ಪಿಎಂಇಂಡಿಯಾ
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2026ರ ಜೂನ್ 20 ರಂದು ಒಡಿಶಾಗೆ ಭೇಟಿ ನೀಡಲಿದ್ದಾರೆ. ಭಾರತದ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರು ಈ ಭೇಟಿಯ ಸಮಯದಲ್ಲಿ ಪ್ರಧಾನಮಂತ್ರಿ ಅವರೊಂದಿಗೆ ಸೇರ್ಪಡೆಯಾಗಲಿದ್ದಾರೆ, ಇದು ರಾಜ್ಯದ ಅಪರೂಪದ ಮತ್ತು ಮಹತ್ವದ ಸಂದರ್ಭವಾಗಿದೆ.
ಬೆಳಿಗ್ಗೆ 11:15ರ ಸುಮಾರಿಗೆ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ಮಯೂರ್ ಭಂಜ್ ಜಿಲ್ಲೆಯ ಪಹಾದ್ಪುರ್ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ. ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ಸಂತಲಿ ಜಹೇರಾ ಮತ್ತು ಹೋ ಜಹೇರಾ, ಕೌಶಲ್ಯ ಕೇಂದ್ರ ಮತ್ತು ಪಹಾದ್ಪುರ್ ಶಾಲೆಯಲ್ಲಿ ಪವಿತ್ರ ತೋಪುಗಳಲ್ಲಿ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೈಕ್ಷಣಿಕ ಅವಕಾಶಗಳು, ಕೌಶಲ್ಯ ಅಭಿವೃದ್ಧಿ ಮತ್ತು ಸಾಮಾಜಿಕ-ಆರ್ಥಿಕ ಸಬಲೀಕರಣವನ್ನು ಬಲಪಡಿಸಲು ನಡೆಯುತ್ತಿರುವ ಪ್ರಯತ್ನಗಳನ್ನು ಅವರ ಈ ಭೇಟಿಯು ಪ್ರಮುಖವಾಗಿ ಬಿಂಬಿಸುತ್ತದೆ.
ಮಧ್ಯಾಹ್ನ 1 ಗಂಟೆ ಸುಮಾರಿಗೆ ರಾಷ್ಟ್ರಪತಿ ಮತ್ತು ಪ್ರಧಾನ ಮಂತ್ರಿಗಳು ಮಯೂರ್ ಭಂಜ್ ಜಿಲ್ಲೆಯ ರಾಯ್ ರಂಗಪುರದಲ್ಲಿ ಒಡಿಶಾ ಸರ್ಕಾರದ ಎರಡು ವರ್ಷಗಳನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ವಿಷಯ ”ವಿಕಾಸ್ ರಾ ಧಾರಾ, ಒಡಿಶಾ ಸಾರಾ’’ ಎಂಬುದಾಗಿದೆ. ಈ ಕಾರ್ಯಕ್ರಮದ ಸಮಯದಲ್ಲಿ 47,600 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮತ್ತು ಶಿಲಾನ್ಯಾಸ ನಡೆಯಲಿದೆ. ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಈ ಕಾರ್ಯಕ್ರಮದ ವೇಳೆ ಇಂಧನ, ಕೈಗಾರಿಕಾ ಮೂಲಸೌಕರ್ಯ, ರಸ್ತೆ ಸಂಪರ್ಕ, ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಪ್ರವಾಸೋದ್ಯಮ ಮತ್ತು ನೀರಾವರಿ ಸೇರಿದಂತೆ ಪ್ರಮುಖ ವಲಯಗಳ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ನೆರವೇರಿಸಲಾಗುವುದು. ಈ ಯೋಜನೆಗಳು ಒಡಿಶಾದಾದ್ಯಂತ ಮೂಲಸೌಕರ್ಯವನ್ನು ಬಲಪಡಿಸುವ, ಸಂಪರ್ಕವನ್ನು ಸುಧಾರಿಸುವ, ಇಂಧನ ಸುರಕ್ಷತೆಯನ್ನು ಹೆಚ್ಚಿಸುವ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಪ್ರಧಾನಮಂತ್ರಿ ಅವರ ಸಮಗ್ರ ಮತ್ತು ಎಲ್ಲರನ್ನೂ ಒಳಗೊಂಡ ಅಭಿವೃದ್ಧಿಯ ದೂರದೃಷ್ಟಿಯನ್ನು ಪ್ರತಿಬಿಂಬಿಸುವ ಈ ಉಪಕ್ರಮಗಳು ಬುಡಕಟ್ಟು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಬೆಳವಣಿಗೆಯನ್ನು ಮತ್ತಷ್ಟು ವೇಗಗೊಳಿಸುತ್ತವೆ ಮತ್ತು ರಾಜ್ಯದ ಪ್ರತಿಯೊಂದು ಮೂಲೆಗೂ ಅಭಿವೃದ್ಧಿಯ ಪ್ರಯೋಜನಗಳನ್ನು ವಿಸ್ತರಿಸುತ್ತವೆ.
600 ಮೆಗಾವ್ಯಾಟ್ ಅಪ್ಪರ್ ಇಂದ್ರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್ ಮತ್ತು ತಲಾ 660 ಮೆಗಾವ್ಯಾಟ್ ನ ಎರಡು ಘಟಕಗಳನ್ನು ಒಳಗೊಂಡಿರುವ ಐಬಿ ಥರ್ಮಲ್ ಪವರ್ ಸ್ಟೇಷನ್ ನ ಹಂತ-II ವಿಸ್ತರಣಾ ಯೋಜನೆಗೆ ಶಂಕುಸ್ಥಾಪನೆ ನಡೆಯಲಿದ್ದು, ಅವು ಇಂಧನ ಸುರಕ್ಷತೆಯನ್ನು ಹೆಚ್ಚಿಸುತ್ತವೆ ಮತ್ತು ಒಡಿಶಾದಲ್ಲಿ ಆರ್ಥಿಕ ಬೆಳವಣಿಗೆಗೆ ಬೆಂಬಲ ನೀಡುತ್ತವೆ. ಜಾರ್ಸುಗುಡ ಜಿಲ್ಲೆಯ ಲಖನ್ಪುರದಲ್ಲಿ ಭಾರತ್ ಕೋಲ್ ಗ್ಯಾಸಿಫಿಕೇಶನ್ ಮತ್ತು ಕೆಮಿಕಲ್ಸ್ ಲಿಮಿಟೆಡ್ (ಬಿಸಿಜಿಸಿಎಲ್) ಯೋಜನೆಯ ಶಂಕುಸ್ಥಾಪನೆಯೂ ನಡೆಯಲಿದೆ. ಇದು ದೇಶೀಯ ಕಲ್ಲಿದ್ದಲು ಸಂಪನ್ಮೂಲಗಳ ಶುದ್ಧ ಬಳಕೆಯನ್ನು ಉತ್ತೇಜಿಸುತ್ತದೆ, ಆಮದು ಅವಲಂಬನೆಯನ್ನು ತಗ್ಗಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಹೊಸ ಕೈಗಾರಿಕಾ ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ.
ಭುವನೇಶ್ವರದಲ್ಲಿ 300 ಟಿಪಿಡಿ ಮೂಲ-ವಿಂಗಡಣೆಯ ಪುರಸಭೆಯ ಘನತ್ಯಾಜ್ಯ ಆಧಾರಿತ ಕಂಪ್ರೆಸ್ಡ್ ಜೈವಿಕ ಅನಿಲ ಸ್ಥಾವರ, ಕಟಕ್ ಮತ್ತು ಭುವನೇಶ್ವರ ನಡುವೆ ನೇರ ಸಂಪರ್ಕವನ್ನು ಒದಗಿಸುವ ಕಥಜೋಡಿ ನದಿಗೆ ಅಡ್ಡಲಾಗಿ ಸೇತುವೆ, ಬೌಧ್ ಜಿಲ್ಲೆಯ ಧಲ್ಪುರ್-ಹರ್ಭಂಗಾ ರಸ್ತೆಯ ಅಗಲೀಕರಣ ಮತ್ತು ಬಲಪಡಿಸುವಿಕೆ ಮತ್ತು ನುವಾಪಾದದಿಂದ ಘಾಟಿಪಾದದವರೆಗಿನ ಎನ್ ಎಚ್-353 ರ ಒಂದು ಭಾಗದ ನಾಲ್ಕು ಪಥದ ಮಾರ್ಗ, ಕುಸುಮ್ದಿಹಿ ಬೃಹತ್ ಏತ ನೀರಾವರಿ ಯೋಜನೆ, ರಾಯ್ ರಂಗಪುರದಲ್ಲಿ ಇಗ್ನೋ ಪ್ರಾದೇಶಿಕ ಕೇಂದ್ರ ಮತ್ತು ಒಳಾಂಗಣ ಬ್ಯಾಡ್ಮಿಂಟನ್ ಸಂಕೀರ್ಣ ಸೇರಿದಂತೆ ಇತರ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗುವುದು.
ಬೌಧ್‌ನಲ್ಲಿರುವ 300 ಹಾಸಿಗೆಗಳ ಜಿಲ್ಲಾ ಪ್ರಧಾನ ಕಚೇರಿ ಆಸ್ಪತ್ರೆ ಕಟ್ಟಡ, ಒಡಿಶಾದ ವಿವಿಧ ಜಿಲ್ಲೆಗಳಲ್ಲಿ 24 ಅಟಲ್ ಬಸ್ ನಿಲ್ದಾಣಗಳು ಮತ್ತು ಒಂಬತ್ತು ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳನ್ನು ಉದ್ಘಾಟಿಸಲಾಗುವುದು. ಈ ಯೋಜನೆಗಳು ರಾಜ್ಯದಲ್ಲಿ ಆರೋಗ್ಯ ಮತ್ತು ಸಾರ್ವಜನಿಕ ಸಾರಿಗೆ ಮೂಲಸೌಕರ್ಯವನ್ನು ಬಲಪಡಿಸುವ ನಿರೀಕ್ಷೆಯಿದೆ. ಉದ್ಘಾಟನೆಗೊಳ್ಳಲಿರುವ ಇತರ ಪ್ರಮುಖ ಯೋಜನೆಗಳಲ್ಲಿ ಎನ್ ಎಚ್-57 ರಲ್ಲಿ ನಯಾಗಢ ಪಟ್ಟಣ ಬೈಪಾಸ್, ಕುಸುಮಿ ಸ್ಮಾರ್ಟ್ ನೀರಾವರಿ ಯೋಜನೆಯ ನೆಲದಾಳದ ಪೈಪ್‌ಲೈನ್ ಘಟಕ, ಜಖಾಪುರ-ಜಾಜ್‌ಪುರ ಕಿಯೋಂಜಾರ್ ರಸ್ತೆ-ಬೈತರಾಣಿ ರಸ್ತೆ ಮಲ್ಟಿ-ಟ್ರ್ಯಾಕಿಂಗ್ ಯೋಜನೆ, ಹಿಂದೋಲ್ ರಸ್ತೆ-ಮೇರಮಂಡಲಿ ಮಲ್ಟಿ-ಟ್ರ್ಯಾಕಿಂಗ್ ಯೋಜನೆ, ಕ್ರೀಡಾ ಸಂಕೀರ್ಣ ಮತ್ತು ರಾಯ್ ರಂಗಪುರದಲ್ಲಿರುವ ಬುಡಕಟ್ಟು ಸಂಶೋಧನಾ ಕೇಂದ್ರಗಳೂ ಸಹ ಒಳಗೊಂಡಿವೆ.
*****