುಗಮವಾಗಿ ನಡೆಸಿಕೊಂಡು ಹೋಗುವಂತಹ ವಾತಾವರಣವನ್ನು ನಿರ್ಮಿಸಿದ್ದೇ ಕಾರಣ. ಸುಗಮ ವಾಣಿಜ್ಯ ವಹಿವಾಟಿಗೆ ಸಂಬಂಧಿಸಿದಂತೆ ನಾವು ಜಾಗತಿಕ ಮಟ್ಟದಲ್ಲಿ 40 ಸ್ಥಾನಗಳಷ್ಟು ಮೇಲೇರಿದ್ದೇವೆ. ಜಾಗತಿಕ ಸ್ಪರ್ಧಾತ್ಮಕತೆಯ ಪಟ್ಟಿಯಲ್ಲೂ ನಾವು ಐದು ಸೂಚ್ಯಂಕಗಳನ್ನು ಗಳಿಸುವ ಮೂಲಕ ನಮ್ಮ ಸ್ಥಾನಮಾನವನ್ನು ಸುಧಾರಿಸಿಕೊಂಡಿದ್ದೇವೆ. ಮತ್ತೊಂದೆಡೆ, ಸಂಶೋಧನೆ ಅಥವಾ ಆವಿಷ್ಕಾರದ ವಿಚಾರದಲ್ಲಿ ನಾವು ಜಗತ್ತಿನ ಅಗ್ರಮಾನ್ಯ ರಾಷ್ಟ್ರಗಳ ಜತೆ ಇದ್ದೇವೆ. ಹೀಗಾಗಿಯೇ ಭಾರತವು ಇಂದು ನವೋದ್ಯಮಗಳ ಸ್ಥಾಪನೆಗೆ ಹೇಳಿಮಾಡಿಸಿದಂತಹ ವಾತಾವರಣವಿರುವ ದೇಶಗಳಲ್ಲಿ ಭಾರತವು ಇಡೀ ಜಗತ್ತಿನಲ್ಲೇ ದ್ವಿತೀಯ ಸ್ಥಾನದಲ್ಲಿದೆ.
ಸ್ನೇಹಿತರೇ,
ಭಾರತದಲ್ಲಿ ಯಾವ ಸಂಶೋಧನೆಗಳೇ ನಡೆಯಲಿ, ಯಾವ ಪರಿಹಾರವೇ ಹೊಳೆಯಲಿ, ಇವ್ಯಾವುವೂ ದುಬಾರಿಯಲ್ಲ. ಜತೆಗೆ, ನಾವು ಇದರಲ್ಲಿ ಗುಣದ ದೃಷ್ಟಿಯಿಂದಲೂ ಉತ್ತಮವಾಗಿದ್ದೇವೆ. ಭಾರತದ ಬಾಹ್ಯಾಕಾಶ ಕಾರ್ಯಕ್ರಮವು ಇದಕ್ಕೊಂದು ಅದ್ಭುತ ಉದಾಹರಣೆ. ಭಾರತವು ಇಂದು ತುಂಬಾ ಸುಲಭದ ದರದಲ್ಲಿ ಜಗತ್ತಿನ ನಾನಾ ದೇಶಗಳ ಮತ್ತು ಖಾಸಗಿ ಸಂಸ್ಥೆಗಳ ಕೃತಕ ಉಪಗ್ರಹಗಳನ್ನು ಕಕ್ಷೆಗೆ ಸೇರಿಸುತ್ತಿದೆ. ಕಳೆದ ವರ್ಷ ನಮ್ಮ ವಿಜ್ಞಾನಿಗಳು ಒಂದೇ ಬಾರಿಗೆ ನೂರು ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಕಂಡುಕೇಳರಿಯದಂತಹ ದಾಖಲೆಯನ್ನೇ ನಿರ್ಮಿಸಿದರು.
ತುಂಬಾ ಕಡಿಮೆ ಖರ್ಚಿನಲ್ಲಿ ನಾವು `ಚಂದ್ರಯಾನ’ ಮತ್ತು `ಮಂಗಳ ಯಾನ’ಗಳನ್ನು ಪೂರೈಸಿದ್ದೇವೆ. ಜತೆಗೀಗ 2022ರಲ್ಲಿ `ಗಗನ ಯಾನ’ವನ್ನು ಕೈಗೊಳ್ಳಲು ಸಿದ್ಧತೆ ನಡೆಸುತ್ತಿದ್ದೇವೆ. ಈ `ಗಗನಯಾನ’ವು ಸಂಪೂರ್ಣವಾಗಿ ಭಾರತೀಯವಾಗಿದ್ದು, ಈ ಯಾನದಲ್ಲಿ ನಭಕ್ಕೆ ಹಾರಲಿರುವ ವ್ಯಕ್ತಿಯು ಕೂಡ ಭಾರತೀಯನೇ ಆಗಿರಲಿದ್ದಾನೆ.
ಗೆಳೆಯರೇ,
ಭೂಮಿಯಿಂದ ಹಿಡಿದು ಬಾನಂಗಳದವರೆಗೆ ಭಾರತದಲ್ಲಿಂದು ಭಾರೀ ಬದಲಾವಣೆಗಳು ಸಂಭವಿಸುತ್ತಿವೆ. ಹೀಗಾಗಿ ಭಾರತವು ಇಂದು ಜಗತ್ತಿನಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಗಳಲ್ಲಿ ಒಂದಾಗಿದೆ. ಈ ಬದಲಾವಣೆಗಳನ್ನು ಗಮನಿಸುತ್ತಿರುವ ಜಾಗತಿಕ ಮಟ್ಟದ ಎಲ್ಲಾ ಸಂಸ್ಥೆಗಳೂ ಮುಂಬರುವ ದಶಕದಲ್ಲಿ ಭಾರತವೇ ಜಾಗತಿಕ ಬೆಳವಣಿಗೆಯ ಚಾಲಕ ಶಕ್ತಿಯಾಗಲಿದೆ ಎಂದು ಹೇಳುತ್ತಿವೆ. ಭಾರತದ ಈ ಬೆಳವಣಿಗೆಯ ಕಥನದಲ್ಲಿ ಜಪಾನ್ ಮತ್ತು ನಿಮ್ಮೆಲ್ಲರ ಕೊಡುಗೆಯೂ ಇರಲಿದೆ.
ಬುಲೆಟ್ ರೈಲಿನಿಂದ ಹಿಡಿದು ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಯವರೆಗೆ ಭಾರತವು ಇಂದು ರೂಪಿಸುತ್ತಿರುವ ಪ್ರತಿಯೊಂದು ಮೂಲಸೌಲಭ್ಯ ಯೋಜನೆಗಳಲ್ಲೂ ಜಪಾನ್ ಕೈ ಜೋಡಿಸುತ್ತಿದೆ. ಭಾರತದ ಮಾನವಶಕ್ತಿ ಮತ್ತು ಯುವಶಕ್ತಿಗೆ ಕೂಡ ಜಪಾನಿನ ಕೌಶಲ್ಯಶಕ್ತಿಯಿಂದ ಪ್ರಯೋಜನವಾಗುತ್ತಿದೆ.
ಸ್ನೇಹಿತರೇ,
ನವಭಾರತದ ನಿರ್ಮಾಣದಲ್ಲಿ ನೀವೆಲ್ಲರೂ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ನಾನು ಆಹ್ವಾನಿಸುತ್ತಿದ್ದೇನೆ. ಭಾರತದಲ್ಲಿ ಇಂದು ಬಂಡವಾಳ ಹೂಡಿಕೆಗೆ ಮತ್ತು ಸಂಶೋಧನೆಗೆ ಯಥೇಚ್ಚ ಮತ್ತು ಸರಿಯಾದ ಅವಕಾಶಗಳಿವೆ. ಇದರ ಜತೆಗೆ, ನೀವು ನಿಮ್ಮ ಬೇರುಗಳೊಂದಿಗೂ ಸಂಪರ್ಕವನ್ನು ಸಾಧಿಸಲು ಇದು ಸರಿಯಾದ ಸಮಯವಾಗಿದೆ.
ಜಪಾನಿನಲ್ಲಿ ನೆಲೆಯೂರಿರುವ ಭಾರತೀಯರು ತಮ್ಮ ಜಪಾನಿ ಸ್ನೇಹಿತರೊಂದಿಗೆ ಸೇರಿಕೊಂಡು ಸದಾ ದೇಶಕ್ಕೆ ಗಮನಾರ್ಹವಾದ ಕಾಣಿಕೆಯನ್ನು ನೀಡುತ್ತಿದ್ದಾರೆ. ಸ್ವಾಮಿ ವಿವೇಕಾನಂದರು, ನೇತಾಜಿ ಸುಭಾಷಚಂದ್ರ ಬೋಸರು ಮತ್ತು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಜಪಾನಿನಿಂದ ಬೆಂಬಲ ಸಿಕ್ಕಿತು. ಈ ಅಂಶವು ಕೋಟ್ಯಂತರ ಭಾರತೀಯರ ಹೃದಯದಲ್ಲಿ ಸದಾ ನೆಲೆಸಿರುತ್ತದೆ.
ನಮ್ಮ ಬಾಂಧವ್ಯವನ್ನು ಮತ್ತಷ್ಟು ತೀವ್ರಗೊಳಿಸಿಕೊಳ್ಳಲು ಮತ್ತು ಸಹಭಾಗಿತ್ವವು ಬಲವರ್ಧನೆಗೊಳ್ಳಲು ನಾವೆಲ್ಲರೂ ನಿರಂತರವಾಗಿ ಪ್ರಯತ್ನಿಸಬೇಕಾಗಿದೆ.
ಮುಂಬರುವ ಜನವರಿಯಲ್ಲಿ ನಮ್ಮಲ್ಲಿ `ಪ್ರವಾಸಿ ಭಾರತೀಯ ದಿವಸ’ ಮತ್ತು `ಅರ್ಧಕುಂಭ ಮೇಳ’ ನಡೆಯಲಿವೆ. ಇವೆರಡು ಕಾರ್ಯಕ್ರಮಗಳಿಗೂ ನೀವೆಲ್ಲರೂ ಬರಬೇಕೆಂದು ನಾನು ಇಂದು ಈ ವೇದಿಕೆಯ ಮೂಲಕ ಆಮಂತ್ರಿಸುತ್ತಿದ್ದೇನೆ. ಈ ವರ್ಷದ `ಪ್ರವಾಸಿ ಭಾರತೀಯ ದಿವಸ’ವು ವಾರಣಾಸಿಯಲ್ಲಿ ನಡೆಯಲಿದೆ. ಅಂದಂತೆ, ಪ್ರಧಾನಮಂತ್ರಿಗಳಾದ ಅಬೆ ಅವರು ಅಲ್ಲಿ ನಡೆಯುವ ಗಂಗಾ ಆರತಿಯನ್ನು ನೋಡಿ, ಅತೀವ ಸಂತೋಷಪಟ್ಟಿದ್ದರು. ನೀವೆಲ್ಲರೂ ಮುಖತಃ ವಾರಣಾಸಿಗೆ ಬರಬೇಕೆಂದು ನಾನು ಕರೆಯುತ್ತಿದ್ದೇನೆ. ಏಕೆಂದರೆ, ನಾನು ವಾರಣಾಸಿಯ ಲೋಕಸಭಾ ಸದಸ್ಯನಾಗಿದ್ದು, ನೀವೆಲ್ಲರೂ ನನ್ನ ಅತಿಥಿಗಳಾಗಿ ಇರಲಿದ್ದೀರಿ.
ಇನ್ನು ಎರಡು ದಿನಗಳಲ್ಲಿ ವಿಶ್ವ ಭೂಪಟದಲ್ಲಿ ಭಾರತವು ಇನ್ನೊಂದು ಮಹತ್ತರ ಸಾಧನೆಯನ್ನು ಮಾಡಲಿದೆ.
ಅದೇನೆಂದರೆ, ಅಕ್ಟೋಬರ್ 31ನೇ ತಾರೀಖು ಸರ್ದಾರ್ ವಲ್ಲಭಭಾಯಿ ಪಟೇಲರ ಜನ್ಮದಿನವಾಗಿದ್ದು, ಇದನ್ನು ನಾವು ಪ್ರತೀವರ್ಷ ಆಚರಿಸುತ್ತೇವೆ. ಆದರೆ ಈ ಸಲದ ಪಟೇಲರ ಜನ್ಮದಿನವು ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಏಕೆಂದರೆ, ಅಂದು ನಾವು ಗುಜರಾತಿನಲ್ಲಿರುವ ಪಟೇಲರ ಜನ್ಮಸ್ಥಳದಲ್ಲಿ ಜಗತ್ತಿನಲ್ಲೇ ಅತ್ಯಂತ ಎತ್ತರದ ಸರ್ದಾರ್ ಪಟೇಲರ ಪ್ರತಿಮೆಯನ್ನು ಲೋಕಾರ್ಪಣೆ ಮಾಡಲಿದ್ದೇವೆ. ಅಂದಂತೆ, ಪಟೇಲರ ಈ ಪ್ರತಿಮೆಯು ಅಮೆರಿಕದ `ಸ್ವಾತಂತ್ರ್ಯದೇವಿಯ ಪ್ರತಿಮೆ’ಗಿಂತ ಎರಡು ಪಟ್ಟು ದೊಡ್ಡದಾಗಿದೆ. ಈ ಪ್ರತಿಮೆಯು ಪಟೇಲರ ಪ್ರತಿಭೆಯಷ್ಟೇ ಎತ್ತರದ್ದಾಗಿದೆ! ಹೀಗಾಗಿ ಪ್ರತಿಯೊಬ್ಬ ಭಾರತೀಯನೂ ಇನ್ನುಮುಂದೆ “ಜಗತ್ತಿನ ಅತ್ಯಂತ ಎತ್ತರದ ಪ್ರತಿಮೆ ಇರುವುದು ನಮ್ಮಲ್ಲೇ!’’ ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಈ ಪ್ರತಿಮೆಯನ್ನು ಅಕ್ಟೋಬರ್ 31ರಂದು ಉದ್ಘಾಟಿಸಲಾಗುತ್ತಿದೆ. ನೀವು ಭಾರತಕ್ಕೆ ಬಂದಾಗ, ಹಾಗೆಯೇ ನಿಮ್ಮ ಜಪಾನಿ ಸ್ನೇಹಿತರು ನಮ್ಮಲ್ಲಿಗೆ ಬಂದಾಗ ತಪ್ಪದೆ ಸರ್ದಾರ್ ವಲ್ಲಭಭಾಯಿ ಪಟೇಲರ ಪ್ರತಿಮೆಯನ್ನು ನೋಡಿ. ಇದು ನಿಮ್ಮೆಲ್ಲರಲ್ಲಿ ನನ್ನ ಕೋರಿಕೆ.
ಕೊನೆಯಲ್ಲಿ ನಿಮ್ಮೆಲ್ಲರಿಗೂ ಮತ್ತೊಮ್ಮೆ ದೀಪಾವಳಿಯ ಹೃತ್ಪೂರ್ವಕ ಶುಭಾಶಯಗಳು.
ಇವತ್ತು ಬೆಳಗಿನ ಕಾರ್ಯಕ್ರಮಕ್ಕೆ ನೀವೆಲ್ಲರೂ ಅಪಾರ ಸಂಖ್ಯೆಯಲ್ಲಿ ಬಂದಿದ್ದೀರಿ. ನಿಮ್ಮೆಲ್ಲರಿಗೂ ಪುನಃ ನನ್ನ ಹೃತ್ಪೂರ್ವಕ ಧನ್ಯವಾದಗಳು.
ಧನ್ಯವಾದಗಳು.
Had a delightful interaction with the Indian community in Japan.
— Narendra Modi (@narendramodi) October 29, 2018
The accomplishments of our diaspora make us very proud.
Talked at length about the rich history, robust present and strong future of India-Japan relations. https://t.co/9jdURuB6Il pic.twitter.com/BLiYLMepPq