ಪಿಎಂಇಂಡಿಯಾ
ತಮಿಳುನಾಡು ರಾಜ್ಯಪಾಲರಾದ ಶ್ರೀ ರಾಜೇಂದ್ರ ಅರ್ಲೆಕರ್ ಜಿ, ಡಾ. ಎಲ್. ಮುರುಗನ್ ಜಿ, ತಿರು ರಾಜಮೋಹನ್ ಜಿ, ತಿರು ನೈನಾರ್ ನಾಗೇಂದ್ರನ್ ಜಿ, ಡಾ. ಗಿರಿಜಾ ಶೇಷಾದ್ರಿ ಅಮ್ಮಾ ಜಿ, ತಿರು ಆರ್. ಆರ್. ಗೋಪಾಲ್ ಜಿ, ನನ್ನ ಯುವ ಸ್ನೇಹಿತರೆ, ಶಿಕ್ಷಕರೆ ಮತ್ತು ಪೋಷಕರೆ, ನನ್ನ ತಮಿಳುನಾಡಿನ ಸಹೋದರ ಸಹೋದರಿಯರೆ, ಎಲ್ಲರಿಗೂ ನಮಸ್ಕಾರ.
ಸ್ನೇಹಿತರೆ,
ಇಂದು ನವರಾತ್ರಿಯ ಮೊದಲ ದಿನ. ಶಿವ ಮತ್ತು ಶಕ್ತಿಯ ಪವಿತ್ರ ಭೂಮಿಯಾದ ತಮಿಳುನಾಡಿಗೆ ಬರುವ ಭಾಗ್ಯ ಮತ್ತು ದೇವಿ ಸರಸ್ವತಿಯ ಭಕ್ತರನ್ನು ಭೇಟಿಯಾಗುವ ಅವಕಾಶ ನನಗೆ ದೊರೆತಿರುವುದು, ಈ ನವರಾತ್ರಿಯ ಆರಂಭವನ್ನು ನನಗೆ ನಿಜಕ್ಕೂ ಅದ್ಭುತವಾಗಿಸಿದೆ. ನನ್ನ ಯುವ ಸ್ನೇಹಿತರ ಉತ್ಸಾಹವನ್ನೂ ನಾನು ಕಾಣುತ್ತಿದ್ದೇನೆ. ಈ ಸಕಾರಾತ್ಮಕ ಶಕ್ತಿ ಮತ್ತು ಸಂಭ್ರಮವನ್ನು ನಾನು ಅನುಭವಿಸುತ್ತಿದ್ದೇನೆ. ನಿಮ್ಮ ಕಣ್ಣುಗಳಲ್ಲಿ ಭಾರತದ ಭವಿಷ್ಯವನ್ನು ನಾನು ಕಾಣುತ್ತಿದ್ದೇನೆ.
ಮಾತು ಆರಂಭಿಸುವ ಮುನ್ನ, ನಾನು ಒಂದು ವಿಷಯ ಹೇಳಬಯಸುತ್ತೇನೆ. ಇಂದು ನಾನು ನಿಗದಿತ ಸಮಯಕ್ಕಿಂತ 10 ನಿಮಿಷ ಮುಂಚಿತವಾಗಿ ಚೆನ್ನೈಗೆ ಬಂದಿಳಿದೆ. ಆದರೆ, ಕಾರ್ಯಕ್ರಮಗಳ ವ್ಯವಸ್ಥೆ ಮತ್ತು ಅನಿವಾರ್ಯ ವಿಳಂಬಗಳ ಕಾರಣದಿಂದಾಗಿ, ನಿಮ್ಮ ಬಳಿ ತಲುಪಲು ತಡವಾಯಿತು. ನಿರೀಕ್ಷೆಗಿಂತ ತಡವಾಗಿ ಬಂದಿದ್ದರಿಂದ ನಿಮಗೆಲ್ಲರಿಗೂ ಅನನುಕೂಲವಾಯಿತು. ಅದಕ್ಕಾಗಿ ನಾನು ನಿಮ್ಮಲ್ಲರಿಗೂ ಕ್ಷಮೆ ಕೋರುತ್ತೇನೆ.
ಇಂದಿನ ಯುವಜನರು ಅಭಿವೃದ್ಧಿಶೀಲ ಭಾರತದ ದೃಷ್ಟಿಕೋನದ ಹಿಂದಿನ ಶಕ್ತಿಯಾಗಲು ಬಯಸುತ್ತಿದ್ದಾರೆ. ಅಭಿವೃದ್ಧಿಶೀಲ ಭಾರತಕ್ಕೆ ಅಗತ್ಯವಿರುವ ಹೊಸ ಆಲೋಚನೆಗಳು ಮತ್ತು ಹೊಸ ಪರಿಹಾರಗಳು ಕೇವಲ ಭಾರತದ ಭವಿಷ್ಯವನ್ನಷ್ಟೇ ಅಲ್ಲ, ಬದಲಿಗೆ ಜಗತ್ತಿನ ಭವಿಷ್ಯವನ್ನೂ ನಿರ್ಧರಿಸಲಿವೆ.
ಇಂದು ಜಗತ್ತು ಪರಿಹಾರಗಳನ್ನು ಹುಡುಕುತ್ತಿದೆ ಮತ್ತು ಆ ಪರಿಹಾರಗಳನ್ನು ಒದಗಿಸುವ ಸಾಮರ್ಥ್ಯ ನಿಮ್ಮಲ್ಲಿದೆ.
ಸ್ನೇಹಿತರೆ,
ಇಂದು ಭಾರತವು ಅಪಾರ ಅವಕಾಶಗಳನ್ನು ಒದಗಿಸುತ್ತಿದೆ. ಪ್ರತಿಯೊಬ್ಬ ಯುವಕರೂ ತಮ್ಮ ಭವಿಷ್ಯವನ್ನು ಆ ವಿಶಾಲವಾದ ಹರಹಿನಲ್ಲಿ ಕಾಣಬೇಕೆಂದು ನಾನು ಬಯಸುತ್ತೇನೆ. ಏಕೆಂದರೆ ಇದು ನಿಮ್ಮ ಸಮಯ. ಇದು ನಿಮ್ಮ ಸಮಯ. ಇದು ನಿಮ್ಮ ಅವಕಾಶ. ನಾವು ಈ ಕನಸನ್ನು ನನಸಾಗಿಸುತ್ತೇವೆ ಎಂಬ ಸಂಪೂರ್ಣ ವಿಶ್ವಾಸ ನನಗಿದೆ. ನಾವೆಲ್ಲರೂ ಒಗ್ಗೂಡಿ ಇದನ್ನು ಸಾಧಿಸುತ್ತೇವೆ!
ನಾವೆಲ್ಲರೂ ಒಗ್ಗೂಡಿ ಇದನ್ನು ಸಾಧಿಸುತ್ತೇವೆ!
ನಾವೆಲ್ಲರೂ ಒಗ್ಗೂಡಿ ಇದನ್ನು ಸಾಧಿಸುತ್ತೇವೆ!
ನಾವೆಲ್ಲರೂ ಒಗ್ಗೂಡಿ ಇದನ್ನು ಸಾಧಿಸುತ್ತೇವೆ!
ಸ್ನೇಹಿತರೆ,
ಇಂದು ನಾನು ಇಲ್ಲಿಗೆ ಭೇಟಿ ನೀಡಲು ಒಂದು ಆಸಕ್ತಿದಾಯಕ ಪ್ರೇರಣೆಯೂ ಕಾರಣ. ಕೆಲವು ತಿಂಗಳ ಹಿಂದೆ ನಾಗರ್ಕೋಯಿಲ್ನಲ್ಲಿ ನಮ್ಮ ಗಿರಿಜಾ ಅಮ್ಮನವರು ಕೆಲವು ಮಕ್ಕಳೊಂದಿಗೆ ನನ್ನನ್ನು ಭೇಟಿಯಾದರು. ಅವರ ಸಮರ್ಪಣಾ ಭಾವ, ಆತ್ಮವಿಶ್ವಾಸ ಮತ್ತು ದೇಶದ ಭವಿಷ್ಯದ ಬಗೆಗಿನ ಬದ್ಧತೆಯು ನನ್ನ ಮನಸ್ಸಿನ ಮೇಲೆ ಅಸಾಧಾರಣ ಪ್ರಭಾವ ಬೀರಿತು. ಆ ಭೇಟಿಯ ಸಂದರ್ಭದಲ್ಲಿ, ಅವರು ನನ್ನನ್ನು ಈ ಸುವರ್ಣ ಮಹೋತ್ಸವ ಸಮಾರಂಭಕ್ಕೆ ಆಹ್ವಾನಿಸಿದರು. ಮೊದಲನೆಯದಾಗಿ ಅವರ ವಾತ್ಸಲ್ಯ, ಎರಡನೆಯದಾಗಿ ಈ ಐತಿಹಾಸಿಕ ಸಂಸ್ಥೆಯ ಬಗ್ಗೆ ನನಗಿದ್ದ ಗೌರವ – ಇವೆರಡೂ ಕಾರಣಗಳಿಂದಾಗಿ, ನಾನು ಖಂಡಿತವಾಗಿಯೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಆ ಕ್ಷಣವೇ ದೃಢವಾಗಿ ನಿರ್ಧರಿಸಿದೆ. ಈ ಸಂದರ್ಭದಲ್ಲಿ, 50 ವರ್ಷಗಳ ಈ ಗಮನಾರ್ಹ ಪಯಣಕ್ಕಾಗಿ ‘ವಿಶ್ವ ಹಿಂದೂ ವಿದ್ಯಾ ಕೇಂದ್ರ’ ಮತ್ತು ಸಂಪೂರ್ಣ ‘ಹಿಂದೂ ವಿದ್ಯಾಲಯ’ ಕುಟುಂಬಕ್ಕೆ ನಾನು ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸ್ನೇಹಿತರೆ,
ಇಂದು ‘ವಿಶ್ವ ಹಿಂದೂ ವಿದ್ಯಾ ಕೇಂದ್ರ’ವು ತನ್ನ ಸುವರ್ಣ ಮಹೋತ್ಸವ ಆಚರಿಸುತ್ತಿದೆ. ಇದೊಂದು ಮಹತ್ವದ ಮೈಲಿಗಲ್ಲು, ಇದರ ಪಯಣವು ಅಷ್ಟೇ ಸ್ಫೂರ್ತಿದಾಯಕವಾಗಿದೆ. 1975ರಲ್ಲಿ ಈ ಸಂಸ್ಥೆಯು ಚೆನ್ನೈನ ವೆಸ್ಟ್ ಮಾಂಬಲಂನಲ್ಲಿ ಒಂದು ಸಣ್ಣ ಶಾಲೆಯಾಗಿ ಪ್ರಾರಂಭವಾಯಿತು. ಆಗ ಅಲ್ಲಿ ಕೇವಲ 7 ವಿದ್ಯಾರ್ಥಿಗಳಿದ್ದರು. ಇಂದು ಲಭ್ಯವಿರುವಂತಹ ಸೌಲಭ್ಯಗಳು ಆಗ ಇರಲಿಲ್ಲ. ಶಾಶ್ವತ ಕಟ್ಟಡವಿರಲಿಲ್ಲ. ಸಂಪನ್ಮೂಲಗಳು ಸೀಮಿತವಾಗಿದ್ದವು. ಆದರೆ ಒಂದು ವಿಷಯವಿತ್ತು: ಅದೆಂದರೆ, ದೃಢ ಸಂಕಲ್ಪ ಮತ್ತು ಅಚಲವಾದ ಸೇವಾ ಮನೋಭಾವ. ಅದಕ್ಕಾಗಿಯೇ, ಎಷ್ಟೇ ಸವಾಲುಗಳಿದ್ದರೂ ಈ ಸಂಸ್ಥೆಯು ಮುನ್ನಡೆಯುತ್ತಲೇ ಸಾಗಿತು. ಕಾಲಕ್ರಮೇಣ, ಈ ಸಣ್ಣ ಪ್ರಯತ್ನವು ಒಂದು ದೊಡ್ಡ ಶೈಕ್ಷಣಿಕ ಆಂದೋಲನವಾಗಿ ಬೆಳೆಯಿತು. ಇಂದು ತಮಿಳುನಾಡಿನ ವಿವಿಧ ಭಾಗಗಳಲ್ಲಿ ನಿಮ್ಮ 15 ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ.
ಸ್ನೇಹಿತರೆ,
ಈ ಸಂದರ್ಭದಲ್ಲಿ ಶ್ರೀ ಜೈಗೋಪಾಲ್ ಗರೋಡಿಯಾ ಅವರ ಕೊಡುಗೆಯನ್ನು ನಾನು ಗೌರವಪೂರ್ವಕವಾಗಿ ಸ್ಮರಿಸುತ್ತೇನೆ. ಶಾಲಾ ಕಟ್ಟಡ ನಿರ್ಮಾಣದಲ್ಲಿ ಅವರು ಪ್ರಮುಖ ಕೊಡುಗೆ ನೀಡಿದ್ದರು. ಇಂದು ‘ಹಿಂದೂ ವಿದ್ಯಾಲಯ’ದ ಈ ಪಯಣವನ್ನು ಯಶಸ್ವಿಗೊಳಿಸಿದ ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗ, ಪೋಷಕರು ಮತ್ತು ಹಳೆಯ ವಿದ್ಯಾರ್ಥಿಗಳಿಗೂ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ. 50 ವರ್ಷಗಳ ಸಮರ್ಪಣೆ. 50 ವರ್ಷಗಳ ಬದ್ಧತೆ. 50 ವರ್ಷಗಳ ಕಾಲ ಯುವ ಜೀವನಗಳನ್ನು ರೂಪಿಸುವ ಕಾರ್ಯ.
ಸ್ನೇಹಿತರೆ,
ಶಿಕ್ಷಣದ ಜತೆಗೆ ದೇಶಭಕ್ತ ನಾಗರಿಕರನ್ನು ರೂಪಿಸುವಲ್ಲಿ ಶೈಕ್ಷಣಿಕ ಸಂಸ್ಥೆಯೊಂದು ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂಬುದಕ್ಕೆ ಈ ಸಂಸ್ಥೆಯು ಒಂದು ಉತ್ತಮ ಉದಾಹರಣೆಯಾಗಿದೆ. ನಾನು ನನ್ನ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲೂ ಈ ವಿಷಯ ಪ್ರಸ್ತಾಪಿಸಿದ್ದೆ. ಗಿರಿಜಾ ಅಮ್ಮ ಅವರು ಮಕ್ಕಳಿಗೆ ಒಂದು ಸರಳ ಉಪಾಯ ನೀಡಿದ್ದರು. ಪ್ರತಿಯೊಂದು ಮಗುವೂ ಪ್ರತಿದಿನ ಕೇವಲ ಒಂದು ರೂಪಾಯಿ ಉಳಿಸಿ, ಅದನ್ನು ದೇಶದ ಸೈನಿಕರಿಗೆ ಅರ್ಪಿಸಬೇಕು. ಸಾವಿರಾರು ಮಕ್ಕಳು ಈ ಸಂಕಲ್ಪದಲ್ಲಿ ಕೈಜೋಡಿಸಿದಾಗ, ಸುಮಾರು 40 ಲಕ್ಷ ರೂಪಾಯಿ ಸಂಗ್ರಹವಾಯಿತು. ನಿಜಕ್ಕೂ, ಇದೊಂದು ಎಂತಹ ಸ್ಫೂರ್ತಿದಾಯಕ ಉದಾಹರಣೆ!
ಸ್ನೇಹಿತರೆ,
ಸಣ್ಣ ಕೊಡುಗೆಗಳು ದೊಡ್ಡ ಬದಲಾವಣೆ ತರಬಲ್ಲವು. ಒಂದು ಸಣ್ಣ ಪ್ರಯತ್ನವೂ ಸಹ ಬೃಹತ್ ಪರಿಣಾಮ ಉಂಟುಮಾಡಬಲ್ಲದು. ವಿಪತ್ತಿನ ಸಮಯದಲ್ಲಿ ಸಂಕಷ್ಟದಲ್ಲಿರುವವರಿಗೆ ಬೆಂಬಲ ನೀಡುವುದಾಗಲಿ ಅಥವಾ ಸ್ವಚ್ಛತಾ ಅಭಿಯಾನಗಳಲ್ಲಿ ಪಾಲ್ಗೊಳ್ಳುವುದಾಗಲಿ – ಇಂತಹ ಮೌಲ್ಯಗಳು ‘ಹಿಂದೂ ವಿದ್ಯಾಲಯ’ ಕುಟುಂಬದ ಶ್ರೇಷ್ಠ ಪರಂಪರೆಯಾಗಿವೆ.
ಸ್ನೇಹಿತರೆ,
ಈ ಸಂದರ್ಭದಲ್ಲಿ ನಾನು ಮಹಾನ್ ಸಂತ ತಿರುವಳ್ಳುವರ್ ಅವರನ್ನು ಸ್ಮರಿಸಲು ಬಯಸುತ್ತೇನೆ. ಅವರ ಬೋಧನೆಗಳು ಎಲ್ಲಾ ವಿದ್ಯಾರ್ಥಿಗಳಿಗೆ ಅತ್ಯಂತ ಮಹತ್ವದ್ದಾಗಿವೆ. ಇತ್ತೀಚೆಗೆ, ರಷ್ಯಾದ ಅಧ್ಯಕ್ಷ ಪುಟಿನ್ ಅವರಿಗೆ ‘ತಿರುಕ್ಕುರಳ್’ನ ರಷ್ಯನ್ ಭಾಷಾಂತರದ ಕೃತಿ ನೀಡುವ ಅವಕಾಶ ನನಗೆ ಸಿಕ್ಕಿತ್ತು. ಜೀವನಪೂರ್ತಿ ಕಲಿಯುವುದನ್ನು ಮುಂದುವರಿಸಲು ಬಯಸುವ ಪ್ರತಿಯೊಬ್ಬರಿಗೂ ‘ತಿರುಕ್ಕುರಳ್’ ಒಂದು ಅಸಾಧಾರಣ ಮಾರ್ಗದರ್ಶಿಯಾಗಿದೆ. ತಮ್ಮ ಪ್ರಸಿದ್ಧ ‘ಕುರಳ್'(ಪದ್ಯ) ಒಂದರಲ್ಲಿ, ಕೇವಲ ಯಾವುದನ್ನಾದರೂ ಕಲಿಯುವುದು ಸಾಕಾಗುವುದಿಲ್ಲ, ಕಲಿತದ್ದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯ ಎಂದು ತಿರುವಳ್ಳುವರ್ ನಮಗೆ ಕಲಿಸುತ್ತಾರೆ. ಇದು ನಿಮ್ಮೆಲ್ಲಾ ವಿದ್ಯಾರ್ಥಿಗಳಿಗೂ ಒಂದು ಶ್ರೇಷ್ಠ ಪಾಠವಾಗಿದೆ.
ಸ್ನೇಹಿತರೆ,
ನೀವೆಲ್ಲರೂ ಮಹಾಕವಿ ಭಾರತಿಯಾರ್ ಅವರ ಸಾಹಿತ್ಯವನ್ನು ವ್ಯಾಪಕವಾಗಿ ಓದಿರುತ್ತೀರಿ. ಅವರ ಜೀವನದಲ್ಲಿ ಕಾಶಿ ನಗರವು ಬಹಳ ಮಹತ್ವದ ಪಾತ್ರ ವಹಿಸಿತ್ತು. ಕಾಶಿಯ ವಾತಾವರಣದಲ್ಲಿ ತುಂಬಿದ್ದ ಆಧ್ಯಾತ್ಮಿಕ ಮತ್ತು ರಾಷ್ಟ್ರೀಯ ಜಾಗೃತಿಯು ಅವರ ಚಿಂತನೆಯ ಮೇಲೆ ಗಾಢವಾದ ಪ್ರಭಾವ ಬೀರಿತ್ತು.
ಸ್ನೇಹಿತರೆ,
ನಾನು ಕಾಶಿಯಿಂದ ಸಂಸದನಾಗಿದ್ದೇನೆ. ಇಂದಿಗೂ, ಕಾಶಿಯ ಜನರು ಮಹಾಕವಿ ಭಾರತಿಯಾರ್ ಅವರನ್ನು ನೆನಪಿಸಿಕೊಳ್ಳುತ್ತಾರೆ. ಅವರ “ಅಚಮಿಲ್ಲೈ, ಅಚಮಿಲ್ಲೈ” (ಭಯವಿಲ್ಲ, ಭಯವಿಲ್ಲ) ಎಂಬ ಮಾತುಗಳು ನಮಗೆ ನಿರ್ಭಯವಾಗಿ ಬದುಕಲು ಸ್ಫೂರ್ತಿ ನೀಡುತ್ತವೆ. ಆದ್ದರಿಂದ, ಇಲ್ಲಿರುವ ಎಲ್ಲಾ ಯುವಜನರಿಗೆ ನಾನು ಹೇಳಲು ಬಯಸುತ್ತೇನೆ: ಭಯವಿಲ್ಲದೆ ನಿಮಗೆ ನೀವೇ ಅವಕಾಶವನ್ನು ಕಂಡುಕೊಳ್ಳಿ. ನಿಮ್ಮ ಆಲೋಚನೆಗಳ ಮೇಲೆ ಕೆಲಸ ಮಾಡಿ. ದೊಡ್ಡ ಕನಸು ಕಾಣಿ. ವಿಭಿನ್ನವಾಗಿ ಯೋಚಿಸಿ. ಮತ್ತು ನಿರ್ಭಯರಾಗಿರಿ.
ಸ್ನೇಹಿತರೆ,
ದೇಶದ ವಿವಿಧ ಭಾಗಗಳಲ್ಲಿ ನಾನು ನಡೆಸಿದ ಪ್ರವಾಸಗಳು ಮತ್ತು ಅಲ್ಲಿ ಭೇಟಿಯಾದ ಜನರಿಂದ ಕಲಿತ ವಿಷಯಗಳು ಭಾರತ ಕುರಿತಾದ ನನ್ನ ತಿಳಿವಳಿಕೆ ರೂಪಿಸಿವೆ. 1990ರ ದಶಕದ ಆರಂಭದಲ್ಲಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದ ‘ಏಕ್ತಾ ಯಾತ್ರೆ’ಯಲ್ಲಿ ನಾನೂ ಭಾಗವಹಿಸಿದ್ದೆ. ಗಿರಿಜಾ ಅಮ್ಮನವರೊಂದಿಗಿನ ನನ್ನ ಪರಿಚಯವು ಆ ಯಾತ್ರೆಯ ಸಂದರ್ಭದಲ್ಲೇ ಏರ್ಪಟ್ಟಿತು. ಅಂದಿನಿಂದಲೂ ನಮ್ಮ ಒಡನಾಟ ಮುಂದುವರಿದಿದೆ.
ಸ್ನೇಹಿತರೆ,
ನನ್ನ ಪ್ರವಾಸಗಳು ಭಾರತದ ವೈವಿಧ್ಯತೆಯನ್ನು ಹತ್ತಿರದಿಂದ ಅರಿಯುವ ಅವಕಾಶವನ್ನು ನನಗೆ ಒದಗಿಸಿಕೊಟ್ಟವು. ತಮಿಳು ಭಾಷೆ ಮತ್ತು ತಮಿಳು ಸಂಸ್ಕೃತಿಯ ಮೇಲಿನ ನನ್ನ ಪ್ರೀತಿಯು ಕೂಡ ಅಂತಹ ಅನುಭವಗಳಿಂದಲೇ ಮೂಡಿಬಂದಿದೆ.
ಸ್ನೇಹಿತರೆ,
ಅದಕ್ಕಾಗಿಯೇ, ಭಾರತವನ್ನು ಅನ್ವೇಷಿಸುವಂತೆ ನಾನು ನಿಮ್ಮನ್ನು ಪ್ರೋತ್ಸಾಹಿಸುತ್ತೇನೆ. ನೀವು ಎಲ್ಲಿಗೆ ಹೋದರೂ, ತಮಿಳು ಸಂಸ್ಕೃತಿಯನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. ತಮಿಳು ಕವಿತೆಗಳು, ಕಥೆಗಳು ಮತ್ತು ಸಂಪ್ರದಾಯಗಳನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ನಿಮ್ಮ ಹಿನ್ನೆಲೆಗಿಂತ ಭಿನ್ನವಾದ ಹಿನ್ನೆಲೆ ಹೊಂದಿರುವ ಜನರೊಂದಿಗೆ ಸ್ನೇಹ ಬೆಳೆಸಿ. ನೀವು ಬೆಳೆಸುವ ಸ್ನೇಹಬಾಂಧವ್ಯಗಳೇ ನಮ್ಮ ರಾಷ್ಟ್ರದ ಏಕತೆಯನ್ನು ಬಲಪಡಿಸುತ್ತವೆ.
ಸ್ನೇಹಿತರೆ,
ಇಂದಿನ ಯುವ ಪೀಳಿಗೆಯು ತಮ್ಮ ಕನಸುಗಳನ್ನು ನನಸಾಗಿಸಿಕೊಳ್ಳಲು ಹಿಂದೆಂದೂ ಕಾಣದಂತಹ ಅವಕಾಶಗಳನ್ನು ಪಡೆಯುತ್ತಿದೆ. ದೇಶದ ಸಂಪೂರ್ಣ ಶೈಕ್ಷಣಿಕ ಚಿತ್ರಣವು ಇಂದು ಹೇಗೆ ಬದಲಾಗುತ್ತಿದೆ ಎಂಬುದನ್ನು ಗಮನಿಸಿ. 2014ರಲ್ಲಿ ಭಾರತದಲ್ಲಿ ಸುಮಾರು 750 ವಿಶ್ವವಿದ್ಯಾಲಯಗಳಿದ್ದವು. ಇಂದು ಆ ಸಂಖ್ಯೆ 1,300ಕ್ಕೂ ಹೆಚ್ಚು ಏರಿಕೆಯಾಗಿದೆ. ಕಾಲೇಜುಗಳ ಸಂಖ್ಯೆಯೂ ಸಹ ಸುಮಾರು 38,000ದಿಂದ 52,000ಕ್ಕೆ ಹೆಚ್ಚಾಗಿದೆ. ಇತ್ತೀಚಿನ ವರ್ಷಗಳಲ್ಲಿ ದೇಶವು ಅನೇಕ ಹೊಸ ಐಐಟಿ, ಐಐಎಂ, ಐಐಐಟಿ ಮತ್ತು ಏಮ್ಸ್ ಸಂಸ್ಥೆಗಳನ್ನು ಪಡೆದುಕೊಂಡಿದೆ.
ಸ್ನೇಹಿತರೆ,
ಇಂದು ಹೊಸ ಶಿಕ್ಷಣ ನೀತಿಯು ದೇಶದಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುತ್ತಿದೆ. ಭಾರತೀಯ ಸಂಸ್ಥೆಗಳಿಗೆ ಜಾಗತಿಕ ಮನ್ನಣೆಯೂ ನಿರಂತರವಾಗಿ ಹೆಚ್ಚುತ್ತಿದೆ. 2015ರ ಕ್ಯುಎಸ್ ಶ್ರೇಯಾಂಕಗಳಲ್ಲಿ ಭಾರತದ ಕೇವಲ 14 ವಿಶ್ವವಿದ್ಯಾಲಯಗಳು ಸ್ಥಾನ ಪಡೆದಿದ್ದವು. ಇತ್ತೀಚಿನ ಶ್ರೇಯಾಂಕಗಳಲ್ಲಿ, ಆ ಸಂಖ್ಯೆ 52ಕ್ಕೆ ಏರಿಕೆಯಾಗಿದೆ. ಈ ಅಂಕಿಅಂಶಗಳ ಅರ್ಥ ಬಹಳ ಸ್ಪಷ್ಟವಾಗಿದೆ. ಹೆಚ್ಚಿನ ಸಂಸ್ಥೆಗಳು, ಹೆಚ್ಚಿನ ಆಯ್ಕೆಗಳು ಮತ್ತು ನಿಮಗಾಗಿ ಹೆಚ್ಚಿನ ಅವಕಾಶಗಳು ಬಂದಿವೆ.
ಸ್ನೇಹಿತರೆ,
ಪ್ರತಿಯೊಬ್ಬ ಯುವಕ ಯುವತಿಯೂ ವಿಭಿನ್ನ ಕನಸುಗಳು ಮತ್ತು ವಿಭಿನ್ನ ಪ್ರತಿಭೆಗಳನ್ನು ಹೊಂದಿರುತ್ತಾರೆ. ಉದಾಹರಣೆಗೆ, ನಿಮ್ಮಲ್ಲಿ ಅನೇಕರು ಕ್ರೀಡೆಯನ್ನು ತಮ್ಮ ವೃತ್ತಿಯನ್ನಾಗಿ ಮಾಡಿಕೊಳ್ಳಲು ಬಯಸಬಹುದು. ಆದ್ದರಿಂದ, ಕ್ರೀಡೆಯು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗದಂತೆ ದೇಶವು ಖಾತ್ರಿಪಡಿಸುತ್ತಿದೆ. ಇದಕ್ಕಾಗಿಯೇ ಇಂದು ಭಾರತದಾದ್ಯಂತ ಹೊಸ ಕ್ರೀಡಾ ಸೌಲಭ್ಯಗಳನ್ನು ನಿರ್ಮಿಸಲಾಗುತ್ತಿದೆ. ಯುವ ಕ್ರೀಡಾಪಟುಗಳು ಉತ್ತಮ ತರಬೇತಿ ಮತ್ತು ಬೆಂಬಲ ಪಡೆಯುತ್ತಿದ್ದಾರೆ, ಅಂತಾರಾಷ್ಟ್ರೀಯ ಕ್ರೀಡಾ ಜಗತ್ತಿನಲ್ಲಿ ಭಾರತದ ಸ್ಥಾನಮಾನವೂ ಏರುತ್ತಿದೆ.
ಸ್ನೇಹಿತರೆ,
ಭಾರತವು 2030ರ ಕಾಮನ್ವೆಲ್ತ್ ಕ್ರೀಡಾಕೂಟ ಆಯೋಜಿಸಲು ಸಿದ್ಧತೆ ನಡೆಸುತ್ತಿದೆ. ನಾವು 2036ರ ಒಲಿಂಪಿಕ್ಸ್ ಅನ್ನು ಆಯೋಜಿಸುವ ಕನಸಿನೊಂದಿಗೆ ಮುನ್ನಡೆಯುತ್ತಿದ್ದೇವೆ. ಮುಂದಿನ ವರ್ಷಗಳಲ್ಲಿ, ಭಾರತದಲ್ಲಿ ಪ್ರಮುಖ ಜಾಗತಿಕ ಕ್ರೀಡಾಕೂಟಗಳು ನಡೆದಾಗ, ನಮ್ಮ ಯುವಕರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ವೇದಿಕೆ ಮತ್ತು ಅವಕಾಶ ಎರಡೂ ಸಿಗಲಿವೆ. ಆದ್ದರಿಂದ, ಭಾರತದ ಯುವಜನತೆ ಈಗ ವೇದಿಕೆ, ಸಾಮರ್ಥ್ಯ ಮತ್ತು ಬೆಂಬಲ ಹೊಂದಿದ್ದಾರೆ. ಇದರರ್ಥ ಅವಕಾಶಗಳು ಅಪಾರವಾಗಿವೆ! ಕ್ರೀಡಾ ಜಗತ್ತಿನಲ್ಲಿಯೂ ನಿಮ್ಮ ಪೀಳಿಗೆಯು ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ ಎಂಬ ವಿಶ್ವಾಸ ನನಗಿದೆ.
ಸ್ನೇಹಿತರೆ,
ಇಂದು ನಿಮ್ಮೆಲ್ಲರ ನಡುವೆ ಬಂದು, ನಿಮ್ಮ ಕನಸುಗಳನ್ನು ಅರಿತುಕೊಂಡ ನಂತರ, ನನ್ನ ಆತ್ಮವಿಶ್ವಾಸ ಇನ್ನಷ್ಟು ದೃಢಗೊಂಡಿದೆ. ಭಾರತದ ಭವಿಷ್ಯವು ಅತ್ಯುನ್ನತವಾಗಿರುತ್ತದೆ ಎಂದು ನಾನು ಖಚಿತವಾಗಿ ಹೇಳಬಲ್ಲೆ. ಆ ಭವಿಷ್ಯದ ನಿಜವಾದ ನಾಯಕರು ನೀವೆಲ್ಲರೂ ಆಗಿದ್ದೀರಿ. ನಿಮ್ಮ ಪ್ರತಿಭೆಯ ಮೇಲೆ ನನಗೆ ನಂಬಿಕೆಯಿದೆ. ನಿಮ್ಮ ಆತ್ಮವಿಶ್ವಾಸದ ಮೇಲೆ ನನಗೆ ನಂಬಿಕೆಯಿದೆ. ನಿಮ್ಮ ಸಾಮರ್ಥ್ಯದ ಮೇಲೆ ನನಗೆ ನಂಬಿಕೆಯಿದೆ. ಹಾಗಾಗಿ, ಇಂದು ನಿಮ್ಮೆಲ್ಲರೊಂದಿಗೆ ಸೇರಿ ಕೆಲವು ಪ್ರಮುಖ ಸಂಕಲ್ಪಗಳನ್ನು ಪುನರುಚ್ಚರಿಸಲು ನಾನು ಬಯಸುತ್ತೇನೆ. ನಾನು ಹೇಳಿದ ನಂತರ, ನೀವು ಅದನ್ನು ಪುನರಾವರ್ತಿಸಬೇಕು: ನಾವು ಇದನ್ನು ಸಾಧಿಸುತ್ತೇವೆ! ನೀವು ಅದನ್ನು ಪುನರಾವರ್ತಿಸುತ್ತೀರಾ? ಖಂಡಿತವಾಗಿಯೂ?
2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ.
2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ. ನಾವು ಇದನ್ನು ಸಾಧಿಸುತ್ತೇವೆ!
ನನ್ನೊಂದಿಗೆ ಹೇಳಿ: ನಾವು ಇದನ್ನು ಸಾಧಿಸುತ್ತೇವೆ!
2047ರ ವೇಳೆಗೆ ಅಭಿವೃದ್ಧಿ ಹೊಂದಿದ ಭಾರತ, ನಾವು ಇದನ್ನು ಸಾಧಿಸುತ್ತೇವೆ!
ವಿಶ್ವದ ಅಗ್ರ 3 ಆರ್ಥಿಕತೆಗಳಲ್ಲಿ ಒಂದು, ನಾವು ಇದನ್ನು ಸಾಧಿಸುತ್ತೇವೆ!
ಸ್ವಾವಲಂಬಿ ಭಾರತ, ನಾವು ಇದನ್ನು ಸಾಧಿಸುತ್ತೇವೆ!
ಜಾಗತಿಕ ಉತ್ಪಾದನಾ ಕೇಂದ್ರ, ನಾವು ಇದನ್ನು ಸಾಧಿಸುತ್ತೇವೆ!
ಒಲಿಂಪಿಕ್ಸ್ ಆತಿಥ್ಯ, ನಾವು ಇದನ್ನು ಸಾಧಿಸುತ್ತೇವೆ!
ಚಂದ್ರನ ಮೇಲೆ ಭಾರತೀಯ, ನಾವು ಇದನ್ನು ಸಾಧಿಸುತ್ತೇವೆ!
ಹೌದು, ನಾವು ಇದನ್ನು ಸಾಧಿಸುತ್ತೇವೆ! ನಾವು ಇದನ್ನು ಸಾಧಿಸುತ್ತೇವೆ!
ಅಭಿವೃದ್ಧಿ ಹೊಂದಿದ ತಮಿಳುನಾಡು, ನಾವು ಇದನ್ನು ಸಾಧಿಸುತ್ತೇವೆ!
ಅಭಿವೃದ್ಧಿ ಹೊಂದಿದ ತಮಿಳುನಾಡು, ನಾವು ಇದನ್ನು ಸಾಧಿಸುತ್ತೇವೆ!
ಅಭಿವೃದ್ಧಿ ಹೊಂದಿದ ಭಾರತ, ನಾವು ಇದನ್ನು ಸಾಧಿಸುತ್ತೇವೆ!
ತುಂಬು ಧನ್ಯವಾದಗಳು.
ನಂಡ್ರಿ, ವಣಕ್ಕಮ್! (ಧನ್ಯವಾದಗಳು, ನಮಸ್ಕಾರ!)
ಹಕ್ಕು ನಿರಾಕರಣೆ: ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಕನ್ನಡ ಅನುವಾ ಇದಾಗಿದೆ. ಅವರು ಮೂಲತಃ ಹಿಂದಿ ಭಾಷೆಯಲ್ಲಿ ಭಾಷಣ ಮಾಡಿದ್ದಾರೆ.
*****
Golden Jubilee celebrations of Jaigopal Garodia Hindu Vidyalaya in Chennai... The energy of our youth inspires great faith in India's future. https://t.co/FoyiqVrShY
— Narendra Modi (@narendramodi) October 11, 2026
आज का युवा ‘विकसित भारत’ के vision की ताकत बनना चाहता है। विकसित भारत के लिए जो नए ideas चाहिए... जो नए solutions चाहिए... उनसे भारत ही नहीं, विश्व का भविष्य भी तय होगा: PM @narendramodi
— PMO India (@PMOIndia) October 11, 2026
आज भारत में जो infinite opportunities हैं... मैं चाहता हूं कि हर युवा अपने भविष्य को उसी बड़े canvas पर देखे। Because, this is your time. This is your opportunity: PM @narendramodi
— PMO India (@PMOIndia) October 11, 2026
@narendramodi तिरुक्कुरल उन सभी लोगों के लिए एक अद्भुत मार्गदर्शक है, जो जीवन भर कुछ नया सीखते रहना चाहते हैं। तिरुवल्लुवर जी अपने एक बहुत प्रसिद्ध कुरल में हमें सिखाते हैं कि कुछ सीखने के साथ ही उसे अपने जीवन में अपनाना भी आवश्यक है: PM @narendramodi
— PMO India (@PMOIndia) October 11, 2026
मैं महान संत तिरुवल्लुवर जी को भी याद करुंगा। उनकी शिक्षाएं आप सभी स्टूडेंट्स के लिए बहुत अहम हैं। हाल ही में मुझे रूस के राष्ट्रपति पुतिन को तिरुक्कुरल का रूसी अनुवाद भेंट करने का अवसर मिला था: PM @narendramodi
— PMO India (@PMOIndia) October 11, 2026
भारत 2030 Commonwealth Games की मेजबानी की तैयारी कर रहा है। हम 2036 Olympics की मेजबानी का सपना भी लेकर आगे बढ़ रहे हैं: PM @narendramodi
— PMO India (@PMOIndia) October 11, 2026