ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯು, 2026ರಿಂದ 2033-34ರ ಅವಧಿಗೆ ಒಟ್ಟು ₹1,856.67 ಕೋಟಿ ವೆಚ್ಚದ ‘ಖೇಲೋ ಇಂಡಿಯಾ ಕ್ರೀಡಾ ಸಾಮಗ್ರಿ ತಯಾರಿಕಾ ಯೋಜನೆ’ಗೆ ಅನುಮೋದನೆ ನೀಡಿದೆ. ಹೂಡಿಕೆ, ತಯಾರಿಕೆ, ನಾವೀನ್ಯತೆ ಮತ್ತು ರಫ್ತನ್ನು ಉತ್ತೇಜಿಸುವುದು ಹಾಗೂ ಜಾಗತಿಕ ಕ್ರೀಡಾ ಸಾಮಗ್ರಿ ವಲಯದಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.
2026-27ರ ಕೇಂದ್ರ ಬಜೆಟ್ನಲ್ಲಿ ಘೋಷಿಸಲಾದ ಈ ಯೋಜನೆಯು, ಹೂಡಿಕೆ, ತಂತ್ರಜ್ಞಾನದ ಅಳವಡಿಕೆ, ಸಂಶೋಧನೆ ಮತ್ತು ನಾವೀನ್ಯತೆ, ಕೌಶಲ್ಯಾಭಿವೃದ್ಧಿ, ಗುಣಮಟ್ಟದ ಪ್ರಮಾಣೀಕರಣ ಹಾಗೂ ಮಾರುಕಟ್ಟೆ ಅಭಿವೃದ್ಧಿಗೆ ಉದ್ದೇಶಿತ ನೆರವು ನೀಡುವ ಮೂಲಕ ಭಾರತದ ಕ್ರೀಡಾ ಸಾಮಗ್ರಿ ತಯಾರಿಕಾ ನೆಲೆಯನ್ನು ಬಲಪಡಿಸುವ ಗುರಿಯನ್ನು ಹೊಂದಿದೆ. ಜಾಗತಿಕವಾಗಿ ಸ್ಪರ್ಧಾತ್ಮಕ ಕ್ರೀಡಾ ಸಾಮಗ್ರಿ ಉದ್ಯಮದ ಅಭಿವೃದ್ಧಿಗೆ ಈ ಯೋಜನೆ ನೆರವಾಗಲಿದ್ದು, ಜಾಗತಿಕ ಪೂರೈಕೆ ಸರಪಳಿಯಲ್ಲಿ ಭಾರತದ ಸ್ಥಾನವನ್ನು ಮತ್ತಷ್ಟು ಬಲಪಡಿಸಲಿದೆ.
‘ಖೇಲೋ ಭಾರತ್ ನೀತಿ 2025’, ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ದ ಆಶಯಗಳಿಗೆ ಅನುಗುಣವಾಗಿರುವ ಈ ಯೋಜನೆಯು ಹೂಡಿಕೆಯನ್ನು ಆಕರ್ಷಿಸುವ, ಉದ್ಯೋಗಾವಕಾಶಗಳನ್ನು ಸೃಷ್ಟಿಸುವ, ದೇಶೀಯ ಉತ್ಪಾದನಾ ಸಾಮರ್ಥ್ಯಗಳನ್ನು ಬಲಪಡಿಸುವ ಹಾಗೂ ಭಾರತೀಯ ಕ್ರೀಡಾ ಸಾಮಗ್ರಿಗಳ ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಸಂಯೋಜಿತ ಕ್ರೀಡಾ ಸಾಮಗ್ರಿ ತಯಾರಿಕಾ ವ್ಯವಸ್ಥೆಗಳ ನಿರ್ಮಾಣ
ಕ್ಲಸ್ಟರ್ ಆಧಾರಿತ ತಯಾರಿಕೆಯನ್ನು ಉತ್ತೇಜಿಸಲು ಹಾಗೂ ತಯಾರಕರು, ಪೂರೈಕೆದಾರರು, ಪರೀಕ್ಷಾ ಸೌಲಭ್ಯಗಳು, ವಿನ್ಯಾಸ ಮತ್ತು ಮಾದರಿ ತಯಾರಿಕಾ ಕೇಂದ್ರಗಳು ಹಾಗೂ ಪೂರಕ ಉದ್ಯಮಗಳನ್ನು ಒಂದೇ ಪ್ರದೇಶದಲ್ಲಿ ಸ್ಥಾಪಿಸುವ ಮೂಲಕ ಸಮಗ್ರ ಕೈಗಾರಿಕಾ ವ್ಯವಸ್ಥೆಗಳನ್ನು ರೂಪಿಸಲು ಮೀಸಲಾದ ಕ್ರೀಡಾ ಸಾಮಗ್ರಿ ತಯಾರಿಕಾ ವಲಯಗಳನ್ನು (ಎಸ್ಜಿಎಂಝಡ್ಗಳು) ಅಭಿವೃದ್ಧಿಪಡಿಸಲು ಈ ಯೋಜನೆಯು ಉದ್ದೇಶಿಸಿದೆ. ಭವ್ಯ (BHAVYA) ಯೋಜನೆ ಮತ್ತು ಎನ್ಐಸಿಡಿಸಿ ಕೈಗಾರಿಕಾ ಪಾರ್ಕ್ಗಳ ಅಡಿಯಲ್ಲಿ ಈಗಾಗಲೇ ಲಭ್ಯವಿರುವ ಕೈಗಾರಿಕಾ ಮೂಲಸೌಕರ್ಯಗಳೊಂದಿಗೆ ಸಮನ್ವಯ ಸಾಧಿಸುವ ಮೂಲಕ ಈ ವಲಯಗಳನ್ನು ಅಭಿವೃದ್ಧಿಪಡಿಸಲಾಗುತ್ತದೆ. ಇದರಿಂದ ದಕ್ಷ ಉತ್ಪಾದನೆ, ಉದ್ಯಮಗಳ ನಡುವಿನ ಬಲವಾದ ಸಂಪರ್ಕ ಹಾಗೂ ಕ್ರೀಡಾ ಸಾಮಗ್ರಿಗಳ ಸಂಪೂರ್ಣ ಮೌಲ್ಯ ಸರಪಳಿಯಲ್ಲಿ ಹೆಚ್ಚಿನ ಸ್ಪರ್ಧಾತ್ಮಕತೆ ಸಾಧ್ಯವಾಗಲಿದೆ.
ಈ ವಲಯಗಳು ಸಮಗ್ರ ತಯಾರಿಕಾ ಸೌಲಭ್ಯಗಳ ಸ್ಥಾಪನೆಗೆ ನೆರವಾಗಲಿದ್ದು, ಉದ್ಯಮಗಳ ನಡುವಿನ ಸಂಪರ್ಕವನ್ನು ಬಲಪಡಿಸಿ ಕಾರ್ಯಾಚರಣೆಯ ದಕ್ಷತೆಯನ್ನು ಸುಧಾರಿಸಲಿವೆ. ಈ ಕ್ರಮಗಳು ಹೂಡಿಕೆಗೆ ಉತ್ತೇಜನ ನೀಡುವುದರ ಜೊತೆಗೆ ತಯಾರಿಕಾ ಸಾಮರ್ಥ್ಯವನ್ನು ಹೆಚ್ಚಿಸಿ, ದೇಶದಲ್ಲಿ ಸದೃಢ ಕ್ರೀಡಾ ಸಾಮಗ್ರಿ ತಯಾರಿಕಾ ನೆಲೆಯ ಬೆಳವಣಿಗೆಗೆ ಬೆಂಬಲ ನೀಡುವ ನಿರೀಕ್ಷೆಯಿದೆ.
ಹೂಡಿಕೆ ಆಕರ್ಷಣೆ ಮತ್ತು ದೇಶೀಯ ತಯಾರಿಕೆಯ ವಿಸ್ತರಣೆ
ಕ್ರೀಡಾ ಸಾಮಗ್ರಿ ವಲಯದಲ್ಲಿ ಹೊಸ ಹೂಡಿಕೆಗಳನ್ನು ಆಕರ್ಷಿಸುವುದು ಮತ್ತು ದೇಶೀಯ ತಯಾರಿಕಾ ಸಾಮರ್ಥ್ಯವನ್ನು ಬಲಪಡಿಸುವುದು ಈ ಯೋಜನೆಯ ಪ್ರಮುಖ ಆದ್ಯತೆಯಾಗಿದೆ. ಪ್ರಮುಖ ದೇಶೀಯ ಮತ್ತು ಜಾಗತಿಕ ತಯಾರಕರು, ಬ್ರ್ಯಾಂಡ್ಗಳು ಹಾಗೂ ಚಿಲ್ಲರೆ ಮಾರಾಟ ಸರಪಳಿಗಳು ಗೊತ್ತುಪಡಿಸಿದ ಕ್ರೀಡಾ ಸಾಮಗ್ರಿ ತಯಾರಿಕಾ ವಲಯಗಳಲ್ಲಿ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ‘ಪ್ರಮುಖ ಹೂಡಿಕೆ ನೆರವು’ (ಆಂಕರ್ ಇನ್ವೆಸ್ಟ್ಮೆಂಟ್ ಸಪೋರ್ಟ್) ಘಟಕವು ಪ್ರೋತ್ಸಾಹ ನೀಡಲಿದೆ. ಇದರ ಮೂಲಕ ಸದೃಢ ಪೂರೈಕೆದಾರರು ಮತ್ತು ಪೂರಕ ಉದ್ಯಮಗಳ ವ್ಯವಸ್ಥೆಯ ಅಭಿವೃದ್ಧಿಗೂ ಉತ್ತೇಜನ ದೊರೆಯಲಿದೆ. ಇದಕ್ಕೆ ಪೂರಕವಾಗಿ, ‘ವಹಿವಾಟು ಆಧಾರಿತ ನೆರವು’ (ಟರ್ನ್ಓವರ್ ಲಿಂಕ್ಡ್ ಸಪೋರ್ಟ್) ಘಟಕವು ಹೆಚ್ಚಿನ ಉತ್ಪಾದನೆ, ಉತ್ಪಾದನಾ ಸಾಮರ್ಥ್ಯದ ವಿಸ್ತರಣೆ ಹಾಗೂ ನಿರಂತರ ಉತ್ಪಾದನಾ ಬೆಳವಣಿಗೆಗೆ ಪ್ರೋತ್ಸಾಹ ನೀಡಲಿದೆ.
ಒಟ್ಟು ₹1,130 ಕೋಟಿ ವೆಚ್ಚದ ಈ ಎರಡೂ ಘಟಕಗಳು ದೇಶೀಯ ತಯಾರಿಕೆಯನ್ನು ಬಲಪಡಿಸುವ, ಆಮದು ಅವಲಂಬನೆಯನ್ನು ಕಡಿಮೆ ಮಾಡುವ, ದೇಶೀಯ ಮೌಲ್ಯವರ್ಧನೆಯನ್ನು ಹೆಚ್ಚಿಸುವ, ಗಣನೀಯ ಖಾಸಗಿ ಹೂಡಿಕೆಗೆ ವೇಗ ನೀಡುವ, ಮೌಲ್ಯ ಸರಪಳಿಯ ವಿವಿಧ ಹಂತಗಳಲ್ಲಿ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಹಾಗೂ ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದ ಸ್ಪರ್ಧಾತ್ಮಕತೆಯನ್ನು ಸುಧಾರಿಸುವ ನಿರೀಕ್ಷೆಯಿದೆ.
ಎಂಎಸ್ಎಂಇಗಳು ಹಾಗೂ ಅಸ್ತಿತ್ವದಲ್ಲಿರುವ ತಯಾರಿಕಾ ಕ್ಲಸ್ಟರ್ಗಳ ಬಲವರ್ಧನೆ
ಕ್ರೀಡಾ ಸಾಮಗ್ರಿ ವಲಯದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಎಂಎಸ್ಎಂಇಗಳು) ಮಹತ್ವದ ಪಾತ್ರವನ್ನು ಗುರುತಿಸಿರುವ ಈ ಯೋಜನೆಯು, ಅಸ್ತಿತ್ವದಲ್ಲಿರುವ ತಯಾರಿಕಾ ಕ್ಲಸ್ಟರ್ಗಳನ್ನು ಬಲಪಡಿಸಲು ಮತ್ತು ಸಣ್ಣ ಉದ್ಯಮಗಳ ಬೆಳವಣಿಗೆಗೆ ನೆರವು ನೀಡಲು ಒತ್ತು ನೀಡುತ್ತದೆ.
ಸಾಮಾನ್ಯ ಸೌಲಭ್ಯಗಳ ಅಭಿವೃದ್ಧಿ ಮತ್ತು ಹಂಚಿಕೆಯ ಮೂಲಸೌಕರ್ಯಗಳ ನಿರ್ಮಾಣ ಸೇರಿದಂತೆ, ಅಸ್ತಿತ್ವದಲ್ಲಿರುವ ಕ್ರೀಡಾ ಸಾಮಗ್ರಿ ತಯಾರಿಕಾ ಕ್ಲಸ್ಟರ್ಗಳ ಉನ್ನತೀಕರಣಕ್ಕೆ ನೆರವು ಒದಗಿಸಲಾಗುತ್ತದೆ.
ಗುಣಮಟ್ಟ ಮತ್ತು ಅಂತರರಾಷ್ಟ್ರೀಯ ಪ್ರಮಾಣೀಕರಣಕ್ಕೆ ಉತ್ತೇಜನ
ಭಾರತೀಯ ಕ್ರೀಡಾ ಸಾಮಗ್ರಿಗಳ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಅಂಗೀಕೃತ ಗುಣಮಟ್ಟ ಮತ್ತು ಕಾರ್ಯಕ್ಷಮತೆಯ ಮಾನದಂಡಗಳ ಮಹತ್ವವನ್ನು ಈ ಯೋಜನೆಯು ಗುರುತಿಸಿದೆ.
ಅಂತರರಾಷ್ಟ್ರೀಯ ಕ್ರೀಡಾ ಒಕ್ಕೂಟಗಳಿಂದ ಪ್ರಮಾಣೀಕರಣಗಳನ್ನು ಪಡೆಯಲು ಮತ್ತು ನವೀಕರಿಸಲು ತಯಾರಿಕರಿಗೆ ನೆರವು ನೀಡಲಾಗುತ್ತದೆ. ಇದಕ್ಕಾಗಿ ₹105 ಕೋಟಿ ಅನುದಾನವನ್ನು ನಿಗದಿಪಡಿಸಲಾಗಿದೆ.
ಈ ಕ್ರಮಗಳು ಉತ್ಪನ್ನಗಳ ಗುಣಮಟ್ಟವನ್ನು ಸುಧಾರಿಸಲು, ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಪ್ರವೇಶವನ್ನು ಸುಗಮಗೊಳಿಸಲು ಹಾಗೂ ಭಾರತದಲ್ಲಿ ತಯಾರಿಸಿದ ಕ್ರೀಡಾ ಸಾಮಗ್ರಿಗಳ ಮೇಲಿನ ವಿಶ್ವಾಸವನ್ನು ಬಲಪಡಿಸಲು ನೆರವಾಗಲಿವೆ.
ಸಂಶೋಧನೆ, ತಂತ್ರಜ್ಞಾನ ಮತ್ತು ನಾವೀನ್ಯತೆಯಲ್ಲಿ ಹೂಡಿಕೆ
ಕ್ರೀಡಾ ಸಾಮಗ್ರಿ ವಲಯದಲ್ಲಿ ಸಂಶೋಧನೆ, ವಿನ್ಯಾಸ ಮತ್ತು ನಾವೀನ್ಯತೆಯನ್ನು ಬಲಪಡಿಸಲು ಈ ಯೋಜನೆಯು ವಿಶೇಷ ಒತ್ತು ನೀಡುತ್ತದೆ.
ಕ್ರೀಡಾ ಉಪಕರಣಗಳು, ವಸ್ತು ವಿಜ್ಞಾನ, ರಕ್ಷಣಾತ್ಮಕ ಸಾಧನಗಳು ಮತ್ತು ಸುಧಾರಿತ ತಯಾರಿಕಾ ತಂತ್ರಜ್ಞಾನಗಳ ಕುರಿತ ಸಂಶೋಧನೆಯನ್ನು ಉತ್ತೇಜಿಸಲು ಪ್ರಮುಖ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಲ್ಲಿ ಶ್ರೇಷ್ಠತಾ ಕೇಂದ್ರಗಳನ್ನು ಸ್ಥಾಪಿಸಲು ನೆರವು ನೀಡಲಾಗುತ್ತದೆ.
‘ಅನುಸಂಧಾನ್ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನ’ದೊಂದಿಗೆ ಸಮನ್ವಯ ಸಾಧಿಸುವ ಮೂಲಕ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೂ ಉತ್ತೇಜನ ನೀಡಲಾಗುತ್ತದೆ.
‘ಸ್ಟಾರ್ಟ್ಅಪ್ ಇಂಡಿಯಾ’ ಉಪಕ್ರಮಕ್ಕೆ ಅನುಗುಣವಾಗಿ ನವೋದ್ಯಮಗಳಿಗೆ ವಿಶೇಷ ನೆರವು ಒದಗಿಸಲಾಗುತ್ತದೆ. ಇದರಿಂದ ನಾವೀನ್ಯತೆಗೆ ಉತ್ತೇಜನ ದೊರೆಯುವುದರ ಜೊತೆಗೆ ಕ್ರೀಡಾ ಸಾಮಗ್ರಿ ಉತ್ಪಾದನಾ ವ್ಯವಸ್ಥೆಯಲ್ಲಿ ಹೊಸ ತಂತ್ರಜ್ಞಾನಗಳು, ಪ್ರಕ್ರಿಯೆಗಳು ಮತ್ತು ಉತ್ಪನ್ನಗಳ ಅಭಿವೃದ್ಧಿ, ಪರೀಕ್ಷೆ, ಮೌಲ್ಯಮಾಪನ ಹಾಗೂ ವಾಣಿಜ್ಯೀಕರಣಕ್ಕೆ ಅನುಕೂಲವಾಗಲಿದೆ.
ಭವಿಷ್ಯಕ್ಕಾಗಿ ಕೌಶಲ್ಯಪೂರ್ಣ ಕಾರ್ಯಪಡೆಯ ಅಭಿವೃದ್ಧಿ
ಕ್ರೀಡಾ ಸಾಮಗ್ರಿ ವಲಯವು ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ವಲಯವಾಗಿರುವುದನ್ನು ಗುರುತಿಸಿರುವ ಈ ಯೋಜನೆಯು, ಉದ್ಯಮದ ಅಗತ್ಯಗಳಿಗೆ ಅನುಗುಣವಾದ ಕೌಶಲ್ಯಾಭಿವೃದ್ಧಿ ಉಪಕ್ರಮಗಳಿಗೆ ಬೆಂಬಲ ನೀಡಲಿದೆ.
ಬದಲಾಗುತ್ತಿರುವ ಉದ್ಯಮದ ಅಗತ್ಯತೆಗಳಿಗೆ ಅನುಗುಣವಾಗಿ ಕೌಶಲ್ಯಾಭಿವೃದ್ಧಿ ಉಪಕ್ರಮಗಳನ್ನು ಕೌಶಲ್ಯಾಭಿವೃದ್ಧಿ ಸಚಿವಾಲಯ ಮತ್ತು ಸಂಬಂಧಿತ ಉದ್ಯಮದ ಪಾಲುದಾರರ ಸಹಯೋಗದೊಂದಿಗೆ ಅನುಷ್ಠಾನಗೊಳಿಸಲಾಗುವುದು.
ಈ ಪ್ರಯತ್ನಗಳು ಕೌಶಲ್ಯಪೂರ್ಣ ಮಾನವ ಸಂಪನ್ಮೂಲಕ್ಕೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ನೆರವಾಗುವುದರ ಜೊತೆಗೆ ಕ್ರೀಡಾ ಸಾಮಗ್ರಿ ತಯಾರಿಕಾ ವಲಯದ ದೀರ್ಘಕಾಲೀನ ಅಭಿವೃದ್ಧಿಗೆ ಬೆಂಬಲ ನೀಡಲಿವೆ.
ಭಾರತೀಯ ಕ್ರೀಡಾ ಸಾಮಗ್ರಿಗಳನ್ನು ಜಾಗತಿಕ ಮಾರುಕಟ್ಟೆಗಳಿಗೆ ಕೊಂಡೊಯ್ಯುವುದು
ವಿಶೇಷ ಬ್ರ್ಯಾಂಡಿಂಗ್, ಸಂಪರ್ಕ ಮತ್ತು ಮಾರುಕಟ್ಟೆ ಅಭಿವೃದ್ಧಿ ಉಪಕ್ರಮಗಳ ಮೂಲಕ ಅಂತರರಾಷ್ಟ್ರೀಯ ಕ್ರೀಡಾ ಸಾಮಗ್ರಿ ಮಾರುಕಟ್ಟೆಗಳಲ್ಲಿ ಭಾರತದ ಉಪಸ್ಥಿತಿಯನ್ನು ವಿಸ್ತರಿಸಲು ಈ ಯೋಜನೆಯು ಉದ್ದೇಶಿಸಿದೆ. ರಫ್ತು ಉತ್ತೇಜನ ಮಿಷನ್ನ ನೆರವು ಪಡೆದು ಕೈಗೊಳ್ಳುವ ಈ ಪ್ರಯತ್ನಗಳು ಭಾರತೀಯ ಕ್ರೀಡಾ ಸಾಮಗ್ರಿಗಳ ಗೋಚರತೆಯನ್ನು ಹೆಚ್ಚಿಸುತ್ತವೆ, ಮಾರುಕಟ್ಟೆ ಪ್ರವೇಶವನ್ನು ಬಲಪಡಿಸುತ್ತವೆ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಅವುಗಳ ವ್ಯಾಪಕ ಪ್ರವೇಶಕ್ಕೆ ನೆರವಾಗುತ್ತವೆ.
ಜಾಗತಿಕ ಕ್ರೀಡಾ ಕ್ಷೇತ್ರದಲ್ಲಿ ಭಾರತದ ಮಹತ್ವಾಕಾಂಕ್ಷೆಗಳಿಗೆ ಬೆಂಬಲ
ಉತ್ತಮ ಗುಣಮಟ್ಟದ ಮತ್ತು ಅಂತರರಾಷ್ಟ್ರೀಯ ಪ್ರಮಾಣೀಕರಣ ಪಡೆದ ಕ್ರೀಡಾ ಸಾಮಗ್ರಿಗಳ ತಯಾರಿಕೆಯನ್ನು ಉತ್ತೇಜಿಸುವ ಮೂಲಕ, ಭಾರತದ ಕ್ರೀಡಾ ವಲಯದ ಬದಲಾಗುತ್ತಿರುವ ಅಗತ್ಯಗಳು ಮತ್ತು ಕ್ರೀಡಾಪಟುಗಳ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಈ ಯೋಜನೆಯು ಬೆಂಬಲ ನೀಡಲಿದೆ. ಯೋಜನೆಯಡಿ ನಾವೀನ್ಯತೆ, ಗುಣಮಟ್ಟದ ಮೂಲಸೌಕರ್ಯ ಮತ್ತು ತಯಾರಿಕಾ ಸಾಮರ್ಥ್ಯದಲ್ಲಿ ಆಗುವ ಸುಧಾರಣೆಗಳು ‘ಖೇಲೋ ಇಂಡಿಯಾ’ ಮತ್ತು ‘ಫಿಟ್ ಇಂಡಿಯಾ’ದಂತಹ ಉಪಕ್ರಮಗಳಿಗೆ ಪೂರಕವಾಗಲಿವೆ.
ಕ್ರೀಡಾ ಸಾಮಗ್ರಿಗಳ ವಿನ್ಯಾಸ, ಅಭಿವೃದ್ಧಿ ಮತ್ತು ತಯಾರಿಕೆಗೆ ಭಾರತವನ್ನು ಜಾಗತಿಕವಾಗಿ ಸ್ಪರ್ಧಾತ್ಮಕ ಕೇಂದ್ರವನ್ನಾಗಿ ರೂಪಿಸಲು ಈ ಯೋಜನೆಯು ನೆರವಾಗುವ ನಿರೀಕ್ಷೆಯಿದೆ. ತಯಾರಿಕಾ ಸಾಮರ್ಥ್ಯಗಳನ್ನು ಬಲಪಡಿಸುವ ಮೂಲಕ, ನಾವೀನ್ಯತೆಯನ್ನು ಉತ್ತೇಜಿಸುವ ಮೂಲಕ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಪ್ರವೇಶವನ್ನು ವಿಸ್ತರಿಸುವ ಮೂಲಕ, ಈ ಯೋಜನೆಯು ಬೆಳವಣಿಗೆ, ಉದ್ಯೋಗ ಮತ್ತು ರಫ್ತಿಗೆ ಹೊಸ ಅವಕಾಶಗಳನ್ನು ಸೃಷ್ಟಿಸಲಿದೆ. ಜೊತೆಗೆ, ಪ್ರಮುಖ ಕ್ರೀಡಾ ರಾಷ್ಟ್ರವಾಗಿ ಹೊರಹೊಮ್ಮುವ ಭಾರತದ ಆಶಯಕ್ಕೆ ಬೆಂಬಲ ನೀಡುವುದರೊಂದಿಗೆ, ‘ಆತ್ಮನಿರ್ಭರ ಭಾರತ’ ಮತ್ತು ‘ವಿಕಸಿತ ಭಾರತ@2047’ರ ದೃಷ್ಟಿಕೋನವನ್ನು ಸಾಕಾರಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ.
*****