ಪಿಎಂಇಂಡಿಯಾ
ಸಮಾರಂಭದಲ್ಲಿ ಭಾಗವಹಿಸಿರುವ ಎಲ್ಲ ಮಹನೀಯರೇ,
31 ಅಕ್ಟೋಬರ್ ಸರ್ದಾರ ಸಾಹೇಬ್ ಅವರ ಜನ್ಮದಿನದಿಂದ ಒಂದು ವಾರಗಳ ಕಾಲ ಈ ಅಭಿಯಾನ ಪ್ರಾರಂಭವಾಗಿದೆ, ಈ ಬಾರಿಯ ಚಳುವಳಿಯಲ್ಲಿ ಜನಸಾಮಾನ್ಯರನ್ನು ಪಾಲುದಾರರನ್ನಾಗಿ ಮಾಡಿಕೊಳ್ಳುವ ಪ್ರಯತ್ನ ನಡೆದಿದೆ. 1964raರಲ್ಲಿ ಈ ಆಂದೋಲನ ಪ್ರಾರಂಭ ಮಾಡಲು ಏನಾದರೂ ವಿಶೇಷ ಕಾರಣಗಳಿರಬೇಕು. ಅದಕ್ಕೂ ಮೊದಲು ಈ ಚಳುವಳಿಯ ಅಗತ್ಯತೆ ಕಂಡುಬಂದಿಲ್ಲದಿರಬಹುದು. 2004ರಲ್ಲಿ ಒಬ್ಬರಲ್ಲ ಮೂರು ಜನರಿರಬೇಕು ಇಲ್ಲದಿದ್ದರೆ ಅನಾನುಕೂಲವಾಗುತ್ತದೆ ಎಂಬ ಕಾರಣಕ್ಕಾಗಿ 3 ಜನ ಸದಸ್ಯರನ್ನು ನೇಮಕ ಮಾಡಲಾಯಿತು. ಇಲ್ಲಿ ನೆರೆದಿರುವ ಜನರಲ್ಲಿ 50 ವರ್ಷಗಳ ಹಿಂದಿನ ಕಾಲದ ಜನರೂ ಇರಬೇಕು. 50 ವರ್ಷಗಳ ಹಿಂದೆ “ಶುದ್ಧ ತುಪ್ಪದ ಅಂಗಡಿ” ಎಂಬ ನಾಮಫಲಕ ಕಂಡುಬರುತ್ತಿರಲಿಲ್ಲ, ಬದಲಾಗಿ ದೊಡ್ಡ ಅಕ್ಷರಗಳಲ್ಲಿ “ತುಪ್ಪದ ಅಂಗಡಿ” ಎಂಬ ಫಲಕಗಳಿರುತ್ತಿದ್ದವು. ಅವು ಶುದ್ಧವೆಂದೇ ಭಾವಿಸಲಾಗುತ್ತಿತ್ತು. ಇಂದು
“ ಶುದ್ಧ ತುಪ್ಪದ ಅಂಗಡಿ” ಎಂಬ ಫಲಕ ಹಾಕಬೇಕಾಗಿದೆ.
ಸಾಮಾಜಿಕ ಜೀವನದಲ್ಲಿ ಮೌಲ್ಯಗಳ ಕುಸಿತವುಂಟಾದಾಗ ಹೆಚ್ಚಿನ ನೋವುಂಟಾಗುತ್ತದೆ. ಇಂದಿನಿಂದ 50 ವರ್ಷಗಳ ಹಿಂದಿನ ಕೆಲವು ವಿದ್ಯಾರ್ಥಿಗಳೂ ಕೂಡಾ ಪರೀಕ್ಷೆಗಳಲ್ಲಿ ನಕಲು ಮಾಡುತ್ತಿದ್ದಿರಬಹುದು. ಕಳ್ಳತನ ಮಾಡುವಾಗಲೂ ಅಕ್ಕ ಪಕ್ಕ ನೋಡುತ್ತಿರುತ್ತಾರೆ. ಅವರು ಕಳ್ಳತನವನ್ನೂ ಕೂಡಾ ಸಂಕೋಚದಿಂದಲೇ, ಭಯದಿಂದಲೇ ಮಾಡುತ್ತಿದ್ದರು ಎನಿಸುತ್ತದೆ. ತಾವು ಮಾಡುವ ಈ ಕಾರ್ಯ ಬೇರೆಯವರಿಗೆ ತಿಳಿಯಬಾರದೆಂದು ಅವರು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದರು. ಮೌಲ್ಯಗಳು ಹೇಗೆ ಬದಲಾಗುತ್ತಿದೆ ಎಂದರೆ ವಿದ್ಯಾರ್ಥಿಗಳೂ ಕೂಡಾ ಚಾಕು ಚೂರಿಗಳನ್ನಿಟ್ಟುಕೊಂಡು, ಯಾರು ಮೇಲ್ವಿಚಾರಕ, ಹೊರಗಡೆ ಬಾ ನೋಡಿಕೊಳ್ಳುತ್ತೇನೆ ಎಂಬ ಮಾತುಗಳನ್ನಾಡುತ್ತಿದ್ದಾರೆ. ನಾನು ಪೂರ್ತಿ ಪುಸ್ತಕವನ್ನು ಇಟ್ಟುಕೊಂಡು ಪರೀಕ್ಷೆ ಬರೆದಿದ್ದೇನೆ ಎಂದು ನುಡಿಯುತ್ತಾರೆ. ಇದೇ ಗುಣಗಳನ್ನು ಬೆಳೆಸಿಕೊಂಡಾಗ ಮೌಲ್ಯಗಳ ಕುಸಿತವಾಗುತ್ತದೆ. ಹೀಗೆಯೇ ಮಾಡುವುದು, ಈ ಕೆಲಸವೇ ಹೀಗೆ, ಇದರಲ್ಲೇನಿದೆ ಎಂಬ ಮಾತುಗಳನ್ನು ಕೇಳಿದಾಗ ಬಹಳ ನೋವುಂಟಾಗುತ್ತದೆ.
ಭಾರತದಂತಹ ಬಡ ದೇಶಕ್ಕೆ ಭ್ರಷ್ಟಾಚಾರದ ಐಷಾರಾಮಿಯನ್ನು ಪಡೆಯಲು ಸಾಧ್ಯವಿಲ್ಲ. ಎಲ್ಲವೂ ಉಳ್ಳವರ ಪಾಲಾದರೆ, ಸಾಮಾನ್ಯ ನಾಗರಿಕ ತನ್ನ ಹಕ್ಕನ್ನು ಪಡೆದುಕೊಳ್ಳುವುದು ಯಾವಾಗ?. ಕೆಲವೊಮ್ಮೆ ಹಣದ ಬದಲಾಗಿ ಮರ್ಯಾದೆಯ ಪ್ರಶ್ನೆ ಉದ್ಭವಿಸುತ್ತದೆ. ಹಲವು ಬಾರಿ ಮನುಷ್ಯ ಅನಿವಾರ್ಯವಾಗಿ ಇಂತಹ ಕೆಲಸಗಳನ್ನು ಮಾಡಬೇಕಾಗಿರುತ್ತದೆ. ಈ ಪರಿಸ್ಥಿತಿಯನ್ನು ಬದಲಿಸಲು ಸಾಮೂಹಿಕ ಚಿಂತನೆ, ಜಾಗರೂಕತೆ ಮತ್ತು ಸಾಮಾನ್ಯ ನಾಗರಿಕನ ಪ್ರಜ್ಞೆಯ ಮಟ್ಟವನ್ನು ಮುಟ್ಟಬೇಕಾಗಿರುವುದು ಅತ್ಯಂತ ಅವಶ್ಯವಾಗಿದೆ. ಈ ರೀತಿಯ ಪ್ರಚಾರ ಅಭಿಯಾನಗಳಿಂದ ನಾವು ನಮ್ಮ ಕನಸುಗಳನ್ನು ನನಸು ಮಾಡುವ ಕಾರ್ಯಕ್ಕೆ ಅಗತ್ಯವಾದ ಶಕ್ತಿಯನ್ನು ಒಂದುಗೂಡಿಸಿಬಹುದಾಗಿದೆ. ಈ ರೀತಿಯ ಆಟವನ್ನಾಡುವ ಮನಸ್ಥಿತಿಯುಳ್ಳವರು ಬಹಳ ಸಾಮರ್ಥ್ಯವಂತರು ಎಂಬುದನ್ನು ನಾವೆಲ್ಲರೂ ಮನಗಂಡಿದ್ದೇವೆ. ಸಾಧನೆಯ ದೃಷ್ಟಿಯಲ್ಲಿ ನೋಡುವುದಾದರೆ ಹತ್ತು ಅಧಿಕಾರಿಗಳ ಪೈಕಿ ಈ ರೀತಿಯ ಮನಸ್ಥಿತಿಯುಳ್ಳವರಲ್ಲಿ ಸಾಧಿಸುವ ಛಲ ಹೆಚ್ಚಿರುತ್ತದೆ. ಆದುದರಿಂದ, ಎಲ್ಲವನ್ನೂ ತಿಳಿದೂ ಅವರು ಕಾರ್ಯವನ್ನು ಸರಿಯಾಗಿ ನಿರ್ವಹಿಸುತ್ತಾರೆಂಬ ಭರವಸೆಯೊಂದಿಗೆ ಸರ್ಕಾರ ಇಂತಹವರಿಗೆ ಕಾರ್ಯವನ್ನು ಒಪ್ಪಿಸುತ್ತದೆ, ಈ ರೀತಿಯ ಕಾರ್ಯ ಮಾಡುವ ಅಭ್ಯಾಸವುಳ್ಳವರಲ್ಲಿ ಸೃಜನಶೀಲತೆ ಹೆಚ್ಚಿನ ರೀತಿಯಲ್ಲಿರುತ್ತದೆ. ಅವರು ಅತ್ಯದ್ಭುತ ಸೃಜನಶೀಲರಾಗಿರುತ್ತಾರೆ. ಎಲ್ಲಿ ಕಳೆದಿರುತ್ತೇವೋ ಅಲ್ಲಿಂದಲೇ ಹುಡುಕಿ ತರುವ ಕಾರ್ಯವನ್ನು ಅವರು ಮಾಡುತ್ತಾರೆ. ಇದನ್ನು ನಾವು ಊಹಿಸಲೂ ಸಾಧ್ಯವಿಲ್ಲ.
ನಾವು ಚಿಕ್ಕವರಾಗಿದ್ದಾಗ ಅನೇಕ ಹಾಸ್ಯ ಪ್ರಸಂಗಗಳನ್ನು ಕೇಳಿದ್ದೇವೆ. ತಮಾಷೆಯೇ ಆಗಿರಬಹುದು. ಇಲ್ಲಿ ರೈಲ್ವೆ ಇಲಾಖೆಯವರು ಕುಳಿತಿದ್ದೀರಿ, ತಪ್ಪು ತಿಳಿಯಬೇಡಿ. ಒಬ್ಬ ರೈಲ್ವೆ ಉದ್ಯೋಗಿ ಇದ್ದ. ಆತ ಪರಮ ಭ್ರಷ್ಟಾಚಾರಿ. ಭ್ರಷ್ಟಾಚಾರದಲ್ಲಿ ಎತ್ತಿದ ಕೈ. ಆತನಿಂದ ಅಧಿಕಾರಿಗಳೂ ಬೇಸತ್ತಿದ್ದರು. ಈತನಿಂದ ತಮ್ಮ ಇಲಾಖೆಗೆ ಕೆಟ್ಟ ಹೆಸರು, ಇದಕ್ಕೆ ಏನಾದರೂ ಪರಿಹಾರ ಕಂಡುಕೊಳ್ಳಬೇಕೆಂದು ಅವರು ನಿರ್ಧರಿಸಿದರು. ರೈಲುಗಳು ಬರುವ ಹೋಗುವ ಸಮಯ ಘೋಷಿಸುವ ಕೆಲಸಕ್ಕೆ ನಿಯೋಜಿಸಬೇಕೆಂದು ತೀರ್ಮಾನಿಸಿದರು. ಅದನ್ನುಳಿದು ಬೇರೆ ಯಾವುದೇ ಕೆಲಸವಿರಲಿಲ್ಲ. ಯಾವ ಸಮಯಕ್ಕೆ ಯಾವ ರೈಲು ಆಗಮಿಸುತ್ತದೆ, ಮತ್ತು ಯಾವ ಸಮಯಕ್ಕೆ ನಿರ್ಗಮಿಸುತ್ತದೆ ಎಂಬುದನ್ನು ಘೋಷಣೆ ಮಾಡುವುದು ಆತನ ಕಾರ್ಯವಾಗಿತ್ತು. ಈತ ಬಹಳಷ್ಟು ಜನರನ್ನು ದೋಚಿದ್ದ, ಈತನಿಗೆ ಸರಿಯಾದ ಕೆಲಸ ವಹಿಸಿದ್ದಾರೆ ಎಂದು ಅನೇಕರು ಭಾವಿಸಿದರು. ಆತನನ್ನು ಆ ಜಾಗಕ್ಕೆ ನಿಯೋಜಿಸಿದರು, ಆತ ಬಹಳ ಸೃಜನಶೀಲನಾಗಿದ್ದ. ಭಾರೀ ಸೃಜನಶೀಲ. ಆತನಿಗೆ ಕಾರ್ಯಭಾರ ವಹಿಸುತ್ತಿದ್ದಂತೆ ಆತ ತನ್ನ ಕಾರ್ಯವನ್ನು ನಿರ್ವಹಿಸತೊಡಗಿದ. ರೈಲು ಬರುತ್ತಿದ್ದಂತೆ ಇಷ್ಟು ಭಾರದ ಲಗ್ಗೇಜಿಗೆ ಇಷ್ಟು ರೂಪಾಯಿಗಳನ್ನು ಕೊಡಬೇಕು, ಐದು ರೂಪಾಯಿ, ಹತ್ತು ರೂಪಾಯಿ ನೀಡಬೇಕೆಂದು ಘೋಷಿಸಿದ. ಲಗ್ಗೇಜಿನ ಭಾರಕ್ಕನುಗುಣವಾಗಿ ದರ ನಿಗದಿ ಮಾಡಿದ. ಕೂಲಿ ಕಾರ್ಮಿಕರೆಲ್ಲರೂ ಒಂದುಗೂಡಿದರೂ. ಈತ ಬದುಕಗೊಡುವುದಿಲ್ಲ. ಪ್ರಯಾಣಿಕರು ಹಣ ನೀಡುವುದಿಲ್ಲ, ಕೆಲವರು ಐದು ರೂಪಾಯಿಗಿಂತ ಹೆಚ್ಚು ನೀಡುವುದಿಲ್ಲವೆಂದು ಹೇಳುತ್ತಿದ್ದಾರೆ. ಎಲ್ಲ ಕೂಲಿಗಳು ಒಂದುಗೂಡಿ ಆತನ ಬಳಿ ಹೋದರು. ಆತನದು ಒಂದೇ ಮಾತು, ಸರಿಯಾದ ಒಪ್ಪಂದ ಮಾಡಿಕೊಳ್ಳಿ. ತಾವೆಂದಾದರೂ ಈ ರೀತಿಯ ಸೃಜನಶೀಲತೆಯನ್ನು ನೋಡಿದ್ದೀರಾ? ಈತನನ್ನು ಯಾವ ಸತರ್ಕತಾ ಆಯೋಗ ಸರಿ ಮಾಡಬಲ್ಲದು. ಇಂತಹವರು ಬಹಳ ಚತುರರಿರುತ್ತಾರೆ.
ಆದುದರಿಂದ ಎಲ್ಲರೂ ಜಾಗರೂಕತೆ ವಹಿಸಿ. ಇಂತಹವರು ತಮ್ಮ ಕಾರ್ಯದಲ್ಲಿ ಬಹಳ ಸತ್ಯನಿಷ್ಠೆಯುಳ್ಳವರು ಆಗಿರುತ್ತಾರೆ ಎಂಬುದನ್ನು ನಾನು ಗಮನಿಸಿದ್ದೇನೆ. ನಿಯಮಗಳಿಗೆ ಅನುಸಾರವಾಗಿ ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಾರೆ. ಇದು ನನ್ನ ಅನುಭವ. ನಾನು ಒಮ್ಮೆ ಅಹಮದಾಬಾದ್ ನಿಂದ ದಿಲ್ಲಿಗೆ ಪ್ರಯಾಣ ಬೆಳೆಸಬೇಕಿತ್ತು. ಅಂದಿನ ದಿನಗಳಲ್ಲಿ ಒಂದು ರೈಲು 24-25 ಗಂಟೆಗಳಲ್ಲಿ ದಿಲ್ಲಿ ತಲುಪುತ್ತಿತ್ತು. ದಿಲ್ಲಿ ಮೇಲ್ ಅಥವಾ…. ಯಾವುದೋ ಸರಿಯಾಗಿ ನೆನಪಿಲ್ಲ….. ನಾವು ನಿಲ್ದಾಣ ತಲುಪಿದೆವು. ನಾವು ಕಡುಬಡವರು. ನಾವು ಕಾಯ್ದಿರಿಸದ ಸಾಮಾನ್ಯ ಬೋಗಿಯಲ್ಲಿ ಹೋಗಬೇಕಾದವರು. ಆದರೆ ಅಲ್ಲೇ ಪ್ಲಾಟ್ ಫಾರ್ಮನಲ್ಲಿ ನಮ್ಮ ಪರಿಚಿತರು ಸಿಕ್ಕರು. ಎಲ್ಲಿಗೆ ಹೋಗಬೇಕೆಂದು ಕೇಳಿದರು. ನಾನು ಆವಶ್ಯಕ ಕಾರ್ಯಕ್ಕಾಗಿ ತುರ್ತಾಗಿ ದಿಲ್ಲಿಗೆ ಹೋಗಬೇಕಾಗಿದೆ ಎಂದೆ. ಬನ್ನಿ, ನಾನು ಆಸನದ ವ್ಯವಸ್ಥೆ ಮಾಡಿಕೊಡುತ್ತೇನೆ ಎಂದರು. ನಾನು ನನ್ನ ಬಳಿ ಟಿಕೆಟ್ ಇದೆ, ಆದರೆ ರಿಸರ್ವೇಶನ್ ಆಗಿಲ್ಲ ಎಂದೆ. ನಾನು ಸಾಮಾನ್ಯ ಬೋಗಿಯಲ್ಲಿ ದಿಲ್ಲಿಗೆ ಪ್ರಯಾಣಿಸುತ್ತೇನೆ ಎಂದೆ. ಆತ ತಾನು ಮಾತನಾಡುತ್ತೇನೆಂದು ಹೋದರು. ಯಾರೋ ಟಿಕೆಟ್ ಕಲೆಕ್ಟರ್ ನನ್ನು ಹಿಡಿದು, ಇವರು ನನಗೆ ಪರಿಚಿತರು, ಸಮಾಜ ಸೇವಾ ಕಾರ್ಯದಲ್ಲಿ ತೊಡಗಿಕೊಂಡಿರುತ್ತಾರೆ. ಇವರಿಗೆ ದಿಲ್ಲಿಗೆ ಪ್ರಯಾಣ ಮಾಡಬೇಕಿದೆ. ಒಂದು ಬರ್ತ್ ದೊರೆತರೆ ಒಳ್ಳೆಯದು. ಸಮಾಜಕ್ಕಾಗಿ ಕಾರ್ಯ ನಿರ್ವಹಿಸುವವರು ಎಂದು ಪರಿಚಯ ಮಾಡಿಕೊಟ್ಟರು. ಆ ಟಿಕೆಟ್ ಕಲೆಕ್ಟರ್, ಬನ್ನಿ ಬನ್ನಿ, ನೀವು ಸಮಾಜ ಸೇವಕರು ಎಂದು ನನ್ನನ್ನು ಕರೆದೊಯ್ದು ಒಂದು ಸ್ಥಳದಲ್ಲಿ ಕೂರಿಸಿದರು. ಅದು ರಿಸರ್ವ್ ಕೋಚ್ ಆಗಿತ್ತು. ಆಬು ರೈಲ್ವೆ ನಿಲ್ದಾಣ, ಆಬು ರೋಡ್.. ನಾನು ಆಗಿದ್ದಾಗ್ಗೆ ಆತನ ಬಳಿ ಹೋಗುತ್ತಿದ್ದೆ, ನನಗೊಂದು ಬರ್ತ್ ವ್ಯವಸ್ಥೆ ಮಾಡಿಕೊಡಿ, ಟಿಕೆಟ್ ನೀಡಿ, ನಾನು ಹಣ ನೀಡುತ್ತೇನೆ ಎಂದು ಕೇಳತೊಡಗಿದೆ. ಆತ ಚಿಂತಿಸಬೇಡಿ, ನಾನಿದ್ದೇನೆ ಎನ್ನುತ್ತಿದ್ದರು. ರೈಲು ಆಬು ತಲುಪಿತು, ಪ್ರಯಾಣಿಕರು ನಿದ್ರಿಸಲು ವ್ಯವಸ್ಥೆ ಮಾಡಿಕೊಳ್ಳಲು ಆರಂಭಿಸಿದರು. ಮತ್ತೆ ನಾನು ಆತನ ಬಳಿ ಹೋಗಿ, ನನಗೇನಾದರೂ ವ್ಯವಸ್ಥೆ ಮಾಡಿ, ಇಲ್ಲದಿದ್ದರೆ ನಾನು ಇಳಿದು ಹಿಂದಿನ ಬೋಗಿಗೆ ಹೋಗುತ್ತೇನೆ ಎಂದೆ. ಆತ, ನೀವು ಚಿಂತಿಸಬೇಡಿ, ಆಬು ನಿಲ್ದಾಣದಲ್ಲಿ ಬೇರೆ ಟಿಕೆಟ್ ಚೆಕ್ ಮಾಡುವವರು ಬರುತ್ತಾರೆ, ನನ್ನ ಕಾರ್ಯ ಆಬು ನಿಲ್ದಾಣದವರೆಗೆ ಮಾತ್ರ, ನಾನು ಅವರಿಗೆ ತಮ್ಮ ಪರಿಚಯ ಮಾಡಿ ಕೊಡುತ್ತೇನೆ. ಅವರು ತಮಗೆ ಟಿಕೆಟ್ ನೀಡುತ್ತಾರೆ ಎಂದರು. ಅವರು ನನ್ನನ್ನು ಎಲ್ಲಿ ಗುರುತು ಹಿಡಿಯುತ್ತಾರೆ, ನೀವೆ ಟಿಕೆಟ್ ನೀಡಿ ಎಂದು ನಾನು ಆತನನ್ನು ಕೇಳಿದೆ. ಆತ, ನಾನು ಹಣ ಪಡೆಯದೇ ಕಾರ್ಯ ಮಾಡುವುದೇ ಇಲ್ಲ ಇದು ನನ್ನ ನಿಯಮ. ಆದರೆ ಆ ವ್ಯಕ್ತಿಯು ತಮ್ಮ ಪರಿಚಯವನ್ನು ನನಗೆ ಮಾಡಿಸಿದ್ದಾರೆ, ನಾನು ತಮ್ಮಿಂದ ಹಣ ಪಡೆದುಕೊಳ್ಳಲು ಸಾಧ್ಯವಿಲ್ಲ. ನಾನು ಮುಂದೆ ಬರುವ ಟಿಕೆಟ್ ಕಲೆಕ್ಟರ್ ಗೆ ತಮ್ಮ ಪರಿಚಯ ಮಾಡಿಕೊಡುತ್ತೇನೆ. ಅವರು ಹಣ ಪಡೆಯದೆ ತಮಗೆ ಬೇಕಾದ ಟಿಕೆಟ್ ನೀಡುತ್ತಾರೆ ಎಂದರು. ಈ ರೀತಿಯ ನಿಯಮಾನುಸಾರ ಕಾರ್ಯ ನಿರ್ವಹಿಸುವ ವ್ಯಕ್ತಿಯನ್ನು ತಾವೆಲ್ಲಾದರೂ ನೋಡಿದ್ದೀರಾ? ಈ ರೀತಿಯ ಪರಿಸ್ಥಿತಿಯನ್ನು ನಾವೆಲ್ಲರೂ ಅನುಭವಿಸಿಯೇ ಇದ್ದೇವೆ. ನಾವು ಅಧಿಕಾರದಲ್ಲಿದ್ದರೂ ಕೂಡಾ ಯಾವುದಾದರೊಂದು ಸಮಸ್ಯೆ, ತೊಂದರೆಗಳು ಇದ್ದೇ ಇರುತ್ತದೆ. ನಾನು ಇಂದು ಈ ಹುದ್ದೆಯಲ್ಲಿದ್ದೇನೆ, ಇದು ನನ್ನ ಅಧಿಕಾರ, ನನಗೆ ಬರಬೇಕಾದ್ದನ್ನು ನೀಡು, ಮುಂದೆಂದಾದರೂ ನಾನು ನಿನ್ನ ಬಳಿ ಬಂದರೆ ಆಗ ನೀನು ತೆಗೆದುಕೊ ಎಂದು ಹೇಳುವಷ್ಟರ ಮಟ್ಟಿಗೆ ಪರಿಸ್ಥಿತಿ ಇದೆ.
ಈ ಪರಿಸ್ಥಿತಿ ನಮ್ಮ ದೇಶದಲ್ಲಿ ಇದೆ. ಆದರೆ ನಮ್ಮ ದೇಶದ ಸಾಮಾನ್ಯ ನಾಗರೀಕ ಪ್ರಾಮಾಣಿಕನಾಗಿದ್ದಾನೆ. ಅವನಿಗೆ ಅನಿವಾರ್ಯವಾಗಿ ಕೆಲವು ಕೆಲಸಗಳನ್ನು ಮಾಡಬೇಕಾಗಿ ಬಂದಿದೆ. ನಾವು ಈ ಸಾಮಾನ್ಯ ನಾಗರೀಕನನ್ನು ಮನದಲ್ಲಿಟ್ಟುಕೊಂಡು ಸಂಕಲ್ಪ ಮಾಡಿದರೆ, ಅವರು ಎಲ್ಲ ಕಾರ್ಯವನ್ನು ಯಾವುದೇ ತೊಂದರೆ ಇಲ್ಲದೆ ಮಾಡಲು ಸಿದ್ಧರಿರುತ್ತಾರೆ, ಕಷ್ಟ ಬಂದರೆ ಎದುರಿಸಲು ಸಿದ್ಧರಿರುತ್ತಾರೆ. ಆದರೆ ಅವರ ನಂಬಿಕೆ ಬಲಗೊಳ್ಳಬೇಕು. ಯಾವುದೋ ಒಂದು ಒಳ್ಳೆಯ ಕಾರ್ಯಕ್ಕಾಗಿ ಕೆಲಸ ನಡೆಯುತ್ತಿದೆ ಎಂದು ಒಮ್ಮೆ ಅವರಲ್ಲಿ ನಂಬಿಕೆ ಹುಟ್ಟಿದರೆ, ಅವರು ನಮಗೆ ಸಂಪೂರ್ಣ ಸಹಕಾರ ನೀಡುತ್ತಾರೆ. ನಿಯಮಾನುಸಾರ ತಾವು ಏನನ್ನಾದರೂ ಕೊಡಬೇಕೆನಿಸಿದರೆ ಅವರು ಕೊಡಲು ಸಿದ್ಧರಿರುತ್ತಾರೆ, ಅವರಿಗೆ ಯಾವುದೇ ತೊಂದರೆ ಇರುವುದಿಲ್ಲ. ಅವರಿಗೆ ಈ ವಿಶ್ವಾಸವನ್ನು ನಾವು ಹೇಗೆ ಮೂಡಿಸಬಹುದು. ಅತಿ ಹೆಚ್ಚು ಕೆಟ್ಟ ಹೆಸರು ಪಡೆದುಕೊಂಡಿರುವ ಉದ್ಯೋಗ ಎಂದರೆ ನಾನು ಈಗ ಮಾಡುತ್ತಿರುವುದು. ನೀವು ಯಾರನ್ನಾದರೂ ಕೇಳಿ, ದೇಶದಲ್ಲಿ ಅತ್ಯಂತ ಭ್ರಷ್ಟ ವ್ಯಕ್ತಿಗಳು ಇರುವುದು ಎಲ್ಲಿ ಎಂದರೆ, ನಮ್ಮ ಹೆಸರು ಕೇಳಿಬರುತ್ತದೆ, ಅಂದರೆ ರಾಜಕೀಯ ವ್ಯಕ್ತಿಗಳು ಎಂದು. ಈ ಹೆಸರನ್ನಿಟ್ಟುಕೊಂಡು ಯಾರು ಏನು ಬೇಕಾದರೂ ಮಾಡಬಹುದಾಗಿದೆ. ತೋರಿಕೆಗೆ ರಾಜಕಾರಣಿಗಳು, ಅವರ ಹಿಂದೆ ಎಲ್ಲ ಕಾರ್ಯಗಳು ನಡೆಯುತ್ತಿರುತ್ತದೆ. ಈಗ ಸಾಮಾನ್ಯ ಮನುಷ್ಯನಿಗೂ ಈ ಅನುಭವ ಉಂಟಾಗುತ್ತಿದೆ. ಅಯ್ಯೋ ಬಿಡಿ, ಎಲ್ಲರೂ ಕಳ್ಳರು ಎಂಬ ಮನೋಭಾವನೆ ಉಂಟಾಗಿದೆ. ಈ ನಿರಾಶೆಯ ವಾತಾವರಣ ಸಾಮಾನ್ಯ ವ್ಯಕ್ತಿಗಳಿಗೆ ಭಯವನ್ನುಂಟು ಮಾಡುತ್ತದೆ.
ಈಗ ಕೆಲವು ಸಮಯಕ್ಕೆ ಮೊದಲು ನಾನು ಇಲ್ಲಿನ ಕೆಲವರನ್ನು ಕೇಳಿದೆ, ಪಂಚನಾಮ ಎಂಬುದು ಹಿಂದಿಯ ಶಬ್ಧವೇ ಎಂದು. ಅವರು ಹೌದು ಎಂದರು. ಯಾವುದೇ ಘಟನೆ ನಡೆದಾಗ ಅಲ್ಲಿ ಪಂಚನಾಮೆ ಮಾಡುತ್ತಾರೆ, ಇದನ್ನು ತಾವು ಗಮನಿಸಿರಬಹುದು. ತಾವು ಎಂದಾದರೂ ಇದನ್ನು ಗುರುತಿಸಿದ್ದೀರಾ? ಯಾವುದೇ ಅಧಿಕಾರಿಗಳಿದ್ದರೂ, ಶಾಶ್ವತ ಪಂಚರು ಅವರೇ ಆಗಿರುತ್ತಾರೆ. ಅದೇ ಅಧಿಕಾರಿಗಳು ಪಂಚರ ಕಾರ್ಯ ನಿರ್ವಹಿಸುತ್ತಾರೆ. ನಾವು ಅವರನ್ನು ಪರೀಕ್ಷಿಸಿದ್ದೆವೆಯೇ, ಇದು ಹೇಗೆ ಜತೆ ಜತೆಗೆ ಸಾಗಿ ಬರುತ್ತಿದೆ. ಇವರ ವರ್ಗಾವಣೆ ಆದ ಕೂಡಲೇ ಪಂಚರ ವರ್ಗಾವಣೆ ಕೂಡಾ ಆಗಿ ಹೋಯಿತಾ? ಪಂಚನಾಮೆಯ ಸಮಯದಲ್ಲಿ ನಾವು ಕರೆತರುವ ಪಂಚರನ್ನು ಸಮಾಜದ ಉತ್ತಮ ನಾಗರೀಕರೆಂದು ಕರೆತಂದಿರುತ್ತೇವೆ. ಆಧಾರ್ ಸಂಖ್ಯೆಯಿಂದ ಈ ಸಂಖ್ಯೆಯುಳ್ಳವರು ಇಷ್ಟು ಸ್ಥಳಗಳಲ್ಲಿ ಪಂಚನಾಮೆ ನಡೆಸಿದ್ದಾರೆ ಎಂಬುದನ್ನು ಪರಿಶೀಲಿಸಬಹುದಾ? ನಂತರ ನ್ಯಾಯಾಲಯಗಳಲ್ಲಿ ಪಂಚನಾಮೆ ಬದಲಾಗಬೇಕಾದರೆ ಏನೇನು ತೆಗೆದುಕೊಳ್ಳುತ್ತಾರೆ. ಅವರ ದೂರವಾಣಿ ದಾಖಲೆಗಳು ಏನೇನು? ಯಾರ ಯಾರ ಸಂಪರ್ಕದಲ್ಲಿದ್ದರು? ನಾವು ವ್ಯವಸ್ಥೆಯಲ್ಲಿರುವ ಒಂದೊಂದು ವಿಷಯವನ್ನು ಈ ರೀತಿಯಾಗಿ ಹಿಡಿದಿಡಲು ಪ್ರಯತ್ನ ಮಾಡುತ್ತೇವೆ. ಈ ವಿಷಯಗಳ ಬಗ್ಗೆ ಎಲ್ಲರ ಗಮನ ಹೆಚ್ಚಾಗುತ್ತಿದೆ. ಈ ವಿಷಯ ಎಲ್ಲರಿಗೂ ಅರಿವಾಗಿದೆ. ನಾವು ಈ ಎಲ್ಲ ಪರಿಸ್ಥಿತಿಗಳನ್ನು ಬದಲಿಸಬಹುದಾಗಿದೆ. ಈ ವಿಷಯದಲ್ಲಿ ತಂತ್ರಜ್ಞಾನ ಬಹಳಷ್ಟು ಸಹಾಯ ಮಾಡುತ್ತದೆ.
ಇತ್ತೀಚಿನ ದಿನಗಳಲ್ಲಿ ತಾವು ನೋಡಿರಬಹುದು. ನಾನು ಒಂದು ದಿನ ಈ ಬಗ್ಗೆ ಅಂಕಿ ಅಂಶಗಳನ್ನು ಪರಿಶೀಲಿಸುತ್ತಿದ್ದೆ. ಈಗ ಅಂಕಿಅಂಶಗಳು ಬಹಳಷ್ಟು ಹೆಚ್ಚಾಗಿರಬಹುದು. ಕೇವಲ ಆಧಾರ್ ಸಂಖ್ಯೆಯಿಂದ ನೇರ ಲಾಭ ವರ್ಗಾವಣೆಗೆ ಬಲ ದೊರಕಿದೆ. ಕೆಲವೊಂದನ್ನು ಈಗ ವಿಡಿಯೋದಲ್ಲಿ ತೋರಿಸುತ್ತಿದ್ದರು. ನನ್ನ ಅಂದಾಜಿನ ಪ್ರಕಾರ ಎಲ್ಲಿಯೋ ಬೇರೆಡೆ ಹೋಗುತ್ತಿದ್ದ 36 ಸಾವಿರ ಕೋಟಿ ರೂಪಾಯಿ ಉಳಿತಾಯವಾಗಿದೆ. ಇದರರ್ಥ ನಾವು 36ಸಾವಿರ ಕೋಟಿ ರೂಪಾಯಿಗಳನ್ನು ಸರ್ಕಾರಿ ಖಜಾನೆಯಲ್ಲಿ ಇಟ್ಟಿದ್ದೇವೆ ಎಂದಲ್ಲ. ಈ ಹಣವನ್ನು ನಾವು ಸರಿಯಾದ ಕಾರ್ಯಕ್ಕೆ ವಿನಿಯೋಗಿಸಿದ್ದೇವೆ. ಹೀಗಾಗದೆ ಇದ್ದಿದ್ದರೆ ಈ ಹಣ ಬೇರೆ ಯಾರದೋ ಜೇಬು ಸೇರುತ್ತಿತ್ತು. ಅಂದರೆ ನಾವು ತಂತ್ರಜ್ಞಾನದ ಸರಿಯಾದ ಉಪಯೋಗವನ್ನು ಮಾಡಿಕೊಳ್ಳಬೇಕಾಗಿದೆ. ಪಾರದರ್ಶಕತೆ ತರುವಲ್ಲಿ, taತಪಾಸಣೆ ಮತ್ತು ಸಮತೋಲನ ಕಾಪಾಡುವಲ್ಲಿ ಇದು ಬಹಳ ಮುಖ್ಯ ಭೂಮಿಕೆಯನ್ನು ನಿಭಾಯಿಸುತ್ತದೆ. ಕೆಲವೊಮ್ಮೆ ನಮ್ಮಲ್ಲಿ ಸಿಲೋ ಮಾದರಿಯ ಕಾರ್ಯಚಟುವಟಿಕೆಗಳು ಕಂಡುಬರುತ್ತವೆ. ಇದಕ್ಕೆ ಕಾರಣ ಒಂದು ಕಾನೂನಿನ ಅಥವಾ ಒಂದು ವ್ಯವಸ್ಥೆಯ ಲಾಭ ಮತ್ತೊಂದು ಕಾನೂನು ಅಥವಾ ಮತ್ತೊಂದು ವ್ಯವಸ್ಥೆಗೆ ದೊರಕದಿರುವುದು. ಈ ಕಾರಣದಿಂದಾಗಿಯೂ ಕೂಡಾ ಕೆಲವು ಜನರು ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಕೆಲವು ಬುದ್ದಿವಂತ ಜನರು ಹಲವು ರೀತಿಯ ಸ್ಕಾಲರ್ ಶಿಪ್ ಗಳನ್ನು ಪಡೆದುಕೊಳ್ಳುತ್ತಿದ್ದಾರೆ ಎಂದರೆ ತಮಗೆ ಆಶ್ಚರ್ಯವಾಗಬಹುದು. ಈ ಸ್ಕಾಲರ್ ಶಿಪ್ ಅನ್ನು ಯಾರೋ ಒಬ್ಬರಿಗೆ ನೀಡುತ್ತಿರಬಹುದೆಂದು ತಾವು ತಿಳಿದುಕೊಂಡಿರುತ್ತೀರಿ. ವಾಸ್ತವಿಕವಾಗಿ ಒಬ್ಬನೇ ವ್ಯಕ್ತಿಗೆ ಎಂಟು ಕಡೆಗಳಿಂದ ಸ್ಕಾಲರ್ಶಿಪ್ ದೊರಕುತ್ತದೆ. ಆಧಾರ ಸಂಖ್ಯೆಯಿಂದ ಪರಿಶೀಲಿಸಿದಾಗ ಭ್ರಷ್ಟ ವ್ಯಕ್ತಿಗಳೂ ಕೂಡಾ ಇದರ ಲಾಭ ಪಡೆಯುತ್ತಿರುವ ಅಂಶ ಗಮನಕ್ಕೆ ಬಂತು. ಉನ್ನತ ವ್ಯಕ್ತಿಗಳೂ ಕೂಡಾ ಇದರ ಲಾಭ ಪಡೆಯುತ್ತಿದ್ದಾರೆ. ಯಾರಿಗೆ ನಿಜವಾಗಿ ದೊರಕಬೇಕಾಗಿತ್ತೋ ಅವರು ಇದರಿಂದ ವಂಚಿತರಾಗುತ್ತಿದ್ದಾರೆ. ನಾವು ತಂತ್ರಜ್ಞಾನದ ಸಹಾಯದಿಂದ ಈ ವ್ಯವಸ್ಥೆಯನ್ನು ಎಷ್ಟು ಹೆಚ್ಚು ರೀತಿಯಲ್ಲಿ ಸರಿ ಮಾಡುತ್ತೇವೆಯೋ, ನಿಶ್ಚಿತವಾಗಿಯೂ ಸಾಮಾನ್ಯ ವ್ಯಕ್ತಿಗೆ ತಲುಪಬಹುದಾದ ಹಕ್ಕನ್ನು ಆತನಿಗೆ ತಲುಪಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ.
ನಾನು ಚಂಡೀಗಢದಲ್ಲಿ ಒಮ್ಮೆ ಗಮನಿಸಿದೆ, ಅಲ್ಲಿ, ಉನ್ನತ ವರ್ಗದ ವ್ಯಕ್ತಿಗಳು ವಾಸಿಸುತ್ತಾರೆ. ಅವರ ಬಳಿ ಅನಿಲ ಸಂಪರ್ಕವಿದೆ, ಅವರ ಬಳಿ ವಿದ್ಯುತ್ ಸೌಲಭ್ಯವಿದೆ. ಆದರೂ ಚಂಡೀಗಢಕ್ಕೆ 30 ಲಕ್ಷ ಲೀಟರ್ ಸೀಮೇಎಣ್ಣೆಯ ಕೋಟಾ ಇದೆ. ಅದು ಎಲ್ಲಿಗೆ ಹೋಗುತ್ತದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸುವಂತೆ ತಿಳಿಸಿದಾಗ, ಅವರು ಆಧಾರ್, ಅನಿಲ ಸಂಪರ್ಕ, ವಿದ್ಯುತ್ ಬಿಲ್ ಇವುಗಳನ್ನು ತಂತ್ರಜ್ಞಾನದ ಸಹಾಯದಿಂದ ತಾಳೆ ಹಾಕಿ ನೋಡಿದಾಗ ತಿಳಿದುಬಂದ ವಿಷಯವೇನೆಂದರೆ, ಕೇವಲ ಐದು ಸಾವಿರ ಕುಟುಂಬಗಳಿಗೆ ಅನಿಲ ಸಂಪರ್ಕ ಒದಗಿಸಿದರೆ, ಚಂಡೀಗಢಕ್ಕೆ ನೂರು ಗ್ರಾಂಗಳಷ್ಟೂ ಸೀಮೇಎಣ್ಣೆಯ ಅವಶ್ಯಕತೆ ಬರುವುದಿಲ್ಲ. ಸರಕಾರ ಈ ಬಗ್ಗೆ ಒಂದು ಅಭಿಯಾನಕ್ಕೆ ಚಾಲನೆ ನೀಡಿತು. ಆ ಐದು ಸಾವಿರ ಕುಟುಂಬಗಳಿಗೆ ಅನಿಲ ಸಂಪರ್ಕ ನೀಡಲಾಯಿತು. ಈಗ ಚಂಡೀಗಢಕ್ಕೆ ಸರಬರಾಜಾಗುತ್ತಿದ್ದ 30 ಲಕ್ಷ ಲೀಟರ್ ಸೀಮೇಎಣ್ಣೆಯನ್ನು ನಿಲ್ಲಿಸಲಾಗಿದೆ. ಒಂದು ಕಾಲದಲ್ಲಿ ಡೀಜಲ್ ಕಳ್ಳಸಂತೆಯಲ್ಲಿ ಮಾರಾಟವಾಗುತ್ತಿತ್ತು. ಕಳ್ಳರನ್ನು ಹಿಡಿಯಲು ನಾವು ಎಷ್ಟೇ ಸಮಿತಿಗಳನ್ನು ಮಾಡಿದರೂ ಅವರು ಯಾವಾಗ ಸಫಲರಾಗುತ್ತಾರೋ ಹೇಳಲಾಗುತ್ತಿರಲಿಲ್ಲ. ಆದರೆ ನಾವು ಒಂದು ಪರಿಹಾರದತ್ತ ಮುನ್ನಡೆದರೆ, ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯ.
ಉದ್ಯೋಗವನ್ನು ಪಡೆದುಕೊಳ್ಳಲು ಜನರು ಏನೆಲ್ಲ ಮಾಡುತ್ತಾರೆಂದು ತಮಗೆಲ್ಲರಿಗೂ ತಿಳಿದಿದೆ. ತಂದೆ ತಾಯಿ ಕೂಡಾ ಏನಾದರಾಗಲಿ maಮಗನಿಗೆ ಒಂದು ಸರ್ಕಾರಿ ನೌಕರಿ ಸಿಗಲಿ ಎಂದು ಬಯಸುತ್ತಾರೆ. ಚಾಲಕನಾಗಿಯೋ, ಜವಾನನಾಗಿಯೋ, ಏನೋ ಒಂದು, ಒಂದು ಬಾರಿ ಒಳಹೊಕ್ಕ ನಂತರ ಉಳಿದುದನ್ನು ಅವನು ಮಾಡಿಕೊಳ್ಳುತ್ತಾನೆ ಎಂಬ ವಿಶ್ವಾಸ ತಂದೆ ತಾಯಿಗಳದ್ದು. ಬಹಳಷ್ಟು ಮಂದಿ ತಮ್ಮ ಹೆಣ್ಣುಮಕ್ಕಳ ಮದುವೆ ಸಮಯದಲ್ಲಿ ಪಿಡಬ್ಲ್ಯುಡಿ ವಿಭಾಗದ ಕ್ಲರ್ಕ್ ಸಿಗುತ್ತಾನಾ ನೋಡಿ ಎಂದು ತಮ್ಮ ಸಂಬಂಧಿಕರಲ್ಲಿ ಕೇಳಿಕೊಳ್ಳುತ್ತಾರೆ. ಈ ಮನೋಭಾವ ಸಮಾಜದಲ್ಲಿ ಬೆಳೆದು ಬಂದಿದೆ. ನಾವು ಅಧಿಕಾರಕ್ಕೆ ಬಂದ ನಂತರ ಭಾರತ ಸರ್ಕಾರದ ಮೂರು ಮತ್ತು ನಾಲ್ಕನೇ ದರ್ಜೆಯ ಹುದ್ದೆಗಳಿಗೆ ಸಂದರ್ಶನವನ್ನು ರದ್ದು ಮಾಡಿದೆವು. ಈ ಸಂದರ್ಶನ ಯಾವ ಕಾರಣಕ್ಕಾಗಿ ಎಂಬುದನ್ನು ನೀವು ನನಗೆ ತಿಳಿಸಿ? ಕೇವಲ ಮೂವತ್ತು ಸೆಕೆಂಡ್ ಗಳಲ್ಲಿ ನಾವು ಯಾವುದೇ ವ್ಯಕ್ತಿಯನ್ನು ಒಳ್ಳೆಯವನು ಅಥವಾ ಕೆಟ್ಟವನ್ನು ಎಂದು ಗುರುತಿಸುವಷ್ಟು ನಾವು ಪರಿಣಿತರಾಗಿದ್ದೆವೆಯಾ? ಮೂರು ಮತ್ತು ನಾಲ್ಕನೇ ದರ್ಜೆಯ ಹುದ್ದೆಗಾಗಿ ಒಬ್ಬ ಅಭ್ಯರ್ಥಿಗೆ ಮೂವತ್ತು ಸೆಕೆಂಡುಗಳಿಗಿಂತ ಹೆಚ್ಚಿನ ಸಮಯ ಸಂದರ್ಶನಕ್ಕೆ ಸಿಗುತ್ತದೆಂದು ನನಗೆ ಅನಿಸುವುದಿಲ್ಲ. ಇದರ ಅರ್ಥ ಯಾರು ಶಿಫಾರಸ್ಸು ಮಾಡಿಸುತ್ತಾರೆಯೋ ಅವರಿಗೆ ಉದ್ಯೋಗ. ಶಿಫಾರಸು ಎಲ್ಲಿಂದ ಆಗುತ್ತದೆ. ಶಿಫಾರಸು ಜೇಬಿನ ಮೂಲಕ ಆಗುತ್ತದೆ. ಈ ಹುದ್ದೆಗಳಿಗೂ ಅರ್ಹತೆ ಇಲ್ಲದ ಶೇಕಡಾ ಐದು – ಹತ್ತು ಜನರು ಬರಬಹುದು, ಇರಲಿ. ಆದರೆ ಕನಿಷ್ಟ ಪಕ್ಷ ಕೆಲವು ಅನಿಷ್ಟಗಳಿಂದಾದರೂ ನಾವು ಸಮಾಜವನ್ನು ರಕ್ಷಿಸಬಹುದು ಎಂದು ಆಲೋಚಿಸಿದೆವು. ಇಂದು ಭಾರತ ಸರ್ಕಾರ ಮೂರು ಮತ್ತು ನಾಲ್ಕನೇ ದರ್ಜೆಯ ಹುದ್ದೆಗಳಿಗೆ ಸಂದರ್ಶನವನ್ನು ರದ್ದು ಮಾಡಿದೆ. ಮೆರಿಟ್ ಆಧಾರದ ಮೇಲೆ ಉದ್ಯೋಗ ನೀಡಿ. ಬಡ ವಿಧವೆಯ ಮಗನಿಗೆ ಉದ್ಯೋಗ ದೊರೆತ ಬಗ್ಗೆ ಮನೆಗೆ ಆದೇಶದ ಪ್ರತಿ ತಲುಪಿದಾಗ ಅವಳ ಸಂತಸಕ್ಕೆ ಪಾರವೇ ಇಲ್ಲದಂತಾಗುತ್ತದೆ ಅಲ್ಲವೇ.. ಇದು ಸಾಧ್ಯ, ಇದು ಸಾಧ್ಯ.
ಸರ್ಕಾರದಲ್ಲಿ ಗೌಪ್ಯತೆ ಹೆಸರಿನ ಯಾವುದಾದರೂ ವಸ್ತುವಿದ್ದರೆ ಅದೂ ಕೂಡಾ ಕೆಲವೊಮ್ಮೆ ದೊಡ್ಡ ಅಪಾಯವನ್ನು ತಂದೊಡ್ಡುತ್ತದೆ. ನಾವು ಯಾವುದಾದರೂ ಕಾನೂನನ್ನು ತರಬೇಕೆಂದಿರುತ್ತೇವೆ. ಯಾವ ರೀತಿಯ ರಹಸ್ಯವನ್ನು ಕಾಪಾಡಿಕೊಳ್ಳುತ್ತೇವೆಂದರೆ ಒಂದು ವಿಭಾಗದಿಂದ ಮತ್ತೊಂದು ವಿಭಾಗಕ್ಕೂ ಕೂಡಾ ಇದರ ಬಗ್ಗೆ ತಿಳಿಯದಂತೆ ದಾಖಲೆಗಳನ್ನು ಗುಪ್ತವಾಗಿರುವಂತೆ ನೋಡಿಕೊಳ್ಳುತ್ತೇವೆ. ಯಾರಾದರೂ ಬಂದರೆ ಮುಚ್ಚಿಟ್ಟುಕೊಳ್ಳುತ್ತೇವೆ. ನಾನು ಯಾಕೆ ಈ ರೀತಿ ಎಂದು ಪ್ರಶ್ನಿಸಿದೆ. ಎಂತಹುದ್ದೇ ಕರಡುಗಳಿದ್ದರೂ ಅದನ್ನು ಸಾರ್ವಜನಿಕಗೊಳಿಸಿ. ಸಾರ್ವಜನಿಕವಾಗಿ ಈ ಬಗ್ಗೆ ಚರ್ಚೆಗಳಾಗಲಿ. ಆಸಕ್ತಿಯುಳ್ಳ ಜನ ಚರ್ಚೆ ಮಾಡುತ್ತಾರೆ. ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎಂಬುದನ್ನು ತಿಳಿಸುತ್ತಾರೆ. ಈ ರೀತಿಯಾದರೆ, ಕನಿಷ್ಟ ಪಕ್ಷ ಕರಡಾದರೂ ಸರಿಯಾಗಿ ಸಿದ್ಧವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಭಾರತ ಸರ್ಕಾರ ಈ ರೀತಿಯ ಯಾವುದೇ ಕಾನೂನು ತರುವ ಬಗ್ಗೆ ಚಿಂತಿಸಿದರೆ, ಅದರ ಕರಡು ಪ್ರತಿಯನ್ನು ಸಾರ್ವಜನಿಕ ಮಾಡುತ್ತಿರುವುದನ್ನು ತಾವು ಗಮನಿಸಿರಬಹುದು. ಇದರ ಪರಿಣಾಮವಾಗಿ ವಿಷಯಕ್ಕೆ ಸಂಬಂಧಿಸಿದ ಆಸಕ್ತಿಯುಳ್ಳ ಜನರು ತಮ್ಮ ಅಭಿಪ್ರಾಯಗಳನ್ನು ಒದಗಿಸುತ್ತಾರೆ. ಇದರಿಂದ ಎರಡು ಲಾಭಗಳಿವೆ. ಯಾವುದಾದರೂ ಪಟ್ಟಭದ್ರ ಹಿತಾಸಕ್ತಿಯಿಂದ ಕಾನೂನು ರಚನೆಯಾಗುತ್ತಿದ್ದರೆ ಅದು ನಿಲ್ಲುತ್ತದೆ. ಮತ್ತೊಂದು ಪ್ರಾಮಾಣಿಕವಾಗಿ ಕರಡು ಸಿದ್ಧಪಡಿಸಿದ್ದರೂ ಮೂರು ನಾಲ್ಕು ಅಂಶಗಳು ಕೈಬಿಟ್ಟು ಹೋಗಿರುತ್ತವೆ. ಸಾರ್ವಜನಿಕರ ಅಭಿಪ್ರಾಯ ಸಂಗ್ರಹಣೆಯಿಂದ ಬಿಟ್ಟು ಹೋದ ಅಂಶಗಳನ್ನು ಸೇರಿಸಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಅವಶ್ಯಕವಾದ ಒಂದು ಸೂಕ್ತ ಕಾನೂನು ರಚನೆಯ ನಿಟ್ಟಿನಲ್ಲಿ ನಾವು ಹೆಜ್ಜೆಯನ್ನು ಇಡಬಹುದಾಗಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯ ನಿರ್ವಹಿಸಿದರೆ ನಮಗೆ ಧನಾತ್ಮಕ ಲಾಭ ದೊರಕುತ್ತದೆ. ಈ ವಿಷಯದ ಮೂಲದಲ್ಲಿ ಒಂದು ಸಮಸ್ಯಾತ್ಮಕ ಅಂಶವಿರುವುದನ್ನು ನಾನು ಗಮನಿಸಿದ್ದೇನೆ. ಅದು ತಾರತಮ್ಯ. ನಾವು ನಿಯಮ ಮಾಡುವಲ್ಲಿ ಒಂದು ಅಸ್ಪಷ್ಟತೆ ಇರುತ್ತದೆ. ಇದರ ಅರ್ಥ ಹೇಗೆ ಬೇಕಾದರೂ ಆಗಬಹುದು. ಇದು ಭ್ರಷ್ಟಾಚಾರದ ದ್ವಾರವನ್ನು ತೆರೆಯುತ್ತದೆ. ಆದುದರಿಂದ ರಾಜ್ಯಗಳು ನೀತಿ ಚಾಲಿತವಾಗಿರಬೇಕು. ವೈಯಕ್ತಿಕ ಆಧಾರದ ಮೇಲೆ ರಾಜ್ಯಗಳು ನಡೆಯುವಂತಿರಬಾರದು. ರಾಜ್ಯ, ನೀತಿ ಚಾಲಿತವಾಗಿದ್ದರೆ, “ಒಂದು ವೇಳೆ” ಮತ್ತು “ಆದರೆ” ಎಂಬ ಶಬ್ಧಗಳಿಗೆ ಬಹಳ ಗೌರವ ದೊರಕುತ್ತದೆ. ಎಲ್ಲಿ “ಒಂದು ವೇಳೆ” ಮತ್ತು “ಆದರೆ” ಶಬ್ಧಗಳು ಇರುವುದಿಲ್ಲವೋ, ಅಲ್ಲಿ ತಾರತಮ್ಯಕ್ಕೆ ಯಾವುದೇ ರೀತಿಯ ಅವಕಾಶಗಳು ಇರುವುದಿಲ್ಲ. ಮನೆಯಲ್ಲಿ ಕುಳಿತ ವ್ಯಕ್ತಿಯೂ ಕೂಡಾ ಇದು ನನ್ನ ಹಕ್ಕು, ಆದರೆ ಈ ಕೆಲಸ ನನಗೆ ದಕ್ಕುವುದಿಲ್ಲ, ನಾನು ಹೋಗುವ ಯಾವುದೇ ಅವಶ್ಯಕತೆ ಇಲ್ಲ ಎಂದು ಭಾವಿಸುತ್ತಾನೆ. ಯಾರಿಗೆ ಪ್ರಾಶಸ್ತ್ಯವಿದೆಯೋ ಅವನಿಗೆ ಸಿಗುತ್ತದೆ ಎಂದು ಭಾವಿಸುತ್ತಾನೆ. ನೀತಿ ಚಾಲಿತ ರಾಜ್ಯಗಳು ಈ ಬಗ್ಗೆ ಎಷ್ಟು ಒತ್ತು ನೀಡುವುದರಿಂದ ಇದು ಯಾವುದೇ ವ್ಯಕ್ತಿಯ ವಶಕ್ಕೆ ಹೋಗುವುದನ್ನು ತಪ್ಪಿಸಬಹುದು.. ಸ್ವಯಂ ಕಾನೂನುಗಳು, ನಿಯಮಗಳು ವ್ಯವಸ್ಥೆಗಳು ಈ ಬಗ್ಗೆ ಹೇಳಬಹುದು, ಯಾರಿಗೆ ಹಕ್ಕು ಇದೆಯೋ ಅವನ ಹಕ್ಕು ಅವನಿಗೆ ಲಭಿಸುತ್ತದೆ. ಆದುದರಿಂದ ನಮ್ಮ ಎಲ್ಲ ವಿಷಯಗಳೂ ನೀತಿ ಆಧಾರಿತವಾಗಿರಬೇಕು, ನೇರಾ ನೇರವಾಗಿರಬೇಕು, ಯಾವುದೇ ಕಾರಣದಿಂದ ಯಾರನ್ನು ಸ್ಥಾನಪಲ್ಲಟ ಮಾಡಲು ಅವಕಾಶ ಸಿಗದಂತಿರಬೇಕು ಎಂಬುದು ನಮ್ಮ ಪ್ರಯತ್ನವಾಗಿದೆ. ನಾವು ಈ ವಿಷಯಗಳ ಬಗ್ಗೆ ಹೆಚ್ಚಿನ ಒತ್ತು ನೀಡಿದ್ದೇ ಆದರೆ, ಕಾನೂನು ರಚನೆಯ ಸಮಯದಲ್ಲಿ ಹೆಚ್ಚು ಹೆಚ್ಚು ಜನರ ಬುದ್ಧಿವಂತಿಕೆಯನ್ನು ಉಪಯೋಗಿಸಿಕೊಂಡಿದ್ದೇ ಆದಲ್ಲಿ ಉತ್ತಮ ಕಾನೂನು ರಚನೆಯಾಗಬಹುದು. ಗೌಪ್ಯತೆ ಎಂಬುದು ಯಾವ ಕೆಲಸಕ್ಕೂ ಬರುವುದಿಲ್ಲ. ಕಾನೂನು ರಚನೆಯ ವಿಷಯ 30-40 ದಿನಗಳಿಗೂ ಮೊದಲೆ ತಿಳಿಯಿತೆಂದು ಭಾವಿಸೋಣ, ಇದಕ್ಕಿಂತ ಹೆಚ್ಚು…. ಹಾಂ…ಬಜೆಟ್ ನಂತಹ ವಿಷಯವಿದ್ದರೆ, ಈ ಗೌಪ್ಯತೆಯನ್ನುನಿರ್ವಹಿಸಬೇಕಾಗುತ್ತದೆ. ಇಲ್ಲದಿದ್ದರೆ, ಯಾರಾದರೂ ಮಾರುಕಟ್ಟೆಗೆ ತೆರಳಿ ತಮ್ಮ ಜಗತ್ತನ್ನು ಸ್ಥಾಪಿಸಿಬಿಡುತ್ತಾರೆ. ಆದರೆ ಯಾವುದೇ ವಿಷಯಗಳು ವರ್ಷಗಳಿಂದ ಚರ್ಚೆಯಲ್ಲಿದ್ದರೆ, ಅಥವಾ ಯಾವುದಾದರೂ ರೂಪದಲ್ಲಿ ಕಾನೂನಿನಲ್ಲಿ ಅಡಕವಾಗಿದ್ದರೆ, ಅದರಲ್ಲಿ ಸುಧಾರಣೆ ತರುವ ಅವಶ್ಯಕತೆ ಇದೆ ಎಂದು ಅನ್ನಿಸಿದರೆ ಇಂತಹ ವಿಷಯಗಳಲ್ಲಿ ಸಮಾಜದ ಸಾಮಾನ್ಯ ನಾಗರಿಕನ ಒಳಗೊಳ್ಳುವಿಕೆಯಿಂದ ವಿಷಯಕ್ಕೆ ತೀಕ್ಷ್ಣತೆ ಬರುತ್ತದೆ, ಪಾರದರ್ಶಕತೆ ಬರುತ್ತದೆ ಹಾಗೂ ಮುಖ್ಯವಾಗಿ ಅದು ಉಪಯೋಗಿಯೆಂಬುದು ಸಾಬೀತಾಗುತ್ತದೆ. ಆದುದರಿಂದ ಈ ನಿಟ್ಟಿನಲ್ಲಿ ಕೂಡಾ ನಾವು ಪ್ರಯತ್ನ ಮಾಡಬೇಕಿದೆ.
ತಂತ್ರಜ್ಞಾನdadaದ ಹೆಚ್ಚಿನ ಉಪಯೋಗ ಮಾಡಿಕೊಳ್ಳುವುದೆಂದರೆ ಕೇವಲ ಆಧಾರ್ ಕಾರ್ಡ್ ನಿಂದ ಅಲ್ಲ. ಒಂದು ಚೆಕ್ ಪೋಸ್ಟ್ ಇದೆಯೆಂದು ಭಾವಿಸಿ, ಈಗ ಜಿಎಸ್ ಟಿ ಯ ಬಗ್ಗೆ ವಿಚಾರ ನಡೆಯುತ್ತಿದೆ, ಆಗ ಈ ಎಲ್ಲ ತೊಂದರೆಗಳಿಂದ ಮುಕ್ತರಾಗಬಹುದು, ಯಾವ ಚೆಕ್ ಪೋಸ್ಟ್ ಗಳಲ್ಲಿ ಸಿ ಸಿ ಟಿವಿ ಕ್ಯಾಮೆರಾ ನೆಟ್ ವರ್ಕ್ ಗಳಿವೆಯೋ, ಯಾವಾಗಲಾದರೂ ಕಾರ್ಯ ನಿರ್ವಹಿಸಿದರೆ.. ಸಿ ಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ, ಅದನ್ನು ಅಳವಡಿಸುವಾಗ ಆಸಕ್ತಿ ಇರುತ್ತದೆ, ಯಾಕೆಂದರೆ ಅದಕ್ಕೆ ಬಿಲ್ ಮಾಡಬಹುದು. ಆ ನಂತರ ಬೇಕು ಎಂದರೂ ಅದರ ಬಗ್ಗೆ ಆಸಕ್ತಿ ಇರುವುದಿಲ್ಲ. ಮೊದಲಿಗೆ ಕೆಲಸವಾದರೆ ಸಾಕೆಂಬ ಮನೋಭಾವದಿಂದ ಅತ್ಯಂತ ಮುತುವರ್ಜಿಯಿಂದ ಕಾರ್ಯ ಮಾಡುತ್ತಾರೆ. ನಂತರ ಅದು ಕಾರ್ಯ ನಿರ್ವಹಿಸಬಾರದು, ಯಾಕೆಂದರೆ ತಮ್ಮ ಕೆಲಸ ಮುಂದುವರಿಯಬೇಕು. ಇದರ ಪರಿಣಾಮ ಏನಾಗಬಹುದು? ಯಾವ ಚೆಕ್ ಪೋಸ್ಟ್ ಗಳಲ್ಲಿ ಒಳ್ಳೆಯ ಆದಾಯವಿದೆಯೋ ಆ ಚೆಕ್ ಪೋಸ್ಟ್ ಗಳಲ್ಲಿ, ಸಿಸಿ ಕ್ಯಾಮರಾಗಳಿವೆ, ಎಲ್ಲವೂ ಇದೆ, ಆದರೆ ಅವು ಯಾವುದೂ ಕಾರ್ಯ ನಿರ್ವಹಿಸುತ್ತಿರುವುದಿಲ್ಲ. ತಾವುಗಳು ಗಮನಿಸಿರಬಹುದು, ಅವರ ಮತ್ತು ಅವುಗಳ ಆದಾಯದಲ್ಲಿ ಬಹಳ ಅಂತಹ ಕಂಡುಬರುತ್ತದೆ. ಒಂದು ರಸ್ತೆ ಇದೆ, ರಸ್ತೆಯ ಎರಡೂ ತುದಿಗಳಲ್ಲಿ ಎರಡು ಚೆಕ್ ಪೋಸ್ಟ್ ಗಳಿವೆ, ಯಾವ ವಾಹನ ರಸ್ತೆಯ ಈ ತುದಿಯಿಂದ ಪ್ರಯಾಣ ಬೆಳೆಸುವುದೋ ಮತ್ತೊಂದು ತುದಿಯನ್ನು ತಲುಪುತ್ತದೆ. ಆದರೆ ಆ ತುದಿಯ ಚೆಕ್ ಪೋಸ್ಟ್ ಆದಾಯ ನೂರು ರೂಪಾಯಿಗಳು, ಈ ಬದಿಯ ಚೆಕ್ ಪೋಸ್ಟ್ ಆದಾಯ ಐನೂರು ರೂಪಾಯಿಗಳು. ಈ ಅಂತರ ಕಂಡುಬರುತ್ತದೆ, ಇದನ್ನು ಹೇಗೆ ಸರಿಪಡಿಸಬಹುದು. ನೀತಿ ಚಾಲಿತ ವ್ಯವಸ್ಥೆಯಿಂದ ಹೆಚ್ಚು ಹೆಚ್ಚು ತಂತ್ರಜ್ಞಾನದ ಉಪಯೋಗ ಮಾಡುವುದರಿಂದ ಅದು ಸಾಧ್ಯ. ನಾವು ಕಾರ್ಯದಲ್ಲಿ ಸ್ವಚ್ಚತೆಯನ್ನು ತರಬಹುದು.
ಕಾನೂನಿನ ಭಯ ಹೆಚ್ಚಿನ ಜನರಿಗೆ ಇಲ್ಲವೆನ್ನುವುದು ಸತ್ಯ. ಅಕಸ್ಮಾತ್ ಸಸ್ಪೆಂಡ್ ಆದರೂ ಅರ್ಧ ವೇತನವಂತೂ ಬಂದೇ ಬರುತ್ತದೆಯಲ್ಲ, ಶೇಕಡಾ 50ರಷ್ಟು ಎಂಬುದು ಸರ್ಕಾರಿ ನೌಕರರಿಗೆಲ್ಲರಿಗೂ ತಿಳಿದಿದೆ. ನಂತರ, ಮೊದಲು ಇಲಾಖಾ ವಿಚಾರಣೆ, ಇದನ್ನು ನಿಭಾಯಿಸಿದರೆ ಮುಂದಿನದ್ದು ಸುಲಭ. ಇಲಾಖಾ ವಿಚಾರಣೆ ಮುಗಿದ ನಂತರ ಪುನ: ಕೆಲಸಕ್ಕೆ ಹಿಂದಿರುಗಬಹುದು. ಬಾಕಿ ಉಳಿದಿದ್ದ ವೇತನವೆಲ್ಲ ಮರಳಿ ದೊರಕುವುದು. ಈ ಎಲ್ಲ ವ್ಯವಸ್ಥೆಗಳು ಒಂದಕ್ಕೊಂದು ಬೆಸೆದುಕೊಂಡಿವೆ. ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವವರಿಗೆ, ಪ್ರಾಮಾಣಿಕತೆಯಿಂದ ಏನನ್ನಾದರೂ ಮಾಡಿ ಸಾಧಿಸಬೇಕೆಂದುಕೊಂಡ ಜನರಿಗೆ ಇದರಿಂದ ಹೆಚ್ಚು ತೊಂದರೆಯಾಗುತ್ತದೆ. ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸುವವರು ಎಲ್ಲರ ಕಣ್ಣು ಚುಚ್ಚುತ್ತಿರುತ್ತಾರೆ. ಅರೆ, ಈತ ನಮ್ಮ ಇಲಾಖೆಗೆ ಏಕೆ ಬಂದ, ಆತನಿಗೆ ಮಾಡುವುದೇನು ಇಲ್ಲ ಮತ್ತು ನಮ್ಮನ್ನೂ ಕೂಡಾ ಬದುಕಲು ಬಿಡುವುದಿಲ್ಲ. ಎಂತಹ ಕಷ್ಟ ಬಂತು. ಇಂತಹ ಕಷ್ಟವನ್ನು ಅನುಭವಿಸುವವರಲ್ಲಿ ಹೆಚ್ಚಿನವರು ಸರ್ಕಾರಿ ನೌಕರರು. ಅವರು ಅಪ್ರಾಮಾಣಿಕರೆಂಬ ಕಾರಣಕ್ಕೆ ಅವರಿಗೆ ತೊಂದರೆಯಲ್ಲ, ಬಂದಿರುವಾತ ಪ್ರಾಮಾಣಿಕನೆಂಬುದು ಅವರಿಗೆ ತೊಂದರೆ. ಪ್ರಾಮಾಣಿಕರಿಗೆ ರಕ್ಷಣೆ ನೀಡಿದರೆ, ಪ್ರಾಮಾಣಿಕರಿಗೆ ಸೂಕ್ತ ಅಧಿಕಾರವನ್ನು ನೀಡಿದರೆ ಸರ್ಕಾರದ ಕೆಲಸ ನಡೆಯುತ್ತದೆ. ಇದಕ್ಕಾಗಿ ಪಾರದರ್ಶಕತೆಯಿಂದ ಹೆಚ್ಚಿನ ಬಲ ನೀಡುವುದು ಅಗತ್ಯ. ಸಾಮಾನ್ಯ ನಾಗರಿಕ ಅಪ್ರಾಮಾಣಿಕನಲ್ಲ ಎಂಬುದನ್ನು ತಾವು ಗಮನಿಸಬೇಕು. ಸಾಮಾನ್ಯ ಸರ್ಕಾರಿ ನೌಕರ ಅಪ್ರಾಮಾಣಿಕನಲ್ಲ. ಪ್ರಾಮಾಣಿಕತೆಯಿಂದ ಜೀವನ ಸಾಗಿಸುತ್ತಿರುವ ಒಂದು ದೊಡ್ಡ ವರ್ಗವಿದೆ. ಕೆಲವೇ ಕೆಲವು ಜನರಿಂದ ಸಂಪೂರ್ಣ ವ್ಯವಸ್ಥೆ ಹೀಗಾಗಿದೆ. ತನ್ನ ಯಾವುದೇ ಕಾರ್ಯ ನಡೆಯದಿದ್ದಾಗ ಸಾಮಾನ್ಯ ನಾಗರಿಕ, ಪ್ರಾಯಶ: ಇಲ್ಲಿ ನಾನು ಯಾರಿಗೂ ಹಣ ನೀಡಿಲ್ಲ. ಇದು ತನಗೆ ಅನ್ವಯಿಸುವಿಲ್ಲವೆಂದು ಕಾಣುತ್ತದೆ, ಆದ್ದರಿಂದ ತನ್ನ ಕಾರ್ಯ ಆಗಲಿಲ್ಲವೆಂದು ತಿಳಿದುಕೊಳ್ಳುತ್ತಾರೆ. ಮತ್ತೆ ಕೆಲವರು ಹಣದ ಚೀಲವನ್ನಿಟ್ಟುಕೊಂಡು ಮಾರುಕಟ್ಟೆಯಲ್ಲಿ ಸುತ್ತುತ್ತಿರುತ್ತಾರೆ. ನಿಮಗೆ ನೌಕರಿಗಾಗಿ ಸಂದರ್ಶನ ಬಂದಿದೆ, ಐವತ್ತು ಸಾವಿರ ರೂಪಾಯಿಗಳಿಗೆ ನಿಮಗೆ ಉದ್ಯೋಗ ದೊರಕುತ್ತದೆ. ಮತ್ತೆ ಕೆಲವು ಪ್ರಾಮಾಣಿಕರೂ ಹೀಗೂ ಇರುತ್ತಾರೆ, ತಮಗೆ ನೌಕರಿ ದೊರಕದಿದ್ದರೆ, ತಾನು ಪಡೆದ ಐವತ್ತು ಸಾವಿರ ರೂಪಾಯಿಗಳನ್ನ್ ವಾಪಸ್ಸು ನೀಡುತ್ತೇನೆ ಎನ್ನುತ್ತಾರೆ. ನೂರು ಜನರಲ್ಲಿ ಐದು ಜನರನ್ನು ತೆಗೆದುಕೊಳ್ಳಬೇಕಾಗಿದೆ. ಯಾರಾದರೂ ಐದು ಜನ ಆಗಲೇಬೇಕು. ಈ ಐದು ಜನರಿಂದ 50-50 ಸಾವಿರ ರೂಪಾಯಿಗಳು ಆತನಿಗೆ ತಲುಪುತ್ತದೆ. ಉಳಿದ 95 ಜನರಿಗೆ ಹಣ ಹಿಂದಿರುಗಿಸುತ್ತಾರೆ. ಪ್ರಾಮಾಣಿಕತೆಯ ಗುತ್ತಿಗೆ ಮುಂದುವರೆಯುತ್ತಲೇ ಇರುತ್ತದೆ. ಇಂತಹ ವ್ಯವಹಾರಗಳು ವ್ಯವಸ್ಥೆಯನ್ನು ಹಾಳು ಮಾಡಿಬಿಟ್ಟಿವೆ.
ಆದುದರಿಂದ ಕಠಿಣ ಕಾನೂನುಗಳ ಅವಶ್ಯಕತೆ ಇದೆ ಎಂಬುದನ್ನು ನಾನು ಬಲ್ಲೆ. ಆದರೆ ಪ್ರಯತ್ನ ಪಡುತ್ತಲೇ ಇರಬೇಕು. ಹಲವು ವಿಚಾರಗಳು ನಮ್ಮ ಗಮನಕ್ಕೂ ಬರದೇ ಇರಬಹುದು, ಇದು ಹೇಗಾಗಿರಬಹುದು, ಯಾವ ವಿಷಯ ಇಲ್ಲ ಕೆಲಸ ಮಾಡಿರಬಹುದು, ಯಾವುದೂ ತಿಳಿದಿರುವುದಿಲ್ಲ. ಆದರೆ, ನಾವು ಎಲ್ಲ ಹಂತಗಳಲ್ಲಿಯೂ ಜಾಗರೂಕರಾಗಿರಬೇಕಿದೆ. ಎಲ್ಲ ಸ್ತರಗಳಲ್ಲೂ ನಾವು ಸಕಾರಾತ್ಮಕ ಭೂಮಿಕೆಯನ್ನು ನಿರ್ವಹಿಸುವ ಪ್ರಯತ್ನ ಮಾಡುತ್ತೇವೆ. ವಿಶ್ವದಲ್ಲಿ ಇಂದು ಪ್ರಾಮಾಣಿಕ ದೇಶವಿರುವುದಾದರೆ, ಅದು ಹಿಂದೂಸ್ತಾನ ಏಕೆ ಆಗಿರಬಾರದು. ಈಗ ತಾನೆ ಮುಖ್ಯ ಜಾಗರೂಕತಾ ಆಯುಕ್ತರು ತಿಳಿಸಿದಂತೆ ಪ್ರಾಮಾಣಿಕತೆಯಲ್ಲಿ ನಾವು ನೂರನೇ ಸ್ಥಾನದಲ್ಲಿದ್ದೆವು ಈಗ 76 ರ ಸಮೀಪ ಬಂದಿದ್ದೇವೆ. ಸುಧಾರಿಸುತ್ತಿದ್ದೇವೆ. ಈ ಸುಧಾರಣೆಯಿಂದ ನಾವು ಸಂತಸ ಪಡುವಂತಿಲ್ಲ. ಇನ್ನೂ ಹೆಚ್ಚಿನ ಸುಧಾರಣೆಗಾಗಿ ಇನ್ನೂ ಅಧಿಕ ಜಾಗರೂಕತೆಯ ಹಾದಿಯಲ್ಲಿ ನಡೆಯಬೇಕಿದೆ. ಹಾಗೆ ಮಾಡಿದಾಗ ಮಾತ್ರ ಇನ್ನು ಹೆಚ್ಚಿನ ಫಲಿತಾಂಶ ದೊರೆಯಲು ಸಾಧ್ಯ.
ಇಂತಹ ಶಕ್ತಿಗಳಿಗೆ ಬಲ ನೀಡುವುದು ಸರ್ಕಾರದ ಉದ್ದೇಶ. ಯಾವುದೇ ಸಾಮಾನ್ಯ ನಾಗರಿಕನಿಗೆ ಅನಾನುಕೂಲವಾದಾಗ ಅವರು ಅದನ್ನು ಸಹಿಸಿಕೊಳ್ಳಲು ಸಿದ್ಧರಿರುತ್ತಾರೆ. ಗುಲ್ಲೆಬ್ಬಿಸುವವರು ಕೆಲವೇ ಕೆಲವು ಜನರಿರುತ್ತಾರೆ. ಅವರ ಪಾದಗಳ ಕೆಳಗೆ ನೀರು ಬಂದಾಗ ಅವರು ಕೂಗಾಡುತ್ತಾರೆ. ಸಾಮಾನ್ಯ ನಾಗರಿಕ ಒಳ್ಳೆ ವಿಷಯಗಳನ್ನಿಟ್ಟುಕೊಂಡು ಮುನ್ನಡೆಯಲು ಸಿದ್ದನಿದ್ದಾನೆ. ನಾವು ಅಂತಹ ಸಾಮಾನ್ಯ ನಾಗರಿಕನನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯಬೇಕಿದೆ. ಇದರಿಂದ ಒಳ್ಳೆಯದನ್ನು ಮಾಡುವ ನಮ್ಮ ಸಂಕಲ್ಪಕ್ಕೆ ಶಕ್ತಿ ದೊರೆಯುತ್ತದೆ. ಇದಕ್ಕೆ ಸಮಾಜದ ಸಹಕಾರವು ದೊರಕುತ್ತದೆ. ಸಮಾಜದ ಸಹಕಾರ ದೊರಕಿದರೆ ಉತ್ತಮ ಫಲಿತಾಂಶ ದೊರಕುತ್ತದೆ.
ಜನರ ಸಹಯೋಗದೊಡನೆ ಜಾಗರೂಕತೆಯ ಈ ಅಭಿಯಾನವನ್ನು ಮುನ್ನಡೆಸುತ್ತಿರುವ ತಂಡದ ಎಲ್ಲರಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಒಂದು ಸಪ್ತಾಹದ ಈ ಪ್ರಯತ್ನದಲ್ಲಿ ಲಕ್ಷಾಂತರ ಜನರನ್ನು ತಮ್ಮೊಡನೆ ಒಂದುಗೂಡಿಸುವ ಕಾರ್ಯ ಸನ್ನಿಹಿತವಾಗಿದೆ. ಈಗ ನೀವು ಕೇವಲ ಮೂರು ಜನರಲ್ಲ, ಲಕ್ಷಾಂತರ ಜನ ತಮ್ಮೊಡನಿದ್ದಾರೆ. ಒಂದು ಉತ್ತಮ ಫಲಿತಾಂಶಕ್ಕಾಗಿ ಇದರ ಉದಯವಾಗಿದೆ. ತಮಗೆಲ್ಲರಿಗೂ ಹೃದಯಪೂರ್ವಕ ಅಭಿನಂದನೆಗಳು, ಶುಭಾಶಯಗಳು… ಧನ್ಯವಾದಗಳು….
###
Corruption is not something we can have in our system: PM @narendramodi
— PMO India (@PMOIndia) November 7, 2016
Technology has a major role to bring in transparency: PM @narendramodi
— PMO India (@PMOIndia) November 7, 2016
The state has to be policy driven. Things can't depend on the whims and fancies of individuals: PM @narendramodi
— PMO India (@PMOIndia) November 7, 2016
While making laws and policies it is essential to have a broad range of inputs: PM @narendramodi
— PMO India (@PMOIndia) November 7, 2016