ಪಿಎಂಇಂಡಿಯಾ
ಸೋದರ ಸೋದರಿಯರೆ, ಇಂದು ಸಾಂಥಾಲ್ ಮಣ್ಣಿನ ಮೇಲೆ ಕಾಲಿಡುವ ಅದೃಷ್ಟ ನನ್ನದಾಗಿದೆ. ಭಗವಾನ್ ಬಿರ್ಸಾ ಮುಂಡಾ, ಚಾಂದ್ ಭೈರವ್, ನಿಲಾಂಬರ್-ಪಿತಾಂಬರ್ ನಂತಹ ವೀರಪುತ್ರರ ಭೂಮಿಯಿದು. ಈ ಮಣ್ಣಿಗೆ ನಾನು ನಮಿಸುತ್ತೇನೆ. ಈ ಮಣ್ಣಿನ ವೀರ ನಾಗರಿಕರನ್ನು ಸಹ ನಾನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ. ಇಂದು ಝಾರ್ಖಂಡ್ ನಲ್ಲಿ ಸಾಹಿಬ್ ಗಂಜ್ ನೆಲದಲ್ಲಿ ಒಂದೇ ಸಲಕ್ಕೆ ಸಪ್ತಧಾರಾ ಪ್ರಗತಿಯ ಯೋಜನೆಗಳು ಆರಂಭವಾಗುತ್ತಿವೆ. ಈ ಸಾಂಥಾಲ್ ಪ್ರದೇಶದಲ್ಲಿ ಇಷ್ಟು ದೊಡ್ಡ ಅಭಿವೃದ್ಧಿಯ ಯೋಜನೆಗಳು ಒಂದೇ ಕಾರ್ಯಕ್ರಮದಲ್ಲಿ ಆರಂಭವಾಗುತ್ತಿರುವುದು ಬಹುಶಃ ಸ್ವಾತಂತ್ರದ ನಂತರ ಈ ಕ್ಷೇತ್ರಕ್ಕಾಗಿ ಮೊದಲ ಬಾರಿಗೆ ಇಟ್ಟ ಪ್ರಗತಿಯ ಹೆಜ್ಜೆಗಳು ಎಂದು ನಾನು ಭಾವಿಸುತ್ತೇನೆ. ಈ ಇಡೀ ಸಾಂಥಾಲ್ ಪ್ರದೇಶಕ್ಕೆ ಒಳ್ಳೆಯದು ಮಾಡಬೇಕೆಂದರೆ ಇಲ್ಲಿಯ ಸಮಸ್ಯೆಗಳಿಗೆ ಪರಿಹಾರ ಕೊಡುವುದು, ಇಲ್ಲಿಯ ಕಡು ಬಡವರಾದ ಆದಿವಾಸಿ ಸೋದರ ಸೋದರಿಯರ ಜೀವನದಲ್ಲಿ ಬದಲಾವಣೆ ತರುವುದು. ಇದಕ್ಕಿರುವ ಒಳ್ಳೆಯ ಉಪಾಯವೆಂದರೆ ಅಭಿವೃದ್ಧಿ. ನಾವು ಎಷ್ಟು ವೇಗವಾಗಿ ಇಲ್ಲಿ ಅಭಿವೃದ್ಧಿ ಮಾಡುತ್ತೇವೊ ಅಷ್ಟು ಬೇಗ ಇಲ್ಲಿನ ಜನಸಾಮಾನ್ಯರ ಜೀವನದಲ್ಲಿ ಬದಲಾವಣೆ ತರುವಲ್ಲಿ ಯಶಸ್ವಿಯಾಗುತ್ತೇವೆ.
ಈ ದಿನ ಬಹಳ ಮಹತ್ವಪೂರ್ಣ ಕಾರ್ಯಕ್ರಮವು ಝಾರ್ಖಂಡ್ ಮತ್ತು ಬಿಹಾರವನ್ನು ಒಂದುಗೂಡಿಸುತ್ತಿದೆ. ಗಂಗಾ ನದಿಯ ಮೇಲೆ ಎರಡೂ ರಾಜ್ಯಗಳನ್ನು ಜೋಡಿಸುವ ಎಲ್ಲಕ್ಕಿಂತ ದೊಡ್ಡ ಸೇತುವೆಯನ್ನು 2200 ಕೋಟಿಗಿಂತ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಸೇತುವೆ ಎರಡು ರಾಜ್ಯಗಳನ್ನು ಜೋಡಿಸುವುದರ ಜೊತೆಗೆ ಪ್ರಗತಿಯ ಬಾಗಿಲನ್ನು ತೆರೆಯುತ್ತದೆ. ಇಲ್ಲಿಂದ ಪೂರ್ವ ಭಾರತದೊಂದಿಗೆ ನೇರವಾಗಿ ಸಂಪರ್ಕ ಹೊಂದುವ ಅವಕಾಶ ನಿಮಗೆ ಈ ಸೇತುವೆಯಿಂದ ದೊರೆಯುತ್ತದೆ.
ಬಿಹಾರ ಮತ್ತು ಝಾರ್ಖಂಡ್ ಜನತೆಯನ್ನು ನಾನು ಅಭಿನಂದಿಸುತ್ತೇನೆ. ಈ ಒಂದು ಮಹತ್ವದ ಸೇತುವೆಯ ಶಂಕುಸ್ಥಾಪನೆ ಇಂದು ನೆರವೇರುತ್ತಿದೆ. ನಮ್ಮ ಸಾರಿಗೆ ಸಚಿವರಾದ ಶ್ರೀ ನಿತಿನ್ ಗಡ್ಕರಿಯವರು ನಿಗದಿತ ಸಮಯದೊಳಗೆ ಕೆಲಸ ಮುಗಿಸುವುದರಲ್ಲಿ ಬಹಳ ನಿಸ್ಸೀಮರು. ಆದ್ದರಿಂದ ಈ ಸೇತುವೆ ನಿರ್ಮಾಣ ಪೂರ್ತಿಯಾಗಿ ಯಾವ ದಿನಾಂಕದಂದು ಉದ್ಘಾಟನೆಯಾಗಬೇಕೆಂದು ನಿರ್ಧಾರವಾಗುತ್ತದೋ ಅದೇ ದಿನದೊಳಗೆ ಕೆಲಸ ಮುಗಿಸುತ್ತಾರೆ ಎಂದು ನನಗೆ ಸಂಪೂರ್ಣ ನಂಬಿಕೆಯಿದೆ. ಇದು ಮಂದಗತಿಯಲ್ಲಿ ನಡೆಯುವ ಕೆಲಸವಲ್ಲ. ಈ ಪ್ರದೇಶದ ಅದೆಷ್ಟು ಯುವಕರಿಗೆ ಕೆಲಸ ಸಿಗುತ್ತದೆ, ಇಲ್ಲಿ ಕೆಲಸ ಮಾಡಿ ಸಾಯಂಕಾಲ ಮನೆಗೆ ಹಿಂತಿರುಗುವುದು ನಿಮಗೆ ಅದೆಷ್ಟು ಸುಲಭ ಎಂದು ಕಲ್ಪನೆ ಮಾಡಿಕೊಳ್ಳಿ. ಯುವಜನರಿಗೆ ಉದ್ಯೋಗವೂ ಸಿಗುತ್ತದೆ, ಜೊತೆಗೆ ಅವರು ವೃತ್ತಿ ಕೌಶಲವನ್ನು ಪಡೆದುಕೊಳ್ಳುತ್ತಾರೆ. ಒಂದು ಹೊಸ ಕೌಶಲ, ಒಂದು ಹೊಸ ತರಬೇತಿಯು ಸತತವಾಗಿ ಎರಡೂವರೆ ವರ್ಷಗಳವರೆಗೆ ಈ ಒಂದು ಪ್ರಾಜೆಕ್ಟ್ ನಲ್ಲಿ ತೊಡಗಿಕೊಳ್ಳುವುದರಿಂದ ಯಾವುದೇ ಇಂಜಿನಿಯರ್ ಗಿಂತಲೂ ಚೆನ್ನಾಗಿ ಕೆಲಸ ನಿಭಾಯಿಸುವ ಶಕ್ತಿ ನಿಮಗೆ ಬರುತ್ತದೆ. ಈ ಪ್ರದೇಶದಲ್ಲಿ ಈ ಯೋಜನೆಯಿಂದಾಗಿ ಸಾವಿರಾರು ಕುಟುಂಬಗಳ ಯುವಜನರಿಗೆ ಇಂತಹ ಶಕ್ತಿ ಬರುತ್ತದೆ. ಮುಂಬರುವ ದಿನಗಳಲ್ಲಿ ಝಾರ್ಖಂಡ್ ಆಗಲಿ, ಬಿಹಾರವಾಗಲಿ, ಬೇರಾವುದೇ ಭಾಗವಾಗಲಿ ಅಥವಾ ಭಾರತವಾಗಲಿ, ಇಂತಹ ಯೋಜನೆಗಳು ಇಲ್ಲಿಯ ಯುವಜನರ ಮೊದಲ ಆಯ್ಕೆಯಾಗುತ್ತದೆ. ಇವರಿಗೆ ಹೆಚ್ಚು ಸಂಬಳ ಕೊಟ್ಟು ಅಲ್ಲಿಗೆಲ್ಲ ಕರಸಿಕೊಳ್ಳಬಹುದು. ಈ ಸೇತುವೆ ನಿರ್ಮಾಣ ಯೋಜನೆಯಿಂದ ನಿಮಗೆ ಈ ಶಕ್ತಿ ದೊರಕುತ್ತದೆ. ಈ ಇಡೀ ಯೋಜನೆಯಲ್ಲಿ ಮಾನವ ಶಕ್ತಿಯನ್ನು ಒಗ್ಗೂಡಿಸಿ ವೃತ್ತಿ ಕೌಶಲವನ್ನು ಮಾಡಬೇಕಿದೆ.
ನಾನು ಇಲ್ಲಿನ ಯುವಜನರಿಗೆ ಶುಭಾಶಯಗಳನ್ನು ಕೋರುತ್ತೇನೆ. ನಿಮ್ಮ ಅಂಗಳದಲ್ಲಿ ಇದು ಒಳ್ಳೆಯ ಅವಕಾಶವಾಗಿದೆ. ನೀವು ಸಹ ಶ್ರಮ ವಹಿಸಿ ದುಡಿಯುತ್ತೇನೆ ಮತ್ತು ಕೌಶಲವನ್ನು ಹೆಚ್ಚಿಸಿಕೊಳ್ಳುತ್ತೇನೆ ಎಂದು ಮನದಲ್ಲೇ ಸಂಕಲ್ಪ ಮಾಡಿಕೊಳ್ಳಿ. ಒಂದು ಸಲ ನೀವು ಸಾಮರ್ಥ್ಯ ಹೆಚ್ಚಿಸಿಕೊಂಡರೆ ವಿಶ್ವದ ಎಲ್ಲೆಡೆಯಿಂದ ಇಲ್ಲಿನ ಯುವಜನರು ಅನುಭವಿಗಳು, ನಮಗೆ ಅವರ ಅಗತ್ಯವಿದೆ ಎಂದು ಕೇಳಬಹುದು. ಇಂತಹ ಬದಲಾವಣೆ ಬರಲಿದೆ. ಈ ದಿನ ಇಲ್ಲಿ ಮತ್ತೊಂದು ಯೋಜನೆಯನ್ನು ಉದ್ಘಾಟನೆ ಮಾಡುವ ಅವಕಾಶ ನನಗೆ ಸಿಕ್ಕಿದೆ. ಸಾಹಬ್ ಗಂಜ್ ನಿಂದ ಗೋವಿಂದಪುರದವರೆಗೆ ರಸ್ತೆ ನಿರ್ಮಾಣವಾಗಿದ್ದು ಇದನ್ನು ಉದ್ಘಾಟಿಸಬೇಕಿದೆ. ಮೊದಲು ಇಲ್ಲಿಂದ ಗೋವಿಂದಪುರಕ್ಕೆ ಹೋಗಲು 10 ಗಂಟೆ, 12 ಗಂಟೆ, 14 ಗಂಟೆ ಹಿಡಿಯುತ್ತಿತ್ತು. ಈಗ ಈ ಹೊಸ ರಸ್ತೆ ನಿರ್ಮಾಣವಾಗಿ ಕೇವಲ 5 ಗಂಟೆ, 7 ಗಂಟೆಯಲ್ಲಿ ಗೋವಿಂದಪುರವನ್ನು ತಲುಪಬಹುದು. ನಿಮ್ಮ ಜೀವನದಲ್ಲಿ ಈ ರಸ್ತೆಯಿಂದಾಗಿ ಎಷ್ಟು ಬದಲಾವಣೆ ಬರುತ್ತಿದೆ. ಇದು ಕೇವಲ ರಸ್ತೆಯಲ್ಲ, ಇಡೀ ಸಾಂಥಾಲ್ ಪ್ರದೇಶದ ಮಧ್ಯದಲ್ಲಿ ಹಾದು ಹೋಗುವ ರಸ್ತೆಯಲ್ಲ, ಈ ರಸ್ತೆ ಇಡೀ ಸಾಂಥಾಲ್ ಭಾಗದ ಕಡು ಬಡವರ ಜೀವನದಲ್ಲಿ ಅಭಿವೃದ್ಧಿಯ ಹೊಸ ಹಾದಿಯನ್ನು ತೆರೆಯುತ್ತಿದೆ. ಪ್ರಗತಿಯ ಹೊಸ ದಿಕ್ಕು ತೆರೆಯುತ್ತಿದೆ. ಅಭಿವೃದ್ಧಿಯ ಹೊಸ ಗುರಿಯನ್ನು ಹತ್ತಿರಕ್ಕೆ ತಂದು ನಿಲ್ಲಿಸಿದೆ. ಆದ್ದರಿಂದ ಪ್ರಯಾಣಕ್ಕೆ ಅನುಕೂಲವಾಗುವಂತಹ ಬಹಳಷ್ಟು ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಆದರೆ ಈ ರಸ್ತೆ ಆ ರಸ್ತೆಗಳಂತಲ್ಲ, ಕೇವಲ ಹೋಗುವ ಬರುವುದಕ್ಕೆ ಇರುವುದಲ್ಲ. ಇದು ಪ್ರಗತಿಯತ್ತ ಮುಂದೆ ಸಾಗುವ ರಸ್ತೆಯಾಗುತ್ತಿದೆ. ಇಡೀ ಸಾಂಥಾಲ್ ಭಾಗದ ಎಲ್ಲ ಜನರನ್ನು ಬದಲಿಸುತ್ತದೆ. ಇದರಲ್ಲಿ ನನಗೆ ಸಂಪೂರ್ಣ ನಂಬಿಕೆಯಿದೆ.
ಸೋದರ ಸೋದರಿಯರೇ, ನಾವು ನದಿಯನ್ನು ತಾಯಿ ಎನ್ನುತ್ತೇವೆ. ತಾಯಿ ನಮಗೆ ಎಲ್ಲವೂ ಆಗಿದ್ದಾಳೆ. ಆದರೆ ಕೆಲವೊಮ್ಮೆ ಅಳದಿದ್ದರೆ ತಾಯಿಯೂ ಹಾಲುಣಿಸುವುದಿಲ್ಲ ಎಂಬ ಗಾದೆಯನ್ನು ಸಹ ಕೇಳಿದ್ದೇವೆ. ಗಂಗಾ ಮಾತೆ ಶತಮಾನಗಳಿಂದ ಈ ಇಡೀ ಪ್ರದೇಶವನ್ನು ಸದಾ ಹಸಿರಾಗಿಸುತ್ತಿದ್ದಾಳೆ. ಜೀವನದಿಯ ರೂಪದಲ್ಲಿ ಹರಿಯುತ್ತಿದ್ದಾಳೆ. ಆದರೆ ಬದಲಾದ ವಿಶ್ವದಲ್ಲಿ ಈ ಗಂಗಾ ಮಾತೆ ಸಹ ನಮ್ಮ ಜೀವನಕ್ಕೆ ಹೊಸ ಚೈತನ್ಯ ನೀಡಬಲ್ಲಳು. 21ನೆಯ ಶತಮಾನದಲ್ಲಿ ಗಂಗಾ ಮಾತೆಯು ಈ ಝಾರ್ಖಂಡ್ ಪ್ರಪಂಚದಿಂದ ನೇರವಾಗಿ ಇಡೀ ವಿಶ್ವವನ್ನು ಜೋಡಿಸುವ ದಿಕ್ಕಿನಲ್ಲಿ ನಮ್ಮನ್ನು ಮುಂದೆ ಸಾಗಲಿ ಎಂದು ಬಯಸುತ್ತಾಳೆ. ನದಿತೀರದ ಪಟ್ಟಣಗಳು, ರಾಜ್ಯಗಳು ತಂತಾನೇ ಪ್ರಪಂಚದೊಂದಿಗೆ ಸಂಪರ್ಕ ಹೊಂದುತ್ತವೆ. ಆದರೆ ಸುತ್ತಲೂ ಭೂಮಿಯೇ ಇರುವ ಝಾರ್ಖಂಡ್ ನಂತಹ ರಾಜ್ಯಕ್ಕೆ ಹತ್ತಿರದಲ್ಲಿ ಯಾವುದೇ ಸಮುದ್ರವಿಲ್ಲ. ಝಾರ್ಖಂಡ್ ಸಹ ಪ್ರಪಂಚದ ನಿಕಟ ಸಂಪರ್ಕ ಹೊಂದಬಹುದೇ? ಇಂತಹದೊಂದು ಯೋಜನೆಯಲ್ಲಿ ನಮ್ಮ ಶ್ರೀ ನಿತಿನ್ ಗಡ್ಕರಿಯವರು ಬಹಳ ಮನಸ್ಸಿಟ್ಟು ಕೆಲಸ ಮಾಡುತ್ತಿದ್ದಾರೆ. ಅವರಿಂದ ಎಲ್ಲಕ್ಕಿಂತ ದೊಡ್ಡ ಕೆಲಸ ಆಗುತ್ತಿದೆ. ಈ ಯೋಜನೆ ಪೂರ್ಣವಾದ ನಂತರ ಝಾರ್ಖಂಡ್ ನೇರವಾಗಿ ಇಡೀ ಪ್ರಪಂಚದೊಂದಿಗೆ ಸಂಪರ್ಕ ಹೊಂದುವ ಶಕ್ತಿ ಪಡೆಯುತ್ತಿದೆ. ಗಂಗಾ ನದಿಯಲ್ಲಿ ನಿರ್ಮಿಸಲಾಗುತ್ತಿರುವ ಮಲ್ಟಿ ಮಾಡಲ್ ಟರ್ಮಿನಲ್ ಎಂಬ ಹೆಸರಿನ ಈ ಯೋಜನೆಯ ಶಂಕುಸ್ಥಾಪನೆ ಇಂದು ನೆರವೇರುತ್ತಿದೆ. ಇಲ್ಲಿಂದ ಬಂಗಾಳ ಕೊಲ್ಲಿಯವರೆಗೆ ಹಡಗುಗಳು ಹೋಗುತ್ತವೆ. ಅಂದರೆ ಗಂಗಾ ನದಿಯಲ್ಲಿ ಹಡಗುಗಳು ಸಂಚರಿಸುತ್ತವೆ, ಸರಕು ಸಾಗಾಣಿಕೆಯಾಗುತ್ತದೆ. ಇಲ್ಲಿಂದ ನೇರವಾಗಿ ಬಂಗಾಳ ಕೊಲ್ಲಿ ತಲುಪಿ ಅಲ್ಲಿಂದ ಸಮುದ್ರ ಮಾರ್ಗದ ಮೂಲಕ ನೇರವಾಗಿ ಇಡೀ ಪ್ರಪಂಚವನ್ನು ತಲುಪಲು ಸಾಧ್ಯವಾಗುತ್ತದೆ. ವ್ಯಾಪಾರ, ವಿಶ್ವ ವ್ಯಾಪಾರ ಮಾಡಲು ಇಂತಹ ಅನುಕೂಲಗಳು ದೊರೆತರೆ ಪ್ರಪಂಚದ ವ್ಯಾಪಾರ ನಕ್ಷೆಯಲ್ಲಿ ಝಾರ್ಖಂಡ್ ಹೆಸರು ಬರುತ್ತದೆ. ಇಲ್ಲಿಯ ಸ್ಟೋನ್ ಚಿಪ್ಸ್ ಆಗಿರಬಹುದು, ಕಲ್ಲಿದ್ದಲಾಗಿರಬಹುದು ಅಥವಾ ಬೇರಾವುದೇ ಉತ್ಪನ್ನವಿರಬಹುದು. ವಿಶ್ವ ಮಾರುಕಟ್ಟೆಯನ್ನು ನೇರವಾಗಿ ತಲುಪಬಹುದು. ಸಾಮರ್ಥ್ಯ ಇದಿಷ್ಟೇ ಅಲ್ಲ, ಈ ಯೋಜನೆ ಪೂರ್ಣಗೊಂಡ ನಂತರ ಇಲ್ಲಿನ ಕಲ್ಲಿದ್ದಲನ್ನು ಪಶ್ಚಿಮ ಭಾರತಕ್ಕೆ ತೆಗೆದುಕೊಂಡು ಹೋಗಲು ರಸ್ತೆ ಅಥವಾ ರೈಲು ಮಾರ್ಗವೇ ಬೇಕೆಂದಿಲ್ಲ. ಬಂಗಾಳ ಕೊಲ್ಲಿಯಿಂದ ಸಮುದ್ರ ಮಾರ್ಗದ ಮೂಲಕ ಆ ಕಡೆ ತೆಗೆದುಕೊಂಡು ಹೋದರೆ ಖರ್ಚು ಕಡಿಮೆಯಾಗುತ್ತದೆ. ಈ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಆರ್ಥಿಕ ಶಕ್ತಿ ಹೆಚ್ಚಿಸುವಲ್ಲಿ ನೆರವಾಗುತ್ತದೆ.
ಸೋದರ ಸೋದರಿಯರೆ, ಮೂಲ ಸೌಕರ್ಯಗಳನ್ನು ಒದಗಿಸುವ ವಿಷಯದಲ್ಲಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿಗಳಾಗಿದ್ದಾಗ ನೂರಾರು ಕೆಲಸಗಳನ್ನು ಮಾಡಿದ್ದರು. ಅವುಗಳಲ್ಲಿ ನಮ್ಮ ದೇಶದ ಹೆದ್ದಾರಿಗೆ ಸಂಬಂಧಿಸಿದಂತೆ ಎರಡು ಮಹತ್ವದ ಕೊಡುಗೆಗಳ ಬಗ್ಗೆ ಹೇಳುತ್ತೇನೆ. ಮೊದಲನೆಯದಾಗಿ ಅವರು ಇಡೀ ಭಾರತವನ್ನು ಸುವರ್ಣ ಚತುಷ್ಪಥದಿಂದ ಒಂದುಗೂಡಿಸಿ ಮೂಲಭೂತ ಸೌಕರ್ಯಗಳನ್ನು ಆಧುನೀಕರಣಗೊಳಿಸುವ ಪ್ರಯತ್ನವನ್ನು ಯಶಸ್ವಿಯಾಗಿ ಮಾಡಿದರು. ಎರಡನೆಯದಾಗಿ ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಎಂಬ ಯೋಜನೆಯಡಿ ಭಾರತದ ಹಳ್ಳಿಹಳ್ಳಿಗಳಿಗೆ ಮುಖ್ಯರಸ್ತೆಯ ಮೂಲಕ ಸಂಪರ್ಕ ಒದಗಿಸಲು ಗ್ರಾಮೀಣ ರಸ್ತೆಗಳನ್ನು ನಿರ್ಮಿಸಿದರು. ಅವರು ಪ್ರಧಾನ ಮಂತ್ರಿಯಾಗಿದ್ದ ಕಾಲದಲ್ಲಿ ಬಹಳಷ್ಟು ಕೆಲಸಗಳಾದವು. ನಂತರ ಬಂದ ಸರ್ಕಾರಗಳು ಈ ಯೋಜನೆಯನ್ನು ಮುಂದುವರಿಸಿಕೊಂಡು ಬರುತ್ತಿವೆ. ಇದು ಶ್ರೀ ವಾಜಪೇಯಿ ಅವರು ನೀಡಿದ ಎರಡನೆಯ ಕೊಡುಗೆಯಾಗಿದೆ.
ಸೋದರ ಸೋದರಿಯರೆ, ಮೂಲ ಸೌಕರ್ಯಗಳನ್ನು ಒದಗಿಸುವ ವಿಷಯ ಬಂದ ಕೂಡಲೇ ರಸ್ತೆಗಳನ್ನು ನಿರ್ಮಿಸಿರುವುದರ ಕುರಿತು ನಾವು ಚರ್ಚೆ ನಡೆಸಿದೆವು. ಹೆದ್ದಾರಿಗಳನ್ನು ನಿರ್ಮಿಸಿದೆವು. ಇದಲ್ಲದೆ ವಿಮಾನ ಸಂಪರ್ಕ ನೀಡುವ ಸಲುವಾಗಿ ವಿಮಾನ ನಿಲ್ದಾಣಗಳನ್ನು ನಿರ್ಮಿಸಿದೆವು. ರೈಲು ಮಾರ್ಗವನ್ನು ವಿಸ್ತರಿಸುವ ಕಾರ್ಯ ಕೈಗೊಂಡೆವು. ಆದರೆ ಒಂದು ಕ್ಷೇತ್ರ ನಮಗೆ ಸವಾಲಾಗಿ ಪರಿಣಮಿಸಿತ್ತು. ನಮ್ಮ ಈಗಿನ ಸರ್ಕಾರವು ಶ್ರೀ ನಿತಿನ್ ಗಡ್ಕರಿಅವರ ನೇತೃತ್ವದಲ್ಲಿ ಒಂದು ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಂಡಿತು. ನಮ್ಮ ದೇಶದಲ್ಲಿ ಸದಾಕಾಲ ತುಂಬಿ ಹರಿಯುವ ಆಳವಾದ ನದಿಗಳನ್ನು ಸಾರಿಗೆ ಸಂಪರ್ಕಕ್ಕೆ ಬಳಸಿಕೊಂಡು ಸರಕು ಸಾಗಿಸುವ ಅಭಿಯಾನವನ್ನು ಕೈಗೊಳ್ಳಲಾಯಿತು. ಇದರ ಅಂಗವಾಗಿ ಬನಾರಸ್ಸಿನಿಂದ ಹಲ್ದಿಯಾ ವರೆಗೆ ಸರಕು ಸಾಗಣೆಯ ಹಡಗು ಚಲಿಸುವುದಕ್ಕೆ ಬೇಕಾದ ಎಲ್ಲ ವ್ಯವಸ್ಥೆಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಝಾರ್ಖಂಡ್ ಅನ್ನು ಬಂಗಾಳ ಕೊಲ್ಲಿ ಜತೆಗೆ ಸಂಪರ್ಕಿಸಲಾಗುತ್ತಿದೆ. ಇಲ್ಲಿಂದ ಹಡಗುಗಳು ಹೋಗಲಿವೆ. ನದಿಯಲ್ಲಿ ದೋಣಿಗಳನ್ನು ನಾವು ನೋಡಿದ್ದೇವೆ. ಇನ್ನು ಮುಂದೆ ಸಾವಿರಾರು ಟನ್ ಗಳನ್ನು ಹೊತ್ತ ಹಡಗುಗಳು ಚಲಿಸುತ್ತವೆ. ಹೀಗೆ ಅಭಿವೃದ್ಧಿಯ ಹೊಸ ಕ್ಷೇತ್ರ ನಮ್ಮ ಮುಂದೆ ಎದ್ದು ಬರುತ್ತಿರುವುದನ್ನು ಕಾಣಬಹುದು. ಹೆದ್ದಾರಿ ಇದೆ, ವಾಯುಮಾರ್ಗ ಇದೆ, ರೈಲುಮಾರ್ಗ ಇದೆ. ಈಗ ಮುಂದೆ ಇರುವುದು ಜಲಮಾರ್ಗ. ಈ ಜಲಮಾರ್ಗದ ಶಂಕುಸ್ಥಾಪನೆ ಇಂದು ನೆರವೇರುತ್ತಿದೆ. ಸಾವಿರಾರು ಕೋಟಿಗಳ ಖರ್ಚು ಬರಲಿದೆ. ಭಾರತದಲ್ಲಿ ಇಂತಹ ಅಭಿಯಾನವನ್ನು ಹೊಸ ಉತ್ಸಾಹದಿಂದ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಅರ್ಥಶಾಸ್ತ್ರಜ್ಞರು ಈ ವಿಷಯವಾಗಿ ಬರೆಯಬಹುದು. ಭಾರತವು ಪರಿಸರಸ್ನೇಹಿ ಮೂಲಸೌಕರ್ಯಗಳನ್ನು ನೀಡಲು ಮುಂದಾಗುತ್ತಿದೆ ಎಂದು ಈ ವಿಷಯವಾಗಿ ಚರ್ಚಿಸಬಹುದು. ಪರಿಸರದ ರಕ್ಷಣೆಯೂ ಆಗಬೇಕು, ಪ್ರಗತಿಯೂ ಆಗಬೇಕು, ನದಿಯಲ್ಲಿ ಹಡಗು ಸಂಚಾರವೂ ಆಗಬೇಕು. ಇದಕ್ಕಾಗಿ ಬಹಳ ವೇಗವಾಗಿ ಕೆಲಸ ನಡೆಯಬೇಕೆಂದು
ಶ್ರೀ ನಿತಿನ್ ಗಡ್ಕರಿ ಅವರ ಇಲಾಖೆ ಕೆಲಸ ಮಾಡುತ್ತಿದೆ. ತಾಯಿ ಗಂಗೆ ನಮಗೆ ಎಲ್ಲವನ್ನೂ ಕೊಡುತ್ತಿದ್ದಾಳೆ. ಈಗ ಗಂಗಾ ತಾಯಿಯ ಮೂಲಕ ಹೊಸದೊಂದು ಅಭಿವೃದ್ಧಿಯನ್ನು ನಾವು ಮಾಡುತ್ತಿದ್ದೇವೆ. ಇದಕ್ಕಾಗಿ ನಾವು ಗಂಗಾ ಮಾತೆಗೆ ಎಷ್ಟು ಕೃತಜ್ಞರಾಗಿದ್ದರೂ ಸಾಲದು.
ಸೋದರ ಸೋದರಿಯರೆ, ಝಾರ್ಖಂಡ್ ಮುಖ್ಯಮಂತ್ರಿ ಶ್ರೀ ರಘುವರ ದಾಸ್ ಅವರು ಈ ಸಾಂಥಾಲ್ ಭಾಗದಲ್ಲಿ ರೈತರು ಪಶುಸಂಗೋಪನೆಯಲ್ಲಿ ತೊಡಗಲಿ ಎಂದು ಮಹತ್ವದ ಕ್ರಮಗಳನ್ನು ಕೈಗೊಂಡಿದ್ದಾರೆ. ಅಂದರೆ ಡೈರಿ ಉದ್ಯಮ. ರೈತ ಪಶುಸಂಗೋಪನೆ ಮಾಡಿದರೆ ಒಂದು ತನ್ನ ಮನೆಗೆ ಬೇಕಾಗುವಷ್ಟು ಹಾಲು ದೊರಕುತ್ತದೆ ಅಥವಾ ಹಳ್ಳಿಯಲ್ಲಿ ನೆರೆಹೊರೆಯವರಿಗೆ ಸ್ವಲ್ಪ ಕೊಡುತ್ತಾನೆ. ಆದರೆ ಇದನ್ನು ವ್ಯಾಪಾರದ ದೃಷ್ಟಿಯಿಂದ ನೋಡಬೇಕೆನ್ನುವುದು ಅವನ ತಲೆಯಲ್ಲಿರುವುದಿಲ್ಲ. ಡೈರಿ ಸ್ಥಾಪನೆಯಾದರೆ ತೀರಾ ಬಡತನದಲ್ಲಿರುವ ರೈತರು ಪಶುಪಾಲನೆ ಮೂಲಕ ಹಾಲು ಪಡೆಯಬಹುದು. ಅದರ ಮೌಲ್ಯವರ್ಧನೆ ಮಾಡಬಹುದು. ಇದರಿಂದ ಹಾಲು ಉತ್ಪನ್ನಗಳ ಮಾರುಕಟ್ಟೆಯ ಒಂದು ದೊಡ್ಡ ಸರಪಳಿ ಸೃಷ್ಟಿಯಾಗುತ್ತದೆ.
ನಾನು ಗುಜರಾತ್ ನೆಲದಿಂದ ಬಂದಿರುವುದು. ಅಲ್ಲಿ ಅಮೂಲ್ ಹೆಸರು ಮನೆಮಾತಾಗಿದೆ. ಇಡೀ ಭಾರತದಲ್ಲಿ ಅಮೂಲ್ ತಲುಪದೆ ಇರುವ ಜಾಗವಿಲ್ಲ. ತುಂಬಾ ವರ್ಷಗಳ ಹಿಂದೆ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರ ಮಾರ್ಗದರ್ಶನದಲ್ಲಿ ಒಂದು ಸಣ್ಣ ಸಹಕಾರಿ ಸಂಘವಾಗಿ ಅಮೂಲ್ ಆರಂಭವಾಯಿತು. ಕೆಲವು ರೈತರು ಒಗ್ಗಟ್ಟಾಗಿ ಈ ಕೆಲಸ ಆರಂಭಿಸಿದರು. ನೋಡನೋಡುತ್ತಾ ಅದು ಬೆಳೆಯುತ್ತಾ ಹೋಯಿತು. ಇಂದು ಅಮೂಲ್ ವಿಶ್ವಪ್ರಸಿದ್ಧಿಯಾಗಿದೆ. ಇಂದು ಝಾರ್ಖಂಡ್ ನಲ್ಲಿ ರಘುವರ್ ದಾಸ್ ಅವರು ಈ ಸಾಂಥಾಲ್ ಭಾಗದ ಬಡ ರೈತರಿಗೆ ಪಶು ಸಂಗೋಪನೆ ಅನ್ನು ಪ್ರೋತ್ಸಾಹಿಸಲು ಹಾಲಿನ ಡೈರಿಯ ಶಂಕುಸ್ಥಾಪನೆ ಮಾಡುತ್ತಿದ್ದಾರೆ. ಈ ಡೈರಿಯು ಮುಂದಿನ ದಿನಗಳಲ್ಲಿ ಲಕ್ಷಾಂತರ ಕುಟುಂಬಗಳಿಂದ ಪಶುಗಳ ಹಾಲು ಖರೀದಿಸಲಿದೆ. ಹಾಲಿನ ಸಂಸ್ಕರಣೆ, ಮಾರುಕಟ್ಟೆ, ಪಶುಗಳ ಬ್ರೀಡಿಂಗ್ ಸೆಂಟರ್ ವ್ಯವಸ್ಥೆ ಮಾಡಲಿದೆ. ಇದರಿಂದ ರೈತನಿಗೆ ಸರಿಯಾದ ಬೆಲೆ ದೊರಕುತ್ತದೆ. ಪ್ರತಿದಿನ ಆದಾಯ ಸಿಗುವ ನಿಟ್ಟಿನಲ್ಲಿ ಕೆಲಸ ಮಾಡಲು ಅವರು ನಿರ್ಧರಿಸಿದ್ದಾರೆ. ನನ್ನ ಕಡೆಯಿಂದ ಅವರಿಗೆ ಹಾರೈಕೆಗಳು.
ಡೈರಿ ಉದ್ಯಮದಲ್ಲಿ ಗುಜರಾತ್ ಗೆ ಸಾಕಷ್ಟು ಅನುಭವವಿದೆ. ಝಾರ್ಖಂಡ್ ಗೆ ಗುಜರಾತ್ ನ ಸಹಾಯ ಬೇಕೆಂದರೆ ಕೇಳಬಹುದು. ನಾನು ಅವರಿಗೆ ಹೇಳಿ ನಿಮಗೆ ಸಹಾಯ ಮಾಡಲು ಕಳಿಸುತ್ತೇನೆ. ಆಗ ಇಲ್ಲಿ ಪಶುಸಂಗೋಪನೆ ಮಾಡುವವರಿಗೆ ಬಹಳ ಉಪಯೋಗವಾಗುತ್ತದೆ. ಕೆಲವರಿಗೆ ಸಣ್ಣ ಜಮೀನಿರುತ್ತದೆ. ಇದರ ಜೊತೆಗೆ ಸೂಕ್ತ ರೀತಿಯಲ್ಲಿ ಪಶುಪಾಲನೆಯಲ್ಲಿ ತೊಡಗಿದರೆ ಅವನ ಹಣಕಾಸು ಪರಿಸ್ಥಿತಿ ಸುಧಾರಿಸುತ್ತದೆ. ಡೈರಿ ಕೆಲಸವನ್ನು ಆರಂಭಿಸುವಂತೆ ಜೇನು ಸಾಕಾಣಿಕೆ ಮಾಡುವುದಕ್ಕೆ ಸಹ ರೈತರನ್ನು ಪ್ರೋತ್ಸಾಹಿಸಲು ಕ್ರಮ ಕೈಗೊಳ್ಳಬೇಕೆಂದು ಝಾರ್ಖಂಡ್ ಮುಖ್ಯಮಂತ್ರಿ ಅವರನ್ನು ಕೇಳಿಕೊಳ್ಳುತ್ತಿದ್ದೇನೆ. ಹಾಲು ಉತ್ಪಾದನೆಯ ಜೊತೆ ಜೇನುತುಪ್ಪದ ಉತ್ಪಾದನೆಯೂ ಆಗುತ್ತದೆ. ಡೈರಿಯ ಮೂಲಕ ಹಾಲು ಸಂಗ್ರಹಿಸುವ ರೀತಿಯಲ್ಲೇ ಜೇನುತುಪ್ಪವನ್ನು ಸಹ ಸಂಗ್ರಹಿಸಬಹುದು. ಜೇನುತುಪ್ಪಕ್ಕೆ ಸಹ ವಿಶ್ವ ಮಾರುಕಟ್ಟೆ ಒದಗಿಸಬಹುದು. ನಮ್ಮ ರೈತರು ಹಾಲಿನ ಮೂಲಕ, ಜೇನುತುಪ್ಪದ ಮೂಲಕ ಮತ್ತು ಜಮೀನಿನಲ್ಲಿ ಬೆಳೆ ಬೆಳೆಯುವಂತಹ ಮೂಲಕವೂ ಸಂಪಾದಿಸಬಹುದು. ಹನ್ನೆರಡು ತಿಂಗಳೂ ಆದಾಯ ಬರುವುದು ನಿಶ್ಚಿತವಾಗುತ್ತದೆ. ಶ್ರೀ ರಘುವರ್ ದಾಸ್ ಅವರು ಬಹಳ ದೂರದೃಷ್ಟಿಯಿಂದ ಸಣ್ಣದಾದರೂ ಸರಿ ಈ ಕೆಲಸ ಮಾಡಲಿ. ಸರ್ದಾರ್ ಪಟೇಲ್ ಇಂತಹ ಕೆಲಸ ಆರಂಭಿಸಿದಾಗ ಅದು ಬಹಳ ಸಣ್ಣದಾಗೇ ಕಂಡಿತ್ತು. ಆದರೆ ಅದೇ ದೊಡ್ಡದಾಗಿ ಇಂದು ಇಡೀ ವಿಶ್ವದಲ್ಲೇ ಹೆಸರು ಗಳಿಸಿದೆ. ರಘುವರ್ ದಾಸ್ ಅವರು ಸಣ್ಣ ಕಾರ್ಯವನ್ನು ಆರಂಭಿಸಿದ್ದಾರೆ. ಅವರ ಮುಂದಿನ ಶಕ್ತಿ ಏನಿದೆ ಎಂದು ನಾನು ಕಣ್ಣಾರೆ ಕಾಣುತ್ತಿದ್ದೇನೆ. ಇಡೀ ಸಾಂಥಾಲ್ ಭಾಗದ ಮತ್ತು ಪಶುಪಾಲನೆಯಲ್ಲಿ ತೊಡಗಿಕೊಂಡ ಪ್ರತಿಯೊಬ್ಬ ರೈತನ ಅದೃಷ್ಟವನ್ನು ಬದಲಿಸುತ್ತದೆ ಎಂಬ ಸಂಪೂರ್ಣ ನಂಬಿಕೆಯಿದೆ.
ಸೋದರ ಸೋದರಿಯರೆ, 2ನೇ ಅಕ್ಟೋಬರ್, 2015ರಂದು ನ್ಯಾಯಾಧೀಶರಾದ ಶ್ರೀ ಡಿ.ಎನ್.ಪಟೇಲ್ ಅವರ ಆಹ್ವಾನದ ಮೇರೆಗೆ ಖೂಟಿಗೆ ಬರುವ ಅವಕಾಶ ಸಿಕ್ಕಿತ್ತು. ಖೂಟಿಯ ನ್ಯಾಯಾಲಯವನ್ನು ದೇಶದಲ್ಲೇ ಮೊದಲ ಬಾರಿಗೆ ಸೋಲಾರ್ ನ್ಯಾಯಾಲಯವಾಗಿ ಮಾರ್ಪಡಿಸಲಾಗಿದೆ. ಸೌರಶಕ್ತಿಯಿಂದ ಪಡೆವ ವಿದ್ಯುತ್ತಿನಿಂದ ನ್ಯಾಯಾಲಯ ನಡೆಯುತ್ತಿದೆ. ಈ ದಿನ ಸಾಹಿಬ್ ಗಂಜ್ ನಲ್ಲಿ ಮತ್ತೊಮ್ಮೆ ಒಂದು ಸರ್ಕಾರಿ ಕಚೇರಿ ಮತ್ತು ಒಂದು ನ್ಯಾಯಾಲಯದಲ್ಲಿ ಸಂಪೂರ್ಣವಾಗಿ ಸೌರಶಕ್ತಿಯಿಂದಲೇ ಕೆಲಸ ಮಾಡುವಂತಹ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಇದಕ್ಕಾಗಿ ನಾನು ಜಸ್ಟಿಸ್ ಶ್ರೀ ಡಿ.ಎನ್. ಪಟೇಲ್ ಮತ್ತು ಅವರ ತಂಡವನ್ನು ಹಾಗೂ ಝಾರ್ಖಂಡ್ ಸರ್ಕಾರವನ್ನು ಅಭಿನಂದಿಸುತ್ತೇನೆ. ಸೌರಶಕ್ತಿಗೆ ಅವರು ಹೆಚ್ಚು ಆದ್ಯತೆ ಕೊಡುತ್ತಿದ್ದಾರೆ. ಅವರು ಛಾವಣಿ ಮೂಲಕ ಸೌರಶಕ್ತಿ ಪಡೆಯುವ ಕೆಲಸ ಕೈಗೆತ್ತಿಕೊಂಡಿದ್ದಾರೆ. ಸುಮಾರು 4500 ಕಿಲೋ ವಾಟ್ ಸೌರಶಕ್ತಿ ಪಡೆಯುವ ಕೆಲಸವನ್ನು ಯಶಸ್ವಿಯಾಗಿ ಪೂರೈಸಿದ್ದಾರೆ. ನಮ್ಮ ಕಾಡು ಉಳಿಸಬೇಕು, ನಮ್ಮ ಮುಂದಿನ ಪೀಳಿಗೆಗೆ ಅದನ್ನು ಕೊಡಬೇಕು ಎನ್ನುವುದಾದರೆ ನಾವು ಪರಿಸರ ರಕ್ಷಣೆ ಮಾಡಬೇಕು. ವಿದ್ಯುತ್ ಶಕ್ತಿಯ ಮೂಲ ಹೆಚ್ಚಾಗಿ ಇರುವುದು ಸೂರ್ಯನಲ್ಲಿ. ಸೌರಶಕ್ತಿಯ ಬಳಕೆಯಿಂದ ಇದನ್ನು ನಾವು ಸಹಜವಾಗಿ ಪಡೆಯಬಹುದು. ಸೌರಶಕ್ತಿ ಬಳಸಿಕೊಳ್ಳುವುದರಲ್ಲಿ ಭಾರತವು ಬಹಳ ಮುಂದಿದೆ. ಭಾರತದಲ್ಲಿ 175 ಗಿಗಾ ವಾಟ್ ನವೀಕರಿಸಬಹುದಾದ ಇಂಧನ ಬಳಸುವ ಗುರಿ ಹಾಕಿಕೊಂಡಿದ್ದು ಇದರಲ್ಲಿ ಸೌರಶಕ್ತಿ ಮೂಲಕವೇ 100 ಗಿಗಾ ವಾಟ್ ಪಡೆಯುವ ಕನಸು ಕಂಡಿದ್ದೇವೆ. ಇದಕ್ಕಾಗಿ ಸೌರಶಕ್ತಿ ಬಳಕೆಗೆ ಹೆಚ್ಚು ಒತ್ತು ಕೊಡುತ್ತಿದ್ದೇವೆ. ನಾವೀಗ ವಿದೇಶದಿಂದ ಪಡೆಯುತ್ತಿರುವ ಶಕ್ತಿಮೂಲಕ್ಕಾಗಿ ಮಾಡುವ ಖರ್ಚಿನಲ್ಲಿ ಬಹಳಷ್ಟು ಉಳಿಯುತ್ತದೆ. ಆ ಹಣ ಬಡವರ ಏಳಿಗೆಗೆ ಆಗುತ್ತದೆ. ಇಂದು ಪರಿಸಕ್ಕೆ ಆಗುತ್ತಿರುವ ನಷ್ಟ ತಪ್ಪುತ್ತದೆ. ಒಂದು ಕಾಲದಲ್ಲಿ ಸೌರಶಕ್ತಿ ಮೂಲಕ ಒಂದು ಯೂನಿಟ್ ವಿದ್ಯುತ್ ಪಡೆಯಲು 19 ರೂಪಾಯಿ ಖರ್ಚಾಗುತ್ತಿತ್ತು. ಭಾರತವು ಈಗ ನಡೆಸುತ್ತಿರುವ ಅಭಿಯಾನದಿಂದಾಗಿ ನಮಗೆ ಕಲ್ಲಿದ್ದಿಲಿಗಿಂತಲೂ ಕಡಿಮೆ ಬೆಲೆಗೆ ಸೌರಶಕ್ತಿ ದೊರಕುತ್ತಿದೆ.ಇತ್ತೀಚೆಗೆ ಕೇವಲ 2 ರೂಪಾಯಿ ತೊಂಬತ್ತಾರು ಪೈಸೆಗೆ ಟೆಂಡರ್ ಪೂರೈಸಿದ್ದೇವೆ. ಒಂದು ಸಲ ಸೌರಶಕ್ತಿ ಅಳವಡಿಸಿಕೊಳ್ಳಲು ಖರ್ಚಾಗುತ್ತದೆ. ಆದರೆ ನಂತರ ನಾವು ಖರ್ಚಿಲ್ಲದೆ ವಿದ್ಯುತ್ ಪಡೆಯಬಹುದು.
ಸೋದರ ಸೋದರಿಯರೆ, 21ನೆಯ ಶತಮಾನದಲ್ಲಿ ಯಾವೊಬ್ಬ ನಾಗರಿಕನೂ ಕತ್ತಲಲ್ಲಿ ಜೀವನ ನಡೆಸುವಂತಹ ಪರಿಸ್ಥಿತಿ ಇರಬಾರದು. ಕೆಲವು ಕುಟುಂಬಗಳಿಗೆ ಇಂದಿಗೂ ತಮ್ಮ ಮನೆಗಳಿಗೆ ವಿದ್ಯುತ್ ಸಂಪರ್ಕ ಪಡೆದುಕೊಳ್ಳುತ್ತಿಲ್ಲ. ಅದರ ಅಗತ್ಯವೇನಿದೆ ಎಂದು ಅವರಿಗೆ ಅನಿಸುತ್ತದೆ. ಅರ್ಥ ಮಾಡಿಸಿದ ನಂತರ ವಿದ್ಯುತ್ ಸಂಪರ್ಕ ಪಡೆಯುತ್ತಾರೆ. ಸರ್ಕಾರವು ಉಚಿತವಾಗಿ ವಿದ್ಯುತ್ ಸಂಪರ್ಕ ನೀಡಲು ಮುಂದಾದರೂ ಕೆಲವೊಮ್ಮೆ ಜನರು ಆಸಕ್ತಿ ತೋರುವುದಿಲ್ಲ. ಇಂತಹ ಕುಟುಂಬದ ಮಕ್ಕಳಿಗೆ ಓದುವುದಕ್ಕೆಂದು ಭಾರತ ಸರ್ಕಾರವು ಮೇಜು ಅಥವಾ ನೆಲದ ಮೇಲೆ ಇಟ್ಟುಕೊಳ್ಳಬಹುದಾದ ಸಣ್ಣ ಸೌರಶಕ್ತಿ ದೀಪಗಳನ್ನು ನೀಡುತ್ತಿದೆ. ಲಕ್ಷಾಂತರ ಬಡ ಕುಟುಂಬಗಳಿಗೆ ಇವುಗಳನ್ನು ನೀಡಿ ಬಹುದೊಡ್ಡ ಕೆಲಸವನ್ನು ಮಾಡಲಾಗುತ್ತಿದೆ. ಇದರಿಂದ ಬಡ ಕುಟುಂಬದ ಮಕ್ಕಳು ಓದಬಹುದು.
ನೆಲದಾಳದಿಂದ ನೀರನ್ನು ಮೇಲಕ್ಕೆತ್ತಿ ಕೃಷಿ ಮಾಡುತ್ತಿರುವ ರೈತರಿಗೆ ವಿದ್ಯುತ್ ಖರ್ಚು ದುಬಾರಿಯಾಗುತ್ತದೆ. ಈಗ ನಾವು ಸೋಲಾರ್ ಪಂಪ್ ಗಳನ್ನು ಅಳವಡಿಸುತ್ತಿದ್ದೇವೆ. ರೈತರು ಸೋಲಾರ್ ಪಂಪುಗಳಿಂದ ನೀರು ಮೇಲಕ್ಕೆತ್ತುತ್ತಾರೆ. ಸೂರ್ಯನ ಬೆಳಕಿನಿಂದ ಬ್ಯಾಟರಿ ಸಹ ಚಾರ್ಜ್ ಆಗುತ್ತಿರುತ್ತದೆ, ನೀರು ಸಹ ತೆಗೆಯುತ್ತಿರಬಹುದು. ಜಮೀನು ಸಹ ಹಸುರಿನಿಂದ ಕಂಗೊಳಿಸುತ್ತದೆ. ಎರಡು ಫಸಲು ತೆಗೆದುಕೊಳ್ಳುತ್ತಿದ್ದ ಕಡೆ ಮೂರು ಫಸಲು ತೆಗೆಯಬಹುದು. ಇದೆಲ್ಲ ಸಾಧ್ಯವಾಗುವುದು ಸೋಲಾರ್ ಪಂಪ್ ನಿಂದ. ಸೌರಶಕ್ತಿಯ ಕ್ಷೇತ್ರದಲ್ಲಿ ಭಾರತ ಸರ್ಕಾರವು ಒಂದು ಬಹು ದೊಡ್ಡ ಕ್ರಾಂತಿಯನ್ನೇ ಮಾಡುತ್ತಿದೆ. ಝಾರ್ಖಂಡ್ ಸರ್ಕಾರ ಸಹ ಹೆಗಲಿಗೆ ಹೆಗಲು ಕೊಟ್ಟು ಭಾರತ ಸರ್ಕಾರದ ಜೊತೆ ಹೆಜ್ಜೆ ಹಾಕುತ್ತಿದೆ. ಸೌರಶಕ್ತಿಯನ್ನು ಮುನ್ನಡೆಸುತ್ತಿದೆ. ಇದಕ್ಕಾಗಿ ಸಹ ನಾನು ಝಾರ್ಖಂಡ್ ಸರ್ಕಾರವನ್ನು ಅಭಿನಂದಿಸುತ್ತೇನೆ. ನಾವು ಇಂಧನದ ಮಹತ್ವ ಅರಿಯಬೇಕೆಂದು ನಮ್ಮ ಭಾರತೀಯರಿಗೆ ಕರೆ ಕೊಡುತ್ತೇನೆ. ಇದರಿಂದ ಮುಂದಿನ ಪೀಳಿಗೆಗೆಂದು ಪರಿಸರವನ್ನು ಉಳಿಸಿದಂತಾಗುತ್ತದೆ. ಈಗ ದೇಶಾದ್ಯಂತ ಎಲ್ ಇಡಿ ದೀಪಗಳ ಅಭಿಯಾನ ನಡೆಯುತ್ತಿದೆ. ನಾವು ಬಜೆಟ್ ನಲ್ಲಿ ಹತ್ತು ಸಾವಿರ ಕೋಟಿ ರೂಪಾಯಿ ತೆಗೆದಿಡುತ್ತೇವೆ. ಈ ಹತ್ತು ಸಾವಿರ ಕೋಟಿ ರೂಪಾಯಿಗಳನ್ನು ಜನರಿಗೆ ಹಂಚುತ್ತೇವೆ ಎಂದು ಹೇಳಿದರೆ ವಾಹ್ ವಾಹ್ ಎನ್ನಬಹುದು, ಚಪ್ಪಾಳೆ ಹೊಡೆಯಬಹುದು, ಪತ್ರಿಕೆಗಳ ಮುಖಪುಟದಲ್ಲಿ ಬರಬಹುದು. ವಾಹ್ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಎಷ್ಟು ಒಳ್ಳೆಯ ಪ್ರಧಾನ ಮಂತ್ರಿ ಎನ್ನಬಹುದು. ಹತ್ತು ಸಾವಿರ ಕೋಟಿ ರೂಪಾಯಿಗಳನ್ನು ಜನರಿಗೆ ಹಂಚಬೇಕಿದೆ.
ಸೋದರ ಸೋದರಿಯರೆ, ನಿಮ್ಮೆಲ್ಲರ ಸಹಕಾರದಿಂದ ನಾವು ಹತ್ತು ಸಾವಿರ ಕೋಟಿಗಿಂತಲೂ ಹೆಚ್ಚು ಹಣವನ್ನು ನಿಮ್ಮೆಲ್ಲರಿಗೂ ತಲುಪಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಭಾರತದ ನಾಗರಿಕರ ಜೇಬಿಗೆ ತಲುಪಿಸುತ್ತಿದ್ದೇವೆ. ಅಂದರೆ ಎಲ್ ಇಡಿ ದೀಪ ಹಾಕಿಸಿಕೊಳ್ಳಿ, ವಿದ್ಯುತ್ ಉಳಿಸಿ. ವಿದ್ಯುತ್ ಬಿಲ್ ಕಡಿಮೆ ಮಾಡಿಕೊಳ್ಳಿ. ನಿಮ್ಮಲ್ಲಿ ಒಬ್ಬರಿಗೆ ವರ್ಷಕ್ಕೆ ಇನ್ನೂರ ಐವತ್ತು ರೂಪಾಯಿ ಉಳಿಯಬಹುದು, ಇನ್ನೊಬ್ಬರಿಗೆ ಒಂದು ಸಾವಿರವೇ ಉಳಿಯಬಹುದು, ಮತ್ತೊಬ್ಬರಿಗೆ ಎರಡು ಸಾವಿರವೇ ಉಳಿಯಬಹುದು. ಈ ಹಣ ಬಡ ಮಕ್ಕಳಿಗೆ ಹಾಲು ಒದಗಿಸುವ ಕೆಲಸಕ್ಕೆ ಬರುತ್ತದೆ. ಬಡ ಮಕ್ಕಳಿಗೆ ಶಿಕ್ಷಣ ನೀಡುವ ಕೆಲಸಕ್ಕೆ ಬರುತ್ತದೆ. ನಮ್ಮ ಸರ್ಕಾರ ಬಂದ ಸಂದರ್ಭದಲ್ಲಿ ಒಂದು ಎಲ್ ಇಡಿ ದೀಪ ಮುನ್ನೂರ ಐವತ್ತರಿಂದ ನಾನ್ನೂರು ರೂಪಾಯಿಗೆ ಮಾರಾಟವಾಗುತ್ತಿತ್ತು. ನಂತರ ಒಂದು ದೀಪವನ್ನು ಐವತ್ತರಿಂದ ಅರವತ್ತು ರೂಪಾಯಿಗೆ ಮಾರಲಾಗುತ್ತಿದೆ. ನಮ್ಮ ದೇಶದಲ್ಲಿ ಸರ್ಕಾರದ ಮೂಲಕ 22 ಕೋಟಿ ದೀಪಗಳನ್ನು ವಿತರಿಸಲಾಗಿದೆ. ಇದಲ್ಲದೆ ಜನರು ಸಹ ತಾವಾಗೇ ಸುಮಾರು 50 ಕೋಟಿ ಎಲ್ ಇಡಿ ದೀಪಗಳನ್ನು ತಮ್ಮ ಮನೆಗಳಲ್ಲಿ ಅಳವಡಿಸಿಕೊಂಡಿದ್ದಾರೆ. ಇದರಿಂದ ಉಳಿತಾಯವಾದ ವಿದ್ಯುತ್ ನ ಮೊತ್ತ ಸುಮಾರು 11 ಸಾವಿರ ಕೋಟಿಗೂ ಹೆಚ್ಚು. ಅಂದರೆ ನೀವೆಲ್ಲರೂ ಸೇರಿ ವಿದ್ಯುತ್ ಉಳಿಸಿ ಈ 11 ಸಾವಿರ ಕೋಟಿ ಹಣ ಗಳಿಸಿದ್ದೀರಿ, ನಿಮ್ಮ ಜೇಬಿನಲ್ಲಿ ಉಳಿತಾಯ ಮಾಡಿದ್ದೀರಿ. ನಾವು ಒಂದು ಸಣ್ಣ ಬದಲಾವಣೆ ತಂದು ಕೆಲಸ ಮಾಡಿದರೆ ಎಂತಹ ದೊಡ್ಡ ಕ್ರಾಂತಿಯಾಗುತ್ತದೆ. ಒಂದೆಡೆ ವಿದ್ಯುತ್ ಉಳಿಸುವುದು, ಮತ್ತೊಂದೆಡೆ ಸೌರಶಕ್ತಿಯ ಉಪಯೋಗ ಪಡೆದು ಅತಿ ಕಡಿಮೆ ಖರ್ಚಿನಲ್ಲಿ ವಿದ್ಯುತ್ ಪಡೆಯುವ ನಿಟ್ಟಿನಲ್ಲಿ 360 ಡಿಗ್ರಿ ಎನ್ನಬಹುದು. ಹೀಗೆ ಇಂಧನದ ಒಂದು ಸಂಪೂರ್ಣ ನೆಟ್ ವರ್ಕ್ ಮಾಡುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ನಿಮಗೂ ಅದರ ಲಾಭ ಸಿಗುತ್ತದೆ.
ಇಲ್ಲಿ ನನ್ನ ಎದುರಿಗೆ ಯುವಜನರನ್ನು ನೋಡುತ್ತಿದ್ದೇನೆ. ಅವರ ತಲೆಯ ಮೇಲೆ ಟೋಪಿಯಿದೆ. ಟೋಪಿಗೆ ಹಳದಿ ಹೂ ಸಿಕ್ಕಿಸಿಕೊಂಡು ಬಹಳ ಆಕರ್ಷಕವಾಗಿ ಕಾಣುತ್ತಿದ್ದಾರೆ. ಇವರು ನಮ್ಮ ಆದಿವಾಸಿ ಮಕ್ಕಳು. ಇವರು ಗುಡ್ಡಗಾಡಿನ ಜನಾಂಗದ ಮಕ್ಕಳು. ಅವರ ಕುಟುಂಬಗಳಲ್ಲಿ ಇದುವರೆಗೂ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವ ಅದೃಷ್ಟ ಸಿಕ್ಕಿಲ್ಲ. ಶ್ರೀ ಮ್ಯಾರ್ಥೊಡಾರ್ ಅವರು ಬುಡಕಟ್ಟು ಜನಾಂಗದ ಮಕ್ಕಳನ್ನು ಆಯ್ಕೆ ಮಾಡಿಕೊಂಡು ಹೊಸ ಹೆಜ್ಜೆ ಹಾಕಿದ್ದಕ್ಕಾಗಿ ಮತ್ತು ಅವರ ಮೌಲ್ಯಯುತ ವಿಚಾರಧಾರೆಗಳಿಗಾಗಿ ಅವರನ್ನು ಅಭಿನಂದಿಸುತ್ತೇನೆ. ಸರ್ಕಾರಿ ನಿಯಮಗಳಲ್ಲಿ ಬದಲಾವಣೆ ತರಲಾಗಿದೆ. ಎತ್ತರ ಕಡಿಮೆ ಇರುವವರನ್ನು ಮತ್ತು ಕಡಿಮೆ ಓದಿರುವವರನ್ನು ಸಹ ಆಯ್ಕೆ ಮಾಡಿಕೊಂಡಿದ್ದೀರಿ. ಅವರಿಗೆ ತರಬೇತಿ ನೀಡಿ ರಕ್ಷಣಾ ಕಾರ್ಯಕ್ಕೆ ಸೇರಿಸಿದ್ದೀರಿ. ಅವರು ಒಂದು ರೀತಿಯಲ್ಲಿ ಸರ್ಕಾರದಂತೆ ಆಗಿದ್ದಾರೆ. ಎಲ್ಲರೂ ಇವರಿಗೆ ಚಪ್ಪಾಳೆಯ ಮೂಲಕ ಅಭಿನಂದಿಸೋಣ. ಸೋದರ ಸೋದರಿಯರೆ, ಭಾರತದಲ್ಲಿ ಕಟ್ಟಕಡೆಯಲ್ಲಿ ಕುಳಿತಿರುವ ಜನರನ್ನು ಎಣಿಸಿದರೆ ಅದರಲ್ಲಿ ಈ ನಮ್ಮ ಗುಡ್ಡಗಾಡು ಮಕ್ಕಳು ಇದ್ದಾರೆ. ಈ ಗುಡ್ಡಗಾಡು ಮಕ್ಕಳು ಈಗ ಸಮಾಜದ ಮುಖ್ಯವಾಹಿನಿಗೆ ಬರುತ್ತಿದ್ದಾರೆ. ಅಭಿವೃದ್ಧಿಯ ಮುಖ್ಯವಾಹಿನಿಗೆ ಸೇರುತ್ತಿದ್ದಾರೆ. ತಮ್ಮ ಸರ್ಟಿಫಿಕೇಟ್ ತೆಗೆದುಕೊಳ್ಳಲು ಬಂದ ಹೆಣ್ಣು ಮಕ್ಕಳು ಸಲ್ಯೂಟ್ ಮಾಡುವ ವಿಧಾನ, ಮಾಧ್ಯಮದವರಿಗೆ ಅವರು ಉತ್ತರ ನೀಡಿದ ರೀತಿ, ಅವರ ಆತ್ಮವಿಶ್ವಾಸ ನೋಡಿ ಇವರು ನಮಗೆ ಹೆಮ್ಮೆ ತರುತ್ತಾರೆ ಎಂದು ನನಗೆ ಅನ್ನಿಸುತ್ತಿದೆ. ನನ್ನ ಗುಡ್ಡಗಾಡು ಸಹೋದರರೆ, ನನ್ನ ಯುವಜನರೆ, ಇವರು ಝಾರ್ಖಂಡ್ ಗೆ ರಕ್ಷಣೆ ನೀಡುವ ಹೊಸ ಶಕ್ತಿಯಾಗಬಲ್ಲರು. ಮತ್ತೊಮ್ಮೆ ಎಲ್ಲರೂ ಚಪ್ಪಾಳೆ ಹೊಡೆದು ಇವರನ್ನು ಅಭಿನಂದಿಸುತ್ತಾ ಗೌರವಿಸೋಣ. ಶ್ರೀ ರಘುವರ್ ದಾಸ್ ಅವರನ್ನು ಸಹ ಅಭಿನಂದಿಸಿ. ಅವರು ಇಷ್ಟು ದೊಡ್ಡ ಕೆಲಸ ಮಾಡಿದ್ದಾರೆ. ಸಮಾಜದ ಕಟ್ಟಕಡೆಯಲ್ಲಿ ಆದಿವಾಸಿಗಳಿಗಿಂತಲೂ ಕಡು ಬಡವರಾಗಿರುವ ಮಕ್ಕಳು ಇಂದು ನಮ್ಮ ಮುಂದಿದ್ದಾರೆ. ಇದರಿಂದ ಅದೆಷ್ಟು ಆನಂದವಾಗುತ್ತಿದೆ. ಇಂದು ಜೀವನ ಧನ್ಯವಾಯಿತು. ಇದೇ ನನ್ನ ನವಭಾರತ. ದೇಶದ ಕಡುಬಡವ ಸಹ ಪ್ರಗತಿಯಲ್ಲಿ ಹೆಜ್ಜೆ ಹಾಕುತ್ತಿರುವುದಕ್ಕೆ ಇವು ಉದಾಹರಣೆಗಳಾಗಿವೆ.
ಸೋದರ ಸೋದರಿಯರೆ, ಕೆಲವು ಮಹಿಳೆಯರು ಇಂದು ವೇದಿಕೆಯ ಮೇಲೆ ಬಂದಿದ್ದರು. ನಿಮಗೆ ದೂರದಿಂದ ಕಾಣುತ್ತಿತ್ತೊ ಇಲ್ಲವೊ ನಾನು ಅವರಿಗೆ ಝಾರ್ಖಂಡ್ ಸರ್ಕಾರದ ಕಡೆಯಿಂದ ಮೊಬೈಲ್ ಫೋನ್ ಕೊಡುತ್ತಿದ್ದೆ. ಅವರು ನನ್ನ ಎಲ್ಲ ಪ್ರಶ್ನೆಗಳಿಗೂ ಸರಿಯಾಗಿ ಉತ್ತರ ನೀಡುತ್ತಿದ್ದರು. ಆ್ಯಪ್ ಎಂದರೇನು, ಭೀಮ್ ಆ್ಯಪ್ ಎಂದರೇನು ಎಂದು ಅವರಿಗೆ ಗೊತ್ತಿತ್ತು. ಆ್ಯಪ್ ಹೇಗೆ ಡೌನ್ ಲೋಡ್ ಮಾಡಬೇಕು, ಇದರಿಂದ ಹಣಕಾಸು ವ್ಯವಹಾರ ಮಾಡುವುದು ಹೇಗೆಂದು ಅವರಿಗೆ ಗೊತ್ತಿತ್ತು. ನನಗೆ ಅದೆಷ್ಟು ಸಂತೋಷವಾಯಿತು. ಸಂಸತ್ತಿನಲ್ಲಿ ಕೆಲವರು ಭಾರತದ ಬಡವರಿಗೆ ಮೊಬೈಲ್ ಎಲ್ಲಿಂದ ಬರಬೇಕು, ಹೇಗೆ ಕಲಿಯುತ್ತಾರೆ, ಎಲ್ಲಿ ಕಲಿಯುತ್ತಾರೆ ಎಂದು ಹೇಳುತ್ತಾರೆ. ಇನ್ನು ಮುಂದೆ ಅವರು ಸಿಕ್ಕಾಗ ಭಾರತದ ಅತ್ಯಂತ ಹಿಂದುಳಿದ ಭಾಗವಾದ ಸಾಂಥಾಲ್ ಗೆ ಹೋಗಿದ್ದೆ. ಅಲ್ಲಿ ನನ್ನ ಆದಿವಾಸಿ ಸೋದರಿಯರು ಮೊಬೈಲ್ ಫೋನ್ ನಿಂದ ಏನು ಉಪಯೋಗಗಳಿವೆ ಎಂದು ನನಗೆ ಕಲಿಸಿದರೆಂದು ಹೇಳುತ್ತೇನೆ. ಇದೇ ಕ್ರಾಂತಿ. ಇದು ಡಿಜಿಟಲ್ ಭಾರತದ ಕ್ರಾಂತಿ. ಇದು ನಗದುರಹಿತ ಸಮಾಜದ ಕ್ರಾಂತಿ. ನೋಟು ಅಮಾನ್ಯೀಕರಣದ ನಂತರ ನಮ್ಮ ಮೊಬೈಲ್ ಫೋನ್ ಅನ್ನು ನಾವು ಬ್ಯಾಂಕ್ ಆಗಿ ಮಾಡಿಕೊಳ್ಳಬಹುದು ಎಂದು ಪ್ರತಿಯೊಬ್ಬರಿಗೂ ಅನ್ನಿಸುತ್ತಿದೆ. ಸಣ್ಣ ಸಣ್ಣ ಸ್ತ್ರೀ ಶಕ್ತಿ ಸಂಘಗಳ ವ್ಯವಹಾರವು ಮೊಬೈಲ್ ಫೋನ್ ಹೊಂದಿರುವ ಅದರ ಮುಖ್ಯಸ್ಥೆಯೊಂದಿಗೆ ಸೇರಿ ಆ ಮೊಬೈಲ್ ಫೋನ್ ಮೂಲಕವೇ ಬ್ಯಾಂಕ್ ವ್ಯವಹಾರ ಮಾಡಿದರೆ, ಆ ಸಂಘದ ಗ್ರಾಹಕರ ಜೊತೆ ವ್ಯವಹಾರ ಮಾಡಿದರೆ ಅದು ಹೊಸ ಕ್ರಾಂತಿಕಾರಿ ಹೆಜ್ಜೆಯಾಗುತ್ತದೆ. ನಾನು ಈ ಸಾಂಥಾಲ್ ಭಾಗದ ಮಹಿಳಾ ಮಂಡಳಿಯ ಸೋದರಿಯರನ್ನು ಇದಕ್ಕಾಗಿ ಅಭಿನಂದಿಸುತ್ತೇನೆ. ನನ್ನದೊಂದು ಹಳೆಯ ಅನುಭವ ಈಗಲೂ ನನಗೆ ಪ್ರೇರಣೆ ನೀಡುತ್ತಿದೆ. ನಾನು ಗುಜರಾತಿನ ಮುಖ್ಯಮಂತ್ರಿಯಾಗಿದ್ದೆ. ದಕ್ಷಿಣ ಗುಜರಾತಿನ ಆದಿವಾಸಿಗಳ ವಾಸಸ್ಥಳದಲ್ಲೇ ಮಧ್ಯದಲ್ಲಿ ಕಸರಾರ ಎಂಬ ಬಹಳ ದೂರದಲ್ಲಿರುವ ಪ್ರದೇಶವಿದೆ. ನನಗೆ ಅಲ್ಲಿಗೆ ಹೋಗಬೇಕೆಂದರೂ ಹೋಗಲು ಆಗಿರಲಿಲ್ಲ. ಏಕೆಂದರೆ ಆ ಇಡೀ ಪ್ರದೇಶದಲ್ಲಿ ಸಭೆ ನಡೆಸಲು ಎರಡು ಮೈದಾನಗಳು ಸಹ ಇರಲಿಲ್ಲ. ಎಲ್ಲೆಲೂ ಕಾಡು ಬೆಳೆದುಕೊಂಡಿತ್ತು. ಇಲ್ಲಿ ಮನೆಗಳು ಅಷ್ಟೆ, ಒಂದು ಮನೆಯಿಂದ ಇನ್ನೊಂದು ಮನೆಗೆ ಎರಡು ಮೈಲಿಯಾದರೆ ಮತ್ತೊಂದು ಮನೆಗೆ ಮೂರು ಮೈಲಿ ದೂರ. ನಾನು ಅಲ್ಲಿಗೆ ಹೋಗಬೇಕೆಂದು ನಿರ್ಧರಿಸಿದೆ. ಅಲ್ಲಿ ನಾವು ಒಂದು ಸಣ್ಣ ಡೈರಿಯ ಕೆಲಸ ಪ್ರಾರಂಭಿಸಿದೆವು. ಒಂದು ಶೀತಲೀಕರಣ ಘಟಕ ಮಾಡಿದೆವು. ಇದು ಹಾಲನ್ನು ತುಂಬಾ ತಣ್ಣಗೆ ಮಾಡುವ ವ್ಯವಸ್ಥೆಯಾಗಿದೆ. ಡೈರಿಗೆ ತೆಗೆದುಕೊಂಡು ಹೋಗುವುದಕ್ಕೆ ಮೊದಲು ಸ್ವಲ್ಪ ಸಮಯ ಅಂದರೆ ಮೂರು ಅಥವಾ ನಾಲ್ಕು ಗಂಟೆ ಅಲ್ಲಿ ಹಾಲು ಸಂಗ್ರಹಿಸಿ ಇಡಬಹುದು. ಇದೊಂದು ಸಣ್ಣ ಯೋಜನೆಯಾಗಿದ್ದು 25ರಿಂದ 50 ಲಕ್ಷ ತಗಲುತ್ತದೆ. ನಾನು ಈ ಯೋಜನೆ ಆರಂಭವಾಗುವ ದಿನ ಬರುತ್ತೇನೆ ಎಂದಾಗ ನಮ್ಮ ಎಲ್ಲ ಜನರೂ ಕೇವಲ ಐವತ್ತು ಲಕ್ಷ ರೂಪಾಯಿಗಳ ಸಣ್ಣ ಕಾರ್ಯಕ್ರಮಕ್ಕೆ ಸಾಹೇಬರು ಇಷ್ಟು ದೂರ ಹೋಗಬೇಕೆ ಎಂದು ಕೋಪಗೊಂಡರು. ಆದರೆ ನಾನು ಹೋಗುತ್ತೇನೆ ಎಂದೆ. ನಾನು ಹೋದ ಜಾಗದಲ್ಲಿ ಜನರ ಸಭೆ ನಡೆಸುವುದು ಸಾಧ್ಯವಿರಲಿಲ್ಲ. ಅಲ್ಲಿಂದ ಮೂರು ನಾಲ್ಕು ಕಿಲೋಮೀಟರ್ ದೂರದಲ್ಲಿದ್ದ ಶಾಲೆಯ ಮೈದಾನದಲ್ಲಿ ಜನರ ಸಭೆಯನ್ನು ಆಯೋಜಿಸಲಾಗಿತ್ತು. ಆದರೆ ಹಾಲು ಹಾಕಲು ಮಹಿಳೆಯರು ಡಬ್ಬಿಗಳಲ್ಲಿ ಹಾಲು ತುಂಬಿಕೊಂಡು ಬಂದಿದ್ದರು. ಅವರು ಶೀತಲೀಕರಣ ಘಟಕಕ್ಕೆ ಬಂದು ಹಾಲು ತುಂಬಿಸುವ ಕಾರ್ಯಕ್ರಮ ನಡೆಯಿತು. ನಂತರ ಹಾಲು ತಂದಿದ್ದ ಮಹಿಳೆಯರು ಮೊಬೈಲ್ ಫೋನ್ ನಲ್ಲಿ ನನ್ನ ಫೋಟೋ ತೆಗೆದುಕೊಳ್ಳುತ್ತಿರುವುದನ್ನು ನೋಡಿದೆ. ಸುಮಾರು ಮೂವತ್ತು ಮಹಿಳೆಯರಿದ್ದರು. ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಗಳಿದ್ದವು. ಅದೂ ಫೋಟೋ ತೆಗೆಯಬಹುದಾದ ಮೊಬೈಲ್. ಅವರು ಫೋಟೋ ತೆಗೆಯುತ್ತಿದ್ದರು. ನಾನು ಅವರ ಹತ್ತಿರ ಹೋದೆ. ನನಗೆ ಬಹಳ ಅಚ್ಚರಿಯಾಗಿತ್ತು. ಇಂತಹ ಹಿಂದುಳಿದ ಪ್ರದೇಶದಲ್ಲಿ ಆದಿವಾಸಿ ಮಹಿಳೆಯರು ಹಾಲು ಹಾಕಲು ಬಂದಿದ್ದಾರೆ, ಹಳ್ಳಿಯಲ್ಲಿ ರೈತರಾಗಿದ್ದಾರೆ. ನಾನು ಅವರನ್ನು ಏನು ಮಾಡುತ್ತಿದ್ದೀರಿ ಎಂದು ಕೇಳಿದೆ. ತಾವು ಫೋಟೊ ತೆಗೆಯುತ್ತಿರುವುದಾಗಿ ಅವರು ಹೇಳಿದರು. ನೀವು ಫೋಟೊ ತೆಗೆದು ಏನು ಮಾಡುತ್ತೀರಿ ಎಂದು ಕೇಳಿದೆ. ನಾವು ಇದನ್ನು ಡೌನ್ ಲೋಡ್ ಮಾಡಿಕೊಳ್ಳುವುದಾಗಿ ಹೇಳಿದರು. ಅವರ ಬಾಯಲ್ಲಿ ಈ ಡೌನ್ ಲೋಡ್ ಪದ ಕೇಳಿ ನನಗೆ ಬಹಳ ಅಚ್ಚರಿಯಾಯಿತು. ಕೆಲವೊಮ್ಮೆ ದೊಡ್ಡ ದೊಡ್ಡ ಜನರಿಗೂ ಹೀಗೆಂದರೇನು ಎಂದು ಗೊತ್ತಿರುವುದಿಲ್ಲ. ಭಾರತದ ಸಾಮಾನ್ಯ ಜನರಲ್ಲಿ ವಿಜ್ಞಾನ ಮತ್ತು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಅದೆಂತಹ ಶಕ್ತಿಯಿದೆ. ಇಲ್ಲಿ ಮತ್ತೊಮ್ಮೆ ನನ್ನ ಆದಿವಾಸಿ ಸೋದರಿಯರು ನಾವು ಡಿಜಿಟಲ್ ಕ್ರಾಂತಿ ಮಾಡುತ್ತೇವೆ, ನಾವು ಈ ಕೆಲಸ ಮಾಡಿ ತೋರಿಸುತ್ತೇವೆ ಎಂದು ಹೇಳಿದ್ದನ್ನು ಕೇಳಿದೆ. ನಾನು ಈ ಎಲ್ಲ ಮಹಿಳಾ ಮಂಡಳಿಗಳು ಮತ್ತು ಮೊಬೈಲ್ ಫೋನ್ ಮೂಲಕ ಡಿಜಿಟಲ್ ಕ್ರಾಂತಿಯ ಸೈನಿಕರನ್ನು ತಯಾರು ಮಾಡುವ ಅಭಿಯಾನ ನಡೆಸುತ್ತಿರುವ ಝಾರ್ಖಂಡ್ ಸರ್ಕಾರಕ್ಕೂ ಬಹಳ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಯುಗ ಬದಲಾಗಿದೆ. ಬದಲಾದ ಯುಗದಲ್ಲಿ ಮುಂದೆ ಮುಂದೆ ಸಾಗಬೇಕಿದೆ.
ಸೋದರ ಸೋದರಿಯರೆ, ಭಾರತದ ಬಡವ ಗೌರವದಿಂದ ಜೀವಿಸಲು ಇಷ್ಟಪಡುತ್ತಾನೆ. ಭಾರತದ ಆದಿವಾಸಿ, ದಲಿತ, ಶೋಷಿತ ಜನರು ಗೌರವದಿಂದ ಬದುಕಲು ಬಯಸುತ್ತಾರೆ. ಅವರು ಬೇರೊಬ್ಬರ ಕೃಪೆಗೆ ಪಾತ್ರರಾಗಲು ಬಯ ಸುವುದಿಲ್ಲ. ಒಬ್ಬ ನವಯುವಕ ನನಗೆ ಅವಕಾಶ ಕೊಟ್ಟು ನೋಡಿ, ಸ್ವತಃ ನಾನೇ ನನ್ನ ಹಣೆಬರಹವನ್ನು ಬರೆಯುತ್ತೇನೆ ಎಂದು ಹೇಳಿದ್ದು ಕೇಳಿದೆ. ಇದೇ ಶಕ್ತಿ ನನ್ನ ಬಡ ಆದಿವಾಸಿ ಮಕ್ಕಳಲ್ಲೂ ಇರುತ್ತದೆ. ದಲಿತ, ಶೋಷಿತರ ಮಕ್ಕಳಲ್ಲೂ ಇರುತ್ತದೆ. ನಾನು ನನ್ನೆಲ್ಲ ಶಕ್ತಿಯನ್ನು ಈ ಮಕ್ಕಳಿಗೆ ಕೊಡುತ್ತಿದ್ದೇನೆ. ಈ ನವತರುಣರಿಗೆ ನೀಡುತ್ತಿದ್ದೇನೆ. ಅವರು ಭಾರತದ ಅದೃಷ್ಟವನ್ನು ಬದಲಿಸುವುದಕ್ಕಾಗಿ ಒಂದು ನವಶಕ್ತಿಯ ರೂಪದಲ್ಲಿ ಜೊತೆಗೂಡುತ್ತಾರೆ. ಒಂದು ಹೊಸ ಶಕ್ತಿಯಾಗಿ ಭಾರತದ ಅದೃಷ್ಟವನ್ನು ಬದಲಿಸುವ ಕೆಲಸ ಮಾಡಬಲ್ಲರು.
ಸೋದರ ಸೋದರಿಯರೆ, ಭ್ರಷ್ಟಾಚಾರ ಮತ್ತು ಕಪ್ಪು ಹಣ ನಮ್ಮ ದೇಶವನ್ನು ಹಾಳು ಮಾಡಿದವು. ಗೆದ್ದಲುಗಳನ್ನು ಒಂದು ಜಾಗದಲ್ಲಿ ಬಂಧಿಸಿದರೆ ಮತ್ತೊಂದು ಜಾಗದಲ್ಲಿ ಹೊರಗೆ ಬರುತ್ತವೆ. ಆ ಜಾಗವನ್ನು ಸ್ವಚ್ಛ ಮಾಡಿದರೆ ಇನ್ನೂ ಒಂದು ಜಾಗದಿಂದ ಹೊರಗೆ ಬರುತ್ತವೆ. ಆದರೆ ನಿಮ್ಮೆಲ್ಲರ ಆಶೀರ್ವಾದದಿಂದ ಭ್ರಷ್ಟಾಚಾರ ಮತ್ತು ಕಾಳಧನದ ವಿರುದ್ಧದ ಹೋರಾಟ ಮುಂದುವರಿಯುತ್ತದೆ. ಬಡವರನ್ನು ದೋಚಿದವರು ಬಡವರಿಗೆ ಹಿಂತಿರುಗಿಸಲೇ ಬೇಕು. ಅಲ್ಲಿಯವರೆಗೂ ನಾನು ನೆಮ್ಮದಿಯಿಂದ ಕುಳಿತುಕೊಳ್ಳುವವನಲ್ಲ. ಒಂದಾದ ನಂತರ ಒಂದು ಕ್ರಮ ತೆಗೆದುಕೊಳ್ಳುತ್ತಲೇ ಇರುತ್ತೇನೆ.
ಸೋದರ ಸೋದರಿಯರೆ, ನೀವು ನೀಡುತ್ತಿರುವ ಆಶೀರ್ವಾದ ಪ್ರಾಮಾಣಿಕತೆಯ ಹೋರಾಟಕ್ಕಾಗಿ ನೀಡಿದ ಆಶೀರ್ವಾದವಾಗಿದೆ. ನೋಟು ಅಮಾನ್ಯೀಕರಣ ಮಾಡಿದ ನಂತರ ಕೆಲವು ಶ್ರೀಮಂತ, ವಿದ್ಯಾವಂತ ಯುವಕರನ್ನು ಭೇಟಿಯಾಗುವ ಅವಕಾಶ ಸಿಕ್ಕಿತು. ನೋಟು ಅಮಾನ್ಯಗೊಳಿಸಿದೆನೆಂದು ಅವರಿಗೆ ಬಹಳ ಚಿಂತೆಯಾಗಿರಬಹುದು, ಕೋಪ ವ್ಯಕ್ತಪಡಿಸಬಹುದು ಎಂದು ನಾನು ಯೋಚಿಸುತ್ತಿದ್ದೆ. ಆದರೆ ಅವರು ಬಹಳ ಆಸಕ್ತಿದಾಯಕವಾಗಿದೆ ಎಂಬ ಮಾತು ಹೇಳಿದರು. ಸಾಹೇಬರೆ ನಮ್ಮ ಕುಟುಂಬದಲ್ಲಿ ಪ್ರತಿದಿನ ಜಗಳವಾಗುತ್ತಿರುತ್ತದೆ ಎಂದು ಅವರು ಹೇಳಿದರು. ಜಗಳಕ್ಕೆ ಕಾರಣ ಕೇಳಿದಾಗ ನಮ್ಮ ತಂದೆಯ ಕಾಲದಲ್ಲಿ ಇದ್ದ ಸರ್ಕಾರವು ಹೆಚ್ಚು ತೆರಿಗೆ ವಿಧಿಸುತ್ತಿತ್ತು. ತೆರಿಗೆ ಕಟ್ಟದೆ ಇರುವ ದಾರಿಯನ್ನು ಅವರು ಹುಡುಕಿಕೊಂಡು ಅಪ್ರಾಮಾಣಿಕವಾಗಿ ಹಣ ಉಳಿಸಿದ್ದರು ಎನ್ನುವ ಕಾರಣಕ್ಕೆ ಜಗಳವಾಗುತ್ತಿತ್ತು. ಆದರೆ ಈಗ ದೇಶದಲ್ಲಿ ಪ್ರಾಮಾಣಿಕತೆಯ ಯುಗ ಬಂದಿದೆ. ನಮ್ಮ ಪೀಳಿಗೆಯ ಜನರು ಅಪ್ರಾಮಾಣಿಕತೆಯ ವ್ಯವಹಾರ ನಡೆಸಲು ಇಷ್ಟಪಡುವುದಿಲ್ಲ. ನಾವು ಪ್ರಾಮಾಣಿಕತೆಯಿಂದ ಮುಂದೆ ಬರಲು ಬಯಸುತ್ತೇವೆ. ನಮ್ಮ ದೇಶದ ಯುವ ಪೀಳಿಗೆಯಲ್ಲಿ ಪ್ರಾಮಾಣಿಕತೆಯ ಯುಗ ಆರಂಭವಾಗಿದೆ. ಪ್ರಾಮಾಣಿಕತೆಯಿಂದ ಬದುಕು ನಡೆಸುವ ಆಸೆ ಹುಟ್ಟಿದೆ. ಇದು ನನ್ನ ಪಾಲಿಗೆ ಶುಭ ಸಂಕೇತವಾಗಿದೆ. ಸೋದರರೆ, ದೇಶದ ಪಾಲಿಗೆ ಶುಭ ಸಂಕೇತವಾಗಿದೆ. ತಮ್ಮ ಪೂರ್ವಜರು, ತಮ್ಮ ತಂದೆತಾಯಿಗಳು ಏನನ್ನೋ ಮಾಡಬೇಕಾಯಿತು. ಆದರೆ ನಾವು ಅದನ್ನು ಮಾಡುವುದಿಲ್ಲ ಎಂದು ದೇಶದ ಎಲ್ಲ ಯುವಜನರು ಮನದಲ್ಲಿ ಸಂಕಲ್ಪ ಮಾಡಬೇಕು.
ಸೋದರ ಸೋದರಿಯರೆ, ಕಳ್ಳತನ ಮಾಡದೆ, ಲೂಟಿ ಮಾಡದೆಯೂ ಸುಖವಾಗಿ ಜೀವನ ನಡೆಸಬಹುದು. ನೆಮ್ಮದಿಯಿಂದ ನಿದ್ರೆ ಮಾಡಬಹುದು. ನಾವು ಒಂದು ಪ್ರಾಮಾಣಿಕತೆಯ ಯುಗದತ್ತ ಸಾಗಬೇಕಿದೆ. 2022ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾಗುತ್ತವೆ. ಸೋದರ ಸೋದರಿಯರೆ, ಸ್ವಾತಂತ್ರ್ಯ ಬಂದು ಈ 75ನೇ ವರ್ಷ ಕೇವಲ ಗೋಡೆಯ ಮೇಲೆ ನೇತು ಹಾಕಿದ ಕ್ಯಾಲೆಂಡರ್ ನ ವಿಷಯವಲ್ಲ. ಸ್ವಾತಂತ್ರ್ಯ ಬಂದು 75 ವರ್ಷಗಳು ಉರುಳಿ ಮತ್ತೊಂದು ಕ್ಯಾಲೆಂಡರ್ ಬದಲಿಸುವಂತೆ 2022ರ ವರ್ಷವಲ್ಲ. ಸ್ವಾತಂತ್ರ್ಯಕ್ಕಾಗಿ ತಮ್ಮ ಜೀವನವನ್ನೇ ತೆತ್ತ ಈ ನೆಲದ ಬಿಸ್ರಾ ಮುಂಡಾ ಅವರಂತಹ ಅಸಂಖ್ಯಾತ ಜನರಿದ್ದಾರೆ. ಅವರು ತಾವಾಗೇ ಸಾಯಲಿಲ್ಲ, ಸ್ವತಂತ್ರ ಭಾರತದ ಕನಸು ಕಂಡು ದೇಶಕ್ಕಾಗಿ ಮಡಿದರು. ಆ ಕನಸುಗಳನ್ನು ಸಾಕಾರಗೊಳಿಸುವ ಹಾದಿಯಲ್ಲಿ ಅವರು ನಮಗಾಗಿ ಗಲ್ಲಿಗೇರಿದರು. ನಮಗಾಗಿ ಜೈಲುಗಳಲ್ಲಿ ಜೀವನ ಕಳೆದರು. ನಮಗಾಗಿ ತಮ್ಮ ಕುಟುಂಬಗಳನ್ನು ಕಳೆದುಕೊಂಡು ತಾವು ನಾಶವಾದರು. ಅವರು ಕಂಡ ಕನಸುಗಳನ್ನು ಸಾಕಾರಗೊಳಿಸಲು 2022 ಬರುವ ಹೊತ್ತಿಗೆ ಅಂದರೆ ಮುಂದಿನ ಐದು ವರ್ಷಗಳಲ್ಲಿ ದೇಶಕ್ಕಾಗಿ, ದೇಶದ ಒಳಿತಿಗಾಗಿ ಏನನ್ನಾದರೂ ಮಾಡುತ್ತೇನೆ ಎಂದುಕೊಳ್ಳಬೇಕಿದೆ. ಈ ಕನಸು ದೇಶದ 125 ಕೋಟಿ ಭಾರತೀಯರದ್ದಾಗಲಿ. ಸ್ವಾತಂತ್ರ್ಯ ಬಂದು 75 ವರ್ಷಗಳಾಗಲು ಐದು ವರ್ಷ ಬಾಕಿಯಿದೆ. ಈ ಐದು ವರ್ಷಗಳಲ್ಲಿ ಸಮಾಜಕ್ಕೆ, ದೇಶಕ್ಕೆ ಒಳಿತು ಮಾಡಲು ಮುಂದಾಗುತ್ತೇನೆ ಎಂದು ಪ್ರತಿಯೊಬ್ಬ ಭಾರತೀಯರೂ ಸಂಕಲ್ಪ ಮಾಡಿ ಒಂದು ಹೆಜ್ಜೆ ಮುಂದಿಟ್ಟರೆ 2022 ಬರುವ ಹೊತ್ತಿಗೆ ಭಾರತದ 125 ಕೋಟಿ ಹೆಜ್ಜೆಗಳು ಮುಂದೆ ಬಂದಿರುತ್ತವೆ. ಸ್ನೇಹಿತರೆ, ಇದು ನಮ್ಮ ಶಕ್ತಿಯಾಗಿದೆ. ಇದು ಸಮಯದ ಬೇಡಿಕೆಯಾಗಿದೆ. ನಾವು ಈಗಿನಿಂದಲೇ ಸರ್ಕಾರದಲ್ಲಿದ್ದೇವೆ. ಸರ್ಕಾರದಲ್ಲಿ ವಿವಿಧ ಇಲಾಖೆಗಳಿವೆ, ನಗರಪಾಲಿಕೆಗಳಿವೆ, ಜಿಲ್ಲಾ ಪಂಚಾಯತ್ ಗಳಿವೆ, ಶಾಲೆಗಳಿವೆ. ಶಾಲೆ ಇದೆ ಎಂದರೆ ಅಲ್ಲಿ ಹಳ್ಳಿ ಇದೆ. ಹಳ್ಳಿಯಲ್ಲಿ ವಿಭಿನ್ನ ಜಾತಿಗಳಿವೆ. ಜಾತಿಯಲ್ಲಿ ಕುಟುಂಬವಿದೆ. ಕುಟುಂಬದಲ್ಲಿ ಇರುವ ವ್ಯಕ್ತಿ 2022 ಆಗುವ ಹೊತ್ತಿಗೆ ನಾನು ದೇಶದ ಒಳಿತಿಗೆ ಕೆಲಸ ಮಾಡಿರುತ್ತೇನೆ ಎಂದು ಸಂಕಲ್ಪ ಮಾಡಬೇಕು, ಮಾಡಿಯೇ ಮಾಡುತ್ತೀರಿ. ಇದು ಪ್ರತಿಯೊಬ್ಬ ಭಾರತೀಯನ ಕನಸಾಗಿ ಅದನ್ನು ಸಾಕಾರಗೊಳಿಸಲು ಮುಂದಾದರೆ 2022ರಲ್ಲಿ ಸ್ವಾತಂತ್ರ್ಯಕ್ಕಾಗಿ ಮಡಿದ ಮಹಾಪುರುಷರಿಗೆ ಈ ದೇಶ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ, ನಮ್ಮ ದೇಶಕ್ಕಾಗಿ ನಾವು ಜೀವ ತೆತ್ತಿದ್ದು ಸಾರ್ಥಕವಾಯಿತು ಎಂದು ಸಂತೋಷವಾಗಬಹುದು. ನಮ್ಮ ದೇಶ ಮುಂದಕ್ಕೆ ಬರಬೇಕೆಂದರೆ ಕನಸುಗಳೊಂದಿಗೆ ಮುಂದೆ ಸಾಗಬೇಕು. ಈ ಒಂದು ಆಶಯದೊಂದಿಗೆ ನಾನು ಮತ್ತೊಮ್ಮೆ ಝಾರ್ಖಂಡ್ ಮಣ್ಣಿಗೆ ನಮಿಸುತ್ತೇನೆ. ನಾನು ಗುಡ್ಡಗಾಡು ಯುವಕರಿಗೆ ಬಹಳ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಝಾರ್ಖಂಡ್ ಜನತೆಗೆ ಶುಭ ಹಾರೈಕೆಗಳನ್ನು ಹೇಳುತ್ತೇನೆ. ಈ ಹೊಸ ಅಭಿಯಾನ ಆರಂಭಿಸಿರುವುದಕ್ಕಾಗಿ ನಾನು ಗಂಗಾ ಮಾತೆಗೆ ನಮಿಸುತ್ತೇನೆ. ಗಂಗಾ ಮಾತೆಯ ಆಶೀರ್ವಾದ ಯಾವಾಗಲೂ ಇರುತ್ತದೆ. ಈ ಇಡೀ ಪ್ರದೇಶದಲ್ಲಿ ಹೊಸ ಆರ್ಥಿಕ ಕ್ರಾಂತಿ ಮಾಡಲು ಗಂಗಾ ಮಾತೆ ನಮಗೆ ಭರವಸೆಯಾಗಿದ್ದಾಳೆ. ಈ ಒಂದು ಅಪೇಕ್ಷೆಯೊಂದಿಗೆ ನಾನು ಎಲ್ಲರಿಗೂ ಬಹಳ ಧನ್ಯವಾದಗಳನ್ನು, ಬಹಳ ಶುಭಾಶಯಗಳನ್ನು ಹೇಳುತ್ತೇನೆ.
******
I am delighted to come to the land associated with Bhagwan Birsa Munda: PM @narendramodi #ProgressiveJharkhand https://t.co/Iy8hu3Nre5
— PMO India (@PMOIndia) April 6, 2017
Several development works are being launched that will benefit the Santhal Pargana: PM @narendramodi #ProgressiveJharkhand
— PMO India (@PMOIndia) April 6, 2017
Through development, we want to serve the tribal communities. Quicker development will lead to quicker empowerment: PM #ProgressiveJharkhand
— PMO India (@PMOIndia) April 6, 2017
Today we begin work on a big project over the Ganga, that will link Bihar and Jharkhand. This project will ensure faster development: PM
— PMO India (@PMOIndia) April 6, 2017
Shri @nitin_gadkari is a minister who can get development work completed on time: PM @narendramodi #ProgressiveJharkhand
— PMO India (@PMOIndia) April 6, 2017
One of the major things these projects will do is provide employment to people of Jharkhand. Skill development will also be boosted: PM
— PMO India (@PMOIndia) April 6, 2017
This project will open several doors of progress for the people of Jharkhand: PM @narendramodi #ProgressiveJharkhand https://t.co/Jx2JoCITr1
— PMO India (@PMOIndia) April 6, 2017
The Prime Minister and other dignitaries at the public meeting in Jharkhand. #ProgressiveJharkhand pic.twitter.com/XnWYKGTmhG
— PMO India (@PMOIndia) April 6, 2017
In addition to highways and railways, we are focussing on waterways: PM @narendramodi #ProgressiveJharkhand
— PMO India (@PMOIndia) April 6, 2017
As far as infrastructure is concerned, we are ensuring that the infrastructure is also environment friendly: PM #ProgressiveJharkhand
— PMO India (@PMOIndia) April 6, 2017
I congratulate the Jharkhand Government for harnessing solar energy: PM @narendramodi #ProgressiveJharkhand pic.twitter.com/BcmNmPL8Ga
— PMO India (@PMOIndia) April 6, 2017
In this century, no citizen of India should live in darkness: PM @narendramodi #ProgressiveJharkhand
— PMO India (@PMOIndia) April 6, 2017
LED bulbs not only save energy but also electricity bills: PM @narendramodi
— PMO India (@PMOIndia) April 6, 2017
The poor of India want to lead a life of dignity and they want opportunities to prove themselves. I have faith in their skills: PM pic.twitter.com/VTzlAlmqK3
— PMO India (@PMOIndia) April 6, 2017
Those who have looted the poor will have to return to the poor what they have looted. I need your blessings for this: PM @narendramodi
— PMO India (@PMOIndia) April 6, 2017
'Imandari Ka Yug' has started in India. A good life can be led even without looting the poor: PM @narendramodi
— PMO India (@PMOIndia) April 6, 2017